ರೋಮನ್ನರಿಗೆ
5 ಆದುದರಿಂದ ನಾವು ಈಗ ನಂಬಿಕೆಯ ನಿಮಿತ್ತ ನೀತಿವಂತರೆಂದು ನಿರ್ಣಯಿಸಲ್ಪಟ್ಟಿರಲಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರೊಂದಿಗೆ ಸಮಾಧಾನದಲ್ಲಿ ಆನಂದಿಸೋಣ. 2 ಅವನ ಮೂಲಕವೇ ನಾವು ನಂಬಿಕೆಯಿಂದ ಈಗ ನೆಲೆಗೊಂಡಿರುವ ಅಪಾತ್ರ ದಯೆಯೊಳಗೆ ಪ್ರವೇಶವನ್ನು ಪಡೆದಿದ್ದೇವೆ; ದೇವರ ಮಹಿಮೆಯ ನಿರೀಕ್ಷೆಯ ಆಧಾರದಲ್ಲಿ ನಾವು ಉಲ್ಲಾಸಪಡೋಣ. 3 ಅಷ್ಟುಮಾತ್ರವಲ್ಲದೆ ನಾವು ಸಂಕಟಗಳನ್ನು ಅನುಭವಿಸುತ್ತಿರುವಾಗ ಉಲ್ಲಾಸಪಡೋಣ, ಏಕೆಂದರೆ ನಮಗೆ ತಿಳಿದಿರುವಂತೆ ಸಂಕಟವು ತಾಳ್ಮೆಯನ್ನು ಉಂಟುಮಾಡುತ್ತದೆ; 4 ತಾಳ್ಮೆಯು ಅಂಗೀಕೃತ ಸ್ಥಿತಿಯನ್ನೂ ಅಂಗೀಕೃತ ಸ್ಥಿತಿಯು ನಿರೀಕ್ಷೆಯನ್ನೂ ಉಂಟುಮಾಡುತ್ತದೆ; 5 ಮತ್ತು ನಿರೀಕ್ಷೆಯು ಆಶಾಭಂಗಕ್ಕೆ ನಡೆಸುವುದಿಲ್ಲ; ಏಕೆಂದರೆ ನಮಗೆ ಕೊಡಲ್ಪಟ್ಟ ಪವಿತ್ರಾತ್ಮದ ಮೂಲಕವಾಗಿ ದೇವರ ಪ್ರೀತಿಯು ನಮ್ಮ ಹೃದಯಗಳೊಳಗೆ ಸುರಿಸಲ್ಪಟ್ಟಿದೆ.
6 ವಾಸ್ತವದಲ್ಲಿ ನಾವು ಇನ್ನೂ ಬಲಹೀನರಾಗಿದ್ದಾಗಲೇ * ಕ್ರಿಸ್ತನು ನೇಮಿತ ಕಾಲದಲ್ಲಿ ಭಕ್ತಿಹೀನ ಜನರಿಗೋಸ್ಕರ ಸತ್ತನು. 7 ಒಬ್ಬ ನೀತಿವಂತನಿಗೋಸ್ಕರ ಯಾರಾದರೂ ಸಾಯುವುದು ಅಪರೂಪವೇ; ವಾಸ್ತವದಲ್ಲಿ ಒಬ್ಬ ಒಳ್ಳೆಯ ಮನುಷ್ಯನಿಗಾಗಿ ಯಾವನಾದರೂ ಸಾಯಲು ಒಂದುವೇಳೆ ಧೈರ್ಯಮಾಡಬಹುದು. 8 ಆದರೆ ನಾವು ಇನ್ನೂ ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಸತ್ತದ್ದರಲ್ಲಿ ದೇವರು ತನ್ನ ಸ್ವಂತ ಪ್ರೀತಿಯನ್ನು ನಮಗೆ ಶಿಫಾರಸ್ಸುಮಾಡುತ್ತಾನೆ. 9 ಅದಕ್ಕಿಂತಲೂ ಹೆಚ್ಚಾಗಿ ಈಗ ಅವನ ರಕ್ತದ ಮೂಲಕ ನಾವು ನೀತಿವಂತರೆಂದು ನಿರ್ಣಯಿಸಲ್ಪಟ್ಟಿರುವುದರಿಂದ ಅವನ ಮೂಲಕ ದೇವರ ಕ್ರೋಧದಿಂದ ರಕ್ಷಿಸಲ್ಪಡುವೆವು. 10 ನಾವು ವೈರಿಗಳಾಗಿದ್ದಾಗಲೇ ದೇವರ ಮಗನ ಮರಣದ ಮೂಲಕ ಆತನೊಂದಿಗೆ ಸಮಾಧಾನ ಸಂಬಂಧಕ್ಕೆ ಬಂದೆವೆಂದ ಮೇಲೆ, ಈಗಲಾದರೋ ನಾವು ಸಮಾಧಾನದ ಸಂಬಂಧಕ್ಕೆ ಬಂದಿರುವುದರಿಂದ ಇನ್ನೂ ಎಷ್ಟೋ ಹೆಚ್ಚಾಗಿ ಅವನ ಜೀವದ ಮೂಲಕ ರಕ್ಷಿಸಲ್ಪಡುವೆವು. 11 ಅಷ್ಟುಮಾತ್ರವಲ್ಲದೆ, ನಾವು ಈಗ ಯಾರ ಮೂಲಕ ಸಮಾಧಾನದ ಸಂಬಂಧವನ್ನು ಹೊಂದಿದ್ದೇವೋ ಆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮುಖಾಂತರ ದೇವರಲ್ಲಿ ನಾವು ಉಲ್ಲಾಸಿಸುತ್ತಲೂ ಇದ್ದೇವೆ.
12 ಆದುದರಿಂದ, ಒಬ್ಬ ಮನುಷ್ಯನಿಂದ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿದಂತೆಯೇ, ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು—. 13 ಧರ್ಮಶಾಸ್ತ್ರಕ್ಕೆ ಮುಂಚೆಯೂ ಪಾಪವು ಲೋಕದಲ್ಲಿ ಇತ್ತು, ಆದರೆ ಧರ್ಮಶಾಸ್ತ್ರವು ಇಲ್ಲದಿರುವಾಗ ಪಾಪವನ್ನು ಯಾರ ಮೇಲೆಯೂ ಹೊರಿಸಲಾಗುವುದಿಲ್ಲ. 14 ಆದರೂ, ಮರಣವು ಆದಾಮನ ಕಾಲದಿಂದ ಮೋಶೆಯ ಕಾಲದ ವರೆಗೆ ಅರಸನಂತೆ ಆಳ್ವಿಕೆ ನಡೆಸಿತು; ಆದಾಮನು ಮಾಡಿದ ಅಪರಾಧಕ್ಕೆ ಸಮಾನವಾದ ಪಾಪವನ್ನು ಮಾಡದವರ ಮೇಲೆಯೂ ಅದು ಆಳ್ವಿಕೆ ನಡೆಸಿತು; ಆದಾಮನು ಮುಂದೆ ಬರಲಿದ್ದವನಿಗೆ ಹೋಲಿಕೆಯಾಗಿದ್ದಾನೆ.
15 ಆದರೆ ಅಪರಾಧದ ವಿಷಯದಲ್ಲಿದ್ದಂತೆ ವರದ ವಿಷಯದಲ್ಲಿ ಇರುವುದಿಲ್ಲ. ಒಬ್ಬ ಮನುಷ್ಯನ ಅಪರಾಧದಿಂದಾಗಿ ಅನೇಕರು ಸತ್ತರಾದರೆ, ಒಬ್ಬ ಮನುಷ್ಯನಾದ ಯೇಸು ಕ್ರಿಸ್ತನ ಅಪಾತ್ರ ದಯೆಯ ಜೊತೆಗೆ ದೇವರ ಅಪಾತ್ರ ದಯೆಯೂ ಆತನ ಉಚಿತ ವರವೂ ಅನೇಕರಿಗೆ ಇನ್ನೂ ಹೆಚ್ಚು ಪ್ರಯೋಜನವನ್ನು ಉಂಟುಮಾಡಿದೆ. 16 ಇದಲ್ಲದೆ ಪಾಪಮಾಡಿದ ಒಬ್ಬ ಮನುಷ್ಯನ ಮೂಲಕ ವಿಷಯಗಳು ಸಂಭವಿಸಿದಂತೆ ಈ ಉಚಿತ ವರದ ವಿಷಯದಲ್ಲಿ ಇರುವುದಿಲ್ಲ. ಏಕೆಂದರೆ ಒಂದು ಅಪರಾಧದಿಂದಾಗಿ ಖಂಡನೆಯ ತೀರ್ಪು ಫಲಿಸಿತು, ಆದರೆ ಅನೇಕ ಅಪರಾಧಗಳಿಂದ ಫಲಿಸಿದ ವರವು ನೀತಿವಂತರೆಂಬ ನಿರ್ಣಯವಾಗಿದೆ. 17 ಒಬ್ಬ ಮನುಷ್ಯನ ಅಪರಾಧದಿಂದ ಮರಣವು ಉಂಟಾಗಿ ಆ ಒಬ್ಬನ ಮೂಲಕ ಅದು ಅರಸನಂತೆ ಆಳ್ವಿಕೆ ನಡೆಸಿರುವುದಾದರೆ, ಅದಕ್ಕಿಂತಲೂ ಹೆಚ್ಚಾಗಿ ಅಪಾತ್ರ ದಯೆಯನ್ನೂ ನೀತಿಯ ಉಚಿತ ವರವನ್ನೂ ಸಮೃದ್ಧವಾಗಿ ಪಡೆದಿರುವವರು ಯೇಸು ಕ್ರಿಸ್ತನೆಂಬ ಒಬ್ಬ ವ್ಯಕ್ತಿಯ ಮೂಲಕ ಜೀವದಲ್ಲಿ ಅರಸರಾಗಿ ಆಳುವರು.
18 ಹೀಗಿರಲಾಗಿ, ಒಂದು ಅಪರಾಧದ ಫಲಿತಾಂಶವಾಗಿ ಹೇಗೆ ಎಲ್ಲ ರೀತಿಯ ಜನರು ಖಂಡನೆಗೆ ಗುರಿಯಾದರೋ ಹಾಗೆಯೇ ಸಮರ್ಥನೆಯ ಒಂದು ಕ್ರಿಯೆಯ ಫಲಿತಾಂಶವಾಗಿ ಎಲ್ಲ ರೀತಿಯ ಜನರು ಜೀವಕ್ಕಾಗಿ ನೀತಿವಂತರೆಂದು ನಿರ್ಣಯಿಸಲ್ಪಡುವಂತಾಯಿತು. 19 ಒಬ್ಬ ಮನುಷ್ಯನ ಅವಿಧೇಯತೆಯಿಂದ ಅನೇಕರು ಪಾಪಿಗಳಾಗಿ ಪರಿಗಣಿಸಲ್ಪಟ್ಟಂತೆಯೇ ಒಬ್ಬ ವ್ಯಕ್ತಿಯ ವಿಧೇಯತೆಯಿಂದ ಅನೇಕರು ನೀತಿವಂತರಾಗಿ ಪರಿಗಣಿಸಲ್ಪಡುವರು. 20 ಅಪರಾಧಗಳು ಹೆಚ್ಚಾಗುವಂತೆ ಧರ್ಮಶಾಸ್ತ್ರವು ಬಳಿಸೇರಿತು. ಆದರೆ ಎಲ್ಲಿ ಪಾಪವು ಹೆಚ್ಚಾಯಿತೋ ಅಲ್ಲಿ ಅಪಾತ್ರ ದಯೆಯೂ ಇನ್ನಷ್ಟು ಹೆಚ್ಚಿತು. 21 ಎಷ್ಟರ ಮಟ್ಟಿಗೆ? ಪಾಪವು ಮರಣದೊಂದಿಗೆ ಅರಸನಂತೆ ಆಳ್ವಿಕೆ ನಡೆಸಿದ ಹಾಗೆಯೇ ಅಪಾತ್ರ ದಯೆಯೂ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮುಖಾಂತರ ನಿತ್ಯಜೀವವನ್ನು ಉಂಟುಮಾಡುತ್ತಾ ನೀತಿಯ ಮೂಲಕ ಅರಸನಂತೆ ಆಳುವಂತಾಯಿತು.