ಯೆಹೋಶುವ
7 ಯೆಹೂದ ಕುಲದ ಜೆರಹನ ಮನೆತನದ ಜಬ್ದೀಯ ಮೊಮ್ಮಗನು ಕರ್ಮೀಯ ಮಗನು ಆಗಿದ್ದ ಆಕಾನ+ ಸಂಪೂರ್ಣ ನಾಶ ಮಾಡೋಕೆ ಹೇಳಿದ್ದ ವಸ್ತುಗಳಲ್ಲಿ ಕೆಲವನ್ನ ತಗೊಂಡಿದ್ದ.+ ಇದ್ರಿಂದ ಎಲ್ಲ ಇಸ್ರಾಯೇಲ್ಯರು ನಂಬಿಕೆ ದ್ರೋಹ ಮಾಡಿದ ಹಾಗಾಯ್ತು. ಹಾಗಾಗಿ ಇಸ್ರಾಯೇಲ್ಯರ ಮೇಲೆ ಯೆಹೋವನ ರೋಷಾಗ್ನಿ ಹೊತ್ತಿ ಉರಿತು.+
2 ಆಮೇಲೆ ಯೆಹೋಶುವ ಯೆರಿಕೋನಿಂದ ಆಯಿ+ ಅನ್ನೋ ಪಟ್ಟಣಕ್ಕೆ ಕೆಲವು ಗಂಡಸ್ರನ್ನ ಕಳಿಸಿದ. ಅದು ಬೇತಾವೆನಿನ ಹತ್ರ ಬೆತೆಲಿನ+ ಪೂರ್ವಕ್ಕೆ ಇತ್ತು. ಅವನು ಅವ್ರಿಗೆ “ಆ ಪಟ್ಟಣಕ್ಕೆ ಹೋಗಿ ಗೂಢಚಾರಿಕೆ ಮಾಡಿ” ಅಂದ. ಆಗ ಅವರು ಆಯಿಗೆ ಹೋಗಿ ಗೂಢಚಾರಿಕೆ ಮಾಡಿದ್ರು. 3 ಅವರು ವಾಪಸ್ ಯೆಹೋಶುವನ ಹತ್ರ ಬಂದು “ಎಲ್ಲ ಜನ್ರು ಅಲ್ಲಿಗೆ ಹೋಗಬೇಕಾಗಿಲ್ಲ. ಆಯಿಯನ್ನ ಸೋಲಿಸೋಕೆ ಸುಮಾರು ಎರಡ್ರಿಂದ ಮೂರು ಸಾವಿರ ಜನ ಸಾಕು. ಎಲ್ರನ್ನೂ ಕಳಿಸಿ ಯಾಕೆ ಅವ್ರಿಗೆ ಸುಸ್ತು ಮಾಡಬೇಕು? ಅಲ್ಲಿ ತುಂಬ ಕಮ್ಮಿ ಜನ ಇದ್ದಾರೆ” ಅಂದ್ರು.
4 ಹಾಗಾಗಿ ಸುಮಾರು 3,000 ಜನ ಅಲ್ಲಿಗೆ ಹೋದ್ರು. ಆದ್ರೆ ಅವರು ಆಯಿ ಜನ್ರ ಮುಂದೆ ಸೋತು ಓಡಿ ಹೋಗಬೇಕಾಯ್ತು.+ 5 ಆಯಿ ಪಟ್ಟಣದವರು 36 ಇಸ್ರಾಯೇಲ್ಯರನ್ನ ಕೊಂದುಹಾಕಿದ್ರು. ನಗರದ ಬಾಗಿಲಿಂದ ಹಿಡಿದು ಷೆಬಾರಿಮಿನ* ತನಕ ಅವ್ರನ್ನ ಅಟ್ಟಿಸ್ಕೊಂಡು ದಾರಿಯುದ್ದಕ್ಕೂ ಅವ್ರನ್ನ ಕೊಲ್ತಾ ಬಂದ್ರು. ಇದ್ರಿಂದ ಇಸ್ರಾಯೇಲ್ಯರ ಧೈರ್ಯ* ಕರಗಿ ನೀರಾಯ್ತು.
6 ಆಗ ಯೆಹೋಶುವ ಮತ್ತು ಇಸ್ರಾಯೇಲಿನ ಹಿರಿಯರು ದುಃಖದಿಂದ ತಮ್ಮ ಬಟ್ಟೆಗಳನ್ನ ಹರ್ಕೊಂಡು ಯೆಹೋವನ ಮಂಜೂಷದ ಮುಂದೆ ನೆಲಕ್ಕೆ ಬಿದ್ದು ಮುಖ ಕೆಳಗೆ ಮಾಡ್ಕೊಂಡು ಸಂಜೆ ತನಕ ಹಾಗೇ ಇದ್ರು. ಅವರು ತಮ್ಮ ತಲೆ ಮೇಲೆ ಧೂಳು ಹಾಕೊಳ್ತಾ ಇದ್ರು. 7 ಯೆಹೋಶುವ ಹೀಗಂದ: “ಅಯ್ಯೋ, ವಿಶ್ವದ ರಾಜ ಯೆಹೋವನೇ, ಅಮೋರಿಯರಿಂದ ನಾಶ ಆಗೋಕೆ ಯೋರ್ದನನ್ನ ದಾಟಿಸಿ ನಮ್ಮನ್ನ ಇಲ್ಲಿ ತನಕ ಕರ್ಕೊಂಡು ಬಂದ್ಯಾ? ಇದಕ್ಕಿಂತ ನಾವು ಯೋರ್ದನಿನ ಆ ಕಡೆನೇ* ಇದ್ದಿದ್ರೆ ಚೆನ್ನಾಗಿ ಇರ್ತಿತ್ತು! 8 ಯೆಹೋವ, ನನ್ನನ್ನ ಕ್ಷಮಿಸು. ಇಸ್ರಾಯೇಲ್ಯರು ಶತ್ರುಗಳಿಗೆ ಹೆದರಿ* ಓಡಿಹೋಗಿದ್ರ ಬಗ್ಗೆ ನಾನೇನು ಹೇಳ್ಲಿ? 9 ಕಾನಾನ್ಯರಿಗೆ, ಆ ದೇಶದ ಬೇರೆ ಜನ್ರಿಗೆ ಈ ವಿಷ್ಯ ಗೊತ್ತಾದ್ರೆ ಅವರು ನಮ್ಮ ಮೇಲೆ ದಾಳಿ ಮಾಡಿ ಭೂಮಿ ಮೇಲೆ ನಮ್ಮ ಹೆಸ್ರೇ ಇಲ್ಲದ ಹಾಗೆ ಮಾಡ್ತಾರೆ. ಆಗ ನಿನ್ನ ಮಹಾನ್ ಹೆಸ್ರಿಗೆ ಕಳಂಕ ಬರಲ್ವಾ?”+
10 ಯೆಹೋವ ಯೆಹೋಶುವಗೆ “ಎದ್ದೇಳು! ಯಾಕೆ ನೀನು ಮುಖ ಕೆಳಗೆ ಮಾಡ್ಕೊಂಡು ಬಿದ್ದಿದ್ದೀಯ? 11 ಇಸ್ರಾಯೇಲ್ಯರು ಪಾಪ ಮಾಡಿದ್ದಾರೆ. ನಾನು ಅವ್ರ ಜೊತೆ ಮಾಡ್ಕೊಂಡಿದ್ದ ಒಪ್ಪಂದನ ಮುರಿದಿದ್ದಾರೆ.+ ಪೂರ್ತಿ ನಾಶ ಮಾಡೋಕೆ ಹೇಳಿದ್ದ ವಸ್ತುಗಳಿಂದ+ ಕೆಲವನ್ನ ಕದ್ದಿದ್ದಾರೆ.+ ಅದನ್ನ ಗುಟ್ಟಾಗಿ ತಮ್ಮ ವಸ್ತುಗಳ ಮಧ್ಯ ಬಚ್ಚಿಟ್ಟಿದ್ದಾರೆ.+ 12 ಹಾಗಾಗಿ ಇಸ್ರಾಯೇಲ್ಯರಿಗೆ ವಿರೋಧಿಗಳ ಮುಂದೆ ನಿಲ್ಲೋಕೆ ಆಗಲ್ಲ. ಅವರು ನಾಶಕ್ಕೆ ಗುರಿ ಆಗಿರೋದ್ರಿಂದ ತಮ್ಮ ಶತ್ರುಗಳಿಗೆ ಹೆದರಿ ಓಡಿಹೋಗ್ತಾರೆ. ನಾಶ ಮಾಡಬೇಕಾಗಿ ಇರೋದನ್ನ ನೀವು ಸಂಪೂರ್ಣ ನಾಶಮಾಡೋ ತನಕ ನಾನು ನಿಮ್ಮ ಜೊತೆ ಇರಲ್ಲ.+ 13 ನೀನು ಜನ್ರನ್ನ ಪವಿತ್ರಮಾಡು!+ ಅವ್ರಿಗೆ ಹೀಗೆ ಹೇಳು ‘ನಾಳೆಗೋಸ್ಕರ ನಿಮ್ಮನ್ನ ಪವಿತ್ರ ಮಾಡ್ಕೊಳ್ಳಿ. ಯಾಕಂದ್ರೆ ಇಸ್ರಾಯೇಲಿನ ದೇವರಾಗಿರೋ ಯೆಹೋವ ಹೀಗೆ ಹೇಳ್ತಾನೆ: “ಇಸ್ರಾಯೇಲೇ, ನಾಶ ಆಗಬೇಕಾಗಿರೋದು ನಿಮ್ಮ ಮಧ್ಯದಲ್ಲಿದೆ. ನಾಶ ಮಾಡಬೇಕಾಗಿದನ್ನ ನೀವು ಪೂರ್ತಿ ನಾಶಮಾಡೋ ತನಕ ನಿಮ್ಮ ಶತ್ರುಗಳ ಮುಂದೆ ನಿಮಗೆ ನಿಲ್ಲೋಕೆ ಆಗಲ್ಲ. 14 ಬೆಳಿಗ್ಗೆ ನಿಮ್ಮನಿಮ್ಮ ಕುಲದ ಪ್ರಕಾರ ಬಂದು ನಿಲ್ಲಬೇಕು. ಯಾವ ಕುಲವನ್ನ ಯೆಹೋವ ಸೂಚಿಸ್ತಾನೋ+ ಆ ಕುಲದವರು ಮುಂದೆ ಬರಬೇಕು. ಆಮೇಲೆ ಅವ್ರಲ್ಲಿ ಯಾವ ಮನೆತನವನ್ನ ಯೆಹೋವ ಸೂಚಿಸ್ತಾನೋ ಆ ಮನೆತನದವರು ಮುಂದೆ ಬರಬೇಕು. ಆಮೇಲೆ ಅವ್ರಲ್ಲಿ ಯಾವ ಕುಟುಂಬದವ್ರನ್ನ ಯೆಹೋವ ಸೂಚಿಸ್ತಾನೋ ಆ ಕುಟುಂಬದವರು ಒಬ್ಬೊಬ್ರಾಗಿ ಮುಂದೆ ಬರಬೇಕು. 15 ಆಗ ನಾಶ ಮಾಡಬೇಕಿದ್ದ ವಸ್ತುಗಳ ಜೊತೆ ಸಿಕ್ಕಿಬೀಳೋ ವ್ಯಕ್ತಿಯನ್ನ ಕೊಂದು ಬೆಂಕಿಯಿಂದ ಸುಟ್ಟುಬಿಡಬೇಕು.+ ಜೊತೆಗೆ ಅವನಿಗೆ ಸೇರಿದ ಎಲ್ಲವನ್ನೂ ಸುಟ್ಟುಹಾಕಬೇಕು. ಯಾಕಂದ್ರೆ ಅವನು ಯೆಹೋವನ ಒಪ್ಪಂದವನ್ನ ಮುರಿದಿದ್ದಾನೆ.+ ಇಸ್ರಾಯೇಲಿನಲ್ಲಿ ನಾಚಿಕೆಗೆಟ್ಟ ಕೆಲಸ ಮಾಡಿದ್ದಾನೆ”’” ಅಂದನು.
16 ಯೆಹೋಶುವ ಮಾರನೇ ದಿನ ಬೆಳಿಗ್ಗೆ ಬೇಗ ಎದ್ದು ಇಸ್ರಾಯೇಲನ್ನ ಅವ್ರವ್ರ ಕುಲದ ಪ್ರಕಾರ ಕರೆದ. ದೇವರು ಯೆಹೂದ ಕುಲವನ್ನ ಸೂಚಿಸಿದನು. 17 ಆಗ ಯೆಹೂದ ಕುಲದ ಮನೆತನಗಳು ಮುಂದೆ ಬಂದ್ವು. ಅದ್ರಲ್ಲಿ ದೇವರು ಜೆರಹನ+ ಮನೆತನವನ್ನ ಸೂಚಿಸಿದನು. ಆಮೇಲೆ ಜೆರಹನ ಮನೆತನದವ್ರೆಲ್ಲ ಒಬ್ಬೊಬ್ರಾಗಿ ಮುಂದೆ ಬಂದ್ರು. ಅವ್ರಲ್ಲಿ ದೇವರು ಜಬ್ದೀಯ ಕುಟುಂಬವನ್ನ ಸೂಚಿಸಿದನು. 18 ಕೊನೇದಾಗಿ ಜಬ್ದೀಯ ಕುಟುಂಬದವ್ರೆಲ್ಲ ಒಬ್ಬೊಬ್ರಾಗಿ ಮುಂದೆ ಬಂದ್ರು. ಅವ್ರಲ್ಲಿ ದೇವರು ಯೆಹೂದ ಕುಲದ ಜೆರಹನ ಮನೆತನದ ಜಬ್ದೀಯ ಮೊಮ್ಮಗ ಕರ್ಮೀಯ ಮಗ ಆಕಾನನನ್ನ ಸೂಚಿಸಿದನು.+ 19 ಆಮೇಲೆ ಯೆಹೋಶುವ ಆಕಾನನಿಗೆ “ನನ್ನ ಮಗನೇ, ದಯವಿಟ್ಟು ನಿನ್ನ ತಪ್ಪನ್ನ ಇಸ್ರಾಯೇಲ್ ದೇವರಾದ ಯೆಹೋವನ ಮುಂದೆ ಒಪ್ಕೊಂಡು ಆತನಿಗೆ ಗೌರವ ಬರೋ ಹಾಗೆ ಮಾಡು. ದಯವಿಟ್ಟು, ನೀನೇನು ಮಾಡ್ದೆ ಅಂತ ಹೇಳು. ಅದನ್ನ ಮುಚ್ಚಿಡಬೇಡ” ಅಂದ.
20 ಆಗ ಆಕಾನ ಯೆಹೋಶುವಗೆ ಹೀಗಂದ: “ನಿಜ ಹೇಳಬೇಕಂದ್ರೆ, ಇಸ್ರಾಯೇಲ್ ದೇವರಾದ ಯೆಹೋವನ ವಿರುದ್ಧ ಪಾಪಮಾಡಿದ್ದು ನಾನೇ. 21 ನಾವು ಕೊಳ್ಳೆ ಹೊಡೆದ ವಸ್ತುಗಳ ಮಧ್ಯದಲ್ಲಿ ತುಂಬ ಚೆನ್ನಾಗಿ ಕಾಣ್ತಿದ್ದ ಶಿನಾರಿನ+ ಒಂದು ವಿಶೇಷ ಬಟ್ಟೆ, 200 ಶೆಕೆಲ್* ಬೆಳ್ಳಿ, 50 ಶೆಕೆಲ್ ತೂಕದ ಒಂದು ಬಂಗಾರದ ಗಟ್ಟಿ ನೋಡಿ ನನಗೆ ಆಸೆ ಆಯ್ತು, ಅದಕ್ಕೇ ತಗೊಂಡೆ. ಈಗ ಅದನ್ನೆಲ್ಲ ನನ್ನ ಡೇರೆ ಒಳಗೆ ಹೂತಿಟ್ಟಿದ್ದೀನಿ. ಬೆಳ್ಳಿಬಂಗಾರನೂ ಅಲ್ಲೇ ಇದೆ.”
22 ಆಗ ಯೆಹೋಶುವ ಕೂಡ್ಲೇ ಜನ್ರನ್ನ ಆಕಾನನ ಡೇರೆಗೆ ಕಳಿಸಿದ. ಅವರು ಅಲ್ಲಿಗೆ ಓಡಿಹೋದ್ರು. ಆ ಡೇರೆಯಲ್ಲಿ ಬಟ್ಟೆ, ಅದ್ರ ಅಡಿಯಲ್ಲಿ ಬೆಳ್ಳಿಬಂಗಾರ ಇತ್ತು. 23 ಅವರು ಡೇರೆಯಿಂದ ಆ ವಸ್ತುಗಳನ್ನ ತೆಗೆದು ಯೆಹೋಶುವನ ಹತ್ರ, ಎಲ್ಲ ಇಸ್ರಾಯೇಲ್ಯರ ಹತ್ರ ಬಂದು ಯೆಹೋವನ ಮುಂದೆ ಇಟ್ರು. 24 ಯೆಹೋಶುವ ಮತ್ತೆ ಎಲ್ಲ ಇಸ್ರಾಯೇಲ್ಯರು ಜೆರಹನ ಮಗ ಆಕಾನನನ್ನ+ ಬೆಳ್ಳಿಯನ್ನ ವಿಶೇಷ ಬಟ್ಟೆಯನ್ನ ಬಂಗಾರದ ಗಟ್ಟಿಯನ್ನ+ ಜೊತೆಗೆ ಅವನ ಮಕ್ಕಳನ್ನ ಹೋರಿ, ಕತ್ತೆ, ಆಡುಕುರಿಗಳನ್ನ ಡೇರೆಯನ್ನ ಅವನಿಗೆ ಸೇರಿದ ಎಲ್ಲವನ್ನ ತಗೊಂಡು ಆಕೋರ್ ಕಣಿವೆಗೆ ಬಂದ್ರು.+ 25 ಆಮೇಲೆ ಯೆಹೋಶುವ ಆಕಾನನಿಗೆ “ನೀನು ನಮ್ಮ ಮೇಲೆ ಕಷ್ಟ ಬರೋ ಹಾಗೆ ಯಾಕೆ ಮಾಡ್ದೆ?+ ಈಗ ನೋಡು ಯೆಹೋವ ನಿನ್ನ ಮೇಲೆ ಕಷ್ಟ* ತರ್ತಾನೆ” ಅಂದ. ಹಾಗೆ ಹೇಳಿದ ಕೂಡ್ಲೇ ಎಲ್ಲ ಇಸ್ರಾಯೇಲ್ಯರು ಅವ್ರ ಮೇಲೆ ಕಲ್ಲು ಎಸೆದ್ರು.+ ಆಮೇಲೆ ಅವ್ರನ್ನ ಬೆಂಕಿಯಿಂದ ಸುಟ್ಟುಹಾಕಿದ್ರು.+ ಹೀಗೆ ಅವ್ರನ್ನ ಕೊಂದ್ರು. 26 ಅವರು ಆಕಾನನ ಮೇಲೆ ಕಲ್ಲಿನ ರಾಶಿಯನ್ನೇ ಹಾಕಿದ್ರು. ಅದು ಇವತ್ತಿಗೂ ಇದೆ. ಇದಾದ ಮೇಲೆ ಯೆಹೋವನ ಕೋಪ ಶಾಂತ ಆಯ್ತು.+ ಹಾಗಾಗಿ ಆ ಜಾಗವನ್ನ ಆಕೋರ್* ಕಣಿವೆ ಅಂತಾನೇ ಕರಿತಾರೆ.