ಇಬ್ರಿಯ
7 ಸಾಲೇಮಿನ ಅರಸನೂ ಮಹೋನ್ನತ ದೇವರ ಯಾಜಕನೂ ಆಗಿದ್ದ ಈ ಮೆಲ್ಕಿಜೆದೇಕನು ಅರಸರನ್ನು ಸಂಹರಿಸಿ ಹಿಂದಿರುಗಿ ಬರುತ್ತಿದ್ದ ಅಬ್ರಹಾಮನನ್ನು ಸಂಧಿಸಿ ಅವನನ್ನು ಆಶೀರ್ವದಿಸಿದನು. 2 ಇವನಿಗೆ ಅಬ್ರಹಾಮನು ಎಲ್ಲವುಗಳಲ್ಲಿ ಹತ್ತನೇ ಒಂದು ಭಾಗವನ್ನು ಕೊಟ್ಟನು; ಭಾಷಾಂತರಿಸಿದಾಗ ಮೊದಲನೆಯದಾಗಿ ಅವನ ಹೆಸರಿನ ಅರ್ಥ, “ನೀತಿಯ ಅರಸನು” ಎಂದೂ ತರುವಾಯ ಸಾಲೇಮಿನ ಅರಸನು, ಅಂದರೆ “ಶಾಂತಿಯ ಅರಸನು” ಎಂದೂ ಆಗಿದೆ. 3 ತಂದೆಯಿಲ್ಲದವನೂ ತಾಯಿಯಿಲ್ಲದವನೂ ವಂಶಾವಳಿಯಿಲ್ಲದವನೂ ದಿನಗಳ ಆರಂಭವಾಗಲಿ ಜೀವನದ ಅಂತ್ಯವಾಗಲಿ ಇಲ್ಲದವನೂ ಆಗಿರುವ ಇವನು ದೇವರ ಮಗನಿಗೆ ಸಮಾನನಾಗಿ ಮಾಡಲ್ಪಟ್ಟಿರುವುದರಿಂದ ನಿರಂತರವಾಗಿ ಯಾಜಕನಾಗಿ ಉಳಿಯುವನು.
4 ಈ ಮನುಷ್ಯನು ಎಷ್ಟು ದೊಡ್ಡವನಾಗಿದ್ದನೆಂದು ಆಲೋಚಿಸಿರಿ. ಕುಟುಂಬದ ತಲೆಯಾದ ಅಬ್ರಹಾಮನು ತನ್ನ ಮುಖ್ಯ ಸೂರೆಗಳಲ್ಲಿ ಹತ್ತನೆಯ ಒಂದು ಭಾಗವನ್ನು ಅವನಿಗೆ ಕೊಟ್ಟನು. 5 ಲೇವಿಯ ಪುತ್ರರಲ್ಲಿ ಯಾಜಕೋದ್ಯೋಗವನ್ನು ಹೊಂದುವವರು ಧರ್ಮಶಾಸ್ತ್ರಕ್ಕನುಸಾರ ಜನರಿಂದ ಅಂದರೆ ಅಬ್ರಹಾಮನಿಗೆ ಹುಟ್ಟಿದವರಾದ ತಮ್ಮ ಸಹೋದರರಿಂದಲೇ ದಶಮಭಾಗಗಳನ್ನು ಸಂಗ್ರಹಿಸುವಂತೆ ಆಜ್ಞೆಯನ್ನು ಹೊಂದಿದ್ದಾರೆ ಎಂಬುದು ನಿಜ. 6 ಆದರೆ ಅವರ ವಂಶಾವಳಿಗೆ ಸೇರದೆ ಇರುವ ಮೆಲ್ಕಿಜೆದೇಕನು ಅಬ್ರಹಾಮನಿಂದ ದಶಮಭಾಗವನ್ನು ತೆಗೆದುಕೊಂಡದ್ದಲ್ಲದೆ ವಾಗ್ದಾನಗಳನ್ನು ಹೊಂದಿದವನಾದ ಅವನನ್ನು ಆಶೀರ್ವದಿಸಿದನು. 7 ಕಡಮೆಯವನು ಶ್ರೇಷ್ಠನಾದವನಿಂದ ಆಶೀರ್ವದಿಸಲ್ಪಡುತ್ತಾನೆ ಎಂಬುದರಲ್ಲಿ ಯಾವುದೇ ವಿವಾದವಿಲ್ಲ. 8 ಆ ಒಂದು ನಿದರ್ಶನದಲ್ಲಿ, ದಶಮಭಾಗಗಳನ್ನು ಪಡೆಯುವವರು ಸಾಯುತ್ತಿರುವ ಮನುಷ್ಯರು, ಆದರೆ ಇನ್ನೊಂದು ನಿದರ್ಶನದಲ್ಲಿ ಜೀವಿಸುತ್ತಾನೆ ಎಂದು ಯಾರ ಕುರಿತು ಸಾಕ್ಷಿಹೇಳಲಾಗಿದೆಯೋ ಅವನು ಅದನ್ನು ತೆಗೆದುಕೊಳ್ಳುತ್ತಾನೆ. 9 ಅಬ್ರಹಾಮನ ಮೂಲಕ ದಶಮಭಾಗಗಳನ್ನು ಪಡೆಯುವ ಲೇವಿಯೂ ದಶಮಭಾಗಗಳನ್ನು ಸಲ್ಲಿಸಿದ್ದಾನೆಂಬ ಅಭಿವ್ಯಕ್ತಿಯನ್ನು ನಾನು ಉಪಯೋಗಿಸಬಹುದು, 10 ಏಕೆಂದರೆ ಮೆಲ್ಕಿಜೆದೇಕನು ಲೇವಿಯ ಪೂರ್ವಜನನ್ನು ಸಂಧಿಸಿದಾಗ ಲೇವಿಯು ಇನ್ನೂ ಅವನ ಟೊಂಕದೊಳಗಿದ್ದನು.
11 ಲೇವಿಕ ಯಾಜಕತ್ವದ (ಏಕೆಂದರೆ ಇದರ ಆಧಾರದ ಮೇಲೆ ಜನರಿಗೆ ಧರ್ಮಶಾಸ್ತ್ರವು ಕೊಡಲ್ಪಟ್ಟಿತ್ತು) ಮೂಲಕವೇ ಪರಿಪೂರ್ಣತೆಯು ಉಂಟಾಗುವಂತಿದ್ದರೆ, ಆರೋನನ ರೀತಿಗನುಸಾರವಾಗಿ ಎಂದು ಹೇಳಲ್ಪಡದೆ ಮೆಲ್ಕಿಜೆದೇಕನ ರೀತಿಗನುಸಾರ ಎಂದು ಹೇಳಲ್ಪಟ್ಟಿರುವ ಬೇರೊಬ್ಬ ಯಾಜಕನು ಬರುವ ಅವಶ್ಯವೇನಿತ್ತು? 12 ಯಾಜಕತ್ವವು ಬದಲಾವಣೆಯಾಗುತ್ತಿರುವ ಕಾರಣ ಧರ್ಮಶಾಸ್ತ್ರವು ಸಹ ಬದಲಾಗುವ ಅಗತ್ಯವಿದೆ. 13 ಯಾರ ಕುರಿತು ಈ ವಿಷಯಗಳು ಹೇಳಲ್ಪಡುತ್ತಿವೆಯೋ ಅವನು ಬೇರೊಂದು ಕುಲಕ್ಕೆ ಸೇರಿದವನಾಗಿದ್ದಾನೆ ಮತ್ತು ಆ ಕುಲದಿಂದ ಯಾರೊಬ್ಬನೂ ಯಜ್ಞವೇದಿಯ ಬಳಿಯಲ್ಲಿ ಸೇವೆಮಾಡಿದ್ದಿಲ್ಲ. 14 ನಮ್ಮ ಕರ್ತನು ಯೆಹೂದ ಕುಲದಿಂದ ಬಂದನೆಂಬುದು ಸುಸ್ಪಷ್ಟ; ಈ ಕುಲದ ವಿಷಯದಲ್ಲಿ ಮೋಶೆಯು ಯಾಜಕರ ಕುರಿತು ಏನನ್ನೂ ಹೇಳಲಿಲ್ಲ.
15 ಇದಲ್ಲದೆ, ಮೆಲ್ಕಿಜೆದೇಕನ ಸಾದೃಶ್ಯದಲ್ಲಿ ಇನ್ನೊಬ್ಬ ಯಾಜಕನು ಏಳುವನು ಎಂಬುದು ಇನ್ನಷ್ಟು ಸ್ಪಷ್ಟವಾಗುತ್ತದೆ. 16 ಅವನು ಶಾರೀರಿಕ ಆಧಾರದ ಮೇಲೆ ಆಜ್ಞೆಯ ನಿಯಮಕ್ಕೆ ಅನುಸಾರವಾಗಿ ಅಲ್ಲ, ಬದಲಾಗಿ ಅವಿನಾಶಿಯಾದ ಜೀವದ ಶಕ್ತಿಗನುಸಾರ ಯಾಜಕನಾದನು. 17 ಅವನ ವಿಷಯದಲ್ಲಿ, “ನೀನು ಮೆಲ್ಕಿಜೆದೇಕನ ರೀತಿಗನುಸಾರ ಸದಾಕಾಲಕ್ಕೂ ಯಾಜಕನಾಗಿದ್ದೀ” ಎಂದು ಸಾಕ್ಷಿಹೇಳಲ್ಪಟ್ಟಿದೆ.
18 ಹಾಗಾದರೆ, ಮೊದಲಿದ್ದ ಆಜ್ಞೆಯು ನಿರ್ಬಲವೂ ನಿಷ್ಪ್ರಯೋಜಕವೂ ಆಗಿರಲಾಗಿ ಅದರ ರದ್ದುಗೊಳಿಸುವಿಕೆ ಸಂಭವಿಸುತ್ತದೆ ನಿಶ್ಚಯ. 19 ಏಕೆಂದರೆ ಧರ್ಮಶಾಸ್ತ್ರವು ಯಾವುದನ್ನೂ ಪರಿಪೂರ್ಣಗೊಳಿಸಲಿಲ್ಲ; ಅದಕ್ಕೆ ಬದಲಾಗಿ ಒಳತರಲ್ಪಟ್ಟ ಉತ್ತಮ ನಿರೀಕ್ಷೆಯು ಪರಿಪೂರ್ಣಗೊಳಿಸಿತು; ಅದರ ಮೂಲಕ ನಾವು ದೇವರ ಸಮೀಪಕ್ಕೆ ಸಾಗುತ್ತಿದ್ದೇವೆ. 20 ಇದಂತೂ ಆಣೆಯಿಡದೆ ಆಗಿರುವಂಥದ್ದಲ್ಲ, 21 (ಏಕೆಂದರೆ ಆಣೆಯಿಡದೆ ಯಾಜಕರಾಗಿರುವಂಥ ಪುರುಷರಿದ್ದಾರೆ, ಆದರೆ ಆತನಿಂದ ಆಣೆಯಿಡಲ್ಪಟ್ಟು ಯಾಜಕನಾಗಿರುವ ಒಬ್ಬನಿದ್ದಾನೆ. ಅವನ ಕುರಿತಾಗಿ ಆತನು, “ ‘ನೀನು ಸದಾಕಾಲಕ್ಕೂ ಯಾಜಕನಾಗಿದ್ದೀ’ ಎಂದು ಯೆಹೋವನು ಆಣೆಯಿಟ್ಟು ನುಡಿದಿದ್ದಾನೆ (ಮತ್ತು ಇದಕ್ಕಾಗಿ ಆತನು ವಿಷಾದಪಡುವುದಿಲ್ಲ)” ಎಂದು ಹೇಳಿದ್ದಾನೆ.) 22 ಯೇಸು ಆಣೆಯಿಡಲ್ಪಟ್ಟ ಮೂಲಕವೇ ಯಾಜಕನಾಗಿರುವುದರಿಂದ ಒಂದು ಉತ್ತಮವಾದ ಒಡಂಬಡಿಕೆಗೆ ಒತ್ತೆಯಾಳಾಗಿ ಕೊಡಲ್ಪಟ್ಟವನಾದನು. 23 ಇದಲ್ಲದೆ, ಅನೇಕರು ಯಾಜಕರಾಗಿ ಮುಂದುವರಿಯಲು ಮರಣವು ಅಡ್ಡಿಯಾದುದರಿಂದ ಬಹಳ ಮಂದಿ ಅನುಕ್ರಮವಾಗಿ ಯಾಜಕರಾಗಿ ಕಾರ್ಯನಡೆಸಬೇಕಾಗಿತ್ತು; 24 ಆದರೆ ಇವನು ಸದಾಕಾಲ ಬದುಕಿರುವುದರಿಂದ ಇವನ ಯಾಜಕತ್ವಕ್ಕೆ ಯಾವುದೇ ಉತ್ತರಾಧಿಕಾರಿಗಳಿರುವುದಿಲ್ಲ. 25 ಆದುದರಿಂದ ಅವನು ತನ್ನ ಮೂಲಕ ದೇವರ ಸಮೀಪಕ್ಕೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವುದಕ್ಕೂ ಶಕ್ತನಾಗಿದ್ದಾನೆ; ಏಕೆಂದರೆ ಅವರಿಗೋಸ್ಕರ ಬೇಡಿಕೊಳ್ಳಲು ಅವನು ಯಾವಾಗಲೂ ಜೀವದಿಂದ ಇರುತ್ತಾನೆ.
26 ನಿಷ್ಠಾವಂತನೂ ನಿರ್ದೋಷಿಯೂ ನಿಷ್ಕಳಂಕನೂ ಪಾಪಿಗಳಿಂದ ಪ್ರತ್ಯೇಕಿಸಲ್ಪಟ್ಟಿರುವವನೂ ಆಕಾಶಮಂಡಲಗಳಿಗಿಂತ ಉನ್ನತಕ್ಕೇರಿಸಲ್ಪಟ್ಟವನೂ ಆಗಿರುವ ಇಂಥ ಮಹಾ ಯಾಜಕನೇ ನಮಗೆ ಸೂಕ್ತವಾಗಿದ್ದನು. 27 ಮೊದಲು ತಮ್ಮ ಸ್ವಂತ ಪಾಪಗಳಿಗಾಗಿಯೂ ಆ ಬಳಿಕ ಜನರ ಪಾಪಗಳಿಗಾಗಿಯೂ ಯಜ್ಞಗಳನ್ನು ಅರ್ಪಿಸುವ ಆ ಮಹಾ ಯಾಜಕರಂತೆ ಅವನು ಪ್ರತಿದಿನವೂ ಯಜ್ಞವನ್ನು ಅರ್ಪಿಸುವ ಅಗತ್ಯವಿಲ್ಲ; (ಏಕೆಂದರೆ ಅವನು ತನ್ನನ್ನೇ ಯಜ್ಞವಾಗಿ ಅರ್ಪಿಸಿಕೊಂಡಾಗ ನಿತ್ಯಕ್ಕೂ ಒಂದೇ ಸಾರಿ ಇದನ್ನು ಮಾಡಿ ಮುಗಿಸಿದನು.) 28 ಧರ್ಮಶಾಸ್ತ್ರವು ನಿರ್ಬಲರಾದ ಮನುಷ್ಯರನ್ನು ಮಹಾ ಯಾಜಕರನ್ನಾಗಿ ನೇಮಿಸುತ್ತದೆ, ಆದರೆ ಧರ್ಮಶಾಸ್ತ್ರದ ಬಳಿಕ ಆಣೆಯಿಟ್ಟು ನುಡಿದ ಮಾತು ಸದಾಕಾಲಕ್ಕೂ ಪರಿಪೂರ್ಣಗೊಳಿಸಲ್ಪಟ್ಟಿರುವ ಮಗನನ್ನು ನೇಮಿಸುತ್ತದೆ.