ರೋಮನ್ನರಿಗೆ
14 ನಂಬಿಕೆಯಲ್ಲಿ ಬಲಹೀನನಾಗಿರುವವನನ್ನು ಸೇರಿಸಿಕೊಳ್ಳಿರಿ, ಆದರೆ ಅವನ ಆಂತರಿಕ ವಿಷಯಗಳ ಬಗ್ಗೆ ನಿರ್ಣಯಗಳನ್ನು ಮಾಡಬೇಡಿ. 2 ಒಬ್ಬ ಮನುಷ್ಯನಿಗೆ ಎಲ್ಲವನ್ನೂ ತಿನ್ನುವ ನಂಬಿಕೆಯಿರುತ್ತದೆ, ಆದರೆ ನಂಬಿಕೆಯಲ್ಲಿ ಬಲಹೀನನಾಗಿರುವವನು ತರಕಾರಿಗಳನ್ನು ತಿನ್ನುತ್ತಾನೆ. 3 ಆದರೆ ತಿನ್ನುವವನು ತಿನ್ನದಿರುವವನನ್ನು ಹೀನವಾಗಿ ಕಾಣದಿರಲಿ; ತಿನ್ನದವನು ತಿನ್ನುವವನಿಗೆ ತೀರ್ಪುಮಾಡದಿರಲಿ, ಏಕೆಂದರೆ ದೇವರು ಅವನನ್ನು ಸೇರಿಸಿಕೊಂಡಿದ್ದಾನೆ. 4 ಇನ್ನೊಬ್ಬನ ಮನೆಯ ಸೇವಕನ ವಿಷಯವಾಗಿ ತೀರ್ಪುಮಾಡುವುದಕ್ಕೆ ನೀನು ಯಾರು? ಅವನು ನಿಂತರೂ ಬಿದ್ದರೂ ಅವನ ಯಜಮಾನನಿಗೆ ಸೇರಿದ್ದು. ವಾಸ್ತವದಲ್ಲಿ ಅವನು ನಿಲ್ಲಿಸಲ್ಪಡುವನು, ಏಕೆಂದರೆ ಯೆಹೋವನು ಅವನನ್ನು ನಿಲ್ಲಿಸಲು ಶಕ್ತನಾಗಿದ್ದಾನೆ.
5 ಒಬ್ಬ ಮನುಷ್ಯನು ಒಂದು ದಿನವನ್ನು ಇನ್ನೊಂದಕ್ಕಿಂತ ವಿಶೇಷವಾಗಿ ಎಣಿಸುತ್ತಾನೆ; ಇನ್ನೊಬ್ಬ ಮನುಷ್ಯನು ಎಲ್ಲ ದಿನಗಳನ್ನು ಸಮಾನವಾಗಿ ಎಣಿಸುತ್ತಾನೆ. ಪ್ರತಿಯೊಬ್ಬನು ತನ್ನ ಮನಸ್ಸಿನಲ್ಲಿ ಪೂರ್ಣವಾಗಿ ನಿಶ್ಚಯಿಸಿಕೊಂಡಿರಲಿ. 6 ಒಂದು ದಿನವನ್ನು ವಿಶೇಷವಾಗಿ ಆಚರಿಸುವವನು ಅದನ್ನು ಯೆಹೋವನಿಗಾಗಿ ಆಚರಿಸುತ್ತಾನೆ. ತಿನ್ನುವವನು ಸಹ ಯೆಹೋವನಿಗಾಗಿ ತಿನ್ನುತ್ತಾನೆ, ಏಕೆಂದರೆ ಅದಕ್ಕಾಗಿ ಅವನು ದೇವರಿಗೆ ಕೃತಜ್ಞತೆ ಸಲ್ಲಿಸುತ್ತಾನೆ. ತಿನ್ನದವನು ಸಹ ಯೆಹೋವನಿಗಾಗಿ ತಿನ್ನದೇ ಇರುತ್ತಾನೆ, ಆದರೂ ಅವನು ದೇವರಿಗೆ ಕೃತಜ್ಞತೆ ಸಲ್ಲಿಸುತ್ತಾನೆ. 7 ವಾಸ್ತವದಲ್ಲಿ, ನಮ್ಮಲ್ಲಿ ಯಾವನೂ ತನಗೋಸ್ಕರ ಜೀವಿಸುವುದೂ ಇಲ್ಲ, ತನಗೋಸ್ಕರ ಸಾಯುವುದೂ ಇಲ್ಲ; 8 ನಾವು ಜೀವಿಸಿದರೆ ಯೆಹೋವನಿಗಾಗಿ ಜೀವಿಸುತ್ತೇವೆ, ಸತ್ತರೆ ಯೆಹೋವನಿಗಾಗಿ ಸಾಯುತ್ತೇವೆ. ಆದುದರಿಂದ ನಾವು ಜೀವಿಸಿದರೂ ಸತ್ತರೂ ಯೆಹೋವನವರೇ. 9 ಸತ್ತವರಿಗೂ ಜೀವಿಸುವವರಿಗೂ ಕರ್ತನಾಗಿರುವುದಕ್ಕಾಗಿ ಕ್ರಿಸ್ತನು ಸತ್ತು ಪುನಃ ಜೀವವನ್ನು ಹೊಂದಿದನು.
10 ಹಾಗಾದರೆ ನೀನು ನಿನ್ನ ಸಹೋದರನಿಗೆ ತೀರ್ಪುಮಾಡುವುದೇಕೆ? ಅಥವಾ ನಿನ್ನ ಸಹೋದರನನ್ನು ಹೀನವಾಗಿ ಕಾಣುವುದೇಕೆ? ನಾವೆಲ್ಲರು ದೇವರ ನ್ಯಾಯಾಸನದ ಮುಂದೆ ನಿಲ್ಲುವೆವು. 11 “ ‘ನಾನು ಜೀವಿಸುವುದು ಎಷ್ಟು ನಿಶ್ಚಯವೋ, ಪ್ರತಿಯೊಬ್ಬ ಮನುಷ್ಯನು ನನ್ನ ಮುಂದೆ ಮೊಣಕಾಲೂರುವುದು ಮತ್ತು ಎಲ್ಲ ಮಾನವರು ನಾನೇ ದೇವರೆಂದು ಬಹಿರಂಗವಾಗಿ ಅರಿಕೆಮಾಡುವುದು ಅಷ್ಟೇ ನಿಶ್ಚಯ’ ಎಂದು ಯೆಹೋವನು ಹೇಳುತ್ತಾನೆ” ಎಂಬುದಾಗಿ ಬರೆದಿದೆ. 12 ಹಾಗಾದರೆ ನಮ್ಮಲ್ಲಿ ಪ್ರತಿಯೊಬ್ಬನು ತನ್ನ ವಿಷಯದಲ್ಲಿ ದೇವರಿಗೆ ಲೆಕ್ಕ ಒಪ್ಪಿಸುವನು.
13 ಆದುದರಿಂದ ನಾವು ಇನ್ನೆಂದೂ ಒಬ್ಬರ ಮೇಲೊಬ್ಬರು ತೀರ್ಪುಮಾಡದೆ ಇರೋಣ. ಸಹೋದರನ ಮುಂದೆ ಎಡವುವ ಕಲ್ಲನ್ನಾಗಲಿ ಮುಗ್ಗರಿಸಲು ಕಾರಣವನ್ನಾಗಲಿ ಕೊಡಬಾರದೆಂದು ತೀರ್ಮಾನಿಸಿಕೊಳ್ಳಿರಿ. 14 ಯಾವುದೇ ಪದಾರ್ಥವು ಸ್ವತಃ ಅಶುದ್ಧವಾದದ್ದಲ್ಲ ಎಂಬುದು ನನಗೆ ತಿಳಿದಿದೆ ಮತ್ತು ಈ ವಿಷಯದಲ್ಲಿ ಕರ್ತನಾದ ಯೇಸುವಿನಿಂದ ನಾನು ಒಡಂಬಡಿಸಲ್ಪಟ್ಟಿದ್ದೇನೆ. ಒಬ್ಬನು ಒಂದು ಪದಾರ್ಥವನ್ನು ಅಶುದ್ಧವೆಂದು ಭಾವಿಸುವುದಾದರೆ ಅದು ಅವನಿಗೆ ಅಶುದ್ಧವಾಗಿರುವುದು. 15 ಆಹಾರದ ವಿಷಯದಲ್ಲಿ ನಿನ್ನ ಸಹೋದರನ ಮನಸ್ಸಿಗೆ ನೋವಾಗಿರುವಲ್ಲಿ ನೀನು ಪ್ರೀತಿಗನುಸಾರವಾಗಿ ನಡೆಯುವವನಲ್ಲ. ಯಾರಿಗೋಸ್ಕರ ಕ್ರಿಸ್ತನು ಸತ್ತನೋ ಅವನ ನಂಬಿಕೆಯನ್ನು ನಿನ್ನ ಆಹಾರದ ಮೂಲಕ ಹಾಳುಮಾಡಬೇಡ. 16 ನೀವು ಮಾಡುವ ಒಳ್ಳೇದು ನಿಮಗೆ ಹಾನಿಕರವಾದುದಾಗಿ ಮಾತಾಡಲ್ಪಡಲು ಆಸ್ಪದಕೊಡಬೇಡಿ. 17 ಏಕೆಂದರೆ ತಿನ್ನುವುದೂ ಕುಡಿಯುವುದೂ ದೇವರ ರಾಜ್ಯವಲ್ಲ; ನೀತಿಯೂ ಶಾಂತಿಯೂ ಪವಿತ್ರಾತ್ಮದಿಂದ ಉಂಟಾಗುವ ಆನಂದವೂ ದೇವರ ರಾಜ್ಯವಾಗಿದೆ. 18 ಈ ರೀತಿಯಲ್ಲಿ ಯಾರು ಕ್ರಿಸ್ತನಿಗೆ ದಾಸನಂತೆ ಸೇವೆಸಲ್ಲಿಸುತ್ತಾನೋ ಅವನನ್ನು ದೇವರು ಅಂಗೀಕರಿಸುತ್ತಾನೆ ಮತ್ತು ಅವನಿಗೆ ಮನುಷ್ಯರ ಮೆಚ್ಚುಗೆಯು ದೊರೆಯುತ್ತದೆ.
19 ಆದುದರಿಂದ ನಾವು ಶಾಂತಿಯನ್ನು ಉಂಟುಮಾಡುವ ಮತ್ತು ಪರಸ್ಪರ ಭಕ್ತಿವೃದ್ಧಿಮಾಡುವ ವಿಷಯಗಳನ್ನು ಬೆನ್ನಟ್ಟೋಣ. 20 ಕೇವಲ ಆಹಾರದ ನಿಮಿತ್ತ ದೇವರ ಕೆಲಸವನ್ನು ಕೆಡವಿಹಾಕಬೇಡ. ಎಲ್ಲ ಪದಾರ್ಥಗಳು ಶುದ್ಧವೆಂಬುದು ನಿಜ, ಆದರೆ ಎಡವಿಬೀಳುವ ಸಂದರ್ಭವಿರುವಾಗ ಒಬ್ಬನು ತಿನ್ನುವಲ್ಲಿ ಅದು ಅವನಿಗೆ ಹಾನಿಕರವಾಗಿದೆ. 21 ಮಾಂಸಭಕ್ಷಣೆಯಾಗಲಿ ದ್ರಾಕ್ಷಾಮದ್ಯ ಸೇವನೆಯಾಗಲಿ ಅಥವಾ ಇನ್ನಾವುದೇ ಆಗಲಿ ನಿನ್ನ ಸಹೋದರನನ್ನು ಎಡವುವಂತೆ ಮಾಡುವುದಾದರೆ ಅದನ್ನು ಮಾಡದಿರುವುದೇ ಒಳ್ಳೇದು. 22 ನಿನಗಿರುವ ನಂಬಿಕೆಯನ್ನು ದೇವರ ದೃಷ್ಟಿಯಲ್ಲಿ ನಿನಗೆ ಅನುಗುಣವಾಗಿಯೇ ಇಟ್ಟುಕೊ. ತಾನು ಒಪ್ಪಿಕೊಂಡ ವಿಷಯದ ನಿಮಿತ್ತ ನ್ಯಾಯತೀರ್ಪಿಗೆ ಗುರಿಯಾಗದವನೇ ಸಂತೋಷಿತನು. 23 ಆದರೆ ಸಂಶಯವಿದ್ದು ತಿನ್ನುವವನು ನಂಬಿಕೆಯಿಲ್ಲದೆ ತಿನ್ನುವುದರಿಂದ ಈಗಾಗಲೇ ಖಂಡಿಸಲ್ಪಟ್ಟಿದ್ದಾನೆ. ವಾಸ್ತವದಲ್ಲಿ ನಂಬಿಕೆಯಿಲ್ಲದೆ ಮಾಡುವಂಥದ್ದೆಲ್ಲವೂ ಪಾಪವಾಗಿದೆ.