ಹೋಶೇಯ
1 ಯೆಹೋವ ಬೆಯೇರಿಯ ಮಗ ಹೋಶೇಯನಿಗೆ* ಹೇಳಿದ ಮಾತುಗಳು. ಯೆಹೂದದ ರಾಜರಾದ+ ಉಜ್ಜೀಯ,+ ಯೋತಾಮ,+ ಆಹಾಜ,+ ಹಿಜ್ಕೀಯನ+ ಕಾಲದಲ್ಲಿ ಮತ್ತು ಇಸ್ರಾಯೇಲಿನ ರಾಜನೂ ಯೋವಾಷನ+ ಮಗನೂ ಆದ ಯಾರೊಬ್ಬಾಮ+ ಆಳ್ತಿದ್ದ ಕಾಲದಲ್ಲಿ ಆತನು ಈ ಮಾತುಗಳನ್ನ ಹೇಳಿದನು. 2 ಹೋಶೇಯನ ಮೂಲಕ ಯೆಹೋವ ಜನ್ರ ಜೊತೆ ಮಾತಾಡೋಕೆ ಶುರುಮಾಡಿದನು. ಆಗ ಯೆಹೋವ ಹೋಶೇಯನಿಗೆ “ನೀನು ಹೋಗಿ ಒಬ್ಬ ಸ್ತ್ರೀಯನ್ನ ಮದುವೆ ಆಗು. ಅವಳು ಮುಂದೆ ವೇಶ್ಯೆ* ಆಗ್ತಾಳೆ. ಅವಳ ವೇಶ್ಯಾವಾಟಿಕೆಯಿಂದ ಹುಟ್ಟೋ ಮಕ್ಕಳಿಗೆ ನೀನು ತಂದೆ ಆಗಿರು. ಯಾಕಂದ್ರೆ ಈ ದೇಶದ ಜನ್ರು ಅದೇ ರೀತಿ ವೇಶ್ಯೆಯರ ತರ ನಡ್ಕೊಂಡು ಯೆಹೋವನಾದ ನನ್ನನ್ನ ಪೂರ್ತಿ ಬಿಟ್ಟುಬಿಟ್ಟಿದ್ದಾರೆ”+ ಅಂದನು.
3 ಹಾಗಾಗಿ ಹೋಶೇಯ ಹೋಗಿ ದಿಬ್ಲಯಿಮನ ಮಗಳಾದ ಗೋಮೆರಳನ್ನ ಮದುವೆ ಆದ. ಅವಳು ಗರ್ಭಿಣಿ ಆದಳು, ಅವ್ರಿಬ್ರಿಗೂ ಒಂದು ಗಂಡು ಮಗು ಹುಟ್ಟಿತು.
4 ಆಮೇಲೆ ಯೆಹೋವ ಹೋಶೇಯನಿಗೆ “ಆ ಮಗುಗೆ ಇಜ್ರೇಲ್* ಅಂತ ಹೆಸ್ರಿಡು. ಯಾಕಂದ್ರೆ ಇಜ್ರೇಲ್ ಸುರಿಸಿದ ರಕ್ತಕ್ಕಾಗಿ ನಾನು ಇನ್ನು ಸ್ವಲ್ಪ ಸಮಯದಲ್ಲಿ ಯೇಹುವಿನ+ ಮನೆತನದವ್ರಿಂದ ಲೆಕ್ಕ ಕೇಳ್ತೀನಿ ಮತ್ತು ಇಸ್ರಾಯೇಲಿನ ರಾಜರ ಆಳ್ವಿಕೆಯನ್ನ ಕೊನೆ ಮಾಡ್ತೀನಿ.+ 5 ಆ ದಿನದಲ್ಲಿ ನಾನು ಇಜ್ರೇಲಿನ ಕಣಿವೆಯಲ್ಲಿ ಇಸ್ರಾಯೇಲಿನ ಬಿಲ್ಲನ್ನ ಮುರಿದು ಬಿಡ್ತೀನಿ” ಅಂದನು.
6 ಅವಳು ಮತ್ತೆ ಗರ್ಭಿಣಿ ಆದಳು, ಹೆಣ್ಣು ಮಗು ಹುಟ್ಟಿತು. ಆಗ ದೇವರು ಹೋಶೇಯನಿಗೆ “ಆ ಮಗುವಿಗೆ ಲೋ-ರುಹಾಮ* ಅಂತ ಹೆಸ್ರಿಡು. ಯಾಕಂದ್ರೆ ನಾನು ಇನ್ಮುಂದೆ ಇಸ್ರಾಯೇಲ್ ಜನ್ರಿಗೆ ಕರುಣೆ ತೋರಿಸಲ್ಲ.+ ನಾನು ಅವ್ರನ್ನ ಖಂಡಿತ ಓಡಿಸಿಬಿಡ್ತೀನಿ.+ 7 ಆದ್ರೆ ಯೆಹೂದದ ಜನ್ರಿಗೆ ಕರುಣೆ ತೋರಿಸ್ತೀನಿ.+ ಅವ್ರನ್ನ ಬಿಲ್ಲು, ಕತ್ತಿ, ಯುದ್ಧ, ಕುದುರೆ ಮತ್ತು ಕುದುರೆ ಸವಾರರ ಮೂಲಕ ರಕ್ಷಿಸದೆ+ ನಾನೇ ಅವ್ರನ್ನ ರಕ್ಷಿಸ್ತೀನಿ. ಹೌದು, ಅವ್ರ ದೇವರಾಗಿರೋ ಯೆಹೋವನಾದ ನಾನೇ ಅವ್ರನ್ನ ರಕ್ಷಿಸ್ತೀನಿ”+ ಅಂದನು.
8 ಲೋ-ರುಹಾಮ ಎದೆಹಾಲು ಕುಡಿಯೋದನ್ನ ಬಿಟ್ಟ ಮೇಲೆ ಗೋಮೆರಗೆ ಒಂದು ಗಂಡು ಮಗು ಹುಟ್ಟಿತು. 9 ಆಗ ದೇವರು ಹೀಗಂದನು: “ಆ ಮಗುವಿಗೆ ಲೋ-ಅಮ್ಮಿ* ಅಂತ ಹೆಸ್ರಿಡು. ಯಾಕಂದ್ರೆ ನೀವು ನನ್ನ ಜನ್ರಲ್ಲ, ನಾನು ನಿಮ್ಮ ದೇವ್ರಲ್ಲ.
10 ಸಮುದ್ರದ ಮರಳಿನ ಕಣಗಳನ್ನ ಹೇಗೆ ಅಳೆಯಕ್ಕೂ ಲೆಕ್ಕ ಮಾಡೋಕ್ಕೂ ಆಗಲ್ವೋ ಅದೇ ತರ ಇಸ್ರಾಯೇಲಿನ ಜನ್ರ ಸಂಖ್ಯೆ ಲೆಕ್ಕ ಇಲ್ಲದಷ್ಟು ಆಗುತ್ತೆ.+ ‘ನೀವು ನನ್ನ ಜನ್ರಲ್ಲ’+ ಅಂತ ನಾನು ಯಾವ ಸ್ಥಳದಲ್ಲಿ ಅವ್ರಿಗೆ ಹೇಳಿದ್ನೋ ಅದೇ ಸ್ಥಳದಲ್ಲಿ ನೀವು ಜೀವ ಇರೋ ದೇವರ ಮಕ್ಕಳು’+ ಅಂತ ಹೇಳ್ತೀನಿ. 11 ಯೆಹೂದದ ಮತ್ತು ಇಸ್ರಾಯೇಲಿನ ಜನ ಒಂದಾಗ್ತಾರೆ.+ ಅವರು ಒಬ್ಬನನ್ನೇ ತಮ್ಮ ಮುಖ್ಯಸ್ಥನನ್ನಾಗಿ ಆರಿಸ್ಕೊಂಡು ದೇಶದಿಂದ ಹೊರಗೆ ಹೋಗ್ತಾರೆ. ಆ ದಿನ ಇಜ್ರೇಲಿಗೆ+ ತುಂಬ ವಿಶೇಷವಾದ ದಿನವಾಗಿರುತ್ತೆ.”