ಯೆಹೆಜ್ಕೇಲ
22 ಯೆಹೋವ ಮತ್ತೆ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ನಿರಪರಾಧಿಗಳ ರಕ್ತ ಸುರಿಸಿ ಅಪರಾಧಿಯಾಗಿರೋ ಪಟ್ಟಣಕ್ಕೆ+ ನೀನು ತೀರ್ಪು ಕೊಡೋಕೆ ತಯಾರಾಗಿದ್ದೀಯಾ? ಅವಳು ನಡಿಸೋ ಎಲ್ಲ ಅಸಹ್ಯ ಕೆಲಸಗಳನ್ನ ಅವಳಿಗೆ ಹೇಳೋಕೆ ನೀನು ಸಿದ್ಧನಿದ್ದೀಯಾ?+ 3 ನೀನು ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ತನ್ನ ಜನ್ರ ರಕ್ತವನ್ನ ಸುರಿಸೋ ಪಟ್ಟಣವೇ,+ ನಿನ್ನ ಕೊನೆಗಾಲ ಬಂದಿದೆ,+ ನೀನು ಹೊಲಸು ಮೂರ್ತಿಗಳನ್ನ* ಮಾಡ್ಕೊಂಡು ನಿನ್ನನ್ನೇ ಅಶುದ್ಧಳಾಗಿ ಮಾಡ್ಕೊಂಡಿದ್ದೀಯ.+ 4 ನಿರಪರಾಧಿಗಳ ರಕ್ತ ಸುರಿಸಿ ಅಪರಾಧಿ ಆಗಿದ್ದೀಯ,+ ಹೊಲಸು ಮೂರ್ತಿಗಳು ನಿನ್ನನ್ನ ಅಶುದ್ಧ ಮಾಡಿವೆ.+ ನಿನ್ನ ದಿನಗಳು ಬೇಗ ಮುಗಿಯೋ ಹಾಗೆ ನೀನು ಮಾಡ್ಕೊಂಡಿದ್ದೀಯ. ನೀನು ಶಿಕ್ಷೆ ಅನುಭವಿಸೋ ವರ್ಷಗಳು ಬಂದಿವೆ. ಹಾಗಾಗಿ ಜನಾಂಗಗಳು ನಿನ್ನನ್ನ ಬಯ್ಯೋ ಹಾಗೆ, ಎಲ್ಲ ದೇಶಗಳು ಅಣಕಿಸೋ ಹಾಗೆ ಮಾಡ್ತೀನಿ.+ 5 ಕೆಟ್ಟ ಹೆಸ್ರು ಮಾಡಿರೋ ಮತ್ತು ಎಲ್ಲ ಕಡೆ ಗದ್ದಲ ಇರೋ ಪಟ್ಟಣವೇ, ನಿನ್ನ ಅಕ್ಕಪಕ್ಕದ ಮತ್ತು ದೂರದೂರದ ಎಲ್ಲ ದೇಶಗಳು ನಿನ್ನನ್ನ ನೋಡಿ ತಮಾಷೆ ಮಾಡುತ್ತೆ.+ 6 ನೋಡು! ನಿನ್ನಲ್ಲಿರೋ ಇಸ್ರಾಯೇಲಿನ ಪ್ರತಿಯೊಬ್ಬ ಪ್ರಧಾನ ತನ್ನ ಅಧಿಕಾರವನ್ನ ತಪ್ಪಾಗಿ ಬಳಸ್ಕೊಂಡು ಕೊಲೆ ಮಾಡ್ತಿದ್ದಾನೆ.+ 7 ನಿನ್ನಲ್ಲಿರೋ ಜನ್ರು ಅವ್ರ ಅಪ್ಪಅಮ್ಮಂದಿರನ್ನ ಕೀಳಾಗಿ ನೋಡ್ತಿದ್ದಾರೆ.+ ವಿದೇಶಿಯರಿಗೆ ಮೋಸ ಮಾಡ್ತಿದ್ದಾರೆ. ಅನಾಥರಿಗೆ,* ವಿಧವೆಯರಿಗೆ ಕಾಟ ಕೊಡ್ತಿದ್ದಾರೆ.”’”+
8 “‘ನೀನು ನನ್ನ ಪವಿತ್ರ ಸ್ಥಳಗಳನ್ನ ಕೀಳಾಗಿ ನೋಡಿದ್ದೀಯ, ನನ್ನ ಸಬ್ಬತ್ಗಳನ್ನ ಅಪವಿತ್ರ ಮಾಡಿದ್ದೀಯ.+ 9 ನಿನ್ನ ಜನ್ರು ಬೇರೆಯವರ ಜೀವ ತೆಗೆಯೋಕೆ ಅವ್ರ ಬಗ್ಗೆ ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನ ಹಬ್ಬಿಸ್ತಾ ಇದ್ದಾರೆ.+ ನಿನ್ನಲ್ಲಿರೋ ಬೆಟ್ಟಗಳ ಮೇಲೆ ಅವರು ಮೂರ್ತಿಗಳಿಗೆ ಕೊಟ್ಟ ಬಲಿಗಳನ್ನ ತಿಂತಿದ್ದಾರೆ, ಅಶ್ಲೀಲವಾಗಿ ನಡ್ಕೊತಿದ್ದಾರೆ.+ 10 ಅವರು ಅವ್ರ ಅಪ್ಪನ ಹೆಂಡತಿ ಜೊತೆ ಅನೈತಿಕ ಸಂಬಂಧ ಇಟ್ಟಿದ್ದಾರೆ,+ ಮುಟ್ಟಿನಿಂದ ಅಶುದ್ಧಳಾದ ಸ್ತ್ರೀ ಮೇಲೆ ಬಲಾತ್ಕಾರ ಮಾಡ್ತಿದ್ದಾರೆ.+ 11 ಬೇರೆಯವನ ಹೆಂಡತಿ ಜೊತೆ ಅಸಹ್ಯವಾಗಿ ನಡ್ಕೊಳ್ತಿದ್ದಾರೆ,+ ಸೊಸೆ ಜೊತೆ ಅಶ್ಲೀಲವಾಗಿ ನಡ್ಕೊಂಡು ಅವಳನ್ನ ಕೆಡಿಸ್ತಿದ್ದಾರೆ,+ ಅಕ್ಕತಂಗಿಯರನ್ನೇ ಬಲಾತ್ಕಾರ ಮಾಡ್ತಿದ್ದಾರೆ.+ 12 ಅವರು ಕೊಲೆ ಮಾಡೋಕೆ ಲಂಚ ತಗೊತಿದ್ದಾರೆ.+ ಬಡ್ಡಿಗಾಗಿ,+ ಲಾಭಕ್ಕಾಗಿ* ಬೇರೆಯವರಿಗೆ ಸಾಲ ಕೊಡ್ತಿದ್ದಾರೆ. ಬೇರೆಯವ್ರಿಂದ ಹಣ ಸುಲ್ಕೊಳ್ತಿದ್ದಾರೆ.+ ಹೌದು, ನೀನು ನನ್ನನ್ನ ಪೂರ್ತಿ ಮರೆತುಬಿಟ್ಟಿದ್ದೀಯ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.
13 ‘ನೋಡು! ನೀನು ಅನ್ಯಾಯವಾಗಿ ಮಾಡಿರೋ ಲಾಭವನ್ನ ಮತ್ತು ಮಾಡ್ತಿರೋ ಕೊಲೆಗಳನ್ನ ನೋಡಿ ನೋಡಿ ನಾನು ರೋಸಿಹೋಗಿ ಚಪ್ಪಾಳೆ ಹೊಡಿತೀನಿ. 14 ನಾನು ನಿನ್ನ ವಿರುದ್ಧ ಕ್ರಮ ತಗೊಳ್ಳೋ ದಿನಗಳಲ್ಲಿ ಧೈರ್ಯವಾಗಿ, ಸ್ಥಿರವಾಗಿ ಇರೋಕೆ ನಿನ್ನಿಂದ ಆಗುತ್ತಾ?+ ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ, ನಾನು ಕ್ರಮ ತಗೊಳ್ತೀನಿ. 15 ನಾನು ನಿನ್ನನ್ನ ಜನಾಂಗಗಳಲ್ಲಿ ಚೆಲ್ಲಾಪಿಲ್ಲಿ ಮಾಡ್ತೀನಿ, ಬೇರೆಬೇರೆ ದೇಶಗಳಿಗೆ ಓಡಿಸಿಬಿಡ್ತೀನಿ,+ ನಿನ್ನ ಅಶುದ್ಧ ನಡತೆಗೆ ಒಂದು ಅಂತ್ಯ ಕಾಣಿಸ್ತೀನಿ.+ 16 ಜನಾಂಗಗಳ ಮುಂದೆ ನಿನಗೆ ಅವಮಾನ ಆಗುತ್ತೆ. ಆಗ ನಾನೇ ಯೆಹೋವ ಅಂತ ನಿನಗೆ ಗೊತ್ತಾಗುತ್ತೆ.’”+
17 ಯೆಹೋವ ಮತ್ತೆ ನನಗೆ ಹೀಗಂದನು: 18 “ಮನುಷ್ಯಕುಮಾರನೇ, ಇಸ್ರಾಯೇಲ್ಯರು ನನಗೆ ಯಾವ ಪ್ರಯೋಜನಕ್ಕೂ ಬಾರದ ಕಸದ* ತರ ಆಗಿದ್ದಾರೆ. ಅವ್ರೆಲ್ಲ ಕುಲುಮೆಯಲ್ಲಿರೋ ತಾಮ್ರ, ತವರ, ಕಬ್ಬಿಣ ಮತ್ತು ಸೀಸದ ತರ ಇದ್ದಾರೆ. ಬೆಳ್ಳಿ ಕರಗಿಸಿದಾಗ ಉಳಿಯೋ ಕಸದ ತರ ಆಗಿದ್ದಾರೆ.+
19 ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನೀವೆಲ್ಲ ಪ್ರಯೋಜನಕ್ಕೆ ಬಾರದ ಕಸ ಆಗಿರೋದ್ರಿಂದ+ ನಾನು ನಿಮ್ಮನ್ನ ಯೆರೂಸಲೇಮ್ ಒಳಗೆ ಒಟ್ಟುಸೇರಿಸ್ತೀನಿ. 20 ಬೆಳ್ಳಿ, ತಾಮ್ರ, ಕಬ್ಬಿಣ, ಸೀಸ, ತವರ ಇವನ್ನ ಕುಲುಮೆ ಒಳಗೆ ಕೂಡಿಸಿ ಬೆಂಕಿ ಉರಿಸಿ ಅವನ್ನ ಕರಗಿಸೋ ಹಾಗೆ ನನ್ನ ಕೋಪ ಕ್ರೋಧದಿಂದ ನಿಮ್ಮನ್ನ ಒಟ್ಟುಸೇರಿಸ್ತೀನಿ. ಬೆಂಕಿಯಿಂದ ನಿಮ್ಮನ್ನ ಕರಗಿಸ್ತೀನಿ.+ 21 ನಾನು ನಿಮ್ಮನ್ನ ಒಟ್ಟುಸೇರಿಸಿ ನನ್ನ ಕೋಪಾಗ್ನಿಯನ್ನ ನಿಮ್ಮ ಮೇಲೆ ಊದ್ತೀನಿ.+ ಆಗ ನೀವು ಪಟ್ಟಣದ ಒಳಗೆ ಕರಗಿ ಹೋಗ್ತಿರ.+ 22 ಬೆಳ್ಳಿ ಕುಲುಮೆ ಒಳಗೆ ಕರಗಿ ಹೋಗೋ ತರ ನೀವು ಪಟ್ಟಣದಲ್ಲಿ ಕರಗಿಹೋಗ್ತಿರ. ಯೆಹೋವನಾದ ನಾನೇ ನಿಮ್ಮ ಮೇಲೆ ಕ್ರೋಧ ಸುರಿಸಿದೆ ಅಂತ ಆಗ ನಿಮಗೆ ಗೊತ್ತಾಗುತ್ತೆ.’”
23 ಯೆಹೋವ ಮತ್ತೆ ನನಗೆ ಹೀಗಂದನು: 24 “ಮನುಷ್ಯಕುಮಾರನೇ, ನೀನು ಆ ದೇಶಕ್ಕೆ ಹೀಗೆ ಹೇಳು ‘ಕ್ರೋಧದ ದಿನದಲ್ಲಿ ನಿನ್ನನ್ನ ಶುದ್ಧ ಮಾಡಲ್ಲ ಮತ್ತು ನಿನ್ನ ಮೇಲೆ ಮಳೆ ಬೀಳಲ್ಲ. 25 ದೇಶದಲ್ಲಿರೋ ಪ್ರವಾದಿಗಳು ಸಂಚು ಮಾಡ್ತಿದ್ದಾರೆ,+ ಬೇಟೆಯನ್ನ ಸೀಳಿಹಾಕ್ತಾ ಗರ್ಜಿಸೋ ಸಿಂಹದ ತರ ಇದ್ದಾರೆ,+ ಅವರು ಜನ್ರನ್ನ ನುಂಗಿಹಾಕ್ತಿದ್ದಾರೆ, ಜನ್ರ ಸಿರಿಸಂಪತ್ತನ್ನ, ಬೆಲೆಬಾಳೋ ವಸ್ತುಗಳನ್ನ ಕಿತ್ಕೊಳ್ತಿದ್ದಾರೆ. ದೇಶದಲ್ಲಿರೋ ತುಂಬ ಹೆಂಗಸರನ್ನ ವಿಧವೆಯರಾಗಿ ಮಾಡಿದ್ದಾರೆ. 26 ದೇಶದಲ್ಲಿರೋ ಪುರೋಹಿತರು ನನ್ನ ನಿಯಮಗಳನ್ನ ಮೀರಿ ನಡೆದಿದ್ದಾರೆ,+ ನನ್ನ ಪವಿತ್ರ ಸ್ಥಳಗಳನ್ನ ಅಪವಿತ್ರ ಮಾಡ್ತಾ ಇದ್ದಾರೆ.+ ಇದು ಪವಿತ್ರ, ಇದು ಸಾಧಾರಣ ಅಂತ ಅವರು ವ್ಯತ್ಯಾಸ ಮಾಡ್ತಿಲ್ಲ.+ ಯಾವುದು ಶುದ್ಧ, ಯಾವುದು ಅಶುದ್ಧ ಅಂತ ಹೇಳ್ತಿಲ್ಲ.+ ನಾನು ಮಾಡಿದ ಸಬ್ಬತ್ಗಳನ್ನ ಆಚರಿಸ್ತಿಲ್ಲ. ಅವರು ನನಗೆ ಅವಮಾನ ಮಾಡಿದ್ದಾರೆ. 27 ದೇಶದಲ್ಲಿರೋ ಅಧಿಕಾರಿಗಳು ಬೇಟೆಯನ್ನ ಸೀಳಿಹಾಕೋ ತೋಳಗಳ ತರ ಇದ್ದಾರೆ. ಅನ್ಯಾಯವಾಗಿ ಲಾಭ ಮಾಡೋಕೆ ಜನ್ರಿಗೆ ಗಾಯ ಮಾಡ್ತಿದ್ದಾರೆ, ಕೊಲ್ತಿದ್ದಾರೆ.+ 28 ಸುಣ್ಣ ಹಚ್ಚಿ ಗೋಡೆ ಬಿರುಕನ್ನ ಮುಚ್ಚೋ ಹಾಗೆ ಪ್ರವಾದಿಗಳು ಅವ್ರ ಕೆಟ್ಟ ಕೆಲಸಗಳನ್ನ ಮುಚ್ಚಿಹಾಕ್ತಿದ್ದಾರೆ. ಅವರು ಸುಳ್ಳು ದರ್ಶನಗಳನ್ನ ನೋಡ್ತಿದ್ದಾರೆ, ಸುಳ್ಳು ಕಣಿಗಳನ್ನ ಹೇಳ್ತಿದ್ದಾರೆ.+ ಅಷ್ಟೇ ಅಲ್ಲ, ಯೆಹೋವನಾದ ನಾನು ಅವ್ರ ಜೊತೆ ಮಾತಾಡಿಲ್ಲ ಅಂದ್ರೂ “ವಿಶ್ವದ ರಾಜ ಯೆಹೋವ ಹೀಗಂತಾನೆ” ಅಂತ ಹೇಳ್ತಿದ್ದಾರೆ. 29 ದೇಶದಲ್ಲಿರೋ ಜನ್ರು ಮೋಸ ಮಾಡಿದ್ದಾರೆ, ದರೋಡೆ ಮಾಡಿದ್ದಾರೆ.+ ಕಷ್ಟದಲ್ಲಿ ಇರುವವರಿಗೆ, ಬಡವರಿಗೆ ಕಾಟ ಕೊಡ್ತಿದ್ದಾರೆ. ವಿದೇಶಿಯರಿಗೆ ಮೋಸ ಮಾಡಿ ಅವ್ರಿಗೆ ನ್ಯಾಯ ಸಿಗದ ಹಾಗೆ ಮಾಡಿದ್ದಾರೆ.’
30 ‘ದೇಶದ ಸುರಕ್ಷತೆಗಾಗಿ ಕಲ್ಲಿನ ಗೋಡೆಯನ್ನ ಸರಿಪಡಿಸೋಕೆ ಅಥವಾ ನಾನು ಪಟ್ಟಣವನ್ನ ನಾಶಮಾಡದೆ ಇರೋ ಹಾಗೆ ಪಟ್ಟಣದ ಗೋಡೆ ಒಡೆದುಹೋಗಿರೋ ಕಡೆ ನಿಲ್ಲೋಕೆ ಒಬ್ಬನಾದ್ರೂ ಸಿಗ್ತಾನಾ ಅಂತ ಅವ್ರ ಮಧ್ಯ ಹುಡುಕ್ತಿದ್ದೆ,+ ಆದ್ರೆ ನನಗೆ ಯಾರೂ ಸಿಗಲಿಲ್ಲ. 31 ಹಾಗಾಗಿ ನಾನು ನನ್ನ ಕ್ರೋಧವನ್ನ ಅವ್ರ ಮೇಲೆ ಸುರೀತಿನಿ, ನನ್ನ ಕೋಪಾಗ್ನಿಯಿಂದ ಅವ್ರನ್ನ ನಾಶ ಮಾಡ್ತೀನಿ. ಅವ್ರ ನಡತೆಯ ಪರಿಣಾಮಗಳನ್ನ ಅವ್ರೇ ಅನುಭವಿಸೋ ಹಾಗೆ ಮಾಡ್ತೀನಿ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”