ಪ್ರಕಟನೆ
16 ಪವಿತ್ರಸ್ಥಳದಿಂದ ಬಂದ ಮಹಾ ಧ್ವನಿಯು ಆ ಏಳು ಮಂದಿ ದೇವದೂತರಿಗೆ, “ಹೋಗಿ ದೇವರ ಕೋಪದ ಆ ಏಳು ಬೋಗುಣಿಗಳಲ್ಲಿ ಇರುವುದನ್ನು ಭೂಮಿಯ ಮೇಲೆ ಸುರಿಯಿರಿ” ಎಂದು ಹೇಳುವುದನ್ನು ನಾನು ಕೇಳಿಸಿಕೊಂಡೆನು.
2 ಮೊದಲನೆಯವನು ಹೊರಟುಹೋಗಿ ತನ್ನ ಬೋಗುಣಿಯಲ್ಲಿದ್ದುದನ್ನು ಭೂಮಿಯ ಮೇಲೆ ಸುರಿದನು. ಆಗ ಕಾಡುಮೃಗದ ಗುರುತನ್ನು ಹೊಂದಿದ್ದ ಮತ್ತು ಅದರ ವಿಗ್ರಹವನ್ನು ಆರಾಧಿಸುತ್ತಿದ್ದ ಮನುಷ್ಯರ ಮೇಲೆ ನೋವನ್ನು ಉಂಟುಮಾಡುವ ಮಾರಕ ಹುಣ್ಣು ಎದ್ದಿತು.
3 ಎರಡನೆಯವನು ತನ್ನ ಬೋಗುಣಿಯಲ್ಲಿದ್ದುದನ್ನು ಸಮುದ್ರದ ಮೇಲೆ ಸುರಿದನು. ಅದು ಸತ್ತ ಮನುಷ್ಯನ ರಕ್ತದ ಹಾಗಾಯಿತು ಮತ್ತು ಜೀವಿಸುವ ಪ್ರತಿಯೊಂದು ಜೀವಿಯು, ಹೌದು ಸಮುದ್ರದಲ್ಲಿದ್ದವುಗಳು ಸತ್ತುಹೋದವು.
4 ಮೂರನೆಯವನು ತನ್ನ ಬೋಗುಣಿಯಲ್ಲಿದ್ದುದನ್ನು ನದಿಗಳ ಮೇಲೆಯೂ ನೀರಿನ ಬುಗ್ಗೆಗಳ ಮೇಲೆಯೂ ಸುರಿದನು. ಆಗ ಅವು ರಕ್ತವಾದವು. 5 ನೀರುಗಳ ಮೇಲೆ ಅಧಿಕಾರವನ್ನು ಹೊಂದಿದ್ದ ದೇವದೂತನು, “ಇರುವಾತನೂ ಇದ್ದಾತನೂ ನಿಷ್ಠಾವಂತನೂ ಆದ ನೀನು ನೀತಿವಂತನು, ಏಕೆಂದರೆ ನೀನು ಈ ತೀರ್ಪುಗಳನ್ನು ವಿಧಿಸಿದ್ದೀ; 6 ಅವರು ಪವಿತ್ರ ಜನರ ಮತ್ತು ಪ್ರವಾದಿಗಳ ರಕ್ತವನ್ನು ಸುರಿಸಿದರು; ನೀನು ಅವರಿಗೆ ರಕ್ತವನ್ನು ಕುಡಿಯಲು ಕೊಟ್ಟಿದ್ದೀ. ಅವರು ಇದಕ್ಕೆ ಅರ್ಹರು” ಎಂದು ಹೇಳುವುದನ್ನು ನಾನು ಕೇಳಿಸಿಕೊಂಡೆನು. 7 ಬಳಿಕ ಯಜ್ಞವೇದಿಯು, “ಹೌದು, ಯೆಹೋವ ದೇವರೇ, ಸರ್ವಶಕ್ತನೇ, ನಿನ್ನ ನ್ಯಾಯತೀರ್ಪುಗಳು ಸತ್ಯವೂ ನೀತಿಯವುಗಳೂ ಆಗಿವೆ” ಎಂದು ಹೇಳುವುದನ್ನು ನಾನು ಕೇಳಿಸಿಕೊಂಡೆನು.
8 ನಾಲ್ಕನೆಯವನು ತನ್ನ ಬೋಗುಣಿಯಲ್ಲಿದ್ದುದನ್ನು ಸೂರ್ಯನ ಮೇಲೆ ಸುರಿದನು; ಸೂರ್ಯನಿಗೆ ಮನುಷ್ಯರನ್ನು ಬೆಂಕಿಯಿಂದ ಕಮರಿಸುವಂತೆ ಅನುಮತಿಯನ್ನು ಕೊಡಲಾಯಿತು. 9 ಮನುಷ್ಯರು ತೀಕ್ಷ್ಣ ಕಾವಿನಿಂದ ಕಮರಿಹೋದರು; ಆದರೆ ಈ ಉಪದ್ರವಗಳ ಮೇಲೆ ಅಧಿಕಾರವನ್ನು ಹೊಂದಿರುವ ದೇವರ ನಾಮವನ್ನು ಅವರು ದೂಷಿಸಿದರು; ಆತನಿಗೆ ಮಹಿಮೆಯನ್ನು ಸಲ್ಲಿಸಲಿಕ್ಕಾಗಿ ಅವರು ಪಶ್ಚಾತ್ತಾಪಪಡಲಿಲ್ಲ.
10 ಇದಲ್ಲದೆ ಐದನೆಯವನು ತನ್ನ ಬೋಗುಣಿಯಲ್ಲಿದ್ದುದನ್ನು ಕಾಡುಮೃಗದ ಸಿಂಹಾಸನದ ಮೇಲೆ ಸುರಿದನು. ಅದರ ರಾಜ್ಯವು ಕತ್ತಲಾಯಿತು ಮತ್ತು ಅವರು ತಮ್ಮ ನೋವಿನಿಂದ ತಮ್ಮ ನಾಲಿಗೆಗಳನ್ನು ಕಚ್ಚಿಕೊಳ್ಳಲಾರಂಭಿಸಿದರು. 11 ಆದರೆ ಅವರು ತಮಗಾದ ನೋವಿಗಾಗಿಯೂ ಹುಣ್ಣುಗಳಿಗಾಗಿಯೂ ಸ್ವರ್ಗದ ದೇವರನ್ನು ದೂಷಿಸಿದರು ಮತ್ತು ತಮ್ಮ ಕೃತ್ಯಗಳಿಗಾಗಿ ಪಶ್ಚಾತ್ತಾಪಪಡಲಿಲ್ಲ.
12 ಆರನೆಯವನು ತನ್ನ ಬೋಗುಣಿಯಲ್ಲಿದ್ದುದನ್ನು ಯೂಫ್ರೇಟೀಸ್ ಮಹಾ ನದಿಯ ಮೇಲೆ ಸುರಿದನು ಮತ್ತು ಸೂರ್ಯೋದಯದ ದಿಕ್ಕಿನಿಂದ ಬರುವ ರಾಜರಿಗೆ ಮಾರ್ಗವು ಸಿದ್ಧವಾಗುವಂತೆ ಅದರ ನೀರು ಇಂಗಿಹೋಯಿತು.
13 ಘಟಸರ್ಪದ ಬಾಯಿಂದಲೂ ಕಾಡುಮೃಗದ ಬಾಯಿಂದಲೂ ಸುಳ್ಳು ಪ್ರವಾದಿಯ ಬಾಯಿಂದಲೂ ಕಪ್ಪೆಗಳಂತೆ ತೋರುತ್ತಿದ್ದ ಮೂರು ಅಶುದ್ಧವಾದ ಪ್ರೇರಿತ ಅಭಿವ್ಯಕ್ತಿಗಳು ಬರುವುದನ್ನು ನಾನು ನೋಡಿದೆನು. 14 ವಾಸ್ತವದಲ್ಲಿ ಇವು ದೆವ್ವಗಳಿಂದ ಪ್ರೇರಿತವಾದ ಅಭಿವ್ಯಕ್ತಿಗಳಾಗಿದ್ದು ಸೂಚಕಕಾರ್ಯಗಳನ್ನು ಮಾಡುತ್ತವೆ ಮತ್ತು ಇಡೀ ನಿವಾಸಿತ ಭೂಮಿಯ ರಾಜರನ್ನು ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧಕ್ಕಾಗಿ ಒಟ್ಟುಗೂಡಿಸಲಿಕ್ಕಾಗಿ ಅವರ ಬಳಿಗೆ ಹೋಗುತ್ತವೆ.
15 “ಇಗೋ, ನಾನು ಕಳ್ಳನು ಬರುವಂತೆ ಬರುತ್ತೇನೆ. ತಾನು ಬೆತ್ತಲೆಯಾಗಿ ನಡೆಯದಂತೆ ಮತ್ತು ಜನರು ತನ್ನ ನಾಚಿಕೆಗೇಡಿತನವನ್ನು ನೋಡದಂತೆ ಎಚ್ಚರವಾಗಿದ್ದು ತನ್ನ ಮೇಲಂಗಿಗಳನ್ನು ಕಾಪಾಡಿಕೊಳ್ಳುವವನು ಸಂತೋಷಿತನು.”
16 ಅವು ಅವರನ್ನು ಹೀಬ್ರು ಭಾಷೆಯಲ್ಲಿ ಹರ್ಮಗೆದೋನ್ ಎಂದು ಕರೆಯಲ್ಪಡುವ ಸ್ಥಳಕ್ಕೆ ಒಟ್ಟುಗೂಡಿಸಿದವು.
17 ಏಳನೆಯವನು ತನ್ನ ಬೋಗುಣಿಯಲ್ಲಿದ್ದುದನ್ನು ಗಾಳಿಯ ಮೇಲೆ ಸುರಿದನು. ಆಗ ಪವಿತ್ರಸ್ಥಳದ ಸಿಂಹಾಸನದ ಕಡೆಯಿಂದ ಒಂದು ಮಹಾ ಧ್ವನಿಯು ಹೊರಟು, “ಅದು ನೆರವೇರಿದೆ!” ಎಂದು ಹೇಳಿತು. 18 ಆಗ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಸಂಭವಿಸಿದವು ಮತ್ತು ಭೂಮಿಯ ಮೇಲೆ ಮನುಷ್ಯರು ಉಂಟಾದಂದಿನಿಂದ ಸಂಭವಿಸಿದ್ದಿರದಂಥ ಒಂದು ಮಹಾ ಭೂಕಂಪವು, ಎಷ್ಟೋ ವ್ಯಾಪಕವಾದ ದೊಡ್ಡ ಭೂಕಂಪವು ಸಂಭವಿಸಿತು. 19 ಮಹಾ ನಗರವು ಮೂರು ಭಾಗಗಳಾಗಿ ವಿಭಾಗವಾಯಿತು ಮತ್ತು ಜನಾಂಗಗಳ ನಗರಗಳು ಬಿದ್ದವು; ಇದಲ್ಲದೆ ದೇವರು ತನ್ನ ಉಗ್ರ ಕೋಪದ ದ್ರಾಕ್ಷಾಮದ್ಯದ ಪಾತ್ರೆಯನ್ನು ಮಹಾ ಬಾಬೆಲಿಗೆ ಕುಡಿಯಲು ಕೊಡಲಿಕ್ಕಾಗಿ ಅವಳನ್ನು ಜ್ಞಾಪಿಸಿಕೊಂಡನು. 20 ಮಾತ್ರವಲ್ಲದೆ ಪ್ರತಿಯೊಂದು ದ್ವೀಪವೂ ಓಡಿಹೋಯಿತು ಮತ್ತು ಬೆಟ್ಟಗಳು ಕಾಣದೆಹೋದವು. 21 ಮತ್ತು ಆಕಾಶದಿಂದ ಮನುಷ್ಯರ ಮೇಲೆ ದೊಡ್ಡ ಆಲಿಕಲ್ಲಿನ ಮಳೆ ಸುರಿಯಿತು; ಪ್ರತಿಯೊಂದು ಕಲ್ಲು ಸುಮಾರು ಒಂದು ತಲಾಂತು ತೂಕವುಳ್ಳದ್ದಾಗಿತ್ತು; ಆ ಆಲಿಕಲ್ಲಿನ ಬಾಧೆಯ ಕಾರಣ ಮನುಷ್ಯರು ದೇವರನ್ನು ದೂಷಿಸಿದರು, ಏಕೆಂದರೆ ಅದರ ಬಾಧೆಯು ಅಸಾಮಾನ್ಯವಾಗಿ ಮಹತ್ತಾದದ್ದಾಗಿತ್ತು.