ವಾಚಕರಿಂದ ಪ್ರಶ್ನೆಗಳು
ಸರಿಬೀಳುವ ಮದುವೆ ಜೋಡಿಯನ್ನು ಪಡೆಯಲು ಅಸಾಧ್ಯವಾದಾಗ ಕ್ರೈಸ್ತನು ಯಾ ಕ್ರೈಸ್ತಳು ಏನು ಮಾಡಬಹುದು?
ಭಯಭಕ್ತಿಯ ಕ್ರೈಸ್ತರಾಗಿದ್ದಾಗ್ಯೂ, ನಾವೇನನ್ನು ಶ್ರದ್ಧಾಪೂರ್ವಕವಾಗಿ ನಿರೀಕ್ಷಿಸುತ್ತೇವೊ ಅದು ನೆರವೇರದಿರುವಾಗ ನಾವು ಖಿನ್ನರಾಗಲು ಸಾಧ್ಯವಿದೆ. ಜ್ಞಾನೋಕ್ತಿ 13:12 ರಲ್ಲಿ ನಮ್ಮ ಭಾವನೆಗಳು ಉತ್ತಮವಾಗಿ ವ್ಯಕ್ತಪಡಿಸಲಾಗಿವೆ, ಅದು ಹೇಳುವುದು: “ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವದು.” ಮದುವೆಯಾಗಲು ಬಯಸಿದಾಗ ಸರಿಬೀಳುವ ಸಂಗಾತಿಯನ್ನು ಕಂಡುಕೊಳ್ಳಸಾಧ್ಯವಿಲ್ಲದಾಗ ಕೆಲವು ಕ್ರೈಸ್ತರಿಗೆ ಇದೇ ರೀತಿ ಅನಿಸಿದೆ. “ಕಾಮತಾಪಪಡುವವರು” ಎಂದು ಅಪೊಸ್ತಲ ಪೌಲನು ನಿರೂಪಿಸಿದವರ ವಿಷಯದಲ್ಲಿ ಇದು ನಿರ್ದಿಷ್ಟವಾಗಿ ಸತ್ಯವಾಗಿರುತ್ತದೆ.—1 ಕೊರಿಂಥ 7:9.
ವಿರುದ್ಧ ಲಿಂಗ ಜಾತಿಯ ಒಬ್ಬನಲ್ಲಿ ನಿಜ ಸಂಗಾತಿಯನ್ನು ಕಂಡುಕೊಳ್ಳುವ ಬಯಕೆಯನ್ನು ಯೆಹೋವನು ಮಾನವರಲ್ಲಿ ಹಾಕಿರುತ್ತಾನೆ. ಆದ್ದರಿಂದ, ಅನೇಕ ಅವಿವಾಹಿತ ಕ್ರೈಸ್ತರಲ್ಲಿ ಅಂಥ ಭಾವೋದೇಗ್ವಗಳು ಪ್ರಬಲಗೊಳ್ಳುವುದು ಸೋಜಿಗವಲ್ಲ. (ಆದಿಕಾಂಡ 2:18) ಮದುವೆಯಾಗುವುದರ ಮೇಲೆ (ಯಾ ನಿರ್ದಿಷ್ಟ ಪ್ರಾಯದೊಳಗೆ ಮದುವೆಯಾಗುವುದರ ಮೇಲೆ) ಹೆಚ್ಚು ಒತ್ತಡ ಹಾಕುವ ಸಂಸ್ಕ್ರತಿಯಲ್ಲಿ ಯಾ ಸಭೆಯಲ್ಲಿ ಸಂತೋಷವಾಗಿ ಮದುವೆಯಾಗಿರುವ ದಂಪತಿಗಳಿಂದ ಅವಿವಾಹಿತ ಕ್ರೈಸ್ತರು ಸುತ್ತುವರಿಯಲ್ಪಟ್ಟಿರುವಲ್ಲಿ, ಈ ಸಹಜ ಭಾವನೆಗಳು ವೃದ್ಧಿಗೊಳ್ಳಬಹುದು. ಆದಾಗ್ಯೂ, ಹೆಚ್ಚು ಸಮಯದ ವರೆಗೆ ಚಿಂತೆಯು ವ್ಯಾಪಿಸುವಂತೆ ಅವಕಾಶ ಕೊಡುವುದು ಒಳ್ಳೆಯದಲ್ಲ. ಹಾಗಾದರೆ, ಯಥಾರ್ಥ ಕ್ರೈಸ್ತರು ವಿಪರೀತ ಚಿಂತಾಕ್ರಾಂತರಾಗದೆ ಈ ಸಂದರ್ಭದೊಂದಿಗೆ ಹೇಗೆ ವ್ಯವಹರಿಸಬಹುದು?
ಅದು ಸುಲಭವಲ್ಲ, ಮತ್ತು ಇತರರು ಈ ಚಿಂತೆಯನ್ನು ಕೇವಲ ಒಂದು ಅತಿಶಯೋಕ್ತಿ ಯಾ ಬರಿಯ ಕ್ಷುಲ್ಲಕ ಅನಾನುಕೂಲತೆ ಎಂಬಂತೆ ಪರಿಗಣಿಸಬಾರದು. ಆದರೆ ದೊಡ್ಡ ಪ್ರಮಾಣದಲ್ಲಿ, ಸಂದರ್ಭದೊಂದಿಗೆ ಸಹಕರಿಸುವ ಯಾ ಅದನ್ನು ಬಗೆಹರಿಸುವ ಸಾಮರ್ಥ್ಯವು ಅವಿವಾಹಿತ ವ್ಯಕ್ತಿಯು ತಕೊಳ್ಳಬಹುದಾದ ಹೆಜ್ಜೆಗಳ ಮೇಲೆ ಅದು ಆಧರಿಸಿದೆ.
ಈ ವ್ಯಾವಹಾರಿಕ ಬೈಬಲ್ ಸೂತ್ರದಲ್ಲಿ ನಾವು ಕೀಲಿ ಕೈಯನ್ನು ಕಂಡುಕೊಳ್ಳುತ್ತೇವೆ: “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ.” (ಅ. ಕೃತ್ಯಗಳು 20:35) ಇದನ್ನು ಹೇಳಿದ್ದು ಅವಿವಾಹಿತ ಪುರುಷನಾದ ಯೇಸು ಕ್ರಿಸ್ತನು, ಮತ್ತು ಆತನೇನು ಮಾತಾಡಿದನೋ ಅದರ ಅರ್ಥ ಅವನಿಗೆ ಗೊತ್ತಿತ್ತು. ಒಂದು ನಿಸ್ವಾರ್ಥ ಉದ್ದೇಶದಿಂದ ಇತರರಿಗಾಗಿ ವಿಷಯಗಳನ್ನು ಮಾಡುವುದು, ನಿರೀಕ್ಷಣೆಯು ತಡವಾಗುವುದರ ಮೂಲಕ ಫಲಿಸುವ ಭಾವನೆಗಳನ್ನು ಜಯಿಸಲು ನಮ್ಮಲ್ಲಿ ಯಾರಿಗಾದರೂ ಸಹಾಯ ಮಾಡುವ ಸರ್ವೋತ್ತಮ ಯೋಜನೆಯಾಗಿದೆ. ಅವಿವಾಹಿತ ಕ್ರೈಸ್ತನ ವಿಷಯದಲ್ಲಿ ಇದರ ಅರ್ಥ ಏನಾಗಿದೆ?
ನಿಮ್ಮ ಸ್ವಂತ ಕುಟುಂಬಕ್ಕಾಗಿ ಮತ್ತು ಸಭೆಯಲ್ಲಿನ ಇತರರಿಗಾಗಿ ದಯೆಯ ಕಾರ್ಯಗಳನ್ನು ಮಾಡಲು ಪ್ರಯತ್ನಿಸಿರಿ, ಮತ್ತು ಶುಶ್ರೂಷೆಯಲ್ಲಿ ನಿಮ್ಮ ಕಾರ್ಯಗಳನ್ನು ವೃದ್ಧಿಗೊಳಿಸಿರಿ. ಈ ಬುದ್ಧಿವಾದವು ‘ಕಾರ್ಯಮಗ್ನನಾಗಿರು, ಆಗ ಮದುವೆಯಾಗಬಯಸುವುದನ್ನು ಮರೆತುಬಿಡುವೆ,’ ಎಂದು ಹೇಳುವ ಕೇವಲ ಒಂದು ವಿಧಾನವಾಗಿರುವುದಿಲ್ಲ. ಇಲ್ಲ. ಈ ಫಲಪ್ರದ ಕ್ರೈಸ್ತ ಬೆನ್ನಟ್ಟುವಿಕೆಗಳಲ್ಲಿ ತೊಡಗಿಸಿಕೊಳ್ಳುವಲ್ಲಿ, ನೀವು ‘ನಿಮ್ಮ ಹೃದಯದಲ್ಲಿ ನಿರ್ಣಯಿಸಿಕೊಂಡವರೂ, ನಿಮ್ಮ ಸ್ವಂತ ಚಿತ್ತದ ಮೇಲೆ ಅಧಿಕಾರವುಳ್ಳವರೂ’ ಆಗಿದ್ದೀರಿ ಎಂದು ಕಂಡುಹಿಡಿಯಬಹುದು ಮತ್ತು ನಿಮ್ಮ ಸದ್ಯದ ಪರಿಸ್ಥಿತಿಗಳನ್ನು ಪ್ರಯೋಜನಕಾರಿಯಾಗುವ ವಿಧಾನದಲ್ಲಿ ಉಪಯೋಗಿಸಬಲ್ಲಿರಿ.—1 ಕೊರಿಂಥ 7:37.
ಮದುವೆಯಾಗಲು ಮಹತ್ತಾದ ಬಯಕೆವುಳ್ಳ ಕೆಲವರು ಇದನ್ನು ಕ್ಷಯಿಸುವ ಮುನ್ನೊಲವಾಗಲು ಬಿಟ್ಟಿದ್ದಾರೆ. ಅವರು ವಾರ್ತಾಪತ್ರಿಕೆಗಳಲ್ಲಿ ಸಂಗಾತಿಗಳಿಗಾಗಿ ಜಾಹೀರಾತನ್ನು ಕೊಡುವಷ್ಟರವರೆಗೂ ಮುಂದುವರಿದಿದ್ದಾರೆ. ಆದರೆ, ಅವಿವಾಹಿತತನದ ಸಮಯದಿಂದ ಪಡೆದುಕೊಳ್ಳಬಹುದಾದ ಪ್ರಯೋಜನಗಳನ್ನು ಗಣ್ಯಮಾಡುವುದರ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುವುದು ಎಷ್ಟೊಂದು ಉತ್ತಮ.—“ಅವಿವಾಹಿತರು ಆದರೂ ದೇವರ ಸೇವೆಗಾಗಿ ಪೂರ್ಣರು” ಮತ್ತು “ಅವಿವಾಹಿತತನ—ಪ್ರತಿಫಲದಾಯಕ ಜೀವನ” ಮೇ 1, 1988 ಕಾವಲಿನಬುರುಜು, ಮತ್ತು “ವಿವಾಹವು ಸಂತೋಷಕ್ಕಿರುವ ಒಂದೇ ಕೀಲಿ ಕೈಯೋ?” ಅಗಸ್ಟ್ 15, 1992 ಕಾವಲಿನಬುರುಜು ಲೇಖನಗಳನ್ನು ದಯವಿಟ್ಟು ನೋಡಿರಿ.
ಅವಿವಾಹಿತತನದ ಸ್ಥಿತಿಯಲ್ಲಿ ಪಟ್ಟುಹಿಡಿದು ನಿಲ್ಲಲು ಸಹಾಯಕ್ಕಾಗಿ ಯೆಹೋವನನ್ನು ಪ್ರಾರ್ಥಿಸಿರಿ. (ಫಿಲಿಪ್ಪಿ 4:6, 7, 13) ಅನೇಕ ಅವಿವಾಹಿತ ಕ್ರೈಸ್ತರು ದೇವರ ವಾಕ್ಯವನ್ನು ಅಧ್ಯಯನ ಮಾಡಲು ಮತ್ತು ಧ್ಯಾನಿಸಲು ಮತ್ತು ಕ್ರೈಸ್ತ ಕೂಟಗಳಿಗೆ ಹಾಜರಾಗಲು ಮತ್ತು ಭಾಗವಹಿಸಲು ಅವರ ಸಮಯವನ್ನು ಉಪಯೋಗಿಸುವುದರ ಮೂಲಕ, ಯೇಸು ತನ್ನ ಹಿಂಬಾಲಕರಿಗೆ ವಾಗ್ದಾನಿಸಿದಂತೆ, ‘ಅವರ ಆತ್ಮಕ್ಕೆ ಹೆಚ್ಚಿನ ವಿಶ್ರಾಂತಿಯು’ ದೊರಕಿರುವುದಾಗಿ ಕಂಡುಕೊಂಡಿರುತ್ತಾರೆ. (ಮತ್ತಾಯ 11:28-30) ಇದರಿಂದ ಅವರು ಸರಿಬೀಳುವ ಸಂಗಾತಿಯನ್ನು ಸಮಯಾನಂತರ ಕಂಡುಕೊಳ್ಳುವಲ್ಲಿ ಉತ್ತಮ ಗಂಡಂದಿರು ಯಾ ಹೆಂಡತಿಯರಾಗುವಂತೆ ಇದು ಅವರಿಗೆ ಆತ್ಮಿಕತೆಯನ್ನು ಬೆಳೆಸುವುದಕ್ಕೆ ಸಹಾಯ ಮಾಡಿದೆ.
ತನ್ನನ್ನು ಸೇವಿಸುವ ಎಲ್ಲಾ ಅವಿವಾಹಿತ ಜನರ ಪರಿಸ್ಥಿತಿಯನ್ನು ಯೆಹೋವನು ತಿಳಿದುಕೊಳ್ಳುತ್ತಾನೆಂದು ಎಂದಿಗೂ ಮರೆಯದಿರ್ರಿ. ನಿಮ್ಮ ಸದ್ಯದ ಪರಿಸ್ಥಿತಿಗಳು ನೀವು ಇಷ್ಟಪಡುವಂಥವುಗಳೆಂದು ನೀವು ಭಾವಿಸುವುದಿಲ್ಲವೆಂಬುದು ಆತನಿಗೆ ತಿಳಿದದೆ. ಆತ್ಮಿಕವಾಗಿಯೂ ಮತ್ತು ಭಾವನಾತ್ಮಕವಾಗಿಯೂ, ನಿಮಗಾಗಿ ಬಾಳುವ ಪ್ರಯೋಜನವು ಯಾವುದಾಗಿರುವುದೆಂದು ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯು ಸಹ ಎಚ್ಚರದಿಂದಿದ್ದಾನೆ. ಪ್ರತಿಯಾಗಿ, ನೀವು ಇದನ್ನು ನಿಶ್ಚಯವಾಗಿ ತಿಳಿಯಬಹುದೇನಂದರೆ: ಯೆಹೋವನ ಮೇಲೆ ತಾಳ್ಮೆಯಿಂದ ಕಾದಿರುವ ಮೂಲಕ ಮತ್ತು ದಿನನಿತ್ಯದ ಜೀವಿತದಲ್ಲಿ ಆತನ ವಾಕ್ಯದ ಸೂತ್ರಗಳನ್ನು ಅನ್ವಯಿಸುವುದರ ಮೂಲಕ, ನಿಮ್ಮ ನಿತ್ಯದ ಒಳ್ಳೆಯದಕ್ಕಾಗಿರುವ ವಿಧಾನದಲ್ಲಿ ನಿಮ್ಮ ಅತಿ ಪ್ರಾಮುಖ್ಯ ಅಗತ್ಯತೆಗಳನ್ನು ಆತನು ತೃಪ್ತಿಪಡಿಸುವನೆಂದು ನೀವು ಖಾತರಿಯಿಂದಿರಬಲ್ಲಿರಿ.—ಹೋಲಿಸಿ ಕೀರ್ತನೆ 145:16.