ಆಮೋಸ
6 “ಚೀಯೋನಲ್ಲಿ ಅತಿಯಾದ ಆತ್ಮವಿಶ್ವಾಸ ಇರುವವರ* ಗತಿ ಏನು ಹೇಳಲಿ!
ಸಮಾರ್ಯದ ಬೆಟ್ಟದಲ್ಲಿ ಸುರಕ್ಷಿತವಾಗಿ ಇದ್ದೀವಿ ಅಂತ ನೆನಸುವವ್ರ ಮೇಲೆ ಬರೋ ಕಷ್ಟವನ್ನ ಏನಂತ ಹೇಳಲಿ!+
ಇಸ್ರಾಯೇಲ್ಯರು ಯಾವ ಪ್ರಸಿದ್ಧ ಜನಾಂಗಗಳ ಹತ್ರ ಹೋಗ್ತಾರೋ ಅಲ್ಲಿನ ಗಣ್ಯ ಗಂಡಸ್ರ ಪಾಡನ್ನ ಏನು ಹೇಳಲಿ!
2 ಕಲ್ನೆ ಪಟ್ಟಣಕ್ಕೆ ಹೋಗಿ ನೋಡಿ.
ಅಲ್ಲಿಂದ ಮಹಾ ಹಾಮಾತಿಗೆ ಹೋಗಿ,+
ಫಿಲಿಷ್ಟಿಯರ ಗತ್ ಪಟ್ಟಣಕ್ಕೆ ಇಳಿದು ಹೋಗಿ.
ಅವುಗಳೇನು ಈ ರಾಜ್ಯಗಳಿಗಿಂತ* ಚೆನ್ನಾಗಿವೆಯಾ?
ಅವ್ರ ಪ್ರದೇಶಗಳೇನು ನಿಮ್ಮ ಪ್ರದೇಶಗಳಿಗಿಂತ ದೊಡ್ಡದಾಗಿವೆಯಾ?
3 ನೀವು ಕಷ್ಟ ದಿನವನ್ನ ಮರೆತುಬಿಟ್ಟಿದ್ದೀರಾ?+
ನಿಮ್ಮ ಮಧ್ಯ ಹಿಂಸಾಚಾರ ನೆಲೆಸೋ ತರ ಮಾಡ್ತಿದ್ದೀರಾ?+
4 ನೀವು ದಂತದ+ ಮಂಚಗಳ ಮೇಲೆ ಮಲಗ್ತೀರ,
ಒರಗುಮಂಚಗಳ ಮೇಲೆ ಮೈಚಾಚಿ ಬಿದ್ಕೊಳ್ತೀರ,+
ನೀವು ಮಂದೆಯಲ್ಲಿರೋ ಟಗರುಗಳನ್ನ, ಕೊಬ್ಬಿದ ಕರುಗಳನ್ನ* ತಿಂತೀರ,+
5 ನೀವು ತಂತಿವಾದ್ಯದ+ ಸಂಗೀತಕ್ಕೆ ತಕ್ಕಂತೆ ಗೀತೆ ರಚಿಸ್ತೀರ,
ದಾವೀದನ ತರ ಹೊಸಹೊಸ ಸಂಗೀತ ಉಪಕರಣಗಳನ್ನ ತಯಾರಿಸ್ತೀರ,+
6 ನೀವು ಬೋಗುಣಿ ತುಂಬ ದ್ರಾಕ್ಷಾಮದ್ಯ ಕುಡಿತೀರ,+
ಅತ್ಯುತ್ತಮ ಎಣ್ಣೆಗಳನ್ನ ಹಚ್ಕೊಳ್ತೀರ.
ಆದ್ರೆ ಯೋಸೇಫನ ಮೇಲೆ ಬರೋ ಮಹಾ ದುರಂತದ ಬಗ್ಗೆ ನಿಮಗೆ ಸ್ವಲ್ಪನೂ ಚಿಂತೆಯಿಲ್ಲ.+
7 ಹಾಗಾಗಿ ನೀವು ಎಲ್ಲರಿಗಿಂತ ಮೊದಲು ಕೈದಿಯಾಗಿ ಹೋಗ್ತೀರ,+
ನಿಮ್ಮ ಭಾರಿ ಮೋಜು ನಿಂತುಹೋಗುತ್ತೆ.
8 ಸೈನ್ಯಗಳ ದೇವರಾದ ಯೆಹೋವ ಹೇಳೋದು ಏನಂದ್ರೆ,
‘ವಿಶ್ವದ ರಾಜ ಯೆಹೋವ ತನ್ನ ಮೇಲೆ ಆಣೆಯಿಟ್ಟು+ ಹೀಗಂದಿದ್ದಾನೆ:
“ಯಾಕೋಬನ ಅಹಂಕಾರವನ್ನ ನಾನು ಹೇಸ್ತೀನಿ,+
ಅವನ ಭದ್ರ ಕೋಟೆಗಳನ್ನ ನಾನು ದ್ವೇಷಿಸ್ತೀನಿ,+
ಪಟ್ಟಣವನ್ನೂ ಅದ್ರಲ್ಲಿ ಇರೋದನ್ನೆಲ್ಲ ನಾನು ಶತ್ರುಗಳ ಕೈವಶಮಾಡ್ತೀನಿ.+
9 ಒಂದು ಮನೇಲಿ ಹತ್ತು ಜನ ಉಳಿದ್ರೂ ಅವ್ರೆಲ್ಲ ಸಾಯ್ತಾರೆ. 10 ಸಂಬಂಧಿಕನೊಬ್ಬ* ಬಂದು ಒಂದೊಂದೇ ಹೆಣ ಹೊತ್ಕೊಂಡು ಹೋಗಿ ಸುಡ್ತಾನೆ. ಅವನು ಅವ್ರ ಮೂಳೆಗಳನ್ನ ಮನೆಯಿಂದ ಹೊರಗೆ ತರ್ತಾನೆ. ಆಮೇಲೆ ಅವನು ಮನೆಯ ಒಳಕೋಣೆಗಳಲ್ಲಿ ಯಾರಿದ್ದಾನೋ ಅವನಿಗೆ ‘ಇನ್ನು ಯಾರಾದ್ರೂ ನಿನ್ನ ಜೊತೆ ಇದ್ದಾರಾ?’ ಅಂತ ಕೇಳ್ತಾನೆ. ಅದಕ್ಕೆ ಅವನು ‘ಯಾರೂ ಇಲ್ಲ’ ಅಂತ ಹೇಳ್ತಾನೆ. ಆಗ ಆ ಸಂಬಂಧಿಕ ‘ಸುಮ್ಮನಿರು! ಯಾಕಂದ್ರೆ ಇದು ಯೆಹೋವನ ಹೆಸ್ರನ್ನೆತ್ತೋ ಸಮಯ ಅಲ್ಲ’ ಅಂತ ಹೇಳ್ತಾನೆ.”
11 ಯೆಹೋವನೇ ಆಜ್ಞೆ ಕೊಟ್ಟು+ ದೊಡ್ಡ ಮನೆಯನ್ನ ಕೆಡವಿ
ಬರೀ ಅದ್ರ ಅವಶೇಷಗಳು ಉಳಿಯೋ ತರ ಮಾಡ್ತಾನೆ,
ಚಿಕ್ಕ ಮನೆಯನ್ನ ಚೂರುಚೂರು ಮಾಡ್ತಾನೆ.+
12 ಕಡಿದಾದ ಬಂಡೆ ಮೇಲೆ ಕುದುರೆಗಳು ಓಡುತ್ತಾ?
ಆ ಬಂಡೆಯನ್ನ ಯಾರಾದ್ರೂ ಎತ್ತುಗಳಿಂದ ಉಳುಮೆ ಮಾಡ್ತಾರಾ?
ನೀವು ಅನ್ಯಾಯವಾಗಿ ತೀರ್ಪು ಮಾಡಿ ಜನ್ರಿಗೆ ತೊಂದ್ರೆ ಮಾಡಿದ್ದೀರ,*
ನೀತಿಯನ್ನ ಅನುಸರಿಸದೆ ಜನ್ರಿಗೆ ಜೀವನದಲ್ಲಿ ಜಿಗುಪ್ಸೆ ಹುಟ್ಟುವಷ್ಟು ದಬ್ಬಾಳಿಕೆ ನಡೆಸಿದ್ದೀರ.*+
13 ನೀವು ವ್ಯರ್ಥವಾದ ವಿಷ್ಯಗಳಲ್ಲಿ ಸಂತೋಷಪಡ್ತೀರ
“ನಾವು ನಮ್ಮ ಸ್ವಂತ ಬಲದಿಂದನೇ ಬಲಿಷ್ಠರಾಗಿದ್ದೀವಿ”+ ಅಂತ ಹೇಳ್ತೀರ.