ನೀವೆಂದಾದರೂ ಕಾಡ್ಕಿಚ್ಚನ್ನು ಪ್ರಾರಂಭಿಸಿದ್ದೀರೋ?
ಖಂಡಿತವಾಗಿಯೂ ಇಲ್ಲ, ಎಂದು ನೀವನ್ನುತ್ತೀರಿ. ಆದರೆ ನಿಲ್ಲಿರಿ! ಪ್ರಾಯಶಃ ನೀವು ಪ್ರಾರಂಭಿಸಿದ್ದೀರಿ. ಶಿಷ್ಯ ಯಾಕೋಬನ ಮಾತುಗಳಿಗೆ ಕಿವಿಗೊಡಿರಿ: “ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ. ಎಷ್ಟು ಕೊಂಚ ಕಿಚ್ಚು ಎಷ್ಟು ದೊಡ್ಡ ಕಾಡನ್ನು ಉರಿಸುತ್ತದೆ ನೋಡಿರಿ.”—ಯಾಕೋಬ 3:5.
ನಾಲಿಗೆಯು ವಾಕ್ಶಕ್ತಿಯ ಪ್ರಾಮುಖ್ಯ ಅಂಗವಾಗಿದೆ, ಆದರೆ ಅದು ಎಷ್ಟು ಹೆಚ್ಚು ದುರುಪಯೋಗಿಸಲ್ಪಟ್ಟಿದೆ! ಸುಳ್ಳಾಡಲು ಮತ್ತು ನಿಂದಿಸಲು ಜನರು ನಾಲಿಗೆಯನ್ನು ಉಪಯೋಗಿಸುತ್ತಾರೆ. ಅದರಿಂದ ಅವರು ಇತರರನ್ನು ಕಟುವಾಗಿ ಟೀಕಿಸುತ್ತಾರೆ, ಅವರ ಸತ್ಕೀರ್ತಿಗಳನ್ನು ನಾಶಪಡಿಸುತ್ತಾರೆ, ಮತ್ತು ಅವರಿಗೆ ಮೋಸಮಾಡುತ್ತಾರೆ. ಗುಲ್ಲುಗರೆಯುವವರು ನಾಲಿಗೆಯನ್ನು ಕ್ರಾಂತಿಯ ಕಾವೆಬ್ಬಿಸಲು ಬಳಸುತ್ತಾರೆ. ಅಡಾಲ್ಫ್ ಹಿಟ್ಲರನು ಒಂದು ರಾಷ್ಟ್ರವನ್ನು ಯುದ್ಧಕ್ಕೆ—ನಿಶ್ಚಯವಾಗಿ ‘ಕಾಡ್ಕಿಚ್ಚಿ’ ಗೆ—ಸಜ್ಜುಗೊಳಿಸಲು ತನ್ನ ನಾಲಿಗೆಯನ್ನು ಬಳಸಿದನು!
ಸದುದ್ದೇಶಗಳುಳ್ಳವರು ಸಹ ಚಿಕ್ಕ ‘ಕಾಡ್ಕಿಚ್ಚು’ ಗಳನ್ನು ಉಂಟುಮಾಡಬಲ್ಲರು. ನೀವೆಂದಾದರೂ ಏನನ್ನಾದರೂ ಹೇಳಿ, ಅನಂತರ ಆ ಕೂಡಲೆ ಅದನ್ನು ಹೇಳಬಾರದಿತ್ತೆಂದು ಆಶಿಸಿದ್ದುಂಟೋ? ಹಾಗಿದ್ದರೆ, ಯಾಕೋಬನು ಇದನ್ನು ಹೇಳಿದಾಗ ಏನು ಅರ್ಥೈಸಿದನೆಂದು ನೀವು ತಿಳಿದಿದ್ದೀರಿ: “ನಾಲಿಗೆಯನ್ನು ಯಾವ ಮಾನವನೂ ಹತೋಟಿಗೆ ತರಲಾರನು.”—ಯಾಕೋಬ 3:8.
ಆದಾಗ್ಯೂ, ಒಳ್ಳೆಯದಕ್ಕಾಗಿ ನಮ್ಮ ನಾಲಿಗೆಯನ್ನು ಬಳಸಲು ನಾವು ಪ್ರಯತ್ನಿಸ ಬಲ್ಲೆವು. ಕೀರ್ತನೆಗಾರನಂತೆ ನಾವು ದೃಢ ನಿಶ್ಚಯದಿಂದ ಹೇಳಸಾಧ್ಯವಿದೆ: “ನನ್ನ ನಾಲಿಗೆ ಪಾಪಕ್ಕೆ ಹೋಗದಂತೆ ಜಾಗರೂಕನಾಗಿರುವೆನು.” (ಕೀರ್ತನೆ 39:1) ಇತರರನ್ನು ಕಟುವಾಗಿ ಟೀಕಿಸುವ ಬದಲಿಗೆ, ಅವರ ಆತ್ಮೋನ್ನತಿಗಾಗಿ ನಾವು ಪ್ರಯತ್ನಿಸಬಲ್ಲೆವು. ಜನರನ್ನು ನಿಂದಿಸುವ ಬದಲಿಗೆ, ಅವರ ಕುರಿತು ಒಳ್ಳೆಯದನ್ನು ನಾವು ಹೇಳಸಾಧ್ಯವಿದೆ. ವಂಚನೆ ಮತ್ತು ಮೋಸಮಾಡುವ ಬದಲಿಗೆ, ನಾವು ಸತ್ಯವನ್ನಾಡಿ, ಬುದ್ಧಿಹೇಳ ಸಾಧ್ಯವಿದೆ. ಒಂದು ಸುಹೃದಯದಿಂದ ಪ್ರಚೋದಿಸಲ್ಪಡುವಾಗ, ನಾಲಿಗೆಯು ವಾಸಿಕಾರಕವಾದ ಆಶ್ಚರ್ಯಕರ ಮಾತುಗಳನ್ನಾಡಬಲ್ಲದು. ಯೇಸು ತನ್ನ ನಾಲಿಗೆಯನ್ನು ಮಾನವಕುಲಕ್ಕೆ ರಕ್ಷಣೆಯ ಕುರಿತು ಕಲಿಸುವುದಕ್ಕೆ ಆಶ್ಚರ್ಯಕರ ರೀತಿಯಲ್ಲಿ ಉಪಯೋಗಿಸಿದನು.
ನಿಜವಾಗಿಯೂ, “ಜೀವನಮರಣಗಳು ನಾಲಿಗೆಯ ವಶ” ವಾಗಿ ಇವೆ. (ಜ್ಞಾನೋಕ್ತಿ 18:21) ನಿಮ್ಮ ನಾಲಿಗೆಯು ಮರಣ-ಕಾರಕವೂ ಅಥವಾ ಜೀವ-ದಾಯಕವೂ? ಅದು ‘ಕಾಡ್ಕಿಚ್ಚು’ ಗಳನ್ನು ಪ್ರಾರಂಭಿಸುತ್ತದೋ ಅಥವಾ ಅವನ್ನು ನಂದಿಸುತ್ತದೋ? ಕೀರ್ತನೆಗಾರನು ದೇವರಿಗೆ ಪ್ರಾರ್ಥನೆ ಮಾಡಿದ್ದು: “ನನ್ನ ನಾಲಿಗೆಯು ನಿನ್ನ ನುಡಿಗಳನ್ನು ವರ್ಣಿಸಲಿ; ನಿನ್ನ ಆಜ್ಞೆಗಳೆಲ್ಲಾ ನೀತಿಯೇ.” (ಕೀರ್ತನೆ 119:172) ನಾವು ಕೀರ್ತನೆಗಾರನ ಮನೋಭಾವವನ್ನು ಬೆಳೆಸುವುದಾದರೆ, ನಾವೂ ನಮ್ಮ ನಾಲಿಗೆಯನ್ನು ಒಳ್ಳೆಯದಕ್ಕಾಗಿ ಉಪಯೋಗಿಸುವೆವು.
[ಪುಟ 32 ರಲ್ಲಿರುವ ಚಿತ್ರ]
U.S. Forest Service photo