ಮತ್ತಾಯ
7 “ತೀರ್ಪುಮಾಡುವುದನ್ನು ನಿಲ್ಲಿಸಿರಿ, ಆಗ ನಿಮಗೂ ತೀರ್ಪಾಗುವುದಿಲ್ಲ. 2 ನೀವು ಮಾಡುತ್ತಿರುವ ತೀರ್ಪಿನಿಂದಲೇ ನಿಮಗೂ ತೀರ್ಪಾಗುವುದು; ಮತ್ತು ನೀವು ಅಳೆಯುತ್ತಿರುವ ಅಳತೆಯಿಂದಲೇ ಅವರು ನಿಮಗೆ ಅಳೆದುಕೊಡುವರು. 3 ಹಾಗಾದರೆ ನೀನು ನಿನ್ನ ಸ್ವಂತ ಕಣ್ಣಿನಲ್ಲಿರುವ ಮರದ ದಿಮ್ಮಿಯನ್ನು ನೋಡದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ಮರದ ಚೂರನ್ನು ನೋಡುವುದೇಕೆ? 4 ಅಥವಾ ನಿನ್ನ ಕಣ್ಣಿನಲ್ಲೇ ಮರದ ದಿಮ್ಮಿ ಇರುವಾಗ ನೀನು ನಿನ್ನ ಸಹೋದರನಿಗೆ, ‘ನಿನ್ನ ಕಣ್ಣಿನಿಂದ ಮರದ ಚೂರನ್ನು ತೆಗೆಯುತ್ತೇನೆ ಬಾ’ ಎಂದು ಹೇಗೆ ಹೇಳಸಾಧ್ಯವಿದೆ? 5 ಕಪಟಿಯೇ! ಮೊದಲು ನಿನ್ನ ಕಣ್ಣಿನಿಂದ ಮರದ ದಿಮ್ಮಿಯನ್ನು ತೆಗೆದುಹಾಕು; ಆಮೇಲೆ ನಿನ್ನ ಸಹೋದರನ ಕಣ್ಣಿನಿಂದ ಮರದ ಚೂರನ್ನು ತೆಗೆಯಲು ನಿನಗೆ ಕಣ್ಣು ಸ್ಪಷ್ಟವಾಗಿ ಕಾಣಿಸುವುದು.
6 “ಪವಿತ್ರವಾಗಿರುವುದನ್ನು ನಾಯಿಗಳಿಗೆ ಹಾಕಬೇಡಿರಿ; ನಿಮ್ಮ ಮುತ್ತುಗಳನ್ನು ಹಂದಿಗಳ ಮುಂದೆ ಚೆಲ್ಲಬೇಡಿರಿ. ಚೆಲ್ಲಿದರೆ ಅವು ತಮ್ಮ ಕಾಲುಗಳಿಂದ ಅವುಗಳನ್ನು ತುಳಿದು ಹಿಂದಿರುಗಿ ಬಂದು ನಿಮ್ಮನ್ನು ಸೀಳಿಬಿಟ್ಟಾವು.
7 “ಬೇಡಿಕೊಳ್ಳುತ್ತಾ ಇರಿ, ಅದು ನಿಮಗೆ ಕೊಡಲ್ಪಡುವುದು; ಹುಡುಕುತ್ತಾ ಇರಿ, ನೀವು ಕಂಡುಕೊಳ್ಳುವಿರಿ; ತಟ್ಟುತ್ತಾ ಇರಿ, ಅದು ನಿಮಗೆ ತೆರೆಯಲ್ಪಡುವುದು. 8 ಏಕೆಂದರೆ ಬೇಡಿಕೊಳ್ಳುತ್ತಿರುವ ಪ್ರತಿಯೊಬ್ಬನು ಹೊಂದುವನು, ಹುಡುಕುತ್ತಿರುವ ಪ್ರತಿಯೊಬ್ಬನು ಕಂಡುಕೊಳ್ಳುವನು ಮತ್ತು ತಟ್ಟುತ್ತಿರುವ ಪ್ರತಿಯೊಬ್ಬನಿಗೆ ತೆರೆಯಲ್ಪಡುವುದು. 9 ನಿಮ್ಮಲ್ಲಿ ಯಾವನಾದರೂ ರೊಟ್ಟಿಯನ್ನು ಕೇಳುವ ಮಗನಿಗೆ ಕಲ್ಲನ್ನು ಕೊಡುವನೇ? 10 ಅಥವಾ ಪ್ರಾಯಶಃ ಮೀನನ್ನು ಕೇಳಿದರೆ ಹಾವನ್ನು ಕೊಡುವನೇ? 11 ಆದುದರಿಂದ, ಕೆಟ್ಟವರಾಗಿರುವ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಉಡುಗೊರೆಗಳನ್ನು ಕೊಡುವುದು ಹೇಗೆಂದು ತಿಳಿದಿರುವಲ್ಲಿ ಸ್ವರ್ಗದಲ್ಲಿರುವ ನಿಮ್ಮ ತಂದೆಯು ತನ್ನನ್ನು ಕೇಳುವವರಿಗೆ ಎಷ್ಟೋ ಹೆಚ್ಚಾಗಿ ಒಳ್ಳೆಯ ವಿಷಯಗಳನ್ನು ಕೊಡುವನಲ್ಲವೆ?
12 “ಆದಕಾರಣ ಜನರು ನಿಮಗೆ ಏನು ಮಾಡಬೇಕೆಂದು ನೀವು ಬಯಸುತ್ತೀರೋ ಅವುಗಳೆಲ್ಲವನ್ನು ನೀವು ಸಹ ಅವರಿಗೆ ಮಾಡಬೇಕು; ವಾಸ್ತವದಲ್ಲಿ ಇದೇ ಧರ್ಮಶಾಸ್ತ್ರದ ಮತ್ತು ಪ್ರವಾದಿಗಳ ತಾತ್ಪರ್ಯ.
13 “ಇಕ್ಕಟ್ಟಾದ ಬಾಗಿಲಿನ ಮೂಲಕ ಒಳಗೆ ಹೋಗಿರಿ; ಏಕೆಂದರೆ ನಾಶನಕ್ಕೆ ನಡಿಸುವ ದಾರಿಯು ಅಗಲವಾಗಿಯೂ ವಿಶಾಲವಾಗಿಯೂ ಇದೆ ಮತ್ತು ಅದರ ಮೂಲಕ ಒಳಗೆ ಹೋಗುತ್ತಿರುವವರು ಅನೇಕರು; 14 ಆದರೆ ಜೀವಕ್ಕೆ ನಡಿಸುವ ಬಾಗಿಲು ಇಕ್ಕಟ್ಟಾಗಿಯೂ ದಾರಿಯು ಬಿಕ್ಕಟ್ಟಾಗಿಯೂ ಇದೆ ಮತ್ತು ಅದನ್ನು ಕಂಡುಕೊಳ್ಳುವವರು ಕೊಂಚವೇ ಜನ.
15 “ಕುರಿವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುವ ಸುಳ್ಳು ಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರಿ; ಏಕೆಂದರೆ ಒಳಗೆ ಅವರು ಅತಿಯಾಗಿ ಹಸಿದಿರುವ ತೋಳಗಳಾಗಿದ್ದಾರೆ. 16 ಅವರ ಫಲಗಳಿಂದಲೇ ನೀವು ಅವರನ್ನು ಗುರುತಿಸುವಿರಿ. ಜನರು ಎಂದಾದರೂ ಮುಳ್ಳುಗಿಡಗಳಿಂದ ದ್ರಾಕ್ಷಿಹಣ್ಣುಗಳನ್ನೂ ದತ್ತೂರಿ ಗಿಡಗಳಿಂದ ಅಂಜೂರಗಳನ್ನೂ ಕೀಳುವರೊ? 17 ಅದರಂತೆಯೇ ಪ್ರತಿಯೊಂದು ಒಳ್ಳೆಯ ಮರವು ಉತ್ತಮ ಫಲವನ್ನು ಕೊಡುತ್ತದೆ, ಆದರೆ ಪ್ರತಿಯೊಂದು ಹುಳುಕು ಮರವು ಹುಳುಕು ಫಲವನ್ನು ಕೊಡುತ್ತದೆ; 18 ಒಳ್ಳೆಯ ಮರವು ಹುಳುಕು ಫಲವನ್ನು ಕೊಡಲಾರದು, ಹುಳುಕು ಮರವು ಒಳ್ಳೆಯ ಫಲವನ್ನು ಕೊಡಲಾರದು. 19 ಉತ್ತಮ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಗೆ ಎಸೆಯಲಾಗುತ್ತದೆ. 20 ಹೀಗೆ ಆ ಮನುಷ್ಯರ ಫಲಗಳಿಂದಲೇ ನೀವು ಅವರನ್ನು ಗುರುತಿಸುವಿರಿ.
21 “ನನ್ನನ್ನು ‘ಕರ್ತನೇ, ಕರ್ತನೇ’ ಎಂದು ಹೇಳುವ ಪ್ರತಿಯೊಬ್ಬನೂ ಸ್ವರ್ಗದ ರಾಜ್ಯವನ್ನು ಪ್ರವೇಶಿಸುವುದಿಲ್ಲ; ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತವನ್ನು ಮಾಡುವವನೇ ಪ್ರವೇಶಿಸುವನು. 22 ಆ ದಿನದಲ್ಲಿ ಅನೇಕರು ನನಗೆ, ‘ಕರ್ತನೇ, ಕರ್ತನೇ, ನಾವು ನಿನ್ನ ಹೆಸರಿನಲ್ಲಿ ಪ್ರವಾದಿಸಲಿಲ್ಲವೇ? ನಿನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಲಿಲ್ಲವೇ? ನಿನ್ನ ಹೆಸರಿನಲ್ಲಿ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ?’ ಎಂದು ಹೇಳುವರು. 23 ಆದರೂ ಆಗ ನಾನು ಅವರಿಗೆ, ನನಗೆ ನಿಮ್ಮ ಪರಿಚಯವೇ ಇಲ್ಲ! ಅನ್ಯಾಯದ ಕೆಲಸಗಾರರೇ, ನನ್ನಿಂದ ತೊಲಗಿಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು.
24 “ಆದುದರಿಂದ ನನ್ನ ಈ ಮಾತುಗಳನ್ನು ಕೇಳಿಸಿಕೊಂಡು ಅವುಗಳಂತೆ ಮಾಡುವ ಪ್ರತಿಯೊಬ್ಬನೂ ದೊಡ್ಡ ಬಂಡೆಯ ಮೇಲೆ ತನ್ನ ಮನೆಯನ್ನು ಕಟ್ಟಿದ ವಿವೇಚನೆಯುಳ್ಳ ಒಬ್ಬ ಮನುಷ್ಯನಂತಿರುವನು. 25 ಮಳೆ ಸುರಿಯಿತು, ನೆರೆಯು ಬಂತು ಮತ್ತು ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು; ಆದರೆ ಅದರ ಅಸ್ತಿವಾರವು ದೊಡ್ಡ ಬಂಡೆಯ ಮೇಲಿದ್ದುದರಿಂದ ಅದು ಕುಸಿದುಬೀಳಲಿಲ್ಲ. 26 ನನ್ನ ಈ ಮಾತುಗಳನ್ನು ಕೇಳಿಸಿಕೊಂಡು ಅವುಗಳಂತೆ ಮಾಡದಿರುವ ಪ್ರತಿಯೊಬ್ಬನೂ ಮರಳಿನ ಮೇಲೆ ತನ್ನ ಮನೆಯನ್ನು ಕಟ್ಟಿದ ಒಬ್ಬ ಬುದ್ಧಿಹೀನ ಮನುಷ್ಯನಂತಿರುವನು. 27 ಮಳೆ ಸುರಿಯಿತು, ನೆರೆಯು ಬಂತು ಮತ್ತು ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು; ಆಗ ಅದು ಕುಸಿದುಬಿತ್ತು ಮತ್ತು ಅದರ ಕುಸಿತವು ಭಾರಿಯಾಗಿತ್ತು.”
28 ಯೇಸು ಈ ಮಾತುಗಳನ್ನು ಹೇಳಿ ಮುಗಿಸಿದಾಗ ಜನರ ಗುಂಪುಗಳು ಅವನು ಬೋಧಿಸುವ ರೀತಿಯನ್ನು ಕಂಡು ಅತ್ಯಾಶ್ಚರ್ಯಪಟ್ಟವು. 29 ಏಕೆಂದರೆ ಅವನು ಅವರ ಶಾಸ್ತ್ರಿಗಳಂತೆ ಬೋಧಿಸದೆ ಅಧಿಕಾರವಿದ್ದ ವ್ಯಕ್ತಿಯಂತೆ ಬೋಧಿಸುತ್ತಿದ್ದನು.