‘ಲೋಕದ ಬೆಳಕಿನ’ ಕಡೆಗೆ ಗಮನವನ್ನು ಸೆಳೆಯಿರಿ
1. ದೇವರ ವಾಕ್ಯದಲ್ಲಿ ಯಾವ ದೊಡ್ಡ ಬೆಳಕಿನ ಕುರಿತು ಮುಂತಿಳಿಸಲ್ಪಟ್ಟಿತ್ತು, ಮತ್ತು ಯಾವ ಸಂದರ್ಭವು ಆ ಬೆಳಕಿನ ಕಡೆಗೆ ವಿಶೇಷ ಗಮನವನ್ನು ಸೆಳೆಯುತ್ತದೆ?
1 ಪ್ರವಾದಿಯಾದ ಯೆಶಾಯನ ಮೂಲಕ ಯೆಹೋವನು ಮುಂತಿಳಿಸಿದ್ದು: “ಕತ್ತಲಲ್ಲಿ ಸಂಚರಿಸಿದ ಜನರಿಗೆ ದೊಡ್ಡ ಬೆಳಕು ಕಾಣಿಸಿತು; ಕಾರ್ಗತ್ತಲಾದ ದೇಶದಲ್ಲಿದ್ದವರಿಗೆ ಪ್ರಕಾಶವು ಹೊಳೆಯಿತು.” (ಯೆಶಾ. 9:2) ಆ “ದೊಡ್ಡ ಬೆಳಕು” ದೇವರ ಸ್ವಂತ ಮಗನಾದ ಯೇಸು ಕ್ರಿಸ್ತನ ಕಾರ್ಯಗಳಲ್ಲಿ ತೋರಿಬಂತು. ಭೂಮಿಯ ಮೇಲಿದ್ದಾಗ ಅವನು ಮಾಡಿದ ಸಾರುವ ಕೆಲಸ ಮತ್ತು ಅವನ ಯಜ್ಞದಿಂದ ಬಂದ ಆಶೀರ್ವಾದಗಳು ಆಧ್ಯಾತ್ಮಿಕವಾಗಿ ಕತ್ತಲೆಯಲ್ಲಿದ್ದವರ ಸ್ಥಿತಿಯನ್ನು ಬೆಳಗಿಸಿತು. ಕತ್ತಲೆಯ ಈ ಸಮಯಗಳಲ್ಲಿ ಜನರಿಗೆ ಆವಶ್ಯಕವಾಗಿರುವುದು ಆ ಬೆಳಕೇ. ಕರ್ತನ ಸಂಧ್ಯಾ ಭೋಜನವು ‘ಲೋಕದ ಬೆಳಕಿನ’ ಕಡೆಗೆ ಗಮನವನ್ನು ಸೆಳೆಯಲು ನಮಗೆ ಒಂದು ವಿಶೇಷ ಅವಕಾಶವನ್ನು ಕೊಡುತ್ತದೆ. (ಯೋಹಾ. 8:12) “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ” ಎಂಬ ಯೇಸುವಿನ ಆಜ್ಞೆಗೆ ವಿಧೇಯತೆ ತೋರಿಸುವುದರಲ್ಲಿ ಕಳೆದ ವರ್ಷ ಲಕ್ಷಾಂತರ ಮಂದಿ ನಮ್ಮನ್ನು ಜೊತೆಗೂಡುವ ಮೂಲಕ ನಂಬಿಕೆಯನ್ನು ವ್ಯಕ್ತಪಡಿಸಿದರು. (ಲೂಕ 22:19) ಈ ವರ್ಷದ ಜ್ಞಾಪಕಾಚರಣೆಯು ಸಮೀಪಿಸುತ್ತಿರುವಾಗ, ಯೆಹೋವನು ಹೊಳೆಯುವಂತೆ ಮಾಡಿರುವ ಆ ದೊಡ್ಡ ಬೆಳಕಿನ ಕಡೆಗೆ ನಾವು ಹೇಗೆ ಗಮನವನ್ನು ಸೆಳೆಯಸಾಧ್ಯವಿದೆ?—ಫಿಲಿ. 2:15.
2. ವಿಮೋಚನಾ ಮೌಲ್ಯದ ಯಜ್ಞಕ್ಕಾಗಿ ನಾವು ನಮ್ಮ ಹೃತ್ಪೂರ್ವಕ ಪ್ರೀತಿಯನ್ನು ಹೇಗೆ ಹೆಚ್ಚಿಸಸಾಧ್ಯವಿದೆ, ಮತ್ತು ಹೀಗೆ ಮಾಡುವುದರ ಪರಿಣಾಮವೇನಾಗಿರುವುದು?
2 ಹೃತ್ಪೂರ್ವಕ ಗಣ್ಯತೆಯನ್ನು ಬೆಳೆಸಿಕೊಳ್ಳಿರಿ: ಜ್ಞಾಪಕಾಚರಣೆಯ ಸಮಯಾವಧಿಯು, ಮಾನವಕುಲಕ್ಕಾಗಿ ವಿಮೋಚನಾ ಮೌಲ್ಯದ ಯಜ್ಞವನ್ನು ಒದಗಿಸುವ ಮೂಲಕ ಯೆಹೋವನು ಮತ್ತು ಯೇಸು ತೋರಿಸಿದ ಮಹಾನ್ ಪ್ರೀತಿಯ ಕುರಿತು ಧ್ಯಾನಿಸಲು ಒಂದು ಉತ್ತಮ ಅವಕಾಶವಾಗಿದೆ. (ಯೋಹಾ. 3:16; 2 ಕೊರಿಂ. 5:14, 15) ಹೀಗೆ ಧ್ಯಾನಿಸುವುದು ಈ ಪವಿತ್ರ ಸಂದರ್ಭಕ್ಕಾಗಿ ನಮ್ಮ ಹೃತ್ಪೂರ್ವಕ ಗಣ್ಯತೆಯನ್ನು ನಿಸ್ಸಂದೇಹವಾಗಿಯೂ ಹೆಚ್ಚಿಸುತ್ತದೆ. ದೇವರ ಸೇವಕರೆಲ್ಲರೂ ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು ಪುಸ್ತಿಕೆಯಲ್ಲಿ ಕೊಡಲ್ಪಟ್ಟಿರುವ ಜ್ಞಾಪಕಾಚರಣೆಯ ವಿಶೇಷ ಬೈಬಲ್ ಓದುವಿಕೆಯ ಭಾಗವನ್ನು ಓದಿ, ಧ್ಯಾನಿಸಲಿಕ್ಕಾಗಿ ಸಮಯವನ್ನು ಬದಿಗಿಡುವರು. ವಿಮೋಚನಾ ಮೌಲ್ಯದ ಯಜ್ಞದ ಒದಗಿಸುವಿಕೆಯ ಮೂಲಕ ಅತಿ ಭವ್ಯವಾದ ರೀತಿಯಲ್ಲಿ ಪ್ರದರ್ಶಿಸಲ್ಪಟ್ಟ ಯೆಹೋವನ ಅತಿಶ್ರೇಷ್ಠ ಗುಣಗಳ ಕುರಿತು ಆಲೋಚಿಸುವುದು, ಆತನು ನಮ್ಮ ದೇವರಾಗಿರುವುದಕ್ಕೆ ನಾವು ಹೆಮ್ಮೆಪಡುವಂತೆ ಮಾಡುತ್ತದೆ. ವಿಮೋಚನಾ ಮೌಲ್ಯದ ಯಜ್ಞವು ವೈಯಕ್ತಿಕವಾಗಿ ನಮಗೆ ಹೇಗೆ ಮಹತ್ತ್ವದ್ದಾಗಿದೆ ಎಂಬುದರ ಬಗ್ಗೆ ಧ್ಯಾನಿಸುವುದು, ದೇವರ ಮತ್ತು ಆತನ ಮಗನ ಮೇಲಿರುವ ನಮ್ಮ ಹೃತ್ಪೂರ್ವಕ ಪ್ರೀತಿಯನ್ನು ಇನ್ನೂ ಹೆಚ್ಚಿಸುತ್ತದೆ ಹಾಗೂ ದೇವರ ಚಿತ್ತವನ್ನು ಮಾಡುವುದರಲ್ಲಿ ಪ್ರಯಾಸಪಡುವಂತೆ ನಮ್ಮನ್ನು ಪ್ರಚೋದಿಸುತ್ತದೆ.—ಗಲಾ. 2:20.
3. ಜ್ಞಾಪಕಾಚರಣೆಗಾಗಿರುವ ನಮ್ಮ ಗಣ್ಯತೆಯನ್ನು ನಾವು ಹೇಗೆ ವ್ಯಕ್ತಪಡಿಸಸಾಧ್ಯವಿದೆ?
3 ರಕ್ಷಣೆಯನ್ನು ಪಡೆಯಲು ಯೆಹೋವನು ಮಾಡಿರುವ ಒದಗಿಸುವಿಕೆಗಾಗಿ ನಾವು ನಮ್ಮ ಗಣ್ಯತೆಯನ್ನು ಆಳಗೊಳಿಸಿದರೆ ಜ್ಞಾಪಕಾಚರಣೆಗಾಗಿ ನಮ್ಮಲ್ಲಿರುವ ಹುರುಪು ಬೈಬಲ್ ವಿದ್ಯಾರ್ಥಿಗಳಿಗೆ, ನಾವು ಪುನಃರ್ಭೇಟಿಯನ್ನು ಮಾಡುವ ವ್ಯಕ್ತಿಗಳಿಗೆ, ಸಂಬಂಧಿಕರಿಗೆ, ನೆರೆಯವರಿಗೆ, ಸಹಪಾಠಿಗಳಿಗೆ, ಜೊತೆ ಕೆಲಸಗಾರರಿಗೆ ಮತ್ತು ಈ ವಿಶೇಷ ಸಂದರ್ಭಕ್ಕೆ ನಾವು ಆಮಂತ್ರಿಸುವ ಇತರರಿಗೂ ತಟ್ಟುವುದು. (ಲೂಕ 6:45) ಆದುದರಿಂದ, ಅವರೆಲ್ಲರನ್ನು ಸ್ವಾಗತಿಸಲು ವಿಶೇಷ ಪ್ರಯತ್ನವನ್ನು ಮಾಡಿರಿ ಮತ್ತು ಅವರಿಗೆ ನೆನಪು ಹುಟ್ಟಿಸಲು ಜ್ಞಾಪಕಾಚರಣೆಯ ಮುದ್ರಿತ ಆಮಂತ್ರಣಪತ್ರವನ್ನು ನೀಡಿರಿ. ಅನೇಕರು, ಕ್ರಮವಾಗಿ ತಾವು ಯಾರನ್ನು ಜ್ಞಾಪಕಾಚರಣೆಗೆ ಆಮಂತ್ರಿಸಲು ಬಯಸುತ್ತಾರೊ ಅವರಲ್ಲಿ ಒಬ್ಬರನ್ನೂ ಮರೆತುಬಿಡದಿರಲು ಅವರೆಲ್ಲರ ಹೆಸರುಗಳ ಒಂದು ಪಟ್ಟಿಯನ್ನು ಇಟ್ಟುಕೊಂಡು, ಪ್ರತಿ ವರ್ಷ ಅದಕ್ಕೆ ಹೊಸ ಹೆಸರುಗಳನ್ನು ಸೇರಿಸುವುದು ಪ್ರಾಯೋಗಿಕವಾಗಿದೆ ಎಂದು ಕಂಡುಕೊಂಡಿದ್ದಾರೆ. ಇದನ್ನು ವ್ಯವಸ್ಥಿತ ರೀತಿಯಲ್ಲಿ ಮಾಡುವುದು ಮತ್ತು ಆಸಕ್ತ ವ್ಯಕ್ತಿಗಳನ್ನು ಆಮಂತ್ರಿಸಲು ನಮ್ಮಿಂದ ಸಾಧ್ಯವಿರುವುದೆಲ್ಲವನ್ನು ಮಾಡುವುದು, ಯೆಹೋವ ದೇವರ ‘ವರ್ಣಿಸಲಶಕ್ಯವಾದ ಉಚಿತ ವರಕ್ಕಾಗಿ’ ಆತನಿಗೆ ಗಣ್ಯತೆಯನ್ನು ವ್ಯಕ್ತಪಡಿಸುವ ಅತ್ಯುತ್ತಮ ವಿಧವಾಗಿದೆ.—2 ಕೊರಿಂ. 9:15, NW.
4. ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಶುಶ್ರೂಷೆಯಲ್ಲಿ ಹೆಚ್ಚು ಸಮಯವನ್ನು ಕಳೆಯಲು ನಮಗೆ ಯಾವುದು ಸಹಾಯಮಾಡಬಲ್ಲದು?
4 ಶುಶ್ರೂಷೆಯಲ್ಲಿ ಹೆಚ್ಚು ಸಮಯವನ್ನು ಕಳೆಯುವುದು: ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ನೀವು ಶುಶ್ರೂಷೆಯಲ್ಲಿ ಹೆಚ್ಚು ಸಮಯವನ್ನು ಕಳೆಯಬಲ್ಲಿರೊ? ‘ಕ್ರಿಸ್ತನ ಪ್ರಭಾವವನ್ನು ತೋರಿಸುವ ಸುವಾರ್ತೆಯನ್ನು’ ಇತರರೊಂದಿಗೆ ಹಂಚಿಕೊಳ್ಳಲು ಮಾಡುವ ಪ್ರಯತ್ನದ ಮೇಲೆ ಖಂಡಿತವಾಗಿಯೂ ದೇವರ ಆಶೀರ್ವಾದವಿರುತ್ತದೆ. ಎಲ್ಲ ಆಧ್ಯಾತ್ಮಿಕ ಜ್ಞಾನೋದಯದ ಮೂಲನಾದ ಯೆಹೋವನು “ಕತ್ತಲೆಯೊಳಗಿಂದ ಬೆಳಕು ಹೊಳೆಯಲಿ” ಎಂದು ಆಜ್ಞಾಪಿಸಿದ್ದಾನೆ. (2 ಕೊರಿಂ. 4:4-6) ಅಗತ್ಯವಿರುವಾಗ ಹಿರಿಯರು, ಶುಶ್ರೂಷೆಯಲ್ಲಿ ಹೆಚ್ಚು ಸಮಯವನ್ನು ಕಳೆಯಲು ಬಯಸುವ ಪ್ರಚಾರಕರನ್ನು ಬೆಂಬಲಿಸಲಿಕ್ಕಾಗಿ ಮುಂದಾಳುತ್ವವನ್ನು ವಹಿಸುತ್ತಾ ಇತರ ಸಮಯಗಳಲ್ಲಿ ಸಹ ಕ್ಷೇತ್ರ ಸೇವೆಗಾಗಿ ಕೂಟಗಳನ್ನು ಏರ್ಪಡಿಸುವರು. ಇದರಲ್ಲಿ, ಮುಂಜಾನೆ ಬೀದಿ ಸಾಕ್ಷಿಕಾರ್ಯ ಅಥವಾ ಮಧ್ಯಾಹ್ನ ಇಲ್ಲವೆ ಸಂಜೆಯಲ್ಲಿ ವ್ಯಾಪಾರ ಕ್ಷೇತ್ರದಲ್ಲಿ ಸಾಕ್ಷಿಕಾರ್ಯ ಮತ್ತು ಟೆಲಿಫೋನ್ ಸಾಕ್ಷಿಕಾರ್ಯದ ಏರ್ಪಾಡುಗಳು ಒಳಗೂಡಿರಬಹುದು. ಶುಶ್ರೂಷೆಯಲ್ಲಿ ಹೆಚ್ಚು ಸಮಯವನ್ನು ಕಳೆಯಲು ಸಹಾಯಮಾಡುವ ಒಂದು ವಿಷಯವು ಯಾವುದೆಂದರೆ, ತಾಸುಗಳ ವಿಷಯದಲ್ಲಿ ನ್ಯಾಯಸಮ್ಮತವಾದ ಒಂದು ಗುರಿಯನ್ನಿಟ್ಟು ಅದನ್ನು ಮುಟ್ಟಲು ಪ್ರಯಾಸಪಡುವುದೇ ಆಗಿದೆ. ಅನೇಕರಿಗೆ, ಯೆಹೋವನಿಗೆ ಅತ್ಯುತ್ತಮವಾದದ್ದನ್ನು ಕೊಡುವುದರಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯು ಒಳಗೂಡಿರುತ್ತದೆ.—ಕೊಲೊ. 3:23, 24.
5. ಆಕ್ಸಿಲಿಯರಿ ಪಯನೀಯರ್ ಸೇವೆಗೆ ಆವಶ್ಯಕವಾದ ತಾಸುಗಳನ್ನು ಕಡಿಮೆಗೊಳಿಸಿರುವುದರಿಂದ ಅನೇಕರು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ?
5 ನೀವು ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಸಾಧ್ಯವಿದೆಯೊ? ಆಕ್ಸಿಲಿಯರಿ ಪಯನೀಯರ್ ಸೇವೆಗೆ ಆವಶ್ಯಕವಾದ ತಾಸುಗಳನ್ನು ಕಡಿಮೆಗೊಳಿಸಿ ಈಗ ಸುಮಾರು ಏಳು ವರ್ಷಗಳು ಕಳೆದಿವೆ. ಈ ಹೊಂದಾಣಿಕೆಯು ಇನ್ನೂ ಹೆಚ್ಚು ಮಂದಿ ಆಕ್ಸಿಲಿಯರಿ ಪಯನೀಯರ್ ಸೇವೆಯ ಆಶೀರ್ವಾದಗಳನ್ನು ಅನುಭವಿಸುವಂತೆ ಸಾಧ್ಯಮಾಡಿದೆ. ನೀವಿದನ್ನು ಮಾಡಲು ಪ್ರಯತ್ನಿಸಿದ್ದೀರೊ? ಕೆಲವರು ಪ್ರತಿ ವರ್ಷ ಪಯನೀಯರ್ ಸೇವೆ ಮಾಡುವುದನ್ನು ತಮ್ಮ ರೂಢಿಯನ್ನಾಗಿ ಮಾಡಿಕೊಂಡಿದ್ದಾರೆ. ಅನೇಕ ಸಭೆಗಳಲ್ಲಿ, ಹಲವಾರು ಪ್ರಚಾರಕರು ಈ ಸೇವೆಯನ್ನು ಒಟ್ಟಾಗಿ ಮಾಡುತ್ತಾರೆ ಮತ್ತು ಇದು ಆ ವರ್ಷದ ಸಭೆಯ ಚಟುವಟಿಕೆಗಳಲ್ಲಿ ಪ್ರತಿಫಲದಾಯಕವಾದ ಎದ್ದುಕಾಣುವ ವಿಷಯವಾಗಿ ಪರಿಣಮಿಸುತ್ತದೆ. ಜ್ಞಾಪಕಾಚರಣೆಯ ಸಮಯಾವಧಿಯಲ್ಲಿ ಒಂದು ತಿಂಗಳು ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲು ನೀವು ಸಮಯವನ್ನು ಮಾಡಿಕೊಳ್ಳಬಲ್ಲಿರೊ? ವಿಶೇಷವಾಗಿ, ಏಪ್ರಿಲ್ ತಿಂಗಳಿನಲ್ಲಿ ಐದು ಶನಿವಾರ ಮತ್ತು ಐದು ಭಾನುವಾರಗಳಿರುವುದರಿಂದ ಕೆಲವರಿಗೆ ಪಯನೀಯರ್ ಸೇವೆಯನ್ನು ಮಾಡಲು ಅದು ಸೂಕ್ತವಾದ ತಿಂಗಳಾಗಿರಬಹುದು.
6. ಉತ್ತೇಜನದಾಯಕವಾದ ಯಾವ ಏರ್ಪಾಡುಗಳು ಮಾಡಲ್ಪಟ್ಟಿವೆ?
6 ಮಾರ್ಚ್ ಅಥವಾ ಏಪ್ರಿಲ್ ತಿಂಗಳುಗಳಲ್ಲಿ ನಿಮ್ಮ ಸಭೆಗೆ ಸರ್ಕಿಟ್ ಮೇಲ್ವಿಚಾರಕ ಭೇಟಿಯಿದೆಯೊ? ಹಾಗಿರುವಲ್ಲಿ, ನೀವು ಇನ್ನೊಂದು ಆಶೀರ್ವಾದವನ್ನೂ ಪಡೆದುಕೊಳ್ಳಬಲ್ಲಿರಿ. ಹಿಂದೊಮ್ಮೆ ಪ್ರಕಟಿಸಲ್ಪಟ್ಟಂತೆ 2006ನೇ ಸೇವಾ ವರ್ಷದಲ್ಲಿ, ಸರ್ಕಿಟ್ ಮೇಲ್ವಿಚಾರಕರು ಭೇಟಿಮಾಡುವ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವ ಎಲ್ಲರನ್ನು ಆ ವಾರದಲ್ಲಿ ಪಯನೀಯರರೊಂದಿಗೆ ನಡೆಸಲ್ಪಡುವ ಕೂಟದ ಮೊದಲ ಭಾಗಕ್ಕೆ ಹಾಜರಾಗುವಂತೆ ಆಮಂತ್ರಿಸಲಾಗುವುದು. ಈ ಕೂಟದಲ್ಲಿ ಒದಗಿಸಲ್ಪಡುವ ಆಧ್ಯಾತ್ಮಿಕವಾಗಿ ಬಲಪಡಿಸುವಂಥ ಮಾಹಿತಿಯು ಅನೇಕ ಆಕ್ಸಿಲಿಯರಿ ಪಯನೀಯರರಿಗೆ ರೆಗ್ಯುಲರ್ ಪಯನೀಯರ್ ಆಗುವ ಗುರಿಯನ್ನು ಮುಟ್ಟಲು ಸಹಾಯಮಾಡುವುದು ಎಂಬುದರಲ್ಲಿ ಸಂದೇಹವಿಲ್ಲ. ಅಷ್ಟುಮಾತ್ರವಲ್ಲ, ಮಾರ್ಚ್ ತಿಂಗಳಲ್ಲಿ ಹೊಸ ಅಧ್ಯಯನ ಪ್ರಕಾಶನವಾದ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಮೂಲಕ ಜನರು ಆಧ್ಯಾತ್ಮಿಕ ಬೆಳಕಿಗೆ ಬರುವಂತೆ ಅವರಿಗೆ ಸಹಾಯಮಾಡುವುದರಲ್ಲಿ ನಾವು ಆನಂದಿಸಲಿದ್ದೇವೆ. ಈ ಹೊಸ ಪುಸ್ತಕದಿಂದ ನೀವು ಒಂದು ಬೈಬಲ್ ಅಧ್ಯಯನವನ್ನು ಆರಂಭಿಸುವುದನ್ನು ನಿಮ್ಮ ಗುರಿಯನ್ನಾಗಿ ಮಾಡಿಕೊಳ್ಳಬಾರದೇಕೆ?
7, 8. (ಎ) ಆಕ್ಸಿಲಿಯರಿ ಪಯನೀಯರ್ ಸೇವೆಗೆ ಒಂದು ಶೆಡ್ಯೂಲನ್ನು ತಯಾರಿಸಲು ನಮಗೆ ಯಾವುದು ಸಹಾಯಮಾಡಬಲ್ಲದು? (ಬಿ) ಕುಟುಂಬದ ಸಹಕಾರವು ಹೇಗೆ ನೆರವು ನೀಡಬಲ್ಲದು, ಮತ್ತು ಇದರಿಂದ ಇಡೀ ಕುಟುಂಬವು ಹೇಗೆ ಪ್ರಯೋಜನವನ್ನು ಪಡೆಯುತ್ತದೆ?
7 ಆಕ್ಸಿಲಿಯರಿ ಪಯನೀಯರ್ ಸೇವೆಗೆ ಆವಶ್ಯಕವಾದ 50 ತಾಸುಗಳ ಕುರಿತು ಪರಿಗಣಿಸಿದ ಬಳಿಕ, ಪ್ರತಿ ವಾರ ಸುಮಾರು 12 ತಾಸುಗಳಷ್ಟು ಸಮಯ ಸತ್ಯದ ಬೆಳಕನ್ನು ಬೀರಲು ಯಾವ ರೀತಿಯ ಶೆಡ್ಯೂಲ್ ನಿಮಗೆ ಸಹಾಯಮಾಡುತ್ತದೆ ಎಂಬುದನ್ನು ನಿರ್ಣಯಿಸಿರಿ. ಈ ಸೇವೆಯನ್ನು ಯಶಸ್ವಿಕರವಾಗಿ ಮಾಡಿರುವವರೊಂದಿಗೆ ಮತ್ತು ಇತರರೊಂದಿಗೆ ಇದರ ಕುರಿತು ಚರ್ಚಿಸಿರಿ. ಇದು ನಿಮ್ಮನ್ನು ಜೊತೆಗೂಡುವಂತೆ ಒಂದುವೇಳೆ ಅವರನ್ನು ಪ್ರಚೋದಿಸೀತು. ಒಳ್ಳೆಯ ಯೋಜನೆಯನ್ನು ಮಾಡುವಲ್ಲಿ, ಪ್ರಶಂಸಾರ್ಹವಾದ ಈ ಗುರಿಯನ್ನು ಮುಟ್ಟುವುದು ತೀರ ಕಷ್ಟಕರವಲ್ಲ ಎಂದು ಸ್ನಾತ ಯುವ ಮತ್ತು ವೃದ್ಧ ಪ್ರಚಾರಕರು ಕಂಡುಕೊಂಡಿದ್ದಾರೆ. ಇದರ ಕುರಿತು ಪ್ರಾರ್ಥಿಸಿರಿ. ಅನಂತರ ಸಾಧ್ಯವಿರುವುದಾದರೆ, ಯೋಜನೆಗಳನ್ನು ಮಾಡಿ ಆಕ್ಸಿಲಿಯರಿ ಪಯನೀಯರ್ ಸೇವೆಯಲ್ಲಿ ಆನಂದಿಸಿರಿ!—ಮಲಾ. 3:10.
8 ಅನೇಕ ಕುಟುಂಬಗಳು, ಇಡೀ ಕುಟುಂಬವು ನೀಡುವ ಸಹಕಾರದಿಂದ ಕಡಿಮೆಪಕ್ಷ ಒಬ್ಬ ಸದಸ್ಯನು ಈ ಗುರಿಯನ್ನು ಮುಟ್ಟಲು ಸಾಧ್ಯವಿದೆ ಎಂದು ಕಂಡುಕೊಂಡಿವೆ. ಒಂದು ಕುಟುಂಬದಲ್ಲಿ ದೀಕ್ಷಾಸ್ನಾನ ಪಡೆದುಕೊಂಡಿದ್ದ ಐದು ಮಂದಿ ಸದಸ್ಯರು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ನಿರ್ಣಯಿಸಿದರು. ಇನ್ನೂ ದೀಕ್ಷಾಸ್ನಾನ ಪಡೆಯದಿದ್ದ ಇಬ್ಬರು ಮಕ್ಕಳು ಶುಶ್ರೂಷೆಯಲ್ಲಿ ಹೆಚ್ಚು ಸಮಯವನ್ನು ಕಳೆಯಲು ವಿಶೇಷ ಪ್ರಯತ್ನವನ್ನು ಮಾಡಿದರು. ಇಂಥ ವಿಶೇಷ ಪ್ರಯತ್ನವನ್ನು ಮಾಡುವ ಮೂಲಕ ಆ ಕುಟುಂಬ ಹೇಗೆ ಪ್ರಯೋಜನವನ್ನು ಪಡೆಯಿತು? ಅವರು ಬರೆದುದು: “ಅದು ಒಂದು ಸಂತಸದ ತಿಂಗಳಾಗಿತ್ತು ಮತ್ತು ಕುಟುಂಬದ ಬಂಧವು ಬಲಗೊಳಿಸಲ್ಪಟ್ಟಿತ್ತೆಂಬ ಬಲವಾದ ಅನಿಸಿಕೆ ನಮಗಾಯಿತು. ಆ ಅದ್ಭುತಕರವಾದ ಆಶೀರ್ವಾದಕ್ಕಾಗಿ ನಾವು ಯೆಹೋವನಿಗೆ ಉಪಕಾರ ಹೇಳುತ್ತೇವೆ!”
9. ಈ ವರ್ಷದ ಜ್ಞಾಪಕಾಚರಣೆಯ ಸಮಯಾವಧಿಯಲ್ಲಿ ನಾವು ಹೇಗೆ ನಮ್ಮ ಬೆಳಕನ್ನು ಪ್ರಕಾಶಿಸಸಾಧ್ಯವಿದೆ?
9 ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿನ ನಮ್ಮ ವಿಶೇಷ ಚಟುವಟಿಕೆಯು ನಮ್ಮ ಸ್ವರ್ಗೀಯ ತಂದೆಗೆ ನಾವು ಹೆಚ್ಚು ಸಮೀಪವಾಗುವಂತೆ ಮಾಡುತ್ತಾ ಹುರಿದುಂಬಿಸುವಂಥದ್ದಾಗಿ ರುಜುವಾಗುವುದೊ? ಇದು, ದೇವರ ಮತ್ತು ಆತನ ಮಗನ ಮೇಲಿರುವ ನಮ್ಮ ಪ್ರೀತಿಯನ್ನು ಅಧಿಕಗೊಳಿಸಲು ನಾವು ಮಾಡುವ ವೈಯಕ್ತಿಕ ಪ್ರಯತ್ನದ ಮೇಲೆ ಮತ್ತು ಶುಶ್ರೂಷೆಯಲ್ಲಿ ನಾವು ಹೆಚ್ಚು ಸಮಯವನ್ನು ಕಳೆಯುವುದರ ಮೇಲೆ ಬಹಳಷ್ಟು ಮಟ್ಟಿಗೆ ಹೊಂದಿಕೊಂಡಿದೆ. ನಮ್ಮ ದೃಢನಿರ್ಧಾರವು ಹೀಗೆ ಹಾಡಿದ ಕೀರ್ತನೆಗಾರನಂತೆ ಇರಲಿ: “ಯೆಹೋವನನ್ನು ಬಹಳವಾಗಿ ಕೊಂಡಾಡುವೆನು; ಜನಸಮೂಹದ ಮಧ್ಯದಲ್ಲಿ ಆತನನ್ನು ಕೀರ್ತಿಸುವೆನು.” (ಕೀರ್ತ. 109:30) ಈ ವರ್ಷದ ಜ್ಞಾಪಕಾಚರಣೆಯ ಸಮಯಾವಧಿಯಲ್ಲಿನ ನಮ್ಮ ಹುರುಪಿನ ಚಟುವಟಿಕೆಯನ್ನು ಯೆಹೋವನು ಖಂಡಿತವಾಗಿಯೂ ಆಶೀರ್ವದಿಸುವನು. ಆದುದರಿಂದ, ಇನ್ನೂ ಅನೇಕ ಮಂದಿ ಕತ್ತಲೆಯಿಂದ ಹೊರಬಂದು ‘ಜೀವಕೊಡುವ ಬೆಳಕನ್ನು ಹೊಂದುವಂತಾಗಲು’ ನಾವು ಹೆಚ್ಚು ಬೆಳಕನ್ನು ಪ್ರಕಾಶಿಸೋಣ.—ಯೋಹಾ. 8:12.