“ವೃಕ್ಷದ ಆಯುಸ್ಸಿನಂತೆ”
ಸುಮಾರು ಮೂರು ಸಾವಿರ ವರ್ಷಗಳ ಹಿಂದೆ, ಮೋಶೆಯು ಬರೆದದ್ದು: “ನಮ್ಮ ಆಯುಷ್ಕಾಲವು ಎಪ್ಪತ್ತು ವರುಷ; ಬಲ ಹೆಚ್ಚಿದ್ದರೆ ಎಂಭತ್ತು, ಕಷ್ಟಸಂಕಟಗಳೇ ಅದರ ಆಡಂಬರ.”—ಕೀರ್ತನೆ 90:10.
ವೈದ್ಯಕೀಯ ಪ್ರಗತಿಯ ಹೊರತೂ, ಮನುಷ್ಯನ ಜೀವನವ್ಯಾಪ್ತಿಯು ಮೋಶೆಯ ದಿವಸಗಳಲ್ಲಿದ್ದಂತೆಯೇ ಇದೆ. ಅಷ್ಟಾದರೂ, ಮಾನವರು ಇಂತಹ ಒಂದು ಕ್ಷಣಿಕವಾದ ಅಸ್ತಿತ್ವಕ್ಕೆ ಯಾವಾಗಲೂ ಖಂಡಿಸಲ್ಪಡರು. ಬೈಬಲ್ ಪುಸ್ತಕವಾದ ಯೆಶಾಯದಲ್ಲಿ, ದೇವರು ಹೇಳಿದ್ದು: “ನನ್ನ ಜನರ ಆಯುಸ್ಸು ವೃಕ್ಷದ ಆಯುಸ್ಸಿನಂತಿರುವದು; ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು.”—ಯೆಶಾಯ 65:22.
ಬೈಬಲ್ ದೇಶಗಳಲ್ಲಿ ಅತಿ ದೀರ್ಘವಾಗಿ ಬಾಳುವ ಮರಗಳಲ್ಲಿ ಆಲಿವ್ ಮರ ಒಂದಾಗಿದೆ. ಇಲ್ಲಿ ಚಿತ್ರಿಸಲ್ಪಟ್ಟಂತಹ ಮರವು ಗಲಿಲಾಯದಲ್ಲಿ ಇನ್ನೂ ಹಸನಾಗಿ ಬೆಳೆಯುತ್ತಿರುವ ಸಾವಿರ ವರ್ಷ ಪ್ರಾಯದ ಹಲವಾರು ಮರಗಳಲ್ಲಿ ಒಂದಾಗಿದೆ. ಮಾನವರು ಅಷ್ಟು ಸಮಯ ಜೀವಿಸಲು ಯಾವಾಗ ಸಾಧ್ಯವಾಗುವುದು? ದೇವರು “ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ” ಸೃಷ್ಟಿಸುವಾಗಲೇ ಎಂಬದಾಗಿ ಅದೇ ಪ್ರವಾದನೆಯು ವಿವರಿಸುತ್ತದೆ.—ಯೆಶಾಯ 65:17.
ಪ್ರಕಟನೆಯ ಪುಸ್ತಕವು ಸಹ ಒಂದು ‘ನೂತನಾಕಾಶಮಂಡಲ’—ಒಂದು ಹೊಸ ಸ್ವರ್ಗೀಯ ಸರಕಾರ—ಮತ್ತು ದೇವರು ‘ಅವರ ಕಣ್ಣೀರನ್ನೆಲ್ಲಾ ಒರಸಿಬಿಟ್ಟು, ಇನ್ನು ಮರಣವಾಗಲಿ ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇಲ್ಲ” ದಿರುವಾಗ ಬರುವ ಒಂದು ನೂತನ ಮಾನವ ಸಮಾಜದ, ‘ನೂತನಭೂಮಂಡಲ’ದ ಸ್ಥಾಪನೆಯನ್ನು ಪ್ರವಾದಿಸುತ್ತದೆ.—ಪ್ರಕಟನೆ 21:1, 4.
ಈ ದೈವಿಕ ವಾಗ್ದಾನವು ಬೇಗನೇ ನೆರವೇರಲ್ಪಡುವುದು. ಆಗ ಆಲಿವ್ ಮರದ ದಿನಗಳು ಸಹ ಕೇವಲ 24 ತಾಸುಗಳ ಒಂದು ದಿನದಂತೆ ತೋರುವುವು. ಮತ್ತು ನಾವು ನಮ್ಮ ಕೈಕೆಲಸವನ್ನು ಪೂರ್ಣವಾಗಿ ಆನಂದಿಸಲು ನಮಗೆ ಸಾಕಷ್ಟು ಸಮಯವಿರುವುದು.