ದೇವರ ರಾಜ್ಯದ ಮುನ್ನೋಟಗಳು ವಾಸ್ತವಿಕವಾಗಿ ಪರಿಣಮಿಸುತ್ತವೆ
‘ನೀವು [ಪ್ರವಾದನವಾಕ್ಯವನ್ನು] ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪವೆಂದೆಣಿಸಿ ಅದಕ್ಕೆ ಲಕ್ಷ್ಯಕೊಡುವದು ಒಳ್ಳೇದು.’—2 ಪೇತ್ರ 1:19.
1. ಇಂದು ಲೋಕದಲ್ಲಿ ನಾವು ಯಾವ ವೈದೃಶ್ಯವನ್ನು ಕಂಡುಕೊಳ್ಳುತ್ತೇವೆ?
ಇಂದಿನ ಲೋಕವು ಸತತವಾಗಿ ಬಿಕ್ಕಟ್ಟಿನ ದಾಳಿಗೆ ಗುರಿಯಾಗಿದೆ. ಪರಿಸರಶಾಸ್ತ್ರಕ್ಕೆ ಸಂಬಂಧಿಸಿದ ವಿಪತ್ತುಗಳಿಂದ ಹಿಡಿದು ಭೂವ್ಯಾಪಕ ಭಯೋತ್ಪಾದನೆಯ ವರೆಗಿನ ಮಾನವಕುಲದ ಸಮಸ್ಯೆಗಳು ದಿನೇ ದಿನೇ ಹದ್ದುಮೀರಿ ಹೋಗುತ್ತಿರುವಂತೆ ತೋರುತ್ತದೆ. ಲೋಕದ ಧರ್ಮಗಳು ಸಹ ಸಹಾಯಮಾಡಲು ಅಶಕ್ತವಾಗಿವೆ. ವಾಸ್ತವದಲ್ಲಿ ಈ ಧರ್ಮಗಳು ಜನರನ್ನು ವಿಭಾಗಿಸುವಂಥ ಅಂಧಾಭಿಮಾನ, ದ್ವೇಷ ಮತ್ತು ದೇಶಪ್ರೇಮವನ್ನು ಉದ್ರೇಕಿಸುವ ಮೂಲಕ ಸನ್ನಿವೇಶವನ್ನು ಇನ್ನಷ್ಟು ಹದಗೆಡಿಸುತ್ತಿವೆ. ಹೌದು, ಮುಂತಿಳಿಸಲ್ಪಟ್ಟಿರುವಂತೆ “ಕಾರ್ಗತ್ತಲು ಜನಾಂಗಗಳನ್ನು” ಮುಚ್ಚಿದೆ. (ಯೆಶಾಯ 60:2) ಆದರೆ ಅದೇ ಸಮಯದಲ್ಲಿ ಲಕ್ಷಾಂತರ ಮಂದಿ ದೃಢವಿಶ್ವಾಸದಿಂದ ಭವಿಷ್ಯತ್ತನ್ನು ನೋಡುತ್ತಾರೆ. ಏಕೆ? ಏಕೆಂದರೆ ಅವರು ದೇವರ ಪ್ರವಾದನವಾಕ್ಯವನ್ನು “ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪವೆಂದೆಣಿಸಿ” ಅದಕ್ಕೆ ಗಮನಕೊಡುತ್ತಾರೆ. ಅವರು ಬೈಬಲಿನಲ್ಲಿ ಕಂಡುಬರುವ ದೇವರ “ವಾಕ್ಯವು” ಅಥವಾ ಸಂದೇಶವು ತಮ್ಮ ಹೆಜ್ಜೆಗಳನ್ನು ಮಾರ್ಗದರ್ಶಿಸುವಂತೆ ಬಿಡುತ್ತಾರೆ.—2 ಪೇತ್ರ 1:19.
2. “ಅಂತ್ಯಕಾಲದ” ಕುರಿತಾದ ದಾನಿಯೇಲನ ಪ್ರವಾದನೆಗನುಸಾರ, ಯಾರಿಗೆ ಮಾತ್ರ ಆಧ್ಯಾತ್ಮಿಕ ಒಳನೋಟವು ಒದಗಿಸಲ್ಪಡುತ್ತದೆ?
2 “ಅಂತ್ಯಕಾಲದ” ವಿಷಯದಲ್ಲಿ ಪ್ರವಾದಿಯಾದ ದಾನಿಯೇಲನು ಬರೆದುದು: “ಬಹು ಜನರು ಅತ್ತಿತ್ತ ತಿರುಗುವರು, ತಿಳುವಳಿಕೆಯು ಹೆಚ್ಚುವದು. ಅನೇಕರು ತಮ್ಮನ್ನು ಶುದ್ಧೀಕರಿಸಿ ಶುಭ್ರಮಾಡಿಕೊಂಡು ಶೋಧಿತರಾಗುವರು; ದುಷ್ಟರು ದುಷ್ಟರಾಗಿಯೇ ನಡೆಯುವರು, ಅವರಲ್ಲಿ ಯಾರಿಗೂ ವಿವೇಕವಿರದು; ಜ್ಞಾನಿಗಳಿಗೆ ವಿವೇಕವಿರುವದು.” (ದಾನಿಯೇಲ 12:4, 10) ಆಧ್ಯಾತ್ಮಿಕ ಒಳನೋಟವು, ಯಥಾರ್ಥ ಮನಸ್ಸಿನಿಂದ ದೇವರ ವಾಕ್ಯದಲ್ಲಿ ‘ಅತ್ತಿತ್ತ ತಿರುಗುವ’ ಅಥವಾ ಅದನ್ನು ಶ್ರದ್ಧಾಪೂರ್ವಕವಾಗಿ ಅಧ್ಯಯನಮಾಡುವ, ಆತನ ಮಟ್ಟಗಳಿಗೆ ಅಧೀನರಾಗುವ ಮತ್ತು ಆತನ ಚಿತ್ತವನ್ನು ಮಾಡಲು ಹೆಣಗಾಡುವಂಥವರಿಗಾಗಿ ಮಾತ್ರ ಮೀಸಲಾಗಿರಿಸಲ್ಪಟ್ಟಿದೆ.—ಮತ್ತಾಯ 13:11-15; 1 ಯೋಹಾನ 5:20.
3. ಇಸವಿ 1870ಗಳಲ್ಲಿ ಆರಂಭದ ಬೈಬಲ್ ವಿದ್ಯಾರ್ಥಿಗಳು ಯಾವ ಪ್ರಮುಖ ಸತ್ಯವನ್ನು ವಿವೇಚಿಸಿ ತಿಳಿದುಕೊಂಡರು?
3 ಇಸವಿ 1870ಗಳಷ್ಟು ಆರಂಭದಲ್ಲಿ, ಅಂದರೆ ‘ಕಡೇ ದಿವಸಗಳು’ ಆರಂಭಗೊಳ್ಳುವುದಕ್ಕೆ ಮುಂಚೆ, ಯೆಹೋವ ದೇವರು “ಪರಲೋಕರಾಜ್ಯದ ಗುಟ್ಟುಗಳ” ಮೇಲೆ ಹೆಚ್ಚಿನ ಬೆಳಕನ್ನು ಬೀರಲಾರಂಭಿಸಿದನು. (2 ತಿಮೊಥೆಯ 3:1-5; ಮತ್ತಾಯ 13:11) ಆ ಸಮಯದಲ್ಲಿ ಬೈಬಲ್ ವಿದ್ಯಾರ್ಥಿಗಳ ಒಂದು ಗುಂಪು, ಜನಪ್ರಿಯ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಕ್ರಿಸ್ತನ ಹಿಂದಿರುಗುವಿಕೆಯು ಅದೃಶ್ಯವಾಗಿರಲಿದೆ ಎಂಬುದನ್ನು ವಿವೇಚಿಸಿ ತಿಳಿದುಕೊಂಡಿತು. ಯೇಸು ಸ್ವರ್ಗದಲ್ಲಿ ಸಿಂಹಾಸನಾರೂಢನಾದ ಬಳಿಕ ಭೂಮಿಯ ರಾಜನಾಗಿ ತನ್ನ ಗಮನವನ್ನು ಅದರ ಕಡೆಗೆ ನಿರ್ದೇಶಿಸುವ ಅರ್ಥದಲ್ಲಿ ಹಿಂದಿರುಗುವನು. ಒಂದು ದೃಶ್ಯ, ಸಂಯೋಜಿತ ಸೂಚನೆಯು, ಅವನ ಅದೃಶ್ಯ ಸಾನ್ನಿಧ್ಯವು ಆರಂಭಗೊಂಡಿದೆ ಎಂಬ ವಿಷಯದಲ್ಲಿ ಅವನ ಶಿಷ್ಯರಿಗೆ ಎಚ್ಚರಿಕೆ ನೀಡುವುದು.—ಮತ್ತಾಯ 24:3-14.
ಒಂದು ಮುನ್ನೋಟವು ವಾಸ್ತವಿಕತೆಯಾಗಿ ಪರಿಣಮಿಸುವಾಗ
4. ತನ್ನ ಆಧುನಿಕ ದಿನದ ಸೇವಕರ ನಂಬಿಕೆಯನ್ನು ಯೆಹೋವನು ಹೇಗೆ ಬಲಪಡಿಸಿದ್ದಾನೆ?
4 ರೂಪಾಂತರದ ದರ್ಶನವು, ಕ್ರಿಸ್ತನ ರಾಜ್ಯ ಮಹಿಮೆಯ ಉಜ್ವಲ ಮುನ್ನೋಟವಾಗಿತ್ತು. (ಮತ್ತಾಯ 17:1-9) ಯೇಸು ಅಶಾಸ್ತ್ರೀಯವಾದ ನಿರೀಕ್ಷಣೆಗಳನ್ನು ಪೂರೈಸಲು ನಿರಾಕರಿಸಿದ ಕಾರಣ ಅನೇಕರು ಅವನನ್ನು ಹಿಂಬಾಲಿಸುವುದನ್ನು ನಿಲ್ಲಿಸಿಬಿಟ್ಟಿದ್ದಂತ ಸಮಯದಲ್ಲಿ, ಆ ದರ್ಶನವು ಪೇತ್ರ, ಯಾಕೋಬ ಮತ್ತು ಯೋಹಾನನ ನಂಬಿಕೆಯನ್ನು ಬಲಪಡಿಸಿತು. ತದ್ರೀತಿಯಲ್ಲಿ, ಈ ಅಂತ್ಯಕಾಲದಲ್ಲಿ ಯೆಹೋವನು ತನ್ನ ಆಧುನಿಕ ದಿನದ ಸೇವಕರು ಆ ಭಯಭಕ್ತಿಪ್ರೇರಕ ದರ್ಶನದ ಹಾಗೂ ಅದಕ್ಕೆ ಸಂಬಂಧಿಸಿದ ಅನೇಕ ಪ್ರವಾದನೆಗಳ ನೆರವೇರಿಕೆಯ ಕುರಿತು ಹೆಚ್ಚನ್ನು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡುವ ಮೂಲಕ ಅವರ ನಂಬಿಕೆಯನ್ನು ಬಲಪಡಿಸಿದ್ದಾನೆ. ನಂಬಿಕೆಯನ್ನು ಬಲಪಡಿಸುವಂಥ ಈ ಆಧ್ಯಾತ್ಮಿಕ ವಾಸ್ತವಿಕತೆಗಳಲ್ಲಿ ಕೆಲವನ್ನು ನಾವೀಗ ಪರಿಗಣಿಸೋಣ.
5. ಯಾರು ಮುಂಜಾನೆಯ ನಕ್ಷತ್ರವಾಗಿ ಕಂಡುಬಂದನು, ಹಾಗೂ ಅವನು ‘ಮೂಡಿದ್ದು’ ಯಾವಾಗ ಮತ್ತು ಹೇಗೆ?
5 ರೂಪಾಂತರವನ್ನು ಸೂಚಿಸುತ್ತಾ ಅಪೊಸ್ತಲ ಪೇತ್ರನು ಬರೆದುದು: “ಇದಲ್ಲದೆ ಪ್ರವಾದನವಾಕ್ಯವು ನಮಗೆ ಮತ್ತೂ ದೃಢವಾಗಿದೆ. ನಿಮ್ಮ ಹೃದಯದೊಳಗೆ ಬೆಳ್ಳಿಯು [“ಮುಂಜಾನೆಯ ನಕ್ಷತ್ರ,” ಪರಿಶುದ್ಧ ಬೈಬಲ್a] ಮೂಡಿ ಅರುಣೋದಯವಾಗುವ ಪರ್ಯಂತರ ಅದನ್ನು ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪವೆಂದೆಣಿಸಿ ಅದಕ್ಕೆ ಲಕ್ಷ್ಯಕೊಡುವದೇ ಒಳ್ಳೇದು.” (2 ಪೇತ್ರ 1:19) ಸಾಂಕೇತಿಕವಾದ ಆ ಮುಂಜಾನೆಯ ನಕ್ಷತ್ರ ಅಥವಾ “ಉದಯಸೂಚಕವಾದ ಪ್ರಕಾಶವುಳ್ಳ ನಕ್ಷತ್ರವು” ಮಹಿಮಾನ್ವಿತನಾದ ಯೇಸು ಕ್ರಿಸ್ತನೇ ಆಗಿದ್ದಾನೆ. (ಪ್ರಕಟನೆ 22:16) 1914ರಲ್ಲಿ ಒಂದು ಹೊಸ ಯುಗದ ಆರಂಭವನ್ನು ಗುರುತಿಸುತ್ತಾ ದೇವರ ರಾಜ್ಯವು ಸ್ವರ್ಗದಲ್ಲಿ ಜನಿಸಿದಾಗ ಅವನು ‘ಮೂಡಿದನು.’ (ಪ್ರಕಟನೆ 11:15) ರೂಪಾಂತರದ ದರ್ಶನದಲ್ಲಿ, ಮೋಶೆಯೂ ಎಲೀಯನೂ ಯೇಸುವಿನ ಎರಡೂ ಕಡೆಗಳಲ್ಲಿ ನಿಂತು ಅವನೊಂದಿಗೆ ಸಂಭಾಷಿಸುತ್ತಿರುವಂತೆ ಕಂಡುಬಂದರು. ಅವರು ಯಾರನ್ನು ಮುನ್ಚಿತ್ರಿಸುತ್ತಾರೆ?
6, 7. ರೂಪಾಂತರದಲ್ಲಿ ಮೋಶೆಯೂ ಎಲೀಯನೂ ಯಾರನ್ನು ಪ್ರತಿನಿಧಿಸುತ್ತಾರೆ, ಮತ್ತು ಅವರಿಂದ ಪ್ರತಿನಿಧಿಸಲ್ಪಟ್ಟಿರುವವರ ಕುರಿತು ಶಾಸ್ತ್ರವಚನಗಳು ಯಾವ ಪ್ರಮುಖ ವಿವರಣೆಗಳನ್ನು ತಿಳಿಯಪಡಿಸುತ್ತವೆ?
6 ಮೋಶೆಯೂ ಎಲೀಯನೂ ಕ್ರಿಸ್ತನ ಮಹಿಮೆಯಲ್ಲಿ ಪಾಲ್ಗೊಂಡದ್ದರಿಂದ, ಈ ಇಬ್ಬರು ನಂಬಿಗಸ್ತ ಸಾಕ್ಷಿಗಳು ಯೇಸುವಿನೊಂದಿಗೆ ಅವನ ರಾಜ್ಯದಲ್ಲಿ ಆಳಲಿಕ್ಕಿರುವವರನ್ನು ಪ್ರತಿನಿಧಿಸುತ್ತಿರಬೇಕು. ಯೇಸುವಿನೊಂದಿಗೆ ಜೊತೆಅರಸರಿದ್ದಾರೆ ಎಂಬ ತಿಳಿವಳಿಕೆಯು, ಪ್ರವಾದಿಯಾದ ದಾನಿಯೇಲನಿಗೆ ಕೊಡಲ್ಪಟ್ಟ ಸಿಂಹಾಸನಾರೂಢನಾದ ಮೆಸ್ಸೀಯನ ಕುರಿತಾದ ದರ್ಶನದ ಮುನ್ನೋಟದೊಂದಿಗೆ ಹೊಂದಿಕೆಯಲ್ಲಿದೆ. “ಮನುಷ್ಯಕುಮಾರನಂತಿರುವವನು” ಒಬ್ಬ “ಮಹಾವೃದ್ಧ”ನಿಂದ ‘ಅಂತ್ಯವಿಲ್ಲದ, ಶಾಶ್ವತವಾದ ಆಳಿಕೆಯನ್ನು’ ಸ್ವೀಕರಿಸುತ್ತಿರುವುದನ್ನು ದಾನಿಯೇಲನು ಕಂಡನು. ಆದರೆ ತದನಂತರ ದಾನಿಯೇಲನಿಗೆ ಏನು ತೋರಿಸಲ್ಪಟ್ಟಿತು ಎಂಬುದನ್ನು ಗಮನಿಸಿರಿ. ಅವನು ಬರೆಯುವುದು: “ರಾಜ್ಯ ಪ್ರಭುತ್ವಗಳೂ ಸಮಸ್ತ ಭೂಮಂಡಲದಲ್ಲಿನ ರಾಜ್ಯಗಳ ಮಹಿಮೆಯೂ ಪರಾತ್ಪರನ ಭಕ್ತಜನರಿಗೆ [“ಪವಿತ್ರ ಜನರಿಗೆ,” NW] ಕೊಡೋಣವಾಗುವವು.” (ದಾನಿಯೇಲ 7:13, 14, 27) ಹೌದು, ರೂಪಾಂತರದ ದರ್ಶನದ ಐದು ಶತಮಾನಗಳಿಗಿಂತಲೂ ಹೆಚ್ಚು ಸಮಯಕ್ಕೆ ಮುಂಚೆಯೇ ದೇವರು, “ಪವಿತ್ರ ಜನರು” ಕ್ರಿಸ್ತನ ರಾಜವೈಭವದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಯಪಡಿಸಿದ್ದನು.
7 ದಾನಿಯೇಲನ ದರ್ಶನದಲ್ಲಿದ್ದ ಪವಿತ್ರ ಜನರು ಯಾರಾಗಿದ್ದಾರೆ? ಇಂಥ ವ್ಯಕ್ತಿಗಳನ್ನು ಸೂಚಿಸುತ್ತಾ ಅಪೊಸ್ತಲ ಪೌಲನು ಹೇಳುವುದು: “ನಾವು ದೇವರ ಮಕ್ಕಳಾಗಿದ್ದೇವೆಂಬದಕ್ಕೆ ಪವಿತ್ರಾತ್ಮನೇ ನಮ್ಮ ಆತ್ಮದೊಂದಿಗೆ ಸಾಕ್ಷಿಹೇಳುತ್ತಾನೆ. ಮಕ್ಕಳಾಗಿದ್ದರೆ ಬಾಧ್ಯರಾಗಿದ್ದೇವೆ; ದೇವರಿಗೆ ಬಾಧ್ಯರು, ಕ್ರಿಸ್ತನೊಂದಿಗೆ ಬಾಧ್ಯರು. ಹೇಗಂದರೆ ಕ್ರಿಸ್ತನಿಗೆ ಸಂಭವಿಸಿದ ಬಾಧೆಗಳಲ್ಲಿ ನಾವು ಪಾಲುಗಾರರಾಗುವದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.” (ರೋಮಾಪುರ 8:16, 17) ಆದುದರಿಂದ, ಈ ಪವಿತ್ರ ಜನರು ವಾಸ್ತವದಲ್ಲಿ ಯೇಸುವಿನ ಆತ್ಮಾಭಿಷಿಕ್ತ ಶಿಷ್ಯರೇ ಆಗಿದ್ದಾರೆ. ಪ್ರಕಟನೆಯಲ್ಲಿ ಯೇಸು ಹೇಳುವುದು: “ನಾನು ಜಯಹೊಂದಿ ನನ್ನ ತಂದೆಯೊಡನೆ ಸಿಂಹಾಸನದಲ್ಲಿ ಕೂತುಕೊಂಡೆನು; ಹಾಗೆಯೇ ಜಯಹೊಂದುವವನನ್ನು ನನ್ನೊಡನೆ ಸಿಂಹಾಸನದಲ್ಲಿ ಕೂತುಕೊಳ್ಳುವಂತೆ ಮಾಡುವೆನು.” 1,44,000 ಮಂದಿಯಾಗಿರುವ ಈ ಪುನರುತ್ಥಿತ ‘ಜಯಶಾಲಿಗಳು’ ಯೇಸುವಿನೊಂದಿಗೆ ಇಡೀ ಭೂಮಿಯ ಮೇಲೆ ಆಳ್ವಿಕೆ ನಡಿಸುವರು.—ಪ್ರಕಟನೆ 3:21; 5:9, 10; 14:1, 3, 4; 1 ಕೊರಿಂಥ 15:53.
8. ಯೇಸುವಿನ ಅಭಿಷಿಕ್ತ ಶಿಷ್ಯರು, ಮೋಶೆಯೂ ಎಲೀಯನೂ ಮಾಡಿದಂಥ ಕೆಲಸದಲ್ಲೇ ಹೇಗೆ ಒಳಗೂಡಿದ್ದಾರೆ, ಮತ್ತು ಯಾವ ಫಲಿತಾಂಶಗಳೊಂದಿಗೆ?
8 ಆದರೂ, ಅಭಿಷಿಕ್ತ ಕ್ರೈಸ್ತರು ಏಕೆ ಮೋಶೆ ಮತ್ತು ಎಲೀಯನಿಂದ ಪ್ರತಿನಿಧಿಸಲ್ಪಟ್ಟಿದ್ದಾರೆ? ಕಾರಣವೇನೆಂದರೆ, ಅಭಿಷಿಕ್ತ ಕ್ರೈಸ್ತರು ಭೂಮಿಯಲ್ಲಿ ಇನ್ನೂ ಮಾನವರಾಗಿರುವಾಗ ಮೋಶೆಯೂ ಎಲೀಯನೂ ಮಾಡಿದಂಥ ಕೆಲಸವನ್ನೇ ಮಾಡುತ್ತಾರೆ. ಉದಾಹರಣೆಗೆ, ಹಿಂಸೆಯ ಎದುರಿನಲ್ಲಿಯೂ ಅವರು ಯೆಹೋವನ ಸಾಕ್ಷಿಗಳಾಗಿ ಸೇವೆಮಾಡುತ್ತಾರೆ. (ಯೆಶಾಯ 43:10; ಅ. ಕೃತ್ಯಗಳು 8:1-8; ಪ್ರಕಟನೆ 11:2-12) ಮೋಶೆ ಮತ್ತು ಎಲೀಯನಂತೆ ಅವರು ಧೈರ್ಯದಿಂದ ಸುಳ್ಳುಧರ್ಮವನ್ನು ಬಯಲಿಗೆಳೆಯುತ್ತಾರೆ ಮತ್ತು ದೇವರಿಗೆ ಅನನ್ಯ ಭಕ್ತಿಯನ್ನು ಸಲ್ಲಿಸುವಂತೆ ಯಥಾರ್ಥ ಜನರನ್ನು ಉತ್ತೇಜಿಸುತ್ತಾರೆ. (ವಿಮೋಚನಕಾಂಡ 32:19, 20; ಧರ್ಮೋಪದೇಶಕಾಂಡ 4:22-24; 1 ಅರಸುಗಳು 18:18-40) ಅವರ ಕೆಲಸವು ಫಲವನ್ನು ಫಲಿಸಿದೆಯೋ? ಹೌದು! ಅಭಿಷಿಕ್ತರಲ್ಲಿ ಎಲ್ಲರನ್ನೂ ಒಟ್ಟುಗೂಡಿಸುವುದರಲ್ಲಿ ಅವರು ಸಹಾಯಮಾಡಿದ್ದಾರೆ ಮಾತ್ರವಲ್ಲ ಲಕ್ಷಾಂತರ “ಬೇರೆ ಕುರಿಗಳು” ಯೇಸು ಕ್ರಿಸ್ತನಿಗೆ ಇಷ್ಟಪೂರ್ವಕ ಅಧೀನತೆಯನ್ನು ತೋರಿಸುವಂತೆಯೂ ಸಹಾಯಮಾಡಿದ್ದಾರೆ.—ಯೋಹಾನ 10:16; ಪ್ರಕಟನೆ 7:4.
ಯೇಸು ತನ್ನ ಜಯವನ್ನು ಪೂರ್ಣಗೊಳಿಸುತ್ತಾನೆ
9. ಪ್ರಕಟನೆ 6:2 ಯೇಸುವಿನ ಇಂದಿನ ಸ್ಥಾನಮಾನವನ್ನು ಹೇಗೆ ಚಿತ್ರಿಸುತ್ತದೆ?
9 ಯೇಸು ಈಗ ಕತ್ತೆಮರಿಯ ಮೇಲೆ ಕುಳಿತುಕೊಂಡಿರುವ ಒಬ್ಬ ಮಾನವನಲ್ಲ, ಬದಲಿಗೆ ಒಬ್ಬ ಪ್ರಬಲ ಅರಸನಾಗಿದ್ದಾನೆ. ಒಂದು ಕುದುರೆಯ ಮೇಲೆ ಸವಾರಿಮಾಡುತ್ತಿರುವವನಂತೆ ಅವನನ್ನು ಚಿತ್ರಿಸಲಾಗಿದೆ; ಈ ರೀತಿಯ ಸವಾರಿಯು ಬೈಬಲಿನಲ್ಲಿ ಯುದ್ಧದ ಸಂಕೇತವಾಗಿದೆ. (ಜ್ಞಾನೋಕ್ತಿ 21:31) ಪ್ರಕಟನೆ 6:2 ಹೇಳುವುದು: “ಇಗೋ, ಒಂದು ಬಿಳಿ ಕುದುರೆ ಕಾಣಿಸಿತು; ಅದರ ಮೇಲೆ ಕೂತಿದ್ದವನ ಕೈಯಲ್ಲಿ ಬಿಲ್ಲು ಇತ್ತು; ಅವನಿಗೆ ಜಯಮಾಲೆ ಕೊಡಲ್ಪಟ್ಟಿತು; ಅವನು ಜಯಿಸುತ್ತಿರುವವನಾಗಿ ಜಯಿಸುವದಕ್ಕೋಸ್ಕರ ಹೊರಟನು.” ಅಷ್ಟುಮಾತ್ರವಲ್ಲ, ಯೇಸುವಿನ ಕುರಿತಾಗಿ ಕೀರ್ತನೆಗಾರನಾದ ದಾವೀದನು ಬರೆದುದು: “ಯೆಹೋವನು ನಿನ್ನ ರಾಜದಂಡದ ಆಳಿಕೆಯನ್ನು ಚೀಯೋನಿನ ಹೊರಗೂ ಹಬ್ಬಿಸುವನು; ನಿನ್ನ ವೈರಿಗಳ ಮಧ್ಯದಲ್ಲಿ ದೊರೆತನಮಾಡು.”—ಕೀರ್ತನೆ 110:2.
10. (ಎ) ಯೇಸುವಿನ ಜಯದ ಸವಾರಿಯು ಹೇಗೆ ಮಹಿಮಾಯುತ ರೀತಿಯಲ್ಲಿ ಆರಂಭಗೊಂಡಿತು? (ಬಿ) ಕ್ರಿಸ್ತನ ಮೊದಲ ವಿಜಯವು ಸರ್ವ ಲೋಕದ ಮೇಲೆ ಹೇಗೆ ಪ್ರಭಾವ ಬೀರಿತು?
10 ಯೇಸುವಿನ ಮೊದಲ ವಿಜಯವು, ಅವನ ಪ್ರಬಲ ವೈರಿಗಳಾಗಿರುವ ಸೈತಾನ ಹಾಗೂ ದೆವ್ವಗಳ ವಿರುದ್ಧವಾಗಿತ್ತು. ಅವನು ಅವರನ್ನು ಸ್ವರ್ಗದಿಂದ ಭೂಮಿಗೆ ದೊಬ್ಬಿಬಿಟ್ಟನು. ತಮಗಿರುವ ಕಾಲಾವಧಿಯು ಕೊಂಚವೇ ಎಂದು ತಿಳಿದಿರುವ ಈ ದುರಾತ್ಮಗಳು ಮಾನವಕುಲದ ಮೇಲೆ ತಮ್ಮ ಹಿಂಸಾತ್ಮಕ ಕೋಪವನ್ನು ವ್ಯಕ್ತಪಡಿಸಿವೆ ಮತ್ತು ಭಾರಿ ವಿಪತ್ತನ್ನು ಬರಮಾಡಿವೆ. ಪ್ರಕಟನೆಯಲ್ಲಿ ಈ ವಿಪತ್ತು ಇನ್ನೂ ಮೂವರು ಕುದುರೆ ಸವಾರರ ಸವಾರಿಯಿಂದ ಸಂಕೇತಿಸಲ್ಪಟ್ಟಿದೆ. (ಪ್ರಕಟನೆ 6:3-8; 12:7-12) ಯೇಸುವಿನ “ಸಾನ್ನಿಧ್ಯ ಹಾಗೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಯ” (NW) ಕುರಿತಾದ ಅವನ ಪ್ರವಾದನೆಯಲ್ಲಿ ಮುಂತಿಳಿಸಲ್ಪಟ್ಟಿರುವಂತೆ, ಅವರ ಕುದುರೆ ಸವಾರಿಯು ಯುದ್ಧ, ಕ್ಷಾಮ ಮತ್ತು ಮಾರಕ ಅಂಟುರೋಗವನ್ನು ಉಂಟುಮಾಡಿದೆ. (ಮತ್ತಾಯ 24:3, 7; ಲೂಕ 21:7-11) ಈ “ಪ್ರಸವವೇದನೆ”ಯು, ಸೈತಾನನ ದೃಶ್ಯ ಸಂಘಟನೆಯ ಪ್ರತಿಯೊಂದು ಕುರುಹನ್ನೂ ನಾಶಮಾಡುವ ಮೂಲಕ ಕ್ರಿಸ್ತನು ತನ್ನ ‘ಜಯವನ್ನು’ ಪೂರ್ಣಗೊಳಿಸುವ ತನಕ ತೀವ್ರಗೊಳ್ಳುತ್ತಾ ಹೋಗುವುದು ಎಂಬುದರಲ್ಲಿ ಸಂಶಯವೇ ಇಲ್ಲ.b—ಮತ್ತಾಯ 24:8.
11. ಕ್ರೈಸ್ತ ಸಭೆಯ ಇತಿಹಾಸವು ಯಾವ ರೀತಿಯಲ್ಲಿ ಯೇಸುವಿನ ರಾಜ್ಯಾಧಿಕಾರಕ್ಕೆ ಪುರಾವೆ ನೀಡುತ್ತದೆ?
11 ರಾಜ್ಯದ ಸಂದೇಶವನ್ನು ಲೋಕವ್ಯಾಪಕವಾಗಿ ಸಾರಲಿಕ್ಕಾಗಿರುವ ನೇಮಕವನ್ನು ಕ್ರೈಸ್ತ ಸಭೆಯು ಪೂರೈಸಸಾಧ್ಯವಾಗುವಂತೆ ಅದನ್ನು ಇಷ್ಟರ ತನಕ ಸಂರಕ್ಷಿಸಿರುವುದರಲ್ಲಿಯೂ ಯೇಸುವಿನ ರಾಜ್ಯಾಧಿಕಾರವು ಸುವ್ಯಕ್ತವಾಗುತ್ತದೆ. ಸುಳ್ಳುಧರ್ಮದ ಲೋಕ ಸಾಮ್ರಾಜ್ಯವಾಗಿರುವ ಮಹಾ ಬಾಬೆಲಿನ ಮತ್ತು ಹಗೆಭರಿತ ಸರಕಾರಗಳ ಕ್ರೂರವಾದ ವಿರೋಧದ ಮಧ್ಯೆಯೂ, ಸಾರುವ ಕೆಲಸವು ಮುಂದುವರಿಸಲ್ಪಟ್ಟಿದೆ ಮಾತ್ರವಲ್ಲ ಲೋಕದ ಇತಿಹಾಸದಲ್ಲೇ ಅಸಾಮಾನ್ಯ ಮಟ್ಟದಲ್ಲಿ ಸಾಧಿಸಲ್ಪಟ್ಟಿದೆ. (ಪ್ರಕಟನೆ 17:5, 6) ಇದು ಕ್ರಿಸ್ತನ ರಾಜತ್ವಕ್ಕೆ ಎಷ್ಟು ಪ್ರಬಲವಾದ ಒಂದು ಪುರಾವೆಯಾಗಿದೆ!—ಕೀರ್ತನೆ 110:3.
12. ಕ್ರಿಸ್ತನ ಅದೃಶ್ಯ ಸಾನ್ನಿಧ್ಯವನ್ನು ಅಧಿಕಾಂಶ ಜನರು ಏಕೆ ವಿವೇಚಿಸಿ ತಿಳಿದುಕೊಳ್ಳುವುದಿಲ್ಲ?
12 ಆದರೂ, ಕ್ರೈಸ್ತರೆಂದು ಹೇಳಿಕೊಳ್ಳುವಂಥ ಕೋಟಿಗಟ್ಟಲೆ ಮಂದಿಯನ್ನೂ ಸೇರಿಸಿ ಅಧಿಕಾಂಶ ಜನರು, ಭೂಮಿಯಲ್ಲಿ ಸಂಭವಿಸುತ್ತಿರುವ ಮಹತ್ವಪೂರ್ಣ ಘಟನೆಗಳ ಹಿಂದಿರುವ ಅದೃಶ್ಯ ವಾಸ್ತವಿಕತೆಗಳನ್ನು ವಿವೇಚಿಸಿ ತಿಳಿದುಕೊಳ್ಳಲು ವಿಫಲರಾಗಿದ್ದಾರೆ ಎಂಬುದು ವಿಷಾದಕರ ಸಂಗತಿಯಾಗಿದೆ. ಅಷ್ಟುಮಾತ್ರವಲ್ಲದೆ, ದೇವರ ರಾಜ್ಯದ ಕುರಿತು ಸಾಕ್ಷಿನೀಡುವವರನ್ನು ಅವರು ಅಪಹಾಸ್ಯಮಾಡುತ್ತಾರೆ. (2 ಪೇತ್ರ 3:3, 4) ಏಕೆ? ಏಕೆಂದರೆ ಸೈತಾನನು ಅವರ ಮನಸ್ಸುಗಳನ್ನು ಮಂಕುಮಾಡಿದ್ದಾನೆ. (2 ಕೊರಿಂಥ 4:3, 4) ವಾಸ್ತವದಲ್ಲಿ, ಅನೇಕ ಶತಮಾನಗಳ ಹಿಂದೆಯೇ ಅವನು ಕ್ರೈಸ್ತರೆಂದು ಹೇಳಿಕೊಳ್ಳುವವರನ್ನು ಆಧ್ಯಾತ್ಮಿಕ ಅಂಧಕಾರದಿಂದ ಕುರುಡುಗೊಳಿಸಲು ಆರಂಭಿಸಿದ್ದಾನೆ ಮತ್ತು ಅವರು ಅಮೂಲ್ಯವಾದ ರಾಜ್ಯ ನಿರೀಕ್ಷೆಯನ್ನು ತೊರೆಯುವಂತೆಯೂ ಮಾಡಿದ್ದಾನೆ.
ರಾಜ್ಯ ನಿರೀಕ್ಷೆಯು ತೊರೆಯಲ್ಪಟ್ಟದ್ದು
13. ಕ್ರೈಸ್ತರೆಂದು ಹೇಳಿಕೊಳ್ಳುವವರ ನಡುವಿನ ಆಧ್ಯಾತ್ಮಿಕ ಅಂಧಕಾರವು ಯಾವುದಕ್ಕೆ ನಡಿಸಿತು?
13 ಗೋದಿಯ ನಡುವೆ ಬಿತ್ತಲ್ಪಟ್ಟಿರುವ ಹಣಜಿಯಂತೆ, ಧರ್ಮಭ್ರಷ್ಟರು ಕ್ರೈಸ್ತ ಸಭೆಯೊಳಗೆ ನುಸುಳುತ್ತಾರೆ ಮತ್ತು ಅನೇಕರನ್ನು ತಪ್ಪುದಾರಿಗೆಳೆಯುತ್ತಾರೆ ಎಂದು ಯೇಸು ಮುಂತಿಳಿಸಿದನು. (ಮತ್ತಾಯ 13:24-30, 36-43; ಅ. ಕೃತ್ಯಗಳು 20:29-31; ಯೂದ 4) ಸಕಾಲದಲ್ಲಿ, ಕ್ರೈಸ್ತರೆಂದು ಹೇಳಿಕೊಳ್ಳುವಂಥ ಇವರು ವಿಧರ್ಮಿ ಹಬ್ಬಗಳನ್ನು, ಪದ್ಧತಿಗಳನ್ನು ಹಾಗೂ ಬೋಧನೆಗಳನ್ನು ಅಳವಡಿಸಿಕೊಂಡರು ಮತ್ತು ಅವುಗಳನ್ನು “ಕ್ರೈಸ್ತ” ಹಬ್ಬಗಳು, ಪದ್ಧತಿಗಳು ಮತ್ತು ಬೋಧನೆಗಳಾಗಿ ಪರಿಗಣಿಸಸಾಧ್ಯವಿದೆ ಎಂದೂ ಘೋಷಿಸಿದರು. ಉದಾಹರಣೆಗೆ, ಕ್ರಿಸ್ಮಸ್ ಹಬ್ಬದ ಮೂಲವು ಮಿಥ್ರ ಮತ್ತು ಸ್ಯಾಟರ್ನ್ ಎಂಬ ವಿಧರ್ಮಿ ದೇವತೆಗಳ ಆರಾಧನೆಯನ್ನು ಒಳಗೂಡಿರುವ ಮತಾಚರಣೆಗಳಲ್ಲಿ ಇದೆ. ಆದರೆ ಈ ಅಕ್ರೈಸ್ತ ಆಚರಣೆಗಳನ್ನು ಅಳವಡಿಸಿಕೊಳ್ಳುವಂತೆ ಕ್ರೈಸ್ತರೆಂದು ಹೇಳಿಕೊಳ್ಳುವವರನ್ನು ಯಾವುದು ಪ್ರೇರಿಸಿತು? ದ ನ್ಯೂ ಎನ್ಸೈಕ್ಲಪೀಡೀಯ ಬ್ರಿಟ್ಯಾನಿಕ (1974) ಹೇಳುವುದು: “ಯೇಸು ಕ್ರಿಸ್ತನ ಜನ್ಮದಿನದ ಹಬ್ಬವಾಗಿರುವ ಕ್ರಿಸ್ಮಸ್ ಹಬ್ಬವು ಆರಂಭಿಸಲ್ಪಟ್ಟದ್ದು, ಕ್ರಿಸ್ತನ ಸನ್ನಿಹಿತ ಹಿಂದಿರುಗುವಿಕೆಯ ನಿರೀಕ್ಷಣೆಯು ಮಾಸಿಹೋಗುತ್ತಿದ್ದ ಕಾರಣದಿಂದಲೇ.”
14. ಆರಿಗನ್ ಮತ್ತು ಅಗಸ್ಟಿನ್ರ ಬೋಧನೆಗಳು ಯಾವ ರೀತಿಯಲ್ಲಿ ರಾಜ್ಯ ಸತ್ಯವನ್ನು ತಪ್ಪಾಗಿ ಪ್ರತಿನಿಧಿಸಿದವು?
14 “ರಾಜ್ಯ” ಎಂಬ ಪದದ ಅರ್ಥನಿರೂಪಣೆಯಲ್ಲಿ ಮಾಡಲ್ಪಟ್ಟಿರುವ ತಪ್ಪನ್ನೂ ಪರಿಗಣಿಸಿರಿ. 20ನೆಯ ಶತಮಾನದ ಅರ್ಥವಿವರಣೆಯಲ್ಲಿ ದೇವರ ರಾಜ್ಯ (ಇಂಗ್ಲಿಷ್) ಎಂಬ ಪುಸ್ತಕವು ಹೀಗೆ ತಿಳಿಸುತ್ತದೆ: “ಆರಿಗನ್ [ಮೂರನೆಯ ಶತಮಾನದ ದೇವತಾಶಾಸ್ತ್ರಜ್ಞ], ‘ರಾಜ್ಯ’ ಎಂಬ ಪದದ ಕ್ರೈಸ್ತ ಪ್ರಯೋಗವನ್ನು ಹೃದಯದಲ್ಲಿ ದೇವರ ಆಳ್ವಿಕೆ ಎಂಬ ಆಂತರಿಕ ಅರ್ಥಕ್ಕೆ ಬದಲಾಯಿಸುತ್ತಾನೆ.” ಆರಿಗನ್ ತನ್ನ ಬೋಧನೆಯನ್ನು ಯಾವುದರ ಮೇಲಾಧಾರಿಸಿದನು? ಶಾಸ್ತ್ರವಚನಗಳ ಮೇಲಲ್ಲ, ಬದಲಾಗಿ “ತತ್ತ್ವಜ್ಞಾನದ ಚೌಕಟ್ಟಿನ ಮೇಲೆ ಮತ್ತು ಲೌಕಿಕ ದೃಷ್ಟಿಕೋನದ ಮೇಲಾಧಾರಿಸಿದನು; ಇದು ಯೇಸುವಿನ ಹಾಗೂ ಆರಂಭದ ಚರ್ಚಿನ ಆಲೋಚನೆಗೆ ತದ್ವಿರುದ್ಧವಾದದ್ದಾಗಿತ್ತು.” ಚರ್ಚು ತಾನೇ ದೇವರ ರಾಜ್ಯವಾಗಿದೆ ಎಂದು ಡೇ ಕೀವಿಟಾಟೆ ಡೀಈ (ದೇವರ ನಗರ) ಎಂಬ ತನ್ನ ಕೃತಿಯಲ್ಲಿ ಹಿಪ್ಪೋದ ಅಗಸ್ಟಿನ್ (ಸಾ.ಶ. 354-430) ತಿಳಿಸಿದನು. ಇಂಥ ಅಶಾಸ್ತ್ರೀಯ ಆಲೋಚನೆಯು, ರಾಜಕೀಯ ಅಧಿಕಾರವನ್ನು ಗಿಟ್ಟಿಸಿಕೊಳ್ಳಲಿಕ್ಕಾಗಿ ಕ್ರೈಸ್ತಪ್ರಪಂಚದ ಚರ್ಚುಗಳಿಗೆ ದೇವತಾಶಾಸ್ತ್ರೀಯ ಆಧಾರಗಳನ್ನು ನೀಡಿತು. ಮತ್ತು ಅವು ಅನೇಕ ಶತಮಾನಗಳ ವರೆಗೆ ಇಂಥ ಅಧಿಕಾರವನ್ನು ತೋರಿಸಿದವು—ಅನೇಕವೇಳೆ ಪಾಶವೀಯ ರೀತಿಯಲ್ಲಿ ಕ್ರಿಯೆಗೈದವು.—ಪ್ರಕಟನೆ 17:5, 18.
15. ಕ್ರೈಸ್ತಪ್ರಪಂಚದ ಅನೇಕ ಚರ್ಚುಗಳ ವಿಷಯದಲ್ಲಿ ಗಲಾತ್ಯ 6:7 ಹೇಗೆ ನೆರವೇರಿಕೆಯನ್ನು ಪಡೆದಿದೆ?
15 ಆದರೂ, ಇಂದು ಚರ್ಚುಗಳು ಅವು ಏನನ್ನು ಬಿತ್ತಿವೆಯೋ ಅದರ ಫಲವನ್ನು ಕೊಯ್ಯುತ್ತಿವೆ. (ಗಲಾತ್ಯ 6:7) ಅನೇಕರು ತಮ್ಮ ಅಧಿಕಾರವನ್ನು ಹಾಗೂ ತಮ್ಮ ಚರ್ಚಿನ ಜನರನ್ನು ಕಳೆದುಕೊಳ್ಳುತ್ತಿದ್ದಾರೆ. ಇಂಥ ಪ್ರವೃತ್ತಿಯು ಯೂರೋಪಿನಲ್ಲಿ ತುಂಬ ಗಮನಾರ್ಹವಾಗಿ ಕಂಡುಬರುತ್ತಿದೆ. ಇಂದು ಕ್ರೈಸ್ತಧರ್ಮ (ಇಂಗ್ಲಿಷ್) ಎಂಬ ಪತ್ರಿಕೆಗನುಸಾರ, “ಈಗ ಯೂರೋಪಿನ ದೊಡ್ಡ ದೊಡ್ಡ ಚರ್ಚುಗಳು ಆರಾಧನೆಯ ಸ್ಥಳಗಳಾಗಿ ಅಲ್ಲ ಬದಲಾಗಿ ವಸ್ತುಪ್ರದರ್ಶನಾಲಯಗಳಾಗಿ ಕಾರ್ಯನಡಿಸುತ್ತಿವೆ, ಪ್ರವಾಸಿಗರು ಮಾತ್ರ ಇವುಗಳಿಗೆ ಭೇಟಿನೀಡುತ್ತಾರೆ.” ಲೋಕದ ಇನ್ನಿತರ ಭಾಗಗಳಲ್ಲಿಯೂ ಇದೇ ಪ್ರವೃತ್ತಿಯನ್ನು ಗಮನಿಸಸಾಧ್ಯವಿದೆ. ಇದು ಸುಳ್ಳುಧರ್ಮದ ವಿಷಯದಲ್ಲಿ ಏನನ್ನು ಸೂಚಿಸುತ್ತದೆ? ಇದು ಬೆಂಬಲದ ಕೊರತೆಯಿಂದಾಗಿ ಇನ್ನಿಲ್ಲವಾಗುತ್ತದೋ? ಮತ್ತು ಸತ್ಯ ಆರಾಧನೆಯು ಹೇಗೆ ಬಾಧಿಸಲ್ಪಡುವುದು?
ದೇವರ ಮಹಾ ದಿನಕ್ಕಾಗಿ ಸಿದ್ಧರಾಗಿರಿ
16. ಮಹಾ ಬಾಬೆಲಿನ ಕಡೆಗೆ ಬೆಳೆಯುತ್ತಿರುವ ಹಗೆತನವು ಏಕೆ ಗಮನಾರ್ಹವಾದದ್ದಾಗಿದೆ?
16 ಸ್ವಲ್ಪ ಸಮಯದಿಂದ ಸುಪ್ತವಾಗಿದ್ದ ಒಂದು ಜ್ವಾಲಾಮುಖಿಯಿಂದ ಹೊರಚಿಮ್ಮುತ್ತಿರುವಂಥ ಹೊಗೆಯೂ ಬೂದಿಯೂ ಸನ್ನಿಹಿತವಾಗಿರುವ ಸ್ಫೋಟದ ಮುನ್ಸೂಚನೆಯನ್ನು ನೀಡುವಂತೆಯೇ, ಲೋಕದ ಅನೇಕ ಭಾಗಗಳಲ್ಲಿ ಧರ್ಮದ ಕಡೆಗೆ ಹೆಚ್ಚುತ್ತಿರುವ ಹಗೆತನವು ಸುಳ್ಳುಧರ್ಮವು ಅತಿ ಬೇಗನೆ ಕೊನೆಗೊಳ್ಳಲಿದೆ ಎಂಬುದರ ಸೂಚನೆಯಾಗಿದೆ. ಬೇಗನೆ, ಆಧ್ಯಾತ್ಮಿಕ ವೇಶ್ಯೆಯಾಗಿರುವ ಮಹಾ ಬಾಬೆಲನ್ನು ಬಯಲುಪಡಿಸುವ ಮತ್ತು ಧ್ವಂಸಗೊಳಿಸುವ ಪ್ರಯತ್ನದಲ್ಲಿ ಲೋಕದ ರಾಜಕೀಯ ಘಟಕಗಳು ಐಕ್ಯಗೊಳ್ಳುವಂತೆ ಯೆಹೋವನು ಮಾಡುವನು. (ಪ್ರಕಟನೆ 17:15-17; 18:21) ಈ ಘಟನೆಗೆ ಮತ್ತು ಇದರ ನಂತರ ಸಂಭವಿಸಲಿರುವ ಮಹಾ “ಸಂಕಟ”ದ ಇತರ ಅಂಶಗಳಿಗೆ ನಿಜ ಕ್ರೈಸ್ತರು ಹೆದರಬೇಕೊ? (ಮತ್ತಾಯ 24:21) ಖಂಡಿತವಾಗಿಯೂ ಇಲ್ಲ! ವಾಸ್ತವದಲ್ಲಿ ದೇವರು ದುಷ್ಟರ ವಿರುದ್ಧ ಕ್ರಿಯೆಗೈಯುವಾಗ ಅವರಿಗೆ ಹರ್ಷಿಸಲು ಕಾರಣಗಳಿರುವವು. (ಪ್ರಕಟನೆ 18:20; 19:1, 2) ಪ್ರಥಮ ಶತಮಾನದ ಯೆರೂಸಲೇಮ್ ಮತ್ತು ಅಲ್ಲಿ ವಾಸಿಸುತ್ತಿದ್ದ ಕ್ರೈಸ್ತರ ಉದಾಹರಣೆಯನ್ನು ಪರಿಗಣಿಸಿರಿ.
17. ಯೆಹೋವನ ನಂಬಿಗಸ್ತ ಸೇವಕರು ಈ ವ್ಯವಸ್ಥೆಯ ಅಂತ್ಯವನ್ನು ಏಕೆ ದೃಢವಿಶ್ವಾಸದಿಂದ ಎದುರಿಸಬಲ್ಲರು?
17 ಸಾ.ಶ. 66ರಲ್ಲಿ ರೋಮನ್ ಸೇನೆಗಳು ಯೆರೂಸಲೇಮನ್ನು ಮುತ್ತಿಗೆಹಾಕಿದಾಗ, ಆಧ್ಯಾತ್ಮಿಕವಾಗಿ ಎಚ್ಚರವಾಗಿದ್ದ ಕ್ರೈಸ್ತರಿಗೆ ಇದು ಆಘಾತವನ್ನು ಉಂಟುಮಾಡಲಿಲ್ಲ ಅಥವಾ ಅವರು ಭಯಪಡಲೂ ಇಲ್ಲ. ಅವರು ದೇವರ ವಾಕ್ಯದ ಶ್ರದ್ಧಾಪೂರ್ವಕ ವಿದ್ಯಾರ್ಥಿಗಳಾಗಿದ್ದುದರಿಂದ, ‘ಅದು ಹಾಳಾಗುವ ಕಾಲ ಸಮೀಪವಾಯಿತು’ ಎಂಬುದು ಅವರಿಗೆ ತಿಳಿದಿತ್ತು. (ಲೂಕ 21:20) ಸುರಕ್ಷಿತ ಸ್ಥಳಕ್ಕೆ ಪಲಾಯನಗೈಯಲಿಕ್ಕಾಗಿ ದೇವರು ತಮಗಾಗಿ ಮಾರ್ಗವನ್ನು ತೆರೆಯುತ್ತಾನೆ ಎಂಬುದು ಸಹ ಅವರಿಗೆ ಗೊತ್ತಿತ್ತು. ಹೀಗೆ ಸಂಭವಿಸಿದಾಗ ಕ್ರೈಸ್ತರು ಪಲಾಯನಗೈದರು. (ದಾನಿಯೇಲ 9:26; ಮತ್ತಾಯ 24:15-19; ಲೂಕ 21:21) ತದ್ರೀತಿಯಲ್ಲಿ ಇಂದು ದೇವರನ್ನು ತಿಳಿದುಕೊಂಡು ಆತನ ಮಗನಿಗೆ ವಿಧೇಯರಾಗುವವರು ಈ ವ್ಯವಸ್ಥೆಯ ಅಂತ್ಯವನ್ನು ದೃಢವಿಶ್ವಾಸದಿಂದ ಎದುರಿಸಬಲ್ಲರು. (2 ಥೆಸಲೊನೀಕ 1:6-9) ವಾಸ್ತವದಲ್ಲಿ, ಮಹಾ ಸಂಕಟವು ಬಂದೆರಗುವಾಗ ಅವರು ಹರ್ಷಾನಂದದಿಂದ ‘ಮೇಲಕ್ಕೆ ನೋಡುವರು ಮತ್ತು ತಮ್ಮ ತಲೆಯನ್ನು ಎತ್ತುವರು, ಏಕೆಂದರೆ ತಮ್ಮ ಬಿಡುಗಡೆಯು ಸಮೀಪವಾಗಿದೆ ಎಂಬುದು ಅವರಿಗೆ ಗೊತ್ತಿದೆ.’—ಲೂಕ 21:28.
18. ಗೋಗನು ಯೆಹೋವನ ಸೇವಕರ ಮೇಲೆ ಅಂತಿಮವಾದ ನೇರ ಆಕ್ರಮಣವನ್ನು ಮಾಡುವುದರ ಫಲಿತಾಂಶವೇನಾಗಿರುವುದು?
18 ಮಹಾ ಬಾಬೆಲಿನ ನಾಶದ ಬಳಿಕ, ಸೈತಾನನು ಮಾಗೋಗ್ ದೇಶದ ಗೋಗನಾಗಿ ವಹಿಸುವ ಪಾತ್ರದಲ್ಲಿ ಯೆಹೋವನ ಶಾಂತಿಭರಿತ ಸಾಕ್ಷಿಗಳ ವಿರುದ್ಧ ಅಂತಿಮವಾದ ನೇರ ಆಕ್ರಮಣವನ್ನು ಮಾಡುವನು. ‘ಕಾರ್ಮುಗಿಲಿನೋಪಾದಿಯಲ್ಲಿ ದೇಶವನ್ನು ಮುಚ್ಚಿಬಿಡಲಿಕ್ಕಾಗಿ’ ಬರುತ್ತಿರುವ ಗೋಗನ ತಂಡವು ಸುಲಭವಾದ ಜಯವನ್ನು ನಿರೀಕ್ಷಿಸುವುದು. ಆದರೆ ಅವರಿಗೆ ಎಂಥ ಆಘಾತವು ಕಾದಿದೆ! (ಯೆಹೆಜ್ಕೇಲ 38:14-16, 18-23) ಅಪೊಸ್ತಲ ಯೋಹಾನನು ಬರೆಯುವುದು: “ಪರಲೋಕವು ತೆರೆದಿರುವದನ್ನು ನಾನು ಕಂಡೆನು. ಆಗ ಇಗೋ, ಬಿಳೀ ಕುದುರೆಯು ನನಗೆ ಕಾಣಿಸಿತು; ಅದರ ಮೇಲೆ ಕೂತಿದ್ದವನಿಗೆ ನಂಬಿಗಸ್ತನೂ ಸತ್ಯವಂತನೂ ಎಂದು ಹೆಸರು. . . . ಜನಾಂಗಗಳನ್ನು ಹೊಡೆಯುವದಕ್ಕಾಗಿ ಹದವಾದ ಕತ್ತಿಯು ಆತನ ಬಾಯಿಂದ ಬರುತ್ತದೆ.” ಈ ಅಜೇಯ “ರಾಜಾಧಿರಾಜನು” ಯೆಹೋವನ ನಿಷ್ಠಾವಂತ ಆರಾಧಕರನ್ನು ಕಾಪಾಡುವನು ಮತ್ತು ಅವರ ಶತ್ರುಗಳನ್ನೆಲ್ಲಾ ಸಂಪೂರ್ಣವಾಗಿ ಸಂಹರಿಸಿಬಿಡುವನು. (ಪ್ರಕಟನೆ 19:11-21) ಇದು ರೂಪಾಂತರ ದರ್ಶನದ ನೆರವೇರಿಕೆಯ ಎಂಥ ಒಂದು ಪರಮಾವಧಿಯಾಗಿರುವುದು!
19. ಕ್ರಿಸ್ತನ ಸಂಪೂರ್ಣ ವಿಜಯವು ಅವನ ನಿಷ್ಠಾವಂತ ಶಿಷ್ಯರ ಮೇಲೆ ಹೇಗೆ ಪ್ರಭಾವ ಬೀರುವುದು, ಮತ್ತು ಅವರು ಈಗ ಏನು ಮಾಡಲು ಪ್ರಯತ್ನಿಸಬೇಕು?
19 ಯೇಸು “ಆ ದಿನದಲ್ಲಿ . . . ನಂಬಿದವರೆಲ್ಲರ ಮೂಲಕ ತನ್ನ ವಿಷಯದಲ್ಲಿ ಆಶ್ಚರ್ಯ ಹುಟ್ಟಿಸುವವನಾಗಿ” ಪರಿಗಣಿಸಲ್ಪಡುವನು. (2 ಥೆಸಲೊನೀಕ 1:9) ದೇವಕುಮಾರನು ಜಯಶಾಲಿಯಾಗಿ ಬರುವಾಗ ಅವನಿಗೆ ಭಯಭಕ್ತಿಯನ್ನು ತೋರಿಸುವವರ ನಡುವೆ ನೀವಿರಲು ಬಯಸುತ್ತೀರೋ? ಹಾಗಿರುವಲ್ಲಿ ನಿಮ್ಮ ನಂಬಿಕೆಯನ್ನು ಪೋಷಿಸುತ್ತಾ ಮುಂದುವರಿಯಿರಿ ಮತ್ತು ‘ಸದಾ ಸಿದ್ಧವಾಗಿರಿ, ಏಕೆಂದರೆ ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.’—ಮತ್ತಾಯ 24:43, 44.
ಸ್ವಸ್ಥಚಿತ್ತರಾಗಿರಿ
20. (ಎ) “ನಂಬಿಗಸ್ತನೂ ವಿವೇಕಿಯೂ ಆದಂಥ ಆಳ”ನ್ನು ದೇವರು ಒದಗಿಸಿರುವುದಕ್ಕಾಗಿ ನಾವು ಹೇಗೆ ಗಣ್ಯತೆಯನ್ನು ತೋರಿಸಸಾಧ್ಯವಿದೆ? (ಬಿ) ನಾವು ಸ್ವತಃ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?
20 ಆಧ್ಯಾತ್ಮಿಕವಾಗಿ ಎಚ್ಚರವಾಗಿರುವಂತೆ ಮತ್ತು ಸ್ವಸ್ಥಚಿತ್ತರಾಗಿರುವಂತೆ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಕ್ರಮವಾಗಿ ದೇವಜನರನ್ನು ಉತ್ತೇಜಿಸುತ್ತದೆ. (ಮತ್ತಾಯ 24:45, 46; 1 ಥೆಸಲೊನೀಕ 5:6) ಈ ಸಮಯೋಚಿತ ಜ್ಞಾಪನಗಳನ್ನು ನೀವು ಗಣ್ಯಮಾಡುತ್ತೀರೋ? ಜೀವನದಲ್ಲಿ ಆದ್ಯತೆಗಳನ್ನು ಇಡಲಿಕ್ಕಾಗಿ ನೀವು ಅವುಗಳನ್ನು ಉಪಯೋಗಿಸುತ್ತೀರೋ? ಸ್ವತಃ ಹೀಗೇಕೆ ಕೇಳಿಕೊಳ್ಳಬಾರದು: ‘ನಾನು ಸ್ವರ್ಗದಲ್ಲಿ ಆಳುತ್ತಿರುವ ದೇವಕುಮಾರನನ್ನು ನೋಡಲು ಶಕ್ತನಾಗುವಷ್ಟು ಸರಿಯಾದ ಆಧ್ಯಾತ್ಮಿಕ ದೃಷ್ಟಿಯು ನನಗಿದೆಯೋ? ಯೇಸುವು ಮಹಾ ಬಾಬೆಲ್ ಮತ್ತು ಸೈತಾನನ ವ್ಯವಸ್ಥೆಯ ಉಳಿದ ಭಾಗದ ವಿರುದ್ಧ ದೈವಿಕ ನ್ಯಾಯತೀರ್ಪನ್ನು ವಿಧಿಸಲು ಸಿದ್ಧನಾಗಿದ್ದಾನೆ ಎಂಬುದನ್ನು ನಾನು ವಿವೇಚಿಸಿ ತಿಳಿದುಕೊಂಡಿದ್ದೇನೋ?’
21. ಕೆಲವರು ತಮ್ಮ ಆಧ್ಯಾತ್ಮಿಕ ದೃಷ್ಟಿಯು ಮೊಬ್ಬಾಗುವಂತೆ ಬಿಟ್ಟಿರಲು ಕಾರಣವೇನಾಗಿರಬಹುದು, ಮತ್ತು ಅವರು ಏನು ಮಾಡುವುದು ಬಹಳ ತುರ್ತಿನದ್ದಾಗಿದೆ?
21 ಯೆಹೋವನ ಜನರೊಂದಿಗೆ ಸಹವಾಸಿಸುತ್ತಿರುವ ಕೆಲವರು ಈಗ ತಮ್ಮ ಆಧ್ಯಾತ್ಮಿಕ ದೃಷ್ಟಿಯು ಮೊಬ್ಬಾಗುವಂತೆ ಬಿಟ್ಟಿದ್ದಾರೆ. ಯೇಸುವಿನ ಆರಂಭದ ಶಿಷ್ಯರಲ್ಲಿ ಕೆಲವರಂತೆ ಇವರಿಗೂ ಸಹನೆ ಅಥವಾ ತಾಳ್ಮೆಯ ಕೊರತೆಯೇ ಇದಕ್ಕೆ ಕಾರಣವಾಗಿರಸಾಧ್ಯವಿದೆಯೋ? ಜೀವನದ ಚಿಂತೆಗಳು, ಪ್ರಾಪಂಚಿಕತೆ ಅಥವಾ ಹಿಂಸೆಯು ಅವರ ಮೇಲೆ ಪರಿಣಾಮ ಬೀರಿದೆಯೋ? (ಮತ್ತಾಯ 13:3-8, 18-23; ಲೂಕ 21:34-36) ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನಿಂದ’ ಪ್ರಕಟಿಸಲ್ಪಟ್ಟಿರುವ ನಿರ್ದಿಷ್ಟ ಮಾಹಿತಿಯನ್ನು ಕೆಲವರು ಅರ್ಥಮಾಡಿಕೊಳ್ಳಲು ಕಷ್ಟಕರವಾದದ್ದಾಗಿ ಕಂಡುಕೊಂಡಿರಬಹುದು. ಇವುಗಳಲ್ಲಿ ಯಾವುದಾದರೂ ನಿಮ್ಮ ಮೇಲೆ ಪ್ರಭಾವ ಬೀರಿರುವಲ್ಲಿ, ನವೀಕೃತ ಹುರುಪಿನಿಂದ ದೇವರ ವಾಕ್ಯವನ್ನು ಅಧ್ಯಯನಮಾಡುವಂತೆ ಮತ್ತು ಯೆಹೋವನೊಂದಿಗೆ ಬಲವಾದ ಹಾಗೂ ನಿಕಟವಾದ ಸಂಬಂಧವನ್ನು ಪುನಃ ಪಡೆದುಕೊಳ್ಳಲಿಕ್ಕಾಗಿ ಆತನಿಗೆ ಪ್ರಾರ್ಥಿಸುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.—2 ಪೇತ್ರ 3:11-15.
22. ರೂಪಾಂತರದ ದರ್ಶನ ಹಾಗೂ ಅದಕ್ಕೆ ಸಂಬಂಧಿಸಿದ ಪ್ರವಾದನೆಗಳ ಕುರಿತಾದ ಪರಿಗಣನೆಯು ನಿಮ್ಮ ಮೇಲೆ ಹೇಗೆ ಪ್ರಭಾವ ಬೀರಿದೆ?
22 ಯೇಸುವಿನ ಶಿಷ್ಯರಿಗೆ ಉತ್ತೇಜನದ ಅಗತ್ಯವಿದ್ದಾಗ ರೂಪಾಂತರದ ದರ್ಶನವು ಕೊಡಲ್ಪಟ್ಟಿತು. ಇಂದು, ನಮ್ಮನ್ನು ಬಲಪಡಿಸಲು ಅದಕ್ಕಿಂತಲೂ ಎಷ್ಟೋ ಮಿಗಿಲಾದದ್ದು ನಮಗಿದೆ; ಆ ನಯನಮನೋಹರ ಮುನ್ನೋಟ ಹಾಗೂ ಅದಕ್ಕೆ ಸಂಬಂಧಿಸಿದ ಅನೇಕ ಪ್ರವಾದನೆಗಳ ನೆರವೇರಿಕೆಯೇ ಅದಾಗಿದೆ. ಈ ಮಹಿಮಾನ್ವಿತ ವಾಸ್ತವಿಕತೆಗಳ ಕುರಿತು ಮತ್ತು ಅವುಗಳ ಭಾವೀ ಅರ್ಥಗರ್ಭಿತತೆಯ ಕುರಿತು ನಾವು ಧ್ಯಾನಿಸುವಾಗ, ನಾವು ಸಹ ನಮ್ಮ ಪೂರ್ಣ ಹೃದಯದಿಂದ ಅಪೊಸ್ತಲ ಯೋಹಾನನ ಭಾವನೆಗಳನ್ನೇ ವ್ಯಕ್ತಪಡಿಸುವಂತಾಗಲಿ. ಅವನು ಹೇಳಿದ್ದು: “ಹಾಗೆಯೇ ಆಗಲಿ; ಕರ್ತನಾದ ಯೇಸುವೇ, ಬಾ.”—ಪ್ರಕಟನೆ 22:20.
[ಪಾದಟಿಪ್ಪಣಿಗಳು]
a Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.
b ಪ್ರಸವವೇದನೆಯಂತೆ, ಲೋಕದ ಸಮಸ್ಯೆಗಳ ಸಂಭವ ಪ್ರಮಾಣ, ತೀವ್ರತೆ ಹಾಗೂ ಕಾಲಾವಧಿಗಳು ಅಧಿಕಗೊಳ್ಳುತ್ತಲೇ ಹೋಗುವವು ಮತ್ತು ಮಹಾ ಸಂಕಟದಲ್ಲಿ ಪರಮಾವಧಿಗೇರುವವು ಎಂಬುದನ್ನು ಇದು ಸೂಚಿಸುತ್ತದೆ.
ಜ್ಞಾಪಿಸಿಕೊಳ್ಳಬಲ್ಲಿರೋ?
• ಇಸವಿ 1870ಗಳಲ್ಲಿ, ಬೈಬಲ್ ವಿದ್ಯಾರ್ಥಿಗಳ ಒಂದು ಚಿಕ್ಕ ಗುಂಪು ಕ್ರಿಸ್ತನ ಹಿಂದಿರುಗುವಿಕೆಯ ವಿಷಯದಲ್ಲಿ ಏನನ್ನು ಅರ್ಥಮಾಡಿಕೊಂಡಿತು?
• ರೂಪಾಂತರದ ದರ್ಶನವು ಹೇಗೆ ನೆರವೇರಿಸಲ್ಪಟ್ಟಿದೆ?
• ಯೇಸುವಿನ ಜಯದ ಸವಾರಿಯು ಲೋಕದ ಮೇಲೆ ಮತ್ತು ಕ್ರೈಸ್ತ ಸಭೆಯ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ?
• ಯೇಸು ತನ್ನ ಜಯವನ್ನು ಪೂರ್ಣಗೊಳಿಸುವಾಗ ಪಾರಾಗುವವರ ನಡುವೆ ಇರಲಿಕ್ಕಾಗಿ ನಾವೇನು ಮಾಡತಕ್ಕದ್ದು?
[ಪುಟ 16, 17ರಲ್ಲಿರುವ ಚಿತ್ರಗಳು]
ಒಂದು ಮುನ್ನೋಟವು ವಾಸ್ತವಿಕತೆಯಾಗಿ ಪರಿಣಮಿಸುತ್ತದೆ
[ಪುಟ 18ರಲ್ಲಿರುವ ಚಿತ್ರಗಳು]
ಕ್ರಿಸ್ತನು ಜಯಿಸಲು ಆರಂಭಿಸಿದಾಗ ಏನು ಸಂಭವಿಸಿತು ಎಂಬುದು ನಿಮಗೆ ಗೊತ್ತೋ?