ಕುಟುಂಬ ಹಾಗೂ ಸ್ನೇಹಿತರಿಗಾಗಿ ಸಾಂತ್ವನ
ಕಳೆದ ಜುಲೈ 17ರಂದು, ಟಿಡಬ್ಲ್ಯೂಎ (TWA) ಫ್ಲೈಟ್ 800 ವಿಮಾನವು, ಅಟ್ಲಾಂಟಿಕ್ ಮಹಾಸಾಗರದೊಳಕ್ಕೆ ಕುಸಿದುಬಿದ್ದಾಗ, ಅದರಲ್ಲಿದ್ದ 230 ಜನರೆಲ್ಲರೂ ಅಕಾಲ ಮರಣ ಹೊಂದಿದರು. ಇವರಲ್ಲಿ ಪೆನ್ಸಿಲ್ವೇನಿಯದ, ಸುಮಾರು 5,000 ಜನಸಂಖ್ಯೆಯಿರುವ ಒಂದು ಚಿಕ್ಕ ಪಟ್ಟಣವಾದ ಮಾಂಟುರ್ಸ್ವಿಲ್ನ 16 ಮಂದಿ ಪ್ರೌಢ ಶಾಲೆಯ ಫ್ರೆಂಚ್ ವಿದ್ಯಾರ್ಥಿಗಳು ಹಾಗೂ ಐವರು ವಯಸ್ಕ ಪಾಲಿಕೆಯರು ಸೇರಿದ್ದರು. ಆಗಸ್ಟ್ 17ರಂದು, ಟೌನ್ ಮೆಮೋರಿಯಲ್ ಸರ್ವಿಸ್ನಲ್ಲಿ, ಭಾಷಣಕಾರರಲ್ಲಿ ಒಬ್ಬರಾದ ರೂಡಾಲ್ಫ್ ಜೂಲಿಆನಿ—ಇವರು ನ್ಯೂ ಯಾರ್ಕ್ ನಗರದ ಮೇಯರ್—ತಿಳಿಸಿದ್ದೇನೆಂದರೆ, ನ್ಯೂ ಯಾರ್ಕ್ ನಗರದ ಜನಸಂಖ್ಯೆಯಲ್ಲಿ ಅಷ್ಟೇ ಪ್ರತಿಶತ ಜನಸಂಖ್ಯೆಯು ಮೃತಪಟ್ಟಿರುತ್ತಿದ್ದಲ್ಲಿ, 35,000 ಜೀವಗಳು ಕೊಲ್ಲಲ್ಪಡುತ್ತಿದ್ದವು!
ಅನೇಕ ವಿದ್ಯಾರ್ಥಿಗಳ ಶವಸಂಸ್ಕಾರಗಳಲ್ಲಿ ಮಾತಾಡುವಂತೆ, ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಡ್ಯಾನ್ ಚಾನ್ಲರ್ರನ್ನು ಕೇಳಿಕೊಳ್ಳಲಾಯಿತು. ಅವರು ಪ್ರಕಟನೆ 21:4ರಲ್ಲಿರುವ ಬೈಬಲ್ ವಾಗ್ದಾನವನ್ನು ಉದ್ಧರಿಸಿದರು. ದೇವರ ಹೊಸ ವಿಷಯಗಳ ವ್ಯವಸ್ಥೆಯಲ್ಲಿ “ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ” ಎಂದು ಅದು ಹೇಳುತ್ತದೆ. ಅಂತಹ ದುರಂತಗಳು ಏಕೆ ಸಂಭವಿಸುತ್ತವೆ ಎಂಬುದರ ಕುರಿತಾಗಿ ಅವರು ಪ್ರಸಂಗಿ 9:11ರ (NW) ಕಡೆಗೆ ನಿರ್ದೇಶಿಸಿದರು. ಅದು ನಮ್ಮೆಲ್ಲರ ಮೇಲೆ ಒದಗಿಬರುವಂತಹ “ಕಾಲ ಹಾಗೂ ಮುಂಗಾಣದ ಸಂಭವ”ದ ಕುರಿತಾಗಿ ಮಾತಾಡುತ್ತದೆ. ತಮ್ಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು, ಅಂತಹ ಸಾಂತ್ವನದಾಯಕ ಹೇಳಿಕೆಗಳನ್ನು ನುಡಿದುದನ್ನು ಕೇಳಿ, ಅನೇಕರು ಅತ್ಯಾಶ್ಚರ್ಯಪಟ್ಟರು.
ಇನ್ನೂ ಹೆಚ್ಚಿನ ಸಹಾಯವನ್ನು ನೀಡಲಿಕ್ಕಾಗಿ ಚಾನ್ಲರರು, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ ಎಂಬ 32 ಪುಟದ ಬ್ರೋಷರ್ ಮತ್ತು ಸತ್ತ ಪ್ರಿಯ ಜನರಿಗಾಗಿ ನಿರೀಕ್ಷೆ ಏನು? ಎಂಬ ಕಿರುಹೊತ್ತಗೆಯಂತಹ ಪ್ರಕಾಶನಗಳನ್ನು ಲಭ್ಯಗೊಳಿಸಲಿಕ್ಕಾಗಿ, ಪ್ರೌಢ ಶಾಲೆಯಲ್ಲಿ ಒಂದು ಮೇಜನ್ನು ಸ್ಥಾಪಿಸಿದರು. ಬೈಬಲ್ ಸಾಹಿತ್ಯದ ನೂರಾರು ಪ್ರತಿಗಳು ಸ್ವೀಕರಿಸಲ್ಪಟ್ಟವು, ಮತ್ತು ಈ ಪ್ರಕಾಶನಗಳು ಒದಗಿಸಿದ ಸಾಂತ್ವನಕ್ಕಾಗಿ ಅನೇಕರು ಉಪಕಾರವನ್ನು ವ್ಯಕ್ತಪಡಿಸಿದರು.
ನೀವು ಸಹ ಈ ಮೇಲೆ ಉಲ್ಲೇಖಿಸಲಾದ ಬ್ರೋಷರ್ ಹಾಗೂ ಕಿರುಹೊತ್ತಗೆಯಿಂದ, ಅಗತ್ಯವಿರುವ ಸಾಂತ್ವನವನ್ನು ಕಂಡುಕೊಳ್ಳಬಹುದು. ಇವುಗಳಲ್ಲಿ ಪ್ರತಿಯೊಂದರ ಒಂದು ಪ್ರತಿಯನ್ನು ಪಡೆದುಕೊಳ್ಳಲು ನೀವು ಇಷ್ಟಪಡುವಲ್ಲಿ ಅಥವಾ ಉಚಿತ ಗೃಹ ಬೈಬಲ್ ಅಭ್ಯಾಸವನ್ನು ಪಡೆದುಕೊಳ್ಳಲು ಇಷ್ಟಪಡುವಲ್ಲಿ, ದಯವಿಟ್ಟು Watch Tower, H-58 Old Khandala Road, Lonavla 410 401, Mah., India, ಇವರಿಗೆ, ಅಥವಾ ಈ ಪತ್ರಿಕೆಯ ಪುಟ 5ರಲ್ಲಿರುವ ಸರಿಯಾದ ವಿಳಾಸಕ್ಕೆ ಬರೆಯಿರಿ.
[ಪುಟ 43 ರಲ್ಲಿರುವ ಚಿತ್ರ ಕೃಪೆ]
Courtesy of Williamsport Sun-Gazette
[ಪುಟ 43 ರಲ್ಲಿರುವ ಚಿತ್ರ ಕೃಪೆ]
Corey Sipkin/Sipa Press