‘ನೀವು ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲ’
1 ಇದು ಎಷ್ಟು ಉತ್ತೇಜನದಾಯಕ ಮಾತಾಗಿದೆ! ಯೆಹೋವನ ಸೇವೆಯಲ್ಲಿ ನೀವು ಪಡುವ ಪ್ರಯಾಸವು ಖಂಡಿತವಾಗಿಯೂ ನಿಷ್ಫಲವಾಗುವುದಿಲ್ಲ. (1 ಕೊರಿಂ. 15:58) ಇದಕ್ಕೆ ತದ್ವಿರುದ್ಧವಾಗಿ, ತಮ್ಮ ಸ್ಥಾನಮಾನವನ್ನು, ಅಥವಾ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಹೆಣಗಾಡುತ್ತಿರುವ ಜನರ ಬಗ್ಗೆ ತುಸು ಆಲೋಚಿಸಿರಿ. ಇದಕ್ಕಾಗಿ ಅವರು ಅನೇಕ ವರ್ಷಗಳ ವರೆಗೆ ಉನ್ನತ ಮಟ್ಟದ ಶಿಕ್ಷಣವನ್ನು ಬೆನ್ನಟ್ಟಬಹುದು ಅಥವಾ ಪ್ರಾಪಂಚಿಕ ಸಂಪತ್ತನ್ನು ಗಳಿಸಲಿಕ್ಕಾಗಿ ಹಗಲೂರಾತ್ರಿ ದುಡಿಯುತ್ತಿರಬಹುದು. ಇಷ್ಟೆಲ್ಲಾ ಮಾಡಿದರೂ, “ಕಾಲ ಹಾಗೂ ಮುಂಗಾಣದ ಸಂಭವ”ದಿಂದಾಗಿ ಅವರು ಪಡೆಯಲು ಬಯಸಿದ್ದ ಪ್ರತಿಷ್ಠೆ ಅವರಿಗೆ ದಕ್ಕುವುದೇ ಇಲ್ಲ. ಅಥವಾ ಬಯಸಿದಷ್ಟು ಪ್ರಾಪಂಚಿಕ ಸಂಪತ್ತನ್ನು ಸಾಧಿಸಲು ಸಾಧ್ಯವಾಗದೆ, ಅವರು ಇದ್ದುದರಲ್ಲಿಯೇ ಸಂತೋಷಪಡಬೇಕಾಗಬಹುದು. ‘ಗಾಳಿಯನ್ನು ಹಿಂದಟ್ಟಿದರೆ’ ಹೇಗೆ ಪ್ರಯೋಜನವಿಲ್ಲವೋ ಹಾಗೆಯೇ ಇವರು ಮಾಡುವ ಪ್ರಯತ್ನಗಳೆಲ್ಲವೂ ವ್ಯರ್ಥವಾಗಿರುತ್ತವೆ. (ಪ್ರಸಂ. 1:14; 9:11, NW) ಹೀಗಿರುವುದರಿಂದ, ಎಂದಿಗೂ ನಿಷ್ಫಲವಾಗದಂತಹ ಒಂದು ಕೆಲಸದಲ್ಲಿ ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು ತುಂಬ ಅತ್ಯಾವಶ್ಯಕ. ಈ ಕೆಲಸವು ನಿಷ್ಫಲವಾಗದು ಏಕೆಂದರೆ ಅದಕ್ಕೆ ಶಾಶ್ವತವಾದ ಮೌಲ್ಯವಿದೆ!
2 ನಿಜವಾಗಿಯೂ ಅಮೂಲ್ಯವಾಗಿರುವ ಒಂದು ಕೆಲಸ: ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದು ಅತಿ ಪ್ರಾಮುಖ್ಯ ಕೆಲಸವಾಗಿದೆ. ಜನರು ಕಿವಿಗೊಡಲಿ ಅಥವಾ ಕಿವಿಗೊಡದಿರಲಿ, ನಾವು ಮಾತ್ರ ಈ ಕೆಲಸವನ್ನು ಮಾಡಲೇಬೇಕಾಗಿದೆ. ಪೌಲನು ಹೇಳಿದ್ದು: “ನಾನು ಈಹೊತ್ತು ಪ್ರಮಾಣವಾಗಿ ಹೇಳುತ್ತೇನೆ. ನಿಮ್ಮಲ್ಲಿ ಯಾರಾದರೂ ನಾಶವಾದರೆ ಅದು ನನ್ನ ದೋಷವಲ್ಲ. ಯಾಕಂದರೆ ಒಂದನ್ನೂ ಮರೆಮಾಡದೆ ದೇವರ ಸಂಕಲ್ಪವನ್ನೆಲ್ಲಾ ನಿಮಗೆ ತಿಳಿಸಿದೆನು.” ನಾವು ಸಹ ಹೀಗೆಯೇ ಹೇಳಶಕ್ತರಾಗಲು ಇಷ್ಟಪಡುತ್ತೇವೆ.—ಅ. ಕೃತ್ಯಗಳು 20:26, 27.
3 ಜನರು ರಾಜ್ಯದ ಸಂದೇಶಕ್ಕೆ ಕಿವಿಗೊಟ್ಟು, ಪ್ರತಿಕ್ರಿಯೆ ತೋರಿಸುವಾಗ, ನಮಗೆಷ್ಟು ಆನಂದವಾಗುತ್ತದೆ! ಯುವತಿಯೊಬ್ಬಳ ಅತ್ತೆ ಮೃತಪಟ್ಟಾಗ, ಅವರು ಸ್ವರ್ಗಕ್ಕೆ ಹೋಗಿದ್ದಾರೋ ನರಕಕ್ಕೆ ಹೋಗಿದ್ದಾರೋ ಎಂದು ಅವಳು ಕುತೂಹಲಪಟ್ಟಳು. ಆಗ ಅವಳು ಸಹಾಯಕ್ಕಾಗಿ ದೇವರ ಬಳಿ ಪ್ರಾರ್ಥಿಸಿದಳು. ಮತ್ತು ಆ ಪ್ರಾರ್ಥನೆಯಲ್ಲಿ ಅವಳು ಯೆಹೋವ ಎಂಬ ಹೆಸರನ್ನೂ ಉಪಯೋಗಿಸಿದಳು. ದೇವರ ಹೆಸರು ಇವಳಿಗೆ ಹೇಗೆ ಗೊತ್ತಾಯಿತೆಂದರೆ, ಅವಳ ತಂಗಿಯು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಭ್ಯಾಸ ಮಾಡುತ್ತಿದ್ದಳು. ಮತ್ತು ಆ ಹೆಸರನ್ನು ಉಪಯೋಗಿಸಿ ಪ್ರಾರ್ಥಿಸುವಂತೆ ಅವಳ ತಂಗಿಯೇ ಅವಳಿಗೆ ಕಲಿಸಿದ್ದಳು. ಸ್ವಲ್ಪದರಲ್ಲಿಯೇ ಈ ಯುವತಿ ಸಹ ಬೈಬಲ್ ಅಭ್ಯಾಸವನ್ನು ಮಾಡತೊಡಗಿದಳು ಮತ್ತು ಕ್ರೈಸ್ತ ಕೂಟಗಳಿಗೆ ಹಾಜರಾಗಲು ಆರಂಭಿಸಿದಳು. ಜೀವಿತದ ಕುರಿತಾದ ಅವಳ ದೃಷ್ಟಿಕೋನವು ಬದಲಾಯಿತು. ಈ ಮುಂಚೆ ಅವಳು ಸ್ಟ್ರೀಟ್ ಗ್ಯಾಂಗ್ಗಳೊಂದಿಗೆ ಸಂಪರ್ಕವಿರಿಸಿಕೊಂಡಿದ್ದಳು. ಆದರೆ ಈಗ ಅದನ್ನೆಲ್ಲ ಬಿಟ್ಟುಬಿಟ್ಟಳು ಮಾತ್ರವಲ್ಲ, ಧೂಮಪಾನವನ್ನು, ಅಮಲೌಷಧ ಸೇವನೆಯನ್ನು, ಮತ್ತು ಕಳ್ಳತನವನ್ನು ಸಹ ನಿಲ್ಲಿಸಿಬಿಟ್ಟಳು. ಅವಳು ಒಪ್ಪಿಕೊಳ್ಳುವುದು: “ಯೆಹೋವನಿಗಾಗಿರುವ ಪ್ರೀತಿಯು ಮಾತ್ರವೇ, ಅಂತಹ ಕೆಟ್ಟ ಜೀವಿತ ಮಾರ್ಗವನ್ನು ಬಿಟ್ಟುಬಿಡುವಂತೆ ನನ್ನನ್ನು ಪ್ರಚೋದಿಸಿತು. ಯೆಹೋವನು ಮಾತ್ರವೇ ತನ್ನ ಮಹಾ ಕರುಣೆಯಿಂದ, ನನಗೆ ನಿತ್ಯಜೀವದ ನಿರೀಕ್ಷೆಯನ್ನು ಕೊಡಸಾಧ್ಯವಿತ್ತು.” ಈಗ ಅವಳು ನಿಷ್ಫಲವಾದ ಬೆನ್ನಟ್ಟುವಿಕೆಗಳಲ್ಲಿ ತನ್ನ ಜೀವಿತವನ್ನು ಕಳೆಯುತ್ತಿಲ್ಲ.
4 ಒಂದುವೇಳೆ ಜನರು ನಿಮ್ಮ ಸಂದೇಶಕ್ಕೆ ಕಿವಿಗೊಡಲು ನಿರಾಕರಿಸಿದರೂ, ನೀವು ಮಾಡಿರುವ ಕೆಲಸವು ಸಾರ್ಥಕವಾದದ್ದಾಗಿದೆ ಎಂಬ ಸಂಗತಿಯೇ ನಿಮಗೆ ಸಮಾಧಾನ ನೀಡುತ್ತದೆ. ಯೆಹೋವನ ಸಾಕ್ಷಿಗಳು ತಮ್ಮನ್ನು ಭೇಟಿಮಾಡಿದ್ದಾರೆ ಎಂಬುದು ಈ ಜನರಿಗೆ ತಿಳಿದಿರುತ್ತದೆ. ಹಾಗೂ ಈ ಕೆಲಸದಿಂದ ನಿಮ್ಮ ಸ್ವಂತ ಸಮಗ್ರತೆ, ನಂಬಿಗಸ್ತಿಕೆ, ಮತ್ತು ಪ್ರೀತಿ ಸಹ ಬಲಗೊಳ್ಳುತ್ತದೆ. ಆದುದರಿಂದ, ಕರ್ತನ ಕೆಲಸದಲ್ಲಿ ನೀವು ಪಡುವ ಪ್ರಯಾಸವು ನಿಷ್ಫಲವಾಗುತ್ತಿದೆ ಎಂದು ಈಗ ಹೇಳಬಹುದೊ? ಖಂಡಿತವಾಗಿಯೂ ಇಲ್ಲ!