ಮತ್ತಾಯ
1 ಯೇಸು ಕ್ರಿಸ್ತನ* ಜೀವನಚರಿತ್ರೆಯ* ಪುಸ್ತಕ. ಯೇಸು ದಾವೀದನ ವಂಶದವನು.+ ದಾವೀದನು ಅಬ್ರಹಾಮನ ವಂಶದವನು.
2 ಅಬ್ರಹಾಮನಿಗೆ ಇಸಾಕ ಹುಟ್ಟಿದನು.
ಇಸಾಕನಿಗೆ ಯಾಕೋಬ ಹುಟ್ಟಿದನು.
ಯಾಕೋಬನಿಗೆ ಯೆಹೂದ ಮತ್ತು ಅವನ ಅಣ್ಣತಮ್ಮಂದಿರು ಹುಟ್ಟಿದರು.
3 ಯೆಹೂದನಿಗೆ ಪೆರೆಚ ಮತ್ತು ಜೆರಹ ಹುಟ್ಟಿದರು, ತಾಮಾರ ಇವರ ತಾಯಿ.
ಪೆರೆಚನಿಗೆ ಹೆಚ್ರೋನ ಹುಟ್ಟಿದನು.
ಹೆಚ್ರೋನನಿಗೆ ರಾಮ ಹುಟ್ಟಿದನು.
4 ರಾಮನಿಗೆ ಅಮ್ಮೀನಾದಾಬ ಹುಟ್ಟಿದನು.
ಅಮ್ಮೀನಾದಾಬನಿಗೆ ನಹಶೋನ ಹುಟ್ಟಿದನು.
ನಹಶೋನನಿಗೆ ಸಲ್ಮೋನ ಹುಟ್ಟಿದನು.
5 ಸಲ್ಮೋನನಿಗೆ ಬೋವಜ ಹುಟ್ಟಿದನು, ಅವನ ತಾಯಿ ರಾಹಾಬ.
ಬೋವಜನಿಗೆ ಓಬೇದ ಹುಟ್ಟಿದನು, ಅವನ ತಾಯಿ ರೂತ್.
ಓಬೇದನಿಗೆ ಇಷಯ ಹುಟ್ಟಿದನು.
6 ಇಷಯನಿಗೆ ರಾಜ ದಾವೀದ ಹುಟ್ಟಿದನು.
ದಾವೀದನಿಗೂ ಊರೀಯನ ಹೆಂಡತಿಗೂ ಸೊಲೊಮೋನ ಹುಟ್ಟಿದನು.
7 ಸೊಲೊಮೋನನಿಗೆ ರೆಹಬ್ಬಾಮ ಹುಟ್ಟಿದನು.
ರೆಹಬ್ಬಾಮನಿಗೆ ಅಬೀಯ ಹುಟ್ಟಿದನು.
ಅಬೀಯನಿಗೆ ಆಸ ಹುಟ್ಟಿದನು.
8 ಆಸನಿಗೆ ಯೆಹೋಷಾಫಾಟ ಹುಟ್ಟಿದನು.
ಯೆಹೋಷಾಫಾಟನಿಗೆ ಯೆಹೋರಾಮ ಹುಟ್ಟಿದನು.
ಯೆಹೋರಾಮನಿಗೆ ಉಜ್ಜೀಯ ಹುಟ್ಟಿದನು.
9 ಉಜ್ಜೀಯನಿಗೆ ಯೋತಾಮ ಹುಟ್ಟಿದನು.
ಯೋತಾಮನಿಗೆ ಆಹಾಜ ಹುಟ್ಟಿದನು.
ಆಹಾಜನಿಗೆ ಹಿಜ್ಕೀಯ ಹುಟ್ಟಿದನು.
10 ಹಿಜ್ಕೀಯನಿಗೆ ಮನಸ್ಸೆ ಹುಟ್ಟಿದನು.
ಮನಸ್ಸೆಗೆ ಆಮೋನ ಹುಟ್ಟಿದನು.
ಆಮೋನನಿಗೆ ಯೋಷೀಯ ಹುಟ್ಟಿದನು.
11 ಯೋಷೀಯನಿಗೆ ಯೆಕೊನ್ಯ ಮತ್ತು ಅವನ ಸಹೋದರರು ಹುಟ್ಟಿದರು. ಯೆಹೂದ್ಯರು ಬಾಬೆಲಿಗೆ ಬಂದಿಗಳಾಗಿ ಹೋದ ಮೇಲೆ ಇವರು ಹುಟ್ಟಿದರು.
12 ಯೆಕೊನ್ಯನಿಗೆ ಶೆಯಲ್ತಿಯೇಲ ಹುಟ್ಟಿದನು. ಇವನು ಹುಟ್ಟಿದ್ದು ಯೆಹೂದ್ಯರು ಬಾಬೆಲಿಗೆ ಬಂದಿಗಳಾಗಿ ಹೋದ ಮೇಲೆ.
ಶೆಯಲ್ತಿಯೇಲನಿಗೆ ಜೆರುಬ್ಬಾಬೆಲ ಹುಟ್ಟಿದನು.
13 ಜೆರುಬ್ಬಾಬೆಲನಿಗೆ ಅಬಿಹೂದ ಹುಟ್ಟಿದನು.
ಅಬಿಹೂದನಿಗೆ ಎಲ್ಯಕೀಮ ಹುಟ್ಟಿದನು.
ಎಲ್ಯಕೀಮನಿಗೆ ಅಜೋರ ಹುಟ್ಟಿದನು.
14 ಅಜೋರನಿಗೆ ಸದೋಕ ಹುಟ್ಟಿದನು.
ಸದೋಕನಿಗೆ ಅಖೀಮ ಹುಟ್ಟಿದನು.
ಅಖೀಮನಿಗೆ ಎಲಿಹೂದ ಹುಟ್ಟಿದನು.
15 ಎಲಿಹೂದನಿಗೆ ಎಲಿಯಾಜರ ಹುಟ್ಟಿದನು.
ಎಲಿಯಾಜರನಿಗೆ ಮತ್ತಾನ ಹುಟ್ಟಿದನು.
ಮತ್ತಾನನಿಗೆ ಯಾಕೋಬ ಹುಟ್ಟಿದನು.
16 ಯಾಕೋಬನಿಗೆ ಯೋಸೇಫ ಹುಟ್ಟಿದನು. ಇವನು ಮರಿಯಳ ಗಂಡ. ಮರಿಯಳಿಗೆ ಯೇಸು ಹುಟ್ಟಿದನು.+ ಆತನನ್ನು ಕ್ರಿಸ್ತ ಎಂದು ಕರೆಯಲಾಗುತ್ತದೆ.
17 ಹೀಗೆ ಅಬ್ರಹಾಮನಿಂದ ದಾವೀದನ ತನಕ 14 ತಲೆಮಾರು. ದಾವೀದನಿಂದ ಯೆಹೂದ್ಯರು ಬಾಬೆಲಿಗೆ ಬಂದಿಗಳಾಗಿ ಹೋದ ಸಮಯದ ತನಕ 14 ತಲೆಮಾರು. ಯೆಹೂದ್ಯರು ಬಾಬೆಲಿಗೆ ಬಂದಿಗಳಾಗಿ ಹೋದ ಸಮಯದಿಂದ ಕ್ರಿಸ್ತನ ತನಕ 14 ತಲೆಮಾರು.
18 ಯೇಸು ಕ್ರಿಸ್ತನು ಹುಟ್ಟಿದ್ದು ಹೀಗೆ: ಆತನ ತಾಯಿ ಮರಿಯಳಿಗೆ ಯೋಸೇಫನ ಜೊತೆ ನಿಶ್ಚಿತಾರ್ಥ ಆಗಿತ್ತು. ಅವರ ಮದುವೆ ಮುಂಚೆ ಆಕೆ ಕನ್ಯೆಯಾಗಿದ್ದಾಗಲೇ ದೇವರ ಪವಿತ್ರಶಕ್ತಿಯಿಂದ ಗರ್ಭಿಣಿಯಾದಳು. 19 ಅವಳ ಗಂಡ ಯೋಸೇಫನು ನೀತಿವಂತನಾಗಿದ್ದನು. ಹಾಗಾಗಿ ಎಲ್ಲ ಜನರ ಮುಂದೆ ಅವಳಿಗೆ ಅವಮಾನ ಮಾಡುವುದು ಅವನಿಗೆ ಇಷ್ಟ ಇರಲಿಲ್ಲ. ಆದ್ದರಿಂದ ಅವಳಿಗೆ ಗುಟ್ಟಾಗಿ ವಿಚ್ಛೇದನ ಕೊಡಬೇಕೆಂದು ನೆನಸಿದ್ದನು. 20 ಅವನು ಹೀಗೆ ಯೋಚಿಸುತ್ತಾ ನಿದ್ದೆಮಾಡಿದನು. ಆಗ ಯೆಹೋವನ* ದೂತನು ಕನಸಿನಲ್ಲಿ ಬಂದು “ಯೋಸೇಫನೇ, ದಾವೀದನ ಮಗನೇ, ನಿನ್ನ ಹೆಂಡತಿ ಮರಿಯಳನ್ನು ಮನೆಗೆ ಕರೆದುಕೊಂಡು ಬರಲು ಹೆದರಬೇಡ. ಅವಳು ಗರ್ಭಿಣಿಯಾಗಿರುವುದು ಪವಿತ್ರಶಕ್ತಿಯಿಂದಲೇ. 21 ಅವಳಿಗೆ ಒಂದು ಗಂಡು ಮಗು ಹುಟ್ಟುವುದು. ನೀನು ಆ ಮಗುವಿಗೆ ಯೇಸು*+ ಎಂದು ಹೆಸರಿಡಬೇಕು. ಯಾಕೆಂದರೆ ಆತನು ಜನರನ್ನು ಪಾಪಗಳಿಂದ ಬಿಡಿಸುವನು”* ಅಂದನು. 22 ಯೆಹೋವನು* ತನ್ನ ಪ್ರವಾದಿಯ ಮೂಲಕ ಹೇಳಿದ ಮಾತುಗಳು ನೆರವೇರಲು ಇದೆಲ್ಲ ನಡೆಯಿತು. ಆ ಮಾತುಗಳು ಏನೆಂದರೆ: 23 “ನೋಡಿ! ಒಬ್ಬ ಕನ್ಯೆ ಗರ್ಭಿಣಿಯಾಗಿ ಒಂದು ಗಂಡು ಮಗುವನ್ನು ಹೆರುವಳು. ಅವರು ಆತನಿಗೆ ಇಮ್ಮಾನುವೇಲ್ ಎಂದು ಹೆಸರಿಡುವರು.” ಆ ಹೆಸರಿನ ಅರ್ಥ “ದೇವರು ನಮ್ಮ ಜೊತೆ ಇದ್ದಾನೆ.”
24 ಆಮೇಲೆ ಯೋಸೇಫನು ನಿದ್ದೆಯಿಂದ ಎದ್ದು ಯೆಹೋವನ* ದೂತನು ಹೇಳಿದ ಹಾಗೆಯೇ ಮಾಡಿದನು. ತನ್ನ ಹೆಂಡತಿಯನ್ನು ಮನೆಗೆ ಕರೆದುಕೊಂಡು ಬಂದನು.
25 ಆದರೆ ಅವಳಿಗೆ ಮಗು ಹುಟ್ಟುವ ತನಕ ಅವನು ಅವಳ ಜೊತೆ ಲೈಂಗಿಕ ಸಂಬಂಧ ಇಟ್ಟುಕೊಳ್ಳಲಿಲ್ಲ. ಅವನು ಆ ಮಗುವಿಗೆ ಯೇಸು ಎಂದು ಹೆಸರಿಟ್ಟನು.