ನೋಹನ ನಂಬಿಕೆಯು ಲೋಕವನ್ನು ದಂಡನಾರ್ಹವೆಂದು ತೀರ್ಪುಕೊಡುತ್ತದೆ
ಭೌಗೋಲಿಕ ಜಲಪ್ರಳಯದ ಸಮಯದಲ್ಲಿ, ಜೀವರಕ್ಷಣೆಗಾಗಿ ನಾವೆಯನ್ನು ಕಟ್ಟಿದ ದೇವಭಯವುಳ್ಳ ಮನುಷ್ಯ ನೋಹನ ಕುರಿತು ನೀವು ಕೇಳಿಸಿಕೊಂಡಿದ್ದೀರೋ? ಈ ಕಥೆಯು ಎಷ್ಟೇ ಪುರಾತನ ಕಾಲದ್ದಾಗಿರುವುದಾದರೂ, ಇದು ಕೋಟಿಗಟ್ಟಲೆ ಜನರಿಗೆ ಚಿರಪರಿಚಿತವಾಗಿದೆ. ಆದರೂ, ನೋಹನ ಜೀವನವು ನಮ್ಮೆಲ್ಲರಿಗಾಗಿ ಅರ್ಥವನ್ನು ಹೊಂದಿದೆ ಎಂಬುದನ್ನು ಅನೇಕರು ಗ್ರಹಿಸುವುದಿಲ್ಲ.
ಆದರೆ ಸಾವಿರಾರು ವರ್ಷಗಳಷ್ಟು ಹಳೆಯದಾಗಿರುವ ಒಂದು ವೃತ್ತಾಂತದಲ್ಲಿ ನಾವೇಕೆ ಆಸಕ್ತಿಯುಳ್ಳವರಾಗಿರಬೇಕು? ನೋಹನ ಸನ್ನಿವೇಶ ಮತ್ತು ನಮ್ಮ ಸ್ವಂತ ಸನ್ನಿವೇಶದ ನಡುವೆ ಏನಾದರೂ ಹೋಲಿಕೆಯಿದೆಯೋ? ಹೋಲಿಕೆಯಿರುವಲ್ಲಿ, ಅವನ ಉದಾಹರಣೆಯಿಂದ ನಾವು ಹೇಗೆ ಪ್ರಯೋಜನ ಪಡೆದುಕೊಳ್ಳಸಾಧ್ಯವಿದೆ?
ನೋಹನ ದಿನದ ಲೋಕ
ಆದಾಮನ ಮರಣದ 126 ವರ್ಷಗಳ ಬಳಿಕ, ಅಂದರೆ ಸಾ.ಶ.ಪೂ. 2970ರಲ್ಲಿ ನೋಹನ ಜನನವಾಯಿತೆಂದು ಬೈಬಲ್ ಕಾಲಗಣನಶಾಸ್ತ್ರವು ತಿಳಿಯಪಡಿಸುತ್ತದೆ. ನೋಹನ ದಿನದಷ್ಟಕ್ಕೆ ಭೂಮಿಯು ಹಿಂಸಾಚಾರದಿಂದ ತುಂಬಿಹೋಗಿತ್ತು ಮತ್ತು ಆದಾಮನ ಸಂತತಿಯವರಲ್ಲಿ ಅನೇಕರು ತಮ್ಮ ಮೂಲಪಿತನ ಹಟಮಾರಿತನದ ಮಾದರಿಯನ್ನು ಅನುಸರಿಸುವ ಆಯ್ಕೆಮಾಡಿದರು. ಹೀಗೆ, “ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿರುವದನ್ನೂ ಅವರು ಹೃದಯದಲ್ಲಿ ಯೋಚಿಸುವದೆಲ್ಲವು ಯಾವಾಗಲೂ ಬರೀ ಕೆಟ್ಟದ್ದಾಗಿರುವದನ್ನೂ ಯೆಹೋವನು ನೋಡಿ”ದನು.—ಆದಿಕಾಂಡ 6:5, 11, 12.
ಮಾನವ ದಂಗೆಯು ಮಾತ್ರ ಯೆಹೋವನ ಅಸಂತೋಷಕ್ಕೆ ಕಾರಣವಾಗಿರಲಿಲ್ಲ. ಆದಿಕಾಂಡದ ವೃತ್ತಾಂತವು ವಿವರಿಸುವುದು: “ದೇವಪುತ್ರರು ಮನುಷ್ಯ ಪುತ್ರಿಯರ ಸೌಂದರ್ಯವನ್ನು ನೋಡಿ ತಮಗೆ ಇಷ್ಟರಾದವರನ್ನು ಹೆಂಡರನ್ನಾಗಿ ಮಾಡಿಕೊಂಡರು. . . . ಆ ಕಾಲದಲ್ಲಿ ಅಂದರೆ ದೇವಪುತ್ರರು ಮನುಷ್ಯ ಪುತ್ರಿಯರನ್ನು ಕೂಡಿ ಅವರಲ್ಲಿ ಮಕ್ಕಳನ್ನು ಪಡೆಯುವ ಕಾಲದಲ್ಲಿ ಮಹಾಶರೀರಿಗಳು ಭೂಮಿಯ ಮೇಲಿದ್ದರು; ಅನಂತರದಲ್ಲಿಯೂ ಇದ್ದರು, ಪೂರ್ವದಲ್ಲಿ ಹೆಸರುಗೊಂಡ ಪರಾಕ್ರಮಶಾಲಿಗಳು ಇವರೇ.” (ಆದಿಕಾಂಡ 6:1-4) ಈ ವಚನಗಳನ್ನು ಅಪೊಸ್ತಲ ಪೇತ್ರನಿಂದ ದಾಖಲಿಸಲ್ಪಟ್ಟ ಹೇಳಿಕೆಯೊಂದಿಗೆ ಹೋಲಿಸುವುದು, “ದೇವಪುತ್ರರು” ಅವಿಧೇಯ ದೇವದೂತರೇ ಆಗಿದ್ದರು ಎಂಬುದನ್ನು ತೋರಿಸುತ್ತದೆ. ಮಹಾಶರೀರಿಗಳು ಅಥವಾ ನೆಫೀಲಿಯರು, ಮಾನವರೂಪ ತಾಳಿದ ಧರ್ಮಭ್ರಷ್ಟ ದೇವದೂತರು ಮತ್ತು ಸ್ತ್ರೀಯರ ನಡುವೆ ನಡೆದ ನಿಷಿದ್ಧ ಲೈಂಗಿಕ ಸಂಭೋಗದಿಂದ ಉಂಟಾದ ವಿಶ್ರ ಸಂತತಿಯೇ ಆಗಿದ್ದರು.—1 ಪೇತ್ರ 3:19, 20.
“ನೆಫೀಲಿಮ್” ಎಂಬ ಶಬ್ದದ ಅರ್ಥ “ಕೆಡಹುವವರು” ಎಂದಾಗಿದ್ದು, ಇದು ಇತರರನ್ನು ಬೀಳುವಂತೆ ಮಾಡಿದಂಥ ವ್ಯಕ್ತಿಗಳನ್ನು ಸೂಚಿಸುತ್ತದೆ. ಅವರು ಪ್ರಜಾಪೀಡಕ ಪಾತಕಿಗಳಾಗಿದ್ದರು, ಮತ್ತು ಅವರ ಕಾಮಾಸಕ್ತ ತಂದೆಗಳ ಪಾಪವನ್ನು ಸೊದೋಮ್ ಗೊಮೋರ ಪಟ್ಟಣಗಳ ವಿಕೃತ ಕಾಮಾಸಕ್ತಿಗೆ ಹೋಲಿಸಲಾಗಿದೆ. (ಯೂದ 6, 7) ಭೂಮಿಯಲ್ಲಿ ಸಹಿಸಲು ಅಸಾಧ್ಯವಾದಷ್ಟು ದುಷ್ಟತನವನ್ನು ಅವರು ಉತ್ತೇಜಿಸಿದರು.
‘ತನ್ನ ಕಾಲದವರಲ್ಲಿ ತಪ್ಪಿಲ್ಲದವನು’
ಆ ಸಮಯದಲ್ಲಿ ಕೆಟ್ಟತನವು ಎಷ್ಟು ವ್ಯಾಪಕವಾಗಿತ್ತೆಂದರೆ, ದೇವರು ಮಾನವಕುಲವನ್ನು ನಾಶಮಾಡಲು ನಿರ್ಧರಿಸಿದನು. ಆದರೆ ಪ್ರೇರಿತ ವೃತ್ತಾಂತವು ಹೇಳುವುದು: “ನೋಹನಿಗೆ ಯೆಹೋವನ ದಯವು ದೊರಕಿತು. . . . ನೋಹನು ನೀತಿವಂತನೂ ತನ್ನ ಕಾಲದವರಲ್ಲಿ ತಪ್ಪಿಲ್ಲದವನೂ ಆಗಿದ್ದನು; ಅವನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು.” (ಆದಿಕಾಂಡ 6:8, 9) ಕೇವಲ ನಾಶನಕ್ಕೆ ಅರ್ಹವಾಗಿದ್ದ ಒಂದು ಭಕ್ತಿರಹಿತ ಲೋಕದಲ್ಲಿ ಒಬ್ಬನು ಹೇಗೆ ‘ದೇವರೊಂದಿಗೆ ಅನ್ಯೋನ್ಯವಾಗಿ ನಡೆಯ’ಸಾಧ್ಯವಿತ್ತು?
ನೋಹನು ತನ್ನ ತಂದೆಯಾದ ಲೆಮೆಕನಿಂದ ಹೆಚ್ಚನ್ನು ಕಲಿತುಕೊಂಡನು ಎಂಬುದರಲ್ಲಿ ಸಂದೇಹವಿಲ್ಲ. ಲೆಮೆಕನು ನಂಬಿಗಸ್ತ ವ್ಯಕ್ತಿಯಾಗಿದ್ದನು ಮತ್ತು ಆದಾಮನ ಸಮಕಾಲೀನನಾಗಿದ್ದನು. ತನ್ನ ಮಗನಿಗೆ (“ವಿಶ್ರಾಂತಿ” ಅಥವಾ “ಸಂತೈಸುವುದು” ಎಂಬರ್ಥ ಬರುವ ವಿಚಾರದಿಂದ) ನೋಹ ಎಂದು ಹೆಸರಿಡುವಾಗ ಲೆಮೆಕನು ಪ್ರವಾದಿಸಿದ್ದು: “ಯೆಹೋವನು ಶಪಿಸಿದ ಭೂಮಿಯಿಂದ ನಮಗೆ ಉಂಟಾದ ಕೈಕಷ್ಟದಲ್ಲಿಯೂ ಶ್ರಮೆಯಲ್ಲಿಯೂ ಈ ಮಗನು ನಮ್ಮನ್ನು ಉಪಶಮನಗೊಳಿಸುವನು.” ಆ ಭೂಮಿಯಿಂದ ತನ್ನ ಶಾಪವನ್ನು ದೇವರು ಹಿಂದೆಗೆದುಕೊಂಡಾಗ ಆ ಪ್ರವಾದನೆಯು ನೆರವೇರಿಸಲ್ಪಟ್ಟಿತು.—ಆದಿಕಾಂಡ 5:29; 8:21.
ಆದರೂ, ದೇವಭಯವುಳ್ಳ ಹೆತ್ತವರನ್ನು ಪಡೆದಿರುವ ಕಾರಣಕ್ಕಾಗಿಯೇ, ಮಕ್ಕಳು ಸಹ ಆತ್ಮಿಕ ವ್ಯಕ್ತಿಗಳಾಗುವರು ಎಂದು ಖಾತ್ರಿ ಕೊಡಲಾಗುವುದಿಲ್ಲ. ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಯು ಯೆಹೋವನೊಂದಿಗೆ ತನ್ನ ವೈಯಕ್ತಿಕ ಸಂಬಂಧವನ್ನು ಸ್ಥಾಪಿಸಬೇಕಾಗಿದೆ. ದೈವಿಕ ಸಮ್ಮತಿಯಿದ್ದ ಜೀವನಮಾರ್ಗವನ್ನು ಬೆನ್ನಟ್ಟುವ ಮೂಲಕ ನೋಹನು ‘ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು.’ ದೇವರ ಕುರಿತು ನೋಹನು ಏನನ್ನು ಕಲಿತನೋ ಅದು ಆತನ ಸೇವೆಮಾಡುವಂತೆ ಅವನನ್ನು ಪ್ರಚೋದಿಸಿತು. ‘ಜಲಪ್ರಳಯವನ್ನು ಬರಮಾಡಿ ಎಲ್ಲಾ ದೇಹಿಗಳಿಗೂ ಅಂತ್ಯವನ್ನು’ ತರುವ ದೇವರ ಉದ್ದೇಶದ ಕುರಿತು ನೋಹನಿಗೆ ತಿಳಿಸಲ್ಪಟ್ಟಾಗಲೂ ಅವನ ನಂಬಿಕೆಯು ಕದಲಲಿಲ್ಲ.—ಆದಿಕಾಂಡ 6:13, 17.
ಈ ಅಸಾಮಾನ್ಯ ವಿಪತ್ತು ಖಂಡಿತವಾಗಿಯೂ ಸಂಭವಿಸುತ್ತದೆ ಎಂಬ ದೃಢಭರವಸೆಯಿಂದ ನೋಹನು, “ನೀನು ತುರಾಯಿ ಮರದಿಂದ ನಾವೆಯನ್ನು ಮಾಡಿಕೋ; ಅದರಲ್ಲಿ ತುಂಬ ಕೋಣೆಗಳು ಇರಬೇಕು; ಒಳಕ್ಕೂ ಹೊರಕ್ಕೂ ರಾಳವನ್ನು ಹಚ್ಚು” ಎಂಬ ಯೆಹೋವನ ಆಜ್ಞೆಗೆ ವಿಧೇಯನಾದನು. (ಆದಿಕಾಂಡ 6:14) ನಾವೆಗಾಗಿರುವ ದೇವರ ನಿರ್ದಿಷ್ಟ ನಿರ್ದೇಶನಗಳನ್ನು ಪೂರೈಸುವುದು ಸ್ವಲ್ಪವೂ ಸುಲಭವಾಗಿರಲಿಲ್ಲ. ಆದರೂ, “ದೇವರು ಅಪ್ಪಣೆಕೊಟ್ಟ ಪ್ರಕಾರವೇ ನೋಹನು ಮಾಡಿದನು.” (ಆದಿಕಾಂಡ 6:22) ತನ್ನ ಪತ್ನಿ ಹಾಗೂ ತನ್ನ ಪುತ್ರರಾದ ಶೇಮ್, ಹಾಮ್, ಯಾಫೆತರು ಮತ್ತು ಅವರ ಪತ್ನಿಯರ ಸಹಾಯದಿಂದ ನೋಹನು ಈ ಕೆಲಸವನ್ನು ಮಾಡಿದನು. ಅಂತಹ ನಂಬಿಕೆಯನ್ನು ಯೆಹೋವನು ಆಶೀರ್ವದಿಸಿದನು. ಇಂದಿನ ಕುಟುಂಬಗಳಿಗಾಗಿ ಎಷ್ಟು ಅತ್ಯುತ್ತಮವಾದ ಮಾದರಿಗಳವರು!
ನಾವೆಯನ್ನು ಕಟ್ಟುವುದರಲ್ಲಿ ಏನೆಲ್ಲಾ ಒಳಗೂಡಿತ್ತು? 133 ಮೀಟರುಗಳಷ್ಟು ಉದ್ದವೂ 22 ಮೀಟರುಗಳಷ್ಟು ಅಗಲವೂ 13 ಮೀಟರುಗಳಷ್ಟು ಎತ್ತರವೂ ಆಗಿರುವ ಒಂದು ಬೃಹದಾಕಾರದ ಜಲಾಭೇದ್ಯವಾದ, ಮೂರು ಅಂತಸ್ತುಗಳುಳ್ಳ ಮರದ ಪೆಟ್ಟಿಗೆಯನ್ನು ಕಟ್ಟುವಂತೆ ಯೆಹೋವನು ನೋಹನಿಗೆ ನಿರ್ದೇಶನ ನೀಡಿದನು. (ಆದಿಕಾಂಡ 6:15, 16) ಅಂತಹ ದೊಡ್ಡ ಹಡಗು, ಆಧುನಿಕ ದಿನದ ಸರಕುಗಳನ್ನು ಕೊಂಡೊಯ್ಯುವ ಹಡಗುಗಳಷ್ಟು ದೊಡ್ಡ ಗಾತ್ರದ್ದಾಗಿತ್ತು.
ಎಷ್ಟು ಬೃಹದಾಕಾರದ ಕೆಲಸವನ್ನು ಅವನು ವಹಿಸಿಕೊಂಡಿದ್ದನು! ಸಾವಿರಾರು ಮರಗಳನ್ನು ಕಡಿಯುವುದು, ನಾವೆಯನ್ನು ಕಟ್ಟುವ ಸ್ಥಳಕ್ಕೆ ಅವುಗಳನ್ನು ಸಾಗಿಸುವುದು, ಮತ್ತು ಅವುಗಳನ್ನು ತೊಲೆಗಳು ಅಥವಾ ದಿಮ್ಮಿಗಳಾಗಿ ಕತ್ತರಿಸುವುದನ್ನು ಈ ಕೆಲಸವು ಅಗತ್ಯಪಡಿಸಿದ್ದಿರಬಹುದು. ಆಧಾರಕಟ್ಟನ್ನು ರಚಿಸುವುದು, ಗೂಟಗಳನ್ನು ಅಥವಾ ಬೆಣೆಗಳನ್ನು ತಯಾರಿಸುವುದು, ಜಲಾಭೇದ್ಯಗೊಳಿಸಲಿಕ್ಕಾಗಿ ರಾಳವನ್ನು ಸಂಗ್ರಹಿಸುವುದು, ಪಾತ್ರೆಗಳನ್ನು ಹಾಗೂ ಉಪಕರಣಗಳನ್ನು ಸಂಗ್ರಹಿಸುವುದು ಇನ್ನು ಮುಂತಾದ ಕೆಲಸವು ಇದರಲ್ಲಿ ಒಳಗೂಡಿದ್ದಿರಬಹುದು. ವ್ಯಾಪಾರಿಗಳೊಂದಿಗೆ ವ್ಯಾಪಾರ ಕುದುರಿಸುವುದು ಮತ್ತು ಸಾಮಾನುಗಳು ಹಾಗೂ ಸರಬರಾಯಿಗಾಗಿ ಹಣಸಂದಾಯ ಮಾಡುವುದೂ ಈ ಕೆಲಸದಲ್ಲಿ ಸೇರಿದ್ದಿರಬಹುದು. ತೊಲೆಗಳು ಹಾಗೂ ದಿಮ್ಮಿಗಳನ್ನು ನಿಷ್ಕೃಷ್ಟವಾಗಿ ಸರಿಹೊಂದಿಸಲಿಕ್ಕಾಗಿ ಮತ್ತು ಸಾಕಷ್ಟು ಬಲವಾದ ನಾವೆಯನ್ನು ಕಟ್ಟಲಿಕ್ಕಾಗಿ ಮರಗೆಲಸದಲ್ಲಿ ನಿಪುಣತೆಯನ್ನು ಸಹ ಇದು ಅಗತ್ಯಪಡಿಸಿದ್ದಿರಬಹುದೆಂಬುದು ಸುವ್ಯಕ್ತ. ಇದಲ್ಲದೆ ಸ್ವಲ್ಪ ಯೋಚಿಸಿರಿ—ಈ ನಿರ್ಮಾಣ ಕೆಲಸಕ್ಕೆ ಸುಮಾರು 50 ಅಥವಾ 60 ವರ್ಷಗಳು ಹಿಡಿದಿರಬಹುದು!
ಇದೆಲ್ಲಾ ಆದ ಮೇಲೆ ನೋಹನು ಆಹಾರ ಹಾಗೂ ಒಣ ಮೇವಿನ ತಯಾರಿಯ ಕಡೆಗೆ ತನ್ನ ಗಮನಹರಿಸಬೇಕಿತ್ತು. (ಆದಿಕಾಂಡ 6:21) ಅವನು ಪ್ರಾಣಿಗಳ ಒಂದು ದೊಡ್ಡ ಗುಂಪನ್ನು ಒಟ್ಟುಗೂಡಿಸಿ, ಅವುಗಳನ್ನು ನಿಯಂತ್ರಿಸಬೇಕಿತ್ತು. ದೇವರು ಆಜ್ಞಾಪಿಸಿದ್ದೆಲ್ಲವನ್ನೂ ನೋಹನು ಮಾಡಿದನು, ಮತ್ತು ನೇಮಿತ ಕೆಲಸವು ಪೂರ್ಣಗೊಳಿಸಲ್ಪಟ್ಟಿತು. (ಆದಿಕಾಂಡ 6:22) ಯೆಹೋವನ ಆಶೀರ್ವಾದವು ಅದರ ಪೂರ್ಣ ಯಶಸ್ವಿಯನ್ನು ಖಚಿತಪಡಿಸಿತು.
“ಸುನೀತಿಯನ್ನು ಸಾರುವವನು”
ನೋಹನು ನಾವೆಯನ್ನು ಕಟ್ಟುವ ಕೆಲಸವನ್ನು ಮಾತ್ರ ಮಾಡಲಿಲ್ಲ. ಬದಲಾಗಿ ಎಚ್ಚರಿಕೆಯ ಸಂದೇಶವನ್ನು ಸಾರಿದನು ಮತ್ತು “ಸುನೀತಿಯನ್ನು ಸಾರುವವ”ನೋಪಾದಿ ನಂಬಿಗಸ್ತಿಕೆಯಿಂದ ದೇವರ ಸೇವೆಮಾಡಿದನು. ಆದರೆ ಜನರು “ಪ್ರಳಯದ ನೀರು ಬಂದು ಎಲ್ಲರನ್ನು ಕೊಚ್ಚಿಕೊಂಡುಹೋಗುವ ತನಕ ಅದರ ಕಡೆಗೆ ಗಮನವನ್ನು ಹರಿಸಲೇ ಇಲ್ಲ.”—2 ಪೇತ್ರ 2:5; ಮತ್ತಾಯ 24:38, 39, NW.
ಆ ದಿನಗಳಲ್ಲಿದ್ದ ಆತ್ಮಿಕ ಅವನತಿಯನ್ನು ಪರಿಗಣಿಸುವಾಗ, ನೋಹನ ಕುಟುಂಬವು ಹೇಗೆ ಸಂಶಯಪಡುತ್ತಿದ್ದ ನೆರೆಹೊರೆಯವರ ನಗೆಗೀಡಾಗಸಾಧ್ಯವಿತ್ತು ಮತ್ತು ನಿಂದೆ ಹಾಗೂ ಅಪಹಾಸ್ಯಕ್ಕೆ ಗುರಿಯಾಗಸಾಧ್ಯವಿತ್ತು ಎಂಬುದನ್ನು ಅರ್ಥಮಾಡಿಕೊಳ್ಳುವುದು ತುಂಬ ಸುಲಭ. ಅವರು ಹುಚ್ಚರೆಂದು ಜನರು ನೆನಸಿದ್ದಿರಬಹುದು. ಆದರೂ, ತನ್ನ ಮನೆವಾರ್ತೆಗೆ ಆತ್ಮಿಕ ಉತ್ತೇಜನ ಹಾಗೂ ಬೆಂಬಲವನ್ನು ಕೊಡುವುದರಲ್ಲಿ ನೋಹನು ಸಫಲನಾದನು. ಏಕೆಂದರೆ ತಮ್ಮ ಕಾಲದ ಭಕ್ತಿರಹಿತ ಜನರ ಹಿಂಸಾತ್ಮಕ, ಅನೈತಿಕ, ಹಾಗೂ ದಂಗೆಕೋರ ಮಾರ್ಗಗಳಿಗೆ ಅವರೆಂದೂ ಬಲಿಬೀಳಲಿಲ್ಲ. ತನ್ನ ನಂಬಿಕೆಯನ್ನು ತೋರ್ಪಡಿಸಿದಂತಹ ನಡೆನುಡಿಯ ಮೂಲಕ ನೋಹನು, ಆ ಕಾಲದ ಲೋಕವನ್ನು ದಂಡನಾರ್ಹವೆಂದು ತೀರ್ಪುಕೊಟ್ಟನು.—ಇಬ್ರಿಯ 11:7, NW.
ಜಲಪ್ರಳಯದಿಂದ ಸಂರಕ್ಷಿಸಲ್ಪಟ್ಟದ್ದು
ಮಳೆಯು ಆರಂಭವಾಗುವ ಸ್ವಲ್ಪ ಸಮಯಕ್ಕೆ ಮುಂಚೆ, ಸಿದ್ಧಗೊಳಿಸಲ್ಪಟ್ಟ ನಾವೆಯೊಳಗೆ ಹೋಗುವಂತೆ ದೇವರು ನೋಹನಿಗೆ ಹೇಳಿದನು. ನೋಹನ ಕುಟುಂಬವೂ ಪ್ರಾಣಿಗಳೂ ನಾವೆಯೊಳಕ್ಕೆ ಹೋದ ನಂತರ, ಯಾವುದೇ ಅಪಹಾಸ್ಯಸೂಚಕ ಗೇಲಿಯು ಕೇಳಿಬರದಂತೆ ‘ಯೆಹೋವನು ಬಾಗಿಲನ್ನು ಮುಚ್ಚಿದನು.’ ಪ್ರಳಯವು ಬಂದಾಗ, ಅವಿಧೇಯ ದೇವದೂತರು ತಮ್ಮ ಶಾರೀರಿಕ ದೇಹಗಳನ್ನು ತೊರೆದು, ನಾಶನದಿಂದ ತಪ್ಪಿಸಿಕೊಂಡರು ಎಂಬುದು ಸುವ್ಯಕ್ತ. ಆದರೆ ಇತರರ ಕುರಿತಾಗಿ ಏನು? ನಾವೆಯ ಹೊರಗೆ ಒಣನೆಲದ ಮೇಲಿದ್ದ ನೆಫೀಲಿಯರ ಸಮೇತ ಪ್ರತಿಯೊಂದು ಜೀವಿಯು ನಾಶವಾಗಿಹೋಯಿತು! ನೋಹ ಮತ್ತು ಅವನ ಕುಟುಂಬವು ಮಾತ್ರ ಪಾರಾಯಿತು.—ಆದಿಕಾಂಡ 7:1-23.
ನೋಹನು ಮತ್ತು ಅವನ ಮನೆವಾರ್ತೆಯವರು, ಒಂದು ಚಾಂದ್ರಮಾನ ವರ್ಷ ಹಾಗೂ ಹತ್ತು ದಿನಗಳನ್ನು ನಾವೆಯಲ್ಲಿ ಕಳೆದರು. ಪ್ರಾಣಿಗಳಿಗೆ ಆಹಾರ ಮತ್ತು ನೀರನ್ನು ನೀಡುವುದರಲ್ಲಿ, ಕಸವನ್ನು ತೆಗೆಯುವುದರಲ್ಲಿ, ಮತ್ತು ಸಮಯದ ಜಾಡನ್ನು ಪತ್ತೆಹಚ್ಚುವುದರಲ್ಲಿ ಅವರು ಕಾರ್ಯಮಗ್ನರಾಗಿದ್ದರು. ಹಡಗಿನ ಒಂದು ದಿನಚರಿ ಪುಸ್ತಕದಂತೆ, ಜಲಪ್ರಳಯದ ಎಲ್ಲ ಹಂತಗಳನ್ನು ಆದಿಕಾಂಡ ಪುಸ್ತಕವು ನಿಖರವಾಗಿ ತಿಳಿಯಪಡಿಸುತ್ತದೆ. ಇದು ಆ ವೃತ್ತಾಂತದ ನಿಷ್ಕೃಷ್ಟತೆಯನ್ನು ಪ್ರತಿಬಿಂಬಿಸುತ್ತದೆ.—ಆದಿಕಾಂಡ 7:11, 17, 24; 8:3-14.
ನಾವೆಯಲ್ಲಿರುವಾಗ, ನೋಹನು ತನ್ನ ಕುಟುಂಬದೊಂದಿಗೆ ಆತ್ಮಿಕ ಚರ್ಚೆಗಳನ್ನು ನಡೆಸಿದನು ಮತ್ತು ದೇವರಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸಿದನು ಎಂಬುದರಲ್ಲಿ ಸಂಶಯವೇ ಇಲ್ಲ. ನೋಹ ಹಾಗೂ ಅವನ ಕುಟುಂಬದ ಮೂಲಕ ಜಲಪ್ರಳಯಕ್ಕೆ ಮುಂಚಿನ ಇತಿಹಾಸವು ಸಂರಕ್ಷಿಸಲ್ಪಟ್ಟಿತು ಎಂಬುದು ಸುವ್ಯಕ್ತ. ವಿಶ್ವಾಸಾರ್ಹವಾದ ಮೌಖಿಕ ಸಂಪ್ರದಾಯಗಳು ಅಥವಾ ಅವರ ಬಳಿಯಿದ್ದ ಲಿಖಿತ ಐತಿಹಾಸಿಕ ದಾಖಲೆಗಳು, ಜಲಪ್ರಳಯದ ಸಮಯದಲ್ಲಿ ಪ್ರಯೋಜನಾರ್ಹ ಪರಿಗಣನೆಗಾಗಿ ಅತ್ಯುತ್ತಮ ವಿಷಯವನ್ನು ಒದಗಿಸಿದ್ದಿರಬಹುದು.
ಪುನಃ ಒಮ್ಮೆ ಒಣ ಭೂಮಿಯ ಮೇಲೆ ಕಾಲಿಡಲು ನೋಹನೂ ಅವನ ಕುಟುಂಬವೂ ಎಷ್ಟು ಸಂತೋಷಿಸಿದ್ದಿರಬೇಕು! ತಾನು ಮಾಡಿದ ಮೊದಲ ಕೆಲಸವಾಗಿ ಅವನು ಒಂದು ಯಜ್ಞವೇದಿಯನ್ನು ಕಟ್ಟಿ, ತಮ್ಮನ್ನು ಕಾಪಾಡಿದಂತಹ ದೇವರಿಗೆ ಯಜ್ಞಗಳನ್ನು ಅರ್ಪಿಸುತ್ತಾ, ತನ್ನ ಕುಟುಂಬದ ಪರವಾಗಿ ಯಾಜಕನೋಪಾದಿ ಕ್ರಿಯೆಗೈದನು.—ಆದಿಕಾಂಡ 8:18-20.
“ನೋಹನ ದಿವಸಗಳು ಹೇಗಿದ್ದವೋ ಹಾಗೆಯೇ”
ಯೇಸು ಕ್ರಿಸ್ತನು ಹೇಳಿದ್ದು: “ನೋಹನ ದಿವಸಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಪ್ರತ್ಯಕ್ಷತೆಯೂ ಇರುವದು.” (ಮತ್ತಾಯ 24:37) ತದ್ರೀತಿಯಲ್ಲಿ ಇಂದು ಸಹ ಕ್ರೈಸ್ತರು ನೀತಿಯನ್ನು ಸಾರುವವರಾಗಿದ್ದಾರೆ ಮತ್ತು ಜನರು ಪಶ್ಚಾತ್ತಾಪಪಡುವಂತೆ ಉತ್ತೇಜಿಸುತ್ತಾರೆ. (2 ಪೇತ್ರ 3:5-9) ಈ ಹೋಲಿಕೆಯು ಕೊಡಲ್ಪಟ್ಟಿರುವುದರಿಂದ, ಜಲಪ್ರಳಯಕ್ಕೆ ಮುಂಚೆ ನೋಹನ ಮನಸ್ಸಿನಲ್ಲಿ ಏನೆಲ್ಲಾ ಆಲೋಚನೆಗಳಿದ್ದಿರಬಹುದು ಎಂದು ನೀವು ಆಶ್ಚರ್ಯಪಡಬಹುದು. ತನ್ನ ಸಾರುವಿಕೆಯು ನಿಷ್ಪ್ರಯೋಜಕವಾಗಿದೆ ಎಂದು ಅವನಿಗೆ ಎಂದಾದರೂ ಅನಿಸಿದ್ದಿರಬಹುದೋ? ಕೆಲವೊಮ್ಮೆ ಅವನು ಈ ಕೆಲಸದಲ್ಲಿ ಆಯಾಸಗೊಂಡಿದ್ದಿರಬಹುದೋ? ಬೈಬಲು ಇದರ ಬಗ್ಗೆ ಏನೂ ಹೇಳುವುದಿಲ್ಲ. ಆದರೆ ಅದು ನೋಹನು ದೇವರಿಗೆ ವಿಧೇಯನಾದನು ಎಂದಷ್ಟೇ ಹೇಳುತ್ತದೆ.
ನೋಹನ ಸನ್ನಿವೇಶಕ್ಕೂ ನಮ್ಮ ಸನ್ನಿವೇಶಕ್ಕೂ ಇರುವ ಸಂಬಂಧವನ್ನು ನೀವು ಮನಗಂಡಿರೋ? ವಿರೋಧ ಹಾಗೂ ಕಷ್ಟಸಂಕಟಗಳ ನಡುವೆಯೂ ಅವನು ದೇವರಿಗೆ ವಿಧೇಯನಾದನು. ಆದುದರಿಂದಲೇ ಯೆಹೋವನು ಅವನನ್ನು ನೀತಿವಂತನಾಗಿ ಪರಿಗಣಿಸಿದನು. ದೇವರು ನಿರ್ದಿಷ್ಟವಾಗಿ ಯಾವಾಗ ಪ್ರಳಯವನ್ನು ಬರಮಾಡುತ್ತಾನೆಂಬುದು ನೋಹನ ಕುಟುಂಬಕ್ಕೆ ತಿಳಿದಿರಲಿಲ್ಲವಾದರೂ, ಅದು ಖಂಡಿತವಾಗಿಯೂ ಸಂಭವಿಸುತ್ತದೆ ಎಂಬುದು ಅವರಿಗೆ ಗೊತ್ತಿತ್ತು. ಕಷ್ಟಕರ ಕೆಲಸದ ವರ್ಷಗಳಲ್ಲಿ ಮತ್ತು ಫಲರಹಿತ ಸಾರುವಿಕೆಯ ಸಮಯದಲ್ಲಿ, ದೇವರ ಮಾತುಗಳಲ್ಲಿನ ನಂಬಿಕೆಯು ನೋಹನನ್ನು ಪೋಷಿಸಿತು. ವಾಸ್ತವದಲ್ಲಿ ನಮಗೆ ಹೀಗೆ ಹೇಳಲ್ಪಟ್ಟಿದೆ: “ನಂಬಿಕೆಯಿಂದಲೇ ನೋಹನು ಅದು ವರೆಗೆ ಕಾಣದಿದ್ದ ಸಂಗತಿಗಳ ವಿಷಯವಾಗಿ ದೈವೋಕ್ತಿಯನ್ನು ಹೊಂದಿ ಭಯಭಕ್ತಿಯುಳ್ಳವನಾಗಿ ತನ್ನ ಮನೆಯವರ ಸಂರಕ್ಷಣೆಗೋಸ್ಕರ ನಾವೆಯನ್ನು ಕಟ್ಟಿ ಸಿದ್ಧಮಾಡಿದನು. ಅದರಿಂದ ಅವನು ಲೋಕದವರನ್ನು ದಂಡನೆಗೆ ಪಾತ್ರರೆಂದು ನಿರ್ಣಯಿಸಿಕೊಂಡು [“ತನ್ನ ನಂಬಿಕೆಯ ಮೂಲಕ ಅವನು ಲೋಕವನ್ನು ದಂಡನಾರ್ಹವೆಂದು ತೀರ್ಪುಕೊಟ್ಟು,” NW] ನಂಬಿಕೆಯ ಫಲವಾದ ನೀತಿಗೆ ಬಾಧ್ಯನಾದನು.”—ಇಬ್ರಿಯ 11:7.
ಅಂತಹ ನಂಬಿಕೆಯನ್ನು ನೋಹನು ಹೇಗೆ ಪಡೆದುಕೊಂಡನು? ಯೆಹೋವನ ಕುರಿತು ತನಗೆ ತಿಳಿದಿದ್ದ ಪ್ರತಿಯೊಂದು ವಿಷಯದ ಬಗ್ಗೆ ಮನನಮಾಡಲು ಅವನು ಸಮಯವನ್ನು ತೆಗೆದುಕೊಂಡನು ಮತ್ತು ಆ ಜ್ಞಾನವು ತನ್ನನ್ನು ಮಾರ್ಗದರ್ಶಿಸುವಂತೆ ಅನುಮತಿಸಿದನು ಎಂಬುದು ಸುವ್ಯಕ್ತ. ನೋಹನು ಪ್ರಾರ್ಥನೆಯಲ್ಲಿ ದೇವರೊಂದಿಗೆ ಮಾತಾಡಿದನು ಎಂಬುದಂತೂ ನಿಸ್ಸಂಶಯ. ವಾಸ್ತವದಲ್ಲಿ, ಅವನು ಯೆಹೋವನೊಂದಿಗೆ ಎಷ್ಟು ಚಿರಪರಿಚಿತನಾದನೆಂದರೆ, ಅವನು ‘ದೇವರೊಂದಿಗೆ ಅನ್ಯೋನ್ಯವಾಗಿ ನಡೆದನು.’ ಕುಟುಂಬದ ತಲೆಯೋಪಾದಿ ನೋಹನು ತನ್ನ ಮನೆವಾರ್ತೆಗಾಗಿ ಸಮಯವನ್ನು ವಿನಿಯೋಗಿಸಿದನು ಮತ್ತು ಪ್ರೀತಿಭರಿತ ಗಮನವನ್ನೂ ಕೊಟ್ಟನು. ತನ್ನ ಪತ್ನಿ, ತನ್ನ ಮೂವರು ಪುತ್ರರು ಹಾಗೂ ತನ್ನ ಸೊಸೆಯರ ಆತ್ಮಿಕ ಅಭಿರುಚಿಗಳನ್ನು ಪೂರೈಸುವುದು ಸಹ ಇದರಲ್ಲಿ ಸೇರಿತ್ತು.
ನೋಹನಂತೆ, ಇಂದಿನ ನಿಜ ಕ್ರೈಸ್ತರು, ಯೆಹೋವನು ಈ ಭಕ್ತಿರಹಿತ ವಿಷಯಗಳ ವ್ಯವಸ್ಥೆಗೆ ಅತಿ ಬೇಗನೆ ಅಂತ್ಯವನ್ನು ತರುವನು ಎಂಬುದನ್ನು ತಿಳಿದವರಾಗಿದ್ದಾರೆ. ಆ ದಿನ ಅಥವಾ ಗಳಿಗೆಯ ಕುರಿತು ನಮಗೆ ತಿಳಿದಿಲ್ಲವಾದರೂ, ‘ನೀತಿಯನ್ನು ಸಾರುವವ’ನಾಗಿದ್ದ ಈ ವ್ಯಕ್ತಿಯ ನಂಬಿಕೆ ಹಾಗೂ ವಿಧೇಯತೆಯನ್ನು ಅನುಕರಿಸುವುದು, “ಪ್ರಾಣರಕ್ಷಣೆ”ಯಲ್ಲಿ ಫಲಿಸುವುದು ಎಂಬುದನ್ನು ನಾವು ಗ್ರಹಿಸುತ್ತೇವೆ.—ಇಬ್ರಿಯ 10:36-39.
[ಪುಟ 29ರಲ್ಲಿರುವ ಚೌಕ]
ಅದು ನಿಜವಾಗಿಯೂ ನಡೆಯಿತೋ?
ಹೆಚ್ಚುಕಡಿಮೆ ಎಲ್ಲ ಬುಡಕಟ್ಟುಗಳು ಹಾಗೂ ದೇಶಗಳಿಂದ ಜಲಪ್ರಳಯದ ಕುರಿತಾದ ಹೆಚ್ಚುಕಡಿಮೆ 270 ಪುರಾಣ ಕಥೆಗಳನ್ನು ಮನುಷ್ಯಶಾಸ್ತ್ರಜ್ಞರು ಸಂಗ್ರಹಿಸಿದ್ದಾರೆ. “ಜಲಪ್ರಳಯದ ಕಥೆಯು ಲೋಕದಾದ್ಯಂತ ಕಂಡುಬರುತ್ತದೆ” ಎಂದು ವಿದ್ವಾಂಸರಾದ ಕ್ಲೌಸ್ ವೆಸ್ಟರ್ಮ್ಯಾನ್ ಹೇಳುತ್ತಾರೆ. “ಸೃಷ್ಟಿಯ ವೃತ್ತಾಂತದಂತೆಯೇ ಇದು ಸಹ ನಮ್ಮ ಮೂಲಭೂತ ಸಾಂಸ್ಕೃತಿಕ ಪರಂಪರೆಯ ಒಂದು ಭಾಗವಾಗಿದೆ. ಇದು ನಿಜವಾಗಿಯೂ ಆಶ್ಚರ್ಯಚಕಿತವಾದದ್ದಾಗಿದೆ: ಭೂಮಿಯ ಎಲ್ಲ ಭಾಗಗಳಲ್ಲಿ ಒಂದು ದೊಡ್ಡ ಪುರಾತನ ಪ್ರಳಯದ ಕುರಿತಾದ ಕಥೆಗಳನ್ನು ನಾವು ಕಂಡುಕೊಳ್ಳುತ್ತೇವೆ.” ಇದಕ್ಕೆ ಕಾರಣವೇನು? ವ್ಯಾಖ್ಯಾನಗಾರರಾದ ಏನ್ರೀಕೋ ಗಾಲ್ಬೀಆಟೀ ಹೇಳುವುದು: “ವಿಭಿನ್ನವಾದ ಹಾಗೂ ವ್ಯಾಪಕವಾಗಿ ಚೆದುರಿರುವ ಜನರಲ್ಲಿ ಜಲಪ್ರಳಯ ಸಂಪ್ರದಾಯವು ಈಗಲೂ ಅಸ್ತಿತ್ವದಲ್ಲಿರುವುದು, ಅಂತಹ ಸಂಪ್ರದಾಯಗಳ ಆಧಾರವನ್ನು ರೂಪಿಸುವ ನಿಜಾಂಶದ ಐತಿಹಾಸಿಕ ನೈಜತೆಯ ಸಂಕೇತವಾಗಿದೆ.” ಆದರೂ, ವಿದ್ವಾಂಸರ ಹೇಳಿಕೆಗಳಿಗಿಂತಲೂ ಕ್ರೈಸ್ತರಿಗೆ ಹೆಚ್ಚು ಪ್ರಾಮುಖ್ಯವಾದದ್ದು, ಮಾನವ ಇತಿಹಾಸದಲ್ಲಿ ಜಲಪ್ರಳಯವು ಒಂದು ವಾಸ್ತವಿಕ ಘಟನೆಯಾಗಿತ್ತು ಎಂದು ಸ್ವತಃ ಯೇಸುವೇ ಅದರ ಕುರಿತು ಮಾತಾಡಿದನು ಎಂಬ ಜ್ಞಾನವೇ ಆಗಿದೆ.—ಲೂಕ 17:26, 27.
[ಪುಟ 30ರಲ್ಲಿರುವ ಚೌಕ]
ಪುರಾಣ ಕಥೆಗಳಲ್ಲಿ ನೆಫೀಲಿಯರೋ?
ದೇವತೆಗಳು ಹಾಗೂ ಮಾನವರ ನಡುವಣ ನಿಷಿದ್ಧ ಲೈಂಗಿಕ ಸಂಬಂಧಗಳು ಮತ್ತು ಈ ಸಂಬಂಧಗಳಿಂದ ಹುಟ್ಟಿದ “ವೀರರು” ಅಥವಾ “ಉಪದೇವತೆಗಳ” ಕುರಿತಾದ ಕಥೆಗಳು, ಗ್ರೀಕ್, ಐಗುಪ್ತ, ಯೂಗರಿಟ್, ಹುರೀಯನ್ ಮತ್ತು ಮೆಸಪೊಟೇಮಿಯದ ದೇವತಾಶಾಸ್ತ್ರಗಳಲ್ಲಿ ಸರ್ವಸಾಮಾನ್ಯವಾಗಿದ್ದವು. ಗ್ರೀಕ್ ಪುರಾಣ ಕಥೆಯ ದೇವತೆಗಳಿಗೆ ಮಾನವ ರೂಪವಿತ್ತು ಮತ್ತು ಅತ್ಯುತ್ತಮ ಸೌಂದರ್ಯವಿತ್ತು. ಅವರು ಊಟಮಾಡಿದರು, ಕುಡಿದರು, ಮಲಗಿದರು, ಲೈಂಗಿಕ ಸಂಭೋಗಮಾಡಿದರು, ಜಗಳವಾಡಿದರು, ಕಾದಾಡಿದರು, ಜನರನ್ನು ಭ್ರಷ್ಟಗೊಳಿಸಿದರು ಮತ್ತು ಬಲಾತ್ಕಾರ ಸಂಭೋಗ ನಡೆಸಿದರು. ಅವರು ಪವಿತ್ರರಾಗಿರಬೇಕಿತ್ತಾದರೂ, ವಂಚಿಸಿದರು ಹಾಗೂ ದುಷ್ಕೃತ್ಯಗಳನ್ನು ನಡೆಸಿದರು. ಅಕಿಲೀಸ್ನಂತಹ ವೀರರ ವಿಷಯದಲ್ಲಿ, ಅವರು ದೇವರ ಹಾಗೂ ಮಾನವ ವಂಶಜರೆಂದೂ, ಅವರಿಗೆ ಅಮಾನುಷ ಸಾಮರ್ಥ್ಯವು ಕೊಡಲ್ಪಟ್ಟಿತ್ತೆಂದೂ, ಆದರೆ ಅಮರತ್ವವು ಕೊಡಲ್ಪಟ್ಟಿರಲಿಲ್ಲವೆಂದೂ ಹೇಳಲಾಗುತ್ತಿತ್ತು. ಆದುದರಿಂದ, ನೆಫೀಲಿಯರ ಕುರಿತು ಆದಿಕಾಂಡವು ಏನು ಹೇಳುತ್ತದೋ ಅದು, ಯಾವುದು ಅಂತಹ ಪುರಾಣ ಕಥೆಗಳ ಮೂಲವಾಗಿದ್ದಿರಸಾಧ್ಯವಿದೆಯೋ ಅಥವಾ ಮೂಲವಾಗಿತ್ತೋ ಅದರ ಮೇಲೆ ಬೆಳಕು ಬೀರುತ್ತದೆ.