ರಾಜ್ಯ ಘೋಷಕರು ವರದಿ ಮಾಡುತ್ತಾರೆ
ದೇವರು ಪಕ್ಷಪಾತಿಯಲ್ಲ
ಒಂದು ಸಾವಿರದ ಒಂಭೈನೂರು ವರುಷಗಳ ಹಿಂದೆ, ಸೈನ್ಯಾಧಿಕಾರಿ ಕೊರ್ನೇಲ್ಯನಿಗೆ ಅಪೊಸ್ತಲ ಪೇತ್ರನು ಸಾಕ್ಷಿಯನ್ನು ನೀಡಿ ಹೇಳಿದ್ದು: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ.” (ಅ. ಕೃತ್ಯಗಳು 10:34, 35) ಕೊರ್ನೇಲ್ಯನು ದೇವರ ಭಯ ಮತ್ತು ನೀತಿಯ ಪ್ರೀತಿಯನ್ನು ವ್ಯಕ್ತಪಡಿಸಿದನು. ಪೇತ್ರನ ಮೂಲಕ ಕೊಡಲ್ಪಟ್ಟ ಸಾಕ್ಷಿಯನ್ನು ಅವನು ಸ್ವೀಕರಿಸಿದನು ಮತ್ತು ಕ್ರೈಸ್ತನಾದನು.
ಅದೇ ಸೂತ್ರವು ಇಂದೂ ಸತ್ಯವಾಗಿರುತ್ತದೆ—ದೇವರು ಪಕ್ಷಪಾತಿಯಲ್ಲ. ಇದನ್ನು ನಾವು ಒಂದು ಜರ್ಮನಿಯ ಅನುಭವದ ಮೂಲಕ ಗಮನಿಸುತ್ತೇವೆ. ವರದಿಯು ತಿಳಿಸುವಂಥಾದ್ದು:
“ನಮ್ಮ ಸಭೆಯ ಟೆರಿಟೊರಿಯಲ್ಲಿ, ಒಂದು ವ್ಯಾಪಕವಾದ ರಷ್ಯಾದವರ ಸೈನಿಕ ಕಟ್ಟಡಗಳಿವೆ. ಇಸವಿ 1989 ರಲ್ಲಿ ಬರ್ಲಿನ್ ಗೋಡೆಯು ಬಿದ್ದ ಸ್ವಲ್ಪ ಸಮಯಾನಂತರ, ಪ್ರಚಾರಕರಲ್ಲಿ ರಷ್ಯಾದ ಭಾಷೆಯನ್ನು ತಿಳಿದಿರುವವರಾರಾದರೂ ಇರುವರೊ ಎಂದು ಹಿರಿಯರು ಕೇಳಿದರು. ನಮ್ಮಲ್ಲಿ ಕೆಲವರಿಗೆ ಗೊತ್ತಿತ್ತು, ಮತ್ತು ನಿಜ ಆನಂದವಾಗಿ ಪರಿಣಮಿಸಿದ ಈ ಟೆರಿಟೊರಿಯಲ್ಲಿ ಕೆಲಸ ಮಾಡಲು ನಾವು ಹೋದೆವು. ಈ ಮುಂದಿನದು ಅನೇಕ ಅನುಭವಗಳಲ್ಲಿ ಒಂದಾಗಿದೆ.
“ನಾವು ಸೇನಾ ಅಧಿಕಾರಿಯೊಂದಿಗೆ ಮಾತಾಡಿದಾಗ ನಾನು ಅಸ್ನಾತ ಪ್ರಚಾರಕನೊಂದಿಗೆ (ಅದರ ಅನಂತರ ಆತನು ದೀಕ್ಷಾಸ್ನಾನ ಪಡೆದುಕೊಂಡಿದ್ದಾನೆ) ಇದ್ದೆ. ಆ ಸೇನಾ ಅಧಿಕಾರಿ ನಾವು ಹೇಳಬೇಕಾದುದನ್ನು ಕೇಳಿದನು ಮತ್ತು ತನ್ನ ಸೈನಿಕರೊಂದಿಗೆ ಮಾತಾಡುವಂತೆ ನಮಗೆ ಆಮಂತ್ರಣವನ್ನಿತ್ತನು. ಅವರು ದೇವರ ಕುರಿತು ಮತ್ತು ಬೈಬಲಿನ ಕುರಿತೂ ಕೇಳಬೇಕು ಎಂದು ಅವನು ಹೇಳಿದನು, ಆದುದರಿಂದ ನಾವು ಪುನಃ ಬರುವ ಒಂದು ನೇಮಕವನ್ನು ಮಾಡಿದೆವು.
“ರಷ್ಯಾದ ಭಾಷೆಯನ್ನು ಸರಾಗವಾಗಿ ಮಾತಾಡುವ ಒಬ್ಬ ಸಹೋದರಿಯನ್ನು ಭಾಷಾಂತರಗಾರ್ತಿಯಾಗಿ ನಮ್ಮೊಂದಿಗೆ ಬರುವಂತೆ ನಾವು ಕೇಳಿಕೊಂಡೆವು. ಸೈನಿಕ ಕಟ್ಟಡಗಳ ಸಂಘಾಲಯದಲ್ಲಿ, ನಾವೊಂದು ಸಾಹಿತ್ಯ ಮೇಜನ್ನು ಇರಿಸಿದೆವು ಮತ್ತು 68 ಸೈನಿಕರೊಂದಿಗೆ ಮಾತಾಡಲು ಮತ್ತು ಅವರ ಪ್ರಶ್ನೆಗಳನ್ನು ಉತ್ತರಿಸಲು ಸಾಧ್ಯವಾಯಿತು. ತದನಂತರ ಅವರು 35 ಪುಸ್ತಕಗಳನ್ನು ಮತ್ತು ಸಾಧಾರಣ 100 ಪತ್ರಿಕೆಗಳನ್ನು ಸಂತೋಷದಿಂದ ಸ್ವೀಕರಿಸಿದರು. ನಾವು ಆ ಸಂಘಾಲಯವನ್ನು ಬಿಡುತ್ತಿರುವಾಗ, ಸಣ್ಣ ಗುಂಪುಗಳು ಆ ಸಾಹಿತ್ಯದ ಕುರಿತು ಚರ್ಚಿಸುವುದನ್ನು ನಾವು ಕಂಡೆವು.
“ಜುಲೈ 4, 1992 ರಂದು ಹಿಂತಿರುಗುವ ಒಂದು ನೇಮಕವನ್ನು ನಾವು ಮಾಡಿದೆವು. ಬೆಳಗ್ಗೆ 10:50ಕ್ಕೆ ತಲುಪಿದಾಗ, ಸೈನಿಕ ಕಟ್ಟಡಗಳ ಹೊರ ಬಾಗಿಲಿನಲ್ಲಿನ ಪಹರೆಯವನು ಸೈನಿಕರು ನಮ್ಮನ್ನು ನಿರೀಕ್ಷಿಸುತ್ತಿದ್ದಾರೆಂದು ನಮಗೆ ಹೇಳಿದನು. ಒಬ್ಬ ಸೈನ್ಯಾಧಿಕಾರಿಯು ನಮ್ಮನ್ನು ಸಂಘಾಲಯದೊಳಗೆ ಕೊಂಡೊಯ್ದನು, ಮತ್ತು ಹಿಂದಿನ ಸಲ ಗ್ರಂಥಾಲಯಕ್ಕಾಗಿ ನಮ್ಮಿಂದ ಸಾಹಿತ್ಯವನ್ನು ಪಡೆದುಕೊಂಡ ಮಹಿಳೆಯು, ಸೈನಿಕ ಕಟ್ಟಡಗಳಲ್ಲಿ ಪ್ರಕಟನ ಪತ್ರಗಳನ್ನು ಇಡುವುದರ ಮೂಲಕ ನಮ್ಮ ಬರೋಣವನ್ನು ಪ್ರಕಟಿಸಿದ್ದನ್ನು ನಾವು ಕಂಡುಕೊಂಡೆವು. ನಮ್ಮ ಲೋಕ ವ್ಯಾಪಕ ಕೆಲಸದ ಕುರಿತು ಮೂವರು ಸಹೋದರರು ಸಣ್ಣ ಭಾಷಣಗಳನ್ನು ನೀಡಿದರು ಮತ್ತು ಬೈಬಲಿನಲ್ಲಿ ನಾವು ಯಾಕೆ ಭರವಸೆಯನ್ನು ಇಡಸಾಧ್ಯವಿದೆ ಎಂದು ತೋರಿಸಿದರು. ನಂತರ ನಾವು ಬೈಬಲಿನಿಂದ ಉತ್ತರಗಳನ್ನು ಕೊಡುತ್ತಾ, ಸಭಿಕರಿಂದ ಪ್ರಶ್ನೆಗಳಿಗೆ ಎಡೆ ಕೊಟ್ಟೆವು. ಸೇನಾ ಸೇವೆಯ ಕುರಿತು ಯೆಹೋವನ ಸಾಕ್ಷಿಗಳ ಸ್ಥಾನವೇನು, ಮತ್ತು ಅವರೊಳಗೆ ಯಾರಾದರೂ ಸೈನಿಕರಾಗಿದ್ದಾರೊ? ಎಂಬುದು ಪ್ರಶ್ನೆಗಳೊಳಗಿದ್ದುವು. ಈ ಮುಂಚೆ ನನ್ನೊಂದಿಗೆ ಬಂದ ಅಸ್ನಾತ ಪ್ರಚಾರಕನಿಗೆ, ಪೂರ್ವ ಜರ್ಮನಿಯ ಸೇನೆಯಲ್ಲಿನ ಅವನ 25 ವರುಷಗಳ—ಅಂತಿಮ ವರುಷಗಳಲ್ಲಿ ವಾಯು ದಳದ ಒಬ್ಬ ಕ್ಯಾಪ್ಟನ್‌ನಂತೆ—ಜೀವನ ಗತಿಯನ್ನು ವಿವರಿಸಲು ಇದು ಒಂದು ಸಂದರ್ಭವನ್ನು ಕೊಟ್ಟಿತು. ತಾನು ಹೇಗೆ ದೇವರ ಮತ್ತು ಬೈಬಲಿನ ಕುರಿತು ಕಲಿತೆನು ಮತ್ತು ಈಗ ಯೆಹೋವನ ಸಾಕ್ಷಿಗಳಲ್ಲೊಬ್ಬನಾಗಲು ಬಯಸುತ್ತೇನೆಂದು ಅವನು ವಿವರಿಸಿದನು. ಅವರು ಕೇಳಿದಂತವುಗಳಿಂದ ಸೈನಿಕರು ಪ್ರಭಾವಿತರಾದರು. ನಾವು ತಂದ ಎಲ್ಲ ಸಾಹಿತ್ಯವು ಏಳೇ ನಿಮಿಷಗಳೊಳಗೆ ಸೈನಿಕರ ಕೈ ಸೇರಿತು, ಮತ್ತು ಅನೇಕರಿಗೆ ಬೈಬಲ್‌ಗಳು ಬೇಕಾಗಿದ್ದವು. ಒಂದು ಪುಸ್ತಕದಂಗಡಿಯಲ್ಲಿ ಅವರು ಪಡೆದುಕೊಳ್ಳಲು ಗಣ್ಯಮಾಡಿದ ಏಳು ರಷ್ಯಾ ಭಾಷೆಯ ಬೈಬಲ್‌ಗಳನ್ನು ಪಡೆದುಕೊಳ್ಳಲು ನಮಗೆ ಸಾಧ್ಯವಾಯಿತು. ಈ ಆತ್ಮಿಕವಾಗಿ ಹಸಿದವರಿಗೆ ಬೈಬಲ್ ಮಾಹಿತಿಯನ್ನು ಕೊಡುವುದು ನಿಜ ಆನಂದವಾಗಿತ್ತು, ಮತ್ತು ಅವರು ಅದರ ಮೇಲೆ ಕ್ರಿಯೆ ಕೈಗೊಳ್ಳುವರೆಂದು ನಾವು ನಿರೀಕ್ಷಿಸುತ್ತೇವೆ.”
ನಿಜಕ್ಕೂ, ದೇವರು ಪಕ್ಷಪಾತಿಯಲ್ಲ. ಯಾರೇ ಆಗಲಿ ಮತ್ತು ಎಲ್ಲೇ ಅವರಿರಲಿ ಪ್ರಾಮಾಣಿಕ ಹೃದಯದ ಜನರನ್ನು ತನ್ನ ವಾಕ್ಯದ ಮೂಲಕ ಆತನು ಆಮಂತ್ರಿಸುತ್ತಾನೆ. ಆತನ ಕುರಿತು ಮತ್ತು ಆತನ ಮಗನಾದ ಯೇಸು ಕ್ರಿಸ್ತನ ಕುರಿತು ಕಲಿಯಲು ಅವರನ್ನು ಆತನು ಆಮಂತ್ರಿಸುತ್ತಾನೆ, ಮತ್ತು ಜೀವಿತದ ಎಲ್ಲಾ ಹಿನ್ನೆಲೆಗಳಿಂದ ಅನೇಕರು ಅದನ್ನು ಮಾಡುತ್ತಿದ್ದಾರೆ.—ಯೋಹಾನ 17:3.