ಮತ್ತಾಯ
12 ಒಮ್ಮೆ ಸಬ್ಬತ್ ದಿನದಲ್ಲಿ ಯೇಸು ತನ್ನ ಶಿಷ್ಯರ ಜೊತೆ ಹೊಲಗಳನ್ನು ದಾಟಿ ಹೋಗುತ್ತಿದ್ದಾಗ ಶಿಷ್ಯರಿಗೆ ಹಸಿವಾಯಿತು. ಅವರು ತೆನೆಗಳನ್ನು ಕಿತ್ತು ತಿನ್ನಲಾರಂಭಿಸಿದರು. 2 ಇದನ್ನು ನೋಡಿ ಫರಿಸಾಯರು ಆತನಿಗೆ “ನೋಡು! ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ನಿಯಮಕ್ಕೆ ವಿರುದ್ಧವಾದ ಕೆಲಸ ಮಾಡುತ್ತಿದ್ದಾರೆ” ಅಂದರು. 3 ಅದಕ್ಕೆ ಯೇಸು ಅವರಿಗೆ ಹೀಗಂದನು: “ದಾವೀದನಿಗೆ ಮತ್ತು ಅವನೊಟ್ಟಿಗಿದ್ದವರಿಗೆ ಹಸಿವಾದಾಗ ಅವನು ಏನು ಮಾಡಿದನೆಂದು ನೀವು ಓದಲಿಲ್ಲವೇ? 4 ಅವನು ದೇವರ ಮನೆಯನ್ನು* ಪ್ರವೇಶಿಸಿ ಯಾಜಕರು ಮಾತ್ರ ತಿನ್ನಬಹುದಾಗಿದ್ದ ನೈವೇದ್ಯದ ರೊಟ್ಟಿಗಳನ್ನು ತಂದು ಅವನೂ ಅವನ ಜೊತೆಗಿದ್ದವರೂ ತಿಂದರಲ್ಲವೇ? ಇದು ನಿಯಮಕ್ಕೆ ವಿರುದ್ಧ ಆಗಿತ್ತಲ್ಲವೇ? 5 ಅಷ್ಟೇ ಅಲ್ಲ, ಸಬ್ಬತ್ ದಿನದಲ್ಲಿ ಯಾಜಕರು ದೇವಾಲಯದಲ್ಲಿ ಕೆಲಸ ಮಾಡಿ ಸಬ್ಬತ್ ನಿಯಮ ಮುರಿದರೂ ಅವರು ನಿರ್ದೋಷಿಗಳೆಂದು ನೀವು ನಿಯಮ ಪುಸ್ತಕದಲ್ಲಿ ಓದಲಿಲ್ಲವೇ? 6 ದೇವಾಲಯಕ್ಕಿಂತ ಹೆಚ್ಚಿನವನು ಇಲ್ಲಿದ್ದಾನೆ ಎಂದು ನಾನು ನಿಮಗೆ ಹೇಳುತ್ತಿದ್ದೇನೆ. 7 ‘ನನಗೆ ಬಲಿ ಬೇಡ, ಕರುಣೆ ಬೇಕು’+ ಎಂಬ ಮಾತಿನ ಅರ್ಥ ನಿಮಗೆ ಗೊತ್ತಿರುತ್ತಿದ್ದರೆ ನೀವು ನಿರ್ದೋಷಿಗಳನ್ನು ಖಂಡಿಸುತ್ತಿರಲಿಲ್ಲ. 8 ಯಾಕೆಂದರೆ ಮನುಷ್ಯಕುಮಾರನು ಸಬ್ಬತ್ ದಿನಕ್ಕೆ ಒಡೆಯನಾಗಿದ್ದಾನೆ.”
9 ಯೇಸು ಅಲ್ಲಿಂದ ಹೊರಟು ಅವರ ಸಭಾಮಂದಿರಕ್ಕೆ ಹೋದನು. 10 ಕೈ ಬತ್ತಿಹೋಗಿದ್ದ* ಒಬ್ಬ ವ್ಯಕ್ತಿ ಅಲ್ಲಿದ್ದ. ಆಗ ಸ್ವಲ್ಪ ಜನರು ಯೇಸುವಿನ ಮೇಲೆ ತಪ್ಪು ಹೊರಿಸುವ ಉದ್ದೇಶದಿಂದ “ಸಬ್ಬತ್ ದಿನದಲ್ಲಿ ವಾಸಿ ಮಾಡುವುದು ನಿಯಮಕ್ಕನುಸಾರ ಸರಿಯೋ?” ಎಂದು ಕೇಳಿದರು. 11 ಅದಕ್ಕೆ ಆತನು “ನಿಮ್ಮ ಹತ್ತಿರ ಒಂದು ಕುರಿಯಿದೆ ಎಂದು ನೆನಸಿ. ಸಬ್ಬತ್ ದಿನದಲ್ಲಿ ಅದು ಗುಂಡಿಗೆ ಬಿದ್ದರೆ ಅದನ್ನು ಹಿಡಿದು ಮೇಲಕ್ಕೆತ್ತದೆ ಇರುತ್ತೀರಾ? 12 ಕುರಿಗಿಂತ ಒಬ್ಬ ಮನುಷ್ಯನು ಎಷ್ಟೋ ಹೆಚ್ಚು ಅಮೂಲ್ಯನು! ಹಾಗಾಗಿ ಸಬ್ಬತ್ ದಿನದಲ್ಲಿ ಒಳ್ಳೇ ಕೆಲಸ ಮಾಡುವುದು ನಿಯಮಕ್ಕನುಸಾರ ಸರಿ” ಅಂದನು. 13 ಆಮೇಲೆ ಯೇಸು ಆ ವ್ಯಕ್ತಿಗೆ “ನಿನ್ನ ಕೈಚಾಚು” ಎಂದನು. ಅವನು ಕೈಚಾಚಿದಾಗ ಅದು ವಾಸಿಯಾಗಿ ಇನ್ನೊಂದು ಕೈಯಂತೆಯೇ ಆಯಿತು. 14 ಆದರೆ ಫರಿಸಾಯರು ಹೊರಗೆ ಹೋಗಿ ಯೇಸುವನ್ನು ಕೊಲ್ಲಲು ಒಳಸಂಚು ಮಾಡಿದರು. 15 ಯೇಸುವಿಗೆ ಇದು ಗೊತ್ತಾದಾಗ ಅಲ್ಲಿಂದ ಹೊರಟು ಹೋದನು. ತುಂಬ ಜನರು ಆತನ ಹಿಂದೆ ಹೋದರು. ಆತನು ಅವರನ್ನೆಲ್ಲ ವಾಸಿಮಾಡಿದನು. 16 ಆದರೆ ತನ್ನ ಬಗ್ಗೆ ಯಾರಿಗೂ ಹೇಳಬಾರದೆಂದು ಅವರಿಗೆ ಕಟ್ಟುನಿಟ್ಟಾಗಿ ತಿಳಿಸಿದನು.+ 17 ಹೀಗೆ ಪ್ರವಾದಿ ಯೆಶಾಯನ ಮೂಲಕ ಹೇಳಲಾದ ಮಾತು ನೆರವೇರಿತು. ಆ ಮಾತೇನೆಂದರೆ,
18 “ಇವನೇ ನಾನು ಆರಿಸಿಕೊಂಡಿರುವ ನನ್ನ ಸೇವಕ! ನನಗೆ ತುಂಬ ಪ್ರಿಯನಾದವನು. ಇವನನ್ನು ನಾನು ಮೆಚ್ಚಿದ್ದೇನೆ!+ ನಾನು ನನ್ನ ಪವಿತ್ರಶಕ್ತಿಯನ್ನು ಇವನಿಗೆ ಕೊಡುವೆನು. ಇವನು ದೇಶಗಳ ಜನರಿಗೆ ನ್ಯಾಯ ಅಂದರೆ ಏನೆಂದು ತೋರಿಸಿಕೊಡುವನು. 19 ಇವನು ಜಗಳ ಮಾಡುವುದಿಲ್ಲ, ಕೂಗಾಡುವುದಿಲ್ಲ, ಮುಖ್ಯರಸ್ತೆಗಳಲ್ಲಿ ಇವನ ಸ್ವರ ಯಾರಿಗೂ ಕೇಳಿಸುವುದಿಲ್ಲ. 20 ಆತನು ಜಜ್ಜಿದ ದಂಟನ್ನು ಮುರಿದು ಹಾಕುವುದಿಲ್ಲ, ಆರಿಹೋಗುತ್ತಿರುವ ದೀಪವನ್ನು ನಂದಿಸುವುದಿಲ್ಲ ಮತ್ತು ನ್ಯಾಯಕ್ಕೆ ಜಯ ಸಿಗುವ ಹಾಗೆ ಮಾಡುವನು.+ 21 ನಿಜ, ಆತನ ಹೆಸರಿನಲ್ಲಿ ದೇಶಗಳ ಜನರು ನಿರೀಕ್ಷೆಯಿಡುವರು.”
22 ಆಮೇಲೆ ಜನರು ಯೇಸುವಿನ ಹತ್ತಿರ, ಕೆಟ್ಟ ದೇವದೂತನಿಂದ ಪೀಡಿತನಾಗಿದ್ದ ಒಬ್ಬನನ್ನು ಕರೆದುಕೊಂಡು ಬಂದರು. ಅವನು ಕುರುಡನೂ ಮೂಕನೂ ಆಗಿದ್ದನು. ಯೇಸು ಅವನನ್ನು ವಾಸಿ ಮಾಡಿದಾಗ ಅವನಿಗೆ ಮಾತು ಮತ್ತು ದೃಷ್ಟಿ ಎರಡೂ ಬಂತು. 23 ಜನರೆಲ್ಲರೂ ಇದನ್ನು ನೋಡಿ ತುಂಬ ಆಶ್ಚರ್ಯಪಟ್ಟು “ದಾವೀದನ ಮಗ ಈತನೇ ಆಗಿರಬಹುದಾ?” ಎಂದು ಹೇಳಲಾರಂಭಿಸಿದರು. 24 ಫರಿಸಾಯರು ಅವರ ಮಾತು ಕೇಳಿಸಿಕೊಂಡು “ಇವನು ಕೆಟ್ಟ ದೇವದೂತರ ನಾಯಕ ಬೆಲ್ಜೆಬೂಲನ* ಸಹಾಯದಿಂದಲೇ ಕೆಟ್ಟ ದೇವದೂತರನ್ನು ಓಡಿಸುತ್ತಿದ್ದಾನೆ” ಅಂದರು. 25 ಯೇಸು ಅವರ ಆಲೋಚನೆಗಳನ್ನು ತಿಳಿದುಕೊಂಡು ಹೀಗಂದನು: “ಯಾವ ರಾಜ್ಯದಲ್ಲಿ ಒಡಕು ಇದೆಯೋ ಅದು ಬಿದ್ದು ಹೋಗುತ್ತದೆ. ಯಾವ ಪಟ್ಟಣ ಅಥವಾ ಮನೆಯಲ್ಲಿ ಒಡಕು ಇದೆಯೋ ಅದು ಹಾಳಾಗುತ್ತದೆ. 26 ಹಾಗೆಯೇ ಸೈತಾನ ಸೈತಾನನನ್ನೇ ಓಡಿಸಿದರೆ ಅವನು ತನ್ನ ವಿರುದ್ಧವೇ ತಿರುಗಿಬಿದ್ದ ಹಾಗೆ ಆಗುವುದಲ್ಲವೇ? ಹಾಗೆ ಮಾಡಿದರೆ ಅವನ ರಾಜ್ಯ ಬಿದ್ದುಹೋಗುವುದಲ್ಲವೇ? 27 ನಾನು ಬೆಲ್ಜೆಬೂಲನ ಸಹಾಯದಿಂದ ಕೆಟ್ಟ ದೇವದೂತರನ್ನು ಓಡಿಸುತ್ತಿರುವುದಾದರೆ ನಿಮ್ಮ ಶಿಷ್ಯರು ಯಾರ ಸಹಾಯದಿಂದ ಓಡಿಸುತ್ತಿದ್ದಾರೆ? ನೀವು ಹೇಳುತ್ತಿರುವುದು ತಪ್ಪು ಎಂದು ನಿಮ್ಮ ಶಿಷ್ಯರೇ ತೋರಿಸಿಕೊಡುವರು. 28 ನಾನು ಕೆಟ್ಟ ದೇವದೂತರನ್ನು ಓಡಿಸುವುದು ದೇವರ ಪವಿತ್ರಶಕ್ತಿಯಿಂದಾದರೆ ಅದರರ್ಥ ದೇವರ ರಾಜ್ಯ ಬಂದಿರುವುದಾದರೂ ನೀವು ಅದನ್ನು ಗಮನಿಸಲಿಲ್ಲ. 29 ಅಥವಾ ಯಾರಾದರೂ ಒಬ್ಬ ಬಲಶಾಲಿಯ ಮನೆಗೆ ನುಗ್ಗಿ ಅವನ ಕೈಕಾಲುಗಳನ್ನು ಕಟ್ಟಿಹಾಕದೆ ಇದ್ದರೆ ಅವನ ಮನೆಯಲ್ಲಿ ಇರುವುದನ್ನೆಲ್ಲ ದೋಚಲು ಆಗುತ್ತದಾ? ಅವನನ್ನು ಕಟ್ಟಿಹಾಕಿದ ಮೇಲೆಯೇ ಮನೆಯನ್ನು ಲೂಟಿಮಾಡಲು ಆಗುತ್ತದೆ. 30 ನನ್ನ ಪಕ್ಷಹಿಡಿಯದವನು ನನ್ನ ವಿರೋಧಿ. ನನ್ನ ಜೊತೆ ಸೇರಿ ಜನರನ್ನು ಒಟ್ಟುಗೂಡಿಸದವನು ಅವರನ್ನು ಚದುರಿಸುತ್ತಾನೆ.
31 ಹಾಗಾಗಿ ನಿಮಗೆ ಹೇಳುವುದೇನೆಂದರೆ, ಜನರು ಮಾಡುವ ಎಲ್ಲ ಪಾಪ ಮತ್ತು ದೂಷಣೆಗೆ ಕ್ಷಮೆ ಇದೆ. ಆದರೆ ಪವಿತ್ರಶಕ್ತಿಯ ವಿರುದ್ಧ ಮಾಡುವ ದೂಷಣೆಗೆ ಕ್ಷಮೆಯೇ ಇಲ್ಲ. 32 ಉದಾಹರಣೆಗೆ, ಒಬ್ಬ ವ್ಯಕ್ತಿ ಮನುಷ್ಯಕುಮಾರನ ವಿರುದ್ಧ ಮಾತಾಡಿದರೆ ಅವನಿಗೆ ಕ್ಷಮೆ ಸಿಗುತ್ತದೆ. ಆದರೆ ಪವಿತ್ರಶಕ್ತಿಯ ವಿರುದ್ಧ ಮಾತಾಡಿದರೆ ಅವನಿಗೆ ಈಗಿರುವ ಮತ್ತು ಬರಲಿರುವ ಲೋಕವ್ಯವಸ್ಥೆಯಲ್ಲೂ* ಕ್ಷಮೆ ಸಿಗುವುದಿಲ್ಲ.
33 ನೀವು ಒಳ್ಳೇ ಮರ ಆಗಿದ್ದರೆ ಒಳ್ಳೇ ಫಲ ಕೊಡುತ್ತೀರಿ. ಕೆಟ್ಟ ಮರ ಆಗಿದ್ದರೆ ಕೆಟ್ಟ ಫಲ ಕೊಡುತ್ತೀರಿ. ಫಲದಿಂದಲೇ ಮರ ಯಾವ ತರಹದ್ದು ಎಂದು ಗೊತ್ತಾಗುತ್ತದೆ.+ 34 ವಿಷಹಾವಿನ ಸಂತಾನವೇ,+ ದುಷ್ಟರಾಗಿರುವ ನಿಮ್ಮ ಬಾಯಿಯಿಂದ ಒಳ್ಳೇ ಮಾತುಗಳು ಬರುವುದಾದರೂ ಹೇಗೆ? ಹೃದಯದಲ್ಲಿ ತುಂಬಿರುವುದೇ ಬಾಯಿಯಲ್ಲಿ ಬರುತ್ತದೆ.+ 35 ಒಳ್ಳೆಯವನ ಹೃದಯದಲ್ಲಿ ಒಳ್ಳೆಯದೇ ತುಂಬಿರುತ್ತದೆ. ಹಾಗಾಗಿ ಅವನು ಒಳ್ಳೆಯದನ್ನೇ ಮಾತಾಡುತ್ತಾನೆ. ಆದರೆ ಕೆಟ್ಟವನ ಹೃದಯದಲ್ಲಿ ಕೆಟ್ಟ ವಿಷಯಗಳೇ ತುಂಬಿರುವುದರಿಂದ ಅವನು ಕೆಟ್ಟದ್ದನ್ನೇ ಮಾತಾಡುತ್ತಾನೆ. 36 ನಾನು ನಿಮಗೆ ಹೇಳುವುದೇನೆಂದರೆ, ಜನರು ಹೇಳುವ ಪ್ರತಿಯೊಂದು ಪೊಳ್ಳು ಮಾತಿಗೂ ತೀರ್ಪಿನ ದಿನದಲ್ಲಿ ಲೆಕ್ಕ ಕೊಡಬೇಕಾಗುತ್ತದೆ. 37 ಯಾಕೆಂದರೆ ನಿನ್ನ ಮಾತು ಒಳ್ಳೆಯದಾಗಿದ್ದರೆ ನೀನು ನೀತಿವಂತನೆಂದು ನಿನಗೆ ತೀರ್ಪಾಗುವುದು. ನಿನ್ನ ಮಾತು ಕೆಟ್ಟದಾಗಿದ್ದರೆ ನೀನು ಅಪರಾಧಿಯೆಂದು ತೀರ್ಪಾಗುವುದು.”
38 ಆಗ ಕೆಲವು ಪಂಡಿತರು ಮತ್ತು ಫರಿಸಾಯರು ಯೇಸುವಿಗೆ “ಗುರುವೇ, ನಿನ್ನನ್ನು ದೇವರೇ ಕಳುಹಿಸಿದ್ದು ಎಂದು ನಂಬಲು ಒಂದು ಸೂಚನೆ ತೋರಿಸು” ಅಂದರು.+ 39 ಅವರಿಗೆ ಉತ್ತರ ಕೊಡುತ್ತಾ ಯೇಸು ಹೀಗಂದನು: “ದೇವರ ಮಾತನ್ನು ಕೇಳದ,* ದುಷ್ಟ ಪೀಳಿಗೆಯು ಸೂಚನೆಗಾಗಿ ಕೇಳುತ್ತಲೇ ಇರುತ್ತದೆ. ಆದರೆ ಅವರಿಗೆ ಯೋನನ ಸೂಚನೆ ಬಿಟ್ಟು ಬೇರೆ ಯಾವ ಸೂಚನೆಯೂ ಕೊಡಲ್ಪಡುವುದಿಲ್ಲ.+ 40 ಯೋನನು ಮೂರು ದಿನ ಹಗಲೂರಾತ್ರಿ ದೊಡ್ಡ ಮೀನಿನ ಹೊಟ್ಟೆಯಲ್ಲಿದ್ದ ಹಾಗೆಯೇ ಮನುಷ್ಯಕುಮಾರನು ಮೂರು ದಿನ ಹಗಲೂರಾತ್ರಿ ಸಮಾಧಿಯಲ್ಲಿ ಇರುವನು.+ 41 ತೀರ್ಪಿನ ದಿನದಲ್ಲಿ ಈ ದುಷ್ಟ ಪೀಳಿಗೆಯವರ ಜೊತೆ ನಿನೆವೆಯ ಜನರು ಜೀವಂತವಾಗಿ ಎದ್ದು ಬಂದು ಇವರನ್ನು ದೋಷಿಗಳೆಂದು ತೋರಿಸಿಕೊಡುವರು. ಯಾಕೆಂದರೆ ಯೋನನು ಸಾರಿದಾಗ ನಿನೆವೆಯ ಜನರು ತಮ್ಮ ತಪ್ಪುಗಳನ್ನು ತಿದ್ದಿಕೊಂಡರು. ಆದರೆ ಇಲ್ಲಿ ಯೋನನಿಗಿಂತ ಎಷ್ಟೋ ದೊಡ್ಡವನು ಒಬ್ಬನಿದ್ದಾನೆ. 42 ತೀರ್ಪಿನ ದಿನದಲ್ಲಿ ಶೆಬದ ರಾಣಿ ಈ ದುಷ್ಟ ಪೀಳಿಗೆಯವರ ಜೊತೆ ಜೀವಂತವಾಗಿ ಎದ್ದು ಬಂದು ಇವರನ್ನು ದೋಷಿಗಳೆಂದು ತೋರಿಸಿಕೊಡುವಳು. ಯಾಕೆಂದರೆ ಅವಳು ಸೊಲೊಮೋನನ ವಿವೇಕದ ಮಾತುಗಳನ್ನು ಕೇಳಿಸಿಕೊಳ್ಳಲು ದೂರದಿಂದ ಬಂದಿದ್ದಳು. ಆದರೆ ಇಲ್ಲಿ ಸೊಲೊಮೋನನಿಗಿಂತ ಎಷ್ಟೋ ದೊಡ್ಡವನು ಒಬ್ಬನಿದ್ದಾನೆ.+
43 ಒಬ್ಬ ಕೆಟ್ಟ ದೇವದೂತ ಒಬ್ಬ ಮನುಷ್ಯನಿಂದ ಹೊರಗೆ ಬಂದು ವಿಶ್ರಾಂತಿಗಾಗಿ ಜಾಗ ಹುಡುಕುತ್ತಾನೆ. ನೀರಿಲ್ಲದ ಜಾಗಗಳಲ್ಲಿ ಎಷ್ಟು ಅಲೆದಾಡಿದರೂ ಎಲ್ಲೂ ಜಾಗ ಸಿಗುವುದಿಲ್ಲ. 44 ಆಗ ಆ ಕೆಟ್ಟ ದೇವದೂತ ‘ನಾನು ಬಿಟ್ಟುಬಂದ ಮನೆಗೆ ಮತ್ತೆ ಹೋಗುತ್ತೇನೆ’ ಎಂದು ಹಿಂದೆ ಹೋದಾಗ ಆ ಮನೆ ಖಾಲಿ ಇದ್ದದ್ದನ್ನು ಮತ್ತು ಚೆನ್ನಾಗಿ ಗುಡಿಸಿ ಅಲಂಕಾರ ಮಾಡಿದ್ದನ್ನು ನೋಡುತ್ತಾನೆ. 45 ಆಗ ಆ ಕೆಟ್ಟ ದೇವದೂತ ಹೋಗಿ ತನಗಿಂತ ಹೆಚ್ಚು ದುಷ್ಟರಾಗಿದ್ದ ಇನ್ನೂ ಏಳು ಕೆಟ್ಟ ದೇವದೂತರನ್ನು ಕರೆದುಕೊಂಡು ಬರುತ್ತಾನೆ. ಅವರೆಲ್ಲರೂ ಒಟ್ಟಿಗೆ ಆ ಮನುಷ್ಯನಲ್ಲಿ ಸೇರಿಕೊಳ್ಳುತ್ತಾರೆ. ಆಗ ಆ ಮನುಷ್ಯನ ಗತಿ ಮುಂಚೆಗಿಂತ ಹದಗೆಟ್ಟು ಹೋಗುತ್ತದೆ. ಈ ದುಷ್ಟ ಪೀಳಿಗೆಯವರ ಗತಿ ಕೂಡ ಹಾಗೆಯೇ ಆಗಲಿದೆ.”
46 ಯೇಸು ಜನರ ಜೊತೆ ಇನ್ನೂ ಮಾತಾಡುತ್ತಾ ಇರುವಾಗ ಆತನ ತಾಯಿ ಮತ್ತು ತಮ್ಮಂದಿರು+ ಆತನೊಟ್ಟಿಗೆ ಮಾತಾಡಲು ಹೊರಗೆ ಕಾಯುತ್ತಾ ಇದ್ದರು. 47 ಆಗ ಯಾರೋ ಒಬ್ಬನು ಯೇಸುವಿಗೆ “ನಿನ್ನ ತಾಯಿ ಮತ್ತು ತಮ್ಮಂದಿರು ನಿನ್ನೊಟ್ಟಿಗೆ ಮಾತಾಡಲು ಕಾಯುತ್ತಾ ಇದ್ದಾರೆ” ಅಂದನು. 48 ಅದಕ್ಕೆ ಯೇಸು ಅವನಿಗೆ “ನನ್ನ ತಾಯಿ ಮತ್ತು ತಮ್ಮಂದಿರು ಯಾರು?” ಎಂದು ಕೇಳಿ, 49 ತನ್ನ ಶಿಷ್ಯರ ಕಡೆಗೆ ಕೈತೋರಿಸಿ “ನೋಡು, ಇವರೇ ನನ್ನ ತಾಯಿ ಮತ್ತು ಅಣ್ಣತಮ್ಮಂದಿರು! 50 ಯಾಕೆಂದರೆ ಸ್ವರ್ಗದಲ್ಲಿರುವ ನನ್ನ ತಂದೆಯ ಇಷ್ಟದ ಪ್ರಕಾರ ನಡೆಯವವರೇ ನನ್ನ ತಾಯಿ, ಅಣ್ಣತಮ್ಮ, ಅಕ್ಕತಂಗಿ” ಎಂದು ಹೇಳಿದನು.