ರೋಮನ್ನರಿಗೆ
15 ಬಲವುಳ್ಳವರಾದ ನಾವು ಬಲವಿಲ್ಲದವರ ಬಲಹೀನತೆಗಳನ್ನು ತಾಳಿಕೊಳ್ಳಬೇಕು; ನಮ್ಮನ್ನು ನಾವೇ ಸಂತೋಷಪಡಿಸಿಕೊಳ್ಳುವವರಾಗಿ ಇರಬಾರದು. 2 ನಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಭಕ್ತಿವೃದ್ಧಿಗಾಗಿ ಒಳ್ಳೇದನ್ನೇ ಮಾಡುತ್ತಾ ಅವನನ್ನು ಮೆಚ್ಚಿಸಲಿ. 3 ಕ್ರಿಸ್ತನು ಸಹ ತನ್ನನ್ನು ತಾನೇ ಮೆಚ್ಚಿಸಿಕೊಳ್ಳಲಿಲ್ಲ; “ನಿನ್ನನ್ನು ನಿಂದಿಸುವವರ ನಿಂದೆಗಳು ನನ್ನ ಮೇಲೆ ಬಂದವು” ಎಂದು ಬರೆದಿರುವಂತೆಯೇ ಇದಾಯಿತು. 4 ಪೂರ್ವದಲ್ಲಿ ಬರೆದಿರುವ ಎಲ್ಲ ವಿಷಯಗಳು ನಮ್ಮನ್ನು ಉಪದೇಶಿಸುವುದಕ್ಕಾಗಿ ಬರೆಯಲ್ಪಟ್ಟವು; ನಮ್ಮ ತಾಳ್ಮೆಯಿಂದಲೂ ಶಾಸ್ತ್ರಗ್ರಂಥದ ಮೂಲಕ ದೊರಕುವ ಸಾಂತ್ವನದಿಂದಲೂ ನಾವು ನಿರೀಕ್ಷೆಯುಳ್ಳವರಾಗುವಂತೆ ಅವು ಬರೆಯಲ್ಪಟ್ಟವು. 5 ತಾಳ್ಮೆಯನ್ನೂ ಸಾಂತ್ವನವನ್ನೂ ಒದಗಿಸುವ ದೇವರು ಕ್ರಿಸ್ತ ಯೇಸುವಿನಲ್ಲಿದ್ದ ಅದೇ ಮನೋಭಾವವನ್ನು ನಿಮಗೂ ದಯಪಾಲಿಸಲಿ. 6 ಹೀಗೆ ನೀವು ಏಕಮನಸ್ಸಿನಿಂದಲೂ ಒಮ್ಮುಖವಾಗಿಯೂ ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆದಾತನನ್ನು ಮಹಿಮೆಪಡಿಸುವಂತಾಗುವುದು.
7 ದೇವರಿಗೆ ಮಹಿಮೆ ಸಲ್ಲಿಸುವುದನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿ ಕ್ರಿಸ್ತನು ನಮ್ಮನ್ನು ಸೇರಿಸಿಕೊಂಡಂತೆ * ನೀವು ಸಹ ಒಬ್ಬರನ್ನೊಬ್ಬರು ಸೇರಿಸಿಕೊಳ್ಳಿರಿ. * 8 ನಾನು ಹೇಳುವುದೇನೆಂದರೆ, ದೇವರು ಸತ್ಯವಂತನೆಂದೂ ಆತನು ಪೂರ್ವಜರಿಗೆ ಮಾಡಿದ ವಾಗ್ದಾನಗಳು ದೃಢವಾದವುಗಳೆಂದೂ ತೋರಿಸಲಿಕ್ಕಾಗಿ ಕ್ರಿಸ್ತನು ಸುನ್ನತಿಮಾಡಿಸಿಕೊಂಡವರ ಸೇವಕನಾದನು 9 ಮತ್ತು ಅನ್ಯಜನಾಂಗಗಳ ಜನರು ದೇವರ ಕರುಣೆಗಾಗಿ ಆತನನ್ನು ಮಹಿಮೆಪಡಿಸುವಂತೆ ಇದಾಯಿತು. “ಅನ್ಯಜನಾಂಗಗಳ ಮಧ್ಯೆ ನಾನು ನಿನ್ನನ್ನು ಬಹಿರಂಗವಾಗಿ ಸ್ತುತಿಸುವೆನು, ನಿನ್ನ ನಾಮಕ್ಕೆ ಸ್ತುತಿ ಹಾಡುವೆನು” ಎಂದು ಬರೆದಿರುವಂತೆಯೇ ಹೀಗಾಯಿತು. 10 ಅಷ್ಟುಮಾತ್ರವಲ್ಲದೆ, “ಜನಾಂಗಗಳೇ ಆತನ ಜನರೊಂದಿಗೆ ಸಂತೋಷಪಡಿರಿ” ಎಂದು ಆತನು ಹೇಳುತ್ತಾನೆ. 11 ಮತ್ತು “ಎಲ್ಲ ಜನಾಂಗಗಳೇ, ಯೆಹೋವನನ್ನು ಸ್ತುತಿಸಿರಿ, ಎಲ್ಲ ಜನರು ಆತನನ್ನು ಸ್ತುತಿಸಲಿ” ಎಂಬುದಾಗಿಯೂ ಬರೆದಿದೆ. 12 ಇದಲ್ಲದೆ “ಇಷಯನ ಬುಡದಿಂದ ಜನಾಂಗಗಳನ್ನು ಆಳುವವನು ಏಳುವನು; ಜನಾಂಗಗಳು ಅವನ ಮೇಲೆ ನಿರೀಕ್ಷೆಯಿಡುವವು” ಎಂದು ಯೆಶಾಯನು ಹೇಳಿದನು. 13 ನಿರೀಕ್ಷೆಯನ್ನು ಒದಗಿಸುವ ದೇವರು ನೀವು ಪವಿತ್ರಾತ್ಮದ ಶಕ್ತಿಯಿಂದ ನಿರೀಕ್ಷೆಯಲ್ಲಿ ಸಮೃದ್ಧಿ ಹೊಂದುವಂತೆ ನಿಮ್ಮ ನಂಬಿಕೆಯ ಮೂಲಕ ನಿಮ್ಮಲ್ಲಿ ಎಲ್ಲ ರೀತಿಯ ಆನಂದವನ್ನೂ ಶಾಂತಿಯನ್ನೂ ತುಂಬಿಸಲಿ.
14 ನನ್ನ ಸಹೋದರರೇ, ನೀವು ಸಕಲ ಜ್ಞಾನದಿಂದ ತುಂಬಿಸಲ್ಪಟ್ಟಿರುವುದರಿಂದ ಒಳ್ಳೇತನದಿಂದಲೂ ತುಂಬಿರುತ್ತೀರಿ ಮತ್ತು ಇದರಿಂದಾಗಿ ಒಬ್ಬರಿಗೊಬ್ಬರು ಬುದ್ಧಿಹೇಳಲು ಶಕ್ತರಾಗಿದ್ದೀರಿ ಎಂದು ನಿಮ್ಮ ವಿಷಯದಲ್ಲಿ ನಾನು ಒಡಂಬಡಿಸಲ್ಪಟ್ಟಿದ್ದೇನೆ. 15 ಹಾಗಿದ್ದರೂ ದೇವರು ನನಗೆ ದಯಪಾಲಿಸಿದ ಅಪಾತ್ರ ದಯೆಯ ಕಾರಣ ನಿಮಗೆ ಪುನಃ ಜ್ಞಾಪಕ ಹುಟ್ಟಿಸಲಿಕ್ಕಾಗಿ ಕೆಲವು ಅಂಶಗಳನ್ನು ಮುಚ್ಚುಮರೆಯಿಲ್ಲದೆ ಬರೆಯುತ್ತಿದ್ದೇನೆ. 16 ಅನ್ಯಜನಾಂಗಗಳವರೆಂಬ ಕಾಣಿಕೆಯು ಪವಿತ್ರಾತ್ಮದಿಂದ ಪವಿತ್ರೀಕರಿಸಲ್ಪಟ್ಟು ದೇವರಿಗೆ ಸ್ವೀಕೃತವಾಗುವಂತೆ ನಾನು ದೇವರ ಸುವಾರ್ತೆಯನ್ನು ಪ್ರಕಟಿಸುವ ಪವಿತ್ರ ಕೆಲಸದಲ್ಲಿ ತೊಡಗಿ ಅವರಿಗೋಸ್ಕರ ಕ್ರಿಸ್ತ ಯೇಸುವಿನ ಸಾರ್ವಜನಿಕ ಸೇವಕನಾಗುವುದಕ್ಕೆ ದೇವರು ಆ ಅಪಾತ್ರ ದಯೆಯನ್ನು ನನಗೆ ದಯಪಾಲಿಸಿದನು.
17 ಆದುದರಿಂದ ದೇವರಿಗೆ ಸಂಬಂಧಿಸಿದ ವಿಷಯಗಳ ಕುರಿತು ತಿಳಿಸುವಾಗ ಕ್ರಿಸ್ತ ಯೇಸುವಿನಲ್ಲಿ ಹೆಚ್ಚಳಪಡುವುದಕ್ಕೆ ನನಗೆ ಕಾರಣವಿದೆ. 18 ಕ್ರಿಸ್ತನು ನನ್ನ ಮಾತು ಮತ್ತು ಕಾರ್ಯದ ಮೂಲಕವೂ ಸೂಚಕಕಾರ್ಯ ಮತ್ತು ಆಶ್ಚರ್ಯಕಾರ್ಯಗಳ ಶಕ್ತಿಯಿಂದಲೂ ಪವಿತ್ರಾತ್ಮದ ಶಕ್ತಿಯಿಂದಲೂ ಅನ್ಯಜನಾಂಗಗಳವರು ತನಗೆ ವಿಧೇಯರಾಗುವಂತೆ ಮಾಡಿಸಿದ ವಿಷಯಗಳನ್ನೇ ಹೊರತು ಬೇರೆ ಯಾವುದೇ ವಿಷಯವನ್ನು ಹೇಳಲು ನಾನು ಧೈರ್ಯಮಾಡುವುದಿಲ್ಲ. 19 ಹೀಗೆ ನಾನು ಯೆರೂಸಲೇಮಿನಿಂದ ಆರಂಭಿಸಿ ಇಲ್ಲುರಿಕ ಸೀಮೆಯಷ್ಟು ದೂರದ ವರೆಗಿನ ಕ್ಷೇತ್ರದಲ್ಲಿ ಕ್ರಿಸ್ತನ ಕುರಿತಾದ ಸುವಾರ್ತೆಯನ್ನು ಕೂಲಂಕಷವಾಗಿ ಸಾರಿಹೇಳಿದ್ದೇನೆ. 20 ಇನ್ನೊಬ್ಬ ಮನುಷ್ಯನು ಹಾಕಿದ ಅಸ್ತಿವಾರದ ಮೇಲೆ ನಾನು ಕಟ್ಟದೇ ಇರಲಿಕ್ಕಾಗಿ ಕ್ರಿಸ್ತನ ಹೆಸರು ಈಗಾಗಲೇ ಎಲ್ಲಿ ತಿಳಿಸಲ್ಪಟ್ಟಿದೆಯೋ ಅಲ್ಲಿ ಸುವಾರ್ತೆಯನ್ನು ಪ್ರಕಟಪಡಿಸುವುದಿಲ್ಲ ಎಂದು ನಿರ್ಣಯಮಾಡಿಕೊಂಡಿದ್ದೇನೆ. 21 ಆದರೆ “ಯಾರಿಗೆ ಅವನ ಕುರಿತು ತಿಳಿಸಲ್ಪಡಲಿಲ್ಲವೋ ಅವರು ನೋಡುವರು ಮತ್ತು ಯಾರು ಕೇಳಿಸಿಕೊಳ್ಳಲಿಲ್ಲವೋ ಅವರು ಅರ್ಥಮಾಡಿಕೊಳ್ಳುವರು” ಎಂದು ಬರೆದಿರುವ ಮಾತಿಗನುಸಾರ ಇದಾಗುವುದು.
22 ಆದುದರಿಂದಲೇ ನಿಮ್ಮ ಬಳಿಗೆ ಬರುವುದಕ್ಕೆ ನನಗೆ ಅನೇಕ ಬಾರಿ ಅಡ್ಡಿಯುಂಟಾಯಿತು. 23 ಆದರೆ ಈಗ ನನಗೆ ಈ ಪ್ರಾಂತಗಳಲ್ಲಿ ಇದುವರೆಗೂ ಸಾರದಿರುವ ಕ್ಷೇತ್ರವಿಲ್ಲದಿರುವುದರಿಂದಲೂ ಅನೇಕ ವರ್ಷಗಳಿಂದ ನಾನು ನಿಮ್ಮ ಬಳಿಗೆ ಬರಲು ಹಂಬಲಿಸುತ್ತಿದ್ದುದರಿಂದಲೂ 24 ನಾನು ಸ್ಪೇನ್ ದೇಶಕ್ಕೆ ಪ್ರಯಾಣಿಸುವಾಗಲೆಲ್ಲ ನನ್ನ ಮಾರ್ಗದಲ್ಲಿ ನಿಮ್ಮನ್ನು ನೋಡಲು ನಿರೀಕ್ಷಿಸುತ್ತೇನೆ. ತರುವಾಯ ನಾನು ನಿಮ್ಮ ಸಹವಾಸದಲ್ಲಿ ತಕ್ಕ ಮಟ್ಟಿಗೆ ಸಂತೃಪ್ತಿಯನ್ನು ಹೊಂದಿದ ಮೇಲೆ ಸ್ವಲ್ಪ ದೂರದ ವರೆಗೆ ನೀವು ನನ್ನೊಂದಿಗೆ ಬಂದು ನನ್ನನ್ನು ಆ ದೇಶಕ್ಕೆ ಸಾಗಕಳುಹಿಸುವಿರೆಂದು ನಂಬುತ್ತೇನೆ. 25 ಆದರೆ ಈಗ ನಾನು ಪವಿತ್ರ ಜನರಿಗೆ ಸೇವೆಮಾಡಲು ಯೆರೂಸಲೇಮಿಗೆ ಪ್ರಯಾಣಿಸಲಿದ್ದೇನೆ. 26 ಏಕೆಂದರೆ ಮಕೆದೋನ್ಯ ಮತ್ತು ಅಖಾಯದಲ್ಲಿರುವವರು ಕಾಣಿಕೆಯನ್ನು ಕೊಡುವ ಮೂಲಕ ತಮ್ಮಲ್ಲಿರುವುದನ್ನು ಯೆರೂಸಲೇಮಿನಲ್ಲಿರುವ ಪವಿತ್ರ ಜನರೊಳಗಿನ ಬಡವರೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತಾರೆ. 27 ಅವರು ಹೀಗೆ ಮಾಡಲು ಇಷ್ಟಪಟ್ಟಿದ್ದಾರೆ ನಿಜ, ಮತ್ತು ಅವರು ಹೀಗೆ ಮಾಡುವ ಹಂಗಿನಲ್ಲಿದ್ದಾರೆ; * ಏಕೆಂದರೆ ಪವಿತ್ರ ಜನರ ಆಧ್ಯಾತ್ಮಿಕ ವಿಷಯಗಳಲ್ಲಿ ಅನ್ಯಜನಾಂಗಗಳವರು ಪಾಲುಗಾರರಾಗಿರುವುದರಿಂದ ಅವರ ಭೌತಿಕ ಆವಶ್ಯಕತೆಗಳನ್ನು ಪೂರೈಸುವ ಹಂಗೂ ಅನ್ಯಜನಾಂಗಗಳವರಿಗಿದೆ. 28 ಆದುದರಿಂದ ನಾನು ಈ ಕೆಲಸವನ್ನು ಮುಗಿಸಿ ಈ ಕಾಣಿಕೆಯನ್ನು ಅವರಿಗೆ ಭದ್ರವಾಗಿ ತಲಪಿಸಿದ ಬಳಿಕ ನಿಮ್ಮ ಮಾರ್ಗವಾಗಿ ಸ್ಪೇನ್ ದೇಶಕ್ಕೆ ಹೋಗುವೆನು. 29 ನಾನು ನಿಮ್ಮಲ್ಲಿಗೆ ಬರುವಾಗ ಕ್ರಿಸ್ತನಿಂದ ಹೇರಳವಾದ ಆಶೀರ್ವಾದವನ್ನು ತರುವೆನೆಂದು ಬಲ್ಲೆನು.
30 ಸಹೋದರರೇ, ನಾನು ನಿಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕವೂ ಪವಿತ್ರಾತ್ಮದಿಂದುಂಟಾಗುವ ಪ್ರೀತಿಯ ಮೂಲಕವೂ ಬೇಡಿಕೊಳ್ಳುವುದೇನೆಂದರೆ, ನನಗೋಸ್ಕರ ದೇವರಿಗೆ ಮಾಡುವ ಪ್ರಾರ್ಥನೆಗಳಲ್ಲಿ ನನ್ನೊಂದಿಗೆ ನಿಮ್ಮನ್ನು ತೊಡಗಿಸಿಕೊಳ್ಳಿರಿ. 31 ನಾನು ಯೂದಾಯದಲ್ಲಿರುವ ಅವಿಶ್ವಾಸಿಗಳಿಂದ ಕಾಪಾಡಲ್ಪಡುವಂತೆಯೂ ಯೆರೂಸಲೇಮಿಗಾಗಿ ನಾನು ಮಾಡುವ ಶುಶ್ರೂಷೆಯು ಪವಿತ್ರ ಜನರಿಗೆ ಸ್ವೀಕಾರಾರ್ಹವಾಗಿರುವಂತೆಯೂ ಪ್ರಾರ್ಥಿಸಿರಿ. 32 ಆಗ ನಾನು ದೇವರ ಚಿತ್ತದಿಂದ ಆನಂದಭರಿತನಾಗಿ ನಿಮ್ಮ ಬಳಿಗೆ ಬಂದು ನಿಮ್ಮೊಂದಿಗೆ ಸೇರಿ ಚೈತನ್ಯವನ್ನು ಪಡೆಯುವಂತಾಗುವುದು. 33 ಶಾಂತಿಯನ್ನು ದಯಪಾಲಿಸುವ ದೇವರು ನಿಮ್ಮೆಲ್ಲರೊಂದಿಗಿರಲಿ. ಆಮೆನ್.