ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w19 ಮಾರ್ಚ್‌ ಪು. 29-31
  • ನೀವು ಹೇಳುವ “ಆಮೆನ್‌” ಯೆಹೋವನಿಗೆ ತುಂಬ ಮುಖ್ಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನೀವು ಹೇಳುವ “ಆಮೆನ್‌” ಯೆಹೋವನಿಗೆ ತುಂಬ ಮುಖ್ಯ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • “ಜನರೆಲ್ಲರೂ—[ಆಮೆನ್‌] ಅನ್ನಬೇಕು”
  • “ಸರ್ವಜನರೂ ಆಮೆನ್‌ ಎಂದು ಯೆಹೋವನನ್ನು ಸ್ತುತಿಸಿದರು”
  • ನೀವು ಹೇಳುವ “ಆಮೆನ್‌” ಯಾಕೆ ಮುಖ್ಯ?
  • ಆಮೆನ್‌—ಅದರ ಅರ್ಥ ಮತ್ತು ಉಪಯೋಗ
    ಕಾವಲಿನಬುರುಜು—1993
  • ನಿಮಗೆ ತಿಳಿದಿತ್ತೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ದೇವರ ಉದ್ದೇಶದಲ್ಲಿ ಯೇಸುವಿನ ಅದ್ವಿತೀಯ ಪಾತ್ರವನ್ನು ಗಣ್ಯಮಾಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಪ್ರಾರ್ಥನೆಯ ಮುಖಾಂತರ ದೇವರ ಸಮೀಪಕ್ಕೆ ಬನ್ನಿರಿ
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
w19 ಮಾರ್ಚ್‌ ಪು. 29-31
ಸಭೆಯಲ್ಲಿ ಪ್ರಾರ್ಥಿಸುತ್ತಿರುವಾಗ ಸಹೋದರ-ಸಹೋದರಿಯರು ತಲೆಬಗ್ಗಿಸಿದ್ದಾರೆ

ನೀವು ಹೇಳುವ “ಆಮೆನ್‌” ಯೆಹೋವನಿಗೆ ತುಂಬ ಮುಖ್ಯ

ಯೆಹೋವನಿಗೆ ನಮ್ಮ ಆರಾಧನೆ ತುಂಬ ಅಮೂಲ್ಯ. ಆತನು ತನ್ನ ಸೇವಕರು ಮಾತಾಡುವಾಗ ‘ಕಿವಿಗೊಟ್ಟು ಆಲಿಸುತ್ತಾನೆ.’ ಆರಾಧನೆಯ ಭಾಗವಾಗಿ ನಾವು ಎಷ್ಟೇ ಚಿಕ್ಕ ವಿಷಯ ಮಾಡಿದರೂ ಅದನ್ನು ಆತನು ಗಮನಿಸುತ್ತಾನೆ. (ಮಲಾ. 3:16) ಉದಾಹರಣೆಗೆ, ನಾವು ನಮ್ಮ ಜೀವನದಲ್ಲಿ ಲೆಕ್ಕವಿಲ್ಲದಷ್ಟು ಸಲ ಹೇಳಿರುವ ಒಂದು ಪದವನ್ನು ತೆಗೆದುಕೊಳ್ಳಿ – “ಆಮೆನ್‌.” ನಾವು ಹೇಳುವ ಈ ಚಿಕ್ಕ ಪದಕ್ಕೂ ಯೆಹೋವನು ಗಮನ ಕೊಡುತ್ತಾನಾ? ಹೌದು. ಯಾಕೆ ಅಂತ ತಿಳುಕೊಳ್ಳಲು ಆ ಪದದ ಅರ್ಥ ಏನೆಂದು ನೋಡೋಣ. ಅದನ್ನು ಬೈಬಲಲ್ಲಿ ಹೇಗೆ ಬಳಸಲಾಗಿದೆ ಎಂದು ಸಹ ನೋಡೋಣ.

“ಜನರೆಲ್ಲರೂ—[ಆಮೆನ್‌] ಅನ್ನಬೇಕು”

“ಆಮೆನ್‌” ಅಂದರೆ “ಹಾಗೆಯೇ ಆಗಲಿ” ಅಥವಾ “ಖಂಡಿತವಾಗಿಯೂ” ಎಂದರ್ಥ. ಹೀಬ್ರು ಭಾಷೆಯಲ್ಲಿ ಅದರ ಮೂಲ ಪದಕ್ಕೆ “ನಂಬಿಗಸ್ತನಾಗಿರು” “ಭರವಸಾರ್ಹನಾಗಿರು” ಎಂಬ ಅರ್ಥ ಇದೆ. ಕೆಲವೊಮ್ಮೆ ಇದನ್ನು ಕಾನೂನಿನ ವ್ಯವಹಾರಗಳಲ್ಲಿಯೂ ಬಳಸಲಾಗುತ್ತಿತ್ತು. ಒಬ್ಬ ವ್ಯಕ್ತಿ ಏನಾದರೂ ಪ್ರಮಾಣ ಮಾಡಿದ ಮೇಲೆ “ಆಮೆನ್‌” ಎನ್ನುತ್ತಿದ್ದನು. ಹೀಗೆ ಆತನು ಹೇಳಿದ ಮಾತು ಸತ್ಯ ಎಂದು ಸೂಚಿಸುತ್ತಿದ್ದನು ಮತ್ತು ಅದರ ಪರಿಣಾಮ ಏನೇ ಆದರೂ ಅದನ್ನು ತಾಳಿಕೊಳ್ಳುತ್ತೇನೆ ಎಂದು ಒಪ್ಪಿಕೊಳ್ಳುತ್ತಿದ್ದನು. (ಅರ. 5:22) ಬೇರೆಯವರ ಮುಂದೆ “ಆಮೆನ್‌” ಎಂದು ಹೇಳಿದ ಮೇಲೆ ಆತನು ಅದರಂತೆ ನಡೆಯಲೇ ಬೇಕಿತ್ತು.—ನೆಹೆ. 5:13.

ಈ ಪದವನ್ನು ಗಮನಾರ್ಹ ರೀತಿಯಲ್ಲಿ ಉಪಯೋಗಿಸಿದ ದಾಖಲೆ ಧರ್ಮೋಪದೇಶಕಾಂಡ 27​ನೇ ಅಧ್ಯಾಯದಲ್ಲಿದೆ. ಇಸ್ರಾಯೇಲ್ಯರು ವಾಗ್ದತ್ತ ದೇಶಕ್ಕೆ ಬಂದ ಮೇಲೆ ಏಬಾಲ್‌ ಬೆಟ್ಟ ಮತ್ತು ಗೆರಿಜ್ಜೀಮ್‌ ಬೆಟ್ಟದ ಮಧ್ಯೆ ಸೇರಿಬಂದು ಧರ್ಮಶಾಸ್ತ್ರ ಓದಲ್ಪಡುವಾಗ ಕೇಳಿಸಿಕೊಳ್ಳಬೇಕಿತ್ತು ಮತ್ತು ಅದನ್ನು ಒಪ್ಪಿಕೊಳ್ಳುತ್ತೇವೆಂದು ಸಹ ಹೇಳಬೇಕಿತ್ತು. ಇದನ್ನು ಅವರು “ಆಮೆನ್‌” ಎಂದು ಹೇಳುವ ಮೂಲಕ ಸೂಚಿಸಬೇಕಿತ್ತು. ಅವಿಧೇಯರಾದರೆ ಯಾವ ಶಾಪ ಸಿಗುತ್ತದೆ ಎಂದು ಓದಲ್ಪಡುವಾಗ ಅವರು ಅದಕ್ಕೆ “ಆಮೆನ್‌” ಎಂದು ಹೇಳಬೇಕಿತ್ತು. ಕನ್ನಡ ಬೈಬಲಲ್ಲಿ ಅದನ್ನು “ಹೌದು” ಎಂದು ಭಾಷಾಂತರಿಸಲಾಗಿದೆ. (ಧರ್ಮೋ. 27:15-26) ಸಾವಿರಾರು ಗಂಡಸರು, ಹೆಂಗಸರು, ಮಕ್ಕಳು ಸೇರಿ ಗಟ್ಟಿಯಾಗಿ “ಆಮೆನ್‌” ಎಂದಾಗ ಹೇಗಿದ್ದಿರಬಹುದಲ್ವಾ? (ಯೆಹೋ. 8:30-35) ಆ ದಿನ ಅವರು ಕೊಟ್ಟ ಮಾತನ್ನು ಜೀವನಪೂರ್ತಿ ಮರೆತಿರಲಿಕ್ಕಿಲ್ಲ. ಅವರು ಕೊಟ್ಟ ಮಾತಿನಂತೆ ನಡಕೊಂಡರು. ಆದ್ದರಿಂದ “ಯೆಹೋಶುವನ ದಿನಗಳಲ್ಲಿಯೂ ಅವನ ಕಾಲದಿಂದ ಇನ್ನೂ ಜೀವಿಸುತ್ತಾ ಯೆಹೋವನು ಇಸ್ರಾಯೇಲ್ಯರಿಗೋಸ್ಕರ ನಡಿಸಿದ ಮಹತ್ಕಾರ್ಯಗಳಿಗೆ ಸಾಕ್ಷಿಗಳಾಗಿದ್ದ ಹಿರಿಯರ ದಿನಗಳಲ್ಲಿಯೂ ಇಸ್ರಾಯೇಲ್ಯರು ಯೆಹೋವನನ್ನು ಸೇವಿಸುತ್ತಿದ್ದರು” ಎಂದು ದಾಖಲೆ ಹೇಳುತ್ತದೆ.—ಯೆಹೋ. 24:31.

ಯೇಸು ಸಹ ತಾನು ಹೇಳಿದ ಮಾತು ಸತ್ಯ ಎಂದು ದೃಢಪಡಿಸಲು “ಆಮೆನ್‌” ಎಂದು ಹೇಳುತ್ತಿದ್ದನು. ಆದರೆ ಇದನ್ನು ಸ್ವಲ್ಪ ಭಿನ್ನವಾಗಿ ಉಪಯೋಗಿಸಿದನು. ಇದನ್ನು ಒಂದು ವಾಕ್ಯ ಹೇಳಿದ ಮೇಲೆ ಕೊಡುವ ಉತ್ತರವಾಗಿ ಅಲ್ಲ, ಒಂದು ಸತ್ಯ ವಾಕ್ಯವನ್ನು ಪರಿಚಯಿಸಲು “ಆಮೆನ್‌” ಎಂದನು. ಕೆಲವೊಮ್ಮೆ ಆತನು ಇದನ್ನು ಎರಡೆರಡು ಸಲ ಹೇಳುತ್ತಿದ್ದನು. ಕನ್ನಡ ಬೈಬಲಲ್ಲಿ ಇದನ್ನು “ನಿಜವಾಗಿ” ಎಂದು ಭಾಷಾಂತರಿಸಲಾಗಿದೆ ಮತ್ತು ಕನ್ನಡ ವ್ಯಾಕರಣದ ಕಾರಣ ವಾಕ್ಯದ ಕೊನೆಯಲ್ಲಿ ಕೊಡಲಾಗಿದೆ. (ಮತ್ತಾ. 5:18; ಯೋಹಾ. 1:51) ಯೇಸು “ಆಮೆನ್‌” ಎಂದು ಹೇಳುವ ಮೂಲಕ ತನ್ನ ವಾಕ್ಯಗಳು ಸತ್ಯವಾಗಿವೆ ಎಂದು ದೃಢೀಕರಿಸಿದನು. ಯೇಸು ಇಷ್ಟೊಂದು ಖಚಿತವಾಗಿ ಮಾತಾಡಲು ಕಾರಣ ಏನು? ದೇವರು ಮಾಡಿರುವ ಎಲ್ಲಾ ವಾಗ್ದಾನಗಳು ಆತನ ಮೂಲಕವೇ ನಿಜವಾಗಲಿವೆ.—2 ಕೊರಿಂ. 1:20; ಪ್ರಕ. 3:14.

“ಸರ್ವಜನರೂ ಆಮೆನ್‌ ಎಂದು ಯೆಹೋವನನ್ನು ಸ್ತುತಿಸಿದರು”

ಇಸ್ರಾಯೇಲ್ಯರು ಯೆಹೋವನನ್ನು ಸ್ತುತಿಸುವಾಗ ಮತ್ತು ಪ್ರಾರ್ಥಿಸುವಾಗ ಸಹ “ಆಮೆನ್‌” ಎಂದು ಹೇಳುತ್ತಿದ್ದರು. (ನೆಹೆ. 8:6; ಕೀರ್ತ. 41:13) ಪ್ರಾರ್ಥನೆಯಾದ ಮೇಲೆ “ಆಮೆನ್‌” ಎಂದಾಗ ಪ್ರಾರ್ಥನೆಯನ್ನು ಕೇಳಿಸಿಕೊಂಡವರೂ ಪ್ರಾರ್ಥನೆಯಲ್ಲಿ ಹೇಳಿದ್ದನ್ನು ಒಪ್ಪುತ್ತೇವೆ ಎಂದು ತೋರಿಸಿಕೊಡುತ್ತಿದ್ದರು. ಇದರಿಂದ ಎಲ್ಲರೂ ಪ್ರಾರ್ಥನೆಯಲ್ಲಿ ಭಾಗವಹಿಸಿದಂತೆ ಆಗುತ್ತಿತ್ತು. ಹೀಗೆ ಅವರೆಲ್ಲರೂ ಯೆಹೋವನ ಆರಾಧನೆಯಲ್ಲಿ ಆನಂದಿಸಿದರು. ರಾಜ ದಾವೀದನು ಮಂಜೂಷವನ್ನು ಯೆರೂಸಲೇಮಿಗೆ ತಂದಾಗ ಇದೇ ಆಯಿತು. ಎಲ್ಲರೂ ಮಂಜೂಷ ಬಂದ ಸಂತೋಷದಲ್ಲಿದ್ದಾಗ ಆತನು ರಚಿಸಿದ ಮನಮುಟ್ಟುವ ಪ್ರಾರ್ಥನೆಯನ್ನು ಗೀತೆಯಾಗಿ ಹಾಡಲಾಯಿತು. (1 ಪೂರ್ವ. 16:8-36) ಗೀತೆಯಲ್ಲಿರುವ ಪದಗಳನ್ನು ಹಾಜರಿದ್ದವರು ಕೇಳಿಸಿಕೊಂಡಾಗ ತುಂಬ ಪ್ರಭಾವಿತರಾದರು. “ಸರ್ವಜನರೂ ಆಮೆನ್‌ ಎಂದು ಯೆಹೋವನನ್ನು ಸ್ತುತಿಸಿದರು.” ಹೀಗೆ ಒಟ್ಟಿಗೆ ಯೆಹೋವನ ಆರಾಧನೆ ಮಾಡಿದ್ದರಿಂದ ಅವರಿಗೆ ತುಂಬ ಸಂತೋಷವಾಯಿತು.

ಮೊದಲನೇ ಶತಮಾನದ ಕ್ರೈಸ್ತರು ಸಹ ಯೆಹೋವನನ್ನು ಸ್ತುತಿಸುವಾಗ “ಆಮೆನ್‌” ಎನ್ನುತ್ತಿದ್ದರು. ಬೈಬಲನ್ನು ಬರೆದವರು ಈ ಪದವನ್ನು ತಮ್ಮ ಪತ್ರಗಳಲ್ಲೂ ಸೇರಿಸಿದ್ದಾರೆ. (ರೋಮ. 1:25; 16:27; 1 ಪೇತ್ರ 4:11) ಸ್ವರ್ಗದಲ್ಲಿರುವ ಆತ್ಮಜೀವಿಗಳು ಸಹ ಯೆಹೋವನನ್ನು ಸ್ತುತಿಸುತ್ತಾ “ಆಮೆನ್‌! ಜನರೇ, ಯಾಹುವನ್ನು ಸ್ತುತಿಸಿರಿ!” ಎಂದು ಹೇಳುವ ಮಾತು ಪ್ರಕಟನೆ ಪುಸ್ತಕದಲ್ಲಿ ದಾಖಲಾಗಿದೆ. (ಪ್ರಕ. 19:1, 4) ಆರಂಭದ ಕ್ರೈಸ್ತರು ಕೂಟಗಳ ಸಮಯದಲ್ಲಿ ಪ್ರಾರ್ಥನೆ ಮಾಡಿದ ಮೇಲೆ ಯಾವಾಗಲೂ “ಆಮೆನ್‌” ಎಂದು ಹೇಳುತ್ತಿದ್ದರು. (1 ಕೊರಿಂ. 14:16) ಪ್ರಾರ್ಥನೆಯಾದ ಮೇಲೆ ಏನೋ ಹೇಳಬೇಕು ಅಂತ ಹೇಳುವ ಮಾತು ಅದಾಗಿರಲಿಲ್ಲ.

ನೀವು ಹೇಳುವ “ಆಮೆನ್‌” ಯಾಕೆ ಮುಖ್ಯ?

ಯೆಹೋವನ ಸೇವಕರು “ಆಮೆನ್‌” ಎಂಬ ಪದವನ್ನು ಹೇಗೆ ಉಪಯೋಗಿಸುತ್ತಿದ್ದರು ಎಂದು ತಿಳಿದುಕೊಂಡ ಮೇಲೆ “ಆಮೆನ್‌” ಅಂತ ಹೇಳುವುದು ಎಷ್ಟು ಪ್ರಾಮುಖ್ಯ ಎಂದು ಅರ್ಥ ಆಯಿತಲ್ವಾ? ನಾವು ವೈಯಕ್ತಿಕ ಪ್ರಾರ್ಥನೆ ಮಾಡಿದ ಮೇಲೆ ಸಹ “ಆಮೆನ್‌” ಅಂದಾಗ, ಅದು ನಿಜಕ್ಕೂ ನಮ್ಮ ಮನದಾಳದ ಮಾತು ಎಂದು ತೋರಿಸಿಕೊಡುತ್ತೇವೆ. ಬೇರೆಯವರ ಮುಂದೆ ಮಾಡಲಾಗುವ ಪ್ರಾರ್ಥನೆಯ ಕೊನೆಯಲ್ಲಿ ನಾವು “ಆಮೆನ್‌” ಅಂದಾಗ, ಆ ಪ್ರಾರ್ಥನೆಯಲ್ಲಿ ಹೇಳಿದ ಎಲ್ಲ ವಿಷಯಗಳನ್ನು ನಾವು ಒಪ್ಪುತ್ತೇವೆ ಎಂದು ತೋರಿಸಿಕೊಡುತ್ತೇವೆ. ನಾವು “ಆಮೆನ್‌” ಅನ್ನಲು ಬೇರೆ ಕಾರಣಗಳೂ ಇವೆ.

ಇದು ನಮ್ಮ ಆರಾಧನೆಯ ಭಾಗವಾಗಿದೆ. ಪ್ರಾರ್ಥನೆಯ ಸಮಯದಲ್ಲಿ ನಾವು ಯೆಹೋವನನ್ನು ಆರಾಧಿಸುತ್ತೇವೆ. ಆಗ ನಾವು ಏನು ಹೇಳುತ್ತೇವೆ ಅನ್ನುವುದರಿಂದ ಮಾತ್ರ ಅಲ್ಲ, ನಾವು ನಡಕೊಳ್ಳುವ ವಿಧದಲ್ಲೂ ದೇವರಿಗೆ ಆರಾಧನೆ ಸಲ್ಲಿಸುತ್ತೇವೆ. ನಮ್ಮ “ಆಮೆನ್‌”ಗೆ ಅರ್ಥ ಇರಬೇಕೆಂದು ನಾವು ಬಯಸುವುದರಿಂದ, ಬೇರೆಯವರು ಪ್ರಾರ್ಥನೆ ಮಾಡುವಾಗ ನಾವು ಸರಿಯಾದ ಮನೋಭಾವ ಇಟ್ಟುಕೊಳ್ಳುತ್ತೇವೆ ಮತ್ತು ಪೂರ್ತಿ ಗಮನ ಕೊಡುತ್ತೇವೆ.

ಇದು ನಮ್ಮನ್ನು ಐಕ್ಯಗೊಳಿಸುತ್ತದೆ. ಸಭೆಯಲ್ಲಿ ಪ್ರಾರ್ಥನೆ ಕೇಳಿಸಿಕೊಳ್ಳುವಾಗ ನಾವೆಲ್ಲರೂ ಒಂದೇ ವಿಷಯವನ್ನು ಕೇಳಿಸಿಕೊಳ್ಳುತ್ತೇವೆ. (ಅ. ಕಾ. 1:14; 12:5) ಪ್ರಾರ್ಥನೆಯಾದ ಮೇಲೆ ನಾವೆಲ್ಲರೂ ಸೇರಿ “ಆಮೆನ್‌” ಅನ್ನುವಾಗ ಎಲ್ಲರೂ ಐಕ್ಯವಾಗಿದ್ದೇವೆ ಎಂದು ತೋರಿಸಿಕೊಡುತ್ತೇವೆ. ನಾವು ಗಟ್ಟಿಯಾಗಿ ಹೇಳಲಿ ಅಥವಾ ಮನಸ್ಸಲ್ಲೇ ಅನ್ನಲಿ, ನಾವು ಹೇಳುವ “ಆಮೆನ್‌” ಕೇಳಿಸಿಕೊಂಡಾಗ ಯೆಹೋವನಿಗೆ ನಮ್ಮ ವಿನಂತಿಯನ್ನು ಪೂರೈಸಲು ಮನಸ್ಸಾಗುತ್ತದೆ.

ಫೋನಿನ ಮೂಲಕ ಕೂಟಗಳನ್ನು ಕೇಳಿಸಿಕೊಳ್ಳುತ್ತಿರುವ ಸಹೋದರಿ ಪ್ರಾರ್ಥನೆ ನಡೆಯುತ್ತಿರುವಾಗ ತಲೆಬಾಗಿ ಪ್ರಾರ್ಥನೆಗೆ ಕಿವಿಗೊಡುತ್ತಿದ್ದಾರೆ

ನಾವು ಹೇಳುವ “ಆಮೆನ್‌” ಯೆಹೋವನಿಗೆ ಸ್ತುತಿ ತರುತ್ತದೆ

ಇದರಿಂದ ಯೆಹೋವನನ್ನು ಸ್ತುತಿಸುತ್ತೇವೆ. ಯೆಹೋವನ ಆರಾಧನೆಯ ಭಾಗವಾಗಿ ನಾವೇನೇ ಮಾಡಿದರೂ ಆತನು ಅದನ್ನು ಗಮನಿಸುತ್ತಾನೆ. (ಲೂಕ 21:2, 3) ನಾವು ಯಾವ ಉದ್ದೇಶದಿಂದ ಒಂದು ವಿಷಯವನ್ನು ಮಾಡುತ್ತೇವೆ, ನಮ್ಮ ಹೃದಯದಲ್ಲಿ ಏನಿದೆ ಅನ್ನುವುದು ಆತನಿಗೆ ಗೊತ್ತು. ಕೆಲವೊಮ್ಮೆ ಟೆಲಿಫೋನ್‌ ಮೂಲಕ ಕೂಟವನ್ನು ಕೇಳಿಸಿಕೊಳ್ಳುವ ಪರಿಸ್ಥಿತಿ ಬರಬಹುದು. ಆಗಲೂ ನಾವು ದೀನತೆಯಿಂದ ಹೇಳುವ “ಆಮೆನ್‌” ಅನ್ನು ಯೆಹೋವನು ಗಮನಿಸುತ್ತಾನೆ. ರಾಜ್ಯ ಸಭಾಗೃಹದಲ್ಲಿರುವವರು ಹೇಳಿದ “ಆಮೆನ್‌” ಮತ್ತು ನಾವು ಹೇಳಿದ “ಆಮೆನ್‌” ಎರಡೂ ಒಟ್ಟಿಗೆ ಯೆಹೋವನಿಗೆ ಸ್ತುತಿ ತರುತ್ತದೆ.

ನಾವು ಹೇಳುವ “ಆಮೆನ್‌” ದೊಡ್ಡದಲ್ಲ ಅಂತ ನಮಗೆ ಅನಿಸಬಹುದು. ಆದರೆ ಯೆಹೋವನಿಗೆ ಅದು ಮುಖ್ಯ. ಬೈಬಲಿನ ಒಂದು ವಿಶ್ವಕೋಶ ಹೀಗೆ ಹೇಳುತ್ತದೆ: ದೇವರ ಸೇವಕರು “ಈ ಒಂದು ಪದವನ್ನು ಉಪಯೋಗಿಸುವ ಮೂಲಕ ದೃಢವಿಶ್ವಾಸವನ್ನು, ಸಂಪೂರ್ಣ ಅಂಗೀಕಾರವನ್ನು ಮತ್ತು ತಮ್ಮ ಹೃದಯಗಳಲ್ಲಿರುವ ಬಲವಾದ ನಂಬಿಕೆಯನ್ನು” ತೋರಿಸಬಹುದು. ನಾವು ಹೇಳುವ ಒಂದೊಂದು “ಆಮೆನ್‌” ಯೆಹೋವನಿಗೆ ಸಮರ್ಪಕವಾಗಿರಲಿ.—ಕೀರ್ತ. 19:14.

ಯಾವಾಗಲೂ “ಆಮೆನ್‌” ಹೇಳಬೇಕಾ?

“ಆಮೆನ್‌” ತುಂಬ ಮುಖ್ಯವಾದ ಪದ. ಆದರೆ ಪ್ರಾರ್ಥನೆ ಮಾಡಿದವರು ಏನಾದರೂ ತಪ್ಪಾಗಿ ಹೇಳಿಬಿಟ್ಟರೆ ಆಗೇನು ಮಾಡುವುದು? “ಆಮೆನ್‌” ಅಂತ ಹೇಳಬಾರದಾ? ಹಾಗೇನಿಲ್ಲ. ನಾವೆಲ್ಲರೂ ಮಾತಿನಲ್ಲಿ ಎಡವುತ್ತೇವೆ ಅಂತ ಯೆಹೋವನಿಗೆ ಗೊತ್ತು. ಆತನು ಆ ತಪ್ಪುಗಳನ್ನು ದೊಡ್ಡದಾಗಿ ತಗೊಳ್ಳುವುದಿಲ್ಲ. ನಾವು ಅದನ್ನು ದೊಡ್ಡದು ಮಾಡುವ ಬದಲು, ಪ್ರಾರ್ಥನೆ ಮಾಡುವವರು ಏನು ಹೇಳಿದರೋ ಅದಕ್ಕೆ ಗಮನ ಕೊಟ್ಟು ಕೊನೆಯಲ್ಲಿ “ಆಮೆನ್‌” ಎಂದು ಹೇಳಬಹುದು.

ಆದರೆ ಯೆಹೋವನ ಸಾಕ್ಷಿ ಅಲ್ಲದ ಒಬ್ಬ ವ್ಯಕ್ತಿ ಪ್ರಾರ್ಥನೆ ಮಾಡಿದರೆ ನಾವು ಅದಕ್ಕೆ “ಆಮೆನ್‌” ಅನ್ನಲ್ಲ. ಗಟ್ಟಿಯಾಗಿಯೂ ಅನ್ನಲ್ಲ, ಮನಸ್ಸಲ್ಲೂ ಅನ್ನಲ್ಲ. ಇಂಥ ಒಂದು ಪ್ರಾರ್ಥನೆಯ ಸಮಯದಲ್ಲಿ ನಾವು ಹಾಜರಿದ್ದರೆ ಏನು ಮಾಡಬೇಕು? ನಾವು ಯಾವುದೋ ಒಂದು ಕಾರ್ಯಕ್ರಮಕ್ಕೆ ಹೋಗಿರಬಹುದು ಮತ್ತು ಅಲ್ಲಿ ಒಬ್ಬರನ್ನು ಪ್ರಾರ್ಥನೆ ಮಾಡುವಂತೆ ಯಾರಾದರೂ ಹೇಳಬಹುದು. ಅಥವಾ ಯೆಹೋವನ ಸಾಕ್ಷಿ ಅಲ್ಲದ ನಮ್ಮ ಕುಟುಂಬದ ಒಬ್ಬ ಸದಸ್ಯ ಪ್ರಾರ್ಥನೆ ಮಾಡಲು ಮುಂದೆ ಬರಬಹುದು. ಆಗ ನಾವೇನು ಮಾಡಬೇಕು?

ನಾವು ಇಂಥ ಸನ್ನಿವೇಶದಲ್ಲಿದ್ದರೆ, ಗೌರವಭಾವದಿಂದ ಮೌನವಾಗಿ ಇರಬೇಕು. ಅಂಥ ಪ್ರಾರ್ಥನೆಯ ಕೊನೆಯಲ್ಲಿ ನಾವು “ಆಮೆನ್‌” ಅನ್ನಲ್ಲ ಮತ್ತು ಪ್ರಾರ್ಥನೆಯ ಸಮಯದಲ್ಲಿ ನಾವು ಯಾರ ಕೈಯನ್ನೂ ಹಿಡುಕೊಳ್ಳಲ್ಲ. ಯಾಕೆಂದರೆ ಹೀಗೆ ಮಾಡಿದರೆ ನಾವು ಆ ಪ್ರಾರ್ಥನೆಯಲ್ಲಿ ಭಾಗವಹಿಸಿದಂತೆ ಆಗಿಬಿಡುತ್ತದೆ. ಇಂಥ ಸಮಯದಲ್ಲಿ ನಾವು ಮನಸ್ಸಲ್ಲೇ ನಮ್ಮ ಸ್ವಂತ ಪ್ರಾರ್ಥನೆಯನ್ನು ಮಾಡಬಹುದು. ಆದರೆ ನಮ್ಮದೇ ಪ್ರಾರ್ಥನೆ ಮಾಡಿದ ಮೇಲೆ ಗಟ್ಟಿಯಾಗಿ “ಆಮೆನ್‌” ಅನ್ನಬಾರದು. ಯಾಕೆಂದರೆ ನಾವು ಸಾಕ್ಷಿ ಅಲ್ಲದ ವ್ಯಕ್ತಿ ಮಾಡಿದ ಪ್ರಾರ್ಥನೆಗೆ “ಆಮೆನ್‌” ಅಂದ್ವಿ ಅಂತ ಬೇರೆಯವರು ಅಂದುಕೊಳ್ಳುತ್ತಾರೆ. ಹಾಜರಿರುವ ಎಲ್ಲರೂ ಪ್ರಾರ್ಥನೆ ಮಾಡಲು ಎದ್ದುನಿಂತರೆ, ನಾವೂ ಎದ್ದುನಿಲ್ಲುತ್ತೇವಾ ಎಂದು ನಾವೇ ತೀರ್ಮಾನಿಸಬೇಕು. ಎದ್ದುನಿಲ್ಲುವುದು ಅಥವಾ ತಲೆಯನ್ನು ಬಗ್ಗಿಸುವುದು ತಾನೇ ಆರಾಧನೆಯ ಕ್ರಿಯೆ ಆಗಿಬಿಡುವುದಿಲ್ಲ. ಇಂಥ ಸನ್ನಿವೇಶದಲ್ಲಿ ಏನು ಮಾಡಬೇಕೆಂದು ಪ್ರತಿಯೊಬ್ಬ ಕ್ರೈಸ್ತನು ತೀರ್ಮಾನಿಸಬೇಕು. ಬೇರೆಯವರು ಅವರನ್ನು ಟೀಕಿಸಬಾರದು.

ನಾವು ಹೇಳುವ “ಆಮೆನ್‌” ಯೆಹೋವನಿಗೆ ಯಾಕೆ ಮುಖ್ಯ ಎಂದು ಮೇಲೆ ತಿಳಿಸಲಾದ ಸನ್ನಿವೇಶಗಳಿಂದಲೂ ಸ್ಪಷ್ಟವಾಗಿ ಗೊತ್ತಾಗುತ್ತದೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ