“ಸಿಂಹಹೃದಯ”ವನ್ನು ನೀವು ಪಡೆದುಕೊಳ್ಳಬಲ್ಲಿರಿ
ಬೈಬಲು ಕೆಲವೊಮ್ಮೆ ಸಿಂಹವನ್ನು, ಧೈರ್ಯ ಮತ್ತು ದೃಢಭರವಸೆಯ ಒಂದು ಸಂಕೇತದೋಪಾದಿ ಉಪಯೋಗಿಸುತ್ತದೆ. ಶೌರ್ಯವಂತ ಅಥವಾ ಧೈರ್ಯವಂತ ಮನುಷ್ಯರು, “ಸಿಂಹಹೃದಯ”ವನ್ನು ಪಡೆದುಕೊಂಡಿರುವಂತೆ ವರ್ಣಿಸಲ್ಪಟ್ಟಿದ್ದಾರೆ, ಮತ್ತು ನೀತಿವಂತರು “ದೃಢಭರವಸೆಯಿಂದಿರುವ ಎಳೆಯ ಸಿಂಹದಂತೆ” ಇರುವರು ಎಂದು ಹೇಳಲ್ಪಟ್ಟಿದ್ದಾರೆ. (2 ಸಮುವೇಲ 17:10; ಜ್ಞಾನೋಕ್ತಿ 28:1, NW) ವಿಶೇಷವಾಗಿ ಪಂಥಾಹ್ವಾನಕ್ಕೊಡ್ಡಲ್ಪಟ್ಟಾಗ, ಸಿಂಹವು “ಮೃಗಗಳಲ್ಲಿ ಅತ್ಯಂತ ಬಲಿಷ್ಠ” ಎಂಬ ತನ್ನ ಸತ್ಕೀರ್ತಿಗೆ ತಾನು ಅರ್ಹನಾಗಿದ್ದೇನೆ ಎಂಬುದನ್ನು ತೋರಿಸುತ್ತದೆ.—ಜ್ಞಾನೋಕ್ತಿ 30:30, NW.
ಯೆಹೋವ ದೇವರು, ತನ್ನ ಜನರನ್ನು ಸಂರಕ್ಷಿಸಲಿಕ್ಕಾಗಿರುವ ತನ್ನ ನಿರ್ಧಾರವನ್ನು, ಸಿಂಹದ ನಿರ್ಭೀತ ಗುಣಕ್ಕೆ ಹೋಲಿಸುತ್ತಾನೆ. ಯೆಶಾಯ 31:4, 5 ಹೇಳುವುದು: “ಸಿಂಹವು, ಪ್ರಾಯದ ಸಿಂಹವು, ಬೇಟೆಯ ಮೇಲೆ ಬಿದ್ದು ಗುರುಗುಟ್ಟುತ್ತಿರುವಾಗ ಕಾವಲುಗಾರನ ಕೂಗನ್ನು ಕೇಳಿ ಬಹು ಮಂದಿ ಕುರುಬರು ಅದಕ್ಕೆ ವಿರುದ್ಧವಾಗಿ ಕೂಡಿಬಂದರೂ ಅದು ಅವರ ಕೂಗಾಟಕ್ಕೆ ಹೆದರದೆ ಅವರ ಗದ್ದಲದಿಂದ ಹೇಗೆ ಧೈರ್ಯಗುಂದುವದಿಲ್ಲವೋ ಹಾಗೆಯೇ ಸೇನಾಧೀಶ್ವರನಾದ ಯೆಹೋವನು ಯುದ್ಧಮಾಡಲು ಚೀಯೋನ್ ಪರ್ವತದ ಶಿಖರದ ಮೇಲೆ ಇಳಿಯುವನು. . . . ಸೇನಾಧೀಶ್ವರನಾದ ಯೆಹೋವನು . . . ಕಾಪಾಡುವನು; ಅದನ್ನು ರಕ್ಷಿಸಿ ಕಾಯುವನು, ಹಾದುಹೋಗುತ್ತಾ ಅಪಾಯದಿಂದ ತಪ್ಪಿಸುವನು.” ಹೀಗೆ ಯೆಹೋವನು ತನ್ನ ಕಾರ್ಯಕಾರಿ ಪರಾಮರಿಕೆಯ—ವಿಶೇಷವಾಗಿ ಆಪತ್ತನ್ನು ಎದುರಿಸುತ್ತಿರುವಾಗ—ಕುರಿತಾಗಿ ತನ್ನ ಸೇವಕರಿಗೆ ಆಶ್ವಾಸನೆಯನ್ನೀಯುತ್ತಾನೆ.
ಮಾನವಕುಲದ ಅತ್ಯಂತ ಮಹಾ ವಿರೋಧಿ, ಪಿಶಾಚನಾದ ಸೈತಾನನನ್ನು, ಬೈಬಲು ಗರ್ಜಿಸುತ್ತಿರುವ, ಬಹಳ ಹಸಿವಿನಿಂದ ತಪಿಸುತ್ತಿರುವ ಸಿಂಹಕ್ಕೆ ಹೋಲಿಸುತ್ತದೆ. ಅವನ ಆಹಾರಪ್ರಾಣಿಯಾಗುವುದನ್ನು ತಡೆಯಲಿಕ್ಕಾಗಿ, ನಮಗೆ ಶಾಸ್ತ್ರಗಳಲ್ಲಿ ಹೀಗೆ ಹೇಳಲ್ಪಟ್ಟಿದೆ: “ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ.” (1 ಪೇತ್ರ 5:8) ಇದನ್ನು ಮಾಡುವ ಒಂದು ವಿಧವು, ವಿನಾಶಕರವಾದ ಆತ್ಮಿಕ ತೂಕಡಿಕೆಯನ್ನು ತಡೆಯುವುದಾಗಿದೆ. ಈ ವಿಷಯದ ಕುರಿತಾಗಿ ಯೇಸು ಹೇಳಿದ್ದು: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರ”ವಾಗದಿರಲಿ. (ಲೂಕ 21:34-36) ಹೌದು, ಈ “ಕಡೇ ದಿವಸಗಳ”ಲ್ಲಿ ಆತ್ಮಿಕವಾಗಿ ಎಚ್ಚರರಾಗಿರುವುದು, ‘ಯೆಹೋವನಲ್ಲಿ ಭರವಸವಿಟ್ಟಿರುವ, ಸ್ಥಿರವಾಗಿರು’ವಂತಹ ಒಂದು “ಸಿಂಹಹೃದಯ”ವನ್ನು ನಮಗೆ ಕೊಡಬಲ್ಲದು.—2 ತಿಮೊಥೆಯ 3:1; ಕೀರ್ತನೆ 112:7, 8.