ಆದಿಕ್ರೈಸ್ತರು ದೇವರ ಹೆಸರನ್ನು ಉಪಯೋಗಿಸಿದ್ದರೋ?
ದೇವರ ಹೆಸರು ಹೀಬ್ರು ಶಾಸ್ತ್ರದಲ್ಲಿ ಸಾವಿರಾರು ಬಾರಿ ತೋರಿಬರುತ್ತದೆ, ಅಲ್ಲಿ ಅದು ನಾಲ್ಕು ವ್ಯಂಜನಗಳಾದ יהזה (YHWH, ಚತುರಕ್ಷರಿ) ಯಿಂದ ಪ್ರತಿನಿಧಿಸಲ್ಪಟ್ಟಿದೆ. ಪ್ರಾಚೀನ ಶೋಧನ ಶಾಸ್ತ್ರಜ್ಞರ ಕಂಡುಹಿಡಿಯುವಿಕೆಗಳು ಸೂಚಿಸುವುದೇನಂದರೆ ಸಾ.ಶ.ಪೂ. 607 ಕ್ಕೆ ಮುಂಚೆ, ಇಸ್ರಾಯೇಲ್ಯರ ಬಂದಿವಾಸದ ಪೂರ್ವದಲ್ಲಿ, ಆ ಹೆಸರು ಸಾಮಾನ್ಯ ಬಳಕೆಯಲ್ಲಿತ್ತು ಮತ್ತು ಬಂದಿವಾಸದ ತರುವಾಯದ ಬೈಬಲ್ ಪುಸ್ತಕಗಳಾದ ಎಜ್ರ, ನೆಹೆಮೀಯ, ದಾನಿಯೇಲ, ಮತ್ತು ಮಲಾಕಿಯಗಳಲ್ಲಿ ಅದು ಪದೇ ಪದೇ ತೋರಿಬರುತ್ತದೆ. ಆದರೂ ಕ್ರಮೇಣ, ಮೆಸ್ಸೀಯನ ಆಗಮನಕ್ಕೆ ಸಮಯವು ಸಮೀಪವಾದಷ್ಟಕ್ಕೆ, ಯೆಹೂದ್ಯರು ಮೂಢನಂಬಿಕೆಯಿಂದಾಗಿ ಆ ನಾಮದ ಉಪಯೋಗಕ್ಕೆ ವಿಮುಖರಾದರು.
ಯೇಸುವಿನ ಶಿಷ್ಯರು (ಸಾಮಾನ್ಯವಾಗಿ ಇಂಗ್ಲಿಷ್ನಲ್ಲಿ “ಜೆಹೋವ,” ಅಥವಾ “ಯಾವೇ” ಎಂದು ಭಾಷಾಂತರಗೊಂಡ) ದೇವರ ನಾಮವನ್ನು ಉಪಯೋಗಿಸಿದ್ದರೋ? ಪುರಾವೆಯು ಹೌದೆಂದು ಹೇಳುತ್ತದೆ. ದೇವರಿಗೆ ಪ್ರಾರ್ಥಿಸಲು ಯೇಸು ತನ್ನ ಹಿಂಬಾಲಕರಿಗೆ ಕಲಿಸಿದನು: “ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.” (ಮತ್ತಾಯ 6:9) ಮತ್ತು ಅವನ ಭೂ ಶುಶ್ರೂಷೆಯ ಕೊನೆಯಲ್ಲಿ, ಅವನು ತಾನೇ ತನ್ನ ಸ್ವರ್ಗೀಯ ತಂದೆಗೆ ಪ್ರಾರ್ಥನೆ ಮಾಡಿದನು: “ಲೋಕದೊಳಗಿಂದ ನೀನು ನನಗೆ ಕೊಟ್ಟ ಮನುಷ್ಯರಿಗೆ ನಿನ್ನ ಹೆಸರನ್ನು ತಿಳಿಯಪಡಿಸಿದೆನು.” (ಯೋಹಾನ 17:6) ಅದಲ್ಲದೆ, ಯೇಸುವಿನ ಶಿಷ್ಯರಿಂದ ಉಪಯೋಗಿಸಲ್ಪಟ್ಟ ಹೀಬ್ರು ಶಾಸ್ತ್ರದ ಗ್ರೀಕ್ ಭಾಷಾಂತರವಾದ ಸೆಪ್ಟ್ಯುಅಜಿಂಟ್ನ ಆರಂಭದ ಪ್ರತಿಗಳಲ್ಲಿ ದೇವರ ನಾಮವು ಹೀಬ್ರು ಚತುರಕ್ಷರಿಯ ರೂಪದಲ್ಲಿ ಅಡಕವಾಗಿತ್ತು.
ಸುವಾರ್ತೆಗಳ ಮತ್ತು ಉಳಿದ ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥ (“ಹೊಸ ಒಡಂಬಡಿಕೆ”)ದ ಕುರಿತೇನು? ದೇವರ ಹೆಸರು ಸೆಪ್ಟ್ಯುಅಜಿಂಟ್ ನಲ್ಲಿ ಕಾಣಿಸಿಕೊಂಡಿರುವುದರಿಂದ, ಈ ಶಾಸ್ತ್ರಗ್ರಂಥದ ಅತ್ಯಾರಂಭದ ಪ್ರತಿಗಳಲ್ಲೂ—ಕನಿಷ್ಠ ಪಕ್ಷ ಸೆಪ್ಟ್ಯುಅಜಿಂಟ್ ಉದ್ಧರಿಸಲ್ಪಟ್ಟ ಸ್ಥಳಗಳಲ್ಲಿ ಅದು ಕಂಡುಬಂದಿರಬೇಕೆಂದು ವಿವೇಚಿಸಲ್ಪಟ್ಟಿದೆ. ಹೀಗೆ, ಯೆಹೋವ ಎಂಬ ಹೆಸರು 200 ಕ್ಕಿಂತಲೂ ಹೆಚ್ಚು ಬಾರಿ ನ್ಯೂ ವರ್ಲ್ಡ್ ಟ್ರಾನ್ಸ್ಲೇಷನ್ ಆಫ್ ದ ಕ್ರಿಶ್ಚ್ಯನ್ ಗ್ರೀಕ್ ಸ್ಕ್ರಿಪ್ಚರ್ಸ್ ನಲ್ಲಿ ತೋರಿಬರುತ್ತದೆ. ಕೆಲವರು ಇದನ್ನು ನ್ಯಾಯೋಚಿತವಲ್ಲವೆಂದು ಟೀಕಿಸಿದ್ದಾರೆ. ಆದರೂ, ನ್ಯೂ ವರ್ಲ್ಡ್ ಟ್ರಾನ್ಸ್ಲೇಷನ್ಗೆ ಒಂದು ಅಸಂಭವನೀಯ ಮೂಲದಿಂದ ಬೆಂಬಲವು ಇರುವಂತೆ ತೋರುತ್ತದೆ: ಅದು ಬಬಿಲೋನ್ಯ ಟಾಲ್ಮೂಡ್.
ಈ ಯೆಹೂದ್ಯ ಧಾರ್ಮಿಕ ಕೃತಿಯ ಮೊದಲ ಭಾಗವು ಶಬ್ಬಾತ್ (ಸಬ್ಬತ್) ಎಂಬ ಶೀರ್ಷಿಕೆಯುಳ್ಳದ್ದಾಗಿದ್ದು, ಸಬ್ಬತ್ನಲ್ಲಿ ನಡವಳಿಕೆಯನ್ನು ಹತೋಟಿಯಲ್ಲಿಡುವ ನಿಯಮಗಳ ಬಹುದೊಡ್ಡ ಸಮೂಹವು ಅದರಲ್ಲಿ ಅಡಕವಾಗಿದೆ. ಅದರ ಒಂದು ಭಾಗದಲ್ಲಿ, ಬೈಬಲ್ ಹಸ್ತಪ್ರತಿಗಳನ್ನು ಸಬ್ಬತ್ ಒಂದರಲ್ಲಿ ಬೆಂಕಿಯಿಂದ ರಕ್ಷಿಸುವುದು ಯೋಗ್ಯವೋ ಎಂಬ ಚರ್ಚೆಯು ಇದೆ, ಮತ್ತು ಆಮೇಲೆ ಕೆಳಗಿನ ಕಥನವು ಕಂಡುಬರುತ್ತದೆ: “ಮೂಲ ಪಾಠದಲ್ಲಿ ಹೇಳಲ್ಪಟ್ಟದ್ದು: ಖಾಲಿ ತೆರಪುಗಳು [ಗಿಲ್.ಯೊ.ನಿಮ್’] ಮತ್ತು ಮಿನಿಮ್ರ ಪುಸ್ತಕಗಳನ್ನು, ನಾವು ಒಂದು ಬೆಂಕಿಯಿಂದ ರಕ್ಷಿಸದೆ ಇರಬಹುದು. ರಬ್ಬಿ ಜೋಚ ಹೇಳಿದ್ದು: ವಾರದ ದಿನಗಳಲ್ಲಿ ಹಸ್ತಪ್ರತಿಗಳಲ್ಲಿ ಅಡಕವಾಗಿರುವ ದೈವಿಕ ನಾಮಗಳನ್ನು ಒಬ್ಬನು ಕತ್ತರಿಸಿ ತೆಗೆದು, ಅವನ್ನು ಅಡಗಿಸಿಟ್ಟು, ಉಳಿದದ್ದನ್ನು ಸುಟ್ಟುಹಾಕಬೇಕು. ರಬ್ಬಿ ಟಾರ್ಫನ್ ಅಂದದ್ದು: ಹಸ್ತಪ್ರತಿಗಳು ಅವುಗಳ ದೈವಿಕ ನಾಮಗಳೊಂದಿಗೆ ನನ್ನ ಸ್ವಾಧೀನಕ್ಕೆ ಬಂದಾಗ ನಾನು ಅವನ್ನು ಸುಟ್ಟುಬಿಡದಿದ್ದರೆ ನನ್ನ ಸ್ವಂತ ಮಗನನ್ನು ಹೂಳುವ ಶಾಪವು ನನ್ನ ಮೇಲೆ ಬರಲಿ.”—ಭಾಷಾಂತರ ಡಾ. ಎಚ್. ಫ್ರಿಡ್ಮ್ಯಾನ್ರಿಂದ.
ಮಿನಿಮ್ ಎಂದರೆ ಯಾರು? ಶಬ್ದದ ಅರ್ಥ “ಪಂಥಾಬಿಮಾನಿಗಳು” ಎಂದಾಗಿದೆ ಮತ್ತು ಸದ್ದುಕಾಯರಿಗೆ ಮತ್ತು ಸಮಾರ್ಯದವರಿಗೆ ಅದನ್ನು ಸೂಚಿಸಬಹುದಾಗಿದೆ. ಆದರೆ ಡಾ. ಫ್ರಿಡ್ಮ್ಯಾನ್ಗೆ ಅನುಸಾರವಾಗಿ, ಈ ಕಥನದಲ್ಲಿ ಅದು ಯೆಹೂದ್ಯ ಕ್ರೈಸ್ತರಿಗೆ ನಿರ್ದೇಶಿಸಲ್ಪಟ್ಟಿರುವುದು ಅತಿ ಸಂಭವನೀಯ. ಹೀಗಿರಲಾಗಿ ಡಾ. ಫ್ರಿಡ್ಮ್ಯಾನ್ಗೆ ಅನುಸಾರವಾಗಿ, “ಖಾಲಿ ತೆರಪುಗಳು” ಎಂದು ಭಾಷಾಂತರಗೊಂಡ ಗಿಲ್.ಯೊ.ನಿಮ್’ ಏನಾಗಿದ್ದವು? ಎರಡು ಸಂಭವನೀಯ ಅರ್ಥಗಳಿವೆ. ಒಂದು ಸುರುಳಿಯ ಖಾಲಿ ಅಂಚು [ಮಾರ್ಜಿನು] ಗಳು ಅವಾಗಿರಬಹುದು ಅಥವಾ ಖಾಲಿ ಸುರುಳಿಗಳೂ ಅವಾಗಿರ ಸಾಧ್ಯವಿದೆ. ಅಥವಾ—ಶಬ್ದದ ಹಾಸ್ಯವ್ಯಂಗ್ಯ ಅನ್ವಯದಲ್ಲಿ—ಅವು ಮಿನಿಮ್ರ ಬರಹಗಳೂ ಆಗಿರಬಲ್ಲವು, ಅವರ ಬರಹಗಳು ಖಾಲಿ ಸುರುಳಿಗಳಂತೆ ನಿಷ್ಪ್ರಯೋಜಕವೋ ಎಂದು ಹೇಳುವಂತೆ. ಶಬ್ದಕೋಶಗಳಲ್ಲಿ ಈ ಎರಡನೆಯ ಅರ್ಥವು “ಸುವಾರ್ತೆಗಳು” ಎಂದು ಕೊಡಲ್ಪಟ್ಟಿದೆ. ಇದಕ್ಕೆ ಹೊಂದಿಕೆಯಲ್ಲಿ, ಮೇಲೆ ಉದ್ಧರಿಸಿದ ಭಾಗದ ಮುಂಚೆ [ಬಬಿಲೋನ್ಯ] ಟಾಲ್ಮೂಡ್ನಲ್ಲಿ ಬರುವ ವಾಕ್ಯವು ಓದುವುದು: “ಮಿನಿಮ್ರ ಪುಸ್ತಕಗಳು ಖಾಲಿ ತೆರಪುಗಳ [ಗಿಲ್.ಯೊ.ನಿಮ್’] ಹಾಗೆಯೇ ಇವೆ.”
ಇದಕ್ಕನುಸಾರ, ಲಾರೆನ್ಸ್ ಎಚ್. ಶಿಫ್ಮ್ಯಾನ್ರಿಂದ ಬರೆದ ಯೆಹೂದ್ಯನು ಯಾರಾಗಿದ್ದನು? [ಹು ವಾಸ್ ಅ ಜ್ಯೂ?] ಎಂಬ ಪುಸ್ತಕದಲ್ಲಿ, ಟಾಲ್ಮೂಡ್ನ ಮೇಲೆ ಉದ್ಧರಿಸಿದ ಭಾಗವು ಈ ಕೆಳಗಿನಂತೆ ಭಾಷಾಂತರವಾಗಿದೆ: “ನಾವು (ಸಬ್ಬತ್ನಲ್ಲಿ) ಒಂದು ಬೆಂಕಿಯಿಂದ ಸುವಾರ್ತೆಗಳನ್ನು ಮತ್ತು ಮಿನಿಮ್ರ (‘ಪಾಷಂಡಿಗಳ’) ಪುಸ್ತಕಗಳನ್ನು ರಕ್ಷಿಸುವುದಿಲ್ಲ. ಬದಲಾಗಿ ಅವು ಅವುಗಳ ಸ್ಥಳದಲ್ಲಿ ಸುಡಲ್ಪಡುತ್ತವೆ, ಅವು ಮತ್ತು ಅವುಗಳ ಚತುರಕ್ಷರಿಗಳು ಸಹ. ರಬ್ಬಿ ಯೋಸ್ ಹ-ಗೆಲಿಲಿ ಅನ್ನುವುದು: ವಾರದ ಸಮಯದಲ್ಲಿ ಒಬ್ಬನು ಅವುಗಳ ಚತುರಕ್ಷರಿಗಳನ್ನು ಕತ್ತರಿಸಿ ತೆಗೆಯಬೇಕು ಮತ್ತು ಅವನ್ನು ಅಡಗಿಸಿಡಬೇಕು ಮತ್ತು ಉಳಿದವುಗಳನ್ನು ಸುಟ್ಟುಹಾಕಬೇಕು. ರಬ್ಬಿ ಟಾರ್ಫನ್ ಅಂದದ್ದು: ನನ್ನ ಪುತ್ರರನ್ನು ನಾನೇ ಹೂಳುವಂತಾಗಲಿ! (ಈ ಪುಸ್ತಕಗಳು) ನನ್ನ ಸ್ವಾಧೀನಕ್ಕೆ ಬಂದರೆ, ನಾನು ಅವನ್ನು ಅವುಗಳ ಚತುರಕ್ಷರಿಗಳೊಂದಿಗೆ ಸುಟ್ಟುಹಾಕುವೆನು.” ಇಲ್ಲಿ ಮಿ-ನಿಮ್’ರು ಯೆಹೂದ್ಯ ಕ್ರೈಸ್ತರೆಂಬದಾಗಿ ಡಾ. ಶಿಫ್ಮ್ಯಾನ್ ವಾದಿಸುತ್ತಾ ಮುಂದರಿಯುತ್ತಾರೆ.
ಟಾಲ್ಮೂಡ್ನ ಈ ಭಾಗವು ನಿಜವಾಗಿಯೂ ಆರಂಭದ ಯೆಹೂದ್ಯ ಕ್ರೈಸ್ತರ ಕುರಿತು ಮಾತಾಡುತ್ತದೋ? ಹಾಗಿದ್ದರೆ, ಕ್ರೈಸ್ತರು ದೇವರ ನಾಮವನ್ನು, ಚತುರಕ್ಷರಿಯನ್ನು ತಮ್ಮ ಸುವಾರ್ತೆಗಳಲ್ಲಿ ಮತ್ತು ಬರಹಗಳಲ್ಲಿ ಕೂಡಿಸಿದ್ದರೆಂಬದಕ್ಕೆ ಇದು ಬಲವಾದ ಪುರಾವೆಯಾಗಿದೆ. ಮತ್ತು ಇಲ್ಲಿ ಟಾಲ್ಮೂಡ್ ಯೆಹೂದ್ಯ ಕ್ರೈಸ್ತರನ್ನು ಚರ್ಚಿಸುತ್ತಿದೆಯೆಂಬದು ಅತ್ಯಂತ ಸಂಭವನೀಯವು. ಅಂಥ ಒಂದು ನೋಟಕ್ಕೆ ವಿದ್ವಾಂಸರ ಬೆಂಬಲವಿದೆ, ಮತ್ತು ಟಾಲ್ಮೂಡ್ನಲ್ಲಿರುವ ಪೂರ್ವಾಪರ ಸಂದರ್ಭವು ಇನ್ನಷ್ಟು ಬೆಂಬಲವನ್ನು ಕೊಡುವಂತೆ ತೋರುತ್ತದೆ. ಮೇಲಿನ ಶಬ್ಬಾತ್ ಉದ್ಧರಣೆಯನ್ನು ಹಿಂಬಾಲಿಸುವ ಭಾಗವು ಗಮಲಿಯೇಲ್ ಮತ್ತು ಒಬ್ಬ ಕ್ರೈಸ್ತ ನ್ಯಾಯಾಧಿಪತಿಯನ್ನು ಒಳಗೂಡಿಸುವ ಒಂದು ಕಥೆಯನ್ನು ತಿಳಿಸುತ್ತದೆ, ಅದರಲ್ಲಿ ಪರ್ವತ ಪ್ರಸಂಗದ ಭಾಗಗಳು ಪ್ರಸ್ತಾಪಿಸಲ್ಪಟ್ಟಿರುತ್ತವೆ.
ಧರ್ಮಭ್ರಷ್ಟ ಕ್ರೈಸ್ತತ್ವವು ಯೇಸುವಿನ ಸರಳವಾದ ಬೋಧನೆಗಳಿಂದ ಓರೆತಿರುಗಿದ ಮೇಲೆ ಮಾತ್ರವೇ, ದೇವರ ನಾಮವು ಕ್ರೈಸ್ತರೆನಿಸಿಕೊಳ್ಳುವವರಿಂದ ಉಪಯೋಗಿಸಲ್ಪಡುವುದು ನಿಂತುಹೋಯಿತು ಮತ್ತು ಸೆಪ್ಟ್ಯುಅಜಿಂಟ್ ಪ್ರತಿಗಳಿಂದ ಮತ್ತು ಸುವಾರ್ತೆಗಳಿಂದ ಮತ್ತು ಇತರ ಬೈಬಲ್ ಪುಸ್ತಕಗಳಿಂದ ಸಹ ತೆಗೆದುಹಾಕಲ್ಪಟ್ಟಿತು.
[ಪುಟ 31 ರಲ್ಲಿರುವ ಚಿತ್ರ]
ಯೇಸುವಿನ ದಿನದಲ್ಲಿ, ದೇವರ ನಾಮವು “ಸೆಪ್ಟ್ಯುಅಜಿಂಟ್” ನಲ್ಲಿ ತೋರಿಬಂದಿತ್ತು
[ಕೃಪೆ]
Israel Antiquities Authority