ಮೃತರಾದ ನಿಮ್ಮ ಪ್ರಿಯರು ಅವರು ಎಲ್ಲಿದ್ದಾರೆ?
ಆ್ಯಲೆಕ್ ನಿಬ್ಬೆರಗಾಗಿದ್ದನು. ಒಂದು ವಾರದೊಳಗೆ, ಅವನು ತನ್ನ ಗೆಳೆಯರಲ್ಲಿ ಇಬ್ಬರನ್ನು ಕಳೆದುಕೊಂಡನು. ಅವರಲ್ಲಿ ಒಬ್ಬನಾದ ನೆವಿಲ್, ಬಂದೂಕು ಹೊಡೆತದ ಗಾಯದಿಂದ ಸತ್ತನು. ಇನ್ನೊಬ್ಬನಾದ ಟೋನಿ, ಕಾರು ಅಪಘಾತದಲ್ಲಿ ಕೊಲ್ಲಲ್ಪಟ್ಟನು. ಆ 14 ವರ್ಷ ಪ್ರಾಯದ ದಕ್ಷಿಣ ಆಫ್ರಿಕದ ಹುಡುಗನನ್ನು ಈ ಮುಂಚೆ ಕಾಡದೆ ಇದ್ದಂತಹ ಪ್ರಶ್ನೆಗಳು ಈಗ ಬಾಧಿಸಿದವು. ‘ಯಾಕೆ ಜನರು ಸಾಯಬೇಕು? ಮರಣದ ಅನಂತರ ಏನು ಸಂಭವಿಸುತ್ತದೆ?’ ಎಂದು ಅವನು ಯೋಚಿಸಿದನು.
ನೆವಿಲ್ನ ಶವಸಂಸ್ಕಾರಕ್ಕೆ ಹೋಗುವಾಗ, ಈ ಪ್ರಶ್ನೆಗಳಿಗೆ ಉತ್ತರಗಳನ್ನು ತಾನು ಪಡೆಯುವೆನೆಂದು ಆ್ಯಲೆಕನು ಯಥಾರ್ಥವಾಗಿ ನಿರೀಕ್ಷಿಸಿದನು. “ಆದರೆ,” ಅವನು ಜ್ಞಾಪಿಸಿಕೊಳ್ಳುತ್ತಾನೆ, “ಪಾದ್ರಿಯು ಕೇವಲ ಒಂದು ಪುಸ್ತಕದಿಂದ ಓದಿದನು ಮತ್ತು ನೆವಿಲ್ ಸ್ವರ್ಗಕ್ಕೆ ಹೋಗಿದ್ದಾನೆಂದು ಹೇಳಿದನು. ಆಮೇಲೆ, ಸಮಾಧಿಯ ಬಳಿಯಲ್ಲಿ, ನಾವು ಪುನರುತ್ಥಾನವನ್ನು ಎದುರುನೋಡುತ್ತೇವೆಂದು ಅವನು ಹೇಳಿದನು. ನಾನು ಕಂಗೆಟ್ಟೆ. ನೆವಿಲ್ ಸ್ವರ್ಗದಲ್ಲಿರುವುದಾದರೆ, ಅವನೊಂದು ಪುನರುತ್ಥಾನವನ್ನು ಹೇಗೆ ನಿರೀಕ್ಷಿಸುತ್ತಿರಬಹುದಿತ್ತು?”
ಅದೇ ದಿನ ತದನಂತರ, ಆ್ಯಲೆಕನು ಟೋನಿಯ ಶವಸಂಸ್ಕಾರಕ್ಕೆ ಹಾಜರಾದನು. ಅವನಿಗೆ ಅರ್ಥವಾಗದ ಒಂದು ಭಾಷೆಯಲ್ಲಿ ವಿಧಿ ಸಂಸ್ಕಾರ ಸೇವೆಯನ್ನು ನಡೆಸಲಾಯಿತು. ಆದರೂ, ಕೆಲವು ದುಃಖಿಗಳ ಅತ್ಯುದ್ರೇಕದ ವರ್ತನೆಯು, ಯಾವುದೆ ಸಾಂತ್ವನವು ಕೊಡಲ್ಪಟ್ಟಿಲ್ಲವೆಂದು ಆ್ಯಲೆಕನನ್ನು ಮನಗಾಣಿಸಿತು. “ಆ ರಾತ್ರಿ,” ಅವನು ವಿವರಿಸುವುದು, “ನಾನು ಬಹಳವಾಗಿ ಕ್ಷೋಭೆಗೊಂಡಿದ್ದೆ. ನಾನು ಸಹಾಯಶೂನ್ಯನಾಗಿದ್ದೆ ಮತ್ತು ಗಲಿಬಿಲಿಗೊಂಡಿದ್ದೆ. ನನ್ನ ಪ್ರಶ್ನೆಗಳಿಗೆ ತೃಪ್ತಿದಾಯಕ ಉತ್ತರಗಳನ್ನು ಯಾರಿಗೂ ಕೊಡಲು ಸಾಧ್ಯವಾಗಲಿಲ್ಲ. ನನ್ನ ಜೀವಿತದಲ್ಲಿ ಪ್ರಥಮ ಬಾರಿಗೆ, ಒಬ್ಬ ದೇವರು ಇದ್ದಾನೊ ಎಂದು ನಾನು ನಿಜವಾಗಿಯೂ ಯೋಚಿಸಿದೆ.”
ಪ್ರತಿ ವರ್ಷ ಆ್ಯಲೆಕನಂತೆ ಲಕ್ಷಾಂತರ ಜನರು, ಮರಣದಲ್ಲಿ ಪ್ರಿಯರನ್ನು ಕಳೆದುಕೊಳ್ಳುತ್ತಾರೆ. “ಲೋಕವ್ಯಾಪಕವಾಗಿ,” 1992 ಬ್ರಿಟ್ಯಾನಿಕ ಬುಕ್ ಆಫ್ ದ ಯಿಯರ್ ವಿವರಿಸುವುದು, “1991 ರಲ್ಲಿ 5,04,18,000 ಮರಣಗಳು ಸಂಭವಿಸಿದವು.” ಮತ್ತು ಅಂದಿನಿಂದ ಎಷ್ಟು ಲಕ್ಷಾಂತರ ಅಧಿಕ ಜನರು ಮರಣಹೊಂದಿದ್ದಾರೆ? ಅಗಲಿ ಉಳಿದವರ ಮೂಲಕ ಸುರಿಸಲ್ಪಟ್ಟ ಕಣ್ಣೀರಿನ ನದಿಗಳನ್ನು ಕಲ್ಪಿಸಿಕೊಳ್ಳಿ! ಮರಣದ ಕುರಿತ ವಿರುದ್ಧವಾದ ದೃಷ್ಟಿಕೋನಗಳ ಮೂಲಕ ಉಂಟಾಗುವ ಗಲಿಬಿಲಿ ಅವರ ದುಃಖಕ್ಕೆ ಹೆಚ್ಚನ್ನು ಸೇರಿಸುತ್ತದೆ.
ಹೀಗೆ, ಆ್ಯಲೆಕನಂತೆ ಅನೇಕರು, ನಿರಸನಗೊಂಡು ಮರಣದ ಅನಂತರ ಭವಿಷ್ಯತ್ತಿನ ಜೀವಿತದಲ್ಲಿ ನಿರೀಕ್ಷೆಗಾಗಿ ಯಾವುದಾದರೂ ಆಧಾರವಿದೆಯೊ ಎಂದು ಅನುಮಾನಿಸುತ್ತಾರೆ. ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್ಸ್ ಗನುಸಾರ, “ವ್ಯಕ್ತಿಗತವಾದ ಮಿದುಳು ಹಾಗೂ ದೇಹದಿಂದ ಬೇರೆಯಾಗಿ ವ್ಯಕ್ತಿಗತವಾದ ಆತ್ಮ ಅಥವಾ ಜೀವವು ಹೇಗೆ ಅಸ್ತಿತ್ವದಲ್ಲಿರಬಲ್ಲದು ಎಂಬುದನ್ನು ಅನುಮಾನಿಸುತ್ತಾ, . . . ಎಲ್ಲ ಯುಗಗಳಲ್ಲಿ, ಆಲೋಚನಪರ ಪುರುಷರು ಜನಸಮೂಹದಿಂದ ಬೇರೆಯಾಗಿ ಉಳಿದಿದ್ದಾರೆ.”
ಕುತೂಹಲಕರವಾಗಿ, ದೇಹದಿಂದ ಪ್ರತ್ಯೇಕವಾಗಿ ಅಸ್ತಿತ್ವದಲ್ಲಿರುವ ಒಂದು ಅಮರ ಆತ್ಮದ ಧಾರ್ಮಿಕ ಸಿದ್ಧಾಂತವು, ಬೈಬಲಿನ ಮೂಲಕ ಬೆಂಬಲಿಸಲ್ಪಡುವುದಿಲ್ಲವೆಂದು ಮೇಲೆ ಉಲ್ಲೇಖಿಸಲ್ಪಟ್ಟ ಎನ್ಸೈಕ್ಲೊಪೀಡಿಯ ಒಪ್ಪಿಕೊಳ್ಳುತ್ತದೆ. ಒಬ್ಬ ವ್ಯಕ್ತಿಯ “ಆತ್ಮ”ವು ಬಿಟ್ಟುಹೋಗಿ ಪುನಃ ಸತ್ತ ದೇಹಕ್ಕೆ ಹಿಂದಿರುಗುವ ಹಾಗೆ ಬೈಬಲ್ ಕೆಲವೊಂದು ಸ್ಥಳಗಳಲ್ಲಿ ಸೂಚಿಸುತ್ತದೆ ನಿಜ, ಆದರೆ ಈ ಸಂದರ್ಭಗಳಲ್ಲಿ “ಆತ್ಮ”ವು ಕಳೆದುಕೊಂಡ ಯಾ ಪುನಃ ಪಡೆದುಕೊಂಡ “ಪ್ರಾಣ”ದ ಅರ್ಥದಲ್ಲಿ ಉಪಯೋಗಿಸಲ್ಪಟ್ಟಿದೆ. (ಆದಿಕಾಂಡ 35:16-19; 1 ಅರಸು 17:17-23) ಅನೇಕ ವೇಳೆ, “ಆತ್ಮ” ಎಂಬ ಪದವು ಬೈಬಲಿನಲ್ಲಿ, ಮಾಂಸ ಮತ್ತು ರಕ್ತದ ದೃಶ್ಯ ಜೀವಿಗಳನ್ನು, ಹೌದು, ಬದುಕುವ ಪ್ರಾಣಿಗಳನ್ನು ವರ್ಣಿಸಲು ಉಪಯೋಗಿಸಲ್ಪಟ್ಟಿದೆ. (ಆದಿಕಾಂಡ 1:20; 2:7) ಆದಕಾರಣ, ಆತ್ಮಗಳು ಸಾಯುತ್ತವೆಂದು ಬೈಬಲ್ ಸತತವಾಗಿ ಹೇಳುತ್ತದೆ. (ಯೆಹೆಜ್ಕೇಲ 18:4, 20; ಅ. ಕೃತ್ಯಗಳು 3:23; ಪ್ರಕಟನೆ 16:3) ಒಮ್ಮೆ ಆತ್ಮಗಳು ಸತ್ತರೆ, ಅವುಗಳಿಗೆ “ಯಾವ ತಿಳಿವಳಿಕೆಯೂ ಇಲ್ಲ” ವೆಂದು ದೇವರ ವಾಕ್ಯವು ಹೇಳುತ್ತದೆ.—ಪ್ರಸಂಗಿ 9:5, 10.
ಇನ್ನೊಂದು ಕಡೆಯಲ್ಲಿ, ಸತ್ತ ಜನರು ಜೀವಿತಕ್ಕೆ ಪುನಃ ಸ್ಥಾಪಿಸಲ್ಪಡುವ ವೃತ್ತಾಂತಗಳು ಕೂಡ ಬೈಬಲ್ನಲ್ಲಿವೆ. ಲಾಜರನ ವಿಷಯದಲ್ಲಿ, ಇದು ಅವನು ಸತ್ತು ನಾಲ್ಕು ದಿನಗಳ ತರುವಾಯ ಸಂಭವಿಸಿತು. (ಯೋಹಾನ 11:39, 43, 44) ನೂರಾರು ಯಾ ಸಾವಿರಾರು ವರ್ಷಗಳ ಹಿಂದೆ ಸತ್ತುಹೋದ ಜನರಿಗಾದರೊ ಏನು ಸಂಭವಿಸುವುದು? ಅವರು ಸತ್ತಾಗ ಅವರಿಗಿದ್ದ ಅದೇ ದೇಹವನ್ನು ದೇವರು ಪುನರುತ್ಥಾನಗೊಳಿಸಬೇಕೆಂದು ಭವಿಷ್ಯತ್ತಿನ ಜೀವಿತಕ್ಕಾಗಿರುವ ಅವರ ಪ್ರತೀಕ್ಷೆಯು ಅವಶ್ಯಪಡಿಸುತ್ತದೊ?
ಇಲ್ಲ. ಒಂದು ಶವವನ್ನು ರೂಪಿಸುವ ಕಣಗಳಿಗೆ ಸಂಭವಿಸುವ ಸಂಗತಿಯು ಇಂತಹ ಒಂದು ವಿಚಾರಕ್ಕೆ ಅಸಮಂಜಸವಾಗಿದೆ. ಸಕಾಲದಲ್ಲಿ ಈ ಕಣಗಳಲ್ಲಿ ಕೆಲವು, ಸಸ್ಯಗಳ ಮೂಲಕ ಹೀರಿಕೊಳ್ಳಲ್ಪಡುತ್ತವೆ, ಫಲಸ್ವರೂಪವಾಗಿ ಅವು ಬೇರೆ ಜೀವಿಗಳ ಮೂಲಕ ಉಪಯೋಗಿಸಲ್ಪಟ್ಟು, ಅವುಗಳ ದೇಹಗಳ ಭಾಗವಾಗುತ್ತವೆ.
ಪೂರ್ವದಲ್ಲಿ ಸತ್ತು ಹೋದ ಜನರಿಗೆ ಯಾವುದೇ ನಿರೀಕ್ಷೆಯಿಲ್ಲವೆಂಬುದನ್ನು ಇದು ಅರ್ಥೈಸುತ್ತದೊ? ಇಲ್ಲ. ನಮ್ಮ ವಿಶಾಲವಾದ ವಿಶ್ವದ ಸೃಷ್ಟಿಕರ್ತನಿಗೆ ಅತಿಯಾದ, ಅಮಿತ ಜ್ಞಾಪಕ ಶಕ್ತಿಯಿದೆ. ಆತನ ಪರಿಪೂರ್ಣ ಜ್ಞಾಪಕದೊಳಗೆ, ಆತನು ಜ್ಞಾಪಿಸಿಕೊಳ್ಳಲು ಬಯಸುವ ಯಾವುದೇ ಸತ್ತ ಮಾನವನ ವ್ಯಕ್ತಿತ್ವವನ್ನು ಮತ್ತು ಆನುವಂಶಿಕ ಗುಣಗಳನ್ನು ಭದ್ರಪಡಿಸುವ ಸಾಮರ್ಥ್ಯ ಆತನಿಗಿದೆ. ಇನ್ನೂ ಹೆಚ್ಚಾಗಿ, ಹಿಂದೆ ಜೀವಿಸಿದ ಒಬ್ಬ ವ್ಯಕ್ತಿಯ ನಿಷ್ಕೃಷ್ಟವಾದ ಆನುವಂಶಿಕ ನಿಯಮಾವಳಿಯೊಂದಿಗೆ ಮಾನವ ದೇಹವನ್ನು ಪುನಃ ಸೃಷ್ಟಿಸುವ ಶಕ್ತಿ ಯೆಹೋವ ದೇವರಿಗಿದೆ. ಅದರೊಳಗೆ, ಅಬ್ರಹಾಮನಂತೆ ತಾನು ಜ್ಞಾಪಿಸಿಕೊಳ್ಳುವ ವ್ಯಕ್ತಿಯ ಜ್ಞಾಪಕ ಶಕ್ತಿಯನ್ನು ಮತ್ತು ವ್ಯಕ್ತಿತ್ವವನ್ನು ಕೂಡ ಆತನು ಇರಿಸಬಲ್ಲನು.
ಅಬ್ರಹಾಮನ ಮರಣದ ಸುಮಾರು ಎರಡು ಸಾವಿರ ವರ್ಷಗಳ ಬಳಿಕ, ಯೇಸು ಕ್ರಿಸ್ತನು ಈ ಆಶ್ವಾಸನೆಯನ್ನು ಕೊಟ್ಟನು: “ಸತ್ತವರು ಬದುಕಿ ಏಳುತಾರ್ತೆಂಬದನ್ನು ಮೋಶೆಯೂ ಸೂಚಿಸಿದ್ದಾನೆ. ಅವನು ಪೊದೆಯ ಸಂಗತಿಯಿರುವ ಅಧ್ಯಾಯದಲ್ಲಿ ಕರ್ತನನ್ನು ಅಬ್ರಹಾಮನ ದೇವರು ಇಸಾಕನ ದೇವರು ಯಾಕೋಬನ ದೇವರು ಎಂದು ಹೇಳಿದ್ದಾನೆ. ದೇವರು ಜೀವಿತರಿಗೆ ದೇವರಾಗಿದ್ದಾನೆ ಹೊರತು ಜೀವವಿಲ್ಲದವರಿಗೆ ಅಲ್ಲ. ಆತನಿಗೆ ಎಲ್ಲರೂ ಜೀವಿಸುವವರೇ ಎಂದು ಹೇಳಿದನು.” (ಲೂಕ 20:37, 38) ಅಬ್ರಹಾಮ, ಇಸಾಕ್, ಮತ್ತು ಯಾಕೋಬರನ್ನು ಹೊರತುಪಡಿಸಿ, ಮುಂಬರುವ ಪುನರುತ್ಥಾನವನ್ನು ಎದುರುನೋಡುತ್ತಿರುವ ಇತರ ಲಕ್ಷಾಂತರ ಸತ್ತ ಮಾನವರು ದೇವರ ಜ್ಞಾಪಕದಲ್ಲಿ ಜೀವಂತರಾಗಿದ್ದಾರೆ. “ಇದಲ್ಲದೆ ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದೆಂದು” ಬೈಬಲ್ ದೃಢಪಡಿಸುತ್ತದೆ.—ಅ. ಕೃತ್ಯಗಳು 24:15.
ತನ್ನ ವಿಯೋಗದ ಕೆಲವು ವಾರಗಳಾನಂತರ, ಆ್ಯಲೆಕನು ತನ್ನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡನು. ಯೆಹೋವನ ಸಾಕ್ಷಿಗಳಲ್ಲಿ ಒಬ್ಬನು ಅವನನ್ನು ಮನೆಯಲ್ಲಿ ಸಂದರ್ಶಿಸಿದನು ಮತ್ತು ಮರಣದ ಕುರಿತು ಹಾಗೂ ಪುನರುತ್ಥಾನದ ಕುರಿತು ದೇವರ ವಾಕ್ಯ ಏನನ್ನು ಹೇಳುತ್ತದೆ ಎಂಬುದನ್ನು ಅವನಿಗೆ ತೋರಿಸಿದನು. ಇದು ಆ್ಯಲೆಕನನ್ನು ಸಾಂತ್ವನಗೊಳಿಸಿತು ಮತ್ತು ಅವನ ಜೀವಿತಕ್ಕೆ ಹೊಸ ಅರ್ಥವನ್ನು ತಂದಿತು.
ಬೈಬಲ್ ಆಧಾರಿತವಾದ ಪುನರುತ್ಥಾನದ ನಿರೀಕ್ಷೆಯ ಕುರಿತು ಹೆಚ್ಚನ್ನು ಕಲಿಯಲು ನೀವು ಕೂಡ ಇಷ್ಟಪಡುವಿರೊ? ಉದಾಹರಣೆಗೆ, ಹೆಚ್ಚಿನ ಪುನರುತ್ಥಾನಗಳು ಸ್ವರ್ಗದಲ್ಲಿ ಸಂಭವಿಸುವವೊ ಯಾ ಭೂಮಿಯ ಮೇಲೆ ಸಂಭವಿಸುವವೊ? ದೇವರ ಮೆಚ್ಚಿಗೆಯನ್ನು ಪಡೆಯಲು ಮತ್ತು ಜನರು ಮೃತರಾದ ಪ್ರಿಯರೊಂದಿಗೆ ಪುನರ್ಮಿಲನವಾಗಿ ಆತನ ಅದ್ಭುತಕರ ಆಶ್ವಾಸನೆಯ ನೆರವೇರಿಕೆಯನ್ನು ಅನುಭವಿಸಲು, ಒಬ್ಬ ವ್ಯಕ್ತಿಯು ಏನನ್ನು ಮಾಡಬೇಕು?