ಪ್ರಕಟನೆ
14 ಇಗೋ, ಕುರಿಮರಿಯು ಚೀಯೋನ್ ಪರ್ವತದ ಮೇಲೆ ನಿಂತಿರುವುದನ್ನು ನಾನು ನೋಡಿದೆನು; ಅವನೊಂದಿಗೆ ಒಂದು ಲಕ್ಷ ನಲ್ವತ್ತನಾಲ್ಕು ಸಾವಿರ ಮಂದಿ ಇದ್ದರು. ಅವರವರ ಹಣೆಗಳ ಮೇಲೆ ಅವನ ಹೆಸರೂ ಅವನ ತಂದೆಯ ಹೆಸರೂ ಬರೆಯಲ್ಪಟ್ಟಿತ್ತು. 2 ಇದಲ್ಲದೆ ಸ್ವರ್ಗದಿಂದ ಅನೇಕ ನೀರುಗಳ ಘೋಷದಂತೆಯೂ ದೊಡ್ಡ ಗುಡುಗಿನ ಶಬ್ದದಂತೆಯೂ ಇದ್ದ ಒಂದು ಶಬ್ದವನ್ನು ನಾನು ಕೇಳಿಸಿಕೊಂಡೆನು. ನಾನು ಕೇಳಿಸಿಕೊಂಡ ಆ ಶಬ್ದವು ತಮ್ಮ ಕಿನ್ನರಿಗಳನ್ನು ನುಡಿಸುತ್ತಾ ಅವುಗಳೊಂದಿಗೆ ಹಾಡುತ್ತಿರುವ ಹಾಡುಗಾರರ ಶಬ್ದದಂತಿತ್ತು. 3 ಅವರು ಸಿಂಹಾಸನದ ಮುಂದೆಯೂ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ ಒಂದು ಹೊಸ ಹಾಡನ್ನೋ ಎಂಬಂತೆ ಹಾಡುತ್ತಿದ್ದಾರೆ. ಭೂಮಿಯಿಂದ ಕೊಂಡುಕೊಳ್ಳಲ್ಪಟ್ಟಿರುವ ಆ ಒಂದು ಲಕ್ಷ ನಲ್ವತ್ತನಾಲ್ಕು ಸಾವಿರ ಮಂದಿಯ ಹೊರತು ಬೇರೆ ಯಾರೂ ಆ ಹಾಡನ್ನು ಪೂರ್ಣವಾಗಿ ಕಲಿಯಲು ಶಕ್ತರಾಗಿರಲಿಲ್ಲ. 4 ಇವರು ತಮ್ಮನ್ನು ಸ್ತ್ರೀಯರಿಂದ ಮಲಿನಗೊಳಿಸಿಕೊಳ್ಳದವರಾಗಿದ್ದಾರೆ; ವಾಸ್ತವದಲ್ಲಿ ಇವರು ಕನ್ಯೆಯರಾಗಿದ್ದಾರೆ. ಕುರಿಮರಿಯು ಎಲ್ಲಿ ಹೋದರೂ ಇವರು ಅವನನ್ನು ಹಿಂಬಾಲಿಸುತ್ತಾ ಹೋಗುತ್ತಾರೆ. ಇವರು ಮಾನವಕುಲದ ಮಧ್ಯದಿಂದ ದೇವರಿಗೂ ಕುರಿಮರಿಗೂ ಪ್ರಥಮಫಲವಾಗಿ ಕೊಂಡುಕೊಳ್ಳಲ್ಪಟ್ಟವರು. 5 ಇವರ ಬಾಯಲ್ಲಿ ಯಾವ ಸುಳ್ಳೂ ಕಂಡುಬರಲಿಲ್ಲ; ಇವರು ಕಳಂಕರಹಿತರಾಗಿದ್ದಾರೆ.
6 ಇದಲ್ಲದೆ ಇನ್ನೊಬ್ಬ ದೇವದೂತನು ಆಕಾಶಮಧ್ಯದಲ್ಲಿ ಹಾರುತ್ತಿರುವುದನ್ನು ನಾನು ನೋಡಿದೆನು; ಅವನ ಬಳಿ ಭೂನಿವಾಸಿಗಳಿಗೂ ಸಕಲ ಕುಲ ಜನಾಂಗ ಭಾಷೆ ಮತ್ತು ಪ್ರಜೆಗಳಿಗೂ ಸಂತೋಷದ ಸುದ್ದಿಯಾಗಿ ಪ್ರಕಟಪಡಿಸಲು ನಿತ್ಯವಾದ ಸುವಾರ್ತೆಯಿತ್ತು. 7 ಅವನು ಮಹಾ ಧ್ವನಿಯಿಂದ, “ದೇವರಿಗೆ ಭಯಪಡಿರಿ ಮತ್ತು ಆತನಿಗೆ ಮಹಿಮೆಯನ್ನು ಸಲ್ಲಿಸಿರಿ, ಏಕೆಂದರೆ ಆತನ ನ್ಯಾಯತೀರ್ಪಿನ ಗಳಿಗೆಯು ಬಂದಿದೆ; ಆದುದರಿಂದ ಸ್ವರ್ಗವನ್ನೂ ಭೂಮಿಯನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟುಮಾಡಿದಾತನನ್ನು ಆರಾಧಿಸಿರಿ” ಎಂದು ಹೇಳಿದನು.
8 ಇದಲ್ಲದೆ ಅವನ ಹಿಂದೆ ಇನ್ನೊಬ್ಬನು, ಎರಡನೆಯ ದೇವದೂತನು ಬಂದು, “ಅವಳು ಬಿದ್ದಿದ್ದಾಳೆ! ಮಹಾ ಬಾಬೆಲ್ ಬಿದ್ದಿದ್ದಾಳೆ. ಎಲ್ಲ ಜನಾಂಗಗಳವರು ತನ್ನ ಕೋಪದ ಮತ್ತು ಜಾರತ್ವದ ದ್ರಾಕ್ಷಾಮದ್ಯವನ್ನು ಕುಡಿಯುವಂತೆ ಅವಳು ಮಾಡಿದ್ದಾಳೆ” ಎಂದು ಹೇಳಿದನು.
9 ಇನ್ನೊಬ್ಬ ದೇವದೂತನು, ಮೂರನೆಯವನು ಅವರನ್ನು ಹಿಂಬಾಲಿಸುತ್ತಾ, “ಯಾವನಾದರೂ ಕಾಡುಮೃಗವನ್ನೂ ಅದರ ವಿಗ್ರಹವನ್ನೂ ಆರಾಧಿಸುವುದಾದರೆ ಮತ್ತು ತನ್ನ ಹಣೆಯ ಮೇಲಾಗಲಿ ಕೈಯ ಮೇಲಾಗಲಿ ಗುರುತನ್ನು ಹೊಂದುವುದಾದರೆ 10 ಅವನು ಸಹ ದೇವರ ಕ್ರೋಧವೆಂಬ ಪಾತ್ರೆಯಲ್ಲಿ ತೆಳುವಾಗಿಸದೆ ಹೊಯ್ಯಲ್ಪಡುವ ದೇವರ ಕೋಪವೆಂಬ ದ್ರಾಕ್ಷಾಮದ್ಯವನ್ನು ಕುಡಿಯುವನು; ಅವನು ಪವಿತ್ರ ದೇವದೂತರ ಮುಂದೆಯೂ ಕುರಿಮರಿಯ ಮುಂದೆಯೂ ಬೆಂಕಿ ಮತ್ತು ಗಂಧಕದಿಂದ ಯಾತನೆಗೊಳಪಡಿಸಲ್ಪಡುವನು. 11 ಅವರ ಯಾತನೆಯ ಹೊಗೆಯು ಸದಾಕಾಲಕ್ಕೂ ಏರುತ್ತಾ ಹೋಗುತ್ತದೆ; ಕಾಡುಮೃಗವನ್ನೂ ಅದರ ವಿಗ್ರಹವನ್ನೂ ಆರಾಧಿಸುವವರಿಗೆ ಮತ್ತು ಅದರ ಹೆಸರಿನ ಗುರುತನ್ನು ಹೊಂದಿರುವವರಿಗೆ ಹಗಲೂರಾತ್ರಿ ವಿಶ್ರಾಂತಿಯೇ ಇಲ್ಲ. 12 ದೇವರ ಆಜ್ಞೆಗಳನ್ನೂ ಯೇಸುವಿನ ನಂಬಿಕೆಯನ್ನೂ ಅನುಸರಿಸಿ ನಡೆಯುವವರಾದ ಪವಿತ್ರ ಜನರಿಗೆ ತಾಳ್ಮೆಯು ಅಗತ್ಯವಿರುವುದು ಇಲ್ಲಿಯೇ” ಎಂದು ಮಹಾ ಧ್ವನಿಯಿಂದ ಹೇಳಿದನು.
13 ಇದಲ್ಲದೆ ಸ್ವರ್ಗದಿಂದ ಒಂದು ಧ್ವನಿಯು ನನಗೆ, “ಬರೆ: ಇಂದಿನಿಂದ ಕರ್ತನೊಂದಿಗೆ ಐಕ್ಯದಲ್ಲಿ ಸಾಯುವವರು ಸಂತೋಷಿತರು. ಹೌದು, ಅವರು ತಮ್ಮ ಪ್ರಯಾಸದಿಂದ ವಿಶ್ರಾಂತಿಯನ್ನು ಪಡೆದುಕೊಳ್ಳಲಿ, ಏಕೆಂದರೆ ಅವರು ಮಾಡಿದ ಕಾರ್ಯಗಳು ಅವರೊಂದಿಗೆ ಹೋಗುವವು ಎಂದು ಪವಿತ್ರಾತ್ಮವು ಹೇಳುತ್ತದೆ” ಎಂದು ಹೇಳುವುದನ್ನು ಕೇಳಿಸಿಕೊಂಡೆನು.
14 ನಾನು ನೋಡಲಾಗಿ ಒಂದು ಬಿಳೀ ಮೇಘವು ನನಗೆ ಕಾಣಿಸಿತು. ತಲೆಯ ಮೇಲೆ ಚಿನ್ನದ ಕಿರೀಟವೂ ಕೈಯಲ್ಲಿ ಹರಿತವಾದ ಕುಡುಗೋಲೂ ಇರುವ ಮನುಷ್ಯಕುಮಾರನಂತಿರುವ ಯಾವನೋ ಒಬ್ಬನು ಆ ಮೇಘದ ಮೇಲೆ ಕುಳಿತುಕೊಂಡಿದ್ದನು.
15 ಆಗ ಇನ್ನೊಬ್ಬ ದೇವದೂತನು ದೇವಾಲಯದ ಪವಿತ್ರಸ್ಥಳದಿಂದ ಬಂದು ಮೇಘದ ಮೇಲೆ ಕುಳಿತುಕೊಂಡಿರುವವನಿಗೆ ಗಟ್ಟಿಯಾದ ಧ್ವನಿಯಿಂದ ಕೂಗುತ್ತಾ, “ನಿನ್ನ ಕುಡುಗೋಲನ್ನು ಹಾಕಿ ಕೊಯ್ಯಿ, ಏಕೆಂದರೆ ಭೂಮಿಯ ಬೆಳೆಯು ಪೂರ್ಣವಾಗಿ ಮಾಗಿದೆ. ಕೊಯ್ಯುವ ಗಳಿಗೆ ಬಂದಿದೆ” ಎಂದು ಹೇಳಿದನು. 16 ಮೇಘದ ಮೇಲೆ ಕುಳಿತುಕೊಂಡಿದ್ದವನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಚಾಚಿದನು ಮತ್ತು ಭೂಮಿಯ ಬೆಳೆಯು ಕೊಯ್ಯಲ್ಪಟ್ಟಿತು.
17 ಆಗ ಇನ್ನೂ ಒಬ್ಬ ದೇವದೂತನು ಸ್ವರ್ಗದಲ್ಲಿರುವ ದೇವಾಲಯದ ಪವಿತ್ರಸ್ಥಳದಿಂದ ಬಂದನು ಮತ್ತು ಅವನ ಬಳಿಯೂ ಒಂದು ಹರಿತವಾದ ಕುಡುಗೋಲು ಇತ್ತು.
18 ತರುವಾಯ ಇನ್ನೊಬ್ಬ ದೇವದೂತನು ಯಜ್ಞವೇದಿಯಿಂದ ಬಂದನು; ಅವನಿಗೆ ಬೆಂಕಿಯ ಮೇಲೆ ಅಧಿಕಾರವಿತ್ತು. ಅವನು ಆ ಹರಿತವಾದ ಕುಡುಗೋಲನ್ನು ಹೊಂದಿರುವವನನ್ನು ಗಟ್ಟಿಯಾದ ಧ್ವನಿಯಿಂದ ಕರೆದು ಅವನಿಗೆ, “ನಿನ್ನ ಹರಿತವಾದ ಕುಡುಗೋಲನ್ನು ಚಾಚಿ ಭೂಮಿಯ ದ್ರಾಕ್ಷಿಯ ಬಳ್ಳಿಯ ಗೊಂಚಲುಗಳನ್ನು ಒಟ್ಟುಗೂಡಿಸು, ಏಕೆಂದರೆ ಅದರಲ್ಲಿರುವ ದ್ರಾಕ್ಷಿಹಣ್ಣುಗಳು ಮಾಗಿವೆ” ಎಂದು ಹೇಳಿದನು. 19 ಆಗ ಆ ದೇವದೂತನು ತನ್ನ ಕುಡುಗೋಲನ್ನು ಭೂಮಿಗೆ ಚಾಚಿ ಭೂಮಿಯ ದ್ರಾಕ್ಷಿಯ ಬಳ್ಳಿಯನ್ನು ಒಟ್ಟುಗೂಡಿಸಿದನು ಮತ್ತು ಅವನು ಅದನ್ನು ದೇವರ ಕೋಪದ ದೊಡ್ಡ ದ್ರಾಕ್ಷಿಯ ತೊಟ್ಟಿಯೊಳಗೆ ಹಾಕಿದನು. 20 ಆ ದ್ರಾಕ್ಷಿಯ ತೊಟ್ಟಿಯು ನಗರದ ಹೊರಗೆ ತುಳಿಯಲ್ಪಟ್ಟಿತು; ಆ ದ್ರಾಕ್ಷಿಯ ತೊಟ್ಟಿಯಿಂದ ರಕ್ತವು ಕುದುರೆಗಳ ಕಡಿವಾಣಗಳಷ್ಟು ಎತ್ತರಕ್ಕೆ ಏರಿಬಂತು ಮತ್ತು ಇನ್ನೂರು ಮೈಲಿ ದೂರದ ವರೆಗೆ ಹರಿಯಿತು.