ಮತ್ತಾಯ
11 ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರಿಗೆ ಉಪದೇಶ ನೀಡುವುದನ್ನು ಮುಗಿಸಿದ ಬಳಿಕ ಸುತ್ತಲಿನ ಊರುಗಳಲ್ಲಿ ಬೋಧಿಸುವುದಕ್ಕೂ ಸಾರುವುದಕ್ಕೂ ಅಲ್ಲಿಂದ ಹೊರಟನು.
2 ಆದರೆ ಕ್ರಿಸ್ತನು ನಡಿಸುತ್ತಿದ್ದ ಕಾರ್ಯಗಳ ಕುರಿತು ಯೋಹಾನನು ಸೆರೆಮನೆಯಲ್ಲಿ ಕೇಳಿಸಿಕೊಂಡಾಗ ತನ್ನ ಶಿಷ್ಯರನ್ನು ಅವನ ಬಳಿಗೆ ಕಳುಹಿಸಿ 3 ಅವನಿಗೆ, “ಬರತಕ್ಕವನು ನೀನೋ ಅಥವಾ ಬೇರೊಬ್ಬನನ್ನು ನಾವು ಎದುರುನೋಡಬೇಕೊ?” ಎಂದು ಕೇಳಿಸಿದನು. 4 ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಅವರಿಗೆ, “ನೀವು ನೋಡುತ್ತಿರುವುದನ್ನೂ ಕೇಳುತ್ತಿರುವುದನ್ನೂ ಹೋಗಿ ಯೋಹಾನನಿಗೆ ವರದಿಮಾಡಿರಿ: 5 ಕುರುಡರಿಗೆ ಕಣ್ಣು ಕಾಣುತ್ತಿದೆ, ಕುಂಟರು ನಡೆಯುತ್ತಿದ್ದಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಿದ್ದಾರೆ, ಕಿವುಡರಿಗೆ ಕಿವಿ ಕೇಳಿಸುತ್ತಿದೆ, ಸತ್ತವರು ಎಬ್ಬಿಸಲ್ಪಡುತ್ತಿದ್ದಾರೆ ಮತ್ತು ಬಡವರಿಗೆ ಸುವಾರ್ತೆಯು ಸಾರಲ್ಪಡುತ್ತಿದೆ; 6 ನನ್ನ ವಿಷಯದಲ್ಲಿ ಸಂಶಯಪಡಲು ಕಾರಣವನ್ನು ಕಂಡುಕೊಳ್ಳದಿರುವವನು ಸಂತೋಷಿತನು” ಎಂದು ಹೇಳಿದನು.
7 ಅವರು ಹೊರಟುಹೋಗುತ್ತಿದ್ದಾಗ ಯೇಸು ಜನರ ಗುಂಪುಗಳಿಗೆ ಯೋಹಾನನ ಕುರಿತು ಹೀಗೆ ಹೇಳತೊಡಗಿದನು: “ಏನನ್ನು ನೋಡುವುದಕ್ಕಾಗಿ ನೀವು ಅರಣ್ಯಕ್ಕೆ ಹೋದಿರಿ? ಗಾಳಿಗೆ ಅಲ್ಲಾಡುತ್ತಿರುವ ದಂಟನ್ನೊ? 8 ಇಲ್ಲವಾದರೆ ನೀವು ಏನನ್ನು ನೋಡಲಿಕ್ಕಾಗಿ ಹೋದಿರಿ? ನಯವಾದ ವಸ್ತ್ರಗಳನ್ನು ಧರಿಸಿದ್ದ ಮನುಷ್ಯನನ್ನೊ? ನಯವಾದ ವಸ್ತ್ರಗಳನ್ನು ಧರಿಸಿಕೊಳ್ಳುವವರು ರಾಜರ ಮನೆಗಳಲ್ಲಿ ಇರುತ್ತಾರೆ. 9 ಹಾಗಾದರೆ ನೀವು ಹೋದದ್ದಾದರೂ ಏಕೆ? ಒಬ್ಬ ಪ್ರವಾದಿಯನ್ನು ನೋಡುವುದಕ್ಕೊ? ಹೌದು, ಪ್ರವಾದಿಗಿಂತಲೂ ಎಷ್ಟೋ ಹೆಚ್ಚಿನವನನ್ನು ನೋಡುವುದಕ್ಕೆ ಎಂದು ನಿಮಗೆ ಹೇಳುತ್ತೇನೆ. 10 ‘ಇಗೋ! ನನ್ನ ಸಂದೇಶವಾಹಕನನ್ನು ನಿನ್ನ ಮುಂದೆ ಕಳುಹಿಸುತ್ತೇನೆ; ಅವನು ನಿನ್ನ ಮುಂದೆ ಮಾರ್ಗವನ್ನು ಸಿದ್ಧಪಡಿಸುವನು’ ಎಂದು ಯಾರ ಕುರಿತಾಗಿ ಬರೆದಿದೆಯೋ ಅವನೇ ಇವನು. 11 ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ, ಸ್ತ್ರೀಯರಲ್ಲಿ ಹುಟ್ಟಿದವರಲ್ಲಿ ಸ್ನಾನಿಕನಾದ ಯೋಹಾನನಿಗಿಂತ ದೊಡ್ಡವನು ಎದ್ದಿಲ್ಲ; ಆದರೆ ಸ್ವರ್ಗದ ರಾಜ್ಯದಲ್ಲಿರುವ ಚಿಕ್ಕವನು ಇವನಿಗಿಂತಲೂ ದೊಡ್ಡವನಾಗಿದ್ದಾನೆ. 12 ಸ್ನಾನಿಕನಾದ ಯೋಹಾನನ ದಿನಗಳಿಂದ ಇಂದಿನ ವರೆಗೆ ಮನುಷ್ಯರು ಸ್ವರ್ಗದ ರಾಜ್ಯವೆಂಬ ಗುರಿಯ ಕಡೆಗೆ ಮುನ್ನುಗ್ಗುತ್ತಿದ್ದಾರೆ ಮತ್ತು ಮುನ್ನುಗ್ಗುತ್ತಿರುವವರು ಅದನ್ನು ಸ್ವಾಧೀನಮಾಡಿಕೊಳ್ಳುತ್ತಿದ್ದಾರೆ. 13 ಧರ್ಮಶಾಸ್ತ್ರವೂ ಪ್ರವಾದಿಗಳೆಲ್ಲರೂ ಯೋಹಾನನ ವರೆಗೆ ಪ್ರವಾದಿಸಿದರು; 14 ‘ಬರತಕ್ಕ ಎಲೀಯನು’ ಇವನೇ ಎಂದು ಒಪ್ಪಿಕೊಳ್ಳಲು ನಿಮಗೆ ಮನಸ್ಸಿದ್ದರೆ ಒಪ್ಪಿಕೊಳ್ಳಿರಿ. 15 ಕಿವಿಗಳಿರುವವನು ಆಲಿಸಲಿ.
16 “ಈ ಸಂತತಿಯನ್ನು ನಾನು ಯಾರಿಗೆ ಹೋಲಿಸಲಿ? ಇದು ಮಾರುಕಟ್ಟೆಗಳಲ್ಲಿ ಕುಳಿತುಕೊಂಡು ತಮ್ಮ ಆಟದ ಸಂಗಾತಿಗಳಿಗೆ, 17 ‘ನಾವು ನಿಮಗೋಸ್ಕರ ಕೊಳಲೂದಿದೆವು, ನೀವು ಕುಣಿಯಲಿಲ್ಲ; ನಾವು ಗೋಳಾಡಿದೆವು, ನೀವು ದುಃಖದಿಂದ ಎದೆಬಡಿದುಕೊಳ್ಳಲಿಲ್ಲ’ ಎಂದು ಕೂಗಿಹೇಳುವ ಚಿಕ್ಕ ಮಕ್ಕಳಿಗೆ ಹೋಲಿಕೆಯಾಗಿದೆ. 18 ಅದರಂತೆಯೇ ಯೋಹಾನನು ಉಣ್ಣುತ್ತಾ ಕುಡಿಯುತ್ತಾ ಬರಲಿಲ್ಲ; ಆದರೂ ಜನರು ‘ಇವನಿಗೆ ದೆವ್ವಹಿಡಿದಿದೆ’ ಎಂದು ಹೇಳುತ್ತಾರೆ. 19 ಮನುಷ್ಯಕುಮಾರನು ಉಣ್ಣುತ್ತಾ ಕುಡಿಯುತ್ತಾ ಬಂದನು ನಿಜ; ಆದರೂ ಜನರು ‘ಇವನು ಹೊಟ್ಟೆಬಾಕನು, ದ್ರಾಕ್ಷಾಮದ್ಯ ಕುಡಿತದ ಚಟಕ್ಕೆ ಬಿದ್ದಿರುವವನು, ತೆರಿಗೆ ವಸೂಲಿಗಾರರ ಮತ್ತು ಪಾಪಿಗಳ ಸ್ನೇಹಿತನು’ ಎಂದು ಹೇಳುತ್ತಾರೆ. ಏನೇ ಆಗಲಿ, ವಿವೇಕವು ತನ್ನ ಕ್ರಿಯೆಗಳ ಮೂಲಕ ನೀತಿಯುತವೆಂದು ಸಾಬೀತಾಗುತ್ತದೆ.”
20 ತದನಂತರ ತನ್ನ ಮಹತ್ಕಾರ್ಯಗಳು ಹೆಚ್ಚಾಗಿ ನಡೆಸಲ್ಪಟ್ಟ ಊರುಗಳು ಪಶ್ಚಾತ್ತಾಪ ತೋರಿಸದ ಕಾರಣ ಅವನು ಅವುಗಳನ್ನು ಖಂಡಿಸತೊಡಗಿದನು: 21 “ಖೊರಾಜಿನೇ, ನಿನ್ನ ಗತಿಯನ್ನು ಏನು ಹೇಳಲಿ! ಬೇತ್ಸಾಯಿದವೇ, ನಿನ್ನ ಗತಿಯನ್ನು ಏನು ಹೇಳಲಿ! ಏಕೆಂದರೆ ನಿಮ್ಮಲ್ಲಿ ನಡೆಸಲ್ಪಟ್ಟ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿರುತ್ತಿದ್ದರೆ ಬಹಳ ಸಮಯದ ಹಿಂದೆಯೇ ಅಲ್ಲಿಯವರು ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯಲ್ಲಿ ಕುಳಿತು ಪಶ್ಚಾತ್ತಾಪಪಡುತ್ತಿದ್ದರು. 22 ಆದುದರಿಂದ ನ್ಯಾಯತೀರ್ಪಿನ ದಿನದಲ್ಲಿ ನಿಮಗಿಂತಲೂ ತೂರ್ ಮತ್ತು ಸೀದೋನ್ ಪಟ್ಟಣಗಳ ಗತಿಯು ಹೆಚ್ಚು ಸಹನೀಯವಾದುದಾಗಿರುವುದು ಎಂದು ನಿಮಗೆ ಹೇಳುತ್ತೇನೆ. 23 ಎಲೈ ಕಪೆರ್ನೌಮೇ, ನೀನು ಒಂದುವೇಳೆ ಸ್ವರ್ಗಕ್ಕೆ ಏರಿಸಲ್ಪಡುವಿಯೊ? ನೀನು ಹೇಡೀಸ್ಗೆ * ಇಳಿಯುವಿ; ಏಕೆಂದರೆ ನಿನ್ನಲ್ಲಿ ನಡೆಸಲ್ಪಟ್ಟ ಮಹತ್ಕಾರ್ಯಗಳು ಸೊದೋಮಿನಲ್ಲಿ ನಡೆದಿರುತ್ತಿದ್ದರೆ ಅದು ಇಂದಿನ ವರೆಗೂ ಉಳಿದಿರುತ್ತಿತ್ತು. 24 ಆದುದರಿಂದ ಜನರೇ, ನ್ಯಾಯತೀರ್ಪಿನ ದಿನದಲ್ಲಿ ನಿಮಗಿಂತಲೂ ಸೊದೋಮಿನ ಗತಿಯು ಹೆಚ್ಚು ಸಹನೀಯವಾದುದಾಗಿರುವುದು ಎಂದು ನಿಮಗೆ ಹೇಳುತ್ತೇನೆ.”
25 ಆ ಸಮಯದಲ್ಲಿ ಯೇಸು, “ತಂದೆಯೇ, ಸ್ವರ್ಗ ಭೂಲೋಕಗಳ ಒಡೆಯನೇ, ನೀನು ವಿವೇಕಿಗಳಿಂದಲೂ ಜ್ಞಾನಿಗಳಿಂದಲೂ ಈ ವಿಷಯಗಳನ್ನು ಮರೆಮಾಡಿ ಶಿಶುಗಳಿಗೆ ಪ್ರಕಟಪಡಿಸಿರುವುದರಿಂದ ನಾನು ನಿನ್ನನ್ನು ಬಹಿರಂಗವಾಗಿ ಕೊಂಡಾಡುತ್ತೇನೆ. 26 ಹೌದು ತಂದೆಯೇ, ಹೀಗೆ ಮಾಡುವುದು ನಿನಗೆ ಒಪ್ಪಿಗೆಯಾದ ಮಾರ್ಗವಾಗಿತ್ತು. 27 ನನ್ನ ತಂದೆ ನನಗೆ ಎಲ್ಲ ವಿಷಯಗಳನ್ನು ಒಪ್ಪಿಸಿಕೊಟ್ಟಿದ್ದಾನೆ ಮತ್ತು ತಂದೆಯ ಹೊರತು ಮಗನನ್ನು ಯಾವನೂ ಪೂರ್ಣವಾಗಿ ತಿಳಿದಿರುವುದಿಲ್ಲ; ಅಂತೆಯೇ ಮಗನ ಹೊರತು ಮತ್ತು ಮಗನು ಯಾರಿಗೆ ಆತನನ್ನು ತಿಳಿಯಪಡಿಸಲು ಇಷ್ಟಪಡುತ್ತಾನೊ ಅವನ ಹೊರತು ಯಾರೂ ಆತನನ್ನು ತಿಳಿದಿರುವುದಿಲ್ಲ. 28 ಎಲೈ ಕಷ್ಟಪಡುತ್ತಿರುವವರೇ, ಹೊರೆಹೊತ್ತಿರುವವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ಚೈತನ್ಯ ನೀಡುವೆನು. 29 ನಾನು ಸೌಮ್ಯಭಾವದವನೂ ದೀನಹೃದಯದವನೂ ಆಗಿರುವುದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿಯಿರಿ; ಆಗ ನೀವು ನಿಮ್ಮ ಪ್ರಾಣಗಳಿಗೆ ಚೈತನ್ಯವನ್ನು ಪಡೆದುಕೊಳ್ಳುವಿರಿ. 30 ಏಕೆಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ” ಎಂದನು.