ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lr ಅಧ್ಯಾ. 17 ಪು. 92-96
  • ಸಂತೋಷದ ಗುಟ್ಟು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಂತೋಷದ ಗುಟ್ಟು
  • ಮಹಾ ಬೋಧಕನಿಂದ ಕಲಿಯೋಣ
  • ಅನುರೂಪ ಮಾಹಿತಿ
  • ಲುದ್ಯ—ದೇವರ ಆದರಾತಿಥ್ಯದ ಆರಾಧಕಳು
    ಕಾವಲಿನಬುರುಜು—1996
  • “ಸಂತೋಷದ ದೇವರ” ಆರಾಧಕರು ಸಂತೋಷಿತರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಕೊಡುವಂತಹ ಮನೋವೃತ್ತಿ ನಿಮಗಿದೆಯೊ?
    ಕಾವಲಿನಬುರುಜು—1995
  • ಯೆಹೋವನನ್ನು ಸೇವಿಸುವುದರಲ್ಲಿ ನಿಜ ಸಂತೋಷ
    ಕಾವಲಿನಬುರುಜು—1992
ಮಹಾ ಬೋಧಕನಿಂದ ಕಲಿಯೋಣ
lr ಅಧ್ಯಾ. 17 ಪು. 92-96

ಅಧ್ಯಾಯ 17

ಸಂತೋಷದ ಗುಟ್ಟು

ಜೋಳದ ಹೊಲದಲ್ಲಿ ಸೂರ್ಯನು ಹೊಳೆಯುತ್ತಿದ್ದಾನೆ ಮತ್ತು ಮಳೆಬಿಲ್ಲು ಆಕಾಶದಲ್ಲಿದೆ

ಯೆಹೋವನು ಏಕೆ ‘ಸಂತೋಷದ ದೇವರಾಗಿದ್ದಾನೆ’?

ನಾವೆಲ್ಲರೂ ಸಂತೋಷವಾಗಿರಲು ಇಷ್ಟಪಡುತ್ತೇವೆ ಅಲ್ವಾ?— ಆದರೆ ಎಷ್ಟೋ ಜನರು ಸಂತೋಷವಾಗಿಲ್ಲ. ಯಾಕೆ ಗೊತ್ತಾ?— ಯಾಕೆಂದರೆ ಅವರಿಗೆ ಸಂತೋಷದ ಗುಟ್ಟು ಗೊತ್ತಿಲ್ಲ. ತಮ್ಮಲ್ಲಿ ಹೆಚ್ಚೆಚ್ಚು ವಸ್ತುಗಳು ಇದ್ದರೆ ಮಾತ್ರ ಸಂತೋಷದಿಂದ ಇರಬಹುದು ಅಂತ ಅವರು ನೆನಸುತ್ತಾರೆ. ಅದನ್ನೆಲ್ಲ ಖರೀದಿಸುತ್ತಾರೆ ಕೂಡ. ಆದರೆ ಅದರಿಂದ ಸಿಗುವ ಸಂತೋಷ ತುಂಬಾ ದಿನ ಉಳಿಯುವುದಿಲ್ಲ.

ಹಾಗಾದರೆ ಸಂತೋಷದ ಗುಟ್ಟೇನು? ಮಹಾ ಬೋಧಕನು ಇದಕ್ಕೆ ಉತ್ತರ ಕೊಡುತ್ತಾನೆ. “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ” ಅಂತ ಅವನು ಹೇಳಿದನು. (ಅಪೊಸ್ತಲರ ಕಾರ್ಯಗಳು 20:35) ಹಾಗಾದರೆ ಹೇಳು ನೋಡೋಣ ಸಂತೋಷವಾಗಿರಲು ನಾವೇನು ಮಾಡಬೇಕು?— ನಾವು ಇತರರಿಗೆ ನಮ್ಮಲ್ಲಿರುವುದನ್ನು ಕೊಡಬೇಕು, ಅವರಿಗೆ ಸಹಾಯಮಾಡಬೇಕು. ಇದು ನಿನಗೆ ಗೊತ್ತಿತ್ತಾ?—

ಈಗ ಸ್ವಲ್ಪ ಯೋಚಿಸು. ಯಾರಾದರೂ ಮತ್ತೊಬ್ಬರಿಗೆ ಉಡುಗೊರೆ ಕೊಟ್ಟರೆ ಅದನ್ನು ತೆಗೆದುಕೊಳ್ಳುವವರಿಗೆ ಸಂತೋಷ ಆಗೋದಿಲ್ಲ ಅಂತ ಯೇಸು ಹೇಳುತ್ತಿದ್ದನಾ?— ಅಲ್ಲ ಯೇಸುವಿನ ಮಾತಿನ ಅರ್ಥ ಅದಲ್ಲ. ನಿನಗೆ ಉಡುಗೊರೆ ಸಿಕ್ಕಿದರೆ ಖುಷಿಯಾಗುತ್ತೆ ತಾನೆ?— ಹೌದು. ನಿನಗೆ ಮಾತ್ರ ಅಲ್ಲ ಎಲ್ಲರಿಗೂ ಖುಷಿಯಾಗುತ್ತೆ.

ಆದರೆ ಉಡುಗೊರೆಯನ್ನು ತೆಗೆದುಕೊಳ್ಳುವುದಕ್ಕಿಂತ ಅದನ್ನು ಕೊಡುವಾಗ ನಮಗೆ ಹೆಚ್ಚು ಸಂತೋಷ ಆಗುತ್ತದೆ ಎಂದು ಯೇಸು ಹೇಳಿದನು. ಹಾಗಾದರೆ, ಈ ವಿಶ್ವದಲ್ಲಿ ಅತೀ ಹೆಚ್ಚು ಉಡುಗೊರೆಗಳನ್ನು ಕೊಟ್ಟವರು ಯಾರು?— ಹೌದು, ಯೆಹೋವ ದೇವರು.

ದೇವರು ‘ಎಲ್ಲಾ ಮನುಷ್ಯರಿಗೆ ಜೀವ ಉಸಿರು ಮತ್ತು ಎಲ್ಲವನ್ನೂ’ ಕೊಟ್ಟಿದ್ದಾನೆ ಎಂದು ಬೈಬಲ್‌ ಹೇಳುತ್ತದೆ. ಆಕಾಶದಿಂದ ಸುರಿಯುವ ಮಳೆಯನ್ನು ಸೂರ್ಯನ ಬೆಳಕನ್ನು ಕೊಟ್ಟವನು ಆತನೇ. ಅವನ್ನು ಉಪಯೋಗಿಸಿಯೇ ಗಿಡಗಳು ಬೆಳೆದು ಹೂವು, ಹಣ್ಣು, ಕಾಯಿಪಲ್ಯ, ದವಸಧಾನ್ಯಗಳನ್ನು ನಮಗೆ ಕೊಡುತ್ತವೆ. (ಅಪೊಸ್ತಲರ ಕಾರ್ಯಗಳು 14:17; 17:25) ಅಬ್ಬಾ! ದೇವರು ಏನೆಲ್ಲಾ ನಮಗೆ ಉಡುಗೊರೆಯಾಗಿ ಕೊಟ್ಟಿದ್ದಾನೆ! ಬೈಬಲ್‌ ಯೆಹೋವನನ್ನು ‘ಸಂತೋಷದ ದೇವರು’ ಎಂದು ಕರೆಯುತ್ತದೆ. (1 ತಿಮೊಥೆಯ 1:11) ನಾವು ಕೂಡ ಇತರರಿಗೆ ಕೊಡುವಾಗ ನಮಗೂ ಸಂತೋಷ ಆಗುತ್ತದೆ. ದೇವರಿಗೂ ಖುಷಿಯಾಗುತ್ತದೆ.

ಒಬ್ಬ ಹುಡುಗನಿಗೆ ಮತ್ತು ಅವನ ತಾಯಿಗೆ ಒಂದು ಹುಡುಗಿ ಚಕ್ಕುಲಿಗಳನ್ನು ಕೊಡುತ್ತಿದ್ದಾಳೆ

ಎಲ್ಲಾ ಚಕ್ಕುಲಿಗಳನ್ನು ನೀನೇ ತಿನ್ನುವುದಕ್ಕಿಂತ ಏನು ಮಾಡಿದರೆ ನಿನಗೆ ಹೆಚ್ಚು ಸಂತೋಷ ಸಿಗುತ್ತದೆ?

ನಾವು ಇತರರಿಗೆ ಏನೆಲ್ಲಾ ಕೊಡಬಹುದು? ಹೇಳು ನೋಡೋಣ.— ಉಡುಗೊರೆ ಕೊಡಬಹುದು. ಉಡುಗೊರೆಯನ್ನು ನೀನು ಅಂಗಡಿಯಿಂದ ಕೊಂಡುಕೊಳ್ಳಬೇಕಾದರೆ ಹಣ ಬೇಕಲ್ವಾ. ಅದಕ್ಕಾಗಿ ನೀನು ಹಣವನ್ನು ಕೂಡಿಸಬೇಕು.

ಆದರೆ ಎಲ್ಲಾ ಉಡುಗೊರೆಗಳನ್ನು ಅಂಗಡಿಯಿಂದಲೇ ಕೊಂಡುಕೊಳ್ಳಬೇಕಾಗಿಲ್ಲ. ಉದಾಹರಣೆಗೆ, ಉರಿ ಉರಿ ಬಿಸಿಲಿನಲ್ಲಿ ತುಂಬಾ ಬಾಯಾರಿರುವ ಒಬ್ಬ ವ್ಯಕ್ತಿಗೆ, ತಣ್ಣಗಿನ ಒಂದು ಲೋಟ ನೀರನ್ನು ಕೊಡಬಹುದು. ಅದನ್ನು ಕುಡಿಯುವಾಗ ಅವರಿಗೆ ತುಂಬಾ ಹಿತವೆನಿಸುತ್ತದೆ. ಬಾಯಾರಿದ ವ್ಯಕ್ತಿಗೆ ನೀರು ಕೊಟ್ಟಿದ್ದಕ್ಕಾಗಿ ನಿನಗೂ ಸಂತೋಷ ಆಗುತ್ತದೆ.

ಅಮ್ಮ ಮತ್ತು ನೀನು ಚಕ್ಕುಲಿಗಳನ್ನು ಮಾಡುತ್ತೀರಿ ಅಂತ ಇಟ್ಟುಕೋ. ಓ ಹಿಟ್ಟು ಕಲಸಬೇಕು, ಎಣ್ಣೆಯಲ್ಲಿ ಕರೀಬೇಕು, ತೆಗೀಬೇಕು. ತುಂಬಾ ಮಜಾ ಸಿಗುತ್ತೆ. ಸರಿ, ಆ ಎಲ್ಲಾ ಚಕ್ಕುಲಿಗಳನ್ನು ನೀನೇ ತಿನ್ನುವ ಬದಲು ಏನು ಮಾಡಿದರೆ ನಿನಗೆ ಹೆಚ್ಚು ಸಂತೋಷ ಸಿಗುತ್ತದೆ?— ಹೌದು ಸ್ನೇಹಿತರೊಂದಿಗೆ ಹಂಚಿಕೊಂಡು ತಿನ್ನುವಾಗ ಸಂತೋಷ ಸಿಗುತ್ತೆ. ಹೀಗೆ ಹಂಚಿಕೊಂಡು ತಿನ್ನುವುದು ನಿನಗೆ ಇಷ್ಟನಾ?—

ಬೇರೆಯವರಿಗೆ ಕೊಡುವಾಗ ಸಂತೋಷ ಸಿಗುತ್ತದೆ ಅಂತ ಮಹಾ ಬೋಧಕನಿಗೆ ಹಾಗೂ ಅವನ ಅಪೊಸ್ತಲರಿಗೆ ಗೊತ್ತಿತ್ತು. ಅವರು ಬೇರೆಯವರಿಗೆ ಏನು ಕೊಟ್ಟರು ಗೊತ್ತಾ?— ತುಂಬಾ ತುಂಬಾ ಅಮೂಲ್ಯವಾದ ಒಂದನ್ನು ಅಂದರೆ ದೇವರ ಕುರಿತು ಸತ್ಯವನ್ನು ಕೊಟ್ಟರು. ದೇವರ ಕುರಿತ ಸತ್ಯವನ್ನು ಅವರು ತಿಳಿದುಕೊಂಡಿದ್ದರು ಅದನ್ನು ಅವರು ಸಂತೋಷದಿಂದ ಬೇರೆಯವರೊಂದಿಗೆ ಹಂಚಿಕೊಂಡರು. ಆ ಸುವಾರ್ತೆಯನ್ನು ಜನರಿಗೆ ತಿಳಿಸಲು ಅವರು ಯಾರಿಂದಲೂ ಹಣ ತಗೊಳ್ಳಲಿಲ್ಲ.

ಒಂದು ದಿನ ಅಪೊಸ್ತಲ ಪೌಲ ಹಾಗೂ ಅವನ ಆಪ್ತ ಸ್ನೇಹಿತನಾದ ಲೂಕನು ಒಂದು ನದಿ ತೀರದಲ್ಲಿ ಲುದ್ಯ ಎಂಬ ಸ್ತ್ರೀಯನ್ನು ಭೇಟಿಯಾದರು. ಅಲ್ಲಿ ಒಂದು ಪ್ರಾರ್ಥನೆಯ ಸ್ಥಳವಿದೆ ಎಂದು ಯಾರೋ ಹೇಳಿದ್ದರಿಂದ ಅವರು ಅಲ್ಲಿಗೆ ಬಂದಿದ್ದರು. ಅದು ನಿಜವಾಗಿಯೂ ಪ್ರಾರ್ಥನೆಯ ಸ್ಥಳವಾಗಿತ್ತು. ಯಾಕೆಂದರೆ ಅಲ್ಲಿ ಕೆಲವು ಸ್ತ್ರೀಯರು ಪ್ರಾರ್ಥನೆ ಮಾಡುತ್ತಿದ್ದದ್ದನ್ನು ಅವರು ನೋಡಿದರು.

ಪೌಲನು ಆ ಸ್ತ್ರೀಯರಿಗೆ ಯೆಹೋವ ದೇವರ ಬಗ್ಗೆ ಆತನ ರಾಜ್ಯದ ಬಗ್ಗೆ ಸುವಾರ್ತೆಯನ್ನು ಸಾರತೊಡಗಿದನು. ಆ ಸ್ತ್ರೀಯರಲ್ಲಿ ಲುದ್ಯಳು ಕೂಡ ಇದ್ದಳು. ಪೌಲನು ತಿಳಿಸಿದ ಸುವಾರ್ತೆಯನ್ನು ಅವಳು ಗಮನಕೊಟ್ಟು ಆಲಿಸಿದಳು. ಅದು ಅವಳಿಗೆ ಎಷ್ಟು ಇಷ್ಟವಾಯಿತೆಂದರೆ ಅದನ್ನು ತಿಳಿಸಿದಕ್ಕೆ ಅವರಿಗೆ ಕೃತಜ್ಞತೆ ಹೇಳಲು ಬಯಸಿದಳು. ಆದುದರಿಂದ ಅವಳು, “ನಾನು ಯೆಹೋವನಿಗೆ ನಂಬಿಗಸ್ತಳಾಗಿದ್ದೇನೆಂದು ನೀವು ತೀರ್ಮಾನಿಸುವಲ್ಲಿ ನನ್ನ ಮನೆಗೆ ಬಂದು ತಂಗಿರಿ” ಎಂದು ಪೌಲ ಲೂಕರನ್ನು ವಿನಂತಿಸಿ ಮನೆಗೆ ಕರೆದುಕೊಂಡು ಹೋದಳು.—ಅಪೊಸ್ತಲರ ಕಾರ್ಯಗಳು 16:13-15.

ಪೌಲನನ್ನು, ಲೂಕನನ್ನು ಮತ್ತು ಬೇರೆಯವರನ್ನು ತನ್ನ ಮನೆಗೆ ಆಮಂತ್ರಿಸುತ್ತಿದ್ದಾಳೆ

ಪೌಲ ಲೂಕರಿಗೆ ಲುದ್ಯಳು ಏನು ಹೇಳುತ್ತಿದ್ದಾಳೆ?

ದೇವರ ಈ ಸೇವಕರು ಅವಳ ಮನೆಗೆ ಹೋದಾಗ ಲುದ್ಯಳಿಗೆ ಬಹಳ ಸಂತೋಷವಾಯಿತು. ಅವರು ಯೆಹೋವನ ಮತ್ತು ಯೇಸುವಿನ ಕುರಿತು ಇನ್ನಷ್ಟು ವಿಷಯಗಳನ್ನು ಕಲಿಸಿದಲ್ಲದೇ ಜನರು ಹೇಗೆ ಸದಾಕಾಲ ಜೀವಿಸಬಲ್ಲರು ಎಂದು ಸಹ ಕಲಿಸಿದರು. ತನಗೆ ಇಷ್ಟೆಲ್ಲಾ ಸಹಾಯ ಮಾಡಿದ ಅವರ ಮೇಲೆ ಲುದ್ಯಳಿಗೆ ಅಪಾರ ಗೌರವ ಮನ್ನಣೆ ಉಕ್ಕಿತು. ಅವಳು ಅವರಿಗೆ ಆಹಾರ ನೀಡಿ ವಿಶ್ರಾಂತಿಗಾಗಿ ಸ್ಥಳವನ್ನು ಕೊಟ್ಟಳು. ಇದೆಲ್ಲವನ್ನೂ ಅವಳು ಮನಸ್ಸಾರೆ ಮಾಡಿದಳು ಮತ್ತು ತುಂಬಾ ಸಂತೋಷಪಟ್ಟಳು. ಇದರಿಂದ ಒಂದು ವಿಷಯ ನಮಗೆ ತಿಳಿಯುತ್ತದೆ. ಮನಸ್ಸಾರೆ ಕೊಡುವುದು ಸಂತೋಷವನ್ನು ತರುತ್ತದೆ. ಯಾರಾದರೂ ಒಬ್ಬರು ಉಡುಗೊರೆಯನ್ನು ಕೊಡು ಎಂದು ನಮಗೆ ಹೇಳಿದರೆ, ನಾವು ಒಲ್ಲದ ಮನಸ್ಸಿನಿಂದ ಅದನ್ನು ಕೊಡುವುದಾದರೆ ನಮಗೆ ಸಂತೋಷ ಸಿಗುವುದಿಲ್ಲ.

ಪೌಲನಿಗೆ, ಲೂಕನಿಗೆ ಮತ್ತು ಇತರರಿಗೆ ಆಹಾರ ನೀಡಿ ವಿಶ್ರಾಂತಿಗಾಗಿ ಸ್ಥಳವನ್ನು ಕೊಡಲು ಲುದ್ಯಳು ಸಂತೋಷಿಸಿದಳು

ಪೌಲ ಲೂಕರಿಗೆ ಆಹಾರ ಹಾಗೂ ವಿಶ್ರಮಕ್ಕೆ ಸ್ಥಳವನ್ನು ಒದಗಿಸಲು ಲುದ್ಯಳು ಏಕೆ ಸಂತೋಷಪಟ್ಟಳು?

ಉದಾಹರಣೆಗೆ, ನಿನ್ನ ಹತ್ತಿರ ಚಾಕೊಲೇಟ್‌ ಇದೆ ಅಂತ ಇಟ್ಟುಕೋ. ಅದನ್ನು ನೀನು ಬಿಚ್ಚಿ ತಿನ್ನುವಾಗ ನಾನು, ‘ಅದರಲ್ಲಿ ಸ್ವಲ್ಪ ಆ ಮಗುವಿಗೂ ಕೊಡು ಪುಟ್ಟ’ ಅಂತ ಹೇಳಿದರೆ, ನೀನು ಖುಷಿಯಿಂದ ಕೊಡುತ್ತೀಯಾ ಹೇಗೆ?— ಈಗ ಒಬ್ಬ ಆಪ್ತ ಸ್ನೇಹಿತನನ್ನು ನೀನು ಭೇಟಿಯಾಗಲು ಹೋಗಿದ್ದೀಯಾ ಅಂತ ಇಟ್ಟುಕೋ. ನಿನ್ನ ಕಿಸೆಯಲ್ಲಿ ತುಂಬಾ ಚಾಕೊಲೇಟ್‌ ಇದೆ. ಆ ಸ್ನೇಹಿತನೆಂದರೆ ನಿನಗೆ ತುಂಬಾ ಇಷ್ಟ. ಈಗ ನೀನಾಗಿಯೇ ಕಿಸೆಯಿಂದ ಚಾಕೊಲೇಟ್‌ ತೆಗೆದು ನಿನ್ನ ಗೆಳೆಯನಿಗೆ ಕೊಟ್ಟರೆ, ನಿನಗೆ ತುಂಬಾ ಖುಷಿಯಾಗುತ್ತೆ ತಾನೆ?—

ನಮಗೆ ಇಷ್ಟವಾದಂಥ ವ್ಯಕ್ತಿಗಳಿಗೆ ನಾವು ಎಲ್ಲವನ್ನೂ ಧಾರಾಳವಾಗಿ ಕೊಡಲು ಬಯಸುತ್ತೇವೆ. ಅದೇ ರೀತಿಯಲ್ಲಿ, ದೇವರ ಮೇಲಿನ ಪ್ರೀತಿ ಹೆಚ್ಚುತ್ತಾ ಹೋದಂತೆ ಆತನಿಗಾಗಿ ಎಲ್ಲವನ್ನೂ ಕೊಡುವ ಬಯಕೆ ನಮ್ಮಲ್ಲಿ ಮೂಡುತ್ತದೆ.

ಒಬ್ಬ ಬಡ ಸ್ತ್ರೀ ಎರಡು ಚಿಕ್ಕ ನಾಣ್ಯಗಳನ್ನು ಆಲಯದಲ್ಲಿ ಹಾಕುತ್ತಿದ್ದಾಳೆ

ಬಡವಳಾಗಿದ್ದ ಈ ಸ್ತ್ರೀ ತನ್ನ ಬಳಿಯಿದ್ದ ಎಲ್ಲವನ್ನೂ ಕೊಡಲು ಏಕೆ ಸಂತೋಷಪಟ್ಟಳು?

ಇಂಥ ಬಯಕೆ ಇದ್ದ ಒಬ್ಬ ಸ್ತ್ರೀಯ ಕುರಿತು ಮಹಾ ಬೋಧಕನಿಗೆ ಗೊತ್ತಿತ್ತು. ಅವಳನ್ನು ಅವನು ಯೆರೂಸಲೇಮಿನ ದೇವಾಲಯದಲ್ಲಿ ನೋಡಿದ್ದನು. ತೀರಾ ಬಡವಳಾಗಿದ್ದ ಅವಳ ಹತ್ತಿರ ಎರಡು ಚಿಕ್ಕ ನಾಣ್ಯಗಳನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ಆ ನಾಣ್ಯಗಳನ್ನು ಅವಳು ಏನು ಮಾಡಿದಳು ಗೊತ್ತಾ? ದೇವಾಲಯದ ಕಾಣಿಕೆ ಪೆಟ್ಟಿಗೆಯಲ್ಲಿ ಹಾಕಿದಳು. ಹೀಗೆ ಹಾಕುವಂತೆ ಯಾರೂ ಅವಳಿಗೆ ಹೇಳಿರಲಿಲ್ಲ. ಹೇಳೋದಿರಲಿ ಅವಳು ಕಾಣಿಕೆ ಪಟ್ಟಿಗೆಯಲ್ಲಿ ಹಾಕಿದ್ದು ಕೂಡ ಅಲ್ಲಿದ್ದ ಹೆಚ್ಚಿನವರಿಗೆ ಗೊತ್ತಿರಲಿಲ್ಲ. ಅವಳು ಯೆಹೋವನನ್ನು ತುಂಬಾ ಪ್ರೀತಿಸುತ್ತಿದ್ದದ್ದರಿಂದ ಆ ಕಾಣಿಕೆಯನ್ನು ಮನಸ್ಸಾರೆ ಕೊಟ್ಟಳು. ದೇವಾಲಯದಲ್ಲಿ ಆ ಎರಡು ನಾಣ್ಯಗಳನ್ನಾದರೂ ಹಾಕಲಿಕ್ಕೆ ತನ್ನಿಂದ ಸಾಧ್ಯ ಆಯಿತಲ್ಲಾ ಅಂತ ತುಂಬಾ ಖುಷಿ ಪಟ್ಟಳು.—ಲೂಕ 21:1-4.

ನಾವು ಎಷ್ಟೋ ವಿಧಗಳಲ್ಲಿ ಇತರರಿಗೆ ಕೊಡಬಹುದು. ಕೆಲವು ವಿಧಗಳು ಯಾವುವು ಅಂತ ಹೇಳುತ್ತೀಯಾ?— ಶಹಬ್ಬಾಸ್‌. ನಾವು ಕೊಡುವಾಗಲೂ ಮನಸ್ಸಾರೆ ಕೊಡಬೇಕು. ಆಗ ನಮ್ಮ ಮನಸ್ಸಿಗೆ ನೆಮ್ಮದಿ ಸಂತೋಷ ಸಿಗುತ್ತದೆ. ಅದಕ್ಕೆ ಮಹಾ ಬೋಧಕನು, “ಕೊಡುವುದನ್ನು ರೂಢಿಮಾಡಿಕೊಳ್ಳಿರಿ” ಅಂತ ನಮಗೆ ಹೇಳುತ್ತಾನೆ. (ಲೂಕ 6:38) ನಾವು ಇತರರಿಗೆ ಕೊಡುವಾಗ ಅವರಿಗೆ ಸಂತೋಷ ಆಗುತ್ತೆ. ನಮಗೂ ಹೆಚ್ಚು ಸಂತೋಷ ಸಿಗುತ್ತೆ.

ಕೊಡುವುದರಿಂದ ಸಿಗುವ ಸಂತೋಷದ ಬಗ್ಗೆ ಹೆಚ್ಚನ್ನು ತಿಳಿಯಲು, ಮತ್ತಾಯ 6:1-4; ಲೂಕ 14:12-14 ಮತ್ತು 2 ಕೊರಿಂಥ 9:7 ಓದಿ ನೋಡೋಣ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ