ಲೂಕ
18 ಬಳಿಕ ಅವನು ಯಾವಾಗಲೂ ಪ್ರಾರ್ಥಿಸುವ ಮತ್ತು ಅದನ್ನು ಪಟ್ಟುಹಿಡಿದು ಮಾಡುವ ಅಗತ್ಯದ ಕುರಿತು ಅವರಿಗೊಂದು ದೃಷ್ಟಾಂತವನ್ನು ಹೇಳಲಾರಂಭಿಸಿದನು: 2 “ಒಂದು ಊರಿನಲ್ಲಿ ದೇವರಿಗೆ ಭಯಪಡದ ಮತ್ತು ಮನುಷ್ಯರನ್ನು ಗೌರವಿಸದ ಒಬ್ಬ ನ್ಯಾಯಾಧಿಪತಿಯಿದ್ದನು. 3 ಆ ಊರಿನಲ್ಲಿದ್ದ ಒಬ್ಬ ವಿಧವೆಯು ಅವನ ಬಳಿಗೆ ಪದೇ ಪದೇ ಹೋಗಿ, ‘ನನ್ನ ಪ್ರತಿವಾದಿಯ ವಿರುದ್ಧ ನನಗೆ ನ್ಯಾಯದೊರಕಿಸಿಕೊಡು’ ಎಂದು ಕೇಳಿಕೊಳ್ಳುತ್ತಾ ಇದ್ದಳು. 4 ಸ್ವಲ್ಪ ದಿನಗಳ ವರೆಗೆ ಅವನಿಗೆ ಮನಸ್ಸಿರಲಿಲ್ಲವಾದರೂ ಅನಂತರ ಅವನು, ‘ನಾನು ದೇವರಿಗೆ ಭಯಪಡುವುದೂ ಇಲ್ಲ, ಮನುಷ್ಯರನ್ನು ಗೌರವಿಸುವುದೂ ಇಲ್ಲ. 5 ಆದರೂ ಈ ವಿಧವೆಯು ಸತತವಾಗಿ ನನಗೆ ತೊಂದರೆ ಕೊಡುತ್ತಿರುವುದರಿಂದ ನಾನು ಅವಳಿಗೆ ನ್ಯಾಯವನ್ನು ದೊರಕಿಸಿಕೊಡುತ್ತೇನೆ; ಇಲ್ಲವಾದರೆ ಅವಳು ಪದೇಪದೇ ಬಂದು ನನ್ನನ್ನು ಪೀಡಿಸಿ ಮುಗಿಸಿಬಿಟ್ಟಾಳು’ ಎಂದುಕೊಂಡನು.” 6 ಬಳಿಕ ಕರ್ತನು, “ನ್ಯಾಯಾಧಿಪತಿಯು ಅನೀತಿವಂತನಾಗಿದ್ದರೂ ಏನು ಅಂದುಕೊಂಡನೆಂಬುದನ್ನು ಕೇಳಿಸಿಕೊಂಡಿರಾ? 7 ಹಾಗಾದರೆ ದೇವರು ತಾನು ಆಯ್ದುಕೊಂಡವರ ವಿಷಯದಲ್ಲಿ ದೀರ್ಘ ಸಹನೆಯುಳ್ಳವನಾಗಿರುವುದಾದರೂ ಅವರು ಆತನಿಗೆ ಹಗಲಿರುಳು ಮೊರೆಯಿಡುವಾಗ ಅವರಿಗೆ ನ್ಯಾಯವನ್ನು ದೊರಕಿಸಿಕೊಡದೇ ಇರುವನೆ? 8 ಆತನು ಅವರಿಗೆ ಬೇಗನೆ ನ್ಯಾಯವನ್ನು ದೊರಕಿಸಿಕೊಡುವನು ಎಂದು ನಾನು ನಿಮಗೆ ಹೇಳುತ್ತೇನೆ. ಆದರೂ ಮನುಷ್ಯಕುಮಾರನು ಬರುವಾಗ ಭೂಮಿಯ ಮೇಲೆ ನಿಜವಾಗಿಯೂ ಇಂಥ ನಂಬಿಕೆಯನ್ನು ಕಾಣುವನೊ?” ಎಂದು ಹೇಳಿದನು.
9 ಇದಲ್ಲದೆ ತಾವು ನೀತಿವಂತರೆಂದು ತಮ್ಮಲ್ಲಿ ತಾವೇ ಭರವಸೆಯಿಟ್ಟು ಉಳಿದವರನ್ನು ಕಡೆಗಣಿಸುತ್ತಿದ್ದ ಕೆಲವರಿಗೆ ಅವನು ಈ ದೃಷ್ಟಾಂತವನ್ನು ಸಹ ಹೇಳಿದನು: 10 “ಇಬ್ಬರು ಪುರುಷರು ಪ್ರಾರ್ಥಿಸಲಿಕ್ಕಾಗಿ ದೇವಾಲಯಕ್ಕೆ ಹೋದರು; ಅವರಲ್ಲಿ ಒಬ್ಬನು ಫರಿಸಾಯನು, ಮತ್ತೊಬ್ಬನು ತೆರಿಗೆ ವಸೂಲಿಗಾರನು. 11 ಫರಿಸಾಯನು ನಿಂತುಕೊಂಡು, ‘ದೇವರೇ, ಸುಲುಕೊಳ್ಳುವವರೂ ಅನೀತಿವಂತರೂ ವ್ಯಭಿಚಾರಿಗಳೂ ಆಗಿರುವ ಉಳಿದ ಜನರಂತೆ ನಾನಲ್ಲ ಅಥವಾ ಈ ತೆರಿಗೆ ವಸೂಲಿಗಾರನಂತೆಯೂ ಅಲ್ಲದಿರುವುದರಿಂದ ನಿನಗೆ ಕೃತಜ್ಞತೆ ಸಲ್ಲಿಸುತ್ತೇನೆ. 12 ನಾನು ವಾರಕ್ಕೆ ಎರಡಾವರ್ತಿ ಉಪವಾಸಮಾಡುತ್ತೇನೆ; ನಾನು ಗಳಿಸುವ ಎಲ್ಲದರಲ್ಲಿ ಹತ್ತರಲ್ಲೊಂದು ಭಾಗವನ್ನು ಕೊಡುತ್ತೇನೆ’ ಎಂದು ತನ್ನೊಳಗೆ ಪ್ರಾರ್ಥಿಸತೊಡಗಿದನು. 13 ಆದರೆ ತೆರಿಗೆ ವಸೂಲಿಗಾರನು ದೂರದಲ್ಲಿ ನಿಂತುಕೊಂಡು ಆಕಾಶದ ಕಡೆಗೆ ಕಣ್ಣೆತ್ತಿ ನೋಡಲೂ ಇಷ್ಟಪಡದೆ ತನ್ನ ಎದೆಯನ್ನು ಬಡಿದುಕೊಳ್ಳುತ್ತಾ, ‘ದೇವರೇ, ಪಾಪಿಯಾದ ನನಗೆ ಕರುಣೆ ತೋರಿಸು’ ಎಂದು ಹೇಳಿದನು. 14 ಈ ಮನುಷ್ಯನು ಆ ಮನುಷ್ಯನಿಗಿಂತ ಹೆಚ್ಚು ನೀತಿವಂತನೆಂದು ರುಜುಪಡಿಸುತ್ತಾ ತನ್ನ ಮನೆಗೆ ಹಿಂದಿರುಗಿ ಹೋದನೆಂದು ನಿಮಗೆ ಹೇಳುತ್ತೇನೆ; ಏಕೆಂದರೆ ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು ಮತ್ತು ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.”
15 ಬಳಿಕ ಜನರು ತಮ್ಮ ಶಿಶುಗಳನ್ನು ಅವನಿಂದ ಮುಟ್ಟಿಸಬೇಕೆಂದು ಅವನ ಬಳಿಗೆ ತರಲಾರಂಭಿಸಿದರು; ಆದರೆ ಇದನ್ನು ನೋಡಿ ಶಿಷ್ಯರು ಅವರನ್ನು ಗದರಿಸತೊಡಗಿದರು. 16 ಆದರೆ ಯೇಸು ಆ ಮಕ್ಕಳನ್ನು ತನ್ನ ಬಳಿಗೆ ಕರೆದು, “ಚಿಕ್ಕ ಮಕ್ಕಳನ್ನು ನನ್ನ ಬಳಿಗೆ ಬರಗೊಡಿಸಿರಿ, ಅವುಗಳನ್ನು ತಡೆಯಲು ಪ್ರಯತ್ನಿಸಬೇಡಿ. ಏಕೆಂದರೆ ದೇವರ ರಾಜ್ಯವು ಇಂಥವರಿಗೆ ಸೇರಿದ್ದಾಗಿದೆ. 17 ಯಾವನು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವುದಿಲ್ಲವೋ ಅವನು ಅದರಲ್ಲಿ ಸೇರುವುದೇ ಇಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ” ಎಂದನು.
18 ಒಬ್ಬ ಅಧಿಕಾರಿಯು ಅವನಿಗೆ, “ಒಳ್ಳೇ ಬೋಧಕನೇ, ಏನು ಮಾಡಿದರೆ ನಾನು ನಿತ್ಯಜೀವಕ್ಕೆ ಬಾಧ್ಯನಾಗುತ್ತೇನೆ?” ಎಂದು ಪ್ರಶ್ನಿಸಿದನು. 19 ಯೇಸು ಅವನಿಗೆ, “ನನ್ನನ್ನು ಒಳ್ಳೆಯವನೆಂದು ಏಕೆ ಕರೆಯುತ್ತೀ? ದೇವರೊಬ್ಬನೇ ಹೊರತು ಬೇರೆ ಯಾವನೂ ಒಳ್ಳೆಯವನಲ್ಲ. 20 ‘ವ್ಯಭಿಚಾರ ಮಾಡಬಾರದು, ನರಹತ್ಯ ಮಾಡಬಾರದು, ಕದಿಯಬಾರದು, ಸುಳ್ಳು ಸಾಕ್ಷಿಯನ್ನು ಹೇಳಬಾರದು, ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು’ ಎಂಬ ಆಜ್ಞೆಗಳು ನಿನಗೆ ತಿಳಿದಿವೆಯಲ್ಲಾ” ಎಂದು ಹೇಳಿದನು. 21 ಅದಕ್ಕೆ ಅವನು, “ನಾನು ಚಿಕ್ಕಂದಿನಿಂದಲೂ ಇವೆಲ್ಲವುಗಳನ್ನು ಪಾಲಿಸುತ್ತಾ ಬಂದಿದ್ದೇನೆ” ಎಂದನು. 22 ಇದನ್ನು ಕೇಳಿ ಯೇಸು ಅವನಿಗೆ, “ನಿನ್ನಲ್ಲಿ ಇನ್ನೂ ಒಂದು ಕೊರತೆ ಇದೆ. ನಿನ್ನ ಬಳಿ ಇರುವುದನ್ನೆಲ್ಲ ಮಾರಿ ಬಡವರಿಗೆ ಹಂಚಿಕೊಡು; ಆಗ ಸ್ವರ್ಗದಲ್ಲಿ ನಿನಗೆ ಸಂಪತ್ತಿರುವುದು ಮತ್ತು ನೀನು ಬಂದು ನನ್ನ ಹಿಂಬಾಲಕನಾಗು” ಎಂದು ಹೇಳಿದನು. 23 ಅವನು ಬಹಳ ಐಶ್ವರ್ಯವಂತನಾಗಿದ್ದ ಕಾರಣ ಇದನ್ನು ಕೇಳಿ ತುಂಬ ದುಃಖಿತನಾದನು.
24 ಯೇಸು ಅವನನ್ನು ನೋಡಿ, “ಹಣವಂತರು ದೇವರ ರಾಜ್ಯವನ್ನು ಸೇರುವುದು ಎಷ್ಟು ಕಷ್ಟಕರವಾಗಿರುವ ಸಂಗತಿ! 25 ಒಬ್ಬ ಐಶ್ವರ್ಯವಂತನು ದೇವರ ರಾಜ್ಯವನ್ನು ಸೇರುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗಿಹೋಗುವುದು ಹೆಚ್ಚು ಸುಲಭ” ಅಂದನು. 26 ಇದನ್ನು ಕೇಳಿಸಿಕೊಂಡವರು, “ಹಾಗಾದರೆ ರಕ್ಷಿಸಲ್ಪಡುವ ಸಾಧ್ಯತೆ ಯಾರಿಗಿರಬಲ್ಲದು?” ಎಂದು ಕೇಳಿದರು. 27 ಅದಕ್ಕೆ ಅವನು, “ಮನುಷ್ಯರಿಗೆ ಅಸಾಧ್ಯವಾಗಿರುವ ವಿಷಯಗಳು ದೇವರಿಗೆ ಸಾಧ್ಯ” ಎಂದು ಹೇಳಿದನು. 28 ಆಗ ಪೇತ್ರನು, “ಇಗೋ, ನಾವು ನಮ್ಮದನ್ನೆಲ್ಲಾ ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ” ಎಂದು ಹೇಳಿದನು. 29 ಅದಕ್ಕೆ ಯೇಸು ಅವರಿಗೆ, “ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ತನ್ನ ಮನೆ, ಹೆಂಡತಿ, ಸಹೋದರರು, ಹೆತ್ತವರು ಅಥವಾ ಮಕ್ಕಳನ್ನು ದೇವರ ರಾಜ್ಯದ ನಿಮಿತ್ತವಾಗಿ ಬಿಟ್ಟಿರುವ ಯಾವನೂ 30 ಈ ಸಮಯಾವಧಿಯಲ್ಲಿ ಅನೇಕ ಪಾಲುಗಳಷ್ಟು ಹೆಚ್ಚಾಗಿರುವುದನ್ನು ಮತ್ತು ಬರಲಿರುವ ವಿಷಯಗಳ ವ್ಯವಸ್ಥೆಯಲ್ಲಿ ನಿತ್ಯಜೀವವನ್ನು ಯಾವ ವಿಧದಲ್ಲಾದರೂ ಪಡೆಯದಿರುವುದಿಲ್ಲ” ಎಂದು ಹೇಳಿದನು.
31 ಬಳಿಕ ಅವನು ಹನ್ನೆರಡು ಮಂದಿಯನ್ನು ಪಕ್ಕಕ್ಕೆ ಕರೆದು ಅವರಿಗೆ, “ನೋಡಿರಿ, ನಾವು ಯೆರೂಸಲೇಮಿಗೆ ಹೋಗುತ್ತಿದ್ದೇವೆ ಮತ್ತು ಮನುಷ್ಯಕುಮಾರನ ಕುರಿತು ಪ್ರವಾದಿಗಳು ಬರೆದಿರುವ ಎಲ್ಲ ವಿಷಯಗಳು ಪೂರ್ಣಗೊಳ್ಳುವವು. 32 ಉದಾಹರಣೆಗೆ, ಅವನು ಅನ್ಯಜನರ ಕೈಗೆ ಒಪ್ಪಿಸಲ್ಪಡುವನು; ಅವರು ಅವನನ್ನು ಅಪಹಾಸ್ಯಮಾಡಿ, ತುಚ್ಛೀಕರಿಸಿ, ಅವನ ಮೇಲೆ ಉಗುಳುವರು 33 ಮತ್ತು ಅವನನ್ನು ಕೊರಡೆಗಳಿಂದ ಹೊಡೆದ ಬಳಿಕ ಕೊಲ್ಲುವರು. ಆದರೆ ಮೂರನೆಯ ದಿನದಲ್ಲಿ ಅವನು ಏಳುವನು” ಎಂದನು. 34 ಆದರೆ ಈ ವಿಷಯಗಳಲ್ಲಿ ಯಾವುದೂ ಅವರಿಗೆ ಅರ್ಥವಾಗಲಿಲ್ಲ. ಈ ಹೇಳಿಕೆ ಅವರಿಂದ ಮರೆಯಾಗಿತ್ತು ಮತ್ತು ಹೇಳಿದ ವಿಷಯಗಳು ಅವರಿಗೆ ತಿಳಿಯಲಿಲ್ಲ.
35 ಅವನು ಯೆರಿಕೋವಿನ ಸಮೀಪಕ್ಕೆ ಬರುತ್ತಿದ್ದಾಗ ಒಬ್ಬ ಕುರುಡನು ದಾರಿಯ ಬದಿಯಲ್ಲಿ ಕುಳಿತುಕೊಂಡು ಭಿಕ್ಷೆಬೇಡುತ್ತಿದ್ದನು. 36 ಅಲ್ಲಿಂದ ಜನರು ಗುಂಪಾಗಿ ಹೋಗುತ್ತಿರುವ ಶಬ್ದವನ್ನು ಅವನು ಕೇಳಿಸಿಕೊಂಡಾಗ ‘ಇದೇನು’ ಎಂದು ವಿಚಾರಿಸಿದನು. 37 ಅವರು ಅವನಿಗೆ, “ನಜರೇತಿನ ಯೇಸು ಹಾದುಹೋಗುತ್ತಿದ್ದಾನೆ” ಎಂದು ತಿಳಿಸಿದರು. 38 ಆಗ ಅವನು, “ಯೇಸುವೇ, ದಾವೀದನ ಕುಮಾರನೇ, ನನಗೆ ಕರುಣೆ ತೋರಿಸು” ಎಂದು ಕೂಗಿಹೇಳಿದನು. 39 ಮುಂದೆ ಹೋಗುತ್ತಿದ್ದವರು ಸುಮ್ಮನಿರುವಂತೆ ಅವನನ್ನು ಗದರಿಸಿದರೂ ಅವನು, “ದಾವೀದನ ಕುಮಾರನೇ, ನನಗೆ ಕರುಣೆ ತೋರಿಸು” ಎಂದು ಇನ್ನಷ್ಟು ಹೆಚ್ಚು ಕೂಗತೊಡಗಿದನು. 40 ಆಗ ಯೇಸು ನಿಂತು ಅವನನ್ನು ತನ್ನ ಬಳಿಗೆ ಕರೆದುಕೊಂಡು ಬರುವಂತೆ ಅಪ್ಪಣೆಕೊಟ್ಟನು. ಅವನು ಹತ್ತಿರ ಬಂದಾಗ ಯೇಸು ಅವನಿಗೆ, 41 “ನಾನು ನಿನಗಾಗಿ ಏನು ಮಾಡಬೇಕೆಂದು ನೀನು ಬಯಸುತ್ತೀ?” ಎಂದು ಕೇಳಿದನು. ಅದಕ್ಕೆ ಅವನು, “ಸ್ವಾಮಿ, ನನಗೆ ದೃಷ್ಟಿ ಬರುವಂತೆ ಮಾಡು” ಎಂದನು. 42 ಆಗ ಯೇಸು ಅವನಿಗೆ, “ನಿನಗೆ ದೃಷ್ಟಿ ಬರಲಿ; ನಿನ್ನ ನಂಬಿಕೆಯು ನಿನ್ನನ್ನು ಸ್ವಸ್ಥಪಡಿಸಿದೆ” ಎಂದು ಹೇಳಿದನು. 43 ಕೂಡಲೆ ಅವನಿಗೆ ದೃಷ್ಟಿ ಬಂತು ಮತ್ತು ಅವನು ದೇವರನ್ನು ಮಹಿಮೆಪಡಿಸುತ್ತಾ ಅವನನ್ನು ಹಿಂಬಾಲಿಸಿದನು. ಜನರೆಲ್ಲರು ಇದನ್ನು ನೋಡಿ ದೇವರನ್ನು ಸ್ತುತಿಸಿದರು.