“ಬನ್ನಿ, ಹೊರ್ಚಾಟ ಡಿ ಶೂಫಸ್ ಕುಡಿಯೋಣ!
ಈ ವಿಧದ ಆಮಂತ್ರಣದ ಪರಿಚಯ ನಿಮಗಿರಲಿಕ್ಕಿಲ್ಲ. ಆದರೆ ನೀವು ಸ್ಪೆಯ್ನ್ ದೇಶದಲ್ಲಿ ಜೀವಿಸುವುದಾದರೆ, ಅದರಲ್ಲೂ ಅದರ ಪೂರ್ವ ಕರಾವಳಿಯಲ್ಲಿ ಜೀವಿಸುವುದಾದರೆ ಅದರ ಪರಿಚಯ ನಿಮಗಿರುವುದು ನಿಶ್ಚಯ. ವರ್ಷವಿಡಿ, ಅದರಲ್ಲೂ ಬಿಸಿ ಬೇಸಗೆಯ ದಿನಗಳಲ್ಲಿ, ಸಹಸ್ರಾರು ಜನರು ಈ ಸಿಹಿಯಾದರೂ ಚೈತನ್ಯದಾಯಕವಾದ ಹೊರ್ಚಾಟ ಡಿ ಶೂಫಸ್ ಎಂಬ ಮದ್ಯರಹಿತ ಪಾನೀಯದಲ್ಲಿ ಆನಂದಿಸುತ್ತಾರೆ!
ಈ ಹೊರ್ಚಾಟವನ್ನು ಬಾದಾಮಿಯಿಂದ ಮತ್ತು ಕುಂಬಳ ಯಾ ಕಲ್ಲಂಗಡಿ ಹಣ್ಣಿನ ಬೀಜದಿಂದ ಹಾಗೂ ಅಕ್ಕಿ, ಏಪ್ರಿಕಾಟ್ ಹಣ್ಣು, ಸೇಬು ಹಣ್ಣು, ಚೆರಿ ಹಣ್ಣು, ಕರಂಟ್ ದ್ವೀಪದ್ರಾಕ್ಷಿ, ಹುಳಿರಸ ದ್ರಾಕ್ಷಿ, ಉಪ್ಪು ನೇರಿಳೆ, ಪಮ್ಲ್ ಹಣ್ಣು, ಮತ್ತು ಲಿಕರಿಷ್ನಿಂದ ಮಾಡಸಾಧ್ಯವಿದೆಯೆಂದು ತಿಳಿಯಲು ಅನೇಕ ಸ್ಪೆಯ್ನ್ ದೇಶಸ್ಥರಿಗೂ ಆಶ್ಚರ್ಯವಾದೀತು. ಆದರೂ, ಈ ಪಾನೀಯದ ಮೂಲವಸ್ತು ಶೂಫಸ್ ಎಂಬುದು ಅನೇಕ ಸ್ಪ್ಯಾನಿಯಾರ್ಡರ ಭಾವನೆ.
ಆದರೆ ಶೂಫಸ್ ಅಂದರೇನು? ಅವು ಭೂಮಿ, ಯಾ ನೆಲದ ಬಾದಾಮಿ ಅಥವಾ ಕರಟಕಾಯಿಗಳಾಗಿದ್ದು, ಈ ಶೂಫಸ್ ಎಂಬ ಪದ ನಿರ್ದಿಷ್ಟವಾಗಿ ಯೂರೋಪಿಯನ್ ಜಂಬು ಗಿಡ (Cyperus esculentus)ದ ನೆಲದಡಿಯ ಚಿಕ್ಕ ಕರಟುಕಾಯಿಯಂತಿರುವ ಪ್ರತಿಯೊಂದು ಗೆಡ್ಡೆಗಳಿಗೆ ಸೂಚಿತವಾಗುತ್ತದೆ. ಇವುಗಳು ನೆಲದ ಮೇಲ್ಮೈಯಿಂದ 5-8 ಸೆಂಟಿಮೀಟರುಗಳಷ್ಟು ಕೆಳಗಿರುತ್ತವೆ. ಈ ಜಂಬು ಗಿಡವನ್ನು ಕೇವಲ ಸ್ಪೆಯ್ನಿನಲ್ಲಲ್ಲ, ಮಧ್ಯಪೂರ್ವ ಮತ್ತು ಉತ್ತರ ಆಫ್ರಿಕದಲ್ಲಿಯೂ ಜುಲೈಯಿಂದ ಒಕ್ಟೋಬರದ ವರೆಗೆ ಬೆಳೆಸಲಾಗುತ್ತದೆ. ಅಲ್ಲಿಂದ ಅರಬಿಗಳು ಅದನ್ನು ಸ್ಪೆಯ್ನಿಗೆ ತಂದರು. ಮೊದಲಾಗಿ ಇದನ್ನು ದೇಶದ ದಕ್ಷಿಣ ಭಾಗದಲ್ಲಿ ಬೆಳೆಸಿದರೂ, ಇದರ ಬೆಳೆಗೆ ಸ್ಪೆಯ್ನಿನ ಮೆಡಿಟರೇನಿಯನ್ ಕರಾವಳಿಯ ವೆಲೆನ್ಸಿಯದ ನೀರಾವರಿ ಗದ್ದೆಗಳಿಗಿಂತ ಯೋಗ್ಯವಾದ ಸ್ಥಳ ಇನ್ನೊಂದಿಲ್ಲ, ಇಲ್ಲಿ ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಲಾಗುತ್ತದೆ.
ನಾವು ಹೊರ್ಚಾಟವನ್ನು ಹೇಗೆ ತಯಾರಿಸುತ್ತೇವೆ? ಈ ಶೂಫಸ್ಗಳನ್ನು ಅನೇಕ ತಾಸುಗಳ ವರೆಗೆ ನೆನೆಯ ಹಾಕಲಾಗುತ್ತದೆ. ಅದು ಎಷ್ಟು ಸಮಯವೆಂಬ ಕುರಿತು ಪ್ರತಿಯೊಬ್ಬ ಹೊರ್ಚಾಟ ತಯಾರಕನಿಗೆ ತನ್ನದೇ ಆದ ಅಭಿಪ್ರಾಯವಿದೆ. ಶೂಫಸ್ ತುಂಬ ನೀರನ್ನು ಹೀರಿಕೊಳ್ಳುವುದರಿಂದ ಅವು ಉಬ್ಬುತ್ತವೆ. ಈಗ, ನೀರನ್ನು ಸೇರಿಸುತ್ತಾ ಇರುವಾಗ ಅವುಗಳನ್ನು ಜಜ್ಜಲಾಗುತ್ತದೆ. ಹೀಗೆ ಜಜ್ಜುಬಡಿದ ಬಳಿಕ ಆ ಮೆತು ಪದಾರ್ಥವನ್ನು ಒಂದು ಪಾತ್ರೆಯಲ್ಲಿ ಹಾಕಿ, ಚೆನ್ನಾಗಿ ಮಿಶ್ರ ಮಾಡಿ, ಸುಮಾರು 15 ನಿಮಿಷ ಇಟ್ಟ ಬಳಿಕ ರಸವನ್ನು ತಿರುಳಿನಿಂದ ಪ್ರತ್ಯೇಕಿಸಲು ಒಂದು ಒತ್ತುಯಂತ್ರದ ಮೂಲಕ ದಾಟಿಸಲಾಗುತ್ತದೆ. ಆ ಬಳಿಕ ಅದರ ರಸವನ್ನು ಶೋಧಿಸಿ ಅದಕ್ಕೆ ಸಕ್ಕರೆ (ಒಣ ಶೂಫಸಿನ ಪ್ರತಿ ಅರ್ಧ ಕಿಲೊವಿಗೆ ಸುಮಾರು ಅರ್ಧ ಕಿಲೊ) ಯನ್ನು ಸೇರಿಸಲಾಗುತ್ತದೆ.
ಕೆಲವರು ದಾಲ್ಚಿನ್ನಿ, ತುರಿದ ನಿಂಬೆ ಸಿಪ್ಪೆ, ಅಥವಾ ಕಿತ್ತಳೆ ಹೂವಿನ ರಸವನ್ನು ಸಹ ಕೂಡಿಸುತ್ತಾರೆ. ಈ ಪಾನೀಯ ತಯಾರಾದ ಕೂಡಲೆ ಅದನ್ನು ಶೈತ್ಯ ಸ್ಥಳದಲ್ಲಿ ಕೂಡಲೆ ಇಟ್ಟು ಉಳಿಸಬೇಕು. ಆದರೆ 48 ತಾಸುಗಳಿಗಿಂತ ಹೆಚ್ಚು ಸಮಯ ಇಡಬಾರದು. ಇಟ್ಟರೆ ಶೂಫಸಿನ ಕಿಣ್ವಗಳು ಒಡನೆ ಕಾರ್ಯ ನಡೆಸುತ್ತ ರುಚಿಯನ್ನು ಬದಲಾಯಿಸುವುವು. ನಿಮಗೆ ಅದನ್ನು ರಸವಾಗಿ ಕುಡಿದು ಆನಂದಿಸಬೇಕೆಂದಿರುವಲ್ಲಿ, ಅದನ್ನು 3-4 ಡಿಗ್ರಿ ಸೆಂಟಿಗ್ರೇಡಿನಲ್ಲಿಯೂ ಐಸ್ ಪಾನೀಯವಾಗಿ ಉಪಯೋಗಿಸುವಲ್ಲಿ ಸುಮಾರು -1 ಡಿಗ್ರಿ ಸೆಂಟಿಗ್ರೇಡಿನಲ್ಲಿಯೂ ತಣ್ಣಗಿಡಬೇಕು.
ಹೊರ್ಚಾಟ ಡಿ ಶೂಫಸ್ ಚೈತನ್ಯ ಕೊಡುವ, ಸಿಹಿಯಾದ ಪೋಷಕ ಪಾನೀಯ. ಆದುದರಿಂದ, ಸ್ಪೆಯ್ನಿನ ಪೂರ್ವ ಕರಾವಳಿಗೆ ಭೇಟಿ ಕೊಡುವ ಸಂದರ್ಭ ನಿಮಗಿರುವಲ್ಲಿ, “ಬನ್ನಿ, ಹೊರ್ಚಾಟ ಡಿ ಶೂಫಸ್ ಕುಡಿಯೋಣ!” ಎಂಬ ಆಮಂತ್ರಣವನ್ನು ಅಂಗೀಕರಿಸಿರಿ.—ದತ್ತ ಲೇಖನ. (g90 11/8)