ರೋಮನ್ನರಿಗೆ
2 ಆದಕಾರಣ ಓ ಮನುಷ್ಯನೇ, ನೀನು ಯಾವನೇ ಆಗಿರಲಿ ಇನ್ನೊಬ್ಬನಿಗೆ ತೀರ್ಪುಮಾಡುವುದಾದರೆ ನೀನು ನಿನ್ನ ವಿಷಯದಲ್ಲಿ ಯಾವುದೇ ನೆಪವನ್ನು ಕೊಡಲಾರೆ; ಇನ್ನೊಬ್ಬನನ್ನು ನೀನು ಯಾವ ವಿಷಯಕ್ಕಾಗಿ ತೀರ್ಪುಮಾಡುತ್ತೀಯೋ ಆ ವಿಷಯವನ್ನು ನೀನೇ ಮಾಡುತ್ತಿರುವಲ್ಲಿ ನಿನ್ನನ್ನು ನೀನೇ ಖಂಡಿಸಿಕೊಳ್ಳುತ್ತೀ. 2 ಇಂಥ ವಿಷಯಗಳನ್ನು ಮಾಡುತ್ತಾ ಇರುವವರ ವಿರುದ್ಧ ಸತ್ಯಕ್ಕನುಸಾರವಾದ ದೇವರ ನ್ಯಾಯತೀರ್ಪು ಇದೆ ಎಂದು ನಮಗೆ ತಿಳಿದಿದೆ.
3 ಓ ಮನುಷ್ಯನೇ, ನೀನು ಅಂಥ ವಿಷಯಗಳನ್ನು ಮಾಡುತ್ತಿರುವವರಿಗೆ ತೀರ್ಪುಮಾಡುವಾಗ ಅವನ್ನೇ ನೀನು ಮಾಡುವುದಾದರೆ ದೇವರ ತೀರ್ಪನ್ನು ತಪ್ಪಿಸಿಕೊಳ್ಳುತ್ತೀ ಎಂದು ನೆನಸುತ್ತೀಯೊ? 4 ಅಥವಾ ದೇವರ ದಯಾಪರ ಗುಣವು ನಿನ್ನನ್ನು ಪಶ್ಚಾತ್ತಾಪದ ಕಡೆಗೆ ನಡೆಸಲು ಪ್ರಯತ್ನಿಸುತ್ತಿದೆ ಎಂಬುದನ್ನು ತಿಳಿಯದಿರುವ ಕಾರಣ ನೀನು ಆತನ ಅಪಾರ ದಯೆ, ಸೈರಣೆ ಮತ್ತು ದೀರ್ಘ ಸಹನೆಯನ್ನು ತಾತ್ಸಾರಮಾಡುತ್ತೀಯೊ? 5 ನೀನು ನಿನ್ನ ಮೊಂಡತನದಿಂದ ಮತ್ತು ಪಶ್ಚಾತ್ತಾಪವಿಲ್ಲದ ಹೃದಯದಿಂದ ದೇವರ ಕ್ರೋಧದ ದಿನಕ್ಕಾಗಿಯೂ ದೇವರ ನೀತಿಯ ನ್ಯಾಯತೀರ್ಪು ಪ್ರಕಟವಾಗುವ ದಿನಕ್ಕಾಗಿಯೂ ನಿನಗಾಗಿ ದೇವರ ಕ್ರೋಧವನ್ನು ಕೂಡಿಸಿಟ್ಟುಕೊಳ್ಳುತ್ತಾ ಇದ್ದೀ. 6 ಆತನು ಪ್ರತಿಯೊಬ್ಬನಿಗೂ ಅವನವನ ಕ್ರಿಯೆಗಳಿಗನುಸಾರ ತೀರ್ಪುಮಾಡುವನು: 7 ಯಾರು ಮಹಿಮೆಯನ್ನೂ ಗೌರವವನ್ನೂ ನಿರ್ಲಯತ್ವವನ್ನೂ ಹೊಂದಬೇಕೆಂದು ಒಳ್ಳೇದನ್ನು ಮಾಡುವುದರಲ್ಲಿ ತಾಳಿಕೊಂಡಿರುತ್ತಾರೋ ಅವರಿಗೆ ಆತನು ನಿತ್ಯಜೀವವನ್ನು ಕೊಡುವನು; 8 ಆದರೆ ಯಾರು ಜಗಳಗಂಟರಾಗಿದ್ದಾರೋ ಮತ್ತು ಸತ್ಯಕ್ಕೆ ಅವಿಧೇಯರಾಗಿ ಅನೀತಿಗೆ ವಿಧೇಯರಾಗುತ್ತಾರೋ ಅಂಥವರಿಗೆ ಕ್ರೋಧವೂ ಕೋಪವೂ ಕಾದಿದೆ; 9 ಕೆಡುಕನ್ನು ನಡಿಸುವ ಪ್ರತಿಯೊಬ್ಬ ಮನುಷ್ಯನ ಮೇಲೆ ಸಂಕಟವೂ ಕಷ್ಟವೂ ಬರುವುದು; ಮೊದಲು ಯೆಹೂದ್ಯರಿಗೆ ನಂತರ ಗ್ರೀಕರಿಗೆ ಸಹ; 10 ಆದರೆ ಒಳ್ಳೇದನ್ನು ಮಾಡುವ ಪ್ರತಿಯೊಬ್ಬನಿಗೆ ಮಹಿಮೆಯೂ ಗೌರವವೂ ಶಾಂತಿಯೂ ದೊರಕುವುದು; ಮೊದಲು ಯೆಹೂದ್ಯರಿಗೆ ಅನಂತರ ಗ್ರೀಕರಿಗೆ ಸಹ. 11 ಏಕೆಂದರೆ ದೇವರಲ್ಲಿ ಯಾವುದೇ ಪಕ್ಷಪಾತವಿಲ್ಲ.
12 ಉದಾಹರಣೆಗೆ ಧರ್ಮಶಾಸ್ತ್ರವಿಲ್ಲದೆ ಪಾಪಮಾಡಿದವರೆಲ್ಲರು ಧರ್ಮಶಾಸ್ತ್ರವಿಲ್ಲದೆಯೇ ನಾಶಹೊಂದುವರು; ಆದರೆ ಧರ್ಮಶಾಸ್ತ್ರವಿದ್ದು ಪಾಪಮಾಡಿದವರೆಲ್ಲರು ಧರ್ಮಶಾಸ್ತ್ರದಿಂದ ತೀರ್ಪುಮಾಡಲ್ಪಡುವರು. 13 ಧರ್ಮಶಾಸ್ತ್ರವನ್ನು ಕೇಳಿಸಿಕೊಂಡವರು ದೇವರ ಮುಂದೆ ನೀತಿವಂತರಾಗುವುದಿಲ್ಲ, ಆದರೆ ಧರ್ಮಶಾಸ್ತ್ರವನ್ನು ಕೈಕೊಂಡು ನಡೆಯುವವರು ದೇವರ ಮುಂದೆ ನೀತಿವಂತರೆಂದು ನಿರ್ಣಯಿಸಲ್ಪಡುವರು. 14 ಧರ್ಮಶಾಸ್ತ್ರವಿಲ್ಲದ ಅನ್ಯಜನಾಂಗಗಳ ಜನರು ಸ್ವಾಭಾವಿಕವಾಗಿಯೇ ಧರ್ಮಶಾಸ್ತ್ರದಲ್ಲಿರುವ ವಿಷಯಗಳನ್ನು ಮಾಡುವಾಗೆಲ್ಲಾ ಅವರು ಧರ್ಮಶಾಸ್ತ್ರವಿಲ್ಲದವರಾದರೂ ತಮಗೆ ತಾವೇ ಧರ್ಮಶಾಸ್ತ್ರವಾಗಿದ್ದಾರೆ. 15 ಅವರು ತಮ್ಮ ನಡತೆಯಿಂದಲೇ ಧರ್ಮಶಾಸ್ತ್ರವು ತಮ್ಮ ಹೃದಯದಲ್ಲಿ ಬರೆಯಲ್ಪಟ್ಟಿದೆ ಎಂಬುದನ್ನು ತೋರಿಸುತ್ತಾರೆ. ಇದಕ್ಕೆ ಅವರ ಮನಸ್ಸಾಕ್ಷಿಯೇ ಸಾಕ್ಷಿಕೊಡುತ್ತದೆ. ಅವರ ಆಲೋಚನೆಗಳು ಒಂದಕ್ಕೊಂದು ಅವರು ತಪ್ಪಿತಸ್ಥರು ಅಥವಾ ತಪ್ಪಿತಸ್ಥರಲ್ಲ ಎಂಬುದನ್ನು ಸೂಚಿಸುತ್ತವೆ. 16 ನಾನು ಸಾರುವ ಸುವಾರ್ತೆಗನುಸಾರ ದೇವರು ಕ್ರಿಸ್ತ ಯೇಸುವಿನ ಮೂಲಕ ಮಾನವಕುಲದ ಗುಪ್ತ ವಿಚಾರಗಳನ್ನು ತೀರ್ಪುಮಾಡುವ ದಿನದಲ್ಲಿ ಇದು ಸಂಭವಿಸುವುದು.
17 ನೀನು ಯೆಹೂದ್ಯನೆನಿಸಿಕೊಂಡವನೂ ಧರ್ಮಶಾಸ್ತ್ರವನ್ನು ಅವಲಂಬಿಸಿರುವವನೂ ದೇವರ ವಿಷಯದಲ್ಲಿ ಹೆಮ್ಮೆಪಡುವವನೂ ಆಗಿರುವಲ್ಲಿ 18 ಮತ್ತು ನಿನಗೆ ಆತನ ಚಿತ್ತವು ತಿಳಿದಿರುವಲ್ಲಿ ಹಾಗೂ ನೀನು ಧರ್ಮಶಾಸ್ತ್ರದಿಂದ ಮೌಖಿಕವಾಗಿ ಉಪದೇಶ ಹೊಂದಿದವನಾಗಿರುವ ಕಾರಣ ಉನ್ನತ ಮೌಲ್ಯವುಳ್ಳ ವಿಷಯಗಳನ್ನು ಗ್ರಹಿಸಶಕ್ತನಾಗಿರುವಲ್ಲಿ 19 ಮತ್ತು ಕುರುಡರಿಗೆ ದಾರಿತೋರಿಸುವವನೂ ಕತ್ತಲೆಯಲ್ಲಿರುವವರಿಗೆ ಬೆಳಕೂ 20 ವಿಚಾರಹೀನರಿಗೆ ಶಿಕ್ಷಕನೂ ಮಕ್ಕಳಿಗೆ ಬೋಧಕನೂ ಧರ್ಮಶಾಸ್ತ್ರದ ಜ್ಞಾನಸತ್ಯತೆಗಳನ್ನು ಹೊಂದಿದವನೂ ಆಗಿದ್ದೀ ಎಂದು ಮನಗಂಡವನಾಗಿರುವಲ್ಲಿ, 21 ಇತರರಿಗೆ ಬೋಧಿಸುವ ನೀನು ನಿನಗೇ ಬೋಧಿಸಿಕೊಳ್ಳದೆ ಇದ್ದೀಯೊ? “ಕದಿಯಬಾರದು” ಎಂದು ಸಾರುವ ನೀನು ಕದಿಯುತ್ತೀಯೊ? 22 “ವ್ಯಭಿಚಾರ ಮಾಡಬಾರದು” ಎಂದು ಹೇಳುವ ನೀನೇ ವ್ಯಭಿಚಾರ ಮಾಡುತ್ತೀಯೊ? ವಿಗ್ರಹಗಳನ್ನು ನೋಡಿ ಅಸಹ್ಯಪಡುವ ನೀನೇ ದೇವಸ್ಥಾನಗಳನ್ನು ದೋಚುತ್ತೀಯೊ? 23 ಧರ್ಮಶಾಸ್ತ್ರದಲ್ಲಿ ಹೆಚ್ಚಳಪಡುವ ನೀನೇ ಧರ್ಮಶಾಸ್ತ್ರವನ್ನು ಉಲ್ಲಂಘಿಸಿ ನಡೆಯುವ ಮೂಲಕ ದೇವರನ್ನು ಅಗೌರವಿಸುತ್ತೀಯೊ? 24 ಬರೆಯಲ್ಪಟ್ಟಿರುವಂತೆಯೇ, “ನಿಮ್ಮ ಕಾರಣದಿಂದ ಜನಾಂಗಗಳ ಮಧ್ಯೆ ದೇವರ ಹೆಸರು ದೂಷಣೆಗೆ ಗುರಿಯಾಗುತ್ತಿದೆ.”
25 ನೀನು ಧರ್ಮಶಾಸ್ತ್ರವನ್ನು ಕೈಕೊಂಡು ನಡೆಯುವುದಾದರೆ ಮಾತ್ರ ಸುನ್ನತಿಯು ಪ್ರಯೋಜನಕರವಾದದ್ದಾಗಿದೆ; ಆದರೆ ನೀನು ಧರ್ಮಶಾಸ್ತ್ರವನ್ನು ಉಲ್ಲಂಘಿಸುವವನಾಗಿರುವಲ್ಲಿ ನಿನಗೆ ಸುನ್ನತಿಯಾಗಿದ್ದರೂ ಸುನ್ನತಿ ಇಲ್ಲದಂತಾಗಿದೆ. 26 ಆದುದರಿಂದ ಒಂದುವೇಳೆ ಸುನ್ನತಿಯಿಲ್ಲದವನು ಧರ್ಮಶಾಸ್ತ್ರದ ನೀತಿಯುತ ನಿಯಮಗಳಿಗನುಸಾರ ನಡೆದರೆ ಅವನು ಸುನ್ನತಿಯಿಲ್ಲದವನಾದರೂ ಸುನ್ನತಿಯಾದವನಂತೆ ಎಣಿಸಲ್ಪಡುವನಲ್ಲವೆ? 27 ಅವನು ಸ್ವಾಭಾವಿಕವಾಗಿ ಸುನ್ನತಿಯಿಲ್ಲದ ವ್ಯಕ್ತಿಯಾಗಿದ್ದರೂ ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯುವ ಮೂಲಕ ಲಿಖಿತ ನಿಯಮಾವಳಿಯೂ ಸುನ್ನತಿಯೂ ಇದ್ದು ಧರ್ಮಶಾಸ್ತ್ರವನ್ನು ಉಲ್ಲಂಘಿಸುವ ನಿನಗೆ ತೀರ್ಪುಮಾಡುವನು. 28 ಹೊರಗೆ ಮಾತ್ರ ಯೆಹೂದ್ಯನಾಗಿರುವವನು ಯೆಹೂದ್ಯನಲ್ಲ ಅಥವಾ ಹೊರಗೆ ಶರೀರದ ಮೇಲೆ ಮಾಡಿಸಿಕೊಂಡಿರುವ ಸುನ್ನತಿಯು ಸುನ್ನತಿಯಲ್ಲ. 29 ಆದರೆ ಒಳಗೆ ಯೆಹೂದ್ಯನಾಗಿರುವವನೇ ಯೆಹೂದ್ಯನು ಮತ್ತು ಅವನ ಸುನ್ನತಿಯು ಲಿಖಿತ ನಿಯಮಾವಳಿಗೆ ಅನುಸಾರವಾಗಿರದೆ ಪವಿತ್ರಾತ್ಮದ ಮೂಲಕವಾದ ಹೃದಯದ ಸುನ್ನತಿಯಾಗಿದೆ. ಅಂಥವನಿಗೆ ಹೊಗಳಿಕೆಯು ಮನುಷ್ಯರಿಂದಲ್ಲ ದೇವರಿಂದಲೇ ಬರುತ್ತದೆ.