ಮತ್ತಾಯ
17 ಆರು ದಿನಗಳ ನಂತರ ಪೇತ್ರ, ಯಾಕೋಬ ಮತ್ತು ಅವನ ತಮ್ಮ ಯೋಹಾನನನ್ನು ಯೇಸು ಎತ್ತರವಾದ ಒಂದು ಬೆಟ್ಟಕ್ಕೆ ಕರೆದುಕೊಂಡು ಹೋದನು. 2 ಅಲ್ಲಿ ಶಿಷ್ಯರ ಮುಂದೆ ಯೇಸುವಿನ ರೂಪ ಬದಲಾಯಿತು. ಆತನ ಮುಖ ಸೂರ್ಯನಂತೆ ಪ್ರಕಾಶಿಸಿತು ಮತ್ತು ಆತನ ಬಟ್ಟೆ ಬೆಳಕಿನಂತೆ* ಹೊಳೆಯಿತು. 3 ಮೋಶೆ ಮತ್ತು ಎಲೀಯ ಆತನ ಜೊತೆ ಮಾತಾಡುತ್ತಿರುವುದು ಅವರಿಗೆ ಕಾಣಿಸಿತು. 4 ಆಗ ಪೇತ್ರನು ಯೇಸುವಿಗೆ “ಸ್ವಾಮಿ, ನಾವು ಇಲ್ಲಿಗೆ ಬಂದ್ದದ್ದು ಒಳ್ಳೇದಾಯಿತು. ನಿನಗೆ ಇಷ್ಟ ಇದ್ದರೆ, ಇಲ್ಲಿ ಮೂರು ಡೇರೆಗಳನ್ನು ಹಾಕುತ್ತೇನೆ. ನಿನಗೆ ಒಂದು, ಮೋಶೆಗೆ ಒಂದು, ಎಲೀಯನಿಗೆ ಒಂದು” ಅಂದನು. 5 ಪೇತ್ರನು ಮಾತಾಡುತ್ತಿರುವಾಗಲೇ ಅವರ ಮೇಲೆ ಬಿಳಿ ಮೋಡ ಕವಿಯಿತು. ಆ ಮೋಡದಿಂದ “ಇವನು ನನ್ನ ಪ್ರೀತಿಯ ಮಗ. ಇವನನ್ನು ನಾನು ಮೆಚ್ಚಿದ್ದೇನೆ.+ ಇವನ ಮಾತನ್ನು ಕೇಳಿ” ಎಂಬ ಧ್ವನಿ ಕೇಳಿಸಿತು. 6 ಶಿಷ್ಯರು ಇದನ್ನು ಕೇಳಿ ತುಂಬ ಹೆದರಿ ನೆಲದಲ್ಲಿ ಅಡ್ಡಬಿದ್ದರು. 7 ಆಗ ಯೇಸು ಅವರ ಹತ್ತಿರ ಬಂದು ಅವರನ್ನು ಮುಟ್ಟಿ “ಭಯಪಡಬೇಡಿ ಎದ್ದೇಳಿ” ಅಂದನು. 8 ಅವರು ತಲೆಯೆತ್ತಿ ನೋಡಿದಾಗ ಯೇಸುವನ್ನು ಬಿಟ್ಟರೆ ಬೇರೆ ಯಾರೂ ಅವರಿಗೆ ಕಾಣಿಸಲಿಲ್ಲ. 9 ಅವರು ಬೆಟ್ಟ ಇಳಿದು ಬರುತ್ತಿದ್ದಾಗ ಯೇಸು ಅವರಿಗೆ, “ಮನುಷ್ಯಕುಮಾರನು ಸತ್ತು ಮತ್ತೆ ಜೀವಂತವಾಗಿ ಎಬ್ಬಿಸಲ್ಪಡುವ ತನಕ ನೀವು ನೋಡಿದ ಈ ದರ್ಶನದ ಬಗ್ಗೆ ಯಾರಿಗೂ ಹೇಳಬೇಡಿ”+ ಎಂದು ಅಪ್ಪಣೆ ಕೊಟ್ಟನು.
10 ಆಗ ಶಿಷ್ಯರು “ಹಾಗಾದರೆ ಮೊದಲು ಎಲೀಯನು ಬರಬೇಕೆಂದು ಪಂಡಿತರು ಯಾಕೆ ಹೇಳುತ್ತಾರೆ?” ಎಂದು ಕೇಳಿದರು. 11 ಅದಕ್ಕೆ ಯೇಸು ಅವರಿಗೆ “ಎಲೀಯನು ಖಂಡಿತ ಬಂದು ಎಲ್ಲ ವಿಷಯಗಳನ್ನು ಮೊದಲಿದ್ದ ಹಾಗೆಯೇ ಮಾಡುವನು.+ 12 ನಾನು ನಿಮಗೆ ಹೇಳುವುದೇನೆಂದರೆ, ಎಲೀಯನು ಬಂದಿದ್ದನು. ಆದರೆ ಅವರು ಅವನ ಗುರುತು ಹಿಡಿಯಲಿಲ್ಲ. ಅವನೊಟ್ಟಿಗೆ ಮನಸ್ಸಿಗೆ ಬಂದ ಹಾಗೆ ನಡೆದುಕೊಂಡರು. ಅದೇ ರೀತಿ ಮನುಷ್ಯಕುಮಾರನು ಸಹ ಅವರಿಂದ ಕಷ್ಟಗಳನ್ನು ಅನುಭವಿಸಲಿದ್ದಾನೆ”+ ಅಂದನು. 13 ಆಗ ಶಿಷ್ಯರಿಗೆ ಯೇಸು ಮಾತಾಡುತ್ತಿದ್ದದ್ದು ಸ್ನಾನಿಕ ಯೋಹಾನನ ಬಗ್ಗೆ ಎಂದು ಗೊತ್ತಾಯಿತು.
14 ಅವರು ಜನರ ಗುಂಪಿನ ಹತ್ತಿರ ಹೋದಾಗ ಒಬ್ಬ ಮನುಷ್ಯನು ಮೊಣಕಾಲೂರಿ ಯೇಸುವಿಗೆ 15 “ಸ್ವಾಮಿ, ನನ್ನ ಮಗನಿಗೆ ಕರುಣೆ ತೋರಿಸು. ಅವನಿಗೆ ತುಂಬಾ ಹುಷಾರಿಲ್ಲ, ಮೂರ್ಛೆರೋಗ ಇದೆ. ಅವನು ಆಗಾಗ ಬೆಂಕಿಯಲ್ಲಿ ಮತ್ತು ನೀರಿನಲ್ಲಿ ಬೀಳುತ್ತಿರುತ್ತಾನೆ. 16 ಅವನನ್ನು ನಿನ್ನ ಶಿಷ್ಯರ ಹತ್ತಿರ ಕರೆದುಕೊಂಡು ಬಂದೆ. ಆದರೆ ಅವರಿಗೆ ಅವನನ್ನು ವಾಸಿಮಾಡಲು ಆಗಲಿಲ್ಲ” ಅಂದನು. 17 ಅದಕ್ಕೆ ಯೇಸು “ನಂಬಿಕೆ ಇಲ್ಲದ, ಭ್ರಷ್ಟ ಪೀಳಿಗೆಯೇ, ನಾನು ಇನ್ನೆಷ್ಟು ಸಮಯ ನಿಮ್ಮ ಜೊತೆ ಇರಬೇಕು? ಇನ್ನೆಷ್ಟು ಸಮಯ ನಿಮ್ಮನ್ನು ಸಹಿಸಿಕೊಳ್ಳಬೇಕು? ಅವನನ್ನು ಇಲ್ಲಿ ನನ್ನ ಹತ್ತಿರ ಕರೆದುಕೊಂಡು ಬನ್ನಿ” ಎಂದು ಹೇಳಿದನು. 18 ಯೇಸು ಆ ಕೆಟ್ಟ ದೇವದೂತನಿಗೆ ಗದರಿಸಿದಾಗ ಅವನು ಹುಡುಗನನ್ನು ಬಿಟ್ಟುಹೋದ. ಆ ಹುಡುಗ ತಕ್ಷಣ ವಾಸಿಯಾದ.+ 19 ಯೇಸು ಒಬ್ಬನೇ ಇದ್ದಾಗ ಶಿಷ್ಯರು ಬಂದು “ಆ ಕೆಟ್ಟ ದೇವದೂತನನ್ನು ಓಡಿಸಲು ನಮ್ಮಿಂದ ಯಾಕೆ ಆಗಲಿಲ್ಲ?” ಎಂದು ಕೇಳಿದರು. 20 ಅದಕ್ಕೆ ಆತನು “ಯಾಕೆಂದರೆ ನಿಮಗೆ ನಂಬಿಕೆ ಕಡಿಮೆ ಇದೆ. ನಾನು ನಿಮಗೆ ನಿಜ ಹೇಳುತ್ತೇನೆ, ನಿಮಗೆ ಸಾಸಿವೆ ಕಾಳಿನಷ್ಟು ನಂಬಿಕೆ ಇದ್ದರೂ ಸಾಕು, ನೀವು ಈ ಬೆಟ್ಟಕ್ಕೆ ‘ಇಲ್ಲಿಂದ ಅಲ್ಲಿ ಹೋಗು’ ಎಂದು ಹೇಳಿದರೆ ಅದು ಹೋಗುತ್ತದೆ. ನಿಮ್ಮಿಂದ ಮಾಡಲು ಆಗದೇ ಇರುವಂಥದ್ದು ಯಾವುದೂ ಇಲ್ಲ”+ ಅಂದನು. 21 *——
22 ಯೇಸು ಮತ್ತು ಆತನ ಶಿಷ್ಯರು ಗಲಿಲಾಯಕ್ಕೆ ಬಂದಾಗ ಆತನು, “ಮನುಷ್ಯಕುಮಾರನಿಗೆ ದ್ರೋಹ ಬಗೆದು ಆತನನ್ನು ಶತ್ರುಗಳ ಕೈಗೆ ಒಪ್ಪಿಸಲಾಗುವುದು.+ 23 ಅವರು ಆತನನ್ನು ಕೊಲ್ಲುವರು. ಆದರೆ ಮೂರನೇ ದಿನ ಆತನನ್ನು ಜೀವಂತ ಎಬ್ಬಿಸಲಾಗುವುದು”+ ಅಂದನು. ಆಗ ಶಿಷ್ಯರಿಗೆ ತುಂಬ ದುಃಖವಾಯಿತು.
24 ಅವರು ಕಪೆರ್ನೌಮಿಗೆ ಬಂದಾಗ ದೇವಾಲಯದ ತೆರಿಗೆ* ವಸೂಲಿಗಾರರು ಪೇತ್ರನ ಹತ್ತಿರ ಬಂದು “ನಿಮ್ಮ ಗುರು ದೇವಾಲಯದ ತೆರಿಗೆ ಕೊಡುವುದಿಲ್ಲವಾ?” ಎಂದು ಕೇಳಿದರು. 25 ಅದಕ್ಕೆ ಪೇತ್ರನು “ಕೊಡುತ್ತಾನೆ” ಅಂದನು. ಅವನು ಮನೆಯೊಳಗೆ ಬಂದು ಮಾತಾಡುವ ಮುಂಚೆಯೇ ಯೇಸು “ಸೀಮೋನ, ನಿನ್ನ ಅಭಿಪ್ರಾಯ ಏನು? ಲೋಕದ ರಾಜರು ಯಾರಿಂದ ತೆರಿಗೆ ಮತ್ತು ಕಂದಾಯವನ್ನು* ತೆಗೆದುಕೊಳ್ಳುತ್ತಾರೆ? ಅವರ ಮಕ್ಕಳಿಂದಲೋ? ಬೇರೆಯವರಿಂದಲೋ?” ಎಂದು ಕೇಳಿದನು. 26 ಅದಕ್ಕೆ ಪೇತ್ರನು “ಬೇರೆಯವರಿಂದ” ಎಂದು ಹೇಳಿದನು. ಯೇಸು “ಹಾಗಾದರೆ ಮಕ್ಕಳು ತೆರಿಗೆ ಕಟ್ಟಬೇಕಾಗಿಲ್ಲ. 27 ಆದರೂ ನಮ್ಮ ಬಗ್ಗೆ ತಪ್ಪು ಅಭಿಪ್ರಾಯ ಬರುವುದು ಬೇಡ. ಹಾಗಾಗಿ ನೀನು ಸಮುದ್ರಕ್ಕೆ ಹೋಗಿ ಗಾಳಹಾಕು. ಮೊದಲು ಸಿಗುವ ಮೀನನ್ನು ತೆಗೆದುಕೊಂಡು ಅದರ ಬಾಯಿಯನ್ನು ತೆರೆದು ನೋಡಿದರೆ ಒಂದು ಬೆಳ್ಳಿ ನಾಣ್ಯ* ಸಿಗುತ್ತದೆ. ಅದನ್ನು ತೆಗೆದುಕೊಂಡು ನಮ್ಮಿಬ್ಬರ ತೆರಿಗೆ ಕಟ್ಟು” ಅಂದನು.