ಮಾರ್ಕ
13 ಅವನು ದೇವಾಲಯದಿಂದ ಹೊರಗೆ ಹೋಗುತ್ತಿದ್ದಾಗ ಅವನ ಶಿಷ್ಯರಲ್ಲೊಬ್ಬನು ಅವನಿಗೆ, “ಬೋಧಕನೇ ನೋಡು! ಎಂತಹ ಕಲ್ಲುಗಳು! ಎಂತಹ ಕಟ್ಟಡಗಳು!” ಎಂದು ಹೇಳಿದನು. 2 ಆದರೆ ಯೇಸು ಅವನಿಗೆ, “ನೀನು ಈ ಮಹಾಕಟ್ಟಡಗಳನ್ನು ನೋಡುತ್ತೀಯೊ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವುದಿಲ್ಲ; ಎಲ್ಲವೂ ಕೆಡವಲ್ಪಡುವುದು” ಅಂದನು.
3 ಅವನು ಆಲೀವ್ ಮರಗಳ ಗುಡ್ಡದ ಮೇಲೆ ದೇವಾಲಯಕ್ಕೆ ಎದುರಾಗಿ ಕೂತಿದ್ದಾಗ ಪೇತ್ರ ಯಾಕೋಬ ಯೋಹಾನ ಅಂದ್ರೆಯರು ಪ್ರತ್ಯೇಕವಾಗಿ ಅವನಿಗೆ, 4 “ಈ ಸಂಗತಿಗಳು ಯಾವಾಗ ಸಂಭವಿಸುವವು ಮತ್ತು ಇವೆಲ್ಲವೂ ಕೊನೆಗೊಳ್ಳಲಿಕ್ಕಿರುವಾಗ ಯಾವ ಸೂಚನೆ ಇರುವುದು? ನಮಗೆ ಹೇಳು” ಎಂದು ಕೇಳಿದರು. 5 ಅದಕ್ಕೆ ಯೇಸು ಅವರಿಗೆ ಹೇಳಿದ್ದು: “ನಿಮ್ಮನ್ನು ಯಾರೂ ತಪ್ಪುದಾರಿಗೆ ಎಳೆಯದಂತೆ ಎಚ್ಚರವಾಗಿರಿ. 6 ಅನೇಕರು ನನ್ನ ಹೆಸರಿನಲ್ಲಿ ಬಂದು ‘ನಾನೇ ಅವನು’ ಎಂದು ಹೇಳಿ ಅನೇಕರನ್ನು ತಪ್ಪುದಾರಿಗೆ ಎಳೆಯುವರು. 7 ಮಾತ್ರವಲ್ಲದೆ ನೀವು ಯುದ್ಧಗಳಾಗುವುದನ್ನೂ ಯುದ್ಧಗಳ ಸುದ್ದಿಯನ್ನೂ ಕೇಳಿಸಿಕೊಳ್ಳುವಾಗ ಭಯಪಡಬೇಡಿರಿ; ಈ ಸಂಗತಿಗಳು ಸಂಭವಿಸಲೇಬೇಕು, ಆದರೆ ಇದು ಇನ್ನೂ ಅಂತ್ಯವಲ್ಲ.
8 “ಜನಾಂಗಕ್ಕೆ ವಿರುದ್ಧವಾಗಿ ಜನಾಂಗವೂ ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವವು; ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಭೂಕಂಪಗಳಾಗುವವು; ಆಹಾರದ ಕೊರತೆಗಳಿರುವವು. ಇವು ಸಂಕಟದ ಶೂಲೆಯ ಪ್ರಾರಂಭ.
9 “ನೀವು ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ; ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ಸ್ಥಳಿಕ ನ್ಯಾಯಾಲಯಗಳಿಗೆ ಒಪ್ಪಿಸುವರು, ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು, ರಾಜ್ಯಪಾಲರ ಮುಂದೆಯೂ ಅರಸರ ಮುಂದೆಯೂ ನಿಲ್ಲಿಸುವರು; ಇದು ಅವರಿಗೆ ಸಾಕ್ಷಿಯಾಗಿರುವುದು. 10 ಇದಲ್ಲದೆ ಎಲ್ಲ ಜನಾಂಗಗಳಲ್ಲಿ ಸುವಾರ್ತೆಯು ಮೊದಲು ಸಾರಲ್ಪಡಬೇಕು. 11 ಅವರು ನಿಮ್ಮನ್ನು ಒಪ್ಪಿಸಲಿಕ್ಕಾಗಿ ಹಿಡಿದುಕೊಂಡು ಹೋಗುವಾಗ ಏನು ಮಾತಾಡಬೇಕು ಎಂದು ಮುಂಚಿತವಾಗಿಯೇ ಚಿಂತಿಸಬೇಡಿರಿ; ಆ ಗಳಿಗೆಯಲ್ಲಿ ನಿಮಗೆ ಏನು ಕೊಡಲ್ಪಡುವುದೋ ಅದನ್ನು ಮಾತಾಡಿರಿ; ಏಕೆಂದರೆ ಮಾತಾಡುವವರು ನೀವಲ್ಲ, ಪವಿತ್ರಾತ್ಮವೇ. 12 ಇದಲ್ಲದೆ ಸಹೋದರನು ಸಹೋದರನನ್ನು ತಂದೆಯು ಮಗನನ್ನು ಮರಣಕ್ಕೆ ಒಪ್ಪಿಸುವರು ಮತ್ತು ಮಕ್ಕಳು ಹೆತ್ತವರಿಗೆ ವಿರುದ್ಧವಾಗಿ ಎದ್ದು ಅವರನ್ನು ಕೊಲ್ಲಿಸುವರು; 13 ಮತ್ತು ನನ್ನ ಹೆಸರಿನ ನಿಮಿತ್ತ ನೀವು ಎಲ್ಲ ಜನರ ದ್ವೇಷಕ್ಕೆ ಗುರಿಯಾಗುವಿರಿ. ಆದರೆ ಕಡೇ ವರೆಗೆ ತಾಳಿಕೊಂಡಿರುವವನೇ ರಕ್ಷಿಸಲ್ಪಡುವನು.
14 “ಆದರೆ ಹಾಳುಮಾಡುವ ಅಸಹ್ಯ ವಸ್ತುವು ನಿಲ್ಲಬಾರದ ಸ್ಥಳದಲ್ಲಿ ನಿಂತಿರುವುದನ್ನು ನೀವು ನೋಡುವಾಗ (ಇದನ್ನು ಓದುವವನು ವಿವೇಚನೆಯನ್ನು ಉಪಯೋಗಿಸಲಿ) ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗತೊಡಗಲಿ. 15 ಮಾಳಿಗೆಯ ಮೇಲೆ ಇರುವವನು ಕೆಳಗೆ ಇಳಿಯದಿರಲಿ; ಅಥವಾ ಏನನ್ನಾದರೂ ತೆಗೆದುಕೊಳ್ಳಲು ತನ್ನ ಮನೆಯೊಳಗೆ ಹೋಗದಿರಲಿ; 16 ಹೊಲದಲ್ಲಿರುವವನು ತನ್ನ ಮೇಲಂಗಿಯನ್ನು ತೆಗೆದುಕೊಳ್ಳುವುದಕ್ಕೆ ಹಿಂದಿರುಗದಿರಲಿ. 17 ಆ ದಿನಗಳಲ್ಲಿ ಗರ್ಭಿಣಿಯರಿಗೂ ಮೊಲೆಕೂಸಿರುವ ಸ್ತ್ರೀಯರಿಗೂ ಆಗುವ ಗತಿಯನ್ನು ಏನು ಹೇಳಲಿ! 18 ನಿಮ್ಮ ಪಲಾಯನವು ಚಳಿಗಾಲದಲ್ಲಿ ಆಗದಂತೆ ಪ್ರಾರ್ಥಿಸುತ್ತಾ ಇರಿ; 19 ಆ ದಿನಗಳು ಸಂಕಟದ ದಿನಗಳಾಗಿರುವವು; ದೇವರು ಮಾಡಿದ ಸೃಷ್ಟಿಯ ಆರಂಭದಿಂದ ಆ ಸಮಯದ ವರೆಗೂ ಅಂಥ ಸಂಕಟವು ಸಂಭವಿಸಿಲ್ಲ ಮತ್ತು ಇನ್ನು ಮುಂದೆಯೂ ಸಂಭವಿಸುವುದಿಲ್ಲ. 20 ವಾಸ್ತವದಲ್ಲಿ, ಯೆಹೋವನು ಆ ದಿನಗಳನ್ನು ಕಡಮೆಮಾಡಿರದಿದ್ದರೆ ಯಾವನೂ ಉಳಿಯನು. ಆದರೆ ತಾನು ಆಯ್ದುಕೊಂಡಿರುವವರ ನಿಮಿತ್ತವಾಗಿ ಆತನು ಆ ದಿನಗಳನ್ನು ಕಡಮೆಮಾಡಿದ್ದಾನೆ.
21 “ಆ ಸಮಯದಲ್ಲಿ ಯಾರಾದರೂ ನಿಮಗೆ ‘ಇಗೋ ಕ್ರಿಸ್ತನು ಇಲ್ಲಿದ್ದಾನೆ,’ ‘ಅಗೋ ಅಲ್ಲಿದ್ದಾನೆ’ ಎಂದು ಹೇಳುವುದಾದರೆ ಅದನ್ನು ನಂಬಬೇಡಿ. 22 ಏಕೆಂದರೆ ಸುಳ್ಳು ಕ್ರಿಸ್ತರೂ ಸುಳ್ಳು ಪ್ರವಾದಿಗಳೂ ಎದ್ದು ಸಾಧ್ಯವಾದರೆ ಆಯ್ದುಕೊಳ್ಳಲ್ಪಟ್ಟವರನ್ನು ದಾರಿತಪ್ಪಿಸುವುದಕ್ಕಾಗಿ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿತೋರಿಸುವರು. 23 ಆದುದರಿಂದ ನೀವು ಜಾಗರೂಕರಾಗಿರಿ; ನಾನು ಎಲ್ಲ ವಿಷಯಗಳನ್ನು ನಿಮಗೆ ಮುಂದಾಗಿಯೇ ತಿಳಿಸಿದ್ದೇನೆ.
24 “ಇದಲ್ಲದೆ ಆ ದಿನಗಳಲ್ಲಿ ಆ ಸಂಕಟವು ತೀರಿದ ಮೇಲೆ ಸೂರ್ಯನು ಕತ್ತಲಾಗಿ ಹೋಗುವನು, ಚಂದ್ರನು ಬೆಳಕು ಕೊಡದೆ ಇರುವನು, 25 ನಕ್ಷತ್ರಗಳು ಆಕಾಶದೊಳಗಿಂದ ಉದುರುತ್ತಿರುವವು ಮತ್ತು ಆಕಾಶದಲ್ಲಿರುವ ಶಕ್ತಿಗಳು ಕುಲುಕಿಸಲ್ಪಡುವವು. 26 ಆಗ ಅವರು ಮನುಷ್ಯಕುಮಾರನು ಮೇಘಗಳಲ್ಲಿ ಮಹಾ ಶಕ್ತಿಯಿಂದಲೂ ಮಹಿಮೆಯಿಂದಲೂ ಬರುವುದನ್ನು ಕಾಣುವರು. 27 ಮತ್ತು ಅವನು ದೇವದೂತರನ್ನು ಕಳುಹಿಸಿ ದೇವರು ಆಯ್ದುಕೊಂಡ ತನ್ನವರನ್ನು ಭೂಮಿಯ ಕಟ್ಟಕಡೆಯಿಂದ ಆಕಾಶದ ಕಟ್ಟಕಡೆಯ ವರೆಗೆ ನಾಲ್ಕೂ ದಿಕ್ಕುಗಳಿಂದ ಒಟ್ಟುಗೂಡಿಸುವನು.
28 “ಅಂಜೂರದ ಮರದಿಂದ ದೃಷ್ಟಾಂತವನ್ನು ಕಲಿಯಿರಿ: ಅದರ ಎಳೆಯ ಕೊಂಬೆಯು ಕೋಮಲವಾಗಿ ಬೆಳೆದು ಎಲೆಗಳನ್ನು ಬಿಡುವಾಗ ಬೇಸಿಗೆಯು ಸಮೀಪಿಸಿದೆ ಎಂಬುದನ್ನು ನೀವು ತಿಳಿದುಕೊಳ್ಳುತ್ತೀರಿ. 29 ತದ್ರೀತಿಯಲ್ಲಿ ಈ ಸಂಗತಿಗಳು ಸಂಭವಿಸುತ್ತಿರುವುದನ್ನು ನೀವು ನೋಡುವಾಗ ಮನುಷ್ಯಕುಮಾರನು ಹತ್ತಿರದಲ್ಲಿದ್ದಾನೆ, ಬಾಗಿಲ ಬಳಿಯೇ ಇದ್ದಾನೆ ಎಂಬುದನ್ನು ತಿಳಿದುಕೊಳ್ಳಿರಿ. 30 ಈ ಎಲ್ಲ ಸಂಗತಿಗಳು ಸಂಭವಿಸುವ ತನಕ ಈ ಸಂತತಿಯು ಅಳಿದು ಹೋಗುವುದೇ ಇಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ. 31 ಆಕಾಶವೂ ಭೂಮಿಯೂ ಅಳಿದು ಹೋಗುವವು, ಆದರೆ ನನ್ನ ಮಾತುಗಳು ಅಳಿದು ಹೋಗುವುದಿಲ್ಲ.
32 “ಆ ದಿನದ ಅಥವಾ ಗಳಿಗೆಯ ವಿಷಯವಾಗಿ ತಂದೆಗೆ ಹೊರತು ಮತ್ತಾರಿಗೂ ತಿಳಿದಿಲ್ಲ; ಸ್ವರ್ಗದಲ್ಲಿರುವ ದೇವದೂತರಿಗಾಗಲಿ ಮಗನಿಗಾಗಲಿ ತಿಳಿದಿಲ್ಲ. 33 ಆ ನೇಮಿತ ಸಮಯವು ಯಾವಾಗ ಎಂಬುದು ನಿಮಗೆ ತಿಳಿಯದ ಕಾರಣ ಅದಕ್ಕಾಗಿ ನೋಡುತ್ತಾ ಇರಿ, ಎಚ್ಚರವಾಗಿ ಇರಿ. 34 ಅದು ದೂರ ದೇಶಕ್ಕೆ ಪ್ರಯಾಣಿಸುವ ಒಬ್ಬ ಮನುಷ್ಯನಿಗೆ ಸಮಾನವಾಗಿದೆ. ಅವನು ತನ್ನ ಮನೆಯನ್ನು ಬಿಟ್ಟುಹೋಗುವಾಗ ತನ್ನ ಆಳುಗಳಿಗೆ ಅಧಿಕಾರವನ್ನು ಕೊಟ್ಟು ಪ್ರತಿಯೊಬ್ಬನಿಗೆ ಅವನವನ ಕೆಲಸವನ್ನು ನೇಮಿಸಿ ಬಾಗಿಲು ಕಾಯುವವನಿಗೆ ಸದಾ ಎಚ್ಚರವಾಗಿರುವಂತೆ ಆಜ್ಞಾಪಿಸಿದನು. 35 ಆದುದರಿಂದ ಮನೆಯ ಯಜಮಾನನು ಸಂಜೆಯಲ್ಲಿಯೊ ಮಧ್ಯರಾತ್ರಿಯಲ್ಲಿಯೊ ಕೋಳಿ ಕೂಗುವಾಗಲೊ ಬೆಳಗಾಗುವಾಗಲೊ ಯಾವಾಗ ಬರುತ್ತಾನೆಂಬುದು ನಿಮಗೆ ತಿಳಿದಿಲ್ಲದ ಕಾರಣ ಸದಾ ಎಚ್ಚರವಾಗಿರಿ; 36 ಇಲ್ಲವಾದರೆ ಅವನು ಫಕ್ಕನೆ ಬರುವಾಗ ನೀವು ನಿದ್ರಿಸುತ್ತಿರುವುದನ್ನು ಕಂಡಾನು. 37 ನಾನು ನಿಮಗೆ ಹೇಳುವುದನ್ನು ಎಲ್ಲರಿಗೂ ಹೇಳುತ್ತೇನೆ, ಸದಾ ಎಚ್ಚರವಾಗಿರಿ.”