ಮಾಜಿ ನ್ಯಾಯಾಧೀಶರು ಕ್ಷಮೆಯಾಚಿಸುತ್ತಾರೆ—45 ವರ್ಷಗಳ ಬಳಿಕ
ಬರ್ಲಿನ್ನ ಕೋರ್ಟ್ರೂಮ್ವೊಂದರಲ್ಲಿ, 1995ರ ಆಗಸ್ಟ್ ತಿಂಗಳಿನಲ್ಲಿ, ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶರೊಬ್ಬರು, 45 ವರ್ಷಗಳ ಮುಂಚೆ ತಾವು ಮಾಡಿದ್ದ ಒಂದು ತಪ್ಪಿಗಾಗಿ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಿಗೆ ತಮ್ಮ ತೀಕ್ಷ್ಣ ಪರಿತಾಪವನ್ನು ವ್ಯಕ್ತಪಡಿಸಿದರು.
1950ರ ಅಕ್ಟೋಬರ್ ತಿಂಗಳಿನಲ್ಲಿ, ಜರ್ಮನ್ ಡೆಮೊಕ್ರ್ಯಾಟಿಕ್ ರಿಪಬ್ಲಿಕ್ (ಜಿಡಿಆರ್)ನ ಸುಪ್ರೀಂ ಕೋರ್ಟ್, ಯೆಹೋವನ ಸಾಕ್ಷಿಗಳಲ್ಲಿ ಒಂಬತ್ತು ಮಂದಿಯನ್ನು, ರಾಜ್ಯವಿರೋಧಿ ಚಳವಳಿ ಹಾಗೂ ಗೂಡಚಾರತನದ ದೋಷಿಗಳನ್ನಾಗಿ ಪ್ರಕಟಿಸಿತು. ಇಬ್ಬರಿಗೆ ಜೀವಾವಧಿಯ ಸೆರೆಮನೆವಾಸದ ಶಿಕ್ಷೆಯು ವಿಧಿಸಲ್ಪಟ್ಟಿತು, ಮತ್ತು ಛಾಯಾಚಿತ್ರದಲ್ಲಿ ಬಲಭಾಗದಿಂದ ನಾಲ್ಕನೆಯ ಪ್ರತಿವಾದಿಯಾದ, 22 ವರ್ಷ ಪ್ರಾಯದ ಲೋಟಾರ್ ಹಾರ್ನಿಕ್ರನ್ನು ಒಳಗೊಂಡು ಇತರ ಏಳು ಮಂದಿಗೆ, ದೀರ್ಘಾವಧಿಯ ಸೆರೆಮನೆವಾಸದ ಶಿಕ್ಷೆಯು ನೀಡಲ್ಪಟ್ಟಿತು.
ನಲವತ್ತು ವರ್ಷಗಳ ಬಳಿಕ ಜಿಡಿಆರ್, ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಭಾಗವಾಗಿ ಪರಿಣಮಿಸಿತು. ಅಂದಿನಿಂದ ಹಿಂದಿನ ಜಿಡಿಆರ್ನಲ್ಲಿ ಮಾಡಲ್ಪಟ್ಟಿರುವಂತಹ ಕೆಲವು ಅನ್ಯಾಯಗಳ ಕುರಿತು ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ ಹಾಗೂ ಅನ್ಯಾಯಕ್ಕೆ ಹೊಣೆಯಾದವರನ್ನು ನ್ಯಾಯತೀರ್ಪಿಗೆ ತರಲಿಕ್ಕಾಗಿ ಪ್ರಯತ್ನಿಸಿದ್ದಾರೆ. ಅಂತಹ ಒಂದು ಅನ್ಯಾಯವು, 1950ರಲ್ಲಿನ ಸಾಕ್ಷಿಗಳ ಕುರಿತಾದ ಸುಪ್ರೀಂ ಕೋರ್ಟಿನ ವಿಚಾರಣೆಯಾಗಿತ್ತು.
ಆ ಒಂಬತ್ತು ಮಂದಿ ಸಾಕ್ಷಿಗಳು ವಿಚಾರಣೆಗೆ ತರಲ್ಪಟ್ಟಾಗ, ನ್ಯಾಯತೀರ್ಪನ್ನು ನೀಡಿದ ಮೂವರು ನ್ಯಾಯಾಧೀಶರಲ್ಲಿ, ಈಗ 80 ವರ್ಷ ಪ್ರಾಯದವರಾಗಿರುವ ಎ. ಟಿ., ಒಬ್ಬರಾಗಿದ್ದರು. ಆಗ ಅಪಾರ್ಥ ನ್ಯಾಯವನ್ನು ನೀಡಿದ ಆಪಾದನೆಯೊಂದಿಗೆ, ತಮ್ಮ ತೀರ್ಪುಕೊಡುವಿಕೆಯನ್ನು ವಿವರಿಸಲಿಕ್ಕಾಗಿ, ಬರ್ಲಿನ್ನಲ್ಲಿರುವ ಪ್ರಾದೇಶಿಕ ಕೋರ್ಟಿಗೆ ಅವರು ಹಾಜರಾದರು.
ಕೋರ್ಟಿಗೆ ನೀಡಿದ ತಮ್ಮ ಹೇಳಿಕೆಯಲ್ಲಿ, ತಾವು ಅವರಿಗೆ ಕಡಿಮೆ ಗಂಭೀರವಾದ ಶಿಕ್ಷೆಗಳನ್ನು ವಿಧಿಸಿದರೂ, 45 ವರ್ಷಗಳ ಹಿಂದೆ ಒಂದು ದೋಷಿ ತೀರ್ಮಾನಕ್ಕೆ ತಾವು ಅಭಿಮತ ಸೂಚಿಸಿದೆವೆಂದು ಮಾಜಿ ನ್ಯಾಯಾಧೀಶರು ಒಪ್ಪಿಕೊಂಡರು. ಇತ್ತೀಚೆಗೆ ನಡೆದ ವಿಚಾರಣೆಯು ಅವರನ್ನು, ಪುನಃ ಒಮ್ಮೆ ಯೋಚಿಸುವಂತೆ ಮಾಡಿತ್ತು. ಏಕೆ? ಯೆಹೋವನ ಸಾಕ್ಷಿಗಳು ಹಿಟ್ಲರ್ನಿಗೆ ಬೆಂಬಲಿಸಲು ನಿರಾಕರಿಸಿದ ಕಾರಣದಿಂದಾಗಿ, ಎರಡನೆಯ ಲೋಕ ಯುದ್ಧದ ಸಮಯದಲ್ಲಿ ನಾಸಿಗಳಿಂದ ಹಿಂಸಿಸಲ್ಪಟ್ಟರು. ಈ ಬಾರಿ, ಯುದ್ಧದ ಬಳಿಕ ಸಾಕ್ಷಿಗಳು ಕಮ್ಯೂನಿಸ್ಟ್ ಆಳ್ವಿಕೆಯಿಂದ ಪುನಃ ಹಿಂಸಿಸಲ್ಪಟ್ಟರು. ಇದು ನ್ಯಾಯಾಧೀಶರಿಗೆ “ತೀವ್ರವಾದ ಮನೋವ್ಯಥೆ”ಯನ್ನು ಉಂಟುಮಾಡಿತು.
ತಾವು ಏಕಾಂತ ಬಂಧನದಲ್ಲಿ ಐದೂವರೆ ವರ್ಷಗಳನ್ನು ಕಳೆದರೂ, 1959ರ ವರೆಗೆ ಬ್ರ್ಯಾಂಡೆನ್ಬರ್ಗ್ ಸೆರೆಯಿಂದ ಬಿಡುಗಡೆಮಾಡಲ್ಪಡಲಿಲ್ಲವೆಂದು ಲೋಟಾರ್ ಹಾರ್ನಿಕ್ ಕೋರ್ಟಿಗೆ ಹೇಳಿದರು. ಹಾರ್ನಿಕ್ರ ಹೇಳಿಕೆಯನ್ನು ಕೇಳಿದಾಗ, ಮಾಜಿ ನ್ಯಾಯಾಧೀಶರು ಅತ್ತುಬಿಟ್ಟರು. “ನನ್ನಿಂದ ತಪ್ಪಾಯಿತು” ಎಂದು ಹೇಳುತ್ತಾ ಬಿಕ್ಕಳಿಸಿದರು. “ದಯವಿಟ್ಟು ನನ್ನನ್ನು ಕ್ಷಮಿಸಿ.” ಹಾರ್ನಿಕ್ ಕ್ಷಮಾಯಾಚನೆಯನ್ನು ಅಂಗೀಕರಿಸಿದರು.—ಲೂಕ 23:34ನ್ನು ಹೋಲಿಸಿರಿ.
[ಪುಟ 32 ರಲ್ಲಿರುವ ಚಿತ್ರ ಕೃಪೆ]
Neue Berliner Illustrierte