ಎರಡನೇ ಪೂರ್ವಕಾಲವೃತ್ತಾಂತ
35 ಯೆರೂಸಲೇಮಲ್ಲಿ ಯೋಷೀಯ ಯೆಹೋವನಿಗಾಗಿ ಪಸ್ಕ ಹಬ್ಬ ಆಚರಿಸೋಕೆ+ ಏರ್ಪಾಡು ಮಾಡಿದ. ಮೊದಲನೇ ತಿಂಗಳಿನ 14ನೇ ದಿನ+ ಅವರು ಪಸ್ಕದ ಬಲಿಗಾಗಿ ತಂದಿದ್ದ ಪ್ರಾಣಿಯನ್ನ ಕಡಿದ್ರು.+ 2 ಅವನು ಪುರೋಹಿತರನ್ನ ಅವರವರ ಕೆಲಸಗಳಿಗೆ ನೇಮಿಸಿ, ಯೆಹೋವನ ಆಲಯದ ಸೇವೆಯನ್ನ ಮಾಡೋಕೆ ಪ್ರೋತ್ಸಾಹಿಸಿದ.+ 3 ಅವನು ಎಲ್ಲ ಇಸ್ರಾಯೇಲ್ಯರಿಗೆ ಕಲಿಸ್ತಿದ್ದ+ ಮತ್ತು ಯೆಹೋವನಿಗೆ ಪರಿಶುದ್ಧರಾಗಿದ್ದ ಲೇವಿಯರಿಗೆ ಹೀಗಂದ “ಪವಿತ್ರ ಮಂಜೂಷವನ್ನ ತಂದು ಇಸ್ರಾಯೇಲ್ ರಾಜ ದಾವೀದನ ಮಗ ಸೊಲೊಮೋನ ಕಟ್ಟಿಸಿದ ಆಲಯದಲ್ಲಿ ಇಡಿ.+ ಇನ್ಮುಂದೆ ನೀವು ಅದನ್ನ ನಿಮ್ಮ ಭುಜದ ಮೇಲೆ ಎತ್ಕೊಂಡು ಹೋಗೋ ಅಗತ್ಯವಿಲ್ಲ.+ ನಿಮ್ಮ ದೇವರಾದ ಯೆಹೋವನ ಮತ್ತು ಆತನ ಜನ್ರಾದ ಇಸ್ರಾಯೇಲ್ಯರ ಸೇವೆಮಾಡಿ. 4 ಇಸ್ರಾಯೇಲ್ ರಾಜ ದಾವೀದ ಮತ್ತು ಅವನ ಮಗ ಸೊಲೊಮೋನ ಬರೆದ ವಿಷ್ಯಗಳಿಗೆ ತಕ್ಕಂತೆ, ನೀವು ನಿಮ್ಮನಿಮ್ಮ ತಂದೆಯ ಮನೆತನದ ದಳಗಳ ಪ್ರಕಾರ ತಯಾರಾಗಿ.+ 5 ನೀವೆಲ್ಲ ಪವಿತ್ರ ಸ್ಥಳದಲ್ಲಿ ನಿಮ್ಮನಿಮ್ಮ ಗುಂಪಿನ ಪ್ರಕಾರ ನಿಲ್ಲಬೇಕು. ನಿಮ್ಮ ಸಹೋದರರ ಪ್ರತಿ ಕುಟುಂಬಕ್ಕೆ ಸಹಾಯ ಮಾಡೋಕೆ ಅವ್ರ ಜೊತೆ ಲೇವಿ ಕುಟುಂಬದಿಂದ ಒಂದೊಂದು ಗುಂಪು ನಿಲ್ಲಬೇಕು. 6 ಪಸ್ಕ ಹಬ್ಬದ ಬಲಿಯನ್ನ ಕಡಿದು+ ನಿಮ್ಮನ್ನೇ ಪವಿತ್ರ ಮಾಡ್ಕೊಳ್ಳಿ. ಮೋಶೆ ಮೂಲಕ ಯೆಹೋವ ಹೇಳಿದ ಮಾತನ್ನ ಪಾಲಿಸೋಕೆ ಸಹೋದರರಿಗಾಗಿ ಏರ್ಪಾಡುಗಳನ್ನ ಮಾಡ್ಕೊಳ್ಳಿ.”
7 ಯೋಷೀಯ ಅಲ್ಲಿಗೆ ಬಂದಿದ್ದ ಜನ್ರಿಗಾಗಿ ಪಸ್ಕದ ಬಲಿಗಳನ್ನ ಅರ್ಪಿಸೋಕೆ ಒಟ್ಟು 30,000 ಗಂಡು ಕುರಿಮರಿಗಳನ್ನ ಮತ್ತು ಹೋತಗಳನ್ನ, ಜೊತೆಗೆ 3,000 ಜಾನುವಾರುಗಳನ್ನ ಕಾಣಿಕೆಯಾಗಿ ಕೊಟ್ಟ. ರಾಜ ಇವನ್ನೆಲ್ಲ ತನ್ನ ಸ್ವಂತ ಆಸ್ತಿಯಿಂದ ಕೊಟ್ಟ.+ 8 ಜನ್ರಿಗಾಗಿ, ಪುರೋಹಿತರಿಗಾಗಿ ಮತ್ತು ಲೇವಿಯರಿಗಾಗಿ ಅಧಿಕಾರಿಗಳೂ ಸ್ವಇಷ್ಟದ ಕಾಣಿಕೆಗಳನ್ನ ಕೊಟ್ರು. ಸತ್ಯ ದೇವರ ನಾಯಕರಾಗಿದ್ದ ಹಿಲ್ಕೀಯ,+ ಜೆಕರ್ಯ ಮತ್ತು ಯೆಹೀಯೇಲ ಪುರೋಹಿತರಿಗೆ ಪಸ್ಕದ ಬಲಿಗಾಗಿ 2,600 ಪ್ರಾಣಿಗಳನ್ನ ಮತ್ತು 300 ಜಾನುವಾರುಗಳನ್ನ ಕೊಟ್ರು. 9 ಕೋನನ್ಯ ಅವನ ಸಹೋದರರಾದ ಶೆಮಾಯ ಮತ್ತು ನೆತನೇಲ ಜೊತೆ ಲೇವಿಯರ ಅಧಿಪತಿಗಳಾದ ಹಷಬ್ಯ, ಯೆಗೀಯೇಲ್ ಮತ್ತು ಯೋಜಾಬಾದರು ಲೇವಿಯರಿಗೆ ಪಸ್ಕದ ಬಲಿಗಾಗಿ 5,000 ಪ್ರಾಣಿಗಳನ್ನ ಮತ್ತು 500 ಜಾನುವಾರುಗಳನ್ನ ಕೊಟ್ರು.
10 ಹಬ್ಬಕ್ಕಾಗಿ ಎಲ್ಲ ತಯಾರಿಯನ್ನ ಮಾಡಲಾಯ್ತು. ರಾಜ ಆಜ್ಞಾಪಿಸಿದ ಹಾಗೇ ಪುರೋಹಿತರು ತಮ್ಮತಮ್ಮ ಸ್ಥಾನಗಳಲ್ಲಿ ಮತ್ತು ಲೇವಿಯರು ತಮ್ಮತಮ್ಮ ದಳಗಳಲ್ಲಿ+ ನಿಂತುಕೊಂಡ್ರು. 11 ಪಸ್ಕದ ಬಲಿಗಾಗಿ ತಂದಿದ್ದ ಪ್ರಾಣಿಗಳನ್ನ ಲೇವಿಯರು ಕಡಿದು+ ಅವುಗಳ ಚರ್ಮವನ್ನ ಸುಲಿಯುತ್ತಿದ್ದಂತೆ+ ಪುರೋಹಿತರು ಬಂದು ಆ ಪ್ರಾಣಿಗಳ ರಕ್ತವನ್ನ ಅವ್ರಿಂದ ತಗೊಂಡು ಹೋಗಿ ಯಜ್ಞವೇದಿ ಮೇಲೆ ಚಿಮಿಕಿಸಿದ್ರು.+ 12 ಇದಾದ ಮೇಲೆ ಅವರು ಜನ್ರಿಗೆ ಹಂಚೋಕೆ ಸರ್ವಾಂಗಹೋಮ ಬಲಿಗಳನ್ನ ಸಿದ್ಧಮಾಡಿದ್ರು. ಮೋಶೆಯ ಪುಸ್ತಕದಲ್ಲಿ ಬರೆದಂತೆ ಅವ್ರ ತಂದೆಯ ಮನೆತನದ ಪ್ರಕಾರ ಗುಂಪು ಮಾಡಿಕೊಂಡಿದ್ದವರು ಯೆಹೋವನಿಗೆ ಅರ್ಪಿಸೋಕೆ ಆಗೋ ತರ ಈ ಬಲಿಗಳನ್ನ ಸಿದ್ಧಪಡಿಸಿದ್ರು. ಜಾನುವಾರುಗಳಿಗೂ ಇದೇ ತರ ಮಾಡಿದ್ರು. 13 ಪದ್ಧತಿಯ ಪ್ರಕಾರ ಅವರು ಪಸ್ಕದ ಬಲಿಯನ್ನ ಅಡುಗೆ ಮಾಡಿದ್ರು.*+ ಪವಿತ್ರ ಅರ್ಪಣೆಯನ್ನ ಪಾತ್ರೆಯಲ್ಲಿ, ಹೆಂಚಿನಲ್ಲಿ ಮತ್ತು ಬಾಂಡ್ಲಿಯಲ್ಲಿ ಅಡುಗೆಮಾಡಿ ತಕ್ಷಣ ಅದನ್ನ ಉಳಿದ ಜನ್ರ ಹತ್ರ ತಂದ್ರು. 14 ಅವರು ತಮಗಾಗಿ ಮತ್ತು ಪುರೋಹಿತರಿಗಾಗಿ ಪಸ್ಕದ ಅಡುಗೆಯನ್ನ ತಯಾರಿ ಮಾಡ್ಕೊಂಡ್ರು. ಯಾಕಂದ್ರೆ ಆರೋನನ ವಂಶದವರಾದ ಪುರೋಹಿತರು ರಾತ್ರಿ ತನಕ ಸರ್ವಾಂಗಹೋಮ ಬಲಿಗಳನ್ನ, ಕೊಬ್ಬಿದ ಭಾಗಗಳನ್ನ ಅರ್ಪಿಸ್ತಾ ಇರ್ತಿದ್ರು. ಹಾಗಾಗಿ ಲೇವಿಯರು ತಮಗಾಗಿ ಮತ್ತು ಆರೋನನ ವಂಶದವರಾದ ಪುರೋಹಿತರಿಗಾಗಿ ಪಸ್ಕದ ಅಡುಗೆಯನ್ನ ತಯಾರಿ ಮಾಡ್ಕೊಳ್ತಿದ್ರು.
15 ಗಾಯಕರಾಗಿದ್ದ ಆಸಾಫನ+ ಮಕ್ಕಳು ದಾವೀದನ, ಆಸಾಫನ,+ ಹೇಮಾನನ ಮತ್ತು ದಾವೀದನಿಗಾಗಿ ದೇವದರ್ಶನ ನೋಡ್ತಿದ್ದ ಯೆದುತೂನನ+ ಆಜ್ಞೆ ತರ ಅವರವರ ಸ್ಥಾನದಲ್ಲಿ ನಿಂತಿದ್ರು.+ ಬಾಗಿಲು ಕಾಯುವವರು ಬೇರೆಬೇರೆ ಬಾಗಿಲ ಹತ್ರ ನಿಂತಿದ್ರು.+ ಇವರ ಸಹೋದರರಾದ ಲೇವಿಯರು ಇವರಿಗೋಸ್ಕರ ಪಸ್ಕದ ಅಡುಗೆಯನ್ನ ತಯಾರಿಸಿದ್ರಿಂದ ಇವರು ತಮ್ಮ ಸೇವೆಯನ್ನ ಬಿಟ್ಟುಬರೋ ಅವಶ್ಯಕತೆ ಇರಲಿಲ್ಲ. 16 ಹೀಗೆ ರಾಜ ಯೋಷೀಯ ಆಜ್ಞೆ ಕೊಟ್ಟ+ ಹಾಗೇ ಪಸ್ಕ ಆಚರಿಸೋಕೆ+ ಮತ್ತು ಯೆಹೋವನ ಯಜ್ಞವೇದಿ ಮೇಲೆ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸೋಕೆ ಆ ದಿನ ಯೆಹೋವನ ಸೇವೆಗಾಗಿ ಎಲ್ಲ ಏರ್ಪಾಡುಗಳನ್ನ ಮಾಡಲಾಯ್ತು.
17 ಅಲ್ಲಿದ್ದ ಇಸ್ರಾಯೇಲ್ಯರು ಆ ಸಮಯದಲ್ಲಿ ಪಸ್ಕ ಮತ್ತು ಏಳು ದಿನಗಳ ತನಕ ಹುಳಿಯಿಲ್ಲದ ರೊಟ್ಟಿಗಳ ಹಬ್ಬ ಆಚರಿಸಿದ್ರು.+ 18 ಪ್ರವಾದಿ ಸಮುವೇಲನ ದಿನಗಳಿಂದ ಆ ದಿನದ ತನಕ ಅಂಥ ಪಸ್ಕ ಆಚರಿಸಿರಲೇ ಇಲ್ಲ. ಅಲ್ಲದೆ ರಾಜ ಯೋಷೀಯ, ಪುರೋಹಿತರು, ಲೇವಿಯರು, ಅಲ್ಲಿ ನೆರೆದು ಬಂದಿದ್ದ ಎಲ್ಲ ಯೆಹೂದ್ಯರು, ಇಸ್ರಾಯೇಲ್ಯರು ಮತ್ತು ಯೆರೂಸಲೇಮಿನ ನಿವಾಸಿಗಳು ಆಚರಿಸಿದ ಈ ಪಸ್ಕದಂತೆ ಬೇರೆ ಯಾವ ಇಸ್ರಾಯೇಲ್ ರಾಜರೂ ಪಸ್ಕ ಆಚರಿಸಿರಲಿಲ್ಲ.+ 19 ಈ ಪಸ್ಕವನ್ನ ಯೋಷೀಯನ ಆಳ್ವಿಕೆಯ 18ನೇ ವರ್ಷದಲ್ಲಿ ಆಚರಿಸಲಾಯ್ತು.
20 ಇದೆಲ್ಲ ನಡೆದು ಯೋಷೀಯ ಆಲಯವನ್ನ ಸಿದ್ಧಪಡಿಸಿದಾಗ, ಈಜಿಪ್ಟಿನ ರಾಜ ನೆಕೋ+ ಯುದ್ಧಕ್ಕಾಗಿ ಯೂಫ್ರೆಟಿಸ್ ನದಿ ಹತ್ರ ಇದ್ದ ಕರ್ಕೆಮೀಷಿಗೆ ಬಂದ. ಆಗ ಯೋಷೀಯ ಅವನ ವಿರುದ್ಧ ಯುದ್ಧಕ್ಕೆ ಹೋದ.+ 21 ಆಗ ನೆಕೋ ಯೋಷೀಯನಿಗೆ ಸಂದೇಶವಾಹಕರ ಮೂಲಕ “ಯೆಹೂದದ ರಾಜನೇ, ನೀನು ಯಾಕೆ ನನ್ನ ಮೇಲೆ ಯುದ್ಧಕ್ಕೆ ಬರ್ತಿದ್ದಿಯಾ? ನಾನು ನಿನ್ನ ವಿರುದ್ಧ ಯುದ್ಧಮಾಡೋಕೆ ಬರ್ತಿಲ್ಲ, ಇನ್ನೊಂದು ದೇಶದ ಮೇಲೆ ಯುದ್ಧಮಾಡೋಕೆ ಹೋಗ್ತಿದ್ದೀನಿ. ತಡಮಾಡದೆ ಯುದ್ಧಕ್ಕೆ ಹೋಗು ಅಂತ ದೇವರು ನನಗೆ ಹೇಳಿದ್ದಾನೆ. ದೇವರು ನನ್ನ ಜೊತೆ ಇದ್ದಾನೆ. ಹಾಗಾಗಿ ನೀನು ನನ್ನ ಮೇಲೆ ಯುದ್ಧಕ್ಕೆ ಬರದಿದ್ರೆ ನಿನಗೇ ಒಳ್ಳೇದು. ನೀನು ಯುದ್ಧಕ್ಕೆ ಬಂದ್ರೆ ದೇವರು ನಿನ್ನನ್ನ ನಾಶಮಾಡ್ತಾನೆ” ಅಂತ ಹೇಳಿ ಕಳಿಸಿದ. 22 ಆದ್ರೆ ಯೋಷೀಯ ರಾಜ ನೆಕೋನನ್ನ ಬಿಟ್ಟು ವಾಪಸ್ ಹೋಗಲಿಲ್ಲ. ಅವನ ಮೂಲಕ ದೇವರ ಕಡೆಯಿಂದ ತನಗೆ ಸಿಕ್ಕಿದ ಬುದ್ಧಿವಾದವನ್ನ ಕಿವಿಗೆ ಹಾಕೊಳ್ಳಿಲ್ಲ. ಬದಲಿಗೆ ವೇಷ ಬದಲಾಯಿಸಿ+ ನೆಕೋ ಮೇಲೆ ಯುದ್ಧ ಮಾಡೋಕೆ ಮೆಗಿದ್ದೋ+ ಬೈಲಿಗೆ ಹೋದ.
23 ಅಲ್ಲಿದ್ದ ಬಿಲ್ಲುಗಾರರು ರಾಜ ಯೋಷೀಯನ ಮೇಲೆ ಬಾಣ ಬಿಟ್ರು. ಆಗ ರಾಜ ತನ್ನ ಸೇವಕರಿಗೆ “ನನಗೆ ದೊಡ್ಡ ಗಾಯ ಆಗಿದೆ, ನನ್ನನ್ನ ಇಲ್ಲಿಂದ ಕರ್ಕೊಂಡು ಹೋಗಿ” ಅಂದ. 24 ಆಗ ಅವನ ಸೇವಕರು ಅವನನ್ನ ರಥದಿಂದ ಇಳಿಸಿ, ಅವನ ಮತ್ತೊಂದು ರಥದಲ್ಲಿ ಕೂರಿಸಿ ಯೆರೂಸಲೇಮಿಗೆ ಹೋದ್ರು. ಹೀಗೆ ಯೋಷೀಯ ಸತ್ತುಹೋದ. ಅವನ ಪೂರ್ವಜರಿಗೆ ಸಮಾಧಿ ಮಾಡಿದ ತರಾನೇ ಅವನಿಗೂ ಸಮಾಧಿ ಮಾಡಿದ್ರು.+ ಯೆಹೂದ ಮತ್ತು ಯೆರೂಸಲೇಮಿನ ಎಲ್ಲ ಜನ ಅವನಿಗಾಗಿ ಗೋಳಾಡಿದ್ರು. 25 ಯೆರೆಮೀಯ+ ಯೋಷೀಯನಿಗಾಗಿ ಶೋಕಗೀತೆಯನ್ನ ರಚಿಸಿದ. ಇವತ್ತಿಗೂ ಎಲ್ಲ ಗಾಯಕರು ಮತ್ತು ಗಾಯಕಿಯರು+ ತಮ್ಮ ಶೋಕಗೀತೆಗಳಲ್ಲಿ ಯೋಷೀಯನ ಬಗ್ಗೆ ಹಾಡ್ತಾ ಇರ್ತಾರೆ. ಆ ಶೋಕಗೀತೆಗಳನ್ನ ಇಸ್ರಾಯೇಲಲ್ಲಿ ಹಾಡಬೇಕಂತ ನಿರ್ಣಯ ಮಾಡಲಾಯ್ತು. ಆ ಗೀತೆಗಳನ್ನ ಬೇರೆ ಶೋಕಗೀತೆಗಳ ಜೊತೆ ಸೇರಿಸಲಾಯ್ತು.
26 ಯೋಷೀಯನ ಉಳಿದ ಜೀವನಚರಿತ್ರೆ ಬಗ್ಗೆ ಮತ್ತು ಅವನು ಯೆಹೋವನ ನಿಯಮ ಪುಸ್ತಕದ ಪ್ರಕಾರ ಕೆಲಸಗಳನ್ನ ಮಾಡ್ತಾ ತನ್ನ ಶಾಶ್ವತ ಪ್ರೀತಿಯನ್ನ ತೋರಿಸಿದ್ದರ ಬಗ್ಗೆ, 27 ಆರಂಭದಿಂದ ಅಂತ್ಯದ ತನಕ ಅವನು ಮಾಡಿದ ವಿಷ್ಯಗಳ ಬಗ್ಗೆ ಇಸ್ರಾಯೇಲ್ ಮತ್ತು ಯೆಹೂದದ ರಾಜರ ಕಾಲದ ಪುಸ್ತಕದಲ್ಲಿ ಬರೆಯಲಾಗಿದೆ.+