ಜೆಕರ್ಯ
6 ಆಮೇಲೆ ನಾನು ಇನ್ನೊಂದು ಸಲ ಕಣ್ಣೆತ್ತಿ ನೋಡಿದಾಗ, ನಾಲ್ಕು ರಥಗಳನ್ನ ನೋಡಿದೆ. ಅವು ಎರಡು ಬೆಟ್ಟಗಳ ಮಧ್ಯದಿಂದ ಬರ್ತಿದ್ದವು. ಆ ಬೆಟ್ಟಗಳು ತಾಮ್ರದ್ದಾಗಿದ್ದವು. 2 ಮೊದಲ್ನೇ ರಥಕ್ಕೆ ಕೆಂಪು ಕುದುರೆಗಳನ್ನ, ಎರಡ್ನೇ ರಥಕ್ಕೆ ಕಪ್ಪು ಕುದುರೆಗಳನ್ನ,+ 3 ಮೂರನೇ ರಥಕ್ಕೆ ಬಿಳಿ ಕುದುರೆಗಳನ್ನ ಮತ್ತು ನಾಲ್ಕನೇ ರಥಕ್ಕೆ ವೈವಿಧ್ಯಮಯ ಚುಕ್ಕೆಗಳಿರೋ ಕುದುರೆಗಳನ್ನ+ ಕಟ್ಟಲಾಗಿತ್ತು.
4 ನನ್ನ ಜೊತೆ ಮಾತಾಡ್ತಿದ್ದ ದೇವದೂತನಿಗೆ ನಾನು “ನನ್ನ ಒಡೆಯ, ಏನಿವು?” ಅಂತ ಕೇಳಿದೆ.
5 ಆ ದೇವದೂತ ನನಗೆ ಹೀಗಂದ: “ಸ್ವರ್ಗದ ನಾಲ್ಕು ಸೈನ್ಯಗಳಾಗಿರೋ+ ಇವು ಇಡೀ ಭೂಮಿಯ ಒಡೆಯನ ಮುಂದೆ ನಿಂತ್ಕೊಂಡಿದ್ದವು.+ ಈಗ ಅವು ಅಲ್ಲಿಂದಾನೇ ಬರ್ತಿವೆ. 6 ಕಪ್ಪು ಕುದುರೆಗಳನ್ನ ಕಟ್ಟಿರೋ ರಥ ಉತ್ತರ ದೇಶದ ಕಡೆ ಹೋಗ್ತಿದೆ.+ ಬಿಳಿ ಕುದುರೆಗಳು ಪಶ್ಚಿಮ ದೇಶದ ಕಡೆ ಹೋಗ್ತಿವೆ.* ಚುಕ್ಕೆಗಳಿರೋ ಕುದುರೆಗಳು ದಕ್ಷಿಣ ದೇಶದ ಕಡೆ ಹೋಗ್ತಿವೆ. 7 ಆ ವೈವಿಧ್ಯಮಯ ಕುದುರೆಗಳು ಭೂಮಿಯನ್ನ ಸುತ್ಕೊಂಡು ಬರೋಕೆ ಆತುರ ಪಡ್ತಿವೆ.” ಆಮೇಲೆ ಅವನು ಅವುಗಳಿಗೆ “ಹೋಗಿ, ಭೂಮಿಯನ್ನ ಸುತ್ಕೊಂಡು ಬನ್ನಿ” ಅಂದ. ಆಗ ಅವು ಭೂಮಿಯನ್ನ ಸುತ್ಕೊಂಡು ಬರೋಕೆ ಹೋದವು.
8 ಅವನು ನನ್ನನ್ನ ಕರೆದು “ನೋಡು, ಉತ್ತರ ದೇಶದ ಕಡೆ ಹೋಗಿದ್ದ ಕುದುರೆಗಳಿಂದಾಗಿ ಆ ದೇಶದ ಮೇಲೆ ಯೆಹೋವನಿಗಿದ್ದ ಕೋಪ ಶಾಂತ ಆಯ್ತು” ಅಂದ.
9 ಇನ್ನೊಮ್ಮೆ ಯೆಹೋವನ ಸಂದೇಶ ನನಗೆ ಸಿಕ್ತು. ಅದೇನಂದ್ರೆ: 10 “ಸೆರೆಯಲ್ಲಿ ಇರುವವರು ತಂದು ಕೊಟ್ಟಿರೋದನ್ನ ಹೆಲ್ದೈ, ತೋಬೀಯ ಮತ್ತು ಯೆದಾಯನಿಂದ ತಗೊ. ಅದೇ ದಿನ ನೀನು ಬಾಬೆಲಿಂದ ಬಂದಿರೋ ಈ ಜನ್ರ ಜೊತೆ ಚೆಫನ್ಯನ ಮಗ ಯೋಷೀಯನ ಮನೆಗೆ ಹೋಗು. 11 ನೀನು ಬೆಳ್ಳಿಬಂಗಾರವನ್ನ ತಗೊಂಡು ಅದ್ರಿಂದ ಒಂದು ಕಿರೀಟ* ಮಾಡಿ ಅದನ್ನ ಯೆಹೋಚಾದಾಕನ ಮಗನೂ ಮಹಾ ಪುರೋಹಿತನೂ ಆಗಿರೋ ಯೆಹೋಶುವನ ತಲೆ ಮೇಲೆ ಇಟ್ಟು,+ 12 ಅವನಿಗೆ ಹೀಗೆ ಹೇಳು:
‘ಸೈನ್ಯಗಳ ದೇವರಾದ ಯೆಹೋವ ಹೇಳೋದು ಏನಂದ್ರೆ: “ಮೊಳಕೆ ಅನ್ನೋ ಹೆಸ್ರಿರೋ ವ್ಯಕ್ತಿ ಇವನೇ.+ ಇವನು ತನ್ನ ಸ್ವಂತ ಸ್ಥಳದಿಂದ ಮೊಳಕೆ ಒಡಿತಾನೆ. ಅಷ್ಟೇ ಅಲ್ಲ ಯೆಹೋವನ ಆಲಯವನ್ನ ಕಟ್ತಾನೆ.+ 13 ಯೆಹೋವನ ಆಲಯ ಕಟ್ಟುವವನು ಇವನೇ. ಮಹಿಮೆಗೆ ಪಾತ್ರನಾಗುವವನು ಇವನೇ. ಇವನು ತನ್ನ ಸಿಂಹಾಸನದಲ್ಲಿ ಕೂತು ಆಳ್ವಿಕೆ ಮಾಡ್ತಾನೆ. ಇವನು ರಾಜನೂ ಆಗಿರ್ತಾನೆ, ಪುರೋಹಿತನೂ ಆಗಿರ್ತಾನೆ.+ ಇವನು ಆ ಎರಡೂ ಜವಾಬ್ದಾರಿಗಳನ್ನ* ಸರಿಸಮನಾಗಿ ನಿಭಾಯಿಸ್ಕೊಂಡು ಹೋಗ್ತಾನೆ. 14 ಹೆಲೆಮ, ತೋಬೀಯ, ಯೆದಾಯ+ ಮತ್ತು ಚೆಫನ್ಯನ ಮಗ ಹೇನನ ನೆನಪಿಗಾಗಿ ಆ ಕಿರೀಟ* ಯೆಹೋವನ ಆಲಯದಲ್ಲಿ ಇರುತ್ತೆ. 15 ದೂರದೂರದಿಂದ ಜನ ಬಂದು ಯೆಹೋವನ ಆಲಯ ಕಟ್ಟೋ ಕೆಲಸಕ್ಕೆ ಕೈಹಾಕ್ತಾರೆ.” ಇದು ಖಂಡಿತ ನೆರವೇರುತ್ತೆ. ನೀವು ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಡೋದಾದ್ರೆ ಸೈನ್ಯಗಳ ದೇವರಾದ ಯೆಹೋವನೇ ನನ್ನನ್ನ ನಿಮ್ಮ ಹತ್ರ ಕಳಿಸಿದ್ದಾನೆ ಅಂತ ತಿಳ್ಕೊಳ್ತೀರ.’”