ಯೆರೆಮೀಯ
8 ಯೆಹೋವ ಹೇಳೋದು ಏನಂದ್ರೆ “ಆ ಸಮಯದಲ್ಲಿ ಯೆಹೂದದ ರಾಜರ, ಅಧಿಕಾರಿಗಳ, ಪುರೋಹಿತರ, ಪ್ರವಾದಿಗಳ, ಯೆರೂಸಲೇಮಿನ ಜನ್ರ ಮೂಳೆಗಳನ್ನ ಅವ್ರ ಸಮಾಧಿಯಿಂದ ಹೊರಗೆ ತೆಗಿತಾರೆ. 2 ಆಮೇಲೆ ಜನ್ರು ಆ ಮೂಳೆಗಳನ್ನ ಸೂರ್ಯ, ಚಂದ್ರ, ಆಕಾಶದ ಇಡೀ ಸೈನ್ಯದ ಕೆಳಗೆ ಹರಡ್ತಾರೆ. ಯಾಕಂದ್ರೆ ಅವರು ಅವುಗಳನ್ನೇ ಪ್ರೀತಿಸ್ತಿದ್ರು, ಅವುಗಳ ಸೇವೆಯನ್ನೇ ಮಾಡ್ತಿದ್ರು, ಅವುಗಳನ್ನೇ ಆರಾಧಿಸ್ತಿದ್ರು, ಸಲಹೆ ಕೇಳ್ತಾ ಇದ್ರು, ಅವುಗಳಿಗೆ ಅಡ್ಡಬೀಳ್ತಾ ಇದ್ರು.+ ಆ ಮೂಳೆಗಳನ್ನ ಯಾರೂ ಕೂಡಿಸಲ್ಲ, ಸಮಾಧಿನೂ ಮಾಡಲ್ಲ. ಅವು ಭೂಮಿ ಮೇಲೆ ಗೊಬ್ಬರ ಆಗಿ ಹೋಗುತ್ತೆ.”+
3 ಸೈನ್ಯಗಳ ದೇವರಾದ ಯೆಹೋವ ಹೇಳೋದು ಏನಂದ್ರೆ “ಈ ಕೆಟ್ಟ ದೇಶದಲ್ಲಿ ಬದುಕಿರೋ ಜನ್ರನ್ನ ನಾನು ಎಲ್ಲೆಲ್ಲಾ ಚೆದರಿಸಿಬಿಡ್ತಿನೋ ಆ ಎಲ್ಲ ಜಾಗಗಳಲ್ಲಿ ಅವರು ಜೀವನಾನೇ ಬೇಡ ಸಾವು ಬೇಕು ಅಂತ ಬೇಡ್ತಾರೆ.”
4 “ನೀನು ಅವ್ರಿಗೆ ಹೀಗೆ ಹೇಳು ‘ಯೆಹೋವ ಹೇಳೋದು ಏನಂದ್ರೆ
“ಒಬ್ಬ ಬಿದ್ರೆ ಎದ್ದೇಳಲ್ವಾ?
ಒಬ್ಬ ಹಿಂದೆ ತಿರುಗಿದ್ರೆ ಇನ್ನೊಬ್ಬ ಕೂಡ ಹಿಂದೆ ತಿರುಗಲ್ವಾ?
5 ಯೆರೂಸಲೇಮಿನ ಜನ ಯಾಕೆ ನನಗೆ ಯಾವಾಗ್ಲೂ ದ್ರೋಹ ಮಾಡ್ತಾ ಇರ್ತಾರೆ?
ಮೋಸ ಮಾಡೋದೇ ಅವ್ರ ಕೆಲಸ,
ಅದನ್ನ ಬಿಟ್ಟುಬಿಡೋಕೆ ಅವ್ರಿಗೆ ಇಷ್ಟಾನೇ ಇಲ್ಲ.+
6 ನಾನು ಅವ್ರಿಗೆ ಗಮನಕೊಡ್ತಿದ್ದೆ, ಅವ್ರ ಮಾತನ್ನ ಕೇಳ್ತಿದ್ದೆ, ಆದ್ರೆ ಅವರು ನ್ಯಾಯವಾಗಿ ಮಾತಾಡ್ತಾ ಇರಲಿಲ್ಲ.
ಒಬ್ಬನೂ ತಾನು ಮಾಡಿದ ಕೆಟ್ಟಕೆಲಸಕ್ಕಾಗಿ ಪಶ್ಚಾತ್ತಾಪ ಪಡಲಿಲ್ಲ ಅಥವಾ ‘ನಾನು ಎಂಥಾ ಕೆಲಸ ಮಾಡ್ದೆ?’ ಅಂತ ಕೇಳಲಿಲ್ಲ.+
ತುಂಬ ಜನ ಹಿಡಿದಿರೋ ದಾರಿಗೇ ಎಲ್ಲರು ಮತ್ತೆ ಮತ್ತೆ ಹೋಗ್ತಾರೆ, ಕುದುರೆ ಯುದ್ಧಭೂಮಿಗೆ ಜೋರಾಗಿ ಓಡೋ ಹಾಗೆ ಎಲ್ಲರು ಆ ದಾರಿಯಲ್ಲಿ ಮುನ್ನುಗ್ತಾರೆ.
7 ಆಕಾಶದಲ್ಲಿ ಹಾರಾಡೋ ಕೊಕ್ಕರೆಗೆ ಸಹ ತಾನು ವಲಸೆ ಹೋಗಬೇಕಾದ ಸಮಯ ಯಾವುದು ಅಂತ ಗೊತ್ತು.
ಕಾಡುಪಾರಿವಾಳ, ಬಾನಾಡಿ, ಸಿಳ್ಳಾರ ಹಕ್ಕಿಗಳು* ಸಮಯಕ್ಕೆ ಸರಿಯಾಗಿ ವಾಪಸ್ ಬರುತ್ತೆ.*
ಆದ್ರೆ ನನ್ನ ಜನ್ರು ಯೆಹೋವನಾದ ನಾನು ಯಾವಾಗ ಅವ್ರಿಗೆ ತೀರ್ಪು ಮಾಡ್ತೀನಿ ಅಂತ ತಿಳ್ಕೊಳ್ತಿಲ್ಲ.”’+
8 ‘“ನಾವು ವಿವೇಕಿಗಳು, ನಮ್ಮ ಹತ್ರ ಯೆಹೋವನ ನಿಯಮ ಪುಸ್ತಕ ಇದೆ” ಅಂತ ಹೇಗೆ ಹೇಳ್ತೀರಾ?
ನಿಜ ಏನಂದ್ರೆ ಬರಹಗಾರರು* ತಮ್ಮ ಲೇಖನಿಯಿಂದ*+ ಬರೀ ಸುಳ್ಳುಗಳನ್ನ ಬರಿತಿದ್ದಾರೆ.
9 ವಿವೇಕಿಗಳಿಗೆ ಅವಮಾನ ಆಗಿದೆ.+
ಅವರು ಹೆದರಿಬಿಟ್ಟಿದ್ದಾರೆ, ಸಿಕ್ಕಿಬೀಳ್ತಾರೆ.
ನೋಡು! ಅವರು ಯೆಹೋವನ ಮಾತು ಕೇಳ್ತಿಲ್ಲ,
ಅಂದ್ಮೇಲೆ ಅವರು ಹೇಗೆ ವಿವೇಕಿಗಳ್ತಾರೆ?
10 ನಾನು ಅವ್ರ ಹೆಂಡತಿಯರನ್ನ ಬೇರೆ ಗಂಡಸರಿಗೆ ಕೊಡ್ತೀನಿ,
ಅವ್ರ ಹೊಲಗಳಿಗೆ ಬೇರೆಯವರು ಒಡೆಯರಾಗ್ತಾರೆ,+
ಯಾಕಂದ್ರೆ ಅವ್ರಲ್ಲಿ ಚಿಕ್ಕವರಿಂದ ದೊಡ್ಡವರ ತನಕ ಎಲ್ರೂ ಮೋಸ ಮಾಡಿ ಲಾಭ ಮಾಡ್ತಾರೆ.+
ಪ್ರವಾದಿಯಿಂದ ಪುರೋಹಿತನ ತನಕ ಎಲ್ರೂ ಮೋಸ ಮಾಡ್ತಾರೆ.+
11 ಶಾಂತಿ ಇಲ್ಲದಿದ್ರೂ
“ಶಾಂತಿ ಇದೆ! ಶಾಂತಿ ಇದೆ!” ಅಂತ ಹೇಳ್ತಾ+
ನನ್ನ ಮಗಳ ಅಂದ್ರೆ ನನ್ನ ಜನ್ರ ಗಾಯವನ್ನ* ಮೇಲೆ ಮೇಲೆ ವಾಸಿಮಾಡೋಕೆ ಪ್ರಯತ್ನಿಸ್ತಿದ್ದಾರೆ.
12 ಕೆಟ್ಟ ಕೆಲಸಗಳನ್ನ ಮಾಡಿದ್ದಕ್ಕೆ ಅವ್ರಿಗೆ ಸ್ವಲ್ಪ ಆದ್ರೂ ನಾಚಿಕೆ ಇದ್ಯಾ?
ಸ್ವಲ್ಪನೂ ನಾಚಿಕೆ ಇಲ್ಲ!
ನಾಚಿಕೆ ಅಂದ್ರೆ ಏನಂತ ಅವ್ರಿಗೆ ಗೊತ್ತೇ ಇಲ್ಲ!+
ಹಾಗಾಗಿ ಅವರು ಈಗಾಗಲೇ ಬಿದ್ದುಹೋದವ್ರ ಹಾಗೆ ಬಿದ್ದುಹೋಗ್ತಾರೆ,
ನಾನು ಅವ್ರಿಗೆ ಶಿಕ್ಷೆ ಕೊಡುವಾಗ ಅವರು ಎಡವಿಬಿಳ್ತಾರೆ’+ ಅಂತ ಯೆಹೋವ ಹೇಳ್ತಾನೆ.
13 ಯೆಹೋವ ಹೇಳೋದು ಏನಂದ್ರೆ ‘ನಾನು ಅವ್ರನ್ನ ಒಟ್ಟು ಸೇರಿಸುವಾಗ ನಾಶ ಮಾಡ್ತೀನಿ,
ದ್ರಾಕ್ಷಿಬಳ್ಳಿಯಲ್ಲಿ ಒಂದೇ ಒಂದು ದ್ರಾಕ್ಷಿಯಾಗಲಿ, ಅಂಜೂರ ಮರದಲ್ಲಿ ಒಂದೇ ಒಂದು ಅಂಜೂರವಾಗಲಿ ಇರಲ್ಲ.
ಎಲೆಗಳೆಲ್ಲಾ ಬಾಡಿಹೋಗುತ್ತೆ.
ನಾನು ಅವ್ರಿಗೆ ಕೊಟ್ಟಿದ್ದನ್ನೆಲ್ಲ ಕಳ್ಕೊಳ್ತಾರೆ.’”
14 “ನಾವ್ಯಾಕೆ ಇಲ್ಲಿ ಸುಮ್ಮನೆ ಕೂತಿದ್ದೀವಿ?
ಬನ್ನಿ, ನಾವೆಲ್ಲ ಸೇರಿ ಭದ್ರ ಕೋಟೆಗಳಿರೋ ಪಟ್ಟಣಗಳಿಗೆ ಹೋಗೋಣ,+ ಅಲ್ಲೇ ನಾಶ ಆಗೋಣ.
ನಮ್ಮ ದೇವರಾದ ಯೆಹೋವ ನಮ್ಮನ್ನ ಸಾಯಿಸಿಬಿಡ್ತಾನೆ,
ಆತನು ನಮಗೆ ವಿಷ ನೀರನ್ನ ಕುಡಿಯೋಕೆ ಕೊಡ್ತಾನೆ,+
ಯಾಕಂದ್ರೆ ನಾವು ಯೆಹೋವನ ವಿರುದ್ಧ ಪಾಪ ಮಾಡಿದ್ದೀವಿ.
15 ಇವತ್ತಲ್ಲ ನಾಳೆ ಶಾಂತಿ, ನೆಮ್ಮದಿ ಸಿಗುತ್ತೆ ಅಂದ್ಕೊಂಡ್ವಿ, ಆದ್ರೆ ಏನೂ ಒಳ್ಳೆದಾಗಲಿಲ್ಲ,
ವಾಸಿಯಾಗೋ ಸಮಯಕ್ಕಾಗಿ ಕಾಯ್ತಾ ಇದ್ವಿ, ಆದ್ರೆ ಭಯನೇ ಆವರಿಸಿದೆ!+
16 ಶತ್ರುಗಳ ಕುದುರೆಗಳು ಜೋರಾಗಿ ಬಿಡೋ ನಿಟ್ಟುಸಿರು ದಾನ್ ಪಟ್ಟಣದಿಂದ ಕೇಳ್ತಿದೆ.
ಅವ್ರ ಗಂಡು ಕುದುರೆಗಳು ಮಾಡೋ ಶಬ್ದಕ್ಕೆ ಇಡೀ ದೇಶನೇ ನಡುಗ್ತಿದೆ.
ಆ ಶತ್ರುಗಳು ಬಂದು ದೇಶವನ್ನ, ಅದ್ರಲ್ಲಿ ಇರೋದನ್ನೆಲ್ಲ ನಾಶ ಮಾಡ್ತಾರೆ,
ಪಟ್ಟಣವನ್ನ ಅದ್ರ ಎಲ್ಲ ಜನ್ರನ್ನ ಪೂರ್ತಿ ನಾಶ ಮಾಡ್ತಾರೆ.”
17 ಯೆಹೋವ ಹೇಳೋದು ಏನಂದ್ರೆ “ನಿಮ್ಮ ಮಧ್ಯ ಹಾವುಗಳನ್ನ,
ಪಳಗಿಸೋಕೆ ಆಗದ ವಿಷ ಹಾವುಗಳನ್ನ ಕಳಿಸ್ತಿದ್ದೀನಿ,
ಅವು ನಿಮ್ಮನ್ನ ಕಚ್ಚದೆ ಇರಲ್ಲ.”
18 ನನಗೆ ಸಹಿಸೋಕೆ ಆಗದಷ್ಟು ದುಃಖ ಇದೆ,
ನನ್ನ ಎದೆ ಒಡೆದುಹೋಗಿದೆ.
19 ನನ್ನ ಮಗಳು ಅಂದ್ರೆ ನನ್ನ ಜನ್ರು
ದೂರ ದೇಶದಿಂದ ಸಹಾಯಕ್ಕಾಗಿ ಬೇಡ್ತಾ,
“ಯೆಹೋವ ಚೀಯೋನಲ್ಲಿ ಇಲ್ವಾ?
ಅವಳ ರಾಜ ಅಲ್ಲಿಲ್ವಾ?” ಅಂತಾರೆ.
“ಅವರು ತಮ್ಮ ಕೆತ್ತಿದ ಮೂರ್ತಿಗಳಿಂದ,
ಪ್ರಯೋಜನಕ್ಕೆ ಬಾರದ ಬೇರೆ ದೇವರುಗಳಿಂದ ನನಗೆ ಯಾಕೆ ಕೋಪ ಬರಿಸಿದ್ದಾರೆ?”
20 “ಕೊಯ್ಲಿನ ಕಾಲ ಮುಗಿದಿದೆ, ಬೇಸಿಗೆ ಕಾಲನೂ ಮುಗಿದಿದೆ,
ಆದ್ರೆ ದೇವರು ಇನ್ನೂ ನಮ್ಮನ್ನ ಕಾಪಾಡಿಲ್ಲ!”
21 ನನ್ನ ಮಗಳಿಗೆ ಅಂದ್ರೆ ನನ್ನ ಜನ್ರಿಗೆ ಆಗಿರೋ ಗಾಯವನ್ನ ನೋಡಿ ನನ್ನ ಹೃದಯ ನುಚ್ಚುನೂರಾಗಿದೆ,+
ನನಗೆ ತುಂಬ ಬೇಜಾರಾಗಿದೆ.
ಭಯ, ಆತಂಕ ನನ್ನನ್ನ ಬಿಟ್ಟುಹೋಗ್ತಿಲ್ಲ.
22 ಗಿಲ್ಯಾದಿನಲ್ಲಿ ಸುಗಂಧ ತೈಲ* ಇಲ್ವಾ?+
ಅಲ್ಲಿ ವೈದ್ಯರು ಯಾರೂ ಇಲ್ವಾ?+
ಹಾಗಾದ್ರೆ ಯಾಕೆ ನನ್ನ ಮಗಳು ಅಂದ್ರೆ ನನ್ನ ಜನ ಇನ್ನೂ ವಾಸಿ ಆಗಿಲ್ಲ?+