ಶುಕ್ರವಾರ, ನವೆಂಬರ್ 7
ಕೇಳುವಾಗ ಒಂಚೂರೂ ಸಂಶಯಪಡದೆ ನಂಬಿಕೆಯಿಂದ ಕೇಳಬೇಕು.—ಯಾಕೋ. 1:6.
ಯೆಹೋವ ನಮ್ಮನ್ನ ತುಂಬ ಪ್ರೀತಿಸೋ ಅಪ್ಪ. ಹಾಗಾಗಿ ನಾವು ಕಷ್ಟ ಪಡೋದನ್ನ, ನೋವು ಅನುಭವಿಸೋದನ್ನ ಆತನಿಗೆ ನೋಡೋಕೆ ಆಗಲ್ಲ. (ಯೆಶಾ. 63:9) ಹಾಗಂತ ನದಿ ತರ, ಬೆಂಕಿ ತರ ಇರೋ ಕಷ್ಟಗಳನ್ನ ಆತನು ತೆಗೆದು ಹಾಕಲ್ಲ. (ಯೆಶಾ. 43:2.) ಆದ್ರೆ ಅದನ್ನ ‘ದಾಟಿ ಹೋಗೋಕೆ’ ಸಹಾಯ ಮಾಡ್ತೀನಿ ಅಂತ ಮಾತು ಕೊಟ್ಟಿದ್ದಾನೆ. ಅಷ್ಟೇ ಅಲ್ಲ, ಎಷ್ಟೇ ಕಷ್ಟಗಳಿದ್ರೂ ಆತನ ಜೊತೆ ಇರೋ ಫ್ರೆಂಡ್‌ಶಿಪ್ ಇನ್ನೂ ಗಟ್ಟಿಯಾಗೋಕೆ ಸಹಾಯ ಮಾಡ್ತಾನೆ ಮತ್ತು ಅದನ್ನ ಸಹಿಸ್ಕೊಳ್ಳೋಕೆ ತನ್ನ ಪವಿತ್ರಶಕ್ತಿನೂ ಕೊಡ್ತಾನೆ. (ಲೂಕ 11:13; ಫಿಲಿ. 4:13) ಹಾಗಾಗಿ ನಮಗೆ ಏನೇ ಕಷ್ಟಗಳು ಬಂದ್ರೂ ಅದನ್ನ ತಾಳ್ಕೊಳ್ಳೋಕೆ ಅಥವಾ ಸಹಿಸ್ಕೊಳ್ಳೋಕೆ ಮತ್ತು ಕೊನೇ ತನಕ ಆತನಿಗೆ ನಿಯತ್ತಾಗಿ ಇರೋಕೆ ಆತನು ಸಹಾಯ ಮಾಡೇ ಮಾಡ್ತಾನೆ ಅಂತ ನಾವು ನಂಬಬಹುದು. ನಾವು ಯೆಹೋವನ ಮೇಲೆ ನಂಬಿಕೆ ಇಡಬೇಕು ಅಂತ ಆತನು ಇಷ್ಟ ಪಡ್ತಾನೆ. (ಇಬ್ರಿ. 11:6) ಕೆಲವೊಮ್ಮೆ ನಮಗೆ ಕಷ್ಟಗಳು ಬಂದಾಗ ಆಕಾಶನೇ ತಲೆ ಮೇಲೆ ಬಿದ್ದಂಗೆ ಅನಿಸಿ ಬಿಡುತ್ತೆ. ಆಗ ಯೆಹೋವ ನಮಗೆ ಸಹಾಯ ಮಾಡ್ತಾನಾ ಇಲ್ವಾ ಅಂತ ಅನಿಸುತ್ತೆ. ಆದ್ರೆ ನಾವು ದೇವರ ಬಲದಿಂದ ‘ಗೋಡೆಯನ್ನೂ ಜಿಗಿಯೋಕೆ’ ಆಗುತ್ತೆ ಅಂತ ಬೈಬಲ್ ಹೇಳುತ್ತೆ. (ಕೀರ್ತ. 18:29) ಹಾಗಾಗಿ ಯೆಹೋವ ನಮಗೆ ಸಹಾಯ ಮಾಡ್ತಾನಾ ಇಲ್ವಾ ಅಂತ ಅನುಮಾನ ಪಡೋ ಬದ್ಲು, ಯೆಹೋವ ನನ್ನ ಪ್ರಾರ್ಥನೆ ಕೇಳಿಸ್ಕೊಳ್ತಾನೆ, ನನಗೆ ಸಹಾಯ ಮಾಡ್ತಾನೆ ಅನ್ನೋ ನಂಬಿಕೆಯಿಂದ ಪ್ರಾರ್ಥಿಸಿ.—ಯಾಕೋ. 1:6, 7. w23.11 22 ¶8-9
ಶನಿವಾರ, ನವೆಂಬರ್ 8
[ನಿಜವಾದ ಪ್ರೀತಿ] ಧಗಧಗಿಸೋ ಜ್ವಾಲೆ, ಅದು ಯಾಹುವಿನ ಜ್ವಾಲೆ. ಮುನ್ನುಗ್ಗಿ ಬರೋ ಪ್ರವಾಹ ಕೂಡ ಪ್ರೀತಿಯನ್ನ ನಂದಿಸಲಾರದು, ಹರಿದು ಬರೋ ನದಿಗಳು ಕೂಡ ಅದನ್ನ ಕೊಚ್ಚಿಕೊಂಡು ಹೋಗಲಾರವು.—ಪರಮ. 8:6, 7.
ಗಂಡ-ಹೆಂಡತಿ ತಮ್ಮ ಮಧ್ಯ ಇರೋ ಪ್ರೀತಿಯನ್ನ ಬಾಡಿಹೋಗದೆ ಇರೋ ತರ ನೋಡ್ಕೊಳ್ಳೋಕೆ ಆಗುತ್ತಾ? ಆಗುತ್ತೆ. ಗಂಡ-ಹೆಂಡತಿ ತಮ್ಮ ಉಸಿರು ಇರೋ ತನಕ ಒಬ್ರನ್ನೊಬ್ರು ಪ್ರೀತಿಸೋದು ಅವ್ರ ಕೈಯಲ್ಲೇ ಇದೆ. ಇದನ್ನ ಅರ್ಥ ಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡಿ. ಬೆಂಕಿ ಯಾವಾಗ್ಲೂ ಉರೀತಾ ಇರಬೇಕಂದ್ರೆ ಅದಕ್ಕೆ ಕಟ್ಟಿಗೆ ಬೇಕು. ಇಲ್ಲಾಂದ್ರೆ ಬೆಂಕಿ ಆರಿಹೋಗಿ ಬಿಡುತ್ತೆ. ಅದೇ ತರ ಗಂಡ-ಹೆಂಡತಿ ಮಧ್ಯ ಇರೋ ಪ್ರೀತಿ ಶಾಶ್ವತವಾಗಿ ಇರಬೇಕಂದ್ರೆ ತಮ್ಮ ಸಂಬಂಧನ ಗಟ್ಟಿ ಮಾಡ್ಕೊಳ್ಳೋಕೆ ಇಬ್ರೂ ಪ್ರಯತ್ನ ಹಾಕ್ತಾ ಇರಬೇಕು. ಇಲ್ಲಾಂದ್ರೆ ಸಮಯ ಹೋಗ್ತಾ ಹೋಗ್ತಾ ಆ ಪ್ರೀತಿ ಕಮ್ಮಿ ಆಗಿಬಿಡಬಹುದು. ಅದ್ರಲ್ಲೂ ಹಣಕಾಸಿನ ತೊಂದ್ರೆ ಬಂದಾಗ, ಹುಷಾರಿಲ್ಲದೆ ಆದಾಗ ಅಥವಾ ಮಕ್ಕಳನ್ನ ಬೆಳೆಸೋಕೆ ಕಷ್ಟ ಆದಾಗ ಆ ಪ್ರೀತಿ ಆರಿಹೋಗಿ ಬಿಡಬಹುದು. “ಯಾಹುವಿನ ಜ್ವಾಲೆ” ಯಾವಾಗ್ಲೂ ಉರೀತಾ ಇರೋಕೆ ಗಂಡ-ಹೆಂಡತಿ ಇಬ್ರೂ ಯೆಹೋವನ ಜೊತೆ ನಿಮಗಿರೋ ಸ್ನೇಹನ ಜಾಸ್ತಿ ಮಾಡ್ಕೊಳ್ತಾ ಇರಿ. w23.05 20-21 ¶1-3
ಭಾನುವಾರ, ನವೆಂಬರ್ 9
ಧೈರ್ಯವಾಗಿರು.—ದಾನಿ. 10:19.
ನಮ್ಮ ಅಪ್ಪಅಮ್ಮ ಧೈರ್ಯವಾಗಿ ಇದ್ದಾರೆ ಅಂದ ತಕ್ಷಣ ನಮಗೂ ಆ ಧೈರ್ಯ ತನ್ನಿಂದ ತಾನೇ ಬಂದುಬಿಡಲ್ಲ. ಅದನ್ನ ನಾವು ಬೆಳೆಸ್ಕೊಬೇಕು. ಹೇಗೆ? ಧೈರ್ಯ ಅನ್ನೋದು ಒಂದು ಕೌಶಲ ಇದ್ದ ಹಾಗೆ. ಒಬ್ಬ ವ್ಯಕ್ತಿ ಒಂದು ಕೌಶಲವನ್ನ ಕಲಿಬೇಕಂದ್ರೆ ಟೀಚರ್ ಹೇಳ್ಕೊಡೋ ವಿಷ್ಯವನ್ನ ಸೂಕ್ಷ್ಮವಾಗಿ ಗಮನಿಸ್ತಾನೆ. ಟೀಚರ್ ತರಾನೇ ಮಾಡೋಕೆ ಪ್ರಯತ್ನ ಮಾಡ್ತಾನೆ. ಆಗ ಆ ಕೌಶಲವನ್ನ ಬೆಳೆಸ್ಕೊಳ್ಳೋಕೆ ಆಗುತ್ತೆ. ಅದೇ ತರ ನಾವು ಕೂಡ ದೇವಜನ್ರು ಹೇಗೆಲ್ಲ ಧೈರ್ಯ ತೋರಿಸಿದ್ದಾರೆ ಅಂತ ತಿಳ್ಕೊಬೇಕು. ಅವ್ರ ತರಾನೇ ನಾವೂ ಧೈರ್ಯ ತೋರಿಸಬೇಕು. ದಾನಿಯೇಲನ ತರ ದೇವರ ವಾಕ್ಯವನ್ನ ಓದಿ ಚೆನ್ನಾಗಿ ಅರ್ಥ ಮಾಡ್ಕೊಬೇಕು. ನಮ್ಮ ಮನಸ್ಸಲ್ಲಿ ಇರೋದನ್ನೆಲ್ಲ ದೇವರಿಗೆ ಹೇಳ್ಕೊಳ್ತಾ ಆತನಿಗೆ ಹತ್ರ ಆಗಬೇಕು. ಆತನು ನಮಗೆ ಸಹಾಯ ಮಾಡೇ ಮಾಡ್ತಾನೆ ಅಂತ ಪೂರ್ತಿಯಾಗಿ ನಂಬಬೇಕು. ಹೀಗೆ ಮಾಡಿದಾಗ ಎಂಥ ಪರಿಸ್ಥಿತಿ ಬಂದ್ರೂ ನಾವು ಧೈರ್ಯ ಕಳ್ಕೊಳ್ಳಲ್ಲ. ನಾವು ಧೈರ್ಯ ತೋರಿಸಿದ್ರೆ ಬೇರೆಯವರು ನಮಗೆ ಗೌರವ ಕೊಡ್ತಾರೆ. ಅಷ್ಟೇ ಅಲ್ಲ ಒಳ್ಳೇ ಮನಸ್ಸಿನ ಜನ್ರು ಯೆಹೋವನ ಬಗ್ಗೆ ಕಲಿಯೋಕೆ ಆಸೆ ಪಡ್ತಾರೆ. w23.08 2 ¶2; 4 ¶8-9