ರಾಜ್ಯ ಘೋಷಕರು ವರದಿ ಮಾಡುತ್ತಾರೆ
ದೇವರ ವಾಕ್ಯದ ರೂಪಾಂತರಗೊಳಿಸುವ ಶಕ್ತಿ
ತನ್ನ ಸ್ವಂತ ಒಪ್ಪಿಗೆಗನುಸಾರ, ಅವನು “ದೂಷಕನೂ ಹಿಂಸಕನೂ ಬಲಾತ್ಕಾರಿಯೂ” ಆಗಿರುತ್ತಿದ್ದನು. (1 ತಿಮೊಥೆಯ 1:13) ಆದರೆ ಅವನು ಬದಲಾದನು! ಅಪೊಸ್ತಲ ಪೌಲನ ರೂಪಾಂತರವು ಎಷ್ಟು ಮಹತ್ತರವಾಗಿತ್ತೆಂದರೆ, ಅವನು ತದನಂತರ ಹೀಗೆ ಘೋಷಿಸಲು ಶಕ್ತನಾದನು: “ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ.”—1 ಕೊರಿಂಥ 11:1.
ಇಂದು, ಲೋಕದಾದ್ಯಂತವಾಗಿ ನೂರಾರು ಸಾವಿರ ಪ್ರಾಮಾಣಿಕ ಆರಾಧಕರು, ತದ್ರೀತಿಯ ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಹಾಗೆ ಮಾಡುವಂತೆ ಅವರನ್ನು ಯಾವುದು ಶಕ್ತರನ್ನಾಗಿಸುತ್ತದೆ? ಅವರು ದೇವರ ವಾಕ್ಯದ ಜ್ಞಾನವನ್ನು ತೆಗೆದುಕೊಳ್ಳುತ್ತಿದ್ದಾರೆ ಮತ್ತು ಅದನ್ನು ತಮ್ಮ ಜೀವಿತಗಳಿಗೆ ಅನ್ವಯಿಸಿಕೊಳ್ಳುತ್ತಿದ್ದಾರೆ. ದೇವರ ವಾಕ್ಯದ ರೂಪಾಂತರಗೊಳಿಸುವ ಶಕ್ತಿಯನ್ನು ಮುಂದಿನ ಅನುಭವವು ಅತ್ಯುಜ್ವಲಪಡಿಸುತ್ತದೆ.
ಸ್ಲೋವೆನಿಯದಲ್ಲಿ ಒಬ್ಬ ವೃದ್ಧ ದಂಪತಿಗಳು ಒಂಟಿಯಾಗಿ ಒಂದು ಹಳ್ಳಿಯ ಹೊರಗೆ ಜೀವಿಸಿದರು. ಗಂಡನಾದ ಯೊಷೆ, ಸುಮಾರು 60 ವರ್ಷ ಪ್ರಾಯದವನಾಗಿದ್ದನು ಮತ್ತು ಮದ್ಯವ್ಯಸನದ ತೀವ್ರವಾದೊಂದು ಸಮಸ್ಯೆ ಅವನಿಗಿತ್ತು. ಆದರೂ, ತನ್ನ ಅಸ್ವಸ್ಥ ಹೆಂಡತಿಯಾದ ಲ್ಯೂಡ್ಮಿಲಾಳ ಕಾಳಜಿ ವಹಿಸಿದನು. ಒಂದು ದಿನ ಯೊಷೆ, ಇಬ್ಬರು ರಾಜ್ಯ ಘೋಷಕರಿಂದ ಸಮೀಪಿಸಲ್ಪಟ್ಟನು. ತನ್ನ ಮನೆಯೊಳಗೆ ಬರುವಂತೆ ಅವನು ಆ ಸಾಕ್ಷಿಗಳನ್ನು ಆಮಂತ್ರಿಸಿದನು, ಅಲ್ಲಿ ಅವರು ಅವನ ಹೆಂಡತಿಯನ್ನು ಭೇಟಿಯಾದರು. ರಾಜ್ಯ ಸಂದೇಶವನ್ನು ಕೇಳಿದ ಬಳಿಕ, ಆನಂದಾಶ್ರು ಲ್ಯೂಡ್ಮಿಲಾಳ ಮುಖದಿಂದ ಹರಿಯಿತು. ಯೊಷೆ ಕೂಡ ತಾನು ಕೇಳಿದ್ದನ್ನು ಆನಂದಿಸಿದನು ಮತ್ತು ಅನೇಕ ಪ್ರಶ್ನೆಗಳನ್ನು ಕೇಳಿದನು. ಆ ದಂಪತಿಗಳೊಂದಿಗೆ ಕೆಲವು ಬೈಬಲ್ ಸಾಹಿತ್ಯವನ್ನು ನೀಡಿದ ಬಳಿಕ, ಸಾಕ್ಷಿಗಳು ಅಲ್ಲಿಂದ ಹೊರಟುಹೋದರು.
ಒಂದು ತಿಂಗಳಿನ ತರುವಾಯ ಸಾಕ್ಷಿಗಳು ಹಿಂದಿರುಗಲು ಶಕ್ತರಾದರು, ಮತ್ತು ಮೇಜಿನ ಮೇಲೆ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವಿರುವುದನ್ನು ಅವರು ಗಮನಿಸಿದರು. ಅದನ್ನು ಅವನು ಎಲ್ಲಿಂದ ಪಡೆದನೆಂದು ಕೇಳಿದಾಗ, ಯೊಷೆ ಹೇಳಿದ್ದು: “ನೀವು ನನ್ನಲ್ಲಿ ಬಿಟ್ಟುಹೋದ ಪತ್ರಿಕೆಗಳಲ್ಲೊಂದರ ಹಿಂದಿನ ಪುಟದಲ್ಲಿ ನಾನೊಂದು ಪ್ರಕಟನೆಯನ್ನು ಕಂಡೆ. ಆದುದರಿಂದ ಸಾಗ್ರೆಬ್ನಲ್ಲಿರುವ ನಿಮ್ಮ ಆಫೀಸಿಗೆ ಪತ್ರವನ್ನು ಬರೆದು, ಪುಸ್ತಕಕ್ಕಾಗಿ ವಿನಂತಿಸಿಕೊಂಡೆ.” ಅವನ ಆಸಕ್ತಿಯನ್ನು ಪರಿಗಣಿಸುತ್ತಾ, ರಾಜ್ಯ ಸಭಾಗೃಹದಲ್ಲಿ ನಡೆಸಲ್ಪಡಲಿದ್ದ ಸಮೀಪಿಸುತ್ತಿರುವ ಕ್ರಿಸ್ತನ ಮರಣದ ಜ್ಞಾಪಕಕ್ಕೆ ಹಾಜರಾಗುವಂತೆ ಅವನನ್ನು ಆಮಂತ್ರಿಸಲಾಯಿತು. ಸಾಕ್ಷಿಗಳ ಆನಂದಕ್ಕೆ, ಅವನು ಅಲ್ಲಿಗೆ ಬಂದನು!
ಬೇಗನೆ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಲಾಯಿತು ಮತ್ತು ಒಳ್ಳೆಯ ಪ್ರಗತಿಯು ಮಾಡಲ್ಪಟ್ಟಿತು. ಉದಾಹರಣೆಗೆ, ಯೊಷೆಗೆ, “ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು . . . ಅವುಗಳಿಗೆ ಅಡ್ಡಬೀಳಲೂ ಬಾರದು ಪೂಜೆಮಾಡಲೂ ಬಾರದು,” ಎಂಬುದಾಗಿ ಬೈಬಲಿನಿಂದ ತೋರಿಸಿದಾಗ, ಚಿತ್ರಗಳನ್ನೂ ಸೇರಿಸಿ, ಮನೆಯಲ್ಲಿದ್ದ ಎಲ್ಲ ಧಾರ್ಮಿಕ ಮೂರ್ತಿಗಳನ್ನು ಅವನು ಒಡನೆಯೇ ಒಟ್ಟುಗೂಡಿಸಿ, ಅವುಗಳನ್ನು ಎಸೆದುಬಿಟ್ಟನು.—ವಿಮೋಚನಕಾಂಡ 20:4, 5.
ಆತ್ಮಿಕ ಸತ್ಯಕ್ಕಾಗಿದ್ದ ಯೊಷೆಯ ದಾಹವು ತೃಪ್ತಿಗೊಳಿಸಲ್ಪಡುತ್ತಿತ್ತು. ಆದರೆ, ದುರದೃಷ್ಟದಿಂದ, ಅವನಿಗೆ ಇನ್ನೂ ಮತ್ತೊಂದು ದಾಹವಿತ್ತು. ಸುಮಾರು 18 ವರ್ಷಗಳಿಂದ, ಅವನು ಪ್ರತಿದಿನ ಬಹುಮಟ್ಟಿಗೆ ಹತ್ತು ಲೀಟರ್ನಷ್ಟು ದ್ರಾಕ್ಷಾಮದ್ಯವನ್ನು ಸೇವಿಸಿದ್ದನು. ತನ್ನ ಕುಡಿಯುವ ಸಮಸ್ಯೆಯಿಂದಾಗಿ, ಅವನು ತನ್ನ ವೈಯಕ್ತಿಕ ತೋರಿಕೆಗೆ ಹೆಚ್ಚಿನ ಗಮನವನ್ನು ಕೊಡಲಿಲ್ಲ. ಆದರೆ ಮದ್ಯದ ದುರುಪಯೋಗದ ಕುರಿತಾದ ದೇವರ ನೋಟವನ್ನು ಕಲಿತಾದ ಬಳಿಕ, ಅವನು ಬದಲಾಗಲು ನಿಶ್ಚಯಿಸಿದನು.
ದೈನಿಕ ಆಧಾರದ ಮೇಲೆ ತಾನು ಎಷ್ಟನ್ನು ಕುಡಿಯುತ್ತಿದ್ದೇನೆಂಬ ದಾಖಲೆಯನ್ನು ಇಡುತ್ತಾ, ಕ್ರಮೇಣ ತನ್ನ ಕುಡಿಯುವ ಸಮಸ್ಯೆಯನ್ನು ಜಯಿಸಲು ಅವನು ಪ್ರಯತ್ನಿಸಿದನು. ಬೇಗನೆ ಅವನು ಇನ್ನು ಮುಂದೆ ಮದ್ಯಕ್ಕೆ ದಾಸನಾಗಿರಲಿಲ್ಲ. ತನ್ನ ಬೈಬಲ್ ಅಧ್ಯಯನಗಳ ಅವಧಿಯಲ್ಲಿ, ಸತ್ಯ ಕ್ರೈಸ್ತರು ಒಳ್ಳೆಯ ವೈಯಕ್ತಿಕ ಜನಾರೋಗ್ಯವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ ಎಂಬುದನ್ನು ಸಹ ಅವನು ಕಲಿತನು. ಆದಕಾರಣ, ಅವನು ಸಾಕ್ಷಿಗಳಿಗೆ ಹಣ ಕೊಟ್ಟು, ಹೀಗೆ ಹೇಳಿದನು: “ಸರಿ, ಕ್ರೈಸ್ತ ಕೂಟಗಳಲ್ಲಿ ಮತ್ತು ಕ್ಷೇತ್ರ ಸೇವೆಯಲ್ಲಿ ನೋಟಕ್ಕೆ ಚೆನ್ನಾಗಿರಲು ನನಗೆ ಬೇಕಾದ ಉಡುಗೆಯ ವಸ್ತುಗಳನ್ನು ಹೋಗಿ ಖರೀದಿಸಿರಿ!” ಸಾಕ್ಷಿಗಳು ಒಳಅಂಗಿ, ಸಾಕ್ಸ್, ಷೂಸ್, ಷರಟುಗಳು, ಉಡುಪು ಜೊತೆಗಳು, ಟೈಗಳು ಮತ್ತು ಒಂದು ಬ್ರೀಫ್ಕೇಸಿನೊಂದಿಗೆ ಹಿಂದಿರುಗಿದರು.
ಒಂದು ವರ್ಷದ ವರೆಗೆ ಬೈಬಲನ್ನು ಅಭ್ಯಸಿಸಿದ ತರುವಾಯ, ಯೊಷೆ ಮತ್ತು ಲ್ಯೂಡ್ಮಿಲಾ ಮನೆಯಿಂದ ಮನೆಗೆ ಸಾರುವ ಕೆಲಸದಲ್ಲಿ ಸಾಕ್ಷಿಗಳನ್ನು ಜೊತೆಗೂಡಿ ಹೋಗಲು ಅರ್ಹರಾದರು. ಮೂರು ತಿಂಗಳುಗಳ ತರುವಾಯ, ಅವರು ಯೆಹೋವನ ಸಾಕ್ಷಿಗಳ ಒಂದು ಜಿಲ್ಲಾ ಅಧಿವೇಶನದಲ್ಲಿ, ನೀರಿನ ದೀಕ್ಷಾಸ್ನಾನದ ಮೂಲಕ ದೇವರಿಗೆ ತಮ್ಮ ಸಮರ್ಪಣೆಯನ್ನು ಸಂಕೇತಿಸಿದರು. ವೃದ್ಧಾಪ್ಯ ಮತ್ತು ನ್ಯೂನ ಆರೋಗ್ಯದ ಹೊರತೂ, ಯೊಷೆ ಸುವಾರ್ತೆಯನ್ನು ಸಾರುವುದರಲ್ಲಿ ಕ್ರಮವಾಗಿ ಭಾಗವಹಿಸಿದನು ಮತ್ತು ತದನಂತರ, 1995ರ ಮೇ ತಿಂಗಳಿನಲ್ಲಿ ಅವನ ಮರಣದ ತನಕ, ಸಭೆಯಲ್ಲಿ ಒಬ್ಬ ಶುಶ್ರೂಷಾ ಸೇವಕನೋಪಾದಿ ನಂಬಿಗಸ್ತನಾಗಿ ಸೇವೆ ಸಲ್ಲಿಸಿದನು. ಈ ನಮ್ರ ಮನುಷ್ಯನ ಮತ್ತು ಅವನ ಹೆಂಡತಿಯ ಜೀವಿತಗಳಲ್ಲಿ ಉತ್ಪನ್ನವಾದ ಸಕಾರಾತ್ಮಕ ಫಲಿತಾಂಶವು, ದೇವರ ವಾಕ್ಯದ ರೂಪಾಂತರಗೊಳಿಸುವ ಶಕ್ತಿಗೆ ಸಾಕ್ಷ್ಯವನ್ನೀಯುತ್ತದೆ!