ಇವು ನಿಜವಾಗಿ ಕಡೇ ದಿವಸಗಳೊ?
ದೋಣಿಯೊಂದು ನದಿಯ ಬಿರುಸಾದ ಭಾಗವನ್ನು ಪ್ರವೇಶಿಸಿದಂತೆ, ನೀವು ಅದರ ಮುಂಭಾಗದಲ್ಲಿದ್ದೀರಿ. ಬಹು ದೊಡ್ಡ ಬಂಡೆಗಳು, ನೊರೆ ಹಾಗೂ ತುಂತುರದ ಕಿರುಜಲಪಾತಗಳನ್ನು ಭೇದಿಸಿ ಕಾಣಿಸಿಕೊಳ್ಳುತ್ತವೆ. ಬಂಡೆಗಳಿಂದ ದೂರ ಸರಿಯಲು ನೀವು ಪ್ರಯತ್ನಿಸುತ್ತೀರಿ. ನಿಮ್ಮ ಹಿಂದುಗಡೆ ಇರುವ ವ್ಯಕ್ತಿಯು, ದೋಣಿಯನ್ನು ನಡಸಲು ಸಹಾಯ ಮಾಡಬೇಕಾದರೂ, ಅವನಿಗೆ ಕೊಂಚವೇ ಅನುಭವವಿದೆ. ನಿಮ್ಮಲ್ಲಿ ನಕ್ಷೆಯಿಲ್ಲದಿರುವುದು ಪರಿಸ್ಥಿತಿಯನ್ನು ಇನ್ನೂ ಹದಗೆಡಿಸುತ್ತದೆ. ಆ ಕಾರಣ, ಈ ರಭಸದ ಪ್ರವಾಹಗಳು ಒಂದು ಪ್ರಶಾಂತವಾದ ಕೊಳದಲ್ಲಿ ಕೊನೆಗೊಳ್ಳುವವೊ ಇಲ್ಲವೆ ಜಲಪಾತದಲ್ಲಿ ಕೊನೆಗೊಳ್ಳುವವೊ ಎಂಬುದು ನಿಮಗೆ ತಿಳಿಯದು.
ಇದೊಂದು ಮನೋಹರವಾದ ಚಿತ್ರಣವಾಗಿಲ್ಲ, ಅಲ್ಲವೆ? ಆದುದರಿಂದ ನಾವು ಅದನ್ನು ಬದಲಾಯಿಸೋಣ. ನಿಮ್ಮೊಂದಿಗೆ, ಈ ನದಿಯ ಕುರಿತು ಸಕಲವನ್ನೂ ಬಲ್ಲವನಾದ ಒಬ್ಬ ಅನುಭವಸ್ಥ ಮಾರ್ಗದರ್ಶಿ ಇದ್ದಾನೆಂದು ಭಾವಿಸಿಕೊಳ್ಳಿ. ಈ ನೊರೆತುಂಬಿದ ನೀರು ಸಮೀಪಿಸುತ್ತದೆ ಎಂದು ಅವನಿಗೆ ಮುಂಚಿತವಾಗಿಯೇ ತಿಳಿದಿತ್ತು. ಅದು ಎಲ್ಲಿಗೆ ಹೋಗಿ ಸೇರುವುದೆಂದೂ ಅದರೊಳಗಿಂದ ತನ್ನ ಮಾರ್ಗವನ್ನು ನಿರ್ವಹಿಸುವುದು ಹೇಗೆಂದೂ ಅವನಿಗೆ ತಿಳಿದಿದೆ. ನಿಮಗೆ ಮತ್ತಷ್ಟೂ ಹೆಚ್ಚು ಸುರಕ್ಷಿತವಾಗಿರುವ ಅನಿಸಿಕೆಯಾಗದೊ?
ನಿಜವಾಗಿಯೂ, ನಾವೆಲ್ಲರೂ ತದ್ರೀತಿಯ ಬಿಕ್ಕಟ್ಟಿನಲ್ಲಿದ್ದೇವೆ. ನಾವು ನಮ್ಮನ್ನು—ಅದು ನಮ್ಮ ಸ್ವಂತ ತಪ್ಪಾಗಿರದಿದ್ದರೂ—ಮಾನವ ಇತಿಹಾಸದ ಒಂದು ಕಠಿನ ಸಮಯದಲ್ಲಿ ಕಂಡುಕೊಳ್ಳುತ್ತೇವೆ. ಸನ್ನಿವೇಶವು ಎಷ್ಟು ಸಮಯದ ವರೆಗೆ ಹೀಗಿರುವುದು, ಪರಿಸ್ಥಿತಿಗಳು ಉತ್ತಮಗೊಳ್ಳುವವೊ ಇಲ್ಲವೊ, ಅಥವಾ ಈ ನಡುವೆ ಬದುಕಿ ಉಳಿಯುವುದು ಹೇಗೆಂಬ ವಿಷಯದಲ್ಲಿ ಹೆಚ್ಚಿನ ಜನರಿಗೆ ಯಾವ ಕಲ್ಪನೆಯೂ ಇರುವುದಿಲ್ಲ. ಆದರೆ ನಮಗೆ, ದಿಗ್ಭ್ರಾಂತರಾಗಿರುವ ಇಲ್ಲವೆ ಅಸಹಾಯಕರಾಗಿರುವ ಅನಿಸಿಕೆ ಆಗುವ ಅಗತ್ಯವಿಲ್ಲ. ನಮ್ಮ ಸೃಷ್ಟಿಕರ್ತನು ನಮಗೊಂದು ಮಾರ್ಗದರ್ಶಿಯನ್ನು ಒದಗಿಸಿದ್ದಾನೆ. ಅದು, ಇತಿಹಾಸದ ಈ ಭೀಕರ ಸಮಯಾವಧಿಯನ್ನು ಮುಂತಿಳಿಸಿದ, ಅದು ಹೇಗೆ ಕೊನೆಗೊಳ್ಳುವುದೆಂದು ಭವಿಷ್ಯನುಡಿದ, ಮತ್ತು ಬದುಕಿ ಉಳಿಯುವ ಸಲುವಾಗಿ ನಮಗೆ ಬೇಕಾದ ಮಾರ್ಗದರ್ಶನವನ್ನು ನೀಡುವ ಮಾರ್ಗದರ್ಶಿಯಾಗಿದೆ. ಆ ಮಾರ್ಗದರ್ಶಿಯು, ಒಂದು ಪುಸ್ತಕದ ರೂಪದಲ್ಲಿರುವ ಬೈಬಲ್ ಆಗಿದೆ. ಅದರ ಗ್ರಂಥಕರ್ತನಾದ ಯೆಹೋವ ದೇವರು, ತನ್ನನ್ನು ಮಹಾ ಉಪದೇಶಕನೆಂದು ಕರೆದುಕೊಳ್ಳುತ್ತಾನೆ ಮತ್ತು ಯೆಶಾಯನ ಮುಖಾಂತರ ಆಶ್ವಾಸನೆ ನೀಡುತ್ತಾ ಆತನಂದದ್ದು: “ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು.” (ಯೆಶಾಯ 30:20, 21) ಇಂತಹ ಮಾರ್ಗದರ್ಶನವನ್ನು ನೀವು ಸ್ವೀಕರಿಸುವಿರೊ? ಹಾಗಾದರೆ, ನಮ್ಮ ದಿವಸಗಳು ಹೇಗಿರುವವೆಂದು ಬೈಬಲು ನಿಜವಾಗಿಯೂ ಮುಂತಿಳಿಸಿತೊ ಇಲ್ಲವೊ ಎಂಬ ವಿಷಯವನ್ನು ನಾವು ಪರಿಗಣಿಸೋಣ.
ಯೇಸುವಿನ ಹಿಂಬಾಲಕರು ಒಂದು ಅರ್ಥಭರಿತ ಪ್ರಶ್ನೆಯನ್ನು ಕೇಳುತ್ತಾರೆ
ಯೇಸುವಿನ ಹಿಂಬಾಲಕರು ಆಶ್ಚರ್ಯಚಕಿತರಾಗಿದ್ದಿರಬೇಕು. ಯೆರೂಸಲೇಮಿನ ಭಾವೋತ್ಪಾದಕ ದೇವಾಲಯದ ಕಟ್ಟಡಗಳು ಸಂಪೂರ್ಣವಾಗಿ ನಾಶವಾಗಲಿದ್ದವೆಂದು ಯೇಸು ಅವರಿಗೆ ಆಗ ತಾನೆ ಸ್ಪಷ್ಟವಾಗಿ ಹೇಳಿದ್ದನು! ಅಂತಹ ಒಂದು ಭವಿಷ್ಯನುಡಿಯು ಬೆರಗುಗೊಳಿಸುವಂತಹದ್ದಾಗಿತ್ತು. ಇದಾದ ಸ್ವಲ್ಪದರಲ್ಲಿಯೇ, ಅವರು ಎಣ್ಣೆಯ ಮರಗಳ ಗುಡ್ಡದ ಮೇಲೆ ಕುಳಿತುಕೊಂಡಾಗ, ಶಿಷ್ಯರಲ್ಲಿ ನಾಲ್ವರು ಯೇಸುವನ್ನು ಕೇಳಿದ್ದು: “ಅದು ಯಾವಾಗ ಆಗುವದು? ನೀನು ಪ್ರತ್ಯಕ್ಷ [“ಸಾನ್ನಿಧ್ಯ,” NW]ನಾಗುವದಕ್ಕೂ ಯುಗದ [“ವಿಷಯಗಳ ವ್ಯವಸ್ಥೆ,” NW] ಸಮಾಪ್ತಿಗೂ ಸೂಚನೆಯೇನು? ನಮಗೆ ಹೇಳು.” (ಮತ್ತಾಯ 24:3; ಮಾರ್ಕ 13:1-4) ಅವರು ಈ ವಿಷಯವನ್ನು ಗ್ರಹಿಸಿದರೊ ಇಲ್ಲವೊ, ಯೇಸುವಿನ ಉತ್ತರಕ್ಕೆ ಬಹು ಅಂಶಗಳುಳ್ಳ ಅನ್ವಯವಿರಲಿತ್ತು.
ಯೆರೂಸಲೇಮಿನ ದೇವಾಲಯದ ನಾಶನ ಹಾಗೂ ಯೆಹೂದಿ ವಿಷಯಗಳ ವ್ಯವಸ್ಥೆಯ ಅಂತ್ಯವು ಮತ್ತು ಕ್ರಿಸ್ತನ ಸಾನ್ನಿಧ್ಯ ಹಾಗೂ ಇಡೀ ಲೋಕದ ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಸಮಯವು ಒಂದೇ ಸಂಗತಿಯಾಗಿರಲಿಲ್ಲ. ಆದರೂ, ತನ್ನ ದೀರ್ಘವಾದ ಉತ್ತರದಲ್ಲಿ ಯೇಸು, ಆ ಪ್ರಶ್ನೆಯಲ್ಲಿ ಒಳಗೂಡಿರುವ ಈ ಎಲ್ಲ ವಿಷಯಾಂಶಗಳನ್ನು ಕೌಶಲಪೂರ್ಣವಾಗಿ ಸಂಬೋಧಿಸಿದನು. ಯೆರೂಸಲೇಮಿನ ನಾಶನದ ಮೊದಲು, ಸನ್ನಿವೇಶವು ಹೇಗಿರುವುದೆಂದು ಅವನು ಅವರಿಗೆ ಹೇಳಿದನು. ಮತ್ತು ಅವನ ಸಾನ್ನಿಧ್ಯದ—ಯಾವ ಸಮಯದಲ್ಲಿ ಅವನು ಸ್ವರ್ಗದಲ್ಲಿ ರಾಜನಾಗಿ ಆಳುತ್ತಿರುವನೊ ಹಾಗೂ ಇಡೀ ಲೋಕದ ವಿಷಯಗಳ ವ್ಯವಸ್ಥೆಗೆ ಅಂತ್ಯವನ್ನು ಇನ್ನೇನು ತರುವುದರಲ್ಲಿರುವನೊ, ಆ—ಸಮಯದಲ್ಲಿ ಲೋಕದ ಸನ್ನಿವೇಶವು ಹೇಗಿರುವುದೆಂದೂ ಅವನು ಅವರಿಗೆ ಹೇಳಿದನು.
ಯೆರೂಸಲೇಮಿನ ಅಂತ್ಯ
ಯೇಸು, ಯೆರೂಸಲೇಮ್ ಹಾಗೂ ಅದರ ದೇವಾಲಯದ ಕುರಿತು ಹೇಳಿದ ವಿಷಯವನ್ನು ಮೊದಲು ಪರಿಗಣಿಸಿರಿ. ಮೂರು ದಶಕಗಳಿಗಿಂತಲೂ ಹೆಚ್ಚು ಮುಂಚಿತವಾಗಿಯೇ, ಅವನು ಲೋಕದ ಅತ್ಯಂತ ದೊಡ್ಡ ನಗರಗಳಲ್ಲೊಂದರ ಮೇಲೆ ಬರಲಿರುವ ಭಯಂಕರ ಸಂಕಷ್ಟಗಳ ಒಂದು ಸಮಯವನ್ನು ಮುಂತಿಳಿಸಿದನು. ಲೂಕ 21:20, 21ರಲ್ಲಿ ದಾಖಲಿಸಲ್ಪಟ್ಟಿರುವ ಅವನ ಮಾತುಗಳನ್ನು ವಿಶೇಷವಾಗಿ ಗಮನಿಸಿರಿ: “ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವದನ್ನು ನೀವು ಕಾಣುವಾಗ ಅದು ಹಾಳಾಗುವ ಕಾಲ ಸಮೀಪವಾಯಿತೆಂದು ತಿಳುಕೊಳ್ಳಿರಿ. ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ; ಆ ಪಟ್ಟಣದಲ್ಲಿರುವವರು ಅದರೊಳಗಿಂದ ಹೊರಟುಹೋಗಲಿ; ಹಳ್ಳಿಯವರು ಅದರೊಳಕ್ಕೆ ಹೋಗದಿರಲಿ.” ಯೆರೂಸಲೇಮ್ ಸುತ್ತುವರಿಯಲ್ಪಟ್ಟಿದ್ದು, ದಂಡುಗಳಿಂದ ಮುತ್ತಿಗೆ ಹಾಕಲ್ಪಟ್ಟಿರಬೇಕಾದಲ್ಲಿ, “ಆ ಪಟ್ಟಣದಲ್ಲಿರುವವರು” ಯೇಸು ಆಜ್ಞಾಪಿಸಿದಂತೆ ಹೇಗೆ “ಹೊರಟುಹೋಗ”ಸಾಧ್ಯವಿತ್ತು? ಸದವಕಾಶದ ಬಾಗಿಲೊಂದು ತೆರೆದುಕೊಳ್ಳುವುದೆಂದು ಯೇಸು ಸೂಚಿಸುತ್ತಿದ್ದನೆಂಬುದು ಸ್ಪಷ್ಟ. ಸದವಕಾಶದ ಬಾಗಿಲೊಂದು ತೆರೆದುಕೊಂಡಿತೊ?
ಸಾ.ಶ. 66ರಲ್ಲಿ, ಸೆಸ್ಟಿಯಸ್ ಗ್ಯಾಲಸ್‌ನ ನೇತೃತ್ವದಲ್ಲಿ ರೋಮನ್ ಸೇನೆಗಳು, ಯೆಹೂದಿ ದಂಗೆಕೋರರ ದಂಡುಗಳನ್ನು ಪುನಃ ಯೆರೂಸಲೇಮಿಗೆ ಹಿಂದಕ್ಕೋಡಿಸಿ, ಆ ನಗರದಿಂದ ಕದಲದಂತೆ ಮಾಡಿದ್ದವು. ರೋಮನರು ಸ್ವತಃ ಪಟ್ಟಣದ ಮೇಲೆಯೇ ನುಗ್ಗುದಾಳಿಯನ್ನು ಮಾಡಿ, ದೇವಾಲಯದ ಗೋಡೆಯ ವರೆಗೆ ತಲಪಿದರು. ಆದರೆ ಆಗ ಗ್ಯಾಲಸ್, ನಿಜವಾಗಿಯೂ ತಬ್ಬಿಬ್ಬುಗೊಳಿಸುವ ಏನನ್ನೊ ಮಾಡುವಂತೆ ತನ್ನ ಸೇನೆಗಳಿಗೆ ನಿರ್ದೇಶನ ನೀಡಿದನು. ಅವನು ತನ್ನ ಸೇನೆಗಳಿಗೆ ಹಿಮ್ಮೆಟ್ಟುವ ಆದೇಶವನ್ನು ನೀಡಿದನು! ಹರ್ಷಭರಿತರಾದ ಯೆಹೂದಿ ಸೈನಿಕರು, ಓಡಿಹೋಗುತ್ತಿರುವ ತಮ್ಮ ರೋಮನ್ ವೈರಿಗಳನ್ನು ಬೆನ್ನಟ್ಟಿ, ಅವರಿಗೆ ಹಾನಿಯನ್ನುಂಟುಮಾಡಿದರು. ಹೀಗೆ, ಯೇಸು ಮುಂತಿಳಿಸಿದ ಸದವಕಾಶದ ಬಾಗಿಲೊಂದು ತೆರೆದುಕೊಂಡಿತು. ನಿಜ ಕ್ರೈಸ್ತರು ಅವನ ಎಚ್ಚರಿಕೆಗೆ ಲಕ್ಷ್ಯಕೊಟ್ಟು, ಯೆರೂಸಲೇಮಿನಿಂದ ಓಡಿಹೋದರು. ಇದೊಂದು ವಿವೇಕಯುತ ನಿರ್ಣಯವಾಗಿತ್ತು. ಏಕೆಂದರೆ, ಕೇವಲ ನಾಲ್ಕು ವರ್ಷಗಳ ನಂತರ, ರೋಮನ್ ಸೇನೆಗಳು ಜನರಲ್ ಟೈಟಸ್‌ನ ನೇತೃತ್ವದಲ್ಲಿ ಹಿಂದಿರುಗಿದವು. ಈ ಬಾರಿ ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇರಲಿಲ್ಲ.
ರೋಮನ್ ಸೇನೆಗಳು ಪುನಃ ಯೆರೂಸಲೇಮನ್ನು ಸುತ್ತುವರಿದವು; ಅದರ ಸುತ್ತಲೂ ಅವರು ಮೊನೆಯುಳ್ಳ ಗೂಟಗಳ ಒಂದು ಕೋಟೆಯನ್ನು ಕಟ್ಟಿದರು. ಯೇಸು ಯೆರೂಸಲೇಮಿನ ಕುರಿತು ಹೀಗೆ ಪ್ರವಾದಿಸಿದ್ದನು: “ನಿನ್ನ ವೈರಿಗಳು ಒಡ್ಡುಕಟ್ಟಿ ನಿನ್ನ ಸುತ್ತಲೂ ಮುತ್ತಿಗೆ ಹಾಕಿ ಎಲ್ಲಾ ಕಡೆಗಳಲ್ಲಿಯೂ ನಿನ್ನನ್ನು ಬಂದುಮಾಡಿ . . . ನಿರ್ಮೂಲ”ಮಾಡುವರು.a (ಲೂಕ 19:43) ಸ್ವಲ್ಪ ಸಮಯದಲ್ಲಿಯೇ, ಯೆರೂಸಲೇಮ್ ಪತನಗೊಂಡಿತು; ಅದರ ಮಹಿಮಾಭರಿತ ದೇವಾಲಯವು ಕನಲುರಿಯುತ್ತಿರುವ ಅವಶೇಷಗಳ ಸ್ಥಿತಿಗೆ ತಗ್ಗಿಸಲ್ಪಟ್ಟಿತು. ಯೇಸುವಿನ ಮಾತುಗಳು ಸವಿವರವಾಗಿ ನೆರವೇರಿದವು!
ಯೆರೂಸಲೇಮಿನ ಆ ನಾಶನಕ್ಕಿಂತ ಹೆಚ್ಚಾಗಿ ಬೇರೆ ಯಾವುದೊ ವಿಷಯವು ಯೇಸುವಿನ ಮನಸ್ಸಿನಲ್ಲಿತ್ತು. ಅವನ ಶಿಷ್ಯರು ಅವನ ಸಾನ್ನಿಧ್ಯದ ಸೂಚನೆಯ ಕುರಿತೂ ಕೇಳಿದ್ದರು. ಆಗ ಅವರಿಗೆ ತಮ್ಮ ಪ್ರಶ್ನೆಯ ವ್ಯಾಪ್ತಿ ತಿಳಿದಿರಲಿಲ್ಲ, ಆದರೆ ಇದು, ಅವನು ಸ್ವರ್ಗದಲ್ಲಿ ರಾಜನಾಗಿ ಆಳಲು ಪಟ್ಟಾಭಿಷೇಕಿಸಲ್ಪಡುವ ಸಮಯಕ್ಕೆ ಸೂಚಿಸಿತು. ಅವನು ಏನನ್ನು ಮುಂತಿಳಿಸಿದನು?
ಕಡೇ ದಿವಸಗಳಲ್ಲಿ ಯುದ್ಧ
ಮತ್ತಾಯ 24 ಮತ್ತು 25ನೆಯ ಅಧ್ಯಾಯಗಳು, ಮಾರ್ಕ 13ನೆಯ ಅಧ್ಯಾಯ, ಮತ್ತು ಲೂಕ 21ನೆಯ ಅಧ್ಯಾಯವನ್ನು ನೀವು ಓದುವುದಾದರೆ, ಯೇಸು ನಮ್ಮ ಸ್ವಂತ ಯುಗದ ಕುರಿತಾಗಿಯೇ ಮಾತಾಡುತ್ತಿದ್ದನೆಂಬ ಸ್ಪಷ್ಟವಾದ ಪ್ರಮಾಣವನ್ನು ನೀವು ಕಂಡುಕೊಳ್ಳುವಿರಿ. ಯುದ್ಧಗಳ ಒಂದು ಸಮಯವನ್ನು—ಮಾನವ ಇತಿಹಾಸವನ್ನು ಯಾವಾಗಲೂ ವಿಕೃತಗೊಳಿಸಿರುವ ‘ಯುದ್ಧಗಳು ಹಾಗೂ ಯುದ್ಧಗಳ ಸುದ್ದಿಗಳು’ ಮಾತ್ರವಲ್ಲ, ಬದಲಿಗೆ ‘ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯ’ವನ್ನೊಳಗೊಳ್ಳುವ ಯುದ್ಧಗಳು—ಹೌದು, ಮಹಾ ಅಂತಾರಾಷ್ಟ್ರೀಯ ಯುದ್ಧಗಳನ್ನು ಅವನು ಮುಂತಿಳಿಸಿದನು.—ಮತ್ತಾಯ 24:6-8.
ನಮ್ಮ ಶತಮಾನದಲ್ಲಿ ಯುದ್ಧ ಕಾರ್ಯಾಚರಣೆಯು ಹೇಗೆ ಬದಲಾಗಿದೆ ಎಂಬುದರ ಕುರಿತು ಒಂದು ಕ್ಷಣ ಯೋಚಿಸಿರಿ. ಗತಕಾಲದಲ್ಲಿ, ಯುದ್ಧವು ಕೇವಲ ಎರಡು ವಿರೋಧಿ ರಾಷ್ಟ್ರಗಳನ್ನು ಪ್ರತಿನಿಧಿಸುವ ಸೇನೆಗಳ ಸಂಘರ್ಷ, ಕುಡುಗತ್ತಿಗಳಿಂದ ಇರಿಯುವುದು ಇಲ್ಲವೆ ರಣರಂಗದಲ್ಲಿ ಪರಸ್ಪರ ಗುಂಡುಗಳನ್ನು ಹಾರಿಸುವುದನ್ನೂ ಅರ್ಥೈಸಿದಾಗ ಸಾಕಷ್ಟು ಭಯಂಕರವಾಗಿತ್ತು. ಆದರೆ 1914ರಲ್ಲಿ ಮಹಾ ಯುದ್ಧವು ಆರಂಭವಾಯಿತು. ಡೊಮಿನೊ ಪರಿಣಾಮದಲ್ಲಿರುವಂತೆ, ದಳ್ಳುರಿಯಲ್ಲಿ ಒಂದು ರಾಷ್ಟ್ರವನ್ನು ಮತ್ತೊಂದು ರಾಷ್ಟ್ರವು ಅನುಸರಿಸಿತು—ಪ್ರಥಮ ಜಾಗತಿಕ ಯುದ್ಧ. ಹೆಚ್ಚೆಚ್ಚು ಜನರನ್ನು ಕೊಲ್ಲುವಂತೆ ಮತ್ತು ಬಹಳಷ್ಟು ಅಂತರದಿಂದ ಹಾಗೆ ಮಾಡುವಂತೆ, ಸ್ವಯಂಚಾಲಿತ ಆಯುಧಗಳು ವಿನ್ಯಾಸಿಸಲ್ಪಟ್ಟವು. ಮಷೀನ್ ಗನ್‌ಗಳು ಕ್ರೂರ ಕಾರ್ಯಸಾಮರ್ಥ್ಯದಿಂದ ಗುಂಡುಗಳನ್ನು ಹಾರಿಸಿದವು; ಮಸ್ಟರ್ಡ್ ವಿಷಾನಿಲವು ಸಾವಿರಾರು ಸೈನಿಕರನ್ನು ಸುಟ್ಟು, ಹಿಂಸಿಸಿ, ಊನಮಾಡಿ, ಕೊಂದಿತು; ಶತ್ರುಗಳ ಮೇರೆಗಳೊಳಗೆ ಟ್ಯಾಂಕುಗಳು ಕರುಣಾರಹಿತವಾಗಿ ಗುಡುಗುತ್ತಾ ಹೋದಂತೆ, ಅವುಗಳ ಗನ್‌ಗಳು ಎಡೆಬಿಡದೆ ಗುಂಡುಹಾರಿಸಿದವು. ವಿಮಾನ ಮತ್ತು ಜಲಾಂತರ್ನೌಕೆ ಸಹ ಉಪಯೋಗಿಸಲ್ಪಟ್ಟವು. ಇವು ಮುಂದೆ ಏನಾಗಿ ಪರಿವರ್ತನೆಗೊಳ್ಳಲಿದ್ದವೊ ಕೇವಲ ಅವುಗಳ ಮುನ್ ಸೂಚಕಗಳಾಗಿದ್ದವು.
IIನೆಯ ಜಾಗತಿಕ ಯುದ್ಧವು ಊಹಿಸಲಾಗದಂತಹದ್ದನ್ನು ಮಾಡಿತು—ಅದು ಕೋಟ್ಯನುಕೋಟಿ ಜನರನ್ನು ಕೊಲ್ಲುತ್ತಾ ವಾಸ್ತವವಾಗಿ Iನೆಯ ಜಾಗತಿಕ ಯುದ್ಧವನ್ನು ಕುಬ್ಜಗೊಳಿಸಿತು. ವಾಸ್ತವಿಕ ತೇಲು ನಗರಗಳಂತಿದ್ದ, ದೊಡ್ಡ ವಿಮಾನವಾಹಕ ನೌಕೆಗಳು ಸಮುದ್ರಗಳಲ್ಲಿ ಸಂಚರಿಸಿ, ಶತ್ರು ಗುರಿಹಲಗೆಗಳ ಮೇಲೆ ಆಕಾಶಗಳಿಂದ ಬಾಂಬುಗಳನ್ನು ಹಾಕಲು ವಿಮಾನಗಳನ್ನು ಹೊರಡಿಸಿದವು. ಜಲಾಂತರ್ನೌಕೆಗಳು ಶತ್ರು ಹಡಗುಗಳನ್ನು ಸಿಡಿಗುಂಡಿನಿಂದ ಸ್ಫೋಟಿಸಿ, ಮುಳುಗಿಸಿದವು. ಮತ್ತು ಅಣು ಬಾಂಬುಗಳನ್ನು ಬೀಳಿಸಲಾಯಿತು. ಅವು, ಪ್ರತಿಯೊಂದು ಜಜ್ಜಿಬಿಡುವ ಏಟಿನಲ್ಲಿ ಸಾವಿರಾರು ಜೀವಗಳನ್ನು ಬಲಿತೆಗೆದುಕೊಂಡವು! ಯೇಸು ಪ್ರವಾದಿಸಿದಂತೆಯೇ, ಈ ಯುದ್ಧದ ಯುಗವನ್ನು ಗುರುತಿಸಲು, ನಿಶ್ಚಯವಾಗಿಯೂ “ಘೋರವಾದ ದೃಶ್ಯಗಳು” (NW) ಆಗಿಹೋಗಿವೆ.—ಲೂಕ 21:11.
IIನೆಯ ಜಾಗತಿಕ ಯುದ್ಧದಂದಿನಿಂದ ಯುದ್ಧವು ಕುಗ್ಗಿಹೋಗಿದೆಯೊ? ಇಲ್ಲವೇ ಇಲ್ಲ. ಕೆಲವೊಮ್ಮೆ, ಅಕ್ಷರಶಃ ಅನೇಕ ಯುದ್ಧಗಳು ಒಂದೇ ವರ್ಷದಲ್ಲಿ ನಡೆಯುತ್ತವೆ—1990ಗಳ ಈ ದಶಕದಲ್ಲಿಯೂ—ಇದು ಮರಣದ ಸಂಖ್ಯೆಯನ್ನು ಲಕ್ಷಾಂತರಗಳಿಗೆ ಏರಿಸುತ್ತದೆ. ಮತ್ತು ಯುದ್ಧದ ಪ್ರಾಥಮಿಕ ಬಲಿಗಳಲ್ಲಿ ಒಂದು ಬದಲಾವಣೆಯಾಗಿದೆ. ಸತ್ತವರು ಇನ್ನು ಮುಂದೆ ಮುಖ್ಯವಾಗಿ ಸೈನಿಕರಾಗಿರುವುದಿಲ್ಲ. ಇಂದು, ಯುದ್ಧದಲ್ಲಿ ಗಾಯಗೊಂಡ ಅಥವಾ ಸತ್ತ ಜನರಲ್ಲಿ ಅಧಿಕ ಸಂಖ್ಯೆಯವರು, ವಾಸ್ತವದಲ್ಲಿ 90 ಪ್ರತಿಶತಕ್ಕಿಂತಲೂ ಹೆಚ್ಚಿನವರು ನಾಗರಿಕರಾಗಿದ್ದಾರೆ.
ಸೂಚನೆಯ ಇತರ ವೈಶಿಷ್ಟ್ಯಗಳು
ಯುದ್ಧವು, ಯೇಸು ಉಲ್ಲೇಖಿಸಿದ ಸೂಚನೆಯ ಕೇವಲ ಒಂದು ಅಂಶವಾಗಿದೆ. “ಬರಗಳು” ಸಹ ಬರುವವೆಂದು ಅವನು ಎಚ್ಚರಿಸಿದನು. (ಮತ್ತಾಯ 24:7) ಮತ್ತು ವಿರೋಧಾಭಾಸವಾಗಿ, ಎಲ್ಲ ಮಾನವಜಾತಿಗೆ ಉಣಿಸಲು ಬೇಕಾಗಿರುವುದಕ್ಕಿಂತ ಹೆಚ್ಚಿನ ಆಹಾರವನ್ನು ಭೂಮಿಯು ಉತ್ಪಾದಿಸುತ್ತಿರುವುದಾದರೂ, ಮಾನವ ಇತಿಹಾಸದಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿ ಕೃಷಿ ವಿಜ್ಞಾನವು ಪ್ರಗತಿಗೊಂಡಿರುವುದಾದರೂ, ಲೋಕದಲ್ಲಿನ ಯಾವುದೇ ಸ್ಥಳಕ್ಕೆ ಆಹಾರವನ್ನು ರವಾನಿಸಲು ವೇಗದ ಮತ್ತು ಸಮರ್ಥ ಸಾಗಣೆ ಲಭ್ಯವಿರುವುದಾದರೂ, ಬರಗಳು ಬಂದಿರುವುದು ನಿಜ. ಈ ಎಲ್ಲ ವಿಷಯಗಳ ಎದುರಿನಲ್ಲಿಯೂ, ಪ್ರತಿ ದಿನ ಈ ಲೋಕದ ಜನಸಂಖ್ಯೆಯಲ್ಲಿ ಸುಮಾರು ಐದರಲ್ಲಿ ಒಂದಂಶವು ಹಸಿವಿನಿಂದಿರುತ್ತದೆ.
“ಅಲ್ಲಲ್ಲಿ . . . ಉಪದ್ರವ [“ಅಂಟುರೋಗ,” NW]ಗಳೂ” ಬರುವವೆಂದು ಯೇಸು ಮುಂತಿಳಿಸಿದನು. (ಲೂಕ 21:11) ಪುನಃ ನಮ್ಮ ಯುಗವು ಒಂದು ವಿಚಿತ್ರವಾದ ವಿರೋಧಾಭಾಸವನ್ನು ಕಂಡಿದೆ—ಹಿಂದೆಂದಿಗಿಂತಲೂ ಉತ್ತಮವಾದ ವೈದ್ಯಕೀಯ ಆರೈಕೆ, ತಾಂತ್ರಿಕ ಪ್ರಗತಿ, ಅನೇಕ ಸಾಮಾನ್ಯ ರೋಗಗಳನ್ನು ತಡೆಗಟ್ಟಲು ಲಸಿಕೆಗಳು; ಆದರೂ ಅಂಟುರೋಗದಂತಹ ಕಾಯಿಲೆಗಳೂ ಅಭೂತಪೂರ್ವವಾಗಿ ಹೆಚ್ಚಿವೆ. Iನೆಯ ಜಾಗತಿಕ ಯುದ್ಧದ ನಂತರ, ಕೂಡಲೇ ಸ್ಪ್ಯಾನಿಷ್ ಜ್ವರ ಅನುಸರಿಸಿ ಬಂತು ಮತ್ತು ಯುದ್ಧವು ಬಲಿತೆಗೆದುಕೊಂಡದ್ದಕ್ಕಿಂತ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡಿತು. ಈ ರೋಗವು ಎಷ್ಟು ಸಾಂಕ್ರಾಮಿಕವಾಗಿತ್ತೆಂದರೆ, ನ್ಯೂ ಯಾರ್ಕ್‌ನಂತಹ ನಗರಗಳಲ್ಲಿ, ಕೇವಲ ಸೀನುವುದಕ್ಕಾಗಿ ಜನರ ಮೇಲೆ ದಂಡ ಹಾಕಸಾಧ್ಯವಿತ್ತು ಇಲ್ಲವೆ ಅವರನ್ನು ಜೈಲಿಗೆ ಹಾಕಸಾಧ್ಯವಿತ್ತು! ಇಂದು, ಕ್ಯಾನ್ಸರ್ ಮತ್ತು ಹೃದಯ ವ್ಯಾಧಿಗಳು ಪ್ರತಿ ವರ್ಷ ಲಕ್ಷಾಂತರ ಜೀವಗಳನ್ನು ಬಲಿತೆಗೆದುಕೊಳ್ಳುತ್ತವೆ—ವಾಸ್ತವವಾದ ಅಂಟುರೋಗಗಳು. ಮತ್ತು ಏಡ್ಸ್, ವೈದ್ಯಕೀಯ ವಿಜ್ಞಾನದಿಂದ ಯಾವ ತಡೆಯೂ ಇಲ್ಲದೆ ಮರಣವನ್ನುಂಟುಮಾಡುತ್ತಾ ಇದೆ.
ಯೇಸು ಕಡೇ ದಿವಸಗಳನ್ನು ಮುಖ್ಯವಾಗಿ, ವ್ಯಾಪಕವಾದ ಐತಿಹಾಸಿಕ ಹಾಗೂ ರಾಜಕೀಯ ಪರಿಸ್ಥಿತಿಗಳ ವಿಷಯದಲ್ಲಿ ಚರ್ಚಿಸಿದನಾದರೂ, ಅಪೊಸ್ತಲ ಪೌಲನು ಸಾಮಾಜಿಕ ಸಮಸ್ಯೆಗಳನ್ನು ಮತ್ತು ಚಾಲ್ತಿಯಲ್ಲಿರುವ ಮನೋಭಾವಗಳನ್ನು ಎತ್ತಿತೋರಿಸಿದನು. ಭಾಗಶಃ ಅವನು ಬರೆದುದು: “ಆದರೆ ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ . . . ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ . . . ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ . . . ಆಗಿರುವರು.”—2 ತಿಮೊಥೆಯ 3:1-5.
ಆ ಮಾತುಗಳು ನಿಮಗೆ ಚಿರಪರಿಚಿತವೆನಿಸುತ್ತವೊ? ಇಂದಿನ ಲೋಕದಲ್ಲಿ ಸಾಮಾಜಿಕ ಕ್ಷೀಣತೆಯ ಕೇವಲ ಒಂದು ಅಂಶವನ್ನು ಪರಿಗಣಿಸಿರಿ—ಕುಟುಂಬದ ವಿಭಜನ. ಒಡೆದ ಮನೆಗಳು, ಜರ್ಜರಿತ ಸಂಗಾತಿಗಳು, ಅಪಪ್ರಯೋಗಿಸಲ್ಪಟ್ಟ ಮಕ್ಕಳು, ಮತ್ತು ದುರುಪಚರಿಸಲ್ಪಟ್ಟ ವೃದ್ಧ ಹೆತ್ತವರ ಅತಿಶಯಿಸುವ ಸಂಖ್ಯೆಗಳು—ಈ ಪರಿಸ್ಥಿತಿಗಳು ತೋರಿಸುವುದೇನೆಂದರೆ, ಜನರಲ್ಲಿ “ಮಮತೆಯಿಲ್ಲ,” ಅವರು “ಉಗ್ರತೆಯುಳ್ಳವರೂ,” “ದ್ರೋಹಿಗಳೂ,” “ಒಳ್ಳೇದನ್ನು ಪ್ರೀತಿಸದವರೂ” ಆಗಿದ್ದಾರೆ! ಹೌದು, ಈ ಗುಣಗಳನ್ನು ನಾವು ಇಂದು ವ್ಯಾಪಕವಾದೊಂದು ಮಟ್ಟದಲ್ಲಿ ನೋಡುತ್ತೇವೆ.
ನಮ್ಮ ಸಂತತಿಯು ಮುಂತಿಳಿಸಲ್ಪಟ್ಟ ಸಂತತಿಯಾಗಿದೆಯೊ?
ಆದರೂ ನೀವು ಕುತೂಹಲಪಡಬಹುದು, ‘ಈ ಪರಿಸ್ಥಿತಿಗಳು ಮಾನವ ಜಾತಿಯನ್ನು ಸದಾ ಬಾಧಿಸಿರುವುದಿಲ್ಲವೊ? ಈ ಪ್ರಾಚೀನ ಪ್ರವಾದನೆಗಳಲ್ಲಿ ಮುಂತಿಳಿಸಲ್ಪಟ್ಟ ಸಂತತಿಯು, ನಮ್ಮ ಆಧುನಿಕ ಸಂತತಿಯಾಗಿದೆಯೆಂದು ನಮಗೆ ಹೇಗೆ ಗೊತ್ತು?’ ಯೇಸು ನಮ್ಮ ಸಮಯದ ಕುರಿತಾಗಿಯೇ ಮಾತಾಡುತ್ತಿದ್ದನೆಂಬುದನ್ನು ರುಜುಪಡಿಸುವ ಪ್ರಮಾಣದ ಮೂರು ವಿಷಯಾಂಶಗಳನ್ನು ನಾವು ಪರಿಗಣಿಸೋಣ.
ಪ್ರಥಮವಾಗಿ, ಯೆರೂಸಲೇಮ್ ಮತ್ತು ಅದರ ದೇವಾಲಯದ ನಾಶನದಲ್ಲಿ ಒಂದು ಆಂಶಿಕ, ಆದಿಯ ನೆರವೇರಿಕೆ ಇತ್ತಾದರೂ, ಯೇಸುವಿನ ಮಾತುಗಳು ನಿಶ್ಚಯವಾಗಿಯೂ ಆ ಸಮಯವನ್ನು ಮೀರಿ, ಭವಿಷ್ಯತ್ತಿನ ಕಡೆಗೆ ಕೈತೋರಿಸಿದವು. ಯೆರೂಸಲೇಮನ್ನು ನಾಶಗೊಳಿಸಿದ ಆ ವಿಪ್ಲವದ 30 ವರ್ಷಗಳ ನಂತರ, ಪ್ರವಾದಿಸಲ್ಪಟ್ಟ ಪರಿಸ್ಥಿತಿಗಳು—ಯುದ್ಧ, ಬರಗಾಲ, ಅಂಟುರೋಗ, ಮತ್ತು ಫಲಸ್ವರೂಪವಾಗಿ ಮರಣ—ಭವಿಷ್ಯತ್ತಿನಲ್ಲಿ ಲೋಕವ್ಯಾಪಕವಾಗಿ ಆಗಮಿಸಲಿದ್ದವೆಂದು ತೋರಿಸಿದ ಒಂದು ದರ್ಶನವನ್ನು, ಯೇಸು ವೃದ್ಧ ಅಪೊಸ್ತಲ ಯೋಹಾನನಿಗೆ ನೀಡಿದನು. ಹೌದು, ಈ ಸಂಕಷ್ಟಗಳು ಯಾವುದೇ ಒಂದು ಸ್ಥಾನವನ್ನಲ್ಲ, ಬದಲಿಗೆ ಸಂಪೂರ್ಣವಾಗಿ “ಭೂಮಿಯನ್ನು” ಆವರಿಸಲಿದ್ದವು.—ಪ್ರಕಟನೆ 6:2-8.
ಎರಡನೆಯದಾಗಿ, ಯೇಸುವಿನ ಸೂಚನೆಯ ಕೆಲವು ವೈಶಿಷ್ಟ್ಯಗಳು ಈ ಶತಮಾನದಲ್ಲಿ ಅತ್ಯಂತ ವ್ಯಾಪಕವಾಗಿ ನೆರವೇರುತ್ತಿವೆ. ಉದಾಹರಣೆಗೆ, 1914ರಂದಿನಿಂದ ಯುದ್ಧಗಳು ಹೇಗೆ ನಡೆದಿವೆಯೊ ಅದಕ್ಕಿಂತಲೂ ಹೆಚ್ಚು ಕೆಟ್ಟದಾಗುವ ಸಾಧ್ಯತೆ ಇದೆಯೊ? ಇಂದಿನ ನ್ಯೂಕ್ಲಿಯರ್ ಶಕ್ತಿಗಳು ತಮ್ಮ ಆಯುಧಗಳನ್ನು ಬಳಸುವುದರೊಂದಿಗೆ IIIನೆಯ ಜಾಗತಿಕ ಯುದ್ಧವು ನಡೆಯುವಲ್ಲಿ, ಭೂಮಿಯು ಬಹುಶಃ ಸುಟ್ಟು ಇದ್ದಿಲಾಗಿರಬಹುದು ಮತ್ತು ಮಾನವ ಜಾತಿಯು ಗತಕಾಲದ ಸಂಗತಿಯಾಗಬಹುದು. ತದ್ರೀತಿಯಲ್ಲಿ, ಪ್ರಕಟನೆ 11:18 ಮುಂತಿಳಿಸುವುದೇನೆಂದರೆ, ಈ ದಿವಸಗಳಲ್ಲಿ ರಾಷ್ಟ್ರಗಳು “ಕೋಪಿಸಿ”ಕೊಂಡಾಗ, ಮಾನವ ಜಾತಿಯು ‘ಲೋಕವನ್ನು ನಾಶಮಾಡುತ್ತಾ’ ಇರುವುದು. ಇತಿಹಾಸದಲ್ಲಿ ಮೊದಲ ಬಾರಿಗೆ, ಮಾಲಿನ್ಯ ಮತ್ತು ಪರಿಸರದ ಅವನತಿಯು ಈಗ ಈ ಗ್ರಹದ ವಾಸಯೋಗ್ಯತೆಯನ್ನೇ ಬೆದರಿಸುತ್ತಿವೆ! ಆದುದರಿಂದ ಈ ವೈಶಿಷ್ಟ್ಯವು ಸಹ ಅದರ ಅಂತಿಮ ಮಟ್ಟದಲ್ಲಿ ಇಲ್ಲವೆ ಅದಕ್ಕಿಂತ ಸ್ವಲ್ಪ ಕಡಮೆಯಾದ ಮಟ್ಟದಲ್ಲಿ ನೆರವೇರಿಕೆಯನ್ನು ಕಂಡುಕೊಳ್ಳುತ್ತಿದೆ. ಮನುಷ್ಯನು ತನ್ನನ್ನು ಮತ್ತು ಈ ಗ್ರಹವನ್ನು ನಾಶಗೊಳಿಸುವ ತನಕ, ಯುದ್ಧಗಳು ಮತ್ತು ಮಾಲಿನ್ಯವು ನಿಜವಾಗಿಯೂ ಕೆಟ್ಟದಾಗುತ್ತಾ ಹೋಗಸಾಧ್ಯವೊ? ಇಲ್ಲ; ಏಕೆಂದರೆ ಭೂಮಿಯು—ಅದರ ಮೇಲೆ ಸಹೃದಯದ ಮಾನವರು ಜೀವಿಸುವುದರೊಂದಿಗೆ—ಸದಾಕಾಲ ಬಾಳುವುದೆಂದು ಸ್ವತಃ ಬೈಬಲೇ ಆದೇಶಿಸುತ್ತದೆ.—ಕೀರ್ತನೆ 37:29; ಮತ್ತಾಯ 5:5.
ಮೂರನೆಯದಾಗಿ, ಸಂಪೂರ್ಣವಾಗಿ ಪರಿಗಣಿಸುವಾಗ, ಕಡೇ ದಿವಸಗಳ ಸೂಚನೆಯು ವಿಶೇಷವಾಗಿ ಮನಗಾಣಿಸುವಂತಹದ್ದಾಗಿದೆ. ಒಟ್ಟಿನಲ್ಲಿ, ನಾವು ಮೂರು ಸುವಾರ್ತೆಗಳಲ್ಲಿ ಯೇಸು ಉಲ್ಲೇಖಿಸಿದ ವೈಶಿಷ್ಟ್ಯಗಳನ್ನು, ಪೌಲನ ಬರಹಗಳಲ್ಲಿರುವವುಗಳನ್ನು, ಮತ್ತು ಪ್ರಕಟನೆಯಲ್ಲಿರುವವುಗಳನ್ನು ಪರಿಗಣಿಸುವಾಗ, ಈ ಸೂಚನೆಗೆ ಅನೇಕ ವೈಶಿಷ್ಟ್ಯಗಳಿವೆ. ಇತರ ಯುಗಗಳೂ ತದ್ರೀತಿಯ ಸಮಸ್ಯೆಗಳನ್ನು ಕಂಡಿವೆ ಎಂದು ವಾದಿಸುತ್ತಾ, ವ್ಯಕ್ತಿಯೊಬ್ಬನು ಪ್ರತಿಯೊಂದು ವೈಶಿಷ್ಟ್ಯದ ಕುರಿತು ಕುತರ್ಕಮಾಡಬಹುದು, ಆದರೆ ನಾವು ಅವೆಲ್ಲವುಗಳನ್ನು ಒಟ್ಟಿಗೆ ಪರಿಗಣಿಸುವಾಗ, ಅವು ಒಂದೇ ಒಂದು ಯುಗದ ಕಡೆಗೆ—ನಮ್ಮ ಸ್ವಂತ ಯುಗದ ಕಡೆಗೆ ಸ್ಪಷ್ಟವಾಗಿ ಕೈತೋರಿಸುತ್ತವೆ.
ಇದೆಲ್ಲವೂ ಏನನ್ನು ಸೂಚಿಸುತ್ತದೆ? ನಮ್ಮ ಯುಗವನ್ನು ಬೈಬಲು ಕೇವಲ ಒಂದು ಹತಾಶೆಯ, ನಿರೀಕ್ಷಾಹೀನ ಸಮಯವಾಗಿ ವರ್ಣಿಸುತ್ತಿದೆಯೊ? ಖಂಡಿತವಾಗಿಯೂ ಇಲ್ಲ!
ಸುವಾರ್ತೆ
ಕಡೇ ದಿವಸಗಳ ಸೂಚನೆಯ ಅತ್ಯಂತ ಗಮನಾರ್ಹವಾದ ವೈಶಿಷ್ಟ್ಯಗಳಲ್ಲಿ ಒಂದು ಮತ್ತಾಯ 24:14ರಲ್ಲಿ ದಾಖಲಿಸಲ್ಪಟ್ಟಿದೆ: “ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” ಈ ಶತಮಾನದಲ್ಲಿ, ಯೆಹೋವನ ಸಾಕ್ಷಿಗಳು ಮಾನವ ಇತಿಹಾಸದಲ್ಲಿ ಅಪೂರ್ವವಾಗಿರುವ ಒಂದು ಕೆಲಸವನ್ನು ಪೂರೈಸಿದ್ದಾರೆ. ಯೆಹೋವ ದೇವರ ರಾಜ್ಯವು ಏನಾಗಿದೆ, ಅದು ಹೇಗೆ ಆಳುತ್ತದೆ, ಮತ್ತು ಅದು ಏನನ್ನು ಸಾಧಿಸುವುದು ಎಂಬ ಬೈಬಲಿನ ಸಂದೇಶವನ್ನು ಅವರು ಸ್ವೀಕರಿಸಿದ್ದಾರೆ ಮತ್ತು ಭೂಮಿಯ ಆದ್ಯಂತ ಆ ಸಂದೇಶವನ್ನು ಹಬ್ಬಿಸಿದ್ದಾರೆ. ಈ ವಿಷಯದ ಮೇಲೆ 300ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಅವರು ಸಾಹಿತ್ಯವನ್ನು ಪ್ರಕಾಶಿಸಿದ್ದಾರೆ ಮತ್ತು ಕಾರ್ಯತಃ ಭೂಮಿಯ ಪ್ರತಿಯೊಂದು ದೇಶದಲ್ಲಿರುವ ಜನರಿಗೆ, ಅವರ ಮನೆಗಳಲ್ಲಿ ಇಲ್ಲವೆ ರಸ್ತೆಗಳಲ್ಲಿ ಇಲ್ಲವೆ ಅವರ ವ್ಯಾಪಾರದ ಸ್ಥಳಗಳಲ್ಲಿ ಅದನ್ನು ನೀಡಿದ್ದಾರೆ.
ಹಾಗೆ ಮಾಡುವ ಮೂಲಕ, ಅವರು ಈ ಪ್ರವಾದನೆಯನ್ನು ನೆರವೇರಿಸುತ್ತಾ ಇದ್ದಾರೆ. ಆದರೆ ಅವರು ನಿರೀಕ್ಷೆಯನ್ನೂ ಹಬ್ಬಿಸುತ್ತಿದ್ದಾರೆ. ಯೇಸು ಇದನ್ನು ಕೆಟ್ಟ ವಾರ್ತೆಯೆಂದಲ್ಲ “ಸುವಾರ್ತೆ” ಎಂದು ಕರೆದನೆಂಬುದನ್ನು ಗಮನಿಸಿರಿ. ಈ ಭೀಕರ ಸಮಯಗಳಲ್ಲಿ ಅದು ಸುವಾರ್ತೆ ಆಗಿರಲು ಹೇಗೆ ಸಾಧ್ಯ? ಏಕೆಂದರೆ ಬೈಬಲಿನ ಪ್ರಧಾನ ಸಂದೇಶವು, ಈ ಹಳೆಯ ಲೋಕದ ಕೊನೆಯಲ್ಲಿ ವಿಷಯಗಳು ಎಷ್ಟು ಕೆಟ್ಟದಾಗಿರುವವು ಎಂಬುದಾಗಿರುವುದಿಲ್ಲ. ಅದರ ಪ್ರಧಾನ ಸಂದೇಶವು ದೇವರ ರಾಜ್ಯವನ್ನು ಒಳಗೊಳ್ಳುತ್ತದೆ, ಮತ್ತು ಆ ರಾಜ್ಯವು ಪ್ರತಿಯೊಬ್ಬ ಶಾಂತಿಪ್ರಿಯ ಮಾನವನ ಹೃದಯಕ್ಕೆ ಆಪ್ತವಾಗಿರುವ ಏನನ್ನೊ—ಬಿಡುಗಡೆಯನ್ನು—ವಾಗ್ದಾನಿಸುತ್ತದೆ.
ಆ ಬಿಡುಗಡೆಯು ಏನಾಗಿದೆ, ಮತ್ತು ಅದು ಹೇಗೆ ನಿಮ್ಮದಾಗಿರಬಲ್ಲದು? ಈ ವಿಷಯದ ಕುರಿತ ಮುಂದಿನ ಲೇಖನಗಳನ್ನು ದಯವಿಟ್ಟು ಪರಿಗಣಿಸಿರಿ.
[ಪಾದಟಿಪ್ಪಣಿ]
a ಟೈಟಸ್‌ನಲ್ಲಿ ಗೆಲ್ಲುವಂತಹ ಸಕಲ ಉಪಾಯಗಳೂ ಇದ್ದವು. ಹಾಗಿದ್ದರೂ, ಪ್ರಾಮುಖ್ಯವಾದ ಎರಡು ಸಂಗತಿಗಳಲ್ಲಿ, ತಾನು ಬಯಸಿದ್ದನ್ನು ಅವನು ಸಾಧಿಸಲಿಲ್ಲ. ಅವನು ಶಾಂತಪೂರ್ಣವಾಗಿ ಶರಣಾಗತವಾಗುವ ಪ್ರಸ್ತಾವನೆಗಳನ್ನು ಮಾಡಿದನು, ಆದರೆ ಪಟ್ಟಣದ ನಾಯಕರು ಮೊಂಡುತನದಿಂದ, ವಿವರಿಸಲಾಗದ ರೀತಿಯಲ್ಲಿ ನಿರಾಕರಿಸಿದರು. ಮತ್ತು ಪಟ್ಟಣದ ಗೋಡೆಗಳು ಅಂತಿಮವಾಗಿ ಕೆಡವಲ್ಪಟ್ಟಾಗ, ದೇವಾಲಯವನ್ನು ನಾಶಮಾಡಬಾರದೆಂದು ಅವನು ಆದೇಶಿಸಿದನು. ಆದರೂ ಅದನ್ನು ಸಂಪೂರ್ಣವಾಗಿ ಸುಟ್ಟುಬಿಡಲಾಯಿತು! ಯೆರೂಸಲೇಮ್ ಧ್ವಂಸಗೊಳಿಸಲ್ಪಡುವುದೆಂದು ಹಾಗೂ ದೇವಾಲಯವು ಸಂಪೂರ್ಣವಾಗಿ ನೆಲಸಮ ಮಾಡಲ್ಪಡುವುದೆಂದು ಯೇಸುವಿನ ಪ್ರವಾದನೆಯು ಸ್ಪಷ್ಟಗೊಳಿಸಿತ್ತು.—ಮಾರ್ಕ 13:1, 2.
[ಪುಟ 5 ರಲ್ಲಿರುವ ಸಂಕ್ಷಿಪ್ತ ವಿವರಣೆ]
ವಿಷಯಗಳು ಏಕೆ ಇಷ್ಟೊಂದು ಕೆಟ್ಟದ್ದಾಗಿವೆ? ಮಾನವಕುಲವು ಎಲ್ಲಿಗೆ ಸಾಗುತ್ತಿದೆ? ಎಂಬಂತಹ ಗೊಂದಲಗೊಳಿಸುವ ಪ್ರಶ್ನೆಗಳಿಗೆ ಜನರು ಉತ್ತರಗಳನ್ನು ಹುಡುಕುತ್ತಿದ್ದಾರೆ
[ಪುಟ 6 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಇಂದು, ಯುದ್ಧದಲ್ಲಿ ಗಾಯಗೊಂಡ ಅಥವಾ ಸತ್ತ ಜನರಲ್ಲಿ 90 ಪ್ರತಿಶತಕ್ಕಿಂತಲೂ ಹೆಚ್ಚಿನವರು ನಾಗರಿಕರಾಗಿದ್ದಾರೆ
[ಪುಟ 7 ರಲ್ಲಿರುವ ಚಿತ್ರ]
ಯೆರೂಸಲೇಮಿನ ನಾಶನದ ಕುರಿತಾದ ಯೇಸುವಿನ ಪ್ರವಾದನೆಯು ಸವಿವರವಾಗಿ ನೆರವೇರಿತು