ಭಾಗ 2
ಜಲಪ್ರಳಯದಿಂದ ಹಿಡಿದು ಐಗುಪ್ತದಿಂದ ಬಿಡುಗಡೆಹೊಂದುವ ತನಕ
ಕೇವಲ ಎಂಟು ಮಂದಿ ಜಲಪ್ರಳಯವನ್ನು ಪಾರಾದರು. ಆದರೆ ಕಾಲಾನಂತರ ಅವರು ಸಾವಿರಾರು ಮಂದಿಯಷ್ಟು ವೃದ್ಧಿಯಾದರು. ಜಲಪ್ರಳಯವಾಗಿ 352 ವರ್ಷಗಳಾದ ಬಳಿಕ ಅಬ್ರಹಾಮನು ಹುಟ್ಟಿದನು. ಅಬ್ರಹಾಮನಿಗೆ ಇಸಾಕನೆಂಬ ಹೆಸರಿನ ಮಗನನ್ನು ಕೊಡುವ ಮೂಲಕ ದೇವರು ತನ್ನ ವಾಗ್ದಾನವನ್ನು ಹೇಗೆ ಪಾಲಿಸಿದನೆಂದು ನಾವು ಕಲಿಯುತ್ತೇವೆ. ಅನಂತರ, ಇಸಾಕನ ಇಬ್ಬರು ಮಕ್ಕಳಲ್ಲಿ ದೇವರು ಯಾಕೋಬನನ್ನು ಆರಿಸಿಕೊಂಡನು.
ಯಾಕೋಬನಿಗೆ 12 ಪುತ್ರರು ಮತ್ತು ಕೆಲವು ಪುತ್ರಿಯರಿದ್ದ ದೊಡ್ಡ ಕುಟುಂಬವಿತ್ತು. ಯಾಕೋಬನ 10 ಪುತ್ರರು ಅವರ ಕಿರಿಯ ತಮ್ಮನಾದ ಯೋಸೇಫನನ್ನು ದ್ವೇಷಿಸಿದ್ದರಿಂದ ಅವನನ್ನು ಐಗುಪ್ತದ ದಾಸತ್ವಕ್ಕೆ ಮಾರಿಬಿಟ್ಟರು. ತದನಂತರ, ಯೋಸೇಫನು ಐಗುಪ್ತದ ಒಬ್ಬ ಪ್ರಧಾನ ಅಧಿಪತಿಯಾದನು. ಒಂದು ಘೋರ ಕ್ಷಾಮವು ಬಂದಾಗ, ಅವನ ಸಹೋದರರ ಮನಸ್ಸು ಬದಲಾಗಿದೆಯೋ ಇಲ್ಲವೋ ಎಂದು ನೋಡಲು ಯೋಸೇಫನು ಅವರನ್ನು ಪರೀಕ್ಷಿಸಿದನು. ಕೊನೆಗೆ, ಯಾಕೋಬನ ಇಡೀ ಕುಟುಂಬ ಅಂದರೆ ಇಸ್ರಾಯೇಲ್ಯರೆಲ್ಲರು ಐಗುಪ್ತಕ್ಕೆ ಹೋದರು. ಇದು ಅಬ್ರಹಾಮನು ಹುಟ್ಟಿ 290 ವರ್ಷಗಳ ನಂತರ ಸಂಭವಿಸಿತು.
ಮುಂದಿನ 215 ವರ್ಷಗಳ ತನಕ ಇಸ್ರಾಯೇಲ್ಯರು ಐಗುಪ್ತದಲ್ಲಿ ವಾಸಿಸಿದರು. ಯೋಸೇಫನು ತೀರಿಹೋದ ಮೇಲೆ ಅವರು ಅಲ್ಲಿ ದಾಸರಾದರು. ಸಮಯಾನಂತರ ಮೋಶೆ ಹುಟ್ಟಿದನು. ಇಸ್ರಾಯೇಲ್ಯರನ್ನು ಐಗುಪ್ತದಿಂದ ಬಿಡಿಸಲು ದೇವರು ಅವನನ್ನು ಉಪಯೋಗಿಸಿದನು. ಮೊತ್ತದಲ್ಲಿ, 857 ವರ್ಷಗಳ ಇತಿಹಾಸವು ಭಾಗ ಎರಡರಲ್ಲಿ ಆವರಿತವಾಗಿದೆ.