ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಅಧ್ಯಯನ 53 ಪು. 268-ಪು. 271 ಪ್ಯಾ. 2
  • ಸಭಿಕರನ್ನು ಪ್ರೋತ್ಸಾಹಿಸಿ ಬಲಪಡಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಭಿಕರನ್ನು ಪ್ರೋತ್ಸಾಹಿಸಿ ಬಲಪಡಿಸುವುದು
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಅನುರೂಪ ಮಾಹಿತಿ
  • “ಪ್ರತಿದಿನವೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಪ್ರೋತ್ಸಾಹದ ಚಿಲುಮೆಯಾಗಿರುವ ಯೆಹೋವನನ್ನು ಅನುಕರಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಯೆಹೋವ ನಿಮಗೆ ಬಲ ಕೊಡ್ತಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • “ಒಬ್ರನ್ನೊಬ್ರು ಬಲಪಡಿಸ್ತಾ” ಇರೋಣ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಅಧ್ಯಯನ 53 ಪು. 268-ಪು. 271 ಪ್ಯಾ. 2

ಅಧ್ಯಾಯ 53

ಸಭಿಕರನ್ನು ಪ್ರೋತ್ಸಾಹಿಸಿ ಬಲಪಡಿಸುವುದು

ನೀವೇನು ಮಾಡುವ ಅಗತ್ಯವಿದೆ?

ನಿಮ್ಮ ಸಭಿಕರಲ್ಲಿ ನಿರೀಕ್ಷೆ ಅಥವಾ ಧೈರ್ಯವನ್ನು ತುಂಬಿಸಿರಿ. ಅವರನ್ನು ಚೇತನಗೊಳಿಸಿರಿ ಮತ್ತು ಬಲಪಡಿಸಿರಿ.

ಇದು ಪ್ರಾಮುಖ್ಯವೇಕೆ?

ಜನರು ಲೋಕದಿಂದ ಭಾರೀ ಒತ್ತಡಕ್ಕೊಳಗಾಗಿದ್ದಾರೆ. ಅನೇಕರು ನಿರುತ್ತೇಜಿತರಾಗುತ್ತಾರೆ. ಒಬ್ಬ ಭಾಷಣಕಾರನು ಏನು ಹೇಳುತ್ತಾನೊ ಮತ್ತು ಅದನ್ನು ಹೇಗೆ ಹೇಳುತ್ತಾನೊ ಅದು ಅವನ ಸಭಿಕರ ಮೇಲೆ ಗಾಢವಾದ ಪರಿಣಾಮವನ್ನು ಬೀರಬಲ್ಲದು.

ದೇವರ ಸೇವಕರಿಗೆ ಯಾವುದೇ ಸಮಸ್ಯೆಗಳು ಬರಲಿ, ಅದನ್ನು ಎದುರಿಸಲು ಬೇಕಾದ ಪ್ರೋತ್ಸಾಹವನ್ನು ಅವರು ಕ್ರೈಸ್ತ ಸಭೆಯಲ್ಲಿ ಕಂಡುಕೊಳ್ಳಲು ಶಕ್ತರಾಗಿರಬೇಕು. ಈ ಉದ್ದೇಶದಿಂದ, ತಮ್ಮ ಭಾಷಣಗಳೂ ಸಲಹೆಯೂ ಪ್ರೋತ್ಸಾಹಕರವಾಗಿದೆ ಎಂಬುದನ್ನು ಹಿರಿಯರು ವಿಶೇಷವಾಗಿ ಖಾತ್ರಿಪಡಿಸಿಕೊಳ್ಳಬೇಕು. ಹಿರಿಯರು, “ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ” ಇರಬೇಕು.—ಯೆಶಾ. 32:2.

ನೀವು ಒಬ್ಬ ಹಿರಿಯರಾಗಿರುವಲ್ಲಿ, ನಿಮ್ಮ ಭಾಷಣಗಳು ಚೈತನ್ಯವನ್ನೂ ಸಾಂತ್ವನವನ್ನೂ ನೀಡುತ್ತವೊ? ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸಲು ಪ್ರಯತ್ನಿಸುತ್ತಿರುವವರನ್ನು ಅವು ಉತ್ತೇಜಿಸುತ್ತವೊ? ಜನರ ಔದಾಸೀನ್ಯ ಮತ್ತು ವಿರೋಧದ ಎದುರಿನಲ್ಲಿಯೂ ದೇವರ ಚಿತ್ತವನ್ನು ಪಟ್ಟುಹಿಡಿದು ಮಾಡಲು ಅವು ಬಲವನ್ನು ಒದಗಿಸುತ್ತವೊ? ನಿಮ್ಮ ಸಭಿಕರಲ್ಲಿ ಕೆಲವರು ಖಿನ್ನರಾಗಿರುವಲ್ಲಿ, ಕಠಿನ ಆರ್ಥಿಕ ಒತ್ತಡಗಳನ್ನು ಅನುಭವಿಸುತ್ತಿರುವಲ್ಲಿ, ಇಲ್ಲವೆ ಜ್ಞಾತವಾದ ಚಿಕಿತ್ಸೆಯೇ ಇಲ್ಲದಂಥ ರೀತಿಯ ಒಂದು ಗಂಭೀರ ಕಾಯಿಲೆಯಿಂದ ಬಳಲುತ್ತಿರುವಲ್ಲಿ ಆಗೇನು? ಆಗ ನೀವು ‘ನಿಮ್ಮ ಬಾಯಿಮಾತಿನಿಂದ ನಿಮ್ಮ ಸಹೋದರರನ್ನು ಬಲಗೊಳಿಸ’ಸಾಧ್ಯವಿದೆ.—ಯೋಬ 16:5, NW.

ಒಬ್ಬ ಭಾಷಣಕಾರರೋಪಾದಿ ನಿಮಗಿರುವ ಅವಕಾಶವನ್ನು, ನಿಮ್ಮ ಸಹೋದರರು ಯೆಹೋವನಿಂದಲೂ ಆತನು ಮಾಡಿರುವ ಒದಗಿಸುವಿಕೆಗಳಿಂದಲೂ ನಿರೀಕ್ಷೆ ಮತ್ತು ಬಲವನ್ನು ಪಡೆದುಕೊಳ್ಳುವಂತೆ ಸಹಾಯಮಾಡಲು ಉಪಯೋಗಿಸಿರಿ.—ರೋಮಾ. 15:13; ಎಫೆ. 6:10.

ಯೆಹೋವನು ಏನು ಮಾಡಿದ್ದಾನೋ ಅದನ್ನು ನಿಮ್ಮ ಸಭಿಕರಿಗೆ ಜ್ಞಾಪಕ ಹುಟ್ಟಿಸಿರಿ. ಧೈರ್ಯವನ್ನು ಹುಟ್ಟಿಸುವ ಒಂದು ಪ್ರಮುಖ ಮಾರ್ಗವು, ಯೆಹೋವನು ಗತಕಾಲದಲ್ಲಿ ತನ್ನ ಜನರಿಗೆ ಬಂದ ಕಷ್ಟಗಳಲ್ಲಿ ಅವರಿಗೆ ಸಹಾಯಮಾಡಿದ ರೀತಿಯನ್ನು ತೋರಿಸುವ ಮೂಲಕವೇ ಆಗಿದೆ.—ರೋಮಾ. 15:4.

ಆ ಸಮಯದಲ್ಲಿ ಶತ್ರು ಜನಾಂಗಗಳು ನೆಲೆಸಿದ್ದ ವಾಗ್ದತ್ತ ದೇಶವನ್ನು ಇಸ್ರಾಯೇಲ್ಯರು ಪ್ರವೇಶಿಸುವ ಮೊದಲು ಯೆಹೋಶುವನನ್ನು “ದೃಢ”ಗೊಳಿಸುವಂತೆ [“ಪ್ರೋತ್ಸಾಹಿಸುವಂತೆ,” NW] ಮತ್ತು ಅವನನ್ನು “ಧೈರ್ಯಪಡಿ”ಸುವಂತೆ ಯೆಹೋವನು ಮೋಶೆಗೆ ಹೇಳಿದನು. ಮೋಶೆಯು ಇದನ್ನು ಹೇಗೆ ಮಾಡಿದನು? ಯೆಹೋಶುವನ ಸಮ್ಮುಖದಲ್ಲಿ ಮೋಶೆಯು ಇಡೀ ಜನಾಂಗಕ್ಕೆ, ಅವರು ಐಗುಪ್ತದಿಂದ ಹೊರಟುಬಂದಾಗ ಯೆಹೋವನು ಅವರಿಗೆ ಮಾಡಿದ್ದ ಉಪಕಾರಗಳನ್ನು ಜ್ಞಾಪಕ ಹುಟ್ಟಿಸುವ ಮೂಲಕವೇ. (ಧರ್ಮೋ. 3:28; 7:18) ಅಮೋರಿಯರ ಎದುರಾಗಿ ಯೆಹೋವನು ಅವರಿಗೆ ಕೊಟ್ಟ ವಿಜಯಗಳನ್ನೂ ಮೋಶೆ ಅವರಿಗೆ ಜ್ಞಾಪಕ ಹುಟ್ಟಿಸಿದನು. ಆಮೇಲೆ ಮೋಶೆಯು ಯೆಹೋಶುವನಿಗೆ, “ಶೂರನಾಗಿ ಧೈರ್ಯದಿಂದಿರು” ಎಂದು ಹೇಳಿ ಪ್ರೋತ್ಸಾಹಿಸಿದನು. (ಧರ್ಮೋ. 31:1-8) ನೀವು ನಿಮ್ಮ ಸಹೋದರರನ್ನು ಪ್ರೋತ್ಸಾಹಿಸಲು ಪ್ರಯತ್ನಿಸುವಾಗ, ಯೆಹೋವನು ಅವರಿಗಾಗಿ ಈಗಾಗಲೇ ಮಾಡಿರುವ ವಿಷಯಗಳನ್ನು ಜ್ಞಾಪಿಸಿಕೊಂಡು ಅವುಗಳಿಂದ ಅವರು ಬಲವನ್ನು ಪಡೆದುಕೊಳ್ಳುವಂತೆ ಅವರಿಗೆ ಸಹಾಯಮಾಡುತ್ತೀರೊ?

ಕೆಲವು ಸಲ, ಜನರು ತಮ್ಮ ಸಮಸ್ಯೆಗಳಲ್ಲಿ ಎಷ್ಟು ಮುಳುಗಿಹೋಗಿರುತ್ತಾರೆಂದರೆ, ತಾವು ಎಂದಾದರೂ ರಾಜ್ಯಾಶೀರ್ವಾದಗಳನ್ನು ಅನುಭವಿಸುವೆವೊ ಇಲ್ಲವೊ ಎಂದು ಅವರು ಕುತೂಹಲಪಡುತ್ತಾರೆ. ಆಗ, ಯೆಹೋವನ ವಾಗ್ದಾನಗಳ ಭರವಸಾರ್ಹತೆಯನ್ನು ಅವರಿಗೆ ಜ್ಞಾಪಕ ಹುಟ್ಟಿಸಿರಿ.—ಯೆಹೋ. 23:14.

ಕೆಲವು ದೇಶಗಳಲ್ಲಿ, ನಮ್ಮ ಸಹೋದರರು ಸುವಾರ್ತೆಯನ್ನು ಸಾರುವುದರ ಮೇಲೆ ಸರಕಾರಗಳು ಹಾಕುವ ನಿಷೇಧಾಜ್ಞೆಗಳನ್ನು ಎದುರಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ, ಜೊತೆವಿಶ್ವಾಸಿಗಳು ಯೇಸು ಕ್ರಿಸ್ತನ ಅಪೊಸ್ತಲರ ಅನುಭವಗಳಿಂದ ಬಲವನ್ನು ಪಡೆದುಕೊಳ್ಳುವಂತೆ ಪ್ರೀತಿಪೂರ್ಣರಾದ ಹಿರಿಯರು ಸಹಾಯಮಾಡಬಲ್ಲರು. (ಅ. ಕೃ. 4:1–5:42) ಮತ್ತು ಎಸ್ತೇರಳು ಪುಸ್ತಕದಲ್ಲಿ ದಾಖಲಿಸಲ್ಪಟ್ಟಿರುವಂತೆ ದೇವರು ಸಂಗತಿಗಳನ್ನು ತನ್ನ ಉದ್ದೇಶಕ್ಕನುಸಾರ ನಡೆಸಿದ ರೀತಿಯನ್ನು ಎತ್ತಿಹೇಳುವುದು ನಿಶ್ಚಯವಾಗಿಯೂ ಸಹೋದರರಲ್ಲಿ ಧೈರ್ಯತುಂಬಿಸುವುದು.

ಕೆಲವು ಬಾರಿ, ಕೆಲವರು ಸಭಾ ಕೂಟಗಳಿಗೆ ಹಾಜರಾಗುತ್ತಾರಾದರೂ ಮುಂದಕ್ಕೆ ಯಾವುದೇ ಪ್ರಗತಿಯನ್ನು ಮಾಡುವುದಿಲ್ಲ. ತಮ್ಮ ಹಳೇ ಜೀವನ ರೀತಿಯು ಅತಿ ಕೆಟ್ಟದ್ದಾಗಿದ್ದ ಕಾರಣ ದೇವರು ತಮ್ಮನ್ನು ಎಂದಿಗೂ ಕ್ಷಮಿಸಲಾರನು ಎಂದು ಅವರಿಗೆ ಅನಿಸಬಹುದು. ಅಂತಹ ಸಂದರ್ಭದಲ್ಲಿ, ರಾಜನಾಗಿದ್ದ ಮನಸ್ಸೆಯೊಂದಿಗೆ ಯೆಹೋವನು ಹೇಗೆ ವ್ಯವಹರಿಸಿದನು ಎಂಬುದರ ಬಗ್ಗೆ ನೀವು ಪ್ರಾಯಶಃ ತಿಳಿಸಬಲ್ಲಿರಿ. (2 ಪೂರ್ವ. 33:1-16) ಅಥವಾ ತಮ್ಮ ಜೀವನ ರೀತಿಯನ್ನು ಬದಲಾಯಿಸಿ, ಕ್ರೈಸ್ತರಾಗಿ, ದೇವರಿಂದ ನೀತಿವಂತರೆಂದು ನಿರ್ಣಯಿಸಲ್ಪಟ್ಟ ಪುರಾತನ ಕೊರಿಂಥದ ಜನರ ಕುರಿತು ನೀವು ಹೇಳಬಹುದು.—1 ಕೊರಿಂ. 6:9-11.

ತಾವು ಅನುಭವಿಸುತ್ತಿರುವ ಸಮಸ್ಯೆಗಳು ದೇವರ ಅನುಗ್ರಹವನ್ನು ತಾವು ಕಳೆದುಕೊಂಡಿದ್ದೇವೆಂಬುದನ್ನು ಸೂಚಿಸುತ್ತವೆ ಎಂದು ಕೆಲವರಿಗೆ ಅನಿಸುತ್ತದೊ? ಆಗ ನೀವು ಯೋಬನ ಅನುಭವವನ್ನು ಅವರಿಗೆ ಜ್ಞಾಪಕ ಹುಟ್ಟಿಸಿ, ಅವನು ಯೆಹೋವನಿಗೆ ತನ್ನ ಸಮಗ್ರತೆಯನ್ನು ಸ್ಥಿರವಾಗಿ ಹಿಡಿದುಕೊಂಡ ಕಾರಣ ಹೇಗೆ ಹೇರಳವಾಗಿ ಆಶೀರ್ವದಿಸಲ್ಪಟ್ಟನೆಂಬುದನ್ನು ತೋರಿಸಬಹುದು. (ಯೋಬ 1:1-22; 10:1; 42:12, 13; ಕೀರ್ತ. 34:19) ಯೋಬನ ಸುಳ್ಳು ಸಾಂತ್ವನಗಾರರು, ಯೋಬನು ಯಾವುದೊ ಪಾಪವನ್ನು ಮಾಡಿದ್ದಿರಬೇಕೆಂದು ತಪ್ಪಾಗಿ ವಾದಿಸಿದ್ದರು. (ಯೋಬ 4:7, 8; 8:5, 6) ಇದಕ್ಕೆ ವ್ಯತಿರಿಕ್ತವಾಗಿ, ಶಿಷ್ಯರನ್ನು ಬಲಗೊಳಿಸಿ, “ಕ್ರಿಸ್ತನಂಬಿಕೆಯಲ್ಲಿ ಸ್ಥಿರವಾಗಿ” ಇರುವಂತೆ ಅವರನ್ನು “ಧೈರ್ಯಗೊಳಿಸಿದ [“ಪ್ರೋತ್ಸಾಹಿಸಿದ,” NW]” ಪೌಲ ಮತ್ತು ಬಾರ್ನಬರು, “ನಾವು ಬಹು ಸಂಕಟಗಳನ್ನು ತಾಳಿ ದೇವರ ರಾಜ್ಯದೊಳಗೆ ಸೇರಬೇಕೆಂಬದಾಗಿ” ಹೇಳಿದರು. (ಅ. ಕೃ. 14:21, 22) ಅದೇ ರೀತಿಯಲ್ಲಿ ಇಂದು ಪರೀಕ್ಷೆಗಳನ್ನು ಅನುಭವಿಸುತ್ತಿರುವವರಿಗೆ, ಎಲ್ಲ ಕ್ರೈಸ್ತರು ಸಂಕಷ್ಟಗಳಲ್ಲಿ ತಾಳ್ಮೆಯನ್ನು ತೋರಿಸುವುದು ಆವಶ್ಯಕವೆಂದೂ ಅದು ದೇವರ ದೃಷ್ಟಿಯಲ್ಲಿ ಬಹಳ ಅಮೂಲ್ಯವಾದದ್ದೆಂದೂ ತೋರಿಸಿಕೊಡುವ ಮೂಲಕ ನೀವು ಅವರನ್ನು ಬಲಪಡಿಸಬಲ್ಲಿರಿ.—ಜ್ಞಾನೋ. 27:11; ಮತ್ತಾ. 24:13; ರೋಮಾ. 5:3, 4; 2 ತಿಮೊ. 3:12.

ನಿಮ್ಮ ಕೇಳುಗರ ಸ್ವಂತ ಜೀವಿತಗಳಲ್ಲಿ ಯೆಹೋವನು ತನ್ನ ವಾಗ್ದಾನಗಳನ್ನು ನೆರವೇರಿಸಿರುವ ವಿಧಗಳ ಕುರಿತು ಅವರು ಆಲೋಚಿಸುವಂತೆ ಅವರನ್ನು ಪ್ರೋತ್ಸಾಹಿಸಿರಿ. ಸ್ವಲ್ಪ ನೆನಪು ಹುಟ್ಟಿಸುವಲ್ಲಿ, ಯೆಹೋವನು ಅವರ ಸಂಬಂಧದಲ್ಲಿ ವಾಗ್ದಾನಿಸಿರುವಂತೆಯೇ ಹೇಗೆ ವ್ಯಕ್ತಿಪರವಾಗಿ ಈಗಾಗಲೇ ಕ್ರಿಯೆಗೈದಿದ್ದಾನೆಂಬುದನ್ನು ಅವರು ನೋಡಬಹುದು. ಕೀರ್ತನೆ 32:8 ರಲ್ಲಿ ನಾವು ಓದುವುದು: “ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆಹೇಳುವೆನು.” ನಿಮ್ಮ ಕೇಳುಗರನ್ನು ಯೆಹೋವನು ಹೇಗೆ ನಡೆಸಿದ್ದಾನೆ ಮತ್ತು ಬಲಪಡಿಸಿದ್ದಾನೆ ಎಂಬುದನ್ನು ಅವರು ಜ್ಞಾಪಿಸಿಕೊಳ್ಳುವಂತೆ ಸಹಾಯಮಾಡುವ ಮೂಲಕ, ಯೆಹೋವನು ಅವರ ಬಗ್ಗೆ ಕಾಳಜಿ ವಹಿಸುತ್ತಾನೆಂದೂ ಈಗ ಯಾವುದೇ ಪರೀಕ್ಷೆಗಳನ್ನು ಅವರು ಎದುರಿಸಿದರೂ ಆತನು ಅವರಿಗೆ ನಿಜವಾಗಿಯೂ ಸಹಾಯಮಾಡುವನೆಂದೂ ಅವರು ವೈಯಕ್ತಿಕ ರೀತಿಯಲ್ಲಿ ನೋಡುವಂತೆ ನೀವು ಅವರನ್ನು ಶಕ್ತಗೊಳಿಸುವಿರಿ.—ಯೆಶಾ. 41:10, 13; 1 ಪೇತ್ರ 5:7.

ದೇವರು ಈಗ ಏನನ್ನು ಮಾಡುತ್ತಿದ್ದಾನೊ ಅದರಲ್ಲಿ ಹರ್ಷವನ್ನು ತೋರಿಸಿರಿ. ನಿಮ್ಮ ಸಹೋದರರನ್ನು ಪ್ರೋತ್ಸಾಹಿಸಲು ಪ್ರಯತ್ನಿಸುತ್ತಿರುವಾಗ, ಯೆಹೋವನು ಈಗ ಏನು ಮಾಡುತ್ತಿದ್ದಾನೊ ಅದರ ಕಡೆಗೆ ಗಮನವನ್ನು ಸೆಳೆಯಿರಿ. ಇವುಗಳು ನಿಮಗೆ ಹರ್ಷವನ್ನು ನೀಡುತ್ತವೆ ಎಂಬುದನ್ನು ವ್ಯಕ್ತಪಡಿಸುವಂಥ ರೀತಿಯಲ್ಲಿ ಇವುಗಳ ಬಗ್ಗೆ ಮಾತಾಡುವುದು, ನಿಮ್ಮ ಕೇಳುಗರ ಹೃದಯದಲ್ಲಿಯೂ ತದ್ರೀತಿಯ ಭಾವನೆಗಳನ್ನು ಹುಟ್ಟಿಸುವುದು.

ಜೀವನದ ಒತ್ತಡಗಳನ್ನು ನಿಭಾಯಿಸಲು ಯೆಹೋವನು ನಮಗೆ ಹೇಗೆ ಸಹಾಯಮಾಡುತ್ತಾನೆ ಎಂಬುದನ್ನು ಪರಿಗಣಿಸಿರಿ. ಆತನು ನಮಗೆ ಜೀವಿಸಲಿಕ್ಕಾಗಿರುವ ಅತ್ಯುತ್ತಮ ಮಾರ್ಗವನ್ನು ತೋರಿಸುತ್ತಾನೆ. (ಯೆಶಾ. 30:21) ಆತನು ಪಾತಕ, ಅನ್ಯಾಯ, ದಾರಿದ್ರ್ಯ, ರೋಗ ಮತ್ತು ಮರಣಗಳಿಗೆ ಕಾರಣವನ್ನು ವಿವರಿಸಿ, ಇವೆಲ್ಲವನ್ನು ಹೇಗೆ ಅಂತ್ಯಗೊಳಿಸುವನೆಂಬುದನ್ನು ನಮಗೆ ಹೇಳುತ್ತಾನೆ. ಒಂದು ಪ್ರೀತಿಪರ ಸಹೋದರತ್ವದಿಂದ ಆತನು ನಮ್ಮನ್ನು ಸುತ್ತುವರಿದಿದ್ದಾನೆ. ಆತನು ನಮಗೆ ಪ್ರಾರ್ಥನೆಯ ಅಮೂಲ್ಯವಾದ ಸುಯೋಗವನ್ನು ನೀಡುತ್ತಾನೆ. ನಾವು ಆತನ ಸಾಕ್ಷಿಗಳಾಗಿರುವಂತಹ ಸದವಕಾಶವನ್ನು ನಮಗೆ ದಯಪಾಲಿಸುತ್ತಾನೆ. ಕ್ರಿಸ್ತನು ಈಗಾಗಲೇ ಸ್ವರ್ಗದಲ್ಲಿ ಸಿಂಹಾಸನಾರೂಢನಾಗಿದ್ದಾನೆ ಮತ್ತು ಈ ಹಳೇ ವ್ಯವಸ್ಥೆಯ ಕಡೇ ದಿವಸಗಳು ವೇಗವಾಗಿ ಅಂತ್ಯವನ್ನು ಸಮೀಪಿಸುತ್ತಿವೆ ಎಂಬುದನ್ನು ನೋಡಲು ಆತನು ನಮ್ಮ ಕಣ್ಣುಗಳನ್ನು ತೆರೆಯುತ್ತಾನೆ.—ಪ್ರಕ. 12:1-12.

ಈ ಆಶೀರ್ವಾದಗಳಿಗೆ ನಮ್ಮ ಸಭಾ ಕೂಟಗಳು, ಸಮ್ಮೇಳನಗಳು ಮತ್ತು ಅಧಿವೇಶನಗಳನ್ನು ಕೂಡಿಸಿರಿ. ಈ ಒದಗಿಸುವಿಕೆಗಳ ವಿಷಯದಲ್ಲಿ ನೀವು ನಿಜವಾಗಿಯೂ ಕೃತಜ್ಞತಾಪೂರ್ವಕ ರೀತಿಯಲ್ಲಿ ಮಾತಾಡುವಾಗ, ತಮ್ಮ ಸಹೋದರರೊಂದಿಗೆ ನೆರೆದು ಬರುವುದನ್ನು ಅಸಡ್ಡೆ ಮಾಡಬಾರದೆಂಬ ಇತರರ ದೃಢನಿರ್ಧಾರವನ್ನು ನೀವು ಇನ್ನಷ್ಟು ಬಲಪಡಿಸುವಿರಿ.—ಇಬ್ರಿ. 10:23-25.

ನಾವು ಕ್ಷೇತ್ರ ಶುಶ್ರೂಷೆಯಲ್ಲಿ ಮಾಡುವ ಪ್ರಯತ್ನಗಳ ಮೇಲೆ ಯೆಹೋವನ ಆಶೀರ್ವಾದದ ಪುರಾವೆಯನ್ನು ನೀಡುವ ವರದಿಗಳು ಸಹ ಬಲವನ್ನು ಒದಗಿಸುವ ಮೂಲಗಳಾಗಿವೆ. ಒಂದನೆಯ ಶತಮಾನದಲ್ಲಿ ಪೌಲಬಾರ್ನಬರು ಯೆರೂಸಲೇಮಿಗೆ ಹೋಗುತ್ತಿದ್ದಾಗ, ಅನ್ಯಜನರು ಪರಿವರ್ತನೆ ಹೊಂದಿದ್ದರ ಕುರಿತು ವಿವರವಾಗಿ ಹೇಳುವ ಮೂಲಕ ಅವರು ಸಹೋದರರನ್ನು “ಬಹಳವಾಗಿ ಸಂತೋಷಪಡಿಸಿದರು.” (ಅ. ಕೃ. 15:3) ನೀವು ಸಹ, ಸಹೋದರರೊಂದಿಗೆ ಆತ್ಮೋನ್ನತಿ ಮಾಡುವಂಥ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಅವರನ್ನು ಸಂತೋಷಪಡಿಸಬಲ್ಲಿರಿ.

ತಾವು ಏನು ಮಾಡುತ್ತಿದ್ದಾರೊ ಅದರ ಮೌಲ್ಯವನ್ನು ನೋಡುವಂತೆ ವ್ಯಕ್ತಿಗಳಿಗೆ ಸಹಾಯಮಾಡುವಲ್ಲಿ, ಹೆಚ್ಚಿನ ಪ್ರೋತ್ಸಾಹವು ದೊರೆಯುವುದು. ಕ್ರೈಸ್ತ ಶುಶ್ರೂಷೆಯಲ್ಲಿ ಅವರು ಎಷ್ಟರ ಮಟ್ಟಿಗೆ ಪಾಲ್ಗೊಳ್ಳುತ್ತಿದ್ದಾರೋ ಅದಕ್ಕಾಗಿ ಅವರನ್ನು ಪ್ರಶಂಸಿಸಿರಿ. ವೃದ್ಧಾಪ್ಯ ಮತ್ತು ಕಾಯಿಲೆಯ ಕಾರಣ ಯಾರ ಚಟುವಟಿಕೆಯು ತೀರ ಸೀಮಿತವಾಗಿದ್ದರೂ ನಂಬಿಗಸ್ತಿಕೆಯ ತಾಳ್ಮೆಯನ್ನು ತೋರಿಸುತ್ತಾ ಮುಂದುವರಿಯುತ್ತಿದ್ದಾರೋ ಅಂಥವರನ್ನು ಪ್ರಶಂಸಿಸಿರಿ. ಯೆಹೋವನ ಹೆಸರಿಗೆ ಅವರು ತೋರಿಸಿರುವ ಪ್ರೀತಿಯನ್ನು ಆತನು ಎಂದೂ ಮರೆಯುವುದಿಲ್ಲವೆಂಬುದನ್ನು ಅವರಿಗೆ ಜ್ಞಾಪಕ ಹುಟ್ಟಿಸಿರಿ. (ಇಬ್ರಿ. 6:10) ಪರೀಕ್ಷಿಸಲ್ಪಟ್ಟು ಚೊಕ್ಕವಾದ ನಂಬಿಕೆಯು ಬೆಲೆಕಟ್ಟಲಾಗದಂಥ ಒಂದು ಸ್ವತ್ತಾಗಿದೆ. (1 ಪೇತ್ರ 1:6, 7) ಇದರ ಬಗ್ಗೆ ಸಹೋದರರಿಗೆ ಜ್ಞಾಪಕ ಹುಟ್ಟಿಸುವುದು ಆವಶ್ಯಕವಾಗಿದೆ.

ಮುಂದಿರುವ ನಿರೀಕ್ಷೆಯ ಬಗ್ಗೆ ಭಾವಪೂರ್ಣವಾಗಿ ಮಾತಾಡಿರಿ. ದೇವರನ್ನು ಪ್ರೀತಿಸುವ ಎಲ್ಲರಿಗೆ, ಮುಂದೆ ಬರಲಿರುವ ವಿಷಯಗಳ ಕುರಿತಾದ ಪ್ರೇರಿತ ವಾಗ್ದಾನಗಳು ಪ್ರೋತ್ಸಾಹದ ದೊಡ್ಡ ಉಗಮವಾಗಿವೆ. ನಿಮ್ಮ ಸಭಿಕರಲ್ಲಿ ಅನೇಕರು ಈ ಅಭಿವ್ಯಕ್ತಿಗಳನ್ನು ಅನೇಕ ಬಾರಿ ಕೇಳಿಸಿಕೊಂಡಿದ್ದಿರಬಹುದು. ಆದರೆ ಈ ವಾಗ್ದಾನಗಳ ಬಗ್ಗೆ ಮಾತಾಡುವಾಗ ನೀವು ತೋರಿಸುವ ಗಣ್ಯತೆಯ ಮೂಲಕ, ನೀವು ಈ ವಾಗ್ದಾನಗಳನ್ನು ಸಜೀವಗೊಳಿಸಿ, ಅವುಗಳ ನೆರವೇರಿಕೆಯ ಬಗ್ಗೆ ಭರವಸೆಯನ್ನು ಹುಟ್ಟಿಸಿ, ಹೃದಯಗಳು ಕೃತಜ್ಞತಾಭಾವದಿಂದ ಉಕ್ಕಿ ಹರಿಯುವಂತೆ ಮಾಡಬಲ್ಲಿರಿ. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ನೀವು ಕಲಿತಿರುವುದನ್ನು ಅನ್ವಯಿಸಿಕೊಳ್ಳುವುದು ಅದನ್ನು ಮಾಡಲು ನಿಮಗೆ ಸಹಾಯಮಾಡಬಲ್ಲದು.

ಯೆಹೋವನು ತಾನೇ ತನ್ನ ಜನರಿಗೆ ಮಹಾ ಪ್ರೋತ್ಸಾಹಕನೂ ಬಲದ ಮೂಲನೂ ಆಗಿದ್ದಾನೆ. ಹಾಗಿದ್ದರೂ, ಅಂತಹ ಆಶೀರ್ವಾದಗಳನ್ನು ಇತರರಿಗೆ ದಾಟಿಸುವುದರಲ್ಲಿ ನೀವು ಆತನೊಂದಿಗೆ ಸಹಕರಿಸಬಲ್ಲಿರಿ. ನೀವು ಸಭೆಗೆ ಭಾಷಣ ನೀಡುವ ಸಮಯದಲ್ಲಿ, ಅಂತಹ ಆಶೀರ್ವಾದಗಳನ್ನು ತಿಳಿಯಪಡಿಸುವುದಕ್ಕಾಗಿರುವ ಸಂದರ್ಭವನ್ನು ಸದುಪಯೋಗಿಸಿರಿ.

ಇದನ್ನು ಮಾಡುವ ವಿಧ

  • ಒಂದು ಭಾಷಣವನ್ನು ತಯಾರಿಸುವಾಗ, ನಿಮ್ಮ ಸಭಿಕರು ಎದುರಿಸುವ ಸಮಸ್ಯೆಗಳನ್ನು ನೆನಪಿಗೆ ತಂದುಕೊಳ್ಳಿರಿ. ಅವರನ್ನು ಹೇಗೆ ಪ್ರೋತ್ಸಾಹಿಸಬಹುದು ಮತ್ತು ಬಲಪಡಿಸಬಹುದೆಂಬುದನ್ನು ಜಾಗರೂಕತೆಯಿಂದ ಪರಿಗಣಿಸಿರಿ.

  • ದೇವರ ವಾಕ್ಯವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿರಿ. ಅದು ಏನು ಹೇಳುತ್ತದೊ ಆ ವಿಷಯವು ನಾವು ಎದುರಿಸುವ ಸನ್ನಿವೇಶಗಳಿಗೆ ಹೇಗೆ ಸಂಬಂಧಿಸುತ್ತದೆಂಬುದನ್ನು ತೋರಿಸಿರಿ.

  • ಯಥಾರ್ಥವಾದ ಭಾವಪೂರ್ಣತೆಯಿಂದ ಮಾತಾಡಿರಿ.

ಅಭ್ಯಾಸಪಾಠ: ಈ ವಾರ ನೀವು ಬೈಬಲನ್ನು ಓದುವಾಗ ಅಥವಾ ವೈಯಕ್ತಿಕ ಅಧ್ಯಯನವನ್ನು ಮಾಡುವಾಗ, ಇತರರನ್ನು ಪ್ರೋತ್ಸಾಹಿಸಲು ಉಪಯೋಗಿಸಸಾಧ್ಯವಿದೆಯೆಂದು ನಿಮಗನಿಸುವಂಥ ಒಂದು ಭಾಗವನ್ನು ಆರಿಸಿಕೊಳ್ಳಿರಿ. ಅದನ್ನು ಸಭೆಯಲ್ಲಿ ಯಾರೊಂದಿಗಾದರೂ ಹಂಚಿಕೊಳ್ಳಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ