ಮತ್ತಾಯ
1 ಯೇಸು ಕ್ರಿಸ್ತನ ವಂಶಾವಳಿಯ ಪುಸ್ತಕ. ಇವನು ದಾವೀದನ ವಂಶದವನು. ದಾವೀದನು ಅಬ್ರಹಾಮನ ವಂಶದವನು.
2 ಅಬ್ರಹಾಮನು ಇಸಾಕನಿಗೆ ತಂದೆಯಾದನು;
ಇಸಾಕನು ಯಾಕೋಬನಿಗೆ ತಂದೆಯಾದನು;
ಯಾಕೋಬನು ಯೆಹೂದನಿಗೂ ಅವನ ಸಹೋದರರಿಗೂ ತಂದೆಯಾದನು;
3 ಯೆಹೂದನು ತಾಮಾರಳಲ್ಲಿ ಪೆರೆಚನಿಗೂ ಜೆರಹನಿಗೂ ತಂದೆಯಾದನು;
ಪೆರೆಚನು ಹೆಚ್ರೋನನಿಗೆ ತಂದೆಯಾದನು;
ಹೆಚ್ರೋನನು ರಾಮನಿಗೆ ತಂದೆಯಾದನು;
4 ರಾಮನು ಅಮ್ಮೀನಾದಾಬನಿಗೆ ತಂದೆಯಾದನು;
ಅಮ್ಮೀನಾದಾಬನು ನಹಶೋನನಿಗೆ ತಂದೆಯಾದನು;
ನಹಶೋನನು ಸಲ್ಮೋನನಿಗೆ ತಂದೆಯಾದನು;
5 ಸಲ್ಮೋನನು ರಾಹಾಬಳಲ್ಲಿ ಬೋವಜನಿಗೆ ತಂದೆಯಾದನು;
ಬೋವಜನು ರೂತಳಲ್ಲಿ ಓಬೇದನಿಗೆ ತಂದೆಯಾದನು;
ಓಬೇದನು ಇಷಯನಿಗೆ ತಂದೆಯಾದನು;
6 ಇಷಯನು ಅರಸನಾದ ದಾವೀದನಿಗೆ ತಂದೆಯಾದನು.
ದಾವೀದನು ಊರೀಯನ ಹೆಂಡತಿಯಲ್ಲಿ ಸೊಲೊಮೋನನಿಗೆ ತಂದೆಯಾದನು;
7 ಸೊಲೊಮೋನನು ರೆಹಬ್ಬಾಮನಿಗೆ ತಂದೆಯಾದನು;
ರೆಹಬ್ಬಾಮನು ಅಬೀಯನಿಗೆ ತಂದೆಯಾದನು;
ಅಬೀಯನು ಆಸನಿಗೆ ತಂದೆಯಾದನು;
8 ಆಸನು ಯೆಹೋಷಾಫಾಟನಿಗೆ ತಂದೆಯಾದನು;
ಯೆಹೋಷಾಫಾಟನು ಯೆಹೋರಾಮನಿಗೆ ತಂದೆಯಾದನು;
ಯೆಹೋರಾಮನು ಉಜ್ಜೀಯನಿಗೆ ತಂದೆಯಾದನು;
9 ಉಜ್ಜೀಯನು ಯೋತಾಮನಿಗೆ ತಂದೆಯಾದನು;
ಯೋತಾಮನು ಆಹಾಜನಿಗೆ ತಂದೆಯಾದನು;
ಆಹಾಜನು ಹಿಜ್ಕೀಯನಿಗೆ ತಂದೆಯಾದನು;
10 ಹಿಜ್ಕೀಯನು ಮನಸ್ಸೆಗೆ ತಂದೆಯಾದನು;
ಮನಸ್ಸೆಯು ಆಮೋನನಿಗೆ ತಂದೆಯಾದನು;
ಆಮೋನನು ಯೋಷೀಯನಿಗೆ ತಂದೆಯಾದನು;
11 ಬಾಬೆಲಿಗೆ ಸೆರೆಹೋದ ಸಮಯದಲ್ಲಿ ಯೋಷೀಯನು ಯೆಕೊನ್ಯನಿಗೂ ಅವನ ಸಹೋದರರಿಗೂ ತಂದೆಯಾದನು.
12 ಬಾಬೆಲಿಗೆ ಸೆರೆಹೋದ ನಂತರ ಯೆಕೊನ್ಯನು ಶೆಯಲ್ತಿಯೇಲನಿಗೆ ತಂದೆಯಾದನು;
ಶೆಯಲ್ತಿಯೇಲನು ಜೆರುಬ್ಬಾಬೆಲನಿಗೆ ತಂದೆಯಾದನು;
13 ಜೆರುಬ್ಬಾಬೆಲನು ಅಬಿಹೂದನಿಗೆ ತಂದೆಯಾದನು;
ಅಬಿಹೂದನು ಎಲ್ಯಕೀಮನಿಗೆ ತಂದೆಯಾದನು;
ಎಲ್ಯಕೀಮನು ಅಜೋರನಿಗೆ ತಂದೆಯಾದನು;
14 ಅಜೋರನು ಸದೋಕನಿಗೆ ತಂದೆಯಾದನು;
ಸದೋಕನು ಅಖೀಮನಿಗೆ ತಂದೆಯಾದನು;
ಅಖೀಮನು ಎಲಿಹೂದನಿಗೆ ತಂದೆಯಾದನು;
15 ಎಲಿಹೂದನು ಎಲಿಯಾಜರನಿಗೆ ತಂದೆಯಾದನು;
ಎಲಿಯಾಜರನು ಮತ್ತಾನನಿಗೆ ತಂದೆಯಾದನು;
ಮತ್ತಾನನು ಯಾಕೋಬನಿಗೆ ತಂದೆಯಾದನು;
16 ಯಾಕೋಬನು ಮರಿಯಳ ಗಂಡನಾದ ಯೋಸೇಫನಿಗೆ ತಂದೆಯಾದನು. ಈ ಮರಿಯಳಲ್ಲಿ ಕ್ರಿಸ್ತನೆಂದು ಕರೆಯಲ್ಪಡುವ ಯೇಸು ಹುಟ್ಟಿದನು.
17 ಹೀಗೆ ಅಬ್ರಹಾಮನಿಂದ ದಾವೀದನ ವರೆಗೆ ಹದಿನಾಲ್ಕು ಸಂತತಿಗಳು ಮತ್ತು ದಾವೀದನಿಂದ ಬಾಬೆಲಿಗೆ ಸೆರೆಹೋಗುವ ವರೆಗೆ ಹದಿನಾಲ್ಕು ಸಂತತಿಗಳು ಮತ್ತು ಬಾಬೆಲಿಗೆ ಸೆರೆಹೋದಂದಿನಿಂದ ಕ್ರಿಸ್ತನ ವರೆಗೆ ಹದಿನಾಲ್ಕು ಸಂತತಿಗಳು.
18 ಆದರೆ ಯೇಸು ಕ್ರಿಸ್ತನ ಜನನವು ಹೀಗಾಯಿತು: ಅವನ ತಾಯಿಯಾದ ಮರಿಯಳಿಗೆ ಯೋಸೇಫನೊಂದಿಗೆ ವಿವಾಹ ನಿಶ್ಚಯವಾಗಿದ್ದಾಗ, ಅವರು ಕೂಡುವುದಕ್ಕಿಂತ ಮುಂಚೆಯೇ ಅವಳು ಪವಿತ್ರಾತ್ಮದಿಂದ * ಗರ್ಭಿಣಿಯಾಗಿದ್ದಾಳೆ ಎಂಬುದು ತಿಳಿದುಬಂತು. 19 ಆದರೆ ಅವಳ ಗಂಡನಾದ ಯೋಸೇಫನು ನೀತಿವಂತನಾಗಿದ್ದ ಕಾರಣ ಅವಳನ್ನು ಬಹಿರಂಗ ಪ್ರದರ್ಶನವಾಗಿ ಮಾಡಲು ಬಯಸದೆ ಗುಪ್ತವಾಗಿ ಬಿಟ್ಟುಬಿಡಬೇಕೆಂದಿದ್ದನು. 20 ಅವನು ಈ ವಿಷಯದ ಕುರಿತು ಆಲೋಚಿಸಿದ ಬಳಿಕ ಯೆಹೋವನ ದೂತನು ಅವನಿಗೆ ಒಂದು ಕನಸಿನಲ್ಲಿ ಕಾಣಿಸಿಕೊಂಡು, “ಯೋಸೇಫನೇ, ದಾವೀದನ ವಂಶದವನೇ, ನಿನ್ನ ಹೆಂಡತಿಯಾದ ಮರಿಯಳನ್ನು ಮನೆಗೆ ಸೇರಿಸಿಕೊಳ್ಳಲು ಹೆದರಬೇಡ; ಅವಳು ಪವಿತ್ರಾತ್ಮದಿಂದಲೇ ಗರ್ಭಧರಿಸಿದ್ದಾಳೆ. 21 ಅವಳು ಒಂದು ಗಂಡುಮಗುವನ್ನು ಹೆರುವಳು; ಅವನಿಗೆ ನೀನು ಯೇಸು ಎಂದು ಹೆಸರಿಡಬೇಕು; ಏಕೆಂದರೆ ಅವನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು” ಎಂದು ಹೇಳಿದನು. 22 ಯೆಹೋವನು ತನ್ನ ಪ್ರವಾದಿಯ ಮೂಲಕ ಹೇಳಿದ ಮಾತುಗಳು ನೆರವೇರುವಂತೆ ಇದೆಲ್ಲ ಸಂಭವಿಸಿತು; ಆ ಮಾತೇನೆಂದರೆ, 23 “ಇಗೋ! ಒಬ್ಬ ಕನ್ಯೆಯು ಗರ್ಭಿಣಿಯಾಗಿ ಒಂದು ಗಂಡುಮಗುವನ್ನು ಹೆರುವಳು ಮತ್ತು ಅವರು ಅವನನ್ನು ಇಮ್ಮಾನುವೇಲ್ ಎಂಬ ಹೆಸರಿನಿಂದ ಕರೆಯುವರು.” ಭಾಷಾಂತರಿಸಿದಾಗ ಇದರ ಅರ್ಥ, “ದೇವರು ನಮ್ಮೊಂದಿಗಿದ್ದಾನೆ” ಎಂದಾಗಿದೆ.
24 ಆಗ ಯೋಸೇಫನು ನಿದ್ರೆಯಿಂದ ಎಚ್ಚೆತ್ತು ಯೆಹೋವನ ದೂತನು ಹೇಳಿದಂತೆಯೇ ತನ್ನ ಹೆಂಡತಿಯನ್ನು ಮನೆಗೆ ಕರೆದೊಯ್ದನು. 25 ಆದರೆ ಅವಳು ಮಗುವನ್ನು ಹೆರುವ ತನಕ ಅವನು ಅವಳನ್ನು ಕೂಡಲಿಲ್ಲ; ಅವನು ಆ ಮಗುವಿಗೆ ಯೇಸು ಎಂದು ಹೆಸರಿಟ್ಟನು.