ಯೆಹೋವನ ಗುಣಾತಿಶಯಗಳನ್ನು ಪ್ರಚಾರಮಾಡಿರಿ
1. ಯೆಹೋವನ ಗುಣಾತಿಶಯಗಳನ್ನು ಪ್ರಚಾರಮಾಡಲು ನಮ್ಮನ್ನು ಯಾವುದು ಪ್ರೇರೇಪಿಸುತ್ತದೆ?
1 “ಯೆಹೋವಾ, ಮಹಿಮಪ್ರತಾಪ ವೈಭವಪರಾಕ್ರಮಪ್ರಭಾವಗಳು ನಿನ್ನವು; ಭೂಮ್ಯಾಕಾಶಗಳಲ್ಲಿರುವದೆಲ್ಲಾ ನಿನ್ನದೇ.” (1 ಪೂರ್ವ. 29:11) ಯೆಹೋವನಿಗಾಗಿ ನಮಲ್ಲಿರುವ ಪ್ರೀತಿ ಮತ್ತು ಕೃತಜ್ಞತೆಯು ನಮ್ಮನ್ನು ಹೇಗೆ ಪ್ರಭಾವಿಸುತ್ತದೆ? ಅದು ನಮ್ಮನ್ನು ‘ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರಮಾಡುವಂತೆ’ ಪ್ರೇರೇಪಿಸುತ್ತದೆ. (1 ಪೇತ್ರ 2:9) ನಮ್ಮ ಮಹಾ ದೇವರ ಕುರಿತು ಇತರರಿಗೆ ತಿಳಿಸುವುದನ್ನು ನಾವು ನಿಲ್ಲಿಸಲು ಸಾಧ್ಯವಿಲ್ಲ! ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಯೆಹೋವನ ಗುಣಾತಿಶಯಗಳನ್ನು ಘೋಷಿಸಲು ಮಹತ್ತಾದ ಅವಕಾಶಗಳು ನಮಗಿರುವುವು.
2. ಜ್ಞಾಪಕಾಚರಣೆಯನ್ನು ಪ್ರಕಟಪಡಿಸಲು ಯಾವ ವಿಶೇಷ ಕಾರ್ಯಾಚರಣೆಯನ್ನು ಆಯೋಜಿಸಲಾಗಿದೆ, ಮತ್ತು ಇದರಲ್ಲಿ ಯಾರೆಲ್ಲಾ ಪಾಲ್ಗೊಳ್ಳಬಹುದು?
2 ಜ್ಞಾಪಕಾಚರಣೆಯನ್ನು ಪ್ರಕಟಪಡಿಸಲು ವಿಶೇಷ ಕಾರ್ಯಾಚರಣೆ: ಏಪ್ರಿಲ್ 2ರ ಸೋಮವಾರದಂದು ಕರ್ತನ ಸಂಧ್ಯಾ ಭೋಜನವನ್ನು ಆಚರಿಸುವುದರ ಮೂಲಕ ನಾವು ಯೆಹೋವನ ಗುಣಾತಿಶಯಗಳ ಕಡೆಗೆ ಗಮನ ಸೆಳೆಯುವೆವು. ಈ ಪ್ರಾಮುಖ್ಯ ಘಟನೆಗಾಗಿ ಒಂದು ವಿಶೇಷವಾದ ಆಮಂತ್ರಣ ಪತ್ರವನ್ನು ಮಾರ್ಚ್ 17ರಿಂದ ಏಪ್ರಿಲ್ 2ರವರೆಗೆ ಲೋಕವ್ಯಾಪಕವಾಗಿ ವಿತರಿಸಲಾಗುವುದು. ಇದರಲ್ಲಿ ಪೂರ್ಣವಾಗಿ ಪಾಲು ತೆಗೆದುಕೊಳ್ಳುವಂತೆ ಎಲ್ಲರನ್ನೂ ಉತ್ತೇಜಿಸಲಾಗಿದೆ. ಹೊಸಬರು ಅರ್ಹರಾಗಿರುವುದಾದರೆ ಅವರು ಸುವಾರ್ತೆಯನ್ನು ಸಾರಲಾರಂಭಿಸಲು ಇದು ಅತ್ಯುತ್ತಮವಾದ ಸಮಯವಾಗಿರುವುದು. ನಿಮ್ಮ ಬೈಬಲ್ ವಿದ್ಯಾರ್ಥಿಗಳು ಅಥವಾ ಮಕ್ಕಳು ಅರ್ಹರಾಗುವ ಸಾಧ್ಯತೆಯಿರುವಲ್ಲಿ ಹಿರಿಯರೊಂದಿಗೆ ಮಾತಾಡಲು ಹಿಂಜರಿಯಬೇಡಿ.
3. ಜನರನ್ನು ಜ್ಞಾಪಕಾಚರಣೆಗೆ ಆಮಂತ್ರಿಸಲು ನಾವೇನು ಹೇಳಬಹುದು?
3 ಈ ಕಾರ್ಯಾಚರಣೆಯು, “ಬಿಡುಗಡೆಯು ಸಮೀಪವಿದೆ” ಜಿಲ್ಲಾ ಅಧಿವೇಶನಗಳ ಸಂಬಂಧದಲ್ಲಿ ಕೈಗೊಂಡ ಕಾರ್ಯಾಚರಣೆಯಂತೆಯೇ ಇರುವುದು. ಪ್ರತಿಯೊಬ್ಬ ಪ್ರಚಾರಕರಿಗೆ 50 ಪ್ರತಿಗಳು ಮತ್ತು ಪ್ರತಿಯೊಬ್ಬ ಪಯನೀಯರರಿಗೆ 150 ಪ್ರತಿಗಳು ಸಿಗುವಂತೆ ಸಾಕಷ್ಟು ಆಮಂತ್ರಣ ಪತ್ರಗಳನ್ನು ಸಭೆಗಳಿಗೆ ಕಳುಹಿಸಲಾಗುವುದು. ನಿಮ್ಮ ನಿರೂಪಣೆಯನ್ನು ಚುಟುಕಾಗಿರಿಸುತ್ತಾ, ನೀವು ಬಹುಶಃ ಹೀಗನ್ನಬಹುದು: “ಸಮೀಪಿಸುತ್ತಿರುವ ಒಂದು ಮಹತ್ವಪೂರ್ಣ ವಾರ್ಷಿಕ ಘಟನೆಗಾಗಿ ಇದು ನಿಮ್ಮ ಆಮಂತ್ರಣ ಪತ್ರವಾಗಿದೆ. ನಿಮ್ಮನ್ನು ಆದರದಿಂದ ಸ್ವಾಗತಿಸಲಾಗುವುದು. ಹೆಚ್ಚಿನ ವಿವರಗಳು ಈ ಆಮಂತ್ರಣ ಪತ್ರದಲ್ಲಿದೆ.” ಮನೆಯವನು ಯಾವುದೇ ಪ್ರಶ್ನೆಗಳನ್ನು ಕೇಳುವಲ್ಲಿ ಅವುಗಳನ್ನು ಉತ್ತರಿಸಲು ಖಂಡಿತವಾಗಿಯೂ ಸಮಯ ತೆಗೆದುಕೊಳ್ಳಿರಿ. ಕರ್ತನ ಸಂಧ್ಯಾ ಭೋಜನದ ಕುರಿತಾಗಿ ಬೈಬಲ್ ಬೋಧಿಸುತ್ತದೆ ಪುಸ್ತಕದ ಪುಟ 206ರಲ್ಲಿ ಆರಂಭವಾಗುವ ಪರಿಶಿಷ್ಟದ ಲೇಖನವು ಈ ನಿಟ್ಟಿನಲ್ಲಿ ಸಹಾಯಕಾರಿಯಾಗಿರಬಹುದು. ವಾರಾಂತ್ಯಗಳಲ್ಲಿ, ಸದ್ಯದ ಪತ್ರಿಕೆಗಳೊಂದಿಗೆ ಈ ವಿಶೇಷ ಆಮಂತ್ರಣ ಪತ್ರಗಳನ್ನು ನೀಡುವೆವು. ಯಾವುದೇ ವ್ಯಕ್ತಿ ಅಸಕ್ತಿಯನ್ನು ತೋರಿಸುವಲ್ಲಿ ಅದನ್ನು ದಾಖಲಿಸಿಡಿರಿ ಮತ್ತು ಅವರನ್ನು ಪುನಃ ಭೇಟಿಮಾಡಲಿಕ್ಕಾಗಿ ಏರ್ಪಾಡುಗಳನ್ನು ಮಾಡಿರಿ.
4. ಜ್ಞಾಪಕಾಚರಣೆಯ ವಿಶೇಷ ಆಮಂತ್ರಣ ಪತ್ರಗಳು ಹೇಗೆ ವಿತರಿಸಲ್ಪಡುವವು?
4 ಸಾಧ್ಯವಿರುವಲ್ಲೆಲ್ಲಾ, ಈ ವಿಶೇಷ ಆಮಂತ್ರಣ ಪತ್ರವನ್ನು ವೈಯಕ್ತಿಕವಾಗಿ ಪ್ರತಿಯೊಬ್ಬ ಮನೆಯವನ ಕೈಗೆ ಕೊಡಬೇಕು. ಆದಕಾರಣ ಮನೆಯಲ್ಲಿ ಇಲ್ಲದಿದ್ದವರ ಬಗ್ಗೆ ದಾಖಲಿಸಿಡಿರಿ ಮತ್ತು ಅಲ್ಲಿಗೆ ಪುನಃ ಇನ್ನೊಂದು ಸಮಯ ಹೋಗಲು ಏರ್ಪಡಿಸಿರಿ. ಸಭೆಗಳ ಬಳಿ ಹೆಚ್ಚಿನ ಆಮಂತ್ರಣ ಪತ್ರಗಳು ಉಳಿಯುವಲ್ಲಿ ಅವುಗಳನ್ನು, ಯಾರೂ ಮನೆಯಲಿಲ್ಲದಿರುವ ಮನೆಗಳಲ್ಲಿ ಜ್ಞಾಪಕಾಚರಣೆಯ ಹಿಂದಿನ ಕೊನೆ ವಾರದಂದು ಬಿಟ್ಟುಬರಬಹುದು. ಆದರೆ ಇದಕ್ಕೆ ಮುಂಚೆ ಹಾಗೆ ಬಿಟ್ಟುಬರಬಾರದು. ನಿಮ್ಮ ಪುನರ್ಭೇಟಿಗಳಿಗೆ, ಬೈಬಲ್ ವಿದ್ಯಾರ್ಥಿಗಳಿಗೆ, ಸಂಬಂಧಿಕರಿಗೆ, ಜೊತೆಕೆಲಸಗಾರರಿಗೆ, ನೆರೆಯವರಿಗೆ ಮತ್ತು ಇತರ ಪರಿಚಯಸ್ಥರಿಗೆ ಸಹ ಆಮಂತ್ರಣ ಪತ್ರವು ನೀಡಲ್ಪಟ್ಟಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ.
5. ಆಕ್ಸಿಲಿಯರಿ ಪಯನೀಯರ್ ಸೇವೆಗಾಗಿ ನಾವೇಕೆ ಈಗಲೇ ಯೋಜನೆಗಳನ್ನು ಮಾಡಲಾರಂಭಿಸಬೇಕು?
5 ಆಕ್ಸಿಲಿಯರಿ ಪಯನೀಯರ್ ಸೇವೆ: ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವ ಮೂಲಕ ನೀವು ಯೆಹೋವನ ಗುಣಾತಿಶಯಗಳನ್ನು ಇನ್ನೂ ಹೆಚ್ಚಾಗಿ ಘೋಷಿಸಬಲ್ಲಿರೋ? ಹಾಗೆ ಮಾಡಲಿಕ್ಕಾಗಿ ನಿಮ್ಮ ದಿನನಿತ್ಯದ ಕಾರ್ಯತಖ್ತೆಯಲ್ಲಿ ಕೆಲವೊಂದು ಹೊಂದಾಣಿಕೆಗಳನ್ನು ಮಾಡಬೇಕಾದೀತು. (ಎಫೆ. 5:15-17) ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡಲು ಪ್ರಯತ್ನಿಸುವುದು ಆನಂದವನ್ನು ಮತ್ತು ಯೆಹೋವನ ಆಶೀರ್ವಾದವನ್ನು ತರುತ್ತದೆ ಎಂಬ ಖಾತ್ರಿ ನಿಮಗಿರಬಲ್ಲದು. (ಜ್ಞಾನೋ. 10:22) ಜ್ಞಾಪಕಾಚರಣೆಯ ಸಮಯಾವಧಿಯು ಸಮೀಪಿಸುತ್ತಿರುವುದರಿಂದ, ಯೋಜನೆಗಳನ್ನು ಮಾಡುವ ಸಮಯವು ಇದೇ ಆಗಿದೆ.—ಜ್ಞಾನೋ. 21:5.
6. ಕಳೆದ ವರುಷ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಿದ 90 ವರ್ಷ ಪ್ರಾಯದ ಸಹೋದರಿಯ ಅನುಭವದಿಂದ ನಾವೇನು ಕಲಿಯಬಲ್ಲೆವು?
6 ಕಳೆದ ವರುಷ, 90 ವರ್ಷದ ಸಹೋದರಿಯೊಬ್ಬರು ಆಕ್ಸಿಲಿಯರಿ ಪಯನೀಯರ್ ಸೇವೆಯಲ್ಲಿ ಆನಂದಿಸಿದರು. ಆಕೆ ಹೇಳಿದ್ದು: “ನನಗೆ ತೋಟಗಾರಿಕೆ ಎಂದರೆ ಬಹಳ ಇಷ್ಟ. ಆದಕಾರಣ ನಾನು ಸಸಿಗಳನ್ನು ನೆಡುವ ಕೆಲಸವನ್ನು ಆರಂಭಿಸಲು ಬಯಸುತ್ತಿದ್ದೆ. ಆದರೆ ನಾನು ಸರಿಯಾದ ಆದ್ಯತೆಗಳನ್ನು ಇಡಬೇಕು ಎಂಬುದನ್ನು ಮನಗಂಡೆ. ರಾಜ್ಯಾಭಿರುಚಿಗಳನ್ನು ಮೊದಲನೆಯ ಸ್ಥಾನದಲ್ಲಿಡುವ ಸಲುವಾಗಿ ಮಾರ್ಚ್ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ನಿರ್ಧರಿಸಿದೆ.” ಆಕೆಯ ಆ ಪ್ರಯತ್ನಗಳಿಗಾಗಿ ಅವಳು ಆಶೀರ್ವದಿಸಲ್ಪಟ್ಟಳೋ? ಅವಳು ಮುಂದುವರಿಸಿ ಹೇಳುವುದು: “ನಾನು ಸಭೆಯ ಭಾಗವಾಗಿದ್ದೇನೆ ಎಂಬ ಭಾವನೆ ಇನ್ನೂ ಹೆಚ್ಚಿತು ಮತ್ತು ಇದರಿಂದಾಗಿ ನಾನು ಯೆಹೋವನಿಗೆ ಇನ್ನಷ್ಟು ಸಮೀಪ ಬಂದಿದ್ದೇನೆ.” ನಾವು ಸಹ ತದ್ರೀತಿಯಲ್ಲಿ ನಮ್ಮ ಆದ್ಯತೆಗಳನ್ನು ಪರಿಶೀಲಿಸಿ, ಅಗತ್ಯವಿರುವ ಹೊಂದಾಣಿಕೆಗಳನ್ನು ಮಾಡಬಲ್ಲೆವೊ?
7. ಆಕ್ಸಿಲಿಯರಿ ಪಯನೀಯರರಾಗಿ ಸೇವೆಸಲ್ಲಿಸುವುದು ಕಷ್ಟಕರವೊ?
7 ಆಕ್ಸಿಲಿಯರಿ ಪಯನೀಯರ್ ಸೇವೆಗೆ ಅವಶ್ಯವಾಗಿರುವ 50 ತಾಸುಗಳನ್ನು ತಲಪುವುದು ನೀವು ನೆನಸುವಷ್ಟು ಕಷ್ಟವಾಗಿರಲಿಕ್ಕಿಲ್ಲ. ಪ್ರಾರ್ಥನಾಪೂರ್ವಕವಾಗಿ ನಿಮ್ಮ ದಿನನಿತ್ಯದ ಚಟುವಟಿಕೆಗಳನ್ನು ಪರಿಗಣಿಸಿರಿ, ಒಂದು ಕಾರ್ಯತಖ್ತೆಯನ್ನು ಮಾಡಿರಿ ಮತ್ತು ಅದನ್ನು ನಿಮ್ಮ ದೇವಪ್ರಭುತ್ವಾತ್ಮಕ ಚಟುವಟಿಕೆಗಳ ಕ್ಯಾಲೆಂಡರಿನಲ್ಲಿ ಗುರುತಿಸಿರಿ. ನಿಮ್ಮ ವೈಯಕ್ತಿಕ ಪರಿಸ್ಥಿತಿಗಳ ಕುರಿತು ನಿಮಗೇ ಚೆನ್ನಾಗಿ ತಿಳಿದಿದೆ. ನಿಮಗೆ ಯಾವುದಾದರೂ ಅಸ್ವಸ್ಥತೆ ಇರುವಲ್ಲಿ ಮತ್ತು ದೀರ್ಘ ಸಮಯ ಕೆಲಸ ಮಾಡಲು ಬೇಕಾದ ಶಕ್ತಿ ಇಲ್ಲದಿರುವಲ್ಲಿ, ನೀವು ಪ್ರತಿ ದಿನ ಶುಶ್ರೂಷೆಯಲ್ಲಿ ಎರಡು ತಾಸು ಮಾತ್ರ ಭಾಗವಹಿಸಬಹುದು. ನೀವು ಕೆಲಸಕ್ಕೊ ಅಥವಾ ಶಾಲೆಗೊ ಹೋಗುವವರಾಗಿದ್ದರೆ ಸಂಜೆಯ ಸಮಯ ಅಥವಾ ವಾರಾಂತ್ಯದ ಶುಶ್ರೂಷೆಯಲ್ಲಿ ಭಾಗವಹಿಸುವ ಮೂಲಕ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಬಲ್ಲಿರಿ.
8. ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಒಂದು ವಿವಾಹಿತ ದಂಪತಿಗೆ ಯಾವುದು ಸಹಾಯಮಾಡಿತು?
8 ಅನೇಕರಿಗೆ ಕುಟುಂಬವಾಗಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಸಾಧ್ಯವಾಗಿದೆ. ಒಂದು ವಿವಾಹಿತ ದಂಪತಿ ತಮ್ಮ ಪರಿಸ್ಥಿತಿಗಳಿಂದಾಗಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಸಾಧ್ಯವಿಲ್ಲವೆಂದು ಅಂದುಕೊಂಡ ಕಾರಣ ಹಿಂದಿನ ವರ್ಷಗಳಲ್ಲಿ ಆ ಸೇವೆಗೆ ತಮ್ಮ ಹೆಸರು ಕೊಡಲು ಹಿಂಜರಿಯುತ್ತಿದ್ದರು. ಅದರ ಕುರಿತು ಅವರೇನು ಮಾಡಿದರು? “ಬಹಳ ಸಮಯದಿಂದ ನಾವು ಒಟ್ಟಾಗಿ ಮಾಡಲು ಬಯಸುತ್ತಿದ್ದ ಈ ಸೇವೆಯನ್ನು ಮಾಡಲಾಗುವಂತೆ ಯೆಹೋವನ ಬಳಿ ಸಹಾಯಕ್ಕಾಗಿ ಪ್ರಾರ್ಥಿಸಿದೆವು.” ಒಳ್ಳೇ ಯೋಜನೆ ಮಾಡುವ ಮೂಲಕ ಅವರು ತಮ್ಮ ಗುರಿಯನ್ನು ತಲಪಲು ಸಾಧ್ಯವಾಯಿತು. ಅವರು ಕೂಡಿಸಿ ಹೇಳಿದ್ದು: “ಅದು ಅದ್ಭುತವಾಗಿತ್ತು. ಜೊತೆಯಾಗಿ ನಾವು ಅನೇಕ ಆಶೀರ್ವಾದಗಳಲ್ಲಿ ಆನಂದಿಸಿದೆವು. ನಮ್ಮ ಸಲಹೆಯೇನೆಂದರೆ—ಪ್ರಯತ್ನಿಸಿ ನೋಡಿ. ನಮಗೇ ಅದನ್ನು ಮಾಡಲು ಸಾಧ್ಯವಾಗಿರುವುದಾದರೆ ನೀವು ಸಹ ಅದನ್ನು ಮಾಡಬಹುದು.”
9. ಮುಂಬರಲಿರುವ ವಿಶೇಷ ಚಟುವಟಿಕೆಯ ತಿಂಗಳುಗಳ ತಯಾರಿಗಾಗಿ ಮುಂದಿನ ಕುಟುಂಬ ಅಧ್ಯಯನದ ಸಮಯದಲ್ಲಿ ನೀವೇನು ಮಾಡಸಾಧ್ಯವಿದೆ?
9 ಬರುವ ತಿಂಗಳುಗಳಲ್ಲಿ ಕುಟುಂಬದ ಎಲ್ಲಾ ಸದಸ್ಯರು ಹೇಗೆ ತಮ್ಮ ಚಟುವಟಿಕೆಯನ್ನು ಹೆಚ್ಚಿಸಬಲ್ಲರು ಎಂಬುದನ್ನು ಪರಿಗಣಿಸಲು ನಿಮ್ಮ ಮುಂದಿನ ಕುಟುಂಬ ಅಧ್ಯಯನದಲ್ಲಿ ಸ್ವಲ್ಪ ಸಮಯವನ್ನು ಬದಿಗಿರಿಸಬಾರದೇಕೆ? ನಿಮ್ಮ ಇಡೀ ಕುಟುಂಬಕ್ಕೆ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಸಾಧ್ಯವಾಗದಿದ್ದರೂ, ಪ್ರಾಯಶಃ ಒಬ್ಬ ಸದಸ್ಯನಾದರೂ ಇತರರೆಲ್ಲರ ಸಹಾಯ ಮತ್ತು ಸಹಕಾರದಿಂದ ಅದನ್ನು ಮಾಡಬಹುದಲ್ಲವೇ? ಅದೂ ಸಾಧ್ಯವಿಲ್ಲದಿರುವಲ್ಲಿ, ನಿಮ್ಮ ಕುಟುಂಬದವರೆಲ್ಲರೂ ಈ ವಿಶೇಷ ಚಟುವಟಿಕೆಯ ತಿಂಗಳುಗಳಲ್ಲಿ, ಶುಶ್ರೂಷೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುವ ಗುರಿಗಳನ್ನು ಇಡಸಾಧ್ಯವಿದೆ.
10. ಈ ಜ್ಞಾಪಕಾಚರಣೆಯ ಸಮಯಾವಧಿಯಲ್ಲಿ ಹೆಚ್ಚನ್ನು ಮಾಡುವ ನಮ್ಮ ಬಯಕೆಯ ಕುರಿತು ನಾವು ಇತರರೊಂದಿಗೆ ಏಕೆ ಮಾತಾಡಬೇಕು?
10 ಒಬ್ಬರಿಗೊಬ್ಬರು ಸಹಾಯಮಾಡಿರಿ: ಉತ್ಸಾಹವು ಒಬ್ಬರಿಂದೊಬ್ಬರಿಗೆ ಬೇಗನೆ ಹರಡುತ್ತದೆ. ಆದುದರಿಂದ, ಆಕ್ಸಿಲಿಯರಿ ಪಯನೀಯರ್ ಸೇವೆ ಬಗ್ಗೆ ನಿಮಗಿರುವ ಬಯಕೆಯ ಕುರಿತು ಇತರರೊಂದಿಗೆ ಮಾತಾಡಿರಿ. ಇದು ಅವರೂ ತಮ್ಮ ಹೆಸರನ್ನು ಕೊಡುವಂತೆ ಉತ್ತೇಜಿಸಬಹುದು. ಅದಕ್ಕೆ ಕೂಡಿಸಿ, ಈ ಮುಂಚೆ ಪಯನೀಯರ್ ಸೇವೆ ಮಾಡಿರುವವರು ನಿಮಗೆ ಸಲಹೆಗಳನ್ನು ನೀಡಬಲ್ಲರು. ಈ ಸಲಹೆಗಳು ನೀವು ನಿಮ್ಮ ಗುರಿಯನ್ನು ತಲಪಲು ಸಾಧ್ಯವಾಗುವಂತೆ ನಿಮ್ಮ ಕೆಲಸ ಹಾಗೂ ಕಾರ್ಯತಖ್ತೆಯನ್ನು ಕ್ರಮಪಡಿಸಲು ಸಹಾಯಮಾಡಬಹುದು. (ಜ್ಞಾನೋ. 15:22) ನೀವು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಸಾಧ್ಯವಿರುವಲ್ಲಿ, ಇನ್ನೊಬ್ಬ—ಬಹುಶಃ ನೀವು ಇರುವಂಥ ರೀತಿಯ ಪರಿಸ್ಥಿತಿಗಳಲ್ಲೇ ಇರುವ—ಪ್ರಚಾರಕರನ್ನು ಈ ಸಂತೋಷಕರವಾದ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಆಮಂತ್ರಿಸಬಾರದೇಕೆ?
11. ಮುಂಬರುವ ತಿಂಗಳುಗಳಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಮಾಡಲು ಹಿರಿಯರು ಹೇಗೆ ಉತ್ಸಾಹವನ್ನು ಹುಟ್ಟಿಸಬಲ್ಲರು?
11 ಅನೇಕ ಹಿರಿಯರು ಸ್ವತಃ ಈ ವಿಶೇಷವಾದ ಸೇವಾ ವಿಧಾನದಲ್ಲಿ ಪಾಲ್ಗೊಳ್ಳಲು ಅಗತ್ಯವಿರುವ ಏರ್ಪಾಡುಗಳನ್ನು ಮಾಡುತ್ತಾರೆ. (ಇಬ್ರಿ. 13:7) ಇದು ಖಂಡಿತವಾಗಿಯೂ ಸಭೆಗೆ ಉತ್ತೇಜನೀಯವಾಗಿದೆ! ಇತರರೊಂದಿಗಿನ ತಮ್ಮ ಸಂಭಾಷಣೆಯಲ್ಲೂ ಹಿರಿಯರು ಉತ್ಸಾಹವನ್ನು ಹುಟ್ಟಿಸುತ್ತಾರೆ. ಕೆಲವರನ್ನು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವಂತೆ ಪ್ರಚೋದಿಸಲು ಬೇಕಾಗಿರುವುದು ಉತ್ತೇಜನದ ಕೆಲವೊಂದು ಮಾತುಗಳು ಅಥವಾ ಪ್ರಾಯೋಗಿಕ ಸಲಹೆಗಳು. ಎಲ್ಲರೂ—ಕೆಲಸ ಅಥವಾ ಶಾಲೆಯ ನಂತರ ಬರುವವರೂ—ಗುಂಪು ಸೇವೆಯಲ್ಲಿ ಭಾಗವಹಿಸುವಂತೆ ಸಹಾಯ ಮಾಡಲು ಸೇವಾ ಮೇಲ್ವಿಚಾರಕನು ಹೆಚ್ಚಿನ ಕ್ಷೇತ್ರಸೇವಾ ಕೂಟಗಳನ್ನು ಏರ್ಪಡಿಸುವನು. ಈ ಏರ್ಪಾಡುಗಳ ಕುರಿತು ಕ್ರಮವಾಗಿ ಪ್ರಕಟಿಸತಕ್ಕದ್ದು. ಎಲ್ಲರಿಗಾಗಿ ಸಾಕಷ್ಟು ಟೆರಿಟೊರಿ ಮತ್ತು ಸಾಹಿತ್ಯ ಲಭ್ಯವಿದೆ ಎಂಬುದನ್ನು ಸಹ ಅವನು ಖಚಿತಪಡಿಸಿಕೊಳ್ಳುವನು.
12. ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಸಾಧ್ಯವಿಲ್ಲದಿರುವಲ್ಲಿ ನೀವೇನು ಮಾಡಸಾಧ್ಯವಿದೆ?
12 ನಿಮ್ಮ ಪರಿಸ್ಥಿತಿಗಳು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವುದರಿಂದ ಸದ್ಯಕ್ಕೆ ನಿಮ್ಮನ್ನು ತಡೆಯುವುದಾದರೂ, ಯಾರು ಆ ಸೇವೆ ಮಾಡುತ್ತಾರೋ ಅವರನ್ನು ನೀವು ಉತ್ತೇಜಿಸಸಾಧ್ಯವಿದೆ ಮತ್ತು ಅವರಿಗಾಗಿ ಪ್ರಾರ್ಥಿಸಸಾಧ್ಯವಿದೆ. (ಜ್ಞಾನೋ. 25:11; ಕೊಲೊ. 4:12) ಸಾಮಾನ್ಯವಾಗಿ ನೀವು ಶುಶ್ರೂಷೆಗೆ ಹೋಗುವ ದಿನಕ್ಕಿಂತ ಒಂದು ಹೆಚ್ಚಿನ ದಿನ ಅಥವಾ ಸಾಮಾನ್ಯಕ್ಕಿಂತ ಹೆಚ್ಚು ಸಮಯ ಅವರೊಂದಿಗೆ ಕ್ಷೇತ್ರದಲ್ಲಿ ಕೆಲಸಮಾಡಲು ನೀವು ಏರ್ಪಾಡುಗಳನ್ನು ಮಾಡಬಹುದು.
13. ಭಾರತದಲ್ಲಿರುವ ಪ್ರಚಾರಕರಿಗಾಗಿ ಯಾವ ಗುರಿಯನ್ನಿಡಲಾಗಿದೆ, ಮತ್ತು ಅದನ್ನು ತಲಪಲಿಕ್ಕಾಗಿ ನಿಮ್ಮ ಸಭೆ ಯಾವ ರೀತಿಯಲ್ಲಿ ಸಹಾಯಮಾಡಬಲ್ಲದು?
13 ಏಪ್ರಿಲ್ ತಿಂಗಳ ಗುರಿ-4,500 ಪಯನೀಯರರು ಭಾರತದ ಬ್ರಾಂಚ್ಗಾಗಿ ಆಕ್ಸಿಲಿಯರಿ ಪಯನೀಯರ್ ಸೇವಕರ ಸಾರ್ವಕಾಲಿಕ ಉಚ್ಚಾಂಕವಾದ 3,216ನ್ನು ಏಪ್ರಿಲ್ 2006ರಲ್ಲಿ ತಲಪಲಾಯಿತು. ಆದಕಾರಣ ‘4,500 ಆಕ್ಸಿಲಿಯರಿ ಪಯನೀಯರರು’ ಎಂಬ ತಲಪಸಾಧ್ಯವಿರುವ ಗುರಿಯನ್ನು ಬರುವ ಏಪ್ರಿಲ್ ತಿಂಗಳಿಗಾಗಿ ಇಡಲಾಗಿದೆ. ಪ್ರತಿ ಸಭೆಯಲ್ಲಿರುವ ಸರಾಸರಿ 5ರಲ್ಲಿ 1 ಪ್ರಚಾರಕನು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವಲ್ಲಿ ನಾವು ಈ ಗುರಿಯನ್ನು ತಲಪಬಲ್ಲೆವು. ಕೆಲವು ಸಭೆಗಳಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಅನುಮತಿಸುವಂತಹ ಪರಿಸ್ಥಿತಿಗಳುಳ್ಳ ಪ್ರಚಾರಕರ ಸಂಖ್ಯೆ ಇನ್ನೂ ಹೆಚ್ಚಿರುವುದು ಎಂಬುದು ಖಂಡಿತ. ಈ ರೀತಿಯ ಸಭಾ ಗುರಿಯನ್ನು ಹೆಚ್ಚಿನ ಸಭೆಗಳವರು ಬಹಳ ಸುಲಭವಾಗಿ ತಲಪಬಲ್ಲರು. ಇದು ನಿಮ್ಮ ಸಭೆಯಲ್ಲಿ ಉತ್ಪಾದಿಸುವಂತಹ ಸಂಭ್ರಮ ಮತ್ತು ನಿಮ್ಮ ಟೆರಿಟೊರಿಯಲ್ಲಿ ಸುವಾರ್ತಾ ಕೆಲಸದ ಮೇಲೆ ಬೀರುವಂತಹ ಪರಿಣಾಮದ ಕುರಿತು ಸ್ವಲ್ಪ ಯೋಚಿಸಿರಿ!
14. ಏಪ್ರಿಲ್ ತಿಂಗಳು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಏಕೆ ಅತ್ಯುತ್ತಮವಾಗಿದೆ?
14 ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಏಪ್ರಿಲ್ ಒಂದು ಅತ್ಯುತ್ತಮ ತಿಂಗಳಾಗಿರುವುದೇಕೆ? ಜ್ಞಾಪಕಾಚರಣೆಯು ಈ ತಿಂಗಳ ಆರಂಭದಲ್ಲಿರುವುದರಿಂದ, ಅದಕ್ಕೆ ಹಾಜರಾಗುವವರನ್ನು ಪುನಃ ಭೇಟಿಮಾಡಲು ನಮಗೆ ಸಾಕಷ್ಟು ಅವಕಾಶಗಳಿರುವವು. ಈ ತಿಂಗಳಲ್ಲಿ ನಾವು ಪತ್ರಿಕೆಗಳನ್ನು ನೀಡುವೆವು. ಪುನರ್ಭೇಟಿಗಳಿಗೆ ಹೋದಾಗ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ನೀಡಿ ಬೈಬಲ್ ಅಧ್ಯಯನಗಳನ್ನು ಆರಂಭಿಸುವುದು ನಮ್ಮ ಉದ್ದೇಶವಾಗಿರುವುದು. ಆದಕಾರಣ ಏಪ್ರಿಲ್ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವವರಿಗೆ ಬೈಬಲ್ ಅಧ್ಯಯನಗಳನ್ನು ಆರಂಭಿಸುವ ಅನೇಕ ಅವಕಾಶಗಳಿವೆ. ಈ ತಿಂಗಳಲ್ಲಿ ಹಗಲು ಹೊತ್ತು ಹೆಚ್ಚಾಗಿರುವುದು ಮತ್ತು ಸಾಮಾನ್ಯವಾಗಿ ಸಾಯಂಕಾಲದ ಸಮಯವು ಹಿತಕರವಾಗಿರುವುದು. ಅದಕ್ಕೆ ಕೂಡಿಸಿ, ಏಪ್ರಿಲ್ ತಿಂಗಳಿನಲ್ಲಿ ಐದು ಭಾನುವಾರಗಳಿವೆ ಮತ್ತು ಶಾಲೆಗೆ ರಜಾ ಸಮಯವಾಗಿರುತ್ತದೆ. ಇದರಿಂದಾಗಿ, ಐಹಿಕ ಕೆಲಸ ಮತ್ತು ಶಾಲೆಗೆ ಹೋಗುವವರಿಗೆ ಪಯನೀಯರ್ ಸೇವೆ ಮಾಡಲು ಸುಲಭವಾಗುವುದು.
15. ಈ ಬಾರಿಯ ಜ್ಞಾಪಕಾಚರಣೆಯು ಸಮೀಪಿಸುತ್ತಿರುವಾಗ ನಾವೇಕೆ ತುರ್ತು ಪ್ರಜ್ಞೆಯುಳ್ಳವರಾಗಿರಬೇಕು?
15 ಪ್ರತಿ ವರ್ಷ ಜ್ಞಾಪಕಾಚರಣೆಯ ಕಾಲಾವಧಿಯು ದಾಟಿಹೋದಾಗಲೆಲ್ಲಾ ನಾವು ಈ ವಿಷಯ ವ್ಯವಸ್ಥೆಯ ಅಂತ್ಯಕ್ಕೆ ಒಂದು ವರ್ಷ ಹತ್ತಿರವಾಗುತ್ತೇವೆ. ನಮ್ಮ ಮಹಾ ದೇವರ ಕುರಿತು ಇತರರಿಗೆ ಹೇಳಲು ಉಳಿದಿರುವ ಸಮಯವು ಕಡಿಮೆಯಾಗುತ್ತಿದೆ. (1 ಕೊರಿಂ. 7:29) ಒಮ್ಮೆ ಈ ವರ್ಷದ ಜ್ಞಾಪಕಾಚರಣೆಯ ಕಾಲಾವಧಿಯು ಕಳೆದುಹೋದ ನಂತರ, ನಮ್ಮ ಸ್ವರ್ಗೀಯ ತಂದೆಯನ್ನು ಸ್ತುತಿಸಲು ಅದು ನೀಡಿದ ಅಮೂಲ್ಯವಾದ ಅವಕಾಶಗಳು ಇನ್ನೆಂದಿಗೂ ಪುನಃ ದೊರಕಲಾರವು. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಯೆಹೋವನ ಗುಣಾತಿಶಯಗಳನ್ನು ಪ್ರಚಾರಮಾಡಲು ನಮ್ಮಿಂದಾದುದೆಲ್ಲವನ್ನೂ ಮಾಡಲಿಕ್ಕಾಗಿ ಈಗಲೇ ತಯಾರಿಗಳನ್ನು ಮಾಡೋಣ!
[ಪುಟ 4ರಲ್ಲಿರುವಚೌಕ]
ಏಪ್ರಿಲ್ ತಿಂಗಳಿನಲ್ಲಿ 4,500 ಆಕ್ಸಿಲಿಯರಿ ಪಯನೀಯರರು ಇರುವಂತೆ ಪ್ರಯತ್ನಿಸೋಣವೊ?
◼ ನಿಮ್ಮ ಆದ್ಯತೆಗಳನ್ನು ಪರಿಶೀಲಿಸಿರಿ
◼ ಕುಟುಂಬವಾಗಿ ಗುರಿಗಳನ್ನು ಚರ್ಚಿಸಿರಿ
◼ ನಿಮ್ಮ ಯೋಜನೆಗಳ ಕುರಿತು ಇತರರೊಂದಿಗೆ ಮಾತಾಡಿರಿ