ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • nwt ಎಸ್ತೇರ್‌ 1: 1-10: 3
  • ಎಸ್ತೇರ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಎಸ್ತೇರ್‌
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಎಸ್ತೇರ್‌

ಎಸ್ತೇರ್‌

1 ರಾಜ ಅಹಷ್ವೇರೋಷ* ಭಾರತದಿಂದ ಇಥಿಯೋಪ್ಯದ* ತನಕ 127 ಪ್ರದೇಶಗಳನ್ನ*+ ಆಳ್ತಿದ್ದ ಕಾಲ ಅದು. 2 ಆ ಸಮಯದಲ್ಲಿ ಅವನು ಶೂಷನ್‌*+ ಅನ್ನೋ ಕೋಟೆಯಿಂದ* ಆಳ್ತಿದ್ದ. 3 ಅವನು ಆಳ್ತಿದ್ದ ಮೂರನೇ ವರ್ಷದಲ್ಲಿ ಅವನು ತನ್ನೆಲ್ಲ ಅಧಿಕಾರಿಗಳಿಗೆ, ಸೇವಕರಿಗೆ ಒಂದು ಔತಣ ಮಾಡಿಸಿದ. ಮೇದ್ಯ+ ಮತ್ತು ಪರ್ಶಿಯದ+ ಸೇನಾಪತಿಗಳು, ಗಣ್ಯ ಅಧಿಕಾರಿಗಳು, ಪ್ರದೇಶಗಳ ರಾಜ್ಯಪಾಲರು ಆ ಔತಣಕ್ಕೆ ಬಂದಿದ್ರು. 4 ರಾಜ ಅವ್ರಿಗೆ ತುಂಬ ದಿನ ತನಕ ಅಂದ್ರೆ 180 ದಿನ ತನಕ ತನ್ನ ರಾಜ್ಯದ ಸಿರಿಸಂಪತ್ತನ್ನ, ವೈಭವವನ್ನ ತೋರಿಸಿದ. 5 ಆ ದಿನಗಳು ಮುಗಿದ್ಮೇಲೆ ರಾಜ ಶೂಷನ್‌ ಕೋಟೆಯಲ್ಲಿ ಔತಣ ಮಾಡಿಸಿದ. ಆ ಔತಣ ರಾಜನ ಅರಮನೆಯ ಉದ್ಯಾನವನದ ಅಂಗಳದಲ್ಲಿ ಏಳು ದಿನ ನಡೀತು. ಶ್ರೀಮಂತರು ಬಡವರು ಎಲ್ಲ ರೀತಿ ಜನ ಅಲ್ಲಿ ಬಂದಿದ್ರು. 6 ಇಡೀ ಅಂಗಳವನ್ನ ನಾರಿನ ಬಟ್ಟೆಯಿಂದ, ಒಳ್ಳೇ ಗುಣಮಟ್ಟದ ಹತ್ತಿ ಬಟ್ಟೆಯಿಂದ, ನೀಲಿ ಬಣ್ಣದ ಪರದೆಗಳಿಂದ ಅಲಂಕಾರ ಮಾಡಿದ್ರು. ಆ ಪರದೆಗಳನ್ನ ನೇರಳೆ ಬಣ್ಣದ ಹುರಿಗಳಿಂದ ಬೆಳ್ಳಿಯ ಉಂಗುರಗಳಿಗೆ ಕಟ್ಟಿ ಅಮೃತ ಶಿಲೆಯ ಕಂಬಗಳಿಗೆ ತೂಗುಹಾಕಿದ್ರು. ಅಮೃತ ಶಿಲೆ, ಮುತ್ತುಗಳು, ಕಪ್ಪು ಬಣ್ಣದ ಕಲ್ಲುಗಳ ಮಿಶ್ರಿತ ಶಿಲೆಯನ್ನ ಹಾಸಿದ್ದ ನೆಲದ ಮೇಲೆ ಬೆಳ್ಳಿಬಂಗಾರದ ದಿವಾನ್‌ಗಳನ್ನ ಇಟ್ಟಿದ್ರು.

7 ದ್ರಾಕ್ಷಾಮದ್ಯವನ್ನ ಚಿನ್ನದ ಲೋಟಗಳಲ್ಲಿ* ಹಾಕಿ ಕೊಡ್ತಿದ್ರು. ಒಂದು ಲೋಟದ ತರ ಇನ್ನೊಂದು ಲೋಟ ಇರ್ಲಿಲ್ಲ. ದ್ರಾಕ್ಷಾಮದ್ಯವನ್ನ ನೀರಿನ ತರ ಹರಿಸ್ತಿದ್ರು. ಅಷ್ಟೊಂದು ದ್ರಾಕ್ಷಾಮದ್ಯವನ್ನ ಕೊಡೋಕೆ ರಾಜನಿಗೆ ಮಾತ್ರ ಸಾಧ್ಯ ಇತ್ತು. 8 ಯಾರೂ ಅತಿಥಿಗಳಿಗೆ ದ್ರಾಕ್ಷಾಮದ್ಯ ಕುಡಿಯೋಕೆ ಒತ್ತಾಯ ಮಾಡಲಿಲ್ಲ.* ಯಾಕಂದ್ರೆ ಹಾಗೆ ಮಾಡಬಾರದು ಅಂತ ನಿಯಮ ಇತ್ತು. ರಾಜ ಅರಮನೆಯ ಅಧಿಕಾರಿಗಳಿಗೆ, ಅತಿಥಿಗಳು ಕೇಳಿದಷ್ಟು ದ್ರಾಕ್ಷಾಮದ್ಯವನ್ನ ಕೊಡಬೇಕಂತ ಆಜ್ಞೆ ಕೊಟ್ಟಿದ್ದ.

9 ರಾಣಿ ವಷ್ಟಿನೂ+ ಸ್ತ್ರೀಯರಿಗಾಗಿ ರಾಜ ಅಹಷ್ವೇರೋಷನ ರಾಜಭವನದಲ್ಲಿ* ಒಂದು ಔತಣ ಮಾಡಿಸಿದ್ದಳು.

10 ಏಳನೇ ದಿನ ರಾಜ ದ್ರಾಕ್ಷಾಮದ್ಯ ಕುಡಿದು ಖುಷಿಯಲ್ಲಿ ತೇಲಾಡ್ತಾ ಇದ್ದಾಗ ತನ್ನ ಸೇವಕರಿಗೆ ಅಂದ್ರೆ ಮೆಹೂಮಾನ್‌, ಬಿಜೆತಾ, ಹರ್ಬೋನಾ,+ ಬಿಗೆತಾ, ಅಬಗೆತಾ, ಜೇತರ್‌, ಕರ್ಕಸ್‌ ಅನ್ನೋ ಏಳು ಜನ ಆಸ್ಥಾನದ ಅಧಿಕಾರಿಗಳಿಗೆ ಒಂದು ಆಜ್ಞೆ ಕೊಟ್ಟ. ಇವರು ರಾಜನ ಸೇವೆಗಾಗಿ ಯಾವಾಗ್ಲೂ ಅವನ ಮುಂದೆ ಇರ್ತಿದ್ರು. 11 ರಾಣಿ ವಷ್ಟಿ ತನ್ನ ರಾಜಮನೆತನದ ತಲೆಯುಡುಪನ್ನ ಹಾಕೊಂಡು ರಾಜನ ಮುಂದೆ ಬಂದು ಎಲ್ಲ ಜನ್ರಿಗೆ, ಅಧಿಕಾರಿಗಳಿಗೆ ತನ್ನ ಸೌಂದರ್ಯ ಪ್ರದರ್ಶಿಸಬೇಕು ಅಂತ ರಾಜ ಹೇಳಿ ಕಳಿಸಿದ. ಯಾಕಂದ್ರೆ ರಾಣಿ ವಷ್ಟಿ ತುಂಬ ಅಪರೂಪದ ಸುಂದರಿ ಆಗಿದ್ದಳು. 12 ರಾಜ ಆಸ್ಥಾನದ ಅಧಿಕಾರಿಗಳ ಮೂಲಕ ಕೊಟ್ಟ ಆಜ್ಞೆಯನ್ನ ರಾಣಿ ವಷ್ಟಿ ತಿರಸ್ಕರಿಸಿದಳು. ರಾಜನ ಮುಂದೆ ಬರೋಕೆ ಎಷ್ಟು ಸಲ ಕರೆದ್ರೂ ಬರ್ಲೇ ಇಲ್ಲ. ಆಗ ರಾಜನಿಗೆ ತುಂಬ ಕೋಪ ಬಂತು. ಅವನ ರಕ್ತ ಕುದಿಯೋಕೆ ಶುರು ಆಯ್ತು.

13 ರಾಜ ಈ ವಿಷ್ಯಗಳ ಬಗ್ಗೆ ಒಳ್ಳೇ ತಿಳುವಳಿಕೆ ಇದ್ದ ವಿವೇಕಿಗಳ ಜೊತೆ ಮಾತಾಡಿದ. (ರಾಜ ತನಗೆ ಸಂಬಂಧಪಟ್ಟ ವಿಷ್ಯಗಳನ್ನ ಈ ರೀತಿ ಕಾನೂನಿನ ಬಗ್ಗೆ, ಮೊಕದ್ದಮೆಗಳ ಬಗ್ಗೆ ಚೆನ್ನಾಗಿ ತಿಳ್ಕೊಂಡಿದ್ದವರ ಮುಂದೆ ಇಡ್ತಿದ್ದ. 14 ಅವ್ರಲ್ಲಿ ರಾಜನಿಗೆ ತುಂಬ ಆಪ್ತರಾಗಿದ್ದ ಸಲಹೆಗಾರರು ಯಾರಂದ್ರೆ: ಕರ್ಷೆನಾ, ಶೇತಾರ್‌, ಅದ್ಮಾತಾ, ತರ್ಷೀಷ್‌, ಮೆರೆಸ್‌, ಮರ್ಸೆನಾ, ಮೆಮೂಕಾನ್‌. ಈ ಏಳೂ ಜನ ಮೇದ್ಯ ಮತ್ತು ಪರ್ಶಿಯದ ಅಧಿಕಾರಿಗಳಾಗಿದ್ರು.+ ರಾಜ್ಯದಲ್ಲಿ ತುಂಬ ದೊಡ್ಡ ಸ್ಥಾನ ಪಡ್ಕೊಂಡಿದ್ದ ಇವರು ಯಾವಾಗ ಬೇಕಾದ್ರೂ ರಾಜನ ಹತ್ರ ಹೋಗಬಹುದಿತ್ತು.) 15 ರಾಜ ಅವ್ರಿಗೆ “ರಾಜ ಅಹಷ್ವೇರೋಷನಾಗಿರೋ ನಾನು ಆಸ್ಥಾನದ ಅಧಿಕಾರಿಗಳ ಮೂಲಕ ಕೊಟ್ಟ ಆಜ್ಞೆಯನ್ನ ರಾಣಿ ವಷ್ಟಿ ತಿರಸ್ಕರಿಸಿದಳು. ಹಾಗಾಗಿ ನಿಯಮದ ಪ್ರಕಾರ ಅವಳಿಗೆ ಏನು ಮಾಡಬೇಕಂತ ಹೇಳಿ” ಅಂದ.

16 ಅದಕ್ಕೆ ರಾಜನ ಮುಂದೆ, ಅಧಿಕಾರಿಗಳ ಮುಂದೆ ಮೆಮೂಕಾನ “ರಾಣಿ ವಷ್ಟಿ ತಪ್ಪು ಮಾಡಿದ್ದು ರಾಜನ ವಿರುದ್ಧ ಮಾತ್ರ ಅಲ್ಲ.+ ರಾಜ ಅಹಷ್ವೇರೋಷನ ಸಂಸ್ಥಾನದಲ್ಲಿರೋ ಎಲ್ಲ ಅಧಿಕಾರಿಗಳ ಮತ್ತು ಜನ್ರ ವಿರುದ್ಧ. 17 ಯಾಕಂದ್ರೆ ರಾಣಿ ಮಾಡಿದ ವಿಷ್ಯ ನಾಳೆ ಎಲ್ಲ ಹೆಂಗಸ್ರಿಗೆ ಗೊತ್ತಾದ್ರೆ ಅವರು ಕೂಡ ತಮ್ಮತಮ್ಮ ಗಂಡಂದಿರಿಗೆ ಮರ್ಯಾದೆ ಕೊಡಲ್ಲ. ‘ರಾಣಿ ವಷ್ಟಿನೇ ರಾಜ ಅಹಷ್ವೇರೋಷನ ಮಾತು ಕೇಳಲಿಲ್ಲ. ಕರೆದಾಗ ಅವನ ಮುಂದೆ ಹೋಗಲಿಲ್ಲ’ ಅಂತ ಹೇಳ್ತಾರೆ. 18 ರಾಣಿ ಮಾಡಿದ ಈ ವಿಷ್ಯ ಮೇದ್ಯ ಮತ್ತು ಪರ್ಶಿಯದ ಅಧಿಕಾರಿಗಳ ಹೆಂಡತಿಯರಿಗೆ ಗೊತ್ತಾದ್ರೆ ಇವತ್ತೇ ಅವರು ಕೂಡ ತಮ್ಮ ಗಂಡಂದಿರ ಜೊತೆ ಅವಳ ತರ ಮಾತಾಡಿ ಮರ್ಯಾದೆ ಕೊಡಲ್ಲ. ಆಗ ಅವ್ರ ಗಂಡಂದಿರಿಗೆ ತುಂಬ ಕೋಪ ಬರುತ್ತೆ. 19 ಹಾಗಾಗಿ ರಾಜನಿಗೆ ಸರಿ ಅನಿಸೋದಾದ್ರೆ ಅವನು ಒಂದು ರಾಜಾಜ್ಞೆ ಹೊರಡಿಸಬಹುದು. ಅದೇನಂದ್ರೆ ರಾಣಿ ವಷ್ಟಿ ಇನ್ನು ಯಾವತ್ತೂ ರಾಜ ಅಹಷ್ವೇರೋಷನ ಮುಂದೆ ಬರಬಾರದು. ಈ ರಾಜಾಜ್ಞೆ ಯಾವತ್ತೂ ರದ್ದಾಗದ+ ಹಾಗೆ ಅದನ್ನ ಮೇದ್ಯ ಮತ್ತು ಪರ್ಶಿಯರ ನಿಯಮಗಳಲ್ಲಿ ಸೇರಿಸಬಹುದು. ಅಷ್ಟೇ ಅಲ್ಲ ವಷ್ಟಿಯ ಸ್ಥಾನಕ್ಕೆ ಅವಳಿಗಿಂತ ಒಳ್ಳೇ ಹೊಸ ರಾಣಿಯನ್ನ ರಾಜ ಆರಿಸ್ಕೊಳ್ಳಬಹುದು. 20 ರಾಜನ ಈ ಆಜ್ಞೆ ಬಗ್ಗೆ ಸಾಮ್ರಾಜ್ಯದಲ್ಲಿ ಇರೋರೆಲ್ಲ ಕೇಳಿಸ್ಕೊಂಡಾಗ ಗಂಡ ಸಾಮಾನ್ಯನಾಗಿ ಇರಲಿ ದೊಡ್ಡ ಸ್ಥಾನದಲ್ಲೇ ಇರಲಿ ಎಲ್ಲ ಹೆಂಡತಿಯರು ಗೌರವ ಕೊಡ್ತಾರೆ” ಅಂದ.

21 ಈ ಸಲಹೆ ರಾಜನಿಗೂ ಅಧಿಕಾರಿಗಳಿಗೂ ಇಷ್ಟ ಆಯ್ತು. ಮೆಮೂಕಾನ್‌ ಹೇಳಿದ ಹಾಗೇ ರಾಜ ಮಾಡಿದ. 22 ಹಾಗಾಗಿ ಅವನು ತನ್ನ ಎಲ್ಲ ಪ್ರಾಂತ್ಯಗಳಿಗೆ+ ಅವ್ರವ್ರ ಭಾಷೆಯಲ್ಲಿ, ಅವ್ರವ್ರ ಲಿಪಿಯಲ್ಲಿ ಪತ್ರಗಳನ್ನ ಬರೆದು ಕಳಿಸಿದ. ಆ ಪತ್ರಗಳಲ್ಲಿ ಹೀಗಿತ್ತು: ಗಂಡಸ್ರು ಮನೆ ಯಜಮಾನರಾಗಿ ಇರ್ತಾರೆ. ಅವರು ಕುಟುಂಬದ ಮೇಲೆ ಅಧಿಕಾರ ನಡೆಸಬೇಕು. ಅವನ ಜನ ಮಾತಾಡೋ ಭಾಷೆಯನ್ನೇ ಅವನ ಮನೆಯಲ್ಲಿ ಆಡಬೇಕು.

2 ಈ ವಿಷ್ಯಗಳೆಲ್ಲ ಆದ್ಮೇಲೆ ರಾಜ ಅಹಷ್ವೇರೋಷನ+ ಕೋಪ ತಣ್ಣಗಾಯ್ತು. ಆಗ ಅವನು ವಷ್ಟಿ ಮಾಡಿದ್ರ ಬಗ್ಗೆ+ ಅವಳಿಗೆ ಕೊಟ್ಟ ಶಿಕ್ಷೆ ಬಗ್ಗೆ ನೆನಪಿಸ್ಕೊಂಡ.+ 2 ಆಗ ರಾಜನ ಆಪ್ತ ಸೇವಕರು ಹೀಗಂದ್ರು: “ರಾಜನಿಗಾಗಿ ಸುಂದರವಾದ ಯುವ ಕನ್ಯೆಯರನ್ನ ಹುಡುಕಬೇಕು. 3 ಇದಕ್ಕಾಗಿ ರಾಜ ತನ್ನ ಸಾಮ್ರಾಜ್ಯದಲ್ಲಿರೋ ಎಲ್ಲ ಪ್ರಾಂತ್ಯಗಳಲ್ಲಿ* ಜನ್ರನ್ನ ನೇಮಿಸ್ಲಿ.+ ಅವರು ಸುಂದರವಾಗಿರೋ ಯುವ ಕನ್ಯೆಯರನ್ನ ಹುಡುಕಿ ಶೂಷನಿನ* ಕೋಟೆಗೆ* ಕರ್ಕೊಂಡು ಬಂದು ಸ್ತ್ರೀಯರ ಅರಮನೆಯಲ್ಲಿ* ಬಿಡ್ಲಿ. ರಾಜ ಕಂಚುಕಿಯೂ* ಸ್ತ್ರೀಯರ ಪರಿಪಾಲಕನೂ ಆಗಿರೋ ಹೇಗೈ+ ಸಂರಕ್ಷಣೆಯಲ್ಲಿ ಆ ಕನ್ಯೆಯರನ್ನ ಇಡ್ಲಿ. ಅವ್ರ ಸೌಂದರ್ಯವನ್ನ ಹೆಚ್ಚಿಸೋ ಲೇಪನಗಳಿಗಾಗಿ* ಏರ್ಪಾಡು ಮಾಡ್ಲಿ. 4 ರಾಜನಿಗೆ ಯಾರು ತುಂಬ ಇಷ್ಟ ಆಗ್ತಾಳೋ ಆ ಯುವತಿ ವಷ್ಟಿಗೆ ಬದ್ಲು ರಾಣಿ ಆಗ್ಲಿ.”+ ಈ ಸಲಹೆ ರಾಜನಿಗೆ ಇಷ್ಟ ಆಯ್ತು. ಅವನು ಹಾಗೇ ಮಾಡಿದ.

5 ಶೂಷನ್‌*+ ಕೋಟೆಯಲ್ಲಿ ಮೊರ್ದೆಕೈ+ ಅನ್ನೋ ಹೆಸ್ರಿನ ಒಬ್ಬ ಯೆಹೂದ್ಯ ಇದ್ದ. ಇವನು ಬೆನ್ಯಾಮೀನ್‌ ಕುಲದವನಾದ+ ಕೀಷನ ಮರಿಮಗ, ಶಿಮ್ಮಿಯ ಮೊಮ್ಮಗ, ಯಾಯೀರನ ಮಗ. 6 ಬಾಬೆಲಿನ ರಾಜ ನೆಬೂಕದ್ನೆಚ್ಚರ ಯೆಹೂದದ ರಾಜ ಯೆಕೊನ್ಯನ*+ ಜೊತೆ ಯೆರೂಸಲೇಮಿಂದ ಕೈದಿಯಾಗಿ ಕರ್ಕೊಂಡು ಬಂದ ಜನ್ರಲ್ಲಿ ಇವನೂ ಇದ್ದ. 7 ಈ ಮೊರ್ದೆಕೈ ತನ್ನ ತಂದೆಯ ಸಹೋದರನ+ ಮಗಳಾದ ಹದೆಸ್ಸಾಳ* ಅಂದ್ರೆ ಎಸ್ತೇರ್‌ಳ ಪಾಲಕನಾಗಿದ್ದ.* ಯಾಕಂದ್ರೆ ಅವಳು ತಂದೆತಾಯಿ ಇಲ್ಲದ ತಬ್ಬಲಿ ಆಗಿದ್ದಳು. ಅವಳು ರೂಪವತಿ ಆಗಿದ್ದಳು, ನೋಡೋಕೆ ತುಂಬ ಚೆನ್ನಾಗಿದ್ದಳು. ಅವಳ ತಂದೆತಾಯಿ ತೀರಿಹೋದ ಮೇಲೆ ಮೊರ್ದೆಕೈ ಅವಳನ್ನ ಸ್ವಂತ ಮಗಳ ಹಾಗೆ ನೋಡ್ಕೊಂಡಿದ್ದ. 8 ರಾಜನ ಆಜ್ಞೆ ಮತ್ತು ಅವನ ನಿಯಮದ ಪ್ರಕಾರ ತುಂಬ ಯುವತಿಯರನ್ನ ಶೂಷನ್‌* ಕೋಟೆಗೆ ಕರ್ಕೊಂಡು ಬಂದ್ರು. ಹೀಗೆ ಕರ್ಕೊಂಡು ಬಂದ ಯುವತಿಯರಲ್ಲಿ ಎಸ್ತೇರ್‌ ಕೂಡ ಇದ್ದಳು. ಆ ಎಲ್ಲ ಯುವತಿಯರನ್ನ ಹೇಗೈ ನೋಡ್ಕೊಳ್ತಿದ್ದ.+

9 ಹೇಗೈಗೆ ಎಸ್ತೇರ್‌ ತುಂಬ ಇಷ್ಟ ಆದಳು, ಅವಳಿಗೆ ದಯೆ* ತೋರಿಸಿ ಅವಳ ಸೌಂದರ್ಯ ಹೆಚ್ಚಿಸೋಕೆ*+ ಮತ್ತು ಒಳ್ಳೇ ಆಹಾರಕ್ಕಾಗಿ ಏರ್ಪಾಡು ಮಾಡಿದ. ಅಷ್ಟೇ ಅಲ್ಲ ರಾಜನ ಅರಮನೆಯಿಂದ ಏಳು ಯುವತಿಯರನ್ನ ಅವಳ ಸೇವಕಿಯರಾಗಿ ನೇಮಿಸಿದ. ಅವಳನ್ನ, ಅವಳ ಸೇವಕಿಯರನ್ನ ಸ್ತ್ರೀಯರ ಅರಮನೆಯಲ್ಲಿದ್ದ ಅತ್ಯುತ್ತಮ ಸ್ಥಳದಲ್ಲಿ ಇರಿಸಿದ. 10 ಎಸ್ತೇರ್‌ ತನ್ನ ಜನ್ರ ಬಗ್ಗೆಯಾಗಲಿ ತನ್ನ ಸಂಬಂಧಿಕರ ಬಗ್ಗೆಯಾಗಲಿ ಯಾರಿಗೂ ಹೇಳಲಿಲ್ಲ.+ ಯಾಕಂದ್ರೆ ಆ ವಿವರಗಳನ್ನ ಯಾರಿಗೂ ಹೇಳಬಾರದು ಅಂತ ಮೊರ್ದೆಕೈ+ ಈ ಮುಂಚೆನೇ ಹೇಳಿದ್ದ.+ 11 ಎಸ್ತೇರ್‌ ಹೇಗಿದ್ದಾಳೆ, ಅವಳಿಗೆ ಏನಾಗ್ತಿದೆ ಅಂತ ತಿಳಿಯೋಕೆ ಮೊರ್ದೆಕೈ ಪ್ರತಿದಿನ ಸ್ತ್ರೀಯರ ಅರಮನೆಯ ಅಂಗಳಕ್ಕೆ ಬಂದು ಹೋಗ್ತಿದ್ದ.

12 ಸ್ತ್ರೀಯರ ಸೌಂದರ್ಯ ಹೆಚ್ಚಿಸೋಕಂತಾನೇ ಇದ್ದ 12 ತಿಂಗಳಿನ ಕಾರ್ಯಕ್ರಮ ಮುಗಿದ ಮೇಲೆ ಪ್ರತಿಯೊಬ್ಬ ಯುವತಿ ತನ್ನ ಸರದಿ ಪ್ರಕಾರ ರಾಜ ಅಹಷ್ವೇರೋಷನ ಹತ್ರ ಹೋಗಬೇಕಿತ್ತು. ಅವಳು ರಾಜನ ಹತ್ರ ಹೋಗೋ ಮುಂಚೆ ತನ್ನ ಸೌಂದರ್ಯವನ್ನ ಹೆಚ್ಚಿಸೋ ಈ ಕಾರ್ಯಕ್ರಮವನ್ನ ಪೂರ್ತಿ ಮಾಡಬೇಕಿತ್ತು. ಅವಳು ಆರು ತಿಂಗಳ ತನಕ ಗಂಧರಸದ+ ಎಣ್ಣೆಯನ್ನ, ಆರು ತಿಂಗಳುಗಳ ತನಕ ಸುಗಂಧ ತೈಲವನ್ನ+ ಬೇರೆಬೇರೆ ಲೇಪನಗಳನ್ನ ಹಚ್ಕೊಳ್ಳಬೇಕಿತ್ತು. 13 ಆಮೇಲೆ ಅವಳು ರಾಜನ ಹತ್ರ ಹೋಗೋಕೆ ಸಿದ್ಧ ಆಗ್ತಿದ್ದಳು. ಸ್ತ್ರೀಯರ ಅರಮನೆಯಿಂದ ರಾಜನ ಅರಮನೆಗೆ ಹೋಗುವಾಗ ಅವಳು ಏನೇ ಕೇಳಿದ್ರೂ ಕೊಡ್ತಿದ್ರು. 14 ಸಾಯಂಕಾಲ ರಾಜನ ಹತ್ರ ಹೋಗ್ತಿದ್ದಳು. ಮಾರನೇ ದಿನ ಬೆಳಿಗ್ಗೆ ಸ್ತ್ರೀಯರಿಗಾಗೇ ಇದ್ದ ಇನ್ನೊಂದು ಅರಮನೆಗೆ ವಾಪಸ್‌ ಬರ್ತಿದ್ದಳು. ಅಲ್ಲಿ ರಾಜನ ಕಂಚುಕಿಯೂ+ ಉಪಪತ್ನಿಯರ ಪರಿಪಾಲಕನೂ ಆಗಿದ್ದ ಶವಷ್ಗಜನ ಆರೈಕೆ ಕೆಳಗೆ ಇರ್ತಿದ್ದಳು. ರಾಜನಿಗೆ ಅವಳು ಇಷ್ಟವಾಗಿ ಅವನು ಅವಳನ್ನ ಹೆಸ್ರಿಟ್ಟು ಕರೆದ್ರೆ ಮಾತ್ರ ಮತ್ತೆ ಅವಳು ರಾಜನ ಹತ್ರ ಹೋಗಬಹುದಿತ್ತು.+

15 ಹೀಗೆ ಮೊರ್ದೆಕೈಯ ತಂದೆಯ ಸಹೋದರ ಅಬೀಹೈಲನ ಮಗಳ ಅಂದ್ರೆ ಮೊರ್ದೆಕೈ ತನ್ನ ಸ್ವಂತ ಮಗಳ ತರ ಬೆಳೆಸಿದ ಎಸ್ತೇರಳ+ ಸರದಿ ಬಂತು. ಅವಳು ಸ್ತ್ರೀಯರ ಪರಿಪಾಲಕನೂ ರಾಜನ ಕಂಚುಕಿಯೂ ಆದ ಹೇಗೈ ನೀಡಿದ್ದನ್ನೇ ಹೊರತೂ ಬೇರೆ ಏನನ್ನೂ ಕೇಳಲಿಲ್ಲ. (ಎಸ್ತೇರಳನ್ನ ನೋಡಿದವ್ರೆಲ್ಲ ಅವಳನ್ನ ತುಂಬ ಮೆಚ್ಚುತ್ತಿದ್ರು.) 16 ರಾಜ ಅಹಷ್ವೇರೋಷನ ಆಳ್ವಿಕೆಯ ಏಳನೇ ವರ್ಷದ+ ಹತ್ತನೇ ತಿಂಗಳಲ್ಲಿ ಅಂದ್ರೆ ಟೇಬೇತ್‌* ತಿಂಗಳಲ್ಲಿ ಎಸ್ತೇರಳನ್ನ ರಾಜನ ಅರಮನೆಗೆ ಕರ್ಕೊಂಡು ಬಂದ್ರು. 17 ರಾಜ ಬೇರೆ ಎಲ್ಲ ಯುವತಿಯರಿಗಿಂತ ಎಸ್ತೇರಳನ್ನ ಜಾಸ್ತಿ ಪ್ರೀತಿಸಿದ. ಅವಳು ಬೇರೆ ಎಲ್ಲ ಕನ್ಯೆಯರಿಗಿಂತ ಹೆಚ್ಚಾಗಿ ರಾಜನ ಮೆಚ್ಚಿಕೆಯನ್ನ, ಒಪ್ಪಿಗೆಯನ್ನ ಪಡೆದಳು. ಹಾಗಾಗಿ ಅವನು ಅವಳ ತಲೆ ಮೇಲೆ ತಲೆಯುಡುಪನ್ನ* ಇಟ್ಟು ವಷ್ಟಿಯ ಸ್ಥಾನದಲ್ಲಿ ಅವಳನ್ನ ರಾಣಿಯಾಗಿ ಮಾಡಿದ.+ 18 ಆಮೇಲೆ ರಾಜ ತನ್ನ ಎಲ್ಲ ಅಧಿಕಾರಿಗಳಿಗಾಗಿ ಮತ್ತು ಸೇವಕರಿಗಾಗಿ ಎಸ್ತೇರ್‌ ಹೆಸ್ರಲ್ಲಿ ಒಂದು ದೊಡ್ಡ ಔತಣ ಮಾಡಿಸಿದ. ಅವನು ತನ್ನ ಪ್ರಾಂತ್ಯದಲ್ಲಿದ್ದ ಎಲ್ಲ ಕೈದಿಗಳಿಗೆ ಬಿಡುಗಡೆ ಆಗಬೇಕಂತ ಆಜ್ಞಾಪಿಸಿದ. ತನ್ನ ಸ್ಥಾನಮಾನಕ್ಕೆ ತಕ್ಕ ಹಾಗೆ ಉಡುಗೊರೆಗಳನ್ನ ಕೊಡ್ತಾ ಬಂದ.

19 ಎರಡನೇ ಸಲ ಕನ್ಯೆಯರನ್ನ*+ ಕರ್ಕೊಂಡು ಬಂದಾಗ ಮೊರ್ದೆಕೈ ರಾಜನ ಅರಮನೆಯ ಹೆಬ್ಬಾಗಿಲಲ್ಲಿ ಕೂತಿದ್ದ. 20 ಮೊರ್ದೆಕೈ ಆಜ್ಞಾಪಿಸಿದ ಹಾಗೇ ಎಸ್ತೇರ್‌ ತನ್ನ ಜನ್ರ ಬಗ್ಗೆಯಾಗಲಿ ತನ್ನ ಸಂಬಂಧಿಕರ ಬಗ್ಗೆಯಾಗಲಿ ಯಾರಿಗೂ ಹೇಳಿರಲಿಲ್ಲ.+ ಎಸ್ತೇರ್‌ ಮೊರ್ದೆಕೈಯ ಆರೈಕೆಯಲ್ಲಿದ್ದಾಗ ಹೇಗೆ ಅವನ ಮಾತನ್ನ ಕೇಳ್ತಿದ್ದಳೋ ಈಗ್ಲೂ ಹಾಗೇ ಅವನ ಮಾತನ್ನ ಕೇಳ್ತಿದ್ದಳು.+

21 ಆ ದಿನಗಳಲ್ಲಿ ಮೊರ್ದೆಕೈ ರಾಜನ ಅರಮನೆಯ ಹೆಬ್ಬಾಗಿಲಲ್ಲಿ ಕೂತ್ಕೊಳ್ತಿದ್ದ. ಅದೇ ಸಮಯದಲ್ಲಿ ರಾಜನ ಬಾಗಿಲು ಕಾಯೋರಾಗಿ ಸೇವೆಮಾಡ್ತಿದ್ದ ಬಿಗೆತಾನ್‌ ಮತ್ತು ತೆರೆಷ್‌ ಅನ್ನೋ ಇಬ್ರು ಆಸ್ಥಾನದ ಅಧಿಕಾರಿಗಳು ರಾಜ ಅಹಷ್ವೇರೋಷನ ಮೇಲಿನ ಕೋಪದಿಂದ ಅವನನ್ನ ಸಾಯಿಸೋಕೆ* ಸಂಚು ಮಾಡಿದ್ರು. 22 ಇದ್ರ ಬಗ್ಗೆ ಮೊರ್ದೆಕೈಗೆ ಗೊತ್ತಾಯ್ತು. ತಕ್ಷಣ ಎಸ್ತೇರ್‌ ರಾಣಿಗೆ ಆ ವಿಷ್ಯ ತಿಳಿಸಿದ. ಆಗ ಎಸ್ತೇರ್‌ ಮೊರ್ದೆಕೈ ಪರವಾಗಿ* ಎಲ್ಲ ವಿಷ್ಯವನ್ನ ರಾಜನಿಗೆ ಹೇಳಿದಳು. 23 ಈ ವಿಷ್ಯದ ಬಗ್ಗೆ ತನಿಖೆ ಮಾಡಿದಾಗ ಅದು ನಿಜ ಅಂತ ಸಾಬೀತಾಯ್ತು. ಆಗ ಆ ಇಬ್ರು ಗಂಡಸ್ರನ್ನ ಕಂಬಕ್ಕೆ ನೇತುಹಾಕಲಾಯ್ತು. ಈ ವಿಷ್ಯಗಳನ್ನೆಲ್ಲ ರಾಜನ ಮುಂದೆ ಇತಿಹಾಸ ಪುಸ್ತಕದಲ್ಲಿ ಬರೆಸಲಾಯ್ತು.+

3 ಇದಾದ ಮೇಲೆ ರಾಜ ಅಹಷ್ವೇರೋಷ ಅಗಾಗನ+ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನಿಗೆ+ ಪದವಿ ಕೊಟ್ಟು ತನ್ನ ಹತ್ರ ಇದ್ದ ಬೇರೆಲ್ಲ ಅಧಿಕಾರಿಗಳಿಗಿಂತ ಅವನನ್ನ ದೊಡ್ಡ ಸ್ಥಾನಕ್ಕೆ ಏರಿಸಿದ.+ 2 ಅರಮನೆಯ ಹೆಬ್ಬಾಗಿಲ ಹತ್ರ ಇದ್ದ ರಾಜನ ಸೇವಕರೆಲ್ಲ ಹಾಮಾನನಿಗೆ ಬಗ್ಗಿ ನಮಸ್ಕಾರ ಮಾಡ್ತಾ ಇದ್ರು. ಯಾಕಂದ್ರೆ ಅವನನ್ನ ಗೌರವಿಸೋಕೆ ಹೀಗೆ ಮಾಡಬೇಕಂತ ರಾಜ ಆಜ್ಞೆ ಕೊಟ್ಟಿದ್ದ. ಆದ್ರೆ ಮೊರ್ದೆಕೈ ಹಾಮಾನನಿಗೆ ಬಗ್ಗಿ ನಮಸ್ಕಾರ ಮಾಡೋಕೆ ಅಥವಾ ಅಡ್ಡಬೀಳೋಕೆ ಒಪ್ಪಲಿಲ್ಲ. 3 ಹಾಗಾಗಿ ಅರಮನೆಯ ಹೆಬ್ಬಾಗಿಲ ಹತ್ರ ಇದ್ದ ರಾಜನ ಸೇವಕರು ಮೊರ್ದೆಕೈಗೆ “ನೀನ್ಯಾಕೆ ರಾಜಾಜ್ಞೆ ಮೀರ್ತಾ ಇದ್ದೀಯ?” ಅಂತ ಕೇಳಿದ್ರು. 4 ದಿನಾಲೂ ಇದನ್ನೇ ಕೇಳ್ತಿದ್ರು. ಆದ್ರೆ ಅವನು ಅವ್ರ ಮಾತನ್ನ ಕಿವಿಗೆ ಹಾಕೊಳ್ತಾನೇ ಇರ್ಲಿಲ್ಲ. ಆಗ ಅವರು ಈ ವಿಷ್ಯ ಹಾಮಾನನಿಗೆ ಹೇಳಿದ್ರು. ಮೊರ್ದೆಕೈಗೆ ಶಿಕ್ಷೆ ಆಗುತ್ತಾ ಇಲ್ವಾ ಅಂತ ನೋಡೋಕೆ ಹಾಗೆ ಮಾಡಿದ್ರು.+ ಯಾಕಂದ್ರೆ ತಾನೊಬ್ಬ ಯೆಹೂದಿ+ ಅಂತ ಮೊರ್ದೆಕೈ ಅವ್ರಿಗೆ ಹೇಳಿದ್ದ.

5 ಮೊರ್ದೆಕೈ ತನಗೆ ಬಗ್ಗಿ ನಮಸ್ಕಾರ ಮಾಡದೇ ಇರೋದನ್ನ ನೋಡಿದಾಗ ಹಾಮಾನನ ಕೋಪ ನೆತ್ತಿಗೇರಿತು.+ 6 ಆದ್ರೆ ಮೊರ್ದೆಕೈ ಮೇಲೆ ಮಾತ್ರ ಕೈಹಾಕೋದು* ಹಾಮಾನನ ದೃಷ್ಟಿಯಲ್ಲಿ ತುಂಬ ಚಿಕ್ಕ ವಿಷ್ಯ ಆಗಿತ್ತು. ಯಾಕಂದ್ರೆ ಮೊರ್ದೆಕೈಯ ಜನ್ರ ಬಗ್ಗೆನೂ ಅವನಿಗೆ ಹೇಳಿದ್ರು. ಹಾಗಾಗಿ ಹಾಮಾನ ಅಹಷ್ವೇರೋಷನ ಸಾಮ್ರಾಜ್ಯದಲ್ಲಿದ್ದ ಮೊರ್ದೆಕೈಯ ಜನ್ರನ್ನ ಅಂದ್ರೆ ಎಲ್ಲ ಯೆಹೂದ್ಯರನ್ನ ನಾಶ ಮಾಡೋಕೆ ದಾರಿ ಹುಡುಕ್ತಿದ್ದ.

7 ಅವ್ರನ್ನ ಯಾವ ತಿಂಗಳ ಯಾವ ದಿನದಲ್ಲಿ ನಾಶ ಮಾಡಬೇಕಂತ ತೀರ್ಮಾನ ಮಾಡೋಕೆ ರಾಜ ಅಹಷ್ವೇರೋಷ ಆಳ್ತಿದ್ದ 12ನೇ ವರ್ಷದ+ ಮೊದಲ್ನೇ ತಿಂಗಳಲ್ಲಿ ಅಂದ್ರೆ ನೈಸಾನ್‌* ತಿಂಗಳಲ್ಲಿ ಹಾಮಾನನ ಮುಂದೆ ಪೂರನ್ನ (ಅಂದ್ರೆ ಚೀಟು) ಹಾಕಿದ್ರು.+ ಅದು 12ನೇ ತಿಂಗಳಿನ ಅಂದ್ರೆ ಅದಾರ್‌*+ ತಿಂಗಳಿನ ಮೇಲೆ ಬಿತ್ತು. 8 ಹಾಮಾನ ರಾಜ ಅಹಷ್ವೇರೋಷನಿಗೆ “ನಿನ್ನ ಸಾಮ್ರಾಜ್ಯದಲ್ಲಿ ಒಂದು ಜನಾಂಗ ಇದೆ. ಅವರು ಎಲ್ಲ ಪ್ರಾಂತ್ಯಗಳಲ್ಲಿ*+ ಚದರಿಕೊಂಡಿದ್ದಾರೆ.+ ಅವ್ರ ನಿಯಮಗಳು ಬೇರೆ ಜನಾಂಗಗಳ ನಿಯಮಗಳ ತರ ಅಲ್ಲ. ಅವರು ರಾಜನ ನಿಯಮಗಳನ್ನೂ ಪಾಲಿಸಲ್ಲ. ಅವ್ರನ್ನ ಹಾಗೇ ಬಿಟ್ಟುಬಿಡೋದು ರಾಜನಿಗೆ ಒಳ್ಳೇದಲ್ಲ. 9 ರಾಜನಿಗೆ ಇಷ್ಟ ಆಗೋದಾದ್ರೆ ಅವ್ರನ್ನ ನಾಶ ಮಾಡೋಕೆ ಒಂದು ಆಜ್ಞೆ ಬರೆದು ಕೊಡು. ಹಾಗೆ ಮಾಡಿದ್ರೆ ರಾಜನ ಖಜಾನೆಯಲ್ಲಿ ಇಡೋಕೆ ನಾನು 10,000 ಬೆಳ್ಳಿ ತಲಾಂತುಗಳನ್ನ* ಅಧಿಕಾರಿಗಳಿಗೆ ಕೊಡ್ತೀನಿ”* ಅಂದ.

10 ಅದನ್ನ ಕೇಳಿ ರಾಜ ತನ್ನ ಕೈಯಲ್ಲಿದ್ದ ಮುದ್ರೆ ಉಂಗುರ+ ತೆಗೆದು ಯೆಹೂದ್ಯರ ಶತ್ರುವಾಗಿದ್ದ ಅಗಾಗನ+ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನಿಗೆ+ ಕೊಟ್ಟ. 11 ರಾಜನು ಹಾಮಾನನಿಗೆ “ಬೆಳ್ಳಿಯನ್ನೂ ಜನ್ರನ್ನೂ ನಿನ್ನ ಕೈಗೆ ಒಪ್ಪಿಸ್ತಿದ್ದೀನಿ. ನಿನಗೆ ಇಷ್ಟಬಂದ ಹಾಗೆ ಮಾಡು” ಅಂದ. 12 ಹಾಗಾಗಿ ಮೊದಲ್ನೇ ತಿಂಗಳ 13ನೇ ದಿನ ರಾಜನ ಕಾರ್ಯದರ್ಶಿಗಳನ್ನ+ ಕರೆಸಲಾಯ್ತು. ಅವರು ಬಂದು ರಾಜನ ದೇಶಾಧಿಪತಿಗಳಿಗೆ, ಪ್ರಾಂತ್ಯಗಳ ರಾಜ್ಯಪಾಲರಿಗೆ, ಎಲ್ಲ ಜನ್ರ ಅಧಿಕಾರಿಗಳಿಗೆ ಹಾಮಾನನ ಆಜ್ಞೆಗಳನ್ನೆಲ್ಲ ಬರೆದ್ರು.+ ಅವುಗಳನ್ನ ಎಲ್ಲ ಪ್ರಾಂತ್ಯಗಳಲ್ಲಿರೋ ಜನ್ರ ಭಾಷೆಗಳಲ್ಲಿ, ಲಿಪಿಗಳಲ್ಲಿ* ಬರೆದ್ರು. ಅವುಗಳನ್ನ ರಾಜ ಅಹಷ್ವೇರೋಷನ ಹೆಸ್ರಲ್ಲಿ ಬರೆದು ರಾಜನ ಮುದ್ರೆ ಉಂಗುರವನ್ನ ಒತ್ತಿದ್ರು.+

13 ಸಂದೇಶವಾಹಕರ ಮೂಲಕ ಈ ಪತ್ರಗಳನ್ನ ರಾಜನ ಆಳ್ವಿಕೆ ಕೆಳಗಿದ್ದ ಎಲ್ಲ ಪ್ರಾಂತ್ಯಗಳಿಗೆ ಕಳಿಸಿದ್ರು. ಒಂದೇ ದಿನ ಅಂದ್ರೆ 12ನೇ ತಿಂಗಳಾದ ಅದಾರ್‌+ ತಿಂಗಳ 13ನೇ ದಿನ ಎಲ್ಲ ಯೆಹೂದ್ಯರನ್ನ ಅಂದ್ರೆ ಅವ್ರಲ್ಲಿದ್ದ ಯುವಕರನ್ನ, ವೃದ್ಧರನ್ನ, ಮಕ್ಕಳನ್ನ, ಸ್ತ್ರೀಯರನ್ನ ಹೀಗೆ ಎಲ್ರನ್ನ ಕೊಂದು ಅವ್ರನ್ನ ಪೂರ್ತಿ ನಾಶಮಾಡಿ ಅವ್ರ ಆಸ್ತಿಪಾಸ್ತಿನ ಸ್ವಾಧೀನ ಮಾಡ್ಕೊಳ್ಳಬೇಕಂತ ಅದ್ರಲ್ಲಿ ಹೇಳಿತ್ತು.+ 14 ಅಷ್ಟೇ ಅಲ್ಲ ಎಲ್ಲ ಜನ ಆ ದಿನಕ್ಕಾಗಿ ಸಿದ್ಧರಾಗಿರೋಕೆ ಎಲ್ಲ ಪ್ರಾಂತ್ಯಗಳಲ್ಲಿ ಆ ಪ್ರತಿಯನ್ನ ನಿಯಮದ ಹಾಗೆ ಜಾರಿ ಮಾಡಿ, ಅದನ್ನ ಎಲ್ಲ ಜನ್ರಿಗೆ ಪ್ರಕಟಣೆ ಮಾಡಬೇಕಿತ್ತು. 15 ರಾಜ ಆಜ್ಞೆ ಕೊಟ್ಟ ಹಾಗೇ ಸಂದೇಶವಾಹಕರು ತಕ್ಷಣ ಅಲ್ಲಿಂದ ಹೊರಟ್ರು.+ ಹೀಗೆ ಆ ನಿಯಮ ಶೂಷನಿನ*+ ಕೋಟೆಯಲ್ಲಿ* ಜಾರಿಗೆ ಬಂತು. ಆಗ ಶೂಷನ್‌* ಪಟ್ಟಣದ ಜನ್ರಿಗೆ ಗಲಿಬಿಲಿ ಆಯ್ತು. ಆದ್ರೆ ರಾಜ ಮತ್ತು ಹಾಮಾನ ಕೂತು ದ್ರಾಕ್ಷಾಮದ್ಯ ಕುಡಿತಿದ್ರು.

4 ನಡೆದ ವಿಷ್ಯಗಳ ಬಗ್ಗೆ ಮೊರ್ದೆಕೈಗೆ+ ಗೊತ್ತಾದಾಗ+ ದುಃಖದಿಂದ ತನ್ನ ಬಟ್ಟೆಗಳನ್ನ ಹರ್ಕೊಂಡು ಗೋಣಿ ಸುತ್ಕೊಂಡ. ತಲೆ ಮೇಲೆ ಬೂದಿ ಹಾಕೊಂಡು ಜೋರಾಗಿ ಅಳ್ತಾ ಪಟ್ಟಣದ ಮಧ್ಯಭಾಗಕ್ಕೆ ಹೋದ. 2 ಹಾಗೆ ಹೋದವನು ಅರಮನೆಯ ಹೆಬ್ಬಾಗಿಲ ಹತ್ರ ಹೋಗಿ ಅಲ್ಲೇ ನಿಂತ್ಕೊಂಡ. ಯಾಕಂದ್ರೆ ಗೋಣಿ ಸುತ್ಕೊಂಡು ಯಾರೂ ಒಳಗೆ ಹೋಗಬಾರದಿತ್ತು. 3 ರಾಜನ ಆಜ್ಞೆಪ್ರಕಟಿಸಿದ ಪ್ರಾಂತ್ಯಗಳಲ್ಲಿ*+ ಇದ್ದ ಎಲ್ಲಾ ಯೆಹೂದ್ಯರು ದುಃಖದಲ್ಲಿ ಮುಳುಗಿಹೋಗಿದ್ರು. ಉಪವಾಸ ಮಾಡ್ತಾ,+ ಅಳ್ತಾ, ಗೋಳಾಡ್ತಾ ಇದ್ರು. ತುಂಬ ಜನ ಗೋಣಿ ಸುತ್ಕೊಂಡು ಬೂದಿಯಲ್ಲಿ+ ಕೂತಿದ್ರು. 4 ಈ ವಿಷ್ಯಾನ ಎಸ್ತೇರಳ ಕಂಚುಕಿಯರು, ಸೇವಕಿಯರು ಅವಳಿಗೆ ಹೇಳಿದ್ರು. ಅವಳಿಗೂ ತುಂಬ ಬೇಜಾರಾಯ್ತು. ಗೋಣಿ ತೆಗೆದು ಬೇರೆ ಬಟ್ಟೆಗಳನ್ನ ಹಾಕೊಬೇಕು ಅಂತ ಅವಳು ಮೊರ್ದೆಕೈಗೆ ಬಟ್ಟೆಗಳನ್ನ ಕಳಿಸ್ಕೊಟ್ಟಳು. ಅವನು ಅದನ್ನ ಹಾಕೊಳ್ಳಲಿಲ್ಲ. 5 ಆಗ ಎಸ್ತೇರ್‌ ರಾಜನ ಕಂಚುಕಿಯರಲ್ಲಿ ಒಬ್ಬನಾದ ಹತಾಕನನ್ನ ಕರೆದಳು. ಎಸ್ತೇರಳ ಸೇವೆ ಮಾಡೋಕೆ ಹತಾಕನನ್ನ ರಾಜನೇ ನೇಮಿಸಿದ್ದ. ನಿಜವಾಗಿ ಏನು ನಡಿತಿದೆ, ಮೊರ್ದೆಕೈ ಯಾಕೆ ಗೋಣಿ ಸುತ್ಕೊಂಡಿದ್ದಾನೆ ಅಂತ ಕೇಳ್ಕೊಂಡು ಬರೋಕೆ ಎಸ್ತೇರ್‌ ಅವನನ್ನ ಕಳಿಸಿದಳು.

6 ಹತಾಕ ಮೊರ್ದೆಕೈಯನ್ನ ಭೇಟಿ ಆಗೋಕೆ ಅರಮನೆಯ ಹೆಬ್ಬಾಗಿಲ ಮುಂದೆ ಇದ್ದ ಪಟ್ಟಣದ ಮುಖ್ಯಸ್ಥಳಕ್ಕೆ* ಹೋದ. 7 ಆಗ ಮೊರ್ದೆಕೈ ತನಗಾದ ಎಲ್ಲ ವಿಷ್ಯವನ್ನ ಹತಾಕನಿಗೆ ಹೇಳಿದ. ಅಷ್ಟೇ ಅಲ್ಲ ಯೆಹೂದ್ಯರನ್ನ ಸರ್ವನಾಶ ಮಾಡೋಕೆ+ ರಾಜನ ಖಜಾನೆಗೆ ಹಾಮಾನ ಎಷ್ಟು ದುಡ್ಡು ಕೊಡ್ತೀನಿ+ ಅಂತ ಮಾತು ಕೊಟ್ನೋ ಅದನ್ನೂ ಹೇಳಿದ. 8 ಅವ್ರ ನಾಶಕ್ಕಾಗಿ ಶೂಷನ್‌*+ ಪಟ್ಟಣದಲ್ಲಿ ಜಾರಿಯಾದ ಆಜ್ಞೆಯ ಒಂದು ಪ್ರತಿಯನ್ನೂ ಅವನಿಗೆ ಕೊಟ್ಟ. ಅದನ್ನ ಎಸ್ತೇರ್‌ಗೆ ತೋರಿಸಿ ಅದ್ರ ಬಗ್ಗೆ ವಿವರಿಸೋಕೆ ಹೇಳಿದ. ಅವಳು ನೇರವಾಗಿ ರಾಜನ ಹತ್ರ ಹೋಗಿ ಅವನ ದಯೆಗಾಗಿ ಬೇಡೋಕೆ, ತನ್ನ ಜನ್ರ ಪರವಾಗಿ ಬೇಡೋಕೆ ಹೇಳಿದ.+

9 ಹತಾಕ ವಾಪಸ್‌ ಬಂದು ಮೊರ್ದೆಕೈ ಹೇಳಿದ್ದನ್ನ ಎಸ್ತೇರ್‌ಗೆ ಹೇಳಿದ. 10 ಆಗ ಎಸ್ತೇರ್‌ ಮೊರ್ದೆಕೈ+ ಹತ್ರ ಹೀಗೆ ಹೇಳೋಕೆ ಹತಾಕನಿಗೆ ಆಜ್ಞೆ ಕೊಟ್ಟಳು: 11 “ಪುರುಷ ಆಗ್ಲಿ ಸ್ತ್ರೀ ಆಗ್ಲಿ ರಾಜ ಕರೆಯದೆ ಅರಮನೆ ಒಳಗಿನ ಅಂಗಳಕ್ಕೆ+ ಹೋದ್ರೆ ಏನಾಗುತ್ತೆ ಅಂತ ರಾಜನ ಎಲ್ಲ ಸೇವಕರಿಗೂ ರಾಜನ ಪ್ರಾಂತ್ಯದಲ್ಲಿರೋ ಜನ್ರಿಗೂ ಗೊತ್ತು. ಆ ಸಮಯದಲ್ಲಿ ಎಲ್ರಿಗೂ ಒಂದೇ ನಿಯಮ. ಅದೇನಂದ್ರೆ: ಹಾಗೆ ಹೋದ ವ್ಯಕ್ತಿಗೆ ಮರಣಶಿಕ್ಷೆ ಆಗುತ್ತೆ. ರಾಜ ತನ್ನ ಸುವರ್ಣ ದಂಡವನ್ನ ಆ ವ್ಯಕ್ತಿ ಕಡೆ ಚಾಚಿದ್ರೆ+ ಮಾತ್ರ ಆ ವ್ಯಕ್ತಿಯನ್ನ ಸಾಯಿಸದೆ ಬಿಟ್ಟುಬಿಡ್ತಾರೆ. ಕಳೆದ 30 ದಿನದಿಂದ ರಾಜನ ಹತ್ರ ಹೋಗೋಕೆ ನನಗೆ ಆಮಂತ್ರಣ ಸಿಕ್ಕಿಲ್ಲ.”

12 ಎಸ್ತೇರ್‌ ಹೇಳಿದ್ದನ್ನ ಮೊರ್ದೆಕೈಗೆ ತಿಳಿಸಿದಾಗ 13 ಅವನು ಎಸ್ತೇರ್‌ಗೆ “ನೀನು ಅರಮನೆಯಲ್ಲಿ ಇರೋದ್ರಿಂದ ಬೇರೆಲ್ಲ ಯೆಹೂದ್ಯರಿಗಿಂತ ಸುರಕ್ಷಿತವಾಗಿ ಇದ್ದೀಯ ಅಂತ ನೆನಸಬೇಡ. 14 ನೀನು ಈಗ ಸುಮ್ಮನಿದ್ರೂ ಯೆಹೂದ್ಯರಿಗೆ ಬೇರೆ ಹೇಗಾದ್ರೂ ಸಹಾಯ, ಬಿಡುಗಡೆ ಸಿಕ್ಕೇ ಸಿಗುತ್ತೆ.+ ಆದ್ರೆ ನೀನು ಮತ್ತು ನಿನ್ನ ತಂದೆ ಮನೆತನದವರು ನಾಶವಾಗ್ತೀರ. ಯಾರಿಗೆ ಗೊತ್ತು, ನೀನು ಇಂಥ ಒಂದು ಸಮಯಕ್ಕಾಗೇ ರಾಣಿಯಾಗಿದ್ಯೋ ಏನೋ?”+ ಅಂದ.

15 ಆಗ ಎಸ್ತೇರ್‌ ಮೊರ್ದೆಕೈಗೆ 16 “ಹೋಗಿ ಶೂಷನ್‌* ಪಟ್ಟಣದಲ್ಲಿರೋ ಎಲ್ಲ ಯೆಹೂದ್ಯರನ್ನ ಒಟ್ಟುಸೇರಿಸು. ನೀವೆಲ್ಲ ಸೇರಿ ನನಗಾಗಿ ಮೂರು ದಿನ+ ಹಗಲುರಾತ್ರಿ ಉಪವಾಸ+ ಮಾಡಿ. ನಾನು ಮತ್ತು ನನ್ನ ಸೇವಕಿಯರೂ ಉಪವಾಸ ಮಾಡ್ತೀವಿ. ನಾನು ಸತ್ರೂ ಪರ್ವಾಗಿಲ್ಲ, ನಿಯಮಕ್ಕೆ ವಿರುದ್ಧವಾಗಿ ರಾಜನ ಹತ್ರ ಹೋಗ್ತೀನಿ” ಅಂತ ಸಂದೇಶ ಕಳಿಸಿದಳು. 17 ಆಗ ಮೊರ್ದೆಕೈ ಎಸ್ತೇರ್‌ ಹೇಳಿದ ಹಾಗೇ ಮಾಡಿದ.

5 ಮೂರನೇ ದಿನ+ ಎಸ್ತೇರ್‌ ತನ್ನ ರಾಜವಸ್ತ್ರಗಳನ್ನ ಹಾಕೊಂಡು ಅರಮನೆಯ ಒಳಗಿನ ಅಂಗಳಕ್ಕೆ ಬಂದು ರಾಜಭವನದ ಮುಂದೆ ನಿಂತಳು. ಅದೇ ಸಮಯದಲ್ಲಿ ರಾಜ ರಾಜಭವನದ ಬಾಗಿಲ ಮುಂದೆ ಇದ್ದ ತನ್ನ ಸಿಂಹಾಸನದಲ್ಲಿ ಕೂತಿದ್ದ. 2 ಆಗ ರಾಜನ ಕಣ್ಣು ಅಂಗಳದಲ್ಲಿ ನಿಂತಿದ್ದ ರಾಣಿ ಎಸ್ತೇರ್‌ ಮೇಲೆ ಬಿತ್ತು. ಅವಳನ್ನ ನೋಡ್ತಾ ರಾಜನಿಗೆ ಖುಷಿಯಾಗಿ ಅವನು ತನ್ನ ಸುವರ್ಣದಂಡವನ್ನ ಅವಳ ಕಡೆ ಚಾಚಿದ.+ ಆಗ ಎಸ್ತೇರ್‌ ರಾಜನ ಹತ್ರ ಬಂದು ಸುವರ್ಣದಂಡದ ತುದಿ ಮುಟ್ಟಿದಳು.

3 ಆಗ ರಾಜ “ರಾಣಿ ಎಸ್ತೇರ್‌ ಏನು ವಿಷ್ಯ? ಏನು ಬೇಕು? ನನ್ನ ರಾಜ್ಯದಲ್ಲಿ ಅರ್ಧ ರಾಜ್ಯ ಬೇಕಾದ್ರೂ ಕೇಳು, ಕೊಡ್ತೀನಿ. ಹೇಳು!” ಅಂದ. 4 ಆಗ ಎಸ್ತೇರ್‌ “ರಾಜನಿಗೆ ಒಪ್ಪಿಗೆ ಇದ್ರೆ ಇವತ್ತು ನಾನು ಏರ್ಪಡಿಸಿರೋ ಔತಣಕ್ಕೆ ಹಾಮಾನನ+ ಜೊತೆ ಬರಬೇಕು” ಅಂದಳು. 5 ಆಗ ರಾಜ ತನ್ನ ಸೇವಕರಿಗೆ “ಎಸ್ತೇರ್‌ ಕೇಳ್ಕೊಂಡ ಹಾಗೇ ಆಗ್ಲಿ. ತಕ್ಷಣ ಹಾಮಾನನನ್ನ ಬರೋಕೆ ಹೇಳಿ” ಅಂದ. ಹೀಗೆ ಎಸ್ತೇರ್‌ ಏರ್ಪಡಿಸಿದ ಔತಣಕ್ಕೆ ಹಾಮಾನನ ಜೊತೆ ರಾಜ ಹೋದ.

6 ಔತಣದ ಕೊನೇಲಿ ದ್ರಾಕ್ಷಾಮದ್ಯ ಕುಡಿತಿದ್ದಾಗ ರಾಜನು ಎಸ್ತೇರ್‌ಗೆ “ನಿನ್ನ ಕೋರಿಕೆ ಏನಂತ ಹೇಳು, ನಾನು ಇಲ್ಲ ಅನ್ನಲ್ಲ. ಏನು ಬೇಕಾದ್ರೂ ಕೇಳು. ನನ್ನ ರಾಜ್ಯದಲ್ಲಿ ಅರ್ಧ ರಾಜ್ಯ ಕೇಳಿದ್ರೂ ಕೊಡ್ತೀನಿ!”+ ಅಂದ. 7 ಆಗ ಎಸ್ತೇರ್‌ “ನನ್ನ ಕೋರಿಕೆ ಏನಂದ್ರೆ 8 ನಾನು ನಿಜವಾಗ್ಲೂ ರಾಜನ ಮೆಚ್ಚುಗೆ ಪಡೆದಿರೋದಾದ್ರೆ, ರಾಜ ನನ್ನ ಕೋರಿಕೆ ಕೇಳಿ ನಿಜವಾಗ್ಲೂ ನೆರವೇರಿಸಬೇಕು ಅಂತಿದ್ರೆ ನಾಳೆ ನಾನು ಏರ್ಪಡಿಸೋ ಔತಣಕ್ಕೆ ನೀವು ಹಾಮಾನನ ಜೊತೆ ಬರಬೇಕು. ಆಗ ರಾಜನಿಗೆ ನನ್ನ ಕೋರಿಕೆ ಏನಂತ ಹೇಳ್ತೀನಿ” ಅಂದಳು.

9 ಅವತ್ತು ಔತಣ ಮುಗಿಸಿ ಹೋಗುವಾಗ ಹಾಮಾನನಿಗೆ ತುಂಬ ಸಂತೋಷ ಆಗಿತ್ತು. ಅವನು ಗಾಳಿಯಲ್ಲಿ ತೇಲ್ತಿದ್ದ. ಆದ್ರೆ ಅರಮನೆಯ ಹೆಬ್ಬಾಗಿಲ ಹತ್ರ ಬಂದಾಗ ಅಲ್ಲಿ ಕೂತಿದ್ದ ಮೊರ್ದೆಕೈಯನ್ನ ನೋಡಿ ತುಂಬ ಕೋಪ ಬಂತು.+ ಯಾಕಂದ್ರೆ ಮೊರ್ದೆಕೈ ಅವನನ್ನ ನೋಡಿ ಎದ್ದು ನಿಲ್ಲಲೂ ಇಲ್ಲ, ಭಯದಿಂದ ನಡುಗ್ಲೂ ಇಲ್ಲ. 10 ಹಾಗಿದ್ರೂ ಹಾಮಾನ ತನ್ನ ಕೋಪವನ್ನ ನುಂಗಿ ಮನೆ ಕಡೆ ನಡೆದ. ಅವನು ತನ್ನ ಹೆಂಡತಿ ಜೆರೆಷಳನ್ನ+ ಮತ್ತು ತನ್ನ ಸ್ನೇಹಿತರನ್ನ ಕರೆಸಿದ. 11 ಅವನು ತನ್ನಲ್ಲಿದ್ದ ಅಪಾರ ಆಸ್ತಿ ಬಗ್ಗೆ, ತನಗಿದ್ದ ಅನೇಕ ಗಂಡು ಮಕ್ಕಳ+ ಬಗ್ಗೆ, ರಾಜ ತನಗೆ ದೊಡ್ಡ ಪದವಿ ಕೊಟ್ಟು ರಾಜನ ಅಧಿಕಾರಿಗಳಿಗಿಂತ, ಸೇವಕರಿಗಿಂತ ತನಗೆ ಜಾಸ್ತಿ ಗೌರವ ಸಿಗೋ ಹಾಗೆ ಮಾಡಿದ್ರ+ ಬಗ್ಗೆ ಜಂಬ ಕೊಚ್ಕೊಂಡ.

12 ಅಷ್ಟೇ ಅಲ್ಲ ಹಾಮಾನ “ಔತಣಕ್ಕೆ ರಾಜನ ಜೊತೆ ನನ್ನನ್ನ ಬಿಟ್ಟು ಬೇರೆ ಯಾರನ್ನೂ ಎಸ್ತೇರ್‌ ಕರೆದಿಲ್ಲ.+ ಇದಕ್ಕಿಂತ ಇನ್ನೇನು ಬೇಕು! ನಾಳೆನೂ ಔತಣಕ್ಕೆ ರಾಜನ ಜೊತೆ ನನ್ನನ್ನ ಕರೆದಿದ್ದಾಳೆ.+ 13 ಆದ್ರೆ ಆ ಯೆಹೂದಿ ಮೊರ್ದೆಕೈ ಅರಮನೆಯ ಹೆಬ್ಬಾಗಿಲಲ್ಲಿ ಕೂತಿರೋ ತನಕ ಇದ್ಯಾವುದೂ ನಂಗೆ ಖುಷಿ ಕೊಡಲ್ಲ” ಅಂದ. 14 ಆಗ ಅವನ ಹೆಂಡತಿ ಜೆರೆಷ ಮತ್ತು ಅವನ ಸ್ನೇಹಿತರು “50 ಮೊಳ* ಉದ್ದದ ಕಂಬ ನಿಲ್ಲಿಸು. ಮೊರ್ದೆಕೈಯನ್ನ ಆ ಕಂಬಕ್ಕೆ ನೇತುಹಾಕೋಕೆ ಬೆಳಿಗ್ಗೆ ಹೋಗಿ ರಾಜನಿಗೆ ಹೇಳು.+ ರಾಜನ ಜೊತೆ ಹೋಗಿ ಔತಣ ಆನಂದಿಸು” ಅಂದ್ರು. ಈ ಸಲಹೆ ಹಾಮಾನನಿಗೆ ಇಷ್ಟ ಆಯ್ತು. ಹಾಗಾಗಿ ಅವನು ಕಂಬವನ್ನ ನಿಲ್ಲಿಸಿದ.

6 ಅವತ್ತು ರಾತ್ರಿ ರಾಜನಿಗೆ ನಿದ್ದೆ ಬರಲಿಲ್ಲ.* ಹಾಗಾಗಿ ಅರಮನೆಯ ಇತಿಹಾಸ ಪುಸ್ತಕ ತಗೊಂಡು ಬರೋಕೆ ಹೇಳಿದ.+ ಅದನ್ನ ತನ್ನ ಮುಂದೆ ಓದಿಸಿದ. 2 ರಾಜನ ಹತ್ರ ಬಾಗಿಲು ಕಾಯೋ ಕೆಲಸಮಾಡ್ತಿದ್ದ ಬಿಗೆತಾನ್‌ ಮತ್ತು ತೆರೆಷ್‌ ಅನ್ನೋ ಆಸ್ಥಾನದ ಅಧಿಕಾರಿಗಳ ಬಗ್ಗೆ ಮೊರ್ದೆಕೈ ಹೇಳಿದ್ದ ವಿಷ್ಯ ಅದ್ರಲ್ಲಿ ಸಿಕ್ತು. ಅವರು ರಾಜ ಅಹಷ್ವೇರೋಷನನ್ನ ಕೊಲ್ಲಬೇಕಂತ* ಸಂಚು ಮಾಡಿದ್ರು.+ 3 ಆಗ ರಾಜ “ಇದಕ್ಕೆ ಮೊರ್ದೆಕೈಗೆ ಯಾವ ಬಹುಮಾನ ಸಿಕ್ತು, ಯಾವ ಗೌರವ ಸಿಕ್ತು?” ಅಂತ ಕೇಳಿದ. ಆಗ ರಾಜನ ಆಪ್ತ ಸೇವಕರು “ಅವನಿಗೆ ಏನೂ ಸಿಗಲಿಲ್ಲ” ಅಂದ್ರು.

4 ಅದೇ ಸಮಯಕ್ಕೆ ಹಾಮಾನ ತಾನು ಸಿದ್ಧಪಡಿಸಿದ್ದ ಕಂಬಕ್ಕೆ+ ಮೊರ್ದೆಕೈಯನ್ನ ನೇತುಹಾಕಿಸೋ ವಿಷ್ಯದ ಬಗ್ಗೆ ರಾಜನ ಹತ್ರ ಮಾತಾಡೋಕೆ ಅರಮನೆಯ ಹೊರಗಿನ ಅಂಗಳದಲ್ಲಿ+ ನಿಂತಿದ್ದ. ಆಗ ರಾಜ “ಅಂಗಳದಲ್ಲಿ ಯಾರಿದ್ದಾರೆ?” ಅಂತ ಕೇಳಿದ. 5 ಅದಕ್ಕೆ ಸೇವಕರು “ಹಾಮಾನ+ ನಿಂತಿದ್ದಾನೆ” ಅಂದ್ರು. ಆಗ ರಾಜ “ಅವನನ್ನ ಒಳಗೆ ಕರಿರಿ” ಅಂದ.

6 ಹಾಮಾನ ಒಳಗೆ ಬಂದಾಗ ರಾಜ ಅವನಿಗೆ “ರಾಜ ಗೌರವಿಸಬೇಕು ಅಂತ ಇರೋ ವ್ಯಕ್ತಿಯನ್ನ ಹೇಗೆ ಸನ್ಮಾನಿಸಬಹುದು?” ಅಂತ ಕೇಳಿದ. ಹಾಮಾನ ತನ್ನ ಹೃದಯದಲ್ಲೇ “ರಾಜ ನನ್ನನ್ನಲ್ದೆ ಇನ್ಯಾರನ್ನ ಸನ್ಮಾನಿಸೋಕೆ ಸಾಧ್ಯ!”+ ಅಂದ್ಕೊಂಡ. 7 ಹಾಗಾಗಿ ಹಾಮಾನ ರಾಜನಿಗೆ “ರಾಜ ಯಾರನ್ನಾದ್ರೂ ಸನ್ಮಾನಿಸಬೇಕು ಅಂತಿದ್ರೆ 8 ಆ ವ್ಯಕ್ತಿಗಾಗಿ ರಾಜ ಹಾಕೋ ಬಟ್ಟೆ+ ತರಬೇಕು. ರಾಜ ಸವಾರಿ ಮಾಡೋ ಕುದುರೆಯನ್ನ ತಂದು ಅದ್ರ ತಲೆಗೆ ಅಲಂಕಾರ ಮಾಡಬೇಕು. 9 ಆ ಬಟ್ಟೆಯನ್ನ, ಆ ಕುದುರೆಯನ್ನ ರಾಜನ ಪ್ರಮುಖ ಅಧಿಕಾರಿಗಳಲ್ಲಿ ಒಬ್ಬನ ಕೈಗೆ ಕೊಡಬೇಕು. ರಾಜ ಸನ್ಮಾನಿಸಬೇಕು ಅಂತಿರೋ ವ್ಯಕ್ತಿಗೆ ಸೇವಕರು ಬಟ್ಟೆ ಹಾಕಿಸಿ ಅವನನ್ನ ಕುದುರೆ ಮೇಲೆ ಕೂರಿಸಿ ಪಟ್ಟಣದ ಮುಖ್ಯಸ್ಥಳದಲ್ಲಿ* ಮೆರವಣಿಗೆ ಮಾಡಿಸಬೇಕು. ಎಲ್ರೂ ಅವನ ಮುಂದೆ ಜೋರಾಗಿ ‘ರಾಜ ಸನ್ಮಾನಿಸಬೇಕು ಅಂತಿರೋ ವ್ಯಕ್ತಿಯನ್ನ ಹೀಗೇ ಗೌರವಿಸಬೇಕು!’+ ಅಂತ ಕೂಗಬೇಕು” ಅಂದ. 10 ರಾಜ ತಕ್ಷಣ ಹಾಮಾನನಿಗೆ “ತಡಮಾಡಬೇಡ! ಈಗ್ಲೇ ಆ ಬಟ್ಟೆ, ಆ ಕುದುರೆ ತಗೊಂಡು ಹೋಗು. ಅರಮನೆಯ ಹೆಬ್ಬಾಗಲಲ್ಲಿ ಕೂತಿರೋ ಯೆಹೂದ್ಯನಾದ ಮೊರ್ದೆಕೈಗೆ ನೀನು ಹೇಳಿದ್ದನ್ನೆಲ್ಲ ಮಾಡು. ಒಂದನ್ನೂ ಬಿಡದೆ ಎಲ್ಲ ಮಾಡು” ಅಂದ.

11 ಆಗ ಹಾಮಾನ ಬಟ್ಟೆಯನ್ನ, ಕುದುರೆಯನ್ನ ತಗೊಂಡು ಹೋಗಿ, ಮೊರ್ದೆಕೈಗೆ+ ಆ ಬಟ್ಟೆ ಹಾಕಿಸಿ, ಅವನನ್ನ ಕುದುರೆ ಮೇಲೆ ಕೂರಿಸಿ ಪಟ್ಟಣದ ಮುಖ್ಯಸ್ಥಳದಲ್ಲಿ* ಮೆರವಣಿಗೆ ಮಾಡಿಸ್ತಾ “ರಾಜ ಸನ್ಮಾನಿಸಬೇಕು ಅಂತಿರೋ ವ್ಯಕ್ತಿಯನ್ನ ಹೀಗೇ ಗೌರವಿಸಬೇಕು!” ಅಂತ ಜೋರಾಗಿ ಕೂಗಿದ. 12 ಇದಾದ ಮೇಲೆ ಮೊರ್ದೆಕೈ ಅರಮನೆಯ ಹೆಬ್ಬಾಗಿಲ ಹತ್ರ ವಾಪಸ್‌ ಹೋದ. ಆದ್ರೆ ಹಾಮಾನ ತನ್ನ ತಲೆ ಮೇಲೆ ಮುಸುಕು ಹಾಕೊಂಡು ದುಃಖದಿಂದ ಬೇಗಬೇಗ ತನ್ನ ಮನೆ ಕಡೆ ಹೋದ. 13 ನಡೆದ ವಿಷ್ಯನ್ನೆಲ್ಲ ಹಾಮಾನ ತನ್ನ ಹೆಂಡತಿ ಜೆರೆಷಳಿಗೆ,+ ತನ್ನ ಸ್ನೇಹಿತರಿಗೆ ಹೇಳಿದ. ಆಗ ಅವನ ಸಲಹೆಗಾರರು,* ಅವನ ಹೆಂಡತಿ “ಇವತ್ತು ನೀನು ತಲೆ ತಗ್ಗಿಸೋ ತರ ಮಾಡಿದ ಆ ಮೊರ್ದೆಕೈ ಒಬ್ಬ ಯೆಹೂದಿ ಆಗಿರೋದ್ರಿಂದ ನೀನು ಅವನ ಮೇಲೆ ಗೆಲುವು ಸಾಧಿಸೋಕೆ ಆಗಲ್ಲ. ನೀನು ಖಂಡಿತ ಅವನ ಮುಂದೆ ಸೋತು ಹೋಗ್ತೀಯ” ಅಂದ್ರು.

14 ಅವರು ಮಾತಾಡ್ತಾ ಇರುವಾಗ್ಲೇ, ರಾಜನ ಆಸ್ಥಾನದ ಅಧಿಕಾರಿಗಳು ಅಲ್ಲಿಗೆ ಬಂದು ಹಾಮಾನನನ್ನ ಎಸ್ತೇರ್‌ ಕರೆದಿದ್ದ ಔತಣಕ್ಕೆ ಕರ್ಕೊಂಡು ಹೋದ್ರು.+

7 ರಾಜ ಮತ್ತು ಹಾಮಾನ+ ಎಸ್ತೇರ್‌ ರಾಣಿ ಏರ್ಪಡಿಸಿದ್ದ ಔತಣಕ್ಕೆ ಬಂದ್ರು. 2 ಔತಣದ ಕೊನೇಲಿ ದ್ರಾಕ್ಷಾಮದ್ಯ ಕುಡಿತಿದ್ದಾಗ ಎರಡನೇ ದಿನನೂ ರಾಜ ಎಸ್ತೇರ್‌ಗೆ “ನಿನ್ನ ಕೋರಿಕೆ ಏನಂತ ಹೇಳು? ನಾನು ಅದನ್ನ ನೆರವೇರಿಸ್ತೀನಿ. ಏನು ಬೇಕು? ನನ್ನ ರಾಜ್ಯದಲ್ಲಿ ಅರ್ಧ ರಾಜ್ಯ ಕೇಳಿದ್ರೂ ಕೊಡ್ತೀನಿ!” ಅಂದ.+ 3 ಅದಕ್ಕೆ ಎಸ್ತೇರ್‌ “ರಾಜ, ನನ್ನ ಕೋರಿಕೆ ಏನಂದ್ರೆ, ನಿಜವಾಗ್ಲೂ ನಾನು ನಿನ್ನ ಮೆಚ್ಚುಗೆ ಪಡೆದಿರೋದಾದ್ರೆ, ನಾನು ಹೇಳೋದು ನಿನಗೆ ಒಪ್ಪಿಗೆ ಆದ್ರೆ ನನ್ನ ಮತ್ತು ನನ್ನ ಜನ್ರ+ ಪ್ರಾಣ ಉಳಿಸು. 4 ಯಾಕಂದ್ರೆ ನನ್ನನ್ನ, ನನ್ನ ಜನ್ರನ್ನ ಕೊಂದು ಸರ್ವನಾಶ ಮಾಡಬೇಕಂತ,+ ನಾವು ಹುಟ್ಲೇ ಇಲ್ಲ ಅನ್ನೋ ತರ ಮಾಡಬೇಕಂತ ನಮ್ಮನ್ನ ಮಾರಿಬಿಟ್ಟಿದ್ದಾರೆ.+ ನಮ್ಮನ್ನ ಗುಲಾಮರಾಗಿ ಮಾರಿಬಿಟ್ಟಿದ್ರೂ ಸುಮ್ನೆ ಇರ್ತಿದ್ದೆ. ಆದ್ರೆ ನಾವು ಸರ್ವನಾಶ ಆದ್ರೆ ರಾಜನಿಗೆ ಅದ್ರಿಂದ ಹಾನಿ ಆಗುವಾಗ ನಾನು ಹೇಗೆ ಸುಮ್ನೆ ಇರ್ಲಿ” ಅಂದಳು.

5 ಆಗ ರಾಜ ಅಹಷ್ವೇರೋಷ ಎಸ್ತೇರ್‌ ರಾಣಿಯನ್ನ “ಯಾರವನು? ಇಂಥ ವಿಷ್ಯ ಮಾಡೋಕೆ ಎಷ್ಟು ಧೈರ್ಯ ಅವ್ನಿಗೆ” ಅಂದ. 6 ಅದಕ್ಕೆ ಎಸ್ತೇರ್‌ “ನಮ್ಮ ವಿರುದ್ಧ ಸಂಚು ಮಾಡಿದ ನಮ್ಮ ವಿರೋಧಿ ಬೇರೆ ಯಾರೂ ಅಲ್ಲ, ಈ ದುಷ್ಟ ಹಾಮಾನ!” ಅಂದಳು.

ಇದನ್ನ ಕೇಳಿದ ತಕ್ಷಣ ಹಾಮಾನ ಗಡಗಡ ನಡುಗಿದ. 7 ಕೋಪದಿಂದ ರಾಜನ ರಕ್ತ ಕುದಿಯೋಕೆ ಶುರು ಆಯ್ತು. ಹಾಗಾಗಿ ಅವನು ಔತಣದ ಮಧ್ಯದಲ್ಲೇ ಎದ್ದು ಅರಮನೆಯ ಉದ್ಯಾನವನಕ್ಕೆ ಹೊರಟುಹೋದ. ಆದ್ರೆ ಹಾಮಾನ ಎದ್ದು ತನ್ನ ಜೀವಕ್ಕಾಗಿ ಎಸ್ತೇರ್‌ ರಾಣಿಯ ಹತ್ರ ಬೇಡ್ಕೊಳ್ಳೋಕೆ ಶುರುಮಾಡಿದ. ಯಾಕಂದ್ರೆ ರಾಜ ತನಗೆ ಖಂಡಿತ ಶಿಕ್ಷೆ ಕೊಡ್ತಾನೆ ಅಂತ ಅವನಿಗೆ ಗೊತ್ತಾಗಿತ್ತು. 8 ರಾಜ ಅರಮನೆಯ ತೋಟದಿಂದ ಔತಣದ ಮನೆಗೆ ವಾಪಸ್‌ ಬಂದಾಗ ಹಾಮಾನ ಎಸ್ತೇರಳ ದಿವಾನ್‌ ಮೇಲೆ ಬಿದ್ಕೊಂಡಿರೋದನ್ನ ನೋಡಿ “ನನ್ನ ಕಣ್ಮುಂದೆನೇ ನನ್ನ ಅರಮನೆಯಲ್ಲೇ ರಾಣಿಯ ಮಾನಭಂಗ ಮಾಡಬೇಕು ಅಂತಿದ್ದೀಯಾ?” ಅಂತ ಕಿರುಚಿದ. ಈ ಮಾತುಗಳು ರಾಜನ ಬಾಯಿಂದ ಬಂದ ತಕ್ಷಣ ಹಾಮಾನನ ಮುಖವನ್ನ ಸೇವಕರು ಬಟ್ಟೆಯಿಂದ ಮುಚ್ಚಿದ್ರು. 9 ಆಗ ರಾಜನ ಆಸ್ಥಾನದ ಅಧಿಕಾರಿಗಳಲ್ಲಿ ಒಬ್ಬನಾಗಿದ್ದ ಹರ್ಬೋನ+ “ರಾಜನ ಪ್ರಾಣ ಕಾಪಾಡೋ ವರದಿ+ ಕೊಟ್ಟಿದ್ದ ಮೊರ್ದೆಕೈಗಾಗಿ ಈ ಹಾಮಾನ ಒಂದು ಕಂಬ ಸಿದ್ಧ ಮಾಡಿದ್ದಾನೆ.+ 50 ಮೊಳ* ಎತ್ತರದ ಆ ಕಂಬವನ್ನ ತನ್ನ ಮನೆ ಹತ್ರಾನೇ ನಿಲ್ಸಿದ್ದಾನೆ” ಅಂದ. ಆಗ ರಾಜ “ಇವನನ್ನೇ ಆ ಕಂಬಕ್ಕೆ ನೇತುಹಾಕಿ” ಅಂದ. 10 ಹಾಗಾಗಿ ಹಾಮಾನ ಮೊರ್ದೆಕೈಗಾಗಿ ಮಾಡಿದ್ದ ಕಂಬಕ್ಕೆ ಅವರು ಹಾಮಾನನನ್ನೇ ನೇತುಹಾಕಿದ್ರು. ಆಗ ರಾಜನ ಕೋಪ ತಣ್ಣಗಾಯ್ತು.

8 ಆ ದಿನದಲ್ಲಿ ರಾಜ ಅಹಷ್ವೇರೋಷ ಯೆಹೂದ್ಯರ ಶತ್ರುವಾಗಿದ್ದ+ ಹಾಮಾನನಿಗೆ ಸೇರಿದ್ದ ಎಲ್ಲವನ್ನೂ+ ಎಸ್ತೇರ್‌ ರಾಣಿಗೆ ಕೊಟ್ಟ. ಮೊರ್ದೆಕೈ ತನಗೆ ಹೇಗೆ ಸಂಬಂಧಿ ಆಗಿದ್ದಾನೆ+ ಅಂತ ಎಸ್ತೇರ್‌ ರಾಜನಿಗೆ ಹೇಳಿದ್ರಿಂದ ಮೊರ್ದೆಕೈ ರಾಜನ ಆಸ್ಥಾನಕ್ಕೆ ಬಂದ. 2 ಆಮೇಲೆ ರಾಜನು ಹಾಮಾನನಿಂದ ವಾಪಸ್‌ ತಗೊಂಡಿದ್ದ ತನ್ನ ಮುದ್ರೆ ಉಂಗುರವನ್ನ+ ಮೊರ್ದೆಕೈಗೆ ಕೊಟ್ಟ. ಜೊತೆಗೆ ಎಸ್ತೇರ್‌ ಹಾಮಾನನಿಗೆ ಸೇರಿದ್ದ ಎಲ್ಲ ವಿಷ್ಯಗಳ ಮೇಲಿನ ಅಧಿಕಾರವನ್ನ ಮೊರ್ದೆಕೈಗೆ ಒಪ್ಪಿಸಿದಳು.+

3 ಎಸ್ತೇರ್‌ ಮತ್ತೊಮ್ಮೆ ರಾಜನ ಹತ್ರ ಮಾತಾಡಿದಳು. ಅವನ ಕಾಲಿಗೆ ಬಿದ್ದು, ಅಳ್ತಾ ಅಗಾಗನ ವಂಶದವನಾದ ಹಾಮಾನ ತಂದಿದ್ದ ಆಪತ್ತನ್ನ, ಯೆಹೂದ್ಯರ ವಿರುದ್ಧ ಅವನು ಮಾಡಿದ ಯೋಜನೆಯನ್ನ+ ರದ್ದು ಮಾಡಬೇಕು ಅಂತ ಬೇಡ್ಕೊಂಡಳು. 4 ರಾಜ ತನ್ನ ಸುವರ್ಣದಂಡವನ್ನ ಎಸ್ತೇರ್‌ ಕಡೆ ಚಾಚಿದ.+ ಆಗ ಎಸ್ತೇರ್‌ ಎದ್ದು ರಾಜನ ಮುಂದೆ ನಿಂತ್ಕೊಂಡು 5 ಹೀಗಂದಳು: “ರಾಜ, ನಾನು ನಿಜವಾಗ್ಲೂ ನಿನ್ನ ಮೆಚ್ಚಿಗೆ ಪಡ್ಕೊಂಡಿದ್ರೆ, ನಿನ್ನ ದಯೆ ನನ್ನ ಮೇಲಿದ್ರೆ ನನ್ನ ಮನವಿ ಕೇಳಿಸ್ಕೊ. ನಿನಗೆ ಸರಿ ಅನಿಸಿದ್ರೆ ಒಂದು ಆಜ್ಞೆ ಕೊಡು. ಸಾಮ್ರಾಜ್ಯದಲ್ಲಿರೋ ಯೆಹೂದ್ಯರನ್ನ ನಾಶಮಾಡೋಕೆ ಆ ಸಂಚುಗಾರ ಅಂದ್ರೆ ಅಗಾಗನ+ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನ ಬರೆಸಿದ್ದ ಆಜ್ಞೆ ರದ್ದು ಮಾಡು.+ 6 ಯಾಕಂದ್ರೆ ರಾಜ, ನನ್ನ ಜನ್ರ ಮೇಲೆ ಆಪತ್ತು ಬರೋದನ್ನ ನೋಡ್ಕೊಂಡು ನಾನು ಹೇಗೆ ಸುಮ್ನೆ ಇರ್ಲಿ? ನನ್ನ ಸಂಬಂಧಿಕರ ನಾಶವನ್ನ ಹೇಗೆ ಸಹಿಸ್ಲಿ?”

7 ಇದನ್ನ ಕೇಳಿ ರಾಜ ಅಹಷ್ವೇರೋಷ ಎಸ್ತೇರ್‌ ರಾಣಿಗೆ ಮತ್ತು ಯೆಹೂದ್ಯನಾಗಿದ್ದ ಮೊರ್ದೆಕೈಗೆ “ನೋಡಿ, ನಾನು ಹಾಮಾನನಿಗೆ ಸೇರಿದ ಎಲ್ಲವನ್ನೂ ಎಸ್ತೇರ್‌ಗೆ ಕೊಟ್ಟೆ.+ ಅಷ್ಟೇ ಅಲ್ಲ ಯೆಹೂದ್ಯರನ್ನ ನಾಶ ಮಾಡಬೇಕಂತ ಸಂಚು ಮಾಡಿದ್ದಕ್ಕಾಗಿ ಹಾಮಾನನನ್ನ ಕಂಬಕ್ಕೆ ನೇತುಹಾಕಿಸ್ದೆ.+ 8 ಈಗ ನೀವು ಯೆಹೂದ್ಯರಿಗೆ ಒಳಿತಾಗೋ ತರ ಏನು ಬರಿಬೇಕೋ ಅದನ್ನ ರಾಜನಾದ ನನ್ನ ಹೆಸ್ರಲ್ಲಿ ಬರೆದು ಅದ್ರ ಮೇಲೆ ರಾಜನ ಮುದ್ರೆ ಉಂಗುರ ಒತ್ತಿ. ಯಾಕಂದ್ರೆ ರಾಜನ ಹೆಸ್ರಲ್ಲಿ ಒಂದು ಆಜ್ಞೆ ಬರೆದು, ಅದ್ರ ಮೇಲೆ ರಾಜನ ಮುದ್ರೆ ಉಂಗುರ ಒತ್ತಿದ್ರೆ ಆ ಆಜ್ಞೆಯನ್ನ ಯಾವುದೇ ಕಾರಣಕ್ಕೂ ರದ್ದು ಮಾಡೋಕ್ಕಾಗಲ್ಲ”+ ಅಂದ.

9 ಹಾಗಾಗಿ ಮೂರನೇ ತಿಂಗಳಾದ ಸೀವಾನ್‌* ತಿಂಗಳ 23ನೇ ದಿನ ರಾಜನ ಕಾರ್ಯದರ್ಶಿಗಳನ್ನ ಕರೆಸಿ ಮೊರ್ದೆಕೈ ಕೊಟ್ಟ ಆಜ್ಞೆನ ಅವ್ರಿಂದ ಬರೆಸಿದ್ರು. ಆ ಆಜ್ಞೆಯನ್ನ ಯೆಹೂದ್ಯರಿಗೆ, ಪ್ರಾಂತ್ಯಾಧಿಕಾರಿಗಳಿಗೆ,+ ರಾಜ್ಯಪಾಲರಿಗೆ, ಭಾರತದಿಂದ ಇಥಿಯೋಪ್ಯದ ತನಕ 127 ಪ್ರಾಂತ್ಯಗಳಲ್ಲಿದ್ದ* ಎಲ್ಲ ಅಧಿಕಾರಿಗಳಿಗೆ+ ಕೊಡಬೇಕಾಗಿತ್ತು. ಹಾಗಾಗಿ ಆ ಆಜ್ಞೆಯನ್ನ ಅವ್ರವ್ರ ಪ್ರಾಂತ್ಯದ ಲಿಪಿಯಲ್ಲಿ* ಮತ್ತು ಭಾಷೆಯಲ್ಲಿ ಹಾಗೂ ಯೆಹೂದ್ಯರಿಗೆ ಅವ್ರವ್ರ ಲಿಪಿಯಲ್ಲಿ* ಮತ್ತು ಭಾಷೆಯಲ್ಲಿ ಬರೆಸಿದ್ರು.

10 ಮೊರ್ದೆಕೈ ಆ ಆಜ್ಞೆಯನ್ನ ರಾಜ ಅಹಷ್ವೇರೋಷನ ಹೆಸ್ರಲ್ಲಿ ಬರೆದು ಅದ್ರ ಮೇಲೆ ರಾಜನ ಮುದ್ರೆ ಉಂಗುರ+ ಒತ್ತಿದ. ಆ ಆಜ್ಞೆಯನ್ನ ಪತ್ರಗಳ ರೂಪದಲ್ಲಿ ಸಂದೇಶವಾಹಕರಿಗೆ ಕೊಟ್ಟ. ಅವುಗಳನ್ನ ತಲುಪಿಸೋಕೆ ಅವರು ವೇಗವಾಗಿ ಓಡ್ತಿದ್ದ ಕುದುರೆಗಳ ಮೇಲೆ ಹೋದ್ರು. ಆ ಕುದುರೆಗಳನ್ನ ರಾಜಮನೆತನದ ಸೇವೆಗಾಗೇ ಬಳಸ್ತಿದ್ರು. 11 ರಾಜ ಆ ಪತ್ರದಲ್ಲಿ, ಯೆಹೂದ್ಯರು ತಮ್ಮ ಪ್ರಾಣಗಳನ್ನ ಉಳಿಸ್ಕೊಳ್ಳೋಕೆ ಹೋರಾಡಬಹುದು, ಬೇರೆಬೇರೆ ಪ್ರಾಂತ್ಯಗಳಲ್ಲಿದ್ದ* ಯೆಹೂದ್ಯರು ಒಟ್ಟುಸೇರಬಹುದು, ತಮ್ಮ ಮೇಲೆ ದಾಳಿ ಮಾಡೋ ಜನ್ರನ್ನ ಕೊಂದು ಸರ್ವನಾಶ ಮಾಡಬಹುದು, ಅವ್ರ ಆಸ್ತಿಯನ್ನ ಕೊಳ್ಳೆ ಹೊಡಿಬಹುದು ಅಂತ ಅನುಮತಿ ಕೊಟ್ಟಿದ್ದ. ದಾಳಿ ಮಾಡೋ ಸೈನ್ಯ ಯಾವುದೇ ಜನಾಂಗವಾಗಿರಲಿ, ಯಾವುದೇ ಪ್ರದೇಶದವರು ಆಗಿರಲಿ, ಅವ್ರಲ್ಲಿ ಸ್ತ್ರೀಯರೇ ಇರಲಿ, ಮಕ್ಕಳೇ ಇರಲಿ ಯೆಹೂದ್ಯರು ನಾಶಮಾಡಬಹುದಿತ್ತು.+ 12 ಈ ಆಜ್ಞೆ ರಾಜ ಅಹಷ್ವೇರೋಷನಿಗೆ ಸೇರಿದ್ದ ಪ್ರಾಂತ್ಯಗಳಲ್ಲೆಲ್ಲ ಒಂದೇ ದಿನ ಅಂದ್ರೆ 12ನೇ ತಿಂಗಳಾದ ಅದಾರ್‌* ತಿಂಗಳ 13ನೇ ದಿನ+ ಜಾರಿಗೆ ಬರಲಿತ್ತು. 13 ಪತ್ರದಲ್ಲಿ ಬರೆದಿದ್ದ ಮಾತುಗಳನ್ನ* ಎಲ್ಲ ಪ್ರಾಂತ್ಯಗಳಲ್ಲಿ ನಿಯಮವಾಗಿ ಜಾರಿಗೆ ತರಬೇಕಿತ್ತು. ಆ ದಿನ ಎಲ್ಲ ಯೆಹೂದ್ಯರು ತಮ್ಮ ಶತ್ರುಗಳ ವಿರುದ್ಧ ಸೇಡು ತೀರಿಸೋಕೆ+ ಸಿದ್ಧರಿರೋಕೆ ಅದನ್ನ ಎಲ್ಲ ಜನ್ರಿಗೆ ಪ್ರಕಟಣೆ ಮಾಡಬೇಕಿತ್ತು. 14 ರಾಜನ ಅಪ್ಪಣೆ ಸಿಕ್ಕಿದ ತಕ್ಷಣ ಅವನ ಸಂದೇಶವಾಹಕರು ರಾಜಮನೆತನದ ಸೇವೆಗಂತಾನೇ ಬಳಸ್ತಿದ್ದ ವೇಗವಾಗಿ ಓಡೋ ಕುದುರೆಗಳನ್ನ ಹತ್ತಿ ಬೇಗಬೇಗ ಹೋದ್ರು. ಶೂಷನ್‌*+ ಕೋಟೆಯಲ್ಲೂ* ಆ ನಿಯಮವನ್ನ ಹೊರಡಿಸಿದ್ರು.

15 ಮೊರ್ದೆಕೈ, ರಾಜನ ಆಸ್ಥಾನದಿಂದ ಹೋದಾಗ ಅವನ ತಲೆ ಮೇಲೆ ಬಂಗಾರದ ಕಿರೀಟ ಇತ್ತು. ಅವನು ನೀಲಿ ಮತ್ತು ಬಿಳಿ ಬಣ್ಣದ ಬಟ್ಟೆಯನ್ನ, ನೇರಳೆ ಬಣ್ಣದ ಉಣ್ಣೆಯಿಂದ ಮಾಡಿದ ಒಳ್ಳೇ ಮೇಲಂಗಿಯನ್ನ ಹಾಕಿದ್ದ.+ ಶೂಷನ್‌* ಪಟ್ಟಣದಲ್ಲಿ ಸಂಭ್ರಮದ ಅಲೆಗಳು ಎದ್ದಿದ್ದವು. 16 ಯಾಕಂದ್ರೆ ಯೆಹೂದ್ಯರಿಗೆ ನೆಮ್ಮದಿ* ಸಿಕ್ಕಿತ್ತು. ಜನ್ರಿಂದ ಅವ್ರಿಗೆ ಗೌರವ ಸಿಕ್ಕಿತ್ತು. ಹಾಗಾಗಿ ಅವರು ಆನಂದದಿಂದ ಸಂಭ್ರಮಿಸ್ತಿದ್ರು. 17 ರಾಜನ ಆದೇಶ, ಅವನ ನಿಯಮ ಯಾವೆಲ್ಲ ಪ್ರಾಂತ್ಯಗಳಿಗೆ ಮತ್ತು ಪಟ್ಟಣಗಳಿಗೆ ತಲುಪಿತ್ತೋ ಅಲ್ಲಿನ ಯೆಹೂದ್ಯರು ಸಂತೋಷದಿಂದ ಕುಣಿದಾಡಿದ್ರು. ಅವರು ಔತಣ ಏರ್ಪಡಿಸಿ ಸಂಭ್ರಮಿಸಿದ್ರು. ದೇಶದ ಜನ್ರಲ್ಲಿ ಅನೇಕರಿಗೆ ಯೆಹೂದ್ಯರ ಬಗ್ಗೆ ಭಯ ಇದ್ದಿದ್ರಿಂದ ಅವ್ರಲ್ಲಿ ಹೆಚ್ಚಿನವರು ತಾವು ಕೂಡ ಯೆಹೂದ್ಯರು ಅಂತ ಹೇಳ್ಕೊಳ್ತಿದ್ರು.+

9 ರಾಜನ ಆಜ್ಞೆ ಮತ್ತು ನಿಯಮ ಜಾರಿಗೆ ಬರಬೇಕಿದ್ದ+ 12ನೇ ತಿಂಗಳ ಅಂದ್ರೆ ಅದಾರ್‌*+ ತಿಂಗಳ 13ನೇ ದಿನ ಬಂತು. ಯೆಹೂದ್ಯರ ಶತ್ರುಗಳು ಯೆಹೂದ್ಯರ ಮೇಲೆ ದಾಳಿ ಮಾಡಿ ಗೆಲ್ಲಬಹುದು ಅಂದ್ಕೊಂಡಿದ್ದ ದಿನ ಅದು. ಆದ್ರೆ ಆದದ್ದೇ ಬೇರೆ. ತಮ್ಮನ್ನ ದ್ವೇಷಿಸ್ತಿದ್ದವ್ರ ಮೇಲೆ ಯೆಹೂದ್ಯರೇ ಅವತ್ತು ಜಯ ಸಾಧಿಸಿದ್ರು.+ 2 ರಾಜ ಅಹಷ್ವೇರೋಷನ+ ಪ್ರಾಂತ್ಯಗಳಲ್ಲಿದ್ದ* ಯೆಹೂದ್ಯರು ತಮಗೆ ಹಾನಿಮಾಡೋಕೆ ಬರುವವರ ಮೇಲೆ ದಾಳಿ ಮಾಡೋಕೆ ತಮ್ಮತಮ್ಮ ಪಟ್ಟಣಗಳಲ್ಲಿ ಸೇರಿ ಬಂದ್ರು. ಯೆಹೂದ್ಯರ ವಿರುದ್ಧ ಒಬ್ಬನಿಗೂ ನಿಲ್ಲಕ್ಕಾಗಲಿಲ್ಲ. ಯಾಕಂದ್ರೆ ಎಲ್ಲ ಜನ್ರಲ್ಲಿ ಯೆಹೂದ್ಯರ ಬಗ್ಗೆ ಭಯ ಹುಟ್ಕೊಂಡಿತ್ತು.+ 3 ಎಲ್ಲ ಪ್ರಾಂತ್ಯಗಳ ಅಧಿಕಾರಿಗಳು, ದೇಶಾಧಿಪತಿಗಳು,+ ರಾಜ್ಯಪಾಲರು, ರಾಜನ ವ್ಯವಹಾರಗಳನ್ನ ನೋಡ್ಕೊಳ್ತಾ ಇದ್ದವರು ಯೆಹೂದ್ಯರಿಗೆ ಬೆಂಬಲ ಕೊಟ್ರು. ಯಾಕಂದ್ರೆ ಅವ್ರಿಗೆ ಮೊರ್ದೆಕೈಯ ಭಯ ಇತ್ತು. 4 ರಾಜನ ಅರಮನೆಯಲ್ಲಿ ಮೊರ್ದೆಕೈ ಒಬ್ಬ ದೊಡ್ಡ ಅಧಿಕಾರಿಯಾದ.+ ಅವನಿಗೆ ಹೆಚ್ಚೆಚ್ಚು ಅಧಿಕಾರ ಸಿಕ್ತು, ಅವನ ಕೀರ್ತಿ ಎಲ್ಲ ಪ್ರಾಂತ್ಯಗಳಲ್ಲಿ ಹಬ್ಬುತ್ತಾ ಹೋಯ್ತು.

5 ಯೆಹೂದ್ಯರು ತಮ್ಮ ಶತ್ರುಗಳನ್ನೆಲ್ಲ ಕತ್ತಿಯಿಂದ ಕೊಂದು ಪೂರ್ತಿ ನಾಶಮಾಡಿದ್ರು. ತಮ್ಮನ್ನ ದ್ವೇಷಿಸ್ತಿದ್ದ ಜನ್ರಿಗೆ ಇಷ್ಟಬಂದ ಹಾಗೆ ಮಾಡಿದ್ರು.+ 6 ಶೂಷನ್‌*+ ಕೋಟೆಯಲ್ಲಿ* ಯೆಹೂದ್ಯರು 500 ಗಂಡಸ್ರನ್ನ ಕೊಂದು ಹಾಕಿದ್ರು. 7 ಅಷ್ಟೇ ಅಲ್ಲ ಅವರು ಪರ್ಷಂದಾತ, ದಲ್ಫೋನ, ಆಸ್ಪಾತ, 8 ಪೋರಾತ, ಅದಲ್ಯ, ಅರೀದಾತ, 9 ಪರ್ಮಷ್ಟ, ಅರೀಸೈ, ಅರಿದೈ, ವೈಜಾತನನ್ನ ಕೊಂದ್ರು. 10 ಈ ಹತ್ತೂ ಜನ ಹಮ್ಮೆದಾತನ ಮಗನೂ ಯೆಹೂದ್ಯರ ಶತ್ರುವೂ ಆಗಿದ್ದ ಹಾಮಾನನ+ ಗಂಡು ಮಕ್ಕಳು. ಯೆಹೂದ್ಯರು ಅವ್ರನ್ನ ಕೊಂದ್ರು ಆದ್ರೆ ಅವ್ರಿಂದ ಏನೂ ಕೊಳ್ಳೆ ಹೊಡಿಲಿಲ್ಲ.+

11 ಆ ದಿನ ಶೂಷನ್‌* ಕೋಟೆಯಲ್ಲಿ* ಸತ್ತವ್ರ ಸಂಖ್ಯೆ ರಾಜನಿಗೆ ತಿಳಿಸಲಾಯ್ತು.

12 ರಾಜ ಎಸ್ತೇರ್‌ ರಾಣಿಯನ್ನ “ಶೂಷನ್‌* ಕೋಟೆಯಲ್ಲಿ* ಯೆಹೂದ್ಯರು 500 ಗಂಡಸ್ರನ್ನ, ಹಾಮಾನನ 10 ಗಂಡು ಮಕ್ಕಳನ್ನ ಕೊಂದು ನಾಶ ಮಾಡಿದ್ದಾರೆ. ಶೂಷನ್‌ ಕೋಟೆಯಲ್ಲೇ ಈ ಸ್ಥಿತಿಯಾಗಿದ್ರೆ ರಾಜನ ಬೇರೆ ಪ್ರಾಂತ್ಯಗಳ+ ಕಥೆ ಏನು? ಎಸ್ತೇರ್‌ ರಾಣಿ, ನಿನಗೆ ಇನ್ನೇನು ಬೇಕು? ನಿನ್ನ ಮುಂದಿನ ಆಸೆ ಏನು? ಹೇಳು, ಅದನ್ನ ಸಹ ಮಾಡಿಬಿಡ್ತೀನಿ” ಅಂದ. 13 ಅದಕ್ಕೆ ಎಸ್ತೇರ್‌ “ರಾಜ ಒಪ್ಪೋದಾದ್ರೆ+ ಶೂಷನ್‌* ಪಟ್ಟಣದಲ್ಲಿರೋ ಯೆಹೂದ್ಯರು ಇವತ್ತು ಜಾರಿಯಲ್ಲಿರೋ ನಿಯಮದ ಪ್ರಕಾರನೇ ನಾಳೆನೂ ಮಾಡೋಕೆ ಅನುಮತಿ ಕೊಡು.+ ಹಾಮಾನನ 10 ಗಂಡು ಮಕ್ಕಳ ಶವಗಳನ್ನ ಕಂಬಕ್ಕೆ ನೇತುಹಾಕೋಕೆ ಅಪ್ಪಣೆ ಕೊಡು”+ ಅಂದಳು. 14 ಆಗ ರಾಜ ಹಾಗೇ ಅಪ್ಪಣೆ ಕೊಟ್ಟ. ತಕ್ಷಣ ಶೂಷನ್‌* ಪಟ್ಟಣದಲ್ಲಿ ರಾಜಾಜ್ಞೆಗೆ ಸಂಬಂಧಪಟ್ಟ ಒಂದು ನಿಯಮ ಜಾರಿಗೆ ಬಂತು. ಹಾಮಾನನ 10 ಗಂಡು ಮಕ್ಕಳನ್ನ ನೇತುಹಾಕಿದ್ರು.

15 ಅದಾರ್‌ ತಿಂಗಳ 14ನೇ ದಿನ+ ಯೆಹೂದ್ಯರು ಮತ್ತೊಮ್ಮೆ ಶೂಷನ್‌* ಪಟ್ಟಣದಲ್ಲಿ ಸೇರಿ ಬಂದು ಆ ಪಟ್ಟಣದ 300 ಗಂಡಸ್ರನ್ನ ಕೊಂದು ಹಾಕಿದ್ರು. ಆದ್ರೆ ಅವ್ರಿಂದ ಏನೂ ಕೊಳ್ಳೆ ಹೊಡಿಲಿಲ್ಲ.

16 ರಾಜನ ಬೇರೆ ಪ್ರಾಂತ್ಯಗಳಲ್ಲಿದ್ದ ಯೆಹೂದ್ಯರು ಕೂಡ ಸೇರಿ ಬಂದು ಪ್ರಾಣ ಉಳಿಸ್ಕೊಳ್ಳೋಕೆ ಹೋರಾಡಿದ್ರು.+ ಅವರು ತಮ್ಮನ್ನ ದ್ವೇಷಿಸ್ತಿದ್ದ 75,000 ಶತ್ರುಗಳನ್ನ ಕೊಂದು ಹಾಕಿದ್ರು.+ ಆದ್ರೆ ಯೆಹೂದ್ಯರು ಆ ಜನ್ರಿಂದ ಏನೂ ಕೊಳ್ಳೆ ಹೊಡಿಲಿಲ್ಲ. 17 ಇದು ಅದಾರ್‌ ತಿಂಗಳ 13ನೇ ದಿನ ನಡಿತು. 14ನೇ ದಿನ ಯೆಹೂದ್ಯರು ವಿಶ್ರಾಂತಿ ತಗೊಂಡು ಔತಣ ಮಾಡಿಸಿ ಸಂಭ್ರಮಿಸಿದ್ರು.

18 ಶೂಷನ್‌* ಪಟ್ಟಣದಲ್ಲಿದ್ದ ಯೆಹೂದ್ಯರು ಹೋರಾಡೋಕೆ 13ನೇ ಮತ್ತು 14ನೇ ದಿನ ಸೇರಿ ಬಂದ್ರು.+ 15ನೇ ದಿನ ವಿಶ್ರಾಂತಿ ತಗೊಂಡು ಔತಣ ಮಾಡಿ ಸಂಭ್ರಮಿಸಿದ್ರು. 19 ಬೇರೆ ಪ್ರಾಂತ್ಯಗಳ ಪಟ್ಟಣಗಳಲ್ಲಿದ್ದ ಯೆಹೂದ್ಯರು ಅದಾರ್‌ ತಿಂಗಳ 14ನೇ ದಿನ ಔತಣ ಮಾಡಿಸಿದ್ರು. ಸಂಭ್ರಮದಿಂದ ಹಬ್ಬ ಆಚರಿಸಿದ್ರು.+ ಒಬ್ರಿಗೊಬ್ರು ಆಹಾರ ಹಂಚಿದ್ರು.+

20 ಈ ಎಲ್ಲ ಘಟನೆಗಳನ್ನ ಮೊರ್ದೆಕೈ+ ಬರೆದಿಟ್ಟ. ಅವನು ರಾಜ ಅಹಷ್ವೇರೋಷನ ಪ್ರಾಂತ್ಯಗಳಲ್ಲಿ ವಾಸವಿದ್ದ ಎಲ್ಲ ಯೆಹೂದ್ಯರಿಗೆ ಅಂದ್ರೆ ಹತ್ರ ಇದ್ದ, ದೂರ ಇದ್ದ ಎಲ್ಲ ಯೆಹೂದ್ಯರಿಗೆ ಪತ್ರಗಳನ್ನ ಕಳಿಸಿದ. 21 ಈಗಿಂದ ಪ್ರತಿ ವರ್ಷ ಅದಾರ್‌ ತಿಂಗಳ 14ನೇ ಮತ್ತು 15ನೇ ದಿನ ಹಬ್ಬ ಆಚರಿಸಬೇಕಂತ ಮೊರ್ದೆಕೈ ಆ ಪತ್ರಗಳಲ್ಲಿ ಯೆಹೂದ್ಯರಿಗೆ ನಿರ್ದೇಶನ ಕೊಟ್ಟಿದ್ದ. 22 ಯಾಕಂದ್ರೆ ಆ ದಿನಗಳಲ್ಲಿ ಯೆಹೂದ್ಯರಿಗೆ ತಮ್ಮ ಶತ್ರುಗಳಿಂದ ಬಿಡುಗಡೆ ಸಿಕ್ತು. ಅದೇ ತಿಂಗಳಲ್ಲಿ ಅವ್ರ ದುಃಖ ಸಂತೋಷವಾಗಿ, ಅವ್ರ ಗೋಳಾಟ+ ಹಬ್ಬವಾಗಿ ಬದಲಾಯ್ತು. ಹಾಗಾಗಿ ಯೆಹೂದ್ಯರು ಆ ಎರಡೂ ದಿನಗಳಲ್ಲಿ ದೊಡ್ಡ ಔತಣ ಮಾಡಿಸಿ ಸಂಭ್ರಮಿಸಿದ್ರು. ಒಬ್ರಿಗೊಬ್ರು ಆಹಾರವನ್ನ, ಬಡವರಿಗೆ ಉಡುಗೊರೆಗಳನ್ನ ಹಂಚಿದ್ರು.

23 ತಾವು ಶುರು ಮಾಡಿದ ಈ ಹಬ್ಬವನ್ನ ಪ್ರತಿ ವರ್ಷ ಮಾಡ್ತೀವಿ, ಮೊರ್ದೆಕೈ ತಮಗೆ ಬರೆದ ಪತ್ರದಲ್ಲಿ ನಿರ್ದೇಶಿಸಿದ ವಿಷ್ಯಗಳನ್ನ ಮಾಡ್ತೀವಿ ಅಂತ ಯೆಹೂದ್ಯರು ಒಪ್ಕೊಂಡ್ರು. 24 ಯಾಕಂದ್ರೆ ಅಗಾಗನ+ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನ+ ಯೆಹೂದ್ಯರನ್ನ ಸರ್ವನಾಶ ಮಾಡೋಕೆ ಸಂಚು ಮಾಡಿದ್ದ.+ ಎಲ್ಲ ಯೆಹೂದ್ಯರ ಶತ್ರುವಾಗಿದ್ದ ಅವನು ಯೆಹೂದ್ಯರನ್ನ ಹೆದರಿಸೋಕೆ, ಅವ್ರನ್ನ ನಾಶ ಮಾಡೋಕೆ ಪೂರನ್ನ ಅಂದ್ರೆ ಚೀಟನ್ನ ಹಾಕಿಸಿದ್ದ.+ 25 ಆದ್ರೆ ರಾಜನ ಮುಂದೆ ಎಸ್ತೇರ್‌ ಬಂದಾಗ ರಾಜ “ಯೆಹೂದ್ಯರ ವಿರುದ್ಧ ಹಾಮಾನ ಮಾಡಿರೋ ಸಂಚು+ ಅವನ ತಲೆ ಮೇಲೇ ಬರಲಿ” ಅನ್ನೋ ಆಜ್ಞೆ ಬರೆಸಿದ.+ ಆಗ ಹಾಮಾನನನ್ನ, ಅವನ ಗಂಡು ಮಕ್ಕಳನ್ನ ಕಂಬಕ್ಕೆ ನೇತುಹಾಕಿದ್ರು.+ 26 ಹೀಗೆ ಪೂರ್‌*+ ಅನ್ನೋ ಹೆಸ್ರಿಂದ ಆ ದಿನಗಳನ್ನ ಅವರು ಪೂರೀಮ್‌ ಅಂತ ಕರೆದ್ರು. ಹಾಗಾಗಿ ಮೊರ್ದೆಕೈ ಬರೆದ ಪತ್ರದಲ್ಲಿದ್ದ ಮಾತುಗಳನ್ನ, ತಾವು ನೋಡಿದ ವಿಷ್ಯಗಳನ್ನ, ತಾವು ಅನುಭವಿಸಿದ ವಿಷ್ಯಗಳನ್ನ ಮನಸ್ಸಲ್ಲಿ ಇಟ್ಕೊಂಡು 27 ಯೆಹೂದ್ಯರು ಒಂದು ತೀರ್ಮಾನ ಮಾಡಿದ್ರು. ಅದೇನಂದ್ರೆ ತಾವು, ತಮ್ಮ ಸಂತತಿಯವರು, ತಮ್ಮನ್ನ ಬಂದು ಸೇರ್ಕೊಳ್ಳೋ ಜನ್ರೆಲ್ಲ+ ಆ ಎರಡೂ ದಿನ ತಪ್ಪದೆ ಹಬ್ಬ ಮಾಡ್ತೀವಿ. ಪತ್ರದಲ್ಲಿ ಬರೆದ ತರಾನೇ ಪ್ರತಿ ವರ್ಷ ಇದೇ ತರ ಮಾಡ್ತೀವಿ. 28 ಪೂರೀಮ್‌ ಅನ್ನೋ ಈ ಹಬ್ಬವನ್ನ ಪ್ರತಿ ಪ್ರಾಂತ್ಯದಲ್ಲೂ ಪ್ರತಿ ಪಟ್ಟಣದಲ್ಲೂ ಪ್ರತಿ ಮನೆತನದಲ್ಲೂ ತಲೆಮಾರುಗಳ ತನಕ ನೆನಪು ಮಾಡ್ಕೊಳ್ಳಬೇಕಿತ್ತು, ಅದನ್ನ ಆಚರಿಸಬೇಕಿತ್ತು. ಆ ಹಬ್ಬ ಆಚರಿಸೋ ಪದ್ಧತಿ ಯೆಹೂದ್ಯರಲ್ಲಿ ಅಳಿಸಿ ಹೋಗಬಾರದು, ಆ ಆಚರಣೆಯನ್ನ ಅವ್ರ ವಂಶದವರು ಯಾವತ್ತೂ ನಿಲ್ಲಿಸಬಾರದು ಅಂತ ಈ ತರ ಮಾಡಿದ್ರು.

29 ಆಮೇಲೆ ಪೂರೀಮಿನ ಬಗ್ಗೆ ಎರಡನೇ ಪತ್ರ ಬರೆದ್ರು. ಅಬೀಹೈಲನ ಮಗಳು ಎಸ್ತೇರ್‌ ರಾಣಿ ಮತ್ತು ಯೆಹೂದ್ಯ ಮೊರ್ದೆಕೈ ತಮಗಿದ್ದ ಅಧಿಕಾರದಿಂದ ಈ ಪತ್ರಕ್ಕೆ ಸಹಿ ಮಾಡಿದ್ರು. 30 ಮೊರ್ದೆಕೈ ಈ ಪತ್ರವನ್ನ ರಾಜ ಅಹಷ್ವೇರೋಷನ+ ಸಾಮ್ರಾಜ್ಯದ 127 ಪ್ರಾಂತ್ಯಗಳಲ್ಲಿದ್ದ+ ಎಲ್ಲ ಯೆಹೂದ್ಯರಿಗೂ ಕಳಿಸಿದ. ಅದ್ರಲ್ಲಿ ಶಾಂತಿ, ಸತ್ಯದ ಮಾತುಗಳನ್ನ ಬರೆದಿದ್ರು. 31 ಹೇಳಿದ ದಿನಗಳಲ್ಲೇ ಪೂರೀಮ್‌ ಹಬ್ಬ ಆಚರಿಸಬೇಕು ಅಂತ ಬರೆದಿದ್ರು. ಯೆಹೂದ್ಯನಾದ ಮೊರ್ದೆಕೈ ಮತ್ತು ಎಸ್ತೇರ್‌ ರಾಣಿ ಹೇಳಿದ್ದೇ ಆ ಪತ್ರದಲ್ಲಿತ್ತು.+ ಅಷ್ಟೇ ಅಲ್ಲ ಆ ದಿನಗಳನ್ನ ಮನಸ್ಸಲ್ಲಿಟ್ಟು ತಾವು ಮತ್ತು ತಮ್ಮ ವಂಶದವರು ಈ ಹಬ್ಬ ಮಾಡ್ತೀವಿ,+ ಉಪವಾಸ ಮಾಡ್ತೀವಿ,+ ದೇವ್ರನ್ನ ಬೇಡ್ಕೊಳ್ತೀವಿ ಅಂತ+ ಸ್ವತಃ ಯೆಹೂದ್ಯರೇ ಹೇಳಿದ್ರು. 32 ಪೂರೀಮ್‌+ ಬಗ್ಗೆ ಹೇಳಿದ ಈ ವಿಷ್ಯಗಳನ್ನ ಎಸ್ತೇರ್‌ ಕೊಟ್ಟ ಆಜ್ಞೆ ಪಕ್ಕಾ ಮಾಡ್ತು ಮತ್ತು ಅವನ್ನ ಒಂದು ಪುಸ್ತಕದಲ್ಲಿ ಬರೆದಿಟ್ರು.

10 ರಾಜ ಅಹಷ್ವೇರೋಷ ತನ್ನ ರಾಜ್ಯದ ಎಲ್ಲ ಪ್ರದೇಶಗಳಲ್ಲಿ, ದ್ವೀಪಗಳಲ್ಲಿ ವಾಸ ಇದ್ದವ್ರಿಂದ ಬಿಟ್ಟಿ ಕೆಲಸ ಮಾಡಿಸಿದ.

2 ರಾಜನ ಎಲ್ಲ ಸಾಹಸಗಳ ಬಗ್ಗೆ, ಸಾಧನೆಗಳ ಬಗ್ಗೆ, ರಾಜ ಹೇಗೆ ಮೊರ್ದೆಕೈಗೆ+ ದೊಡ್ಡ ಸ್ಥಾನ ಕೊಟ್ಟ+ ಅನ್ನೋದ್ರ ಬಗ್ಗೆ ಮೇದ್ಯ ಮತ್ತು ಪರ್ಶಿಯ+ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ.+ 3 ಇಡೀ ರಾಜ್ಯದಲ್ಲಿ ರಾಜ ಅಹಷ್ವೇರೋಷನ ನಂತ್ರದ ಸ್ಥಾನದಲ್ಲಿ ಯೆಹೂದ್ಯನಾದ ಮೊರ್ದೆಕೈ ಇದ್ದ. ಯೆಹೂದ್ಯರಲ್ಲಿ ಅವನಿಗೆ ಒಳ್ಳೇ ಹೆಸ್ರಿತ್ತು, ಅವನಿಗೆ ಎಲ್ರೂ ಗೌರವ ಕೊಡ್ತಿದ್ರು. ಮೊರ್ದೆಕೈ ತನ್ನ ಜನ್ರ ಒಳಿತಿಗಾಗಿ ಕೆಲಸ ಮಾಡ್ತಿದ್ದ, ಅವ್ರ ವಂಶದವ್ರ ಅಭಿವೃದ್ಧಿಗಾಗಿ ದುಡಿತಿದ್ದ.

ಇವನು ಮಹಾರಾಜ ದಾರ್ಯಾವೇಷನ (ದಾರ್ಯಾವೇಷ ಹಿಸ್ಟಾಸ್ಪಿಸ್‌) ಮಗನಾಗಿದ್ದ ಮೊದಲ್ನೇ ಸರಕ್ಸೀಸ್‌ ಆಗಿರಬಹುದು ಅಂತ ಹೇಳಲಾಗುತ್ತೆ.

ಅಥವಾ “ಕೂಷ್‌.”

ಅಥವಾ “ರಾಜನ ಕೈಕೆಳಗಿದ್ದ ಜಿಲ್ಲೆಗಳನ್ನ.”

ಅಥವಾ “ಸೂಸಾ.”

ಅಥವಾ “ಅರಮನೆಯಿಂದ.”

ಅಥವಾ “ಪಾತ್ರೆಗಳಲ್ಲಿ.”

ಅಥವಾ “ಕುಡಿಯೋ ವಿಷ್ಯದಲ್ಲಿ ಯಾವುದೇ ಕಡ್ಡಾಯ ಇರಲಿಲ್ಲ.”

ಅಥವಾ “ಅರಮನೆಯಲ್ಲಿ.”

ಅಥವಾ “ತನ್ನ ಕೈಕೆಳಗಿದ್ದ ಜಿಲ್ಲೆಗಳಲ್ಲಿ.”

ಅಥವಾ “ಸೂಸಾ.”

ಅಥವಾ “ಅರಮನೆಗೆ.”

ಅಥವಾ “ಅಂತಃಪುರದಲ್ಲಿ.”

ಅಕ್ಷ. “ನಪುಂಸಕ.” ಪದವಿವರಣೆ ನೋಡಿ.

ಅಥವಾ “ಸೌಂದರ್ಯ ಲೇಪನಗಳನ್ನ ಹಚ್ಚೋಕೆ.”

ಅಥವಾ “ಸೂಸಾ.”

2ಅರ 24:8ರಲ್ಲಿ ಇವನನ್ನ ಯೆಹೋಯಾಖೀನ ಅಂತ ಕರೆಯಲಾಗಿದೆ.

ಅರ್ಥ “ಮರ್ಟಲ್‌ ಮರ.”

ಅಥವಾ “ಕಾಳಜಿ ವಹಿಸ್ತಿದ್ದ.”

ಅಥವಾ “ಸೂಸಾ.”

ಅಥವಾ “ಶಾಶ್ವತ ಪ್ರೀತಿ.”

ಅಥವಾ “ಸೌಂದರ್ಯ ಲೇಪನಗಳನ್ನ ಹಚ್ಚೋಕೆ.”

ಪರಿಶಿಷ್ಟ ಬಿ15 ನೋಡಿ.

ಅಥವಾ “ಪೇಟ.”

ಅಥವಾ “ಯುವತಿಯರನ್ನ.”

ಅಕ್ಷ. “ಅವನ ಮೇಲೆ ಕೈಹಾಕೋಕೆ.”

ಅಕ್ಷ. “ಮೊರ್ದೆಕೈ ಹೆಸ್ರಲ್ಲಿ.”

ಅಥವಾ “ಮೊರ್ದೆಕೈಯನ್ನ ಮಾತ್ರ ಕೊಲ್ಲೋದು.”

ಪರಿಶಿಷ್ಟ ಬಿ15 ನೋಡಿ.

ಪರಿಶಿಷ್ಟ ಬಿ15 ನೋಡಿ.

ಅಥವಾ “ನಿನ್ನ ಕೈಕೆಳಗಿರೋ ಜಿಲ್ಲೆಗಳಲ್ಲಿ.”

ಒಂದು ತಲಾಂತು=34.2 ಕೆಜಿ. ಪರಿಶಿಷ್ಟ ಬಿ14 ನೋಡಿ.

ಬಹುಶಃ, “ಈ ಕೆಲಸ ಮಾಡುವವರಿಗೆ ಕೊಡೋಕೆ ನಾನು ರಾಜ ಖಜಾನೆಯಲ್ಲಿ 10,000 ತಲಾಂತು ಬೆಳ್ಳಿಯನ್ನ ಜಮಾ ಮಾಡ್ತೀನಿ.”

ಅಥವಾ “ಬರವಣಿಗೆ ಶೈಲಿಗಳಲ್ಲಿ.”

ಅಥವಾ “ಸೂಸಾ.”

ಅಥವಾ “ಅರಮನೆಯಲ್ಲಿ.”

ಅಥವಾ “ಸೂಸಾ.”

ಅಥವಾ “ಕೈಕೆಳಗಿದ್ದ ಜಿಲ್ಲೆಗಳಲ್ಲಿ.”

ಪದವಿವರಣೆ ನೋಡಿ.

ಅಥವಾ “ಸೂಸಾ.”

ಅಥವಾ “ಸೂಸಾ.”

ಸುಮಾರು 22.3 ಮೀ. (73 ಅಡಿ). ಪರಿಶಿಷ್ಟ ಬಿ14 ನೋಡಿ.

ಅಕ್ಷ. “ರಾಜನ ನಿದ್ರೆ ಹಾರಿಹೋಯ್ತು.”

ಅಕ್ಷ. “ಮೇಲೆ ಕೈಹಾಕೋಕೆ.”

ಪದವಿವರಣೆ ನೋಡಿ.

ಪದವಿವರಣೆ ನೋಡಿ.

ಅಕ್ಷ. “ವಿವೇಕಿಗಳಾದ ಅವನ ಪುರುಷರು.”

ಸುಮಾರು 22.3 ಮೀ. (73 ಅಡಿ). ಪರಿಶಿಷ್ಟ ಬಿ14 ನೋಡಿ.

ಪರಿಶಿಷ್ಟ ಬಿ15 ನೋಡಿ.

ಅಥವಾ “ರಾಜನ ಕೈಕೆಳಗಿದ್ದ ಜಿಲ್ಲೆಗಳಲ್ಲಿದ್ದ.”

ಅಥವಾ “ಬರವಣಿಗೆ ಶೈಲಿಯಲ್ಲಿ.”

ಅಥವಾ “ಬರವಣಿಗೆ ಶೈಲಿಯಲ್ಲಿ.”

ಅಥವಾ “ರಾಜನ ಕೈಕೆಳಗಿದ್ದ ಜಿಲ್ಲೆಗಳಲ್ಲಿದ್ದ.”

ಪರಿಶಿಷ್ಟ ಬಿ15 ನೋಡಿ.

ಅಥವಾ “ಪತ್ರದ ಪ್ರತಿಯನ್ನ.”

ಅಥವಾ “ಸೂಸಾ.”

ಅಥವಾ “ಅರಮನೆಯಲ್ಲೂ.”

ಅಥವಾ “ಸೂಸಾ.”

ಅಕ್ಷ. “ಬೆಳಕು.”

ಪರಿಶಿಷ್ಟ ಬಿ15 ನೋಡಿ.

ಅಥವಾ “ಕೈಕೆಳಗಿದ್ದ ಜಿಲ್ಲೆಗಳಲ್ಲಿದ್ದ.”

ಅಥವಾ “ಸೂಸಾ.”

ಅಥವಾ “ಅರಮನೆಯಲ್ಲಿ.”

ಅಥವಾ “ಸೂಸಾ.”

ಅಥವಾ “ಅರಮನೆಯಲ್ಲಿ.”

ಅಥವಾ “ಸೂಸಾ.”

ಅಥವಾ “ಅರಮನೆಯಲ್ಲಿ.”

ಅಥವಾ “ಸೂಸಾ.”

ಅಥವಾ “ಸೂಸಾ.”

ಅಥವಾ “ಸೂಸಾ.”

ಅಥವಾ “ಸೂಸಾ.”

“ಪೂರ್‌” ಅಂದ್ರೆ “ಚೀಟು.” ಇದ್ರ ಬಹುವಚನ “ಪೂರೀಮ್‌.” ಇದೇ ಯೆಹೂದ್ಯರ ಹಬ್ಬದ ಹೆಸರಾಯ್ತು. ಇದನ್ನ ತಮ್ಮ ಪವಿತ್ರ ಕ್ಯಾಲೆಂಡರ್‌ ಪ್ರಕಾರ 12ನೇ ತಿಂಗಳಲ್ಲಿ ಆಚರಿಸ್ತಿದ್ರು. ಪರಿಶಿಷ್ಟ ಬಿ15 ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ