ನಿರೀಕ್ಷೆ ಬೇಕಾ ಬೇಡ್ವಾ?
ಡಾನ್ಯೆಲ್ಗೆ ಬರೀ ಹತ್ತು ವರ್ಷ. ಒಂದು ವರ್ಷದಿಂದ ಅವನು ಕ್ಯಾನ್ಸರ್ ರೋಗದಿಂದ ತುಂಬ ನರಳುತ್ತಿದ್ದ. ಅವನು ಬದುಕಲ್ಲ ಅಂತ ಫ್ರೆಂಡ್ಸ್, ಡಾಕ್ಟರ್ಸ್ ಅಂದುಕೊಂಡ್ರು, ನಿರೀಕ್ಷೆ ಕಳೆದುಕೊಂಡ್ರು. ಆದರೆ ಡಾನ್ಯೆಲ್ ‘ನಾನು ಖಂಡಿತ ಹುಷಾರಾಗ್ತೀನಿ. ದೊಡ್ಡವನಾದ ಮೇಲೆ ರಿಸರ್ಚರ್ ಆಗಿ ಒಂದು ದಿನ ನಾನೇ ಕ್ಯಾನ್ಸರ್ಗೆ ಔಷಧಿ ಕಂಡುಹಿಡಿಯುತ್ತೀನಿ’ ಎಂಬ ಆಶಾಭಾವನೆ ಇಟ್ಟುಕೊಂಡಿದ್ದ. ಕ್ಯಾನ್ಸರ್ ತಜ್ಞರೊಬ್ಬರು ಡಾನ್ಯೆಲ್ಗೆ ಚಿಕಿತ್ಸೆ ನೀಡಲು ಬರುತ್ತೇನೆಂದು ಹೇಳಿದಾಗಲಂತೂ ಅವನಿಗೆ ಬದುಕುವ ಆಸೆ ಜಾಸ್ತಿ ಆಯಿತು. ಆ ಡಾಕ್ಟರ್ನ ಭೇಟಿಯಾಗಲಿಕ್ಕಾಗಿ ಅವನು ಆಸೆ ಆಸೆಯಿಂದ ಕಾಯುತ್ತಿದ್ದ. ಆ ದಿನ ಬಂತು. ಆದರೆ ಹವಾಮಾನದಲ್ಲಿ ಏರುಪೇರಾದ ಕಾರಣ ಆ ಡಾಕ್ಟರ್ಗೆ ಬರಲಿಕ್ಕೆ ಆಗಲಿಲ್ಲ. ಡಾನ್ಯೆಲ್ನ ಆಸೆ, ಕನಸು ಎಲ್ಲ ನುಚ್ಚುನೂರಾಯಿತು. ಮೊದಲನೇ ಸಲ ಅವನು ಬದುಕುವ ನಿರೀಕ್ಷೆಯನ್ನೇ ಕಳೆದುಕೊಂಡ. ಇದಾಗಿ ಎರಡೇ ದಿನದಲ್ಲಿ ಸತ್ತುಹೋದ.
ಡಾನ್ಯೆಲ್ ಬಗ್ಗೆ ಇದನ್ನೆಲ್ಲ ಹೇಳಿದ್ದು ಒಬ್ಬ ಆರೋಗ್ಯ ಕಾರ್ಯಕರ್ತನು. ಅವನು ನಿರೀಕ್ಷೆ ಇದ್ದಾಗ ಆರೋಗ್ಯ ಹೇಗೆ ಸುಧಾರಣೆ ಆಗುತ್ತೆ, ನಿರೀಕ್ಷೆ ಇಲ್ಲದಿದ್ದಾಗ ಆರೋಗ್ಯ ಹೇಗೆ ಕೆಟ್ಟುಹೋಗುತ್ತೆ ಎಂದು ಸ್ಟಡಿ ಮಾಡಿದ್ದನು. ಇದಕ್ಕೆ ಎಷ್ಟೋ ಉದಾಹರಣೆಗಳನ್ನು ನೀವು ಕೇಳಿರಬಹುದು. ಉದಾಹರಣೆಗೆ, ಸಾವಿನ ಅಂಚಿನಲ್ಲಿರುವ ವೃದ್ಧನಿಗೆ ತುಂಬ ಇಷ್ಟ ಆದವರು ಬರುತ್ತಾರೆ ಎಂದು ಕೇಳಿಸಿಕೊಂಡಾಗ ಅಥವಾ ಆನಿವರ್ಸರಿ ಹತ್ತಿರ ಬರುತ್ತಿದೆ ಎಂದು ಗೊತ್ತಾದಾಗ ಅವನಲ್ಲಿ ಏನೋ ಒಂತರ ಉಲ್ಲಾಸ ಉತ್ಸಾಹ ಬರುತ್ತೆ. ಆದರೆ ಅವನು ತುಂಬ ಕಾಯುತ್ತಿದ್ದ ದಿನ ಕಳೆದ ಮೇಲೆ ಬೇಗ ಸತ್ತು ಹೋಗುತ್ತಾನೆ. ಯಾಕೆ ಹೀಗಾಗುತ್ತೆ? ಕೆಲವರು ಹೇಳುವ ಹಾಗೆ ನಿರೀಕ್ಷೆಗೆ ಅಷ್ಟೊಂದು ಶಕ್ತಿ ಇದೆಯಾ?
ಆಶಾಭಾವನೆ, ನಿರೀಕ್ಷೆ, ಭರವಸೆ, ನಂಬಿಕೆ, ಒಳ್ಳೇದಕ್ಕೆ ಮಾತ್ರ ಗಮನಕೊಡುವ ಗುಣ ಇದ್ದರೆ ಒಬ್ಬನ ಜೀವನ, ಆರೋಗ್ಯ ಸುಧಾರಣೆ ಆಗುತ್ತೆ ಎಂದು ಅನೇಕ ವೈದ್ಯಕೀಯ ಸಂಶೋಧಕರು ಹೇಳ್ತಾರೆ. ಆದರೆ ಹೆಚ್ಚಿನವರು ಇದನ್ನು ಒಪ್ಪಲ್ಲ. ಕೆಲವು ಸಂಶೋಧಕರು ಇದೆಲ್ಲ ಬರೀ ಮೂಢನಂಬಿಕೆ ಅಂತನೂ ಹೇಳ್ತಾರೆ. ಏಕೆಂದ್ರೆ ದೇಹದಲ್ಲಿರುವ ತೊಂದರೆಗಳೇ ಕಾಯಿಲೆಗಳಿಗೆ ಕಾರಣ ಎಂದು ಅವರು ನಂಬುತ್ತಾರೆ.
ನಿರೀಕ್ಷೆಗಿರುವ ಶಕ್ತಿ ಬಗ್ಗೆ ಜನ ಸಂಶಯ ಪಡೋದು ಹೊಸದೇನಲ್ಲ. ಸಾವಿರಾರು ವರ್ಷಗಳ ಹಿಂದೆ ಗ್ರೀಕ್ ತತ್ವಜಾನಿ ಅರಿಸ್ಟಾಟಲ್ಗೆ ‘ನಿರೀಕ್ಷೆ ಬಗ್ಗೆ ನೀವೇನು ಅನ್ನುತ್ತೀರಾ’ ಎಂದು ಕೇಳಿದಾಗ ಅವನು “ಅದೊಂದು ಹಗಲುಗನಸು” ಎಂದು ಉತ್ತರ ಕೊಟ್ಟನು. ಇತ್ತೀಚಿಗೆ ಅಮೆರಿಕಾದ ರಾಜಕಾರಣಿ ಬೆಂಜಮಿನ್ ಫ್ರಾನ್ಕ್ಲಿನ್, “ನಿರೀಕ್ಷೆಯನ್ನು ನಂಬಿಕೊಂಡಿದ್ದರೆ ಸಾವೇ ಗತಿ” ಎಂದು ಮುಖಕ್ಕೆ ಹೊಡೆಯುವ ಹಾಗೆ ಹೇಳಿದರು.
ಹಾಗಾದರೆ ನಿರೀಕ್ಷೆ ಅಂದರೇನು? ಏನೋ ಒಳ್ಳೇದಾಗುತ್ತೆ ಅಂತ ಸುಮ್ಮನೆ ಅಂದುಕೊಳ್ಳುವುದಾ? ಬರೀ ಕನಸಾ? ಅಥವಾ ನಿಜಾನಾ? ಆರೋಗ್ಯವಾಗಿ ಖುಷಿಯಾಗಿ ಇರಲು ಅದು ನಮಗೆ ಬೇಕೇ ಬೇಕಾ? ನಿರೀಕ್ಷೆಗೆ ಆಧಾರ ಇದೆಯಾ? ಅದರಿಂದ ನಮಗೆ ಪ್ರಯೋಜನ ಇದೆಯಾ?