ರೋಮನ್ನರಿಗೆ
1 ಯೇಸು ಕ್ರಿಸ್ತನ ದಾಸನೂ ಅಪೊಸ್ತಲನಾಗಲು ಕರೆಯಲ್ಪಟ್ಟವನೂ ದೇವರ ಸುವಾರ್ತೆಗೆ ಪ್ರತ್ಯೇಕಿಸಲ್ಪಟ್ಟವನೂ ಆದ ಪೌಲನಿಂದ 2 ದೇವರು ಇದನ್ನು ಮುಂಚಿತವಾಗಿಯೇ ತನ್ನ ಪ್ರವಾದಿಗಳ ಮೂಲಕ ಪವಿತ್ರ ಶಾಸ್ತ್ರಗ್ರಂಥದಲ್ಲಿ ವಾಗ್ದಾನಿಸಿದನು. 3 ಇದು ಶರೀರಾನುಸಾರವಾಗಿ ದಾವೀದನ ಸಂತಾನದಲ್ಲಿ ಉದ್ಭವಿಸಿದ ತನ್ನ ಪುತ್ರನ, 4 ಪವಿತ್ರಾತ್ಮಕ್ಕನುಸಾರ * ಸತ್ತವರೊಳಗಿಂದ ಪುನರುತ್ಥಾನದ ಮೂಲಕ ಬಲದಿಂದ ದೇವರ ಪುತ್ರನೆಂದು ಪ್ರಕಟಿಸಲ್ಪಟ್ಟ—ಹೌದು, ನಮ್ಮ ಕರ್ತನಾದ ಯೇಸು ಕ್ರಿಸ್ತನ ಕುರಿತಾಗಿತ್ತು. 5 ಇವನ ಮೂಲಕ ನಾವು ಅಪಾತ್ರ ದಯೆಯನ್ನೂ * ಅಪೊಸ್ತಲತ್ವವನ್ನೂ ಪಡೆದದ್ದು ಎಲ್ಲ ಜನಾಂಗಗಳಲ್ಲಿ ಅವನ ಹೆಸರಿನ ಕುರಿತು ನಂಬಿಕೆಯ ವಿಧೇಯತ್ವವು ತೋರಿಬರುವುದಕ್ಕೋಸ್ಕರವೇ. 6 ಈ ಜನಾಂಗಗಳಲ್ಲಿ ನೀವು ಸಹ ಯೇಸು ಕ್ರಿಸ್ತನಿಗೆ ಸೇರಿದವರಾಗಿರಲು ಕರೆಯಲ್ಪಟ್ಟಿದ್ದೀರಿ— 7 ರೋಮ್ ನಗರದಲ್ಲಿರುವ ದೇವರ ಪ್ರಿಯರೂ ಪವಿತ್ರ ಜನರಾಗಿರಲು ಕರೆಯಲ್ಪಟ್ಟಿರುವವರೂ ಆಗಿರುವ ಎಲ್ಲರಿಗೆ,
ನಮ್ಮ ತಂದೆಯಾದ ದೇವರಿಂದ ಮತ್ತು ಕರ್ತನಾದ ಯೇಸು ಕ್ರಿಸ್ತನಿಂದ ನಿಮಗೆ ಅಪಾತ್ರ ದಯೆಯೂ ಶಾಂತಿಯೂ ಉಂಟಾಗಲಿ.
8 ಮೊದಲನೆಯದಾಗಿ, ನಿಮ್ಮ ನಂಬಿಕೆಯು ಲೋಕದಾದ್ಯಂತ ಪ್ರಸಿದ್ಧವಾಗಿರುವುದಕ್ಕಾಗಿ ನಿಮ್ಮೆಲ್ಲರ ವಿಷಯವಾಗಿ ನಾನು ಯೇಸು ಕ್ರಿಸ್ತನ ಮೂಲಕ ನನ್ನ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. 9 ನಾನು ಪ್ರಾರ್ಥಿಸುವಾಗೆಲ್ಲ ಎಡೆಬಿಡದೆ ನಿಮಗೋಸ್ಕರ ಬೇಡಿಕೊಳ್ಳುತ್ತೇನೆ ಎಂಬುದಕ್ಕೆ ಆತನ ಮಗನ ಕುರಿತಾದ ಸುವಾರ್ತೆಯ ಸಂಬಂಧದಲ್ಲಿ ನಾನು ಯಾರಿಗೆ ಶ್ರದ್ಧೆಯಿಂದ ಪವಿತ್ರ ಸೇವೆಯನ್ನು ಸಲ್ಲಿಸುವವನಾಗಿದ್ದೇನೊ ಆ ದೇವರೇ ನನಗೆ ಸಾಕ್ಷಿಯಾಗಿದ್ದಾನೆ. 10 ಸಾಧ್ಯವಿರುವುದಾದರೆ ನಾನು ನಿಮ್ಮ ಬಳಿಗೆ ಕಟ್ಟಕಡೆಗಾದರೂ ಬರುವುದಕ್ಕೆ ದೇವರ ಚಿತ್ತದಿಂದ ನನಗೆ ಅನುಗ್ರಹವಾಗಲಿ ಎಂಬುದೇ ನನ್ನ ಬೇಡಿಕೆ. 11 ಏಕೆಂದರೆ ನಾನು ನಿಮ್ಮನ್ನು ನೋಡಲು ಹಂಬಲಿಸುತ್ತಿದ್ದೇನೆ, ಈ ಮೂಲಕ ನಿಮ್ಮನ್ನು ದೃಢಪಡಿಸಲಿಕ್ಕಾಗಿ ನಾನು ನಿಮಗೆ ಆಧ್ಯಾತ್ಮಿಕ ವರವನ್ನು ಕೊಡಲು ಸಾಧ್ಯವಾಗಬಹುದು; 12 ಇಲ್ಲವೆ, ಇನ್ನೂ ಖಚಿತವಾಗಿ, ನಿಮ್ಮ ಮಧ್ಯೆ ಉತ್ತೇಜನವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಅಂದರೆ ನಿಮ್ಮ ನಂಬಿಕೆಯಿಂದ ನಾನು ಮತ್ತು ನನ್ನ ನಂಬಿಕೆಯಿಂದ ನೀವು ಉತ್ತೇಜಿಸಲ್ಪಡಲು ಸಾಧ್ಯವಾಗಬಹುದು.
13 ಸಹೋದರರೇ, ಉಳಿದ ಜನಾಂಗಗಳಲ್ಲಿ ಫಲವನ್ನು ಪಡೆದುಕೊಂಡಂತೆ ನಿಮ್ಮಲ್ಲಿಯೂ ಏನಾದರೂ ಫಲವನ್ನು ಪಡೆಯಸಾಧ್ಯವಾಗುವಂತೆ ನಾನು ಅನೇಕ ಬಾರಿ ನಿಮ್ಮ ಬಳಿಗೆ ಬರಲು ಉದ್ದೇಶಿಸಿದೆ, ಆದರೆ ಇಷ್ಟರ ತನಕ ನನಗೆ ತಡೆಯಾಯಿತೆಂದು ನಿಮಗೆ ತಿಳಿದಿರಬೇಕೆಂಬುದು ನನ್ನ ಅಪೇಕ್ಷೆ. 14 ಗ್ರೀಕರಿಗೂ ಅನ್ಯರಿಗೂ ವಿವೇಕಿಗಳಿಗೂ ಮೂಢರಿಗೂ ನಾನು ಸಾಲಗಾರನಾಗಿದ್ದೇನೆ; 15 ಆದುದರಿಂದ ರೋಮ್ ನಗರದಲ್ಲಿರುವ ನಿಮಗೂ ಸುವಾರ್ತೆಯನ್ನು ಪ್ರಕಟಪಡಿಸಬೇಕೆಂಬ ತೀವ್ರಾಭಿಲಾಷೆ ನನಗಿದೆ. 16 ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೆಪಡುವುದಿಲ್ಲ; ವಾಸ್ತವದಲ್ಲಿ, ಅದು ಮೊದಲು ಯೆಹೂದ್ಯರಿಗೂ ಅನಂತರ ಗ್ರೀಕರಿಗೂ ಹೀಗೆ ನಂಬಿಕೆಯನ್ನಿಡುವ ಪ್ರತಿಯೊಬ್ಬರಿಗೂ ರಕ್ಷಣೆಯನ್ನು ಒದಗಿಸುವ ದೇವರ ಶಕ್ತಿಯಾಗಿದೆ. 17 ನಂಬಿಕೆಯ ಕಾರಣ ದೇವರ ನೀತಿಯು ಪ್ರಕಟವಾಗುತ್ತಲಿದೆ ಮತ್ತು ಇದು ಮತ್ತಷ್ಟು ನಂಬಿಕೆಗೆ ನಡೆಸುತ್ತದೆ, ಏಕೆಂದರೆ “ನೀತಿವಂತನು ತನ್ನ ನಂಬಿಕೆಯಿಂದಲೇ ಬದುಕುವನು” ಎಂದು ಬರೆದಿದೆ.
18 ಅನೀತಿಯ ವಿಧದಿಂದ ಸತ್ಯವನ್ನು ಅಡಗಿಸುವವರಾದ ಮನುಷ್ಯರ ಎಲ್ಲ ಭಕ್ತಿಹೀನತೆಯ ಮತ್ತು ಅನೀತಿಯ ವಿರುದ್ಧವಾಗಿ ದೇವರ ಕ್ರೋಧವು ಸ್ವರ್ಗದಿಂದ ಪ್ರಕಟವಾಗುತ್ತಲಿದೆ. 19 ದೇವರ ಕುರಿತಾಗಿ ತಿಳಿಯಬಹುದಾದ ವಿಷಯಗಳು ಈಗಾಗಲೇ ಅವರಲ್ಲಿ ಪ್ರಕಟವಾಗಿವೆ; ದೇವರೇ ಅದನ್ನು ಅವರಿಗೆ ಪ್ರಕಟಪಡಿಸಿದ್ದಾನೆ. 20 ಆತನ ಅದೃಶ್ಯ ಗುಣಗಳು ಲೋಕವು ಸೃಷ್ಟಿಯಾದಂದಿನಿಂದ ಸ್ಪಷ್ಟವಾಗಿ ಕಂಡುಬರುತ್ತವೆ. ಏಕೆಂದರೆ ಸೃಷ್ಟಿಮಾಡಲ್ಪಟ್ಟವುಗಳಿಂದ ಆತನ ಅನಂತ ಶಕ್ತಿ ಮತ್ತು ದೇವತ್ವವನ್ನು ಸಹ ಗ್ರಹಿಸಲಾಗುತ್ತದೆ. ಈ ಕಾರಣದಿಂದ ಅವರು ಯಾವುದೇ ನೆಪವನ್ನು ಕೊಡಲಾರದೆ ಇದ್ದಾರೆ. 21 ಏಕೆಂದರೆ ದೇವರನ್ನು ತಿಳಿದಿದ್ದರೂ, ಅವರು ಆತನನ್ನು ದೇವರೆಂದು ಮಹಿಮೆಪಡಿಸಲೂ ಇಲ್ಲ ಆತನಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲೂ ಇಲ್ಲ. ಅವರು ತಮ್ಮ ತರ್ಕಗಳಿಂದಾಗಿ ಜ್ಞಾನಹೀನರಾದರು ಮತ್ತು ಅವರ ಬುದ್ಧಿಹೀನ ಹೃದಯವು ಕತ್ತಲಾಯಿತು. 22 ತಾವು ವಿವೇಕಿಗಳಾಗಿದ್ದೇವೆಂದು ಒತ್ತಿಹೇಳಿದರೂ ಅವರು ಮೂರ್ಖರಾದರು 23 ಮತ್ತು ಲಯವಾಗದ ದೇವರ ಮಹಿಮೆಯನ್ನು ಅವರು ಲಯವಾಗುವ ಮನುಷ್ಯ, ಪಕ್ಷಿಗಳು, ಚತುಷ್ಪಾದಿಗಳು ಮತ್ತು ಹರಿದಾಡುವ ಜೀವಿಗಳ ರೂಪಕ್ಕೆ ಮಾರ್ಪಡಿಸಿದರು.
24 ಆದುದರಿಂದ ಅವರು ತಮ್ಮ ಹೃದಯಗಳ ಇಚ್ಛೆಗಳಿಗನುಸಾರ ನಡೆದು ತಮ್ಮ ದೇಹಗಳನ್ನು ಮಾನಹೀನಮಾಡಿಕೊಳ್ಳುವಂತೆ ದೇವರು ಅವರನ್ನು ಅಶುದ್ಧತೆಗೆ ಒಪ್ಪಿಸಿದನು. 25 ಮಾತ್ರವಲ್ಲದೆ, ಯಾರು ದೇವರ ಸತ್ಯವನ್ನು ಸುಳ್ಳಿನೊಂದಿಗೆ ಬದಲಾಯಿಸಿಕೊಂಡಿದ್ದಾರೋ ಮತ್ತು ಸೃಷ್ಟಿಕರ್ತನನ್ನು ಬಿಟ್ಟು ಸೃಷ್ಟಿವಸ್ತುಗಳನ್ನೇ ಪೂಜಿಸಿ ಅವುಗಳಿಗೆ ಪವಿತ್ರ ಸೇವೆಯನ್ನು ಸಲ್ಲಿಸುತ್ತಾರೋ ಅವರಿಗೂ ಹೀಗೆಯೇ ಮಾಡಿದ್ದಾನೆ. ಸೃಷ್ಟಿಕರ್ತನು ನಿತ್ಯಕ್ಕೂ ಸ್ತುತಿಹೊಂದತಕ್ಕವನು. ಆಮೆನ್. 26 ಈ ಕಾರಣದಿಂದ ದೇವರು ಅವರನ್ನು ತುಚ್ಛವಾದ ಕಾಮಾಭಿಲಾಷೆಗೆ ಒಪ್ಪಿಸಿದನು; ಹೇಗೆಂದರೆ ಅವರ ಸ್ತ್ರೀಯರು ತಮ್ಮ ಸ್ವಾಭಾವಿಕವಾದ ಭೋಗವನ್ನು ಬಿಟ್ಟು ಸ್ವಭಾವಕ್ಕೆ ವಿರುದ್ಧವಾದದ್ದನ್ನೇ ಮಾಡಿದರು; 27 ಅಂತೆಯೇ ಪುರುಷರು ಸಹ ಸ್ವಾಭಾವಿಕವಾದ ಸ್ತ್ರೀಭೋಗವನ್ನು ಬಿಟ್ಟು ಒಬ್ಬರ ಮೇಲೊಬ್ಬರು ಕಾಮಾತುರದಿಂದ ತಾಪಪಡುತ್ತಾ ಪುರುಷರೊಂದಿಗೆ ಪುರುಷರು ಅಸಹ್ಯಕರವಾದದ್ದನ್ನು ನಡಿಸಿ ತಮ್ಮ ತಪ್ಪಿಗೆ ತಕ್ಕ ಫಲವನ್ನು ಸಂಪೂರ್ಣವಾಗಿ ತಮ್ಮಲ್ಲಿಯೇ ಹೊಂದುವವರಾದರು.
28 ಅವರು ದೇವರ ನಿಷ್ಕೃಷ್ಟ ಜ್ಞಾನವನ್ನು ಅಂಗೀಕರಿಸಲಿಲ್ಲವಾದ್ದರಿಂದ ದೇವರು ಅವರನ್ನು ಅಯೋಗ್ಯವಾದ ವಿಷಯಗಳನ್ನು ನಡೆಸುವಂತೆ ಅನಂಗೀಕೃತವಾದ ಮಾನಸಿಕ ಸ್ಥಿತಿಗೆ ಒಪ್ಪಿಸಿದನು. 29 ಅವರು ಎಲ್ಲ ರೀತಿಯ ಅನೀತಿ, ದುಷ್ಟತನ, ದುರಾಶೆ, ಕೆಟ್ಟತನ, ಹೊಟ್ಟೆಕಿಚ್ಚು, ಕೊಲೆ, ಜಗಳ, ಮೋಸ, ಹಗೆತನ ಇವುಗಳಿಂದ ತುಂಬಿದವರಾಗಿದ್ದಾರೆ. ಅವರು ಕಿವಿಯೂದುವವರೂ 30 ಚಾಡಿಹೇಳುವವರೂ ದೇವರನ್ನು ದ್ವೇಷಿಸುವವರೂ ಸೊಕ್ಕಿನವರೂ ಅಹಂಕಾರಿಗಳೂ ಬಡಾಯಿಕೊಚ್ಚುವವರೂ ಕೇಡನ್ನು ಕಲ್ಪಿಸುವವರೂ ಹೆತ್ತವರಿಗೆ ಅವಿಧೇಯರೂ 31 ತಿಳಿವಳಿಕೆಯಿಲ್ಲದವರೂ ಮಾತಿಗೆ ತಪ್ಪುವವರೂ ಸ್ವಾಭಾವಿಕ ಮಮತೆಯಿಲ್ಲದವರೂ ಕರುಣೆಯಿಲ್ಲದವರೂ ಆಗಿದ್ದಾರೆ. 32 ಇಂಥ ವಿಷಯಗಳನ್ನು ಮಾಡುತ್ತಾ ಇರುವವರು ಮರಣಕ್ಕೆ ಪಾತ್ರರಾಗಿದ್ದಾರೆ ಎಂಬ ದೇವರ ನೀತಿಯ ತೀರ್ಪನ್ನು ಇವರು ಚೆನ್ನಾಗಿ ಬಲ್ಲವರಾಗಿರುವುದಾದರೂ ಅವುಗಳನ್ನು ಮಾಡುತ್ತಾ ಮುಂದುವರಿಯುವುದಲ್ಲದೆ ಅಂಥ ವಿಷಯಗಳನ್ನು ಮಾಡುತ್ತಿರುವವರನ್ನು ಅನುಮೋದಿಸುತ್ತಾರೆ.