ಯೆಹೆಜ್ಕೇಲ
43 ಆಮೇಲೆ ಅವನು ನನ್ನನ್ನ ಪೂರ್ವಕ್ಕೆ ಮುಖಮಾಡಿರೋ ಬಾಗಿಲ ಹತ್ರ ಕರ್ಕೊಂಡು ಹೋದ.+ 2 ಅಲ್ಲಿ ಇಸ್ರಾಯೇಲಿನ ದೇವರ ಮಹಿಮೆ ಪೂರ್ವದಿಂದ ಬರೋದನ್ನ ನಾನು ನೋಡಿದೆ.+ ಆತನ ಧ್ವನಿ ಪ್ರವಾಹದ ತರ ನುಗ್ಗಿಬರೋ ನೀರಿನ ಶಬ್ದದ ಹಾಗಿತ್ತು.+ ಆತನ ಮಹಿಮೆಯಿಂದ ಭೂಮಿ ಪ್ರಜ್ವಲಿಸ್ತು.+ 3 ನಾನು* ಪಟ್ಟಣವನ್ನ ಹಾಳುಮಾಡೋಕೆ ಬಂದಾಗ ನೋಡಿದಂಥ ದರ್ಶನವನ್ನೇ ಈಗಲೂ ನೋಡಿದೆ. ಅದು ಕೆಬಾರ್ ನದಿ ಹತ್ರ ನಾನು ನೋಡಿದ್ದ ದರ್ಶನದ ತರಾನೇ ಇತ್ತು.+ ಅದನ್ನ ನೋಡಿ ನಾನು ನೆಲದ ಮೇಲೆ ಅಡ್ಡಬಿದ್ದೆ.
4 ಆಗ ಯೆಹೋವನ ಮಹಿಮೆ ಪೂರ್ವಕ್ಕೆ ಮುಖಮಾಡಿದ್ದ ಬಾಗಿಲಿಂದ ಆಲಯಕ್ಕೆ ಬಂತು.+ 5 ಆಮೇಲೆ ಪವಿತ್ರಶಕ್ತಿ* ನನ್ನನ್ನ ಮೇಲಕ್ಕೆತ್ತಿ ಒಳಗಿನ ಅಂಗಳಕ್ಕೆ ಕರ್ಕೊಂಡು ಬಂತು. ಯೆಹೋವನ ಮಹಿಮೆ ಇಡೀ ದೇವಾಲಯದಲ್ಲಿ ತುಂಬಿರೋದನ್ನ ನಾನು ನೋಡಿದೆ.+ 6 ಆಮೇಲೆ ದೇವಾಲಯದ ಒಳಗಿಂದ ನನ್ನ ಜೊತೆ ಯಾರೋ ಮಾತಾಡಿದ್ದು ಕೇಳಿಸ್ತು. ಅವನು ಬಂದು ನನ್ನ ಪಕ್ಕದಲ್ಲಿ ನಿಂತು,+ 7 ನನಗೆ ಹೀಗಂದ:
“ಮನುಷ್ಯಕುಮಾರನೇ, ಇದು ನನ್ನ ಸಿಂಹಾಸನ ಇರೋ ಜಾಗ,+ ನನ್ನ ಪಾದಗಳನ್ನ ಇಡೋ ಜಾಗ.+ ಇಲ್ಲಿ ನಾನು ಇಸ್ರಾಯೇಲ್ಯರ ಜೊತೆ ಶಾಶ್ವತವಾಗಿ ವಾಸಿಸ್ತೀನಿ.+ ಇನ್ಮುಂದೆ ಇಸ್ರಾಯೇಲ್ಯರು ಮತ್ತು ಅವ್ರ ರಾಜರು ನಂಬಿಕೆ ದ್ರೋಹ ಮಾಡಿ* ನನ್ನ ಪವಿತ್ರ ಹೆಸ್ರನ್ನ ಅಶುದ್ಧ ಮಾಡಲ್ಲ.+ ಅವ್ರ ರಾಜರು ಸತ್ತಾಗ ಆ ಶವಗಳಿಂದಾನೂ ನನ್ನ ಪವಿತ್ರ ಹೆಸ್ರನ್ನ ಅಶುದ್ಧ ಮಾಡಲ್ಲ. 8 ಈ ಹಿಂದೆ ಅವರು ನನ್ನ ಆಲಯದ ಹೊಸ್ತಿಲ ಪಕ್ಕದಲ್ಲಿ ಅವ್ರ ಮಂದಿರದ ಹೊಸ್ತಿಲನ್ನ ಇಟ್ರು, ನನ್ನ ಆಲಯದ ಬಾಗಿಲಿನ ಚೌಕಟ್ಟಿನ ಪಕ್ಕದಲ್ಲಿ ಅವ್ರ ಮಂದಿರದ ಬಾಗಿಲಿನ ಚೌಕಟ್ಟನ್ನ ಇಟ್ರು. ನನ್ನ ಮತ್ತು ಅವ್ರ ಮಧ್ಯ ಗೋಡೆ ಮಾತ್ರ ಅಡ್ಡ ಇತ್ತು.+ ಇಂಥ ಅಸಹ್ಯ ಕೆಲಸಗಳನ್ನ ಮಾಡಿ ಅವರು ನನ್ನ ಪವಿತ್ರ ಹೆಸ್ರನ್ನ ಅಶುದ್ಧ ಮಾಡಿದ್ರು. ಹಾಗಾಗಿ ನಾನು ಕೋಪದಿಂದ ಅವ್ರನ್ನ ನಾಶ ಮಾಡಿದೆ.+ 9 ಈಗ ಅವರು ನನಗೆ ನಂಬಿಕೆ ದ್ರೋಹ ಮಾಡದಿರಲಿ ಮತ್ತು ಅವ್ರ ರಾಜರ ಶವಗಳನ್ನ ನನ್ನ ಮುಂದಿಂದ ತೆಗೆದು ದೂರ ಬಿಸಾಡಲಿ. ಆಗ ನಾನು ಅವ್ರ ಜೊತೆ ಶಾಶ್ವತವಾಗಿ ವಾಸಿಸ್ತೀನಿ.+
10 ಮನುಷ್ಯಕುಮಾರನೇ, ಇಸ್ರಾಯೇಲ್ಯರು ತಾವು ಮಾಡಿದ ಪಾಪಗಳನ್ನ ನೆನಸಿ ನಾಚಿಕೆಪಡಬೇಕು.+ ಹಾಗಾಗಿ ನೀನು ನೋಡಿದ ಆಲಯದ ಬಗ್ಗೆ ಅವ್ರಿಗೆ ವರ್ಣಿಸು.+ ಅದ್ರ ನಕ್ಷೆಯನ್ನ ಅವರು ಚೆನ್ನಾಗಿ ನೋಡಬೇಕು. 11 ಅವ್ರ ಪಾಪಗಳನ್ನ ನೆನಸಿ ನಾಚಿಕೆಪಟ್ರೆ ನೀನು ಅವ್ರಿಗೆ ಆಲಯದ ನಕ್ಷೆ, ಅದ್ರ ಯೋಜನೆ, ಅದ್ರ ಬಾಗಿಲುಗಳು ಇರೋ ಜಾಗಗಳ ಬಗ್ಗೆ ಹೇಳಬೇಕು.+ ಅದ್ರ ಎಲ್ಲ ನಕ್ಷೆಗಳನ್ನ, ಅದ್ರ ಶಾಸನ ಮತ್ತು ನಿಯಮಗಳನ್ನ ಅವ್ರಿಗೆ ತೋರಿಸು. ಅವ್ರ ಕಣ್ಮುಂದೆ ಅವುಗಳನ್ನ ಬರಿ. ಅವರು ಅದ್ರ ಎಲ್ಲ ನಕ್ಷೆಗಳನ್ನ ಗಮನಿಸಿ, ಅದ್ರ ನಿಯಮಗಳನ್ನ ಪಾಲಿಸಿ ನಡಿಯೋಕೆ ನೀನು ಹಾಗೆ ಮಾಡು.+ 12 ಆಲಯದ ನಿಯಮ ಏನಂದ್ರೆ, ಬೆಟ್ಟದ ಮೇಲೆ ಸುತ್ತ ಇರೋ ಜಾಗ ಎಲ್ಲ ಅತಿ ಪವಿತ್ರವಾಗಿದೆ.+ ನೋಡು! ಇದೇ ಆಲಯದ ನಿಯಮ.
13 ಮೊಳದ ಲೆಕ್ಕದಲ್ಲಿ ಯಜ್ಞವೇದಿಯ ಅಳತೆ ಹೀಗಿದೆ:+ (ಇಲ್ಲಿ ಹೇಳಿರೋ ಮೊಳಕ್ಕೆ ಒಂದು ಕೈಯಗಲ ಜಾಸ್ತಿ ಸೇರಿಸಲಾಗಿದೆ.)* ಯಜ್ಞವೇದಿಯ ತಳ ಒಂದು ಮೊಳ, ಅದ್ರ ಅಗಲ ಒಂದು ಮೊಳ. ಅದ್ರ ತಳದ ಸುತ್ತ ಒಂದು ಅಂಚು ಇದೆ. ಅದು ಒಂದು ಗೇಣು* ಅಗಲ ಇದೆ. ಇದು ಯಜ್ಞವೇದಿಯ ತಳ. 14 ಯಜ್ಞವೇದಿಯ ತಳದಿಂದ ಸುತ್ತ ಇರೋ ಚಿಕ್ಕ ಅಂಚಿನ ತನಕ 2 ಮೊಳ, ಆ ಅಂಚಿನ ಅಗಲ ಒಂದು ಮೊಳ. ಸುತ್ತ ಇರೋ ಚಿಕ್ಕ ಅಂಚಿನಿಂದ ದೊಡ್ಡ ಅಂಚಿನ ತನಕ 4 ಮೊಳ, ದೊಡ್ಡ ಅಂಚಿನ ಅಗಲ ಒಂದು ಮೊಳ. 15 ಯಜ್ಞವೇದಿಯ ಅಗ್ನಿಕುಂಡ ನಾಲ್ಕು ಮೊಳ ಎತ್ತರ ಇದೆ. ಈ ಅಗ್ನಿಕುಂಡದ ನಾಲ್ಕು ಮೂಲೆಗಳಲ್ಲಿ ನಾಲ್ಕು ಕೊಂಬುಗಳು+ ಮೇಲೆ ಮುಖ ಮಾಡಿವೆ. 16 ಯಜ್ಞವೇದಿಯ ಅಗ್ನಿಕುಂಡ ಚೌಕಾಕಾರವಾಗಿದೆ. ಅದು 12 ಮೊಳ ಉದ್ದ, 12 ಮೊಳ ಅಗಲ.+ 17 ಸುತ್ತ ಇರೋ ಅಂಚಿನ ಬದಿ 14 ಮೊಳ ಉದ್ದ, 14 ಮೊಳ ಅಗಲ. ಆ ಅಂಚಿನ ಸುತ್ತ ಇರೋ ಅಂಚು ಅರ್ಧ ಮೊಳ ಇದೆ. ಯಜ್ಞವೇದಿಯ ತಳ ಎಲ್ಲ ಬದಿಗಳಲ್ಲಿ ಒಂದು ಮೊಳ ಇದೆ.
ಯಜ್ಞವೇದಿಯ ಮೆಟ್ಟಿಲುಗಳು ಪೂರ್ವ ಭಾಗದಲ್ಲಿವೆ.”
18 ಆಮೇಲೆ ಅವನು ನನಗೆ “ಮನುಷ್ಯಕುಮಾರನೇ, ವಿಶ್ವದ ರಾಜ ಯೆಹೋವ ಹೀಗಂತಾನೆ: ‘ಯಜ್ಞವೇದಿಯನ್ನ ಕಟ್ಟುವಾಗ ಈ ನಿರ್ದೇಶನಗಳನ್ನ ಪಾಲಿಸಬೇಕು. ಇದ್ರಿಂದ ಅದ್ರ ಮೇಲೆ ಸರ್ವಾಂಗಹೋಮ ಬಲಿಗಳನ್ನ ಕೊಡುವಾಗ ರಕ್ತ ಚಿಮಿಕಿಸೋಕೆ ಆಗುತ್ತೆ.’+
19 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಪಾಪಪರಿಹಾರಕ ಬಲಿ ಕೊಡೋಕೆ ನೀನು ಹಿಂಡಿಂದ ಒಂದು ಎಳೇ ಹೋರಿಯನ್ನ ತಂದು ಕೊಡು.+ ನನ್ನ ಮುಂದೆ ಬಂದು ಸೇವೆಮಾಡೋ ಲೇವಿಯರಿಗೆ ಅಂದ್ರೆ ಚಾದೋಕನ ವಂಶದ ಪುರೋಹಿತರಿಗೆ ನೀನು ಅದನ್ನ ಕೊಡಬೇಕು.+ 20 ನೀನು ಅದ್ರ ರಕ್ತದಲ್ಲಿ ಸ್ವಲ್ಪವನ್ನ ತಗೊಂಡು ಯಜ್ಞವೇದಿಯ ನಾಲ್ಕು ಕೊಂಬುಗಳಿಗೆ, ಸುತ್ತ ಇರೋ ಅಂಚಿಗೆ ಮತ್ತು ಅದ್ರ ನಾಲ್ಕು ಮೂಲೆಗಳಿಗೆ ಹಚ್ಚಬೇಕು. ಹೀಗೆ ಮಾಡಿ ಯಜ್ಞವೇದಿಯನ್ನ ಪರಿಶುದ್ಧ ಮಾಡಬೇಕು ಮತ್ತು ಅದಕ್ಕಾಗಿ ಪ್ರಾಯಶ್ಚಿತ್ತವನ್ನ ಮಾಡಬೇಕು.+ 21 ಆಮೇಲೆ ಪಾಪಪರಿಹಾರಕ ಬಲಿಯಾಗಿ ಕೊಟ್ಟ ಎಳೇ ಹೋರಿಯನ್ನ ತಗೊಂಡು ಹೋಗಿ ದೇವಾಲಯದ ನೇಮಿತ ಜಾಗದಲ್ಲಿ ಅಂದ್ರೆ ಆರಾಧನಾ ಸ್ಥಳದ ಹೊರಗೆ ಸುಟ್ಟುಬಿಡಬೇಕು.+ 22 ಎರಡನೇ ದಿನ ನೀನು ಪಾಪಪರಿಹಾರಕ ಬಲಿ ಕೊಡೋಕೆ ಯಾವ ದೋಷನೂ ಇಲ್ಲದ ಒಂದು ಹೋತ ತರಬೇಕು. ಅವರು ಎಳೇ ಹೋರಿಯನ್ನ ಕೊಟ್ಟು ಯಜ್ಞವೇದಿಯನ್ನ ಪರಿಶುದ್ಧ ಮಾಡಿದ ಹಾಗೆ ಹೋತವನ್ನ ಕೊಟ್ಟು ಯಜ್ಞವೇದಿಯನ್ನ ಪರಿಶುದ್ಧ ಮಾಡಬೇಕು.’
23 ‘ನೀನು ಯಜ್ಞವೇದಿಯನ್ನ ಪರಿಶುದ್ಧ ಮಾಡಿದ ಮೇಲೆ ಹಿಂಡಿಂದ ಒಂದು ಎಳೇ ಹೋರಿಯನ್ನ ಮತ್ತು ಮಂದೆಯಿಂದ ಒಂದು ಟಗರನ್ನ ತಂದು ಕೊಡಬೇಕು. ಅವುಗಳಲ್ಲಿ ಯಾವ ದೋಷನೂ ಇರಬಾರದು. 24 ನೀನು ಅವುಗಳನ್ನ ಯೆಹೋವನಿಗೆ ಕೊಡಬೇಕು. ಪುರೋಹಿತರು ಅವುಗಳ ಮೇಲೆ ಉಪ್ಪನ್ನ ಎರಚಬೇಕು+ ಮತ್ತು ಅವುಗಳನ್ನ ಯೆಹೋವನಿಗೆ ಸರ್ವಾಂಗಹೋಮ ಬಲಿಯಾಗಿ ಕೊಡಬೇಕು. 25 ಪಾಪಪರಿಹಾರಕ ಬಲಿಗಾಗಿ ನೀನು ಪ್ರತಿದಿನ ಒಂದು ಹೋತ, ಒಂದು ಎಳೇ ಹೋರಿ ಮತ್ತು ಒಂದು ಟಗರನ್ನ ತಂದು ಕೊಡಬೇಕು. ಹೀಗೆ ಏಳು ದಿನ ತರಬೇಕು.+ ಆ ಪ್ರಾಣಿಗಳಲ್ಲಿ ಯಾವ ದೋಷನೂ ಇರಬಾರದು. 26 ಏಳು ದಿನ ಅವರು ಯಜ್ಞವೇದಿಗಾಗಿ ಪ್ರಾಯಶ್ಚಿತ್ತ ಮಾಡಬೇಕು. ಅವರು ಅದನ್ನ ಶುದ್ಧಮಾಡಿ ಉದ್ಘಾಟಿಸಬೇಕು. 27 ಏಳು ದಿನ ಆದ್ಮೇಲೆ ಎಂಟನೇ ದಿನ+ ಸರ್ವಾಂಗಹೋಮ ಬಲಿ ಮತ್ತು ಸಮಾಧಾನ ಬಲಿಗಾಗಿ ನೀವು* ತಂದು ಕೊಡೋ ಪ್ರಾಣಿಗಳನ್ನ ಯಜ್ಞವೇದಿಯ ಮೇಲೆ ಪುರೋಹಿತರು ಅರ್ಪಿಸಬೇಕು. ಆಗ ನಿಮ್ಮಿಂದ ನನಗೆ ಖುಷಿ ಆಗುತ್ತೆ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”