ಮತ್ತಾಯ
8 ಯೇಸು ಬೆಟ್ಟ ಇಳಿದು ಬಂದ ಮೇಲೆ ಜನರು ದೊಡ್ಡ ದೊಡ್ಡ ಗುಂಪಾಗಿ ಆತನ ಹಿಂದೆ ಹೋದರು. 2 ಆಗ ಒಬ್ಬ ಕುಷ್ಠರೋಗಿ ಬಂದು ಆತನಿಗೆ ನಮಸ್ಕರಿಸಿ “ಸ್ವಾಮಿ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಎಂದು ಹೇಳಿದನು. 3 ಯೇಸು ಕೈಚಾಚಿ ಅವನನ್ನು ಮುಟ್ಟಿ “ನನಗೆ ಮನಸ್ಸಿದೆ! ಶುದ್ಧನಾಗು” ಅಂದನು. ತಕ್ಷಣವೇ ಅವನು ಶುದ್ಧನಾದನು. 4 ಆಮೇಲೆ ಯೇಸು ಅವನಿಗೆ “ನೋಡು, ಇದನ್ನು ಯಾರಿಗೂ ಹೇಳಬೇಡ.+ ಆದರೆ ಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿ ಮೋಶೆ ಹೇಳಿರುವುದನ್ನು ಅರ್ಪಿಸು. ಇದು ಅವರಿಗೆ ಸಾಕ್ಷಿಯಾಗಿರಲಿ” ಎಂದು ಹೇಳಿದನು.
5 ಯೇಸು ಕಪೆರ್ನೌಮಿಗೆ ಬಂದಾಗ ಒಬ್ಬ ಸೇನಾಧಿಕಾರಿ ಆತನ ಹತ್ತಿರ ಬಂದು ಸಹಾಯಕ್ಕಾಗಿ ಬೇಡಿಕೊಳ್ಳುತ್ತಾ 6 ಹೀಗಂದನು: “ಸ್ವಾಮಿ, ನನ್ನ ಸೇವಕನಿಗೆ ಲಕ್ವ ಹೊಡೆದು ಮನೆಯಲ್ಲಿದ್ದಾನೆ ಮತ್ತು ತುಂಬ ನರಳುತ್ತಿದ್ದಾನೆ.” 7 ಅದಕ್ಕೆ ಯೇಸು “ನಾನು ಅಲ್ಲಿ ಬಂದಾಗ ಅವನನ್ನು ವಾಸಿ ಮಾಡುತ್ತೇನೆ” ಅಂದನು. 8 ಆಗ ಸೇನಾಧಿಕಾರಿ “ಸ್ವಾಮಿ, ನೀವು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ. ನೀವು ಒಂದು ಮಾತು ಹೇಳಿದರೆ ಸಾಕು, ಅವನು ಗುಣವಾಗುವನು. 9 ನಾನು ಸಹ ಅಧಿಕಾರದ ಕೆಳಗಿರುವವನು. ನನ್ನ ಕೆಳಗೂ ಸೈನಿಕರಿದ್ದಾರೆ. ನಾನು ಅವರಲ್ಲಿ ಒಬ್ಬನಿಗೆ ‘ಹೋಗು’ ಎಂದು ಹೇಳಿದರೆ ಹೋಗುತ್ತಾನೆ. ಇನ್ನೊಬ್ಬನಿಗೆ ‘ಬಾ’ ಎಂದು ಹೇಳಿದರೆ ಬರುತ್ತಾನೆ. ನನ್ನ ಸೇವಕನಿಗೆ ‘ಇದನ್ನು ಮಾಡು’ ಎಂದು ಹೇಳಿದರೆ ಮಾಡುತ್ತಾನೆ” ಅಂದನು. 10 ಇದನ್ನು ಕೇಳಿ ಯೇಸು ಆಶ್ಚರ್ಯಪಟ್ಟು ತನ್ನ ಹಿಂದೆ ಬರುತ್ತಿದ್ದ ಜನರಿಗೆ “ನಿಮಗೆ ನಿಜವಾಗಿ ಹೇಳುತ್ತೇನೆ, ಇಷ್ಟೊಂದು ನಂಬಿಕೆ ಇರುವ ಒಬ್ಬ ವ್ಯಕ್ತಿಯನ್ನು ಇಸ್ರಾಯೇಲಿನಲ್ಲಿ ನಾನು ನೋಡಲೇ ಇಲ್ಲ.+ 11 ಆದರೆ ನಾನು ಹೇಳುವುದೇನೆಂದರೆ, ಪೂರ್ವ ಮತ್ತು ಪಶ್ಚಿಮದಿಂದ ತುಂಬ ಜನರು ಬರುವರು. ಅವರು ಸ್ವರ್ಗದ ರಾಜ್ಯದಲ್ಲಿ ಅಬ್ರಹಾಮ, ಇಸಾಕ ಮತ್ತು ಯಾಕೋಬನ ಜೊತೆಗೆ ಮೇಜಿನಲ್ಲಿ ಊಟಕ್ಕೆ ಕುಳಿತುಕೊಳ್ಳುವರು. 12 ಆದರೆ ರಾಜ್ಯದ ಮಕ್ಕಳನ್ನು ದೇವರು ಹೊರಗೆ ಕತ್ತಲೆಗೆ ಎಸೆಯುವನು. ಅಲ್ಲಿ ಅವರು ಗೋಳಾಡುವರು ಮತ್ತು ಹಲ್ಲು ಕಡಿಯುವರು” ಅಂದನು. 13 ಆಮೇಲೆ ಯೇಸು ಆ ಸೇನಾಧಿಕಾರಿಗೆ “ಹೋಗು, ನೀನು ನಂಬಿಕೆ ತೋರಿಸಿದಂತೆಯೇ ಆಗಲಿ”+ ಎಂದು ಹೇಳಿದನು. ಆ ಕ್ಷಣವೇ ಅವನ ಸೇವಕ ವಾಸಿಯಾದನು.
14 ಯೇಸು ಪೇತ್ರನ ಮನೆಗೆ ಬಂದಾಗ ಅವನ ಅತ್ತೆ ಜ್ವರದಿಂದ ಅಸ್ವಸ್ಥಳಾಗಿ ಮಲಗಿರುವುದನ್ನು ನೋಡಿದನು. 15 ಯೇಸು ಅವಳ ಕೈ ಮುಟ್ಟಿದಾಗ, ಜ್ವರ ಬಿಟ್ಟಿತು. ಅವಳು ಎದ್ದು ಆತನಿಗೆ ಉಪಚಾರ ಮಾಡಲು ಶುರುಮಾಡಿದಳು. 16 ಸಂಜೆ ಆದಾಗ, ಕೆಟ್ಟ ದೇವದೂತರಿಂದ ಪೀಡಿತರಾದ ಅನೇಕರನ್ನು ಜನರು ಆತನ ಹತ್ತಿರ ಕರೆದುಕೊಂಡು ಬಂದರು. ಆತನು ಒಂದೇ ಮಾತಿನಲ್ಲಿ ಆ ಕೆಟ್ಟ ದೇವದೂತರನ್ನು ಓಡಿಸಿಬಿಟ್ಟನು. ಕಾಯಿಲೆಗಳಿದ್ದ ಜನರನ್ನೆಲ್ಲ ವಾಸಿಮಾಡಿದನು. 17 ಹೀಗೆ, “ಆತನೇ ನಮ್ಮ ಕಾಯಿಲೆಗಳನ್ನು ತೆಗೆದುಕೊಂಡು, ನಮ್ಮ ರೋಗಗಳನ್ನು ಹೊತ್ತುಕೊಂಡನು” ಎಂದು ಪ್ರವಾದಿ ಯೆಶಾಯನ ಮೂಲಕ ಹೇಳಲಾದ ಮಾತು ನೆರವೇರಿತು.
18 ಯೇಸು ತನ್ನ ಸುತ್ತಲೂ ಜನರ ಗುಂಪು ಮುತ್ತಿಕೊಂಡಿರುವುದನ್ನು ನೋಡಿ ತನ್ನ ಶಿಷ್ಯರಿಗೆ ಆಚೆದಡಕ್ಕೆ ಹೋಗೋಣವೆಂದು ಹೇಳಿದನು. 19 ಆಗ ಒಬ್ಬ ಪಂಡಿತ ಯೇಸುವಿನ ಹತ್ತಿರ ಬಂದು “ಗುರುವೇ, ನೀನು ಎಲ್ಲಿ ಹೋದರೂ ನಾನು ನಿನ್ನ ಹಿಂದೆ ಬರುತ್ತೇನೆ” ಎಂದನು. 20 ಅದಕ್ಕೆ ಯೇಸು “ನರಿಗಳಿಗೆ ಗುಹೆಗಳಿವೆ, ಪಕ್ಷಿಗಳಿಗೆ ಗೂಡುಗಳಿವೆ. ಆದರೆ ಮನುಷ್ಯಕುಮಾರನಿಗೆ ತಲೆ ಇಡಲಿಕ್ಕೂ ಜಾಗ ಇಲ್ಲ” ಎಂದು ಅವನಿಗೆ ಹೇಳಿದನು. 21 ಆಗ ಇನ್ನೊಬ್ಬ ಶಿಷ್ಯನು “ಸ್ವಾಮಿ, ನಾನು ಮೊದಲು ಹೋಗಿ ನನ್ನ ತಂದೆಯನ್ನು ಹೂಣಿಟ್ಟು ಬರಲು ಅನುಮತಿ ಕೊಡು” ಎಂದನು. 22 ಯೇಸು ಅವನಿಗೆ “ನೀನು ನನ್ನನ್ನು ಹಿಂಬಾಲಿಸುತ್ತಾ ಇರು. ಸತ್ತವರನ್ನು ಸತ್ತವರೇ ಹೂಣಿಡಲಿ” ಅಂದನು.
23 ಯೇಸು ದೋಣಿಯನ್ನು ಹತ್ತಿದಾಗ ಶಿಷ್ಯರು ಆತನ ಜೊತೆ ಹೋದರು. 24 ಹೀಗೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಸಮುದ್ರದಲ್ಲಿ ದೊಡ್ಡ ಬಿರುಗಾಳಿ ಬೀಸಿ ಅಲೆಗಳು ದೋಣಿಗೆ ಬಡಿಯುತ್ತಾ ಇದ್ದವು. ಆದರೆ ಯೇಸು ನಿದ್ದೆ ಮಾಡುತ್ತಿದ್ದನು. 25 ಶಿಷ್ಯರು ಆತನನ್ನು ಎಬ್ಬಿಸಿ “ಸ್ವಾಮಿ ಕಾಪಾಡು! ನಾವು ಇನ್ನೇನು ಸತ್ತು ಹೋಗಲಿದ್ದೇವೆ” ಅಂದರು. 26 ಆದರೆ ಆತನು “ಕಡಿಮೆ ನಂಬಿಕೆ ಇರುವವರೇ, ಯಾಕಿಷ್ಟು ಹೆದರುತ್ತಿದ್ದೀರಿ?”+ ಎಂದು ಹೇಳಿ, ಎದ್ದುನಿಂತು ಗಾಳಿ ಮತ್ತು ಸಮುದ್ರವನ್ನು ಗದರಿಸಿದನು. ಆಗ ಎಲ್ಲ ಶಾಂತವಾಯಿತು. 27 ಶಿಷ್ಯರು ಇದನ್ನು ನೋಡಿ “ಗಾಳಿಯೂ ಸಮುದ್ರವೂ ಈತನ ಮಾತು ಕೇಳುತ್ತವಲ್ಲಾ? ಈತನು ಎಂಥಾ ವ್ಯಕ್ತಿ ಆಗಿರಬಹುದು?” ಎಂದು ಆಶ್ಚರ್ಯಪಟ್ಟರು.
28 ಯೇಸು ಆಚೆದಡದಲ್ಲಿದ್ದ ಗದರೇನರ ಪ್ರದೇಶಕ್ಕೆ ಬಂದಾಗ, ಕೆಟ್ಟ ದೇವದೂತರಿಂದ ಪೀಡಿತರಾಗಿದ್ದ ಇಬ್ಬರು ಗಂಡಸರು ಸಮಾಧಿಗಳ ಮಧ್ಯದಿಂದ ಆತನ ಎದುರು ಬಂದರು. ಅವರು ತುಂಬ ಕ್ರೂರಿಗಳಾಗಿದ್ದ ಕಾರಣ ಆ ದಾರಿಯಲ್ಲಿ ಹೋಗಲು ಯಾರಿಗೂ ಧೈರ್ಯ ಇರಲಿಲ್ಲ. 29 ಅವರು ಯೇಸುವಿಗೆ “ದೇವರ ಮಗನೇ, ನಮ್ಮ ಗೊಡವೆ ನಿನಗೇಕೆ? ನೇಮಿತ ಸಮಯಕ್ಕೆ ಮುಂಚೆಯೇ ನಮ್ಮನ್ನು ಪೀಡಿಸಲು ಬಂದೆಯಾ?” ಎಂದು ಕಿರುಚಿ ಹೇಳಿದರು. 30 ತುಂಬ ದೂರದಲ್ಲಿ ಬಹಳ ಹಂದಿಗಳ ಒಂದು ಹಿಂಡು ಮೇಯುತ್ತಾ ಇತ್ತು. 31 ಹಾಗಾಗಿ ಆ ಕೆಟ್ಟ ದೇವದೂತರು ಆತನಿಗೆ “ನೀನು ನಮ್ಮನ್ನು ಓಡಿಸುವುದಾದರೆ ಆ ಹಂದಿಗಳ ಒಳಗೆ ಕಳುಹಿಸು” ಎಂದು ಬೇಡಿಕೊಂಡರು. 32 ಯೇಸು “ಹೋಗಿ!” ಅಂದನು. ಆ ಕೆಟ್ಟ ದೇವದೂತರು ಹೊರಗೆ ಬಂದು ಹಂದಿಗಳ ಒಳಗೆ ಸೇರಿಕೊಂಡರು. ಆ ಇಡೀ ಹಿಂಡು ಓಡಿ ಬೆಟ್ಟದ ತುದಿಯಿಂದ ಜಿಗಿದು ಸಮುದ್ರದಲ್ಲಿ ಬಿದ್ದು ಸತ್ತುಹೋಯಿತು. 33 ಹಂದಿಗಳನ್ನು ಕಾಯುತ್ತಿದ್ದವರು ಅಲ್ಲಿಂದ ಪಟ್ಟಣದ ಒಳಗೆ ಓಡಿಹೋಗಿ ನಡೆದದ್ದೆಲ್ಲವನ್ನು ಜನರಿಗೆ ಹೇಳಿದರು. ಕೆಟ್ಟ ದೇವದೂತರಿಂದ ಪೀಡಿತರಾಗಿದ್ದ ಆ ಗಂಡಸರ ಬಗ್ಗೆಯೂ ಹೇಳಿದರು. 34 ಆಗ ಪಟ್ಟಣದವರೆಲ್ಲ ಯೇಸುವನ್ನು ಭೇಟಿಮಾಡಲು ಬಂದರು. ಆತನನ್ನು ನೋಡಿದಾಗ, ತಮ್ಮ ಪ್ರದೇಶವನ್ನು ಬಿಟ್ಟುಹೋಗುವಂತೆ ಬೇಡಿಕೊಂಡರು.