ಬೈಬಲ್ ಪ್ರವಾದನೆಯ ಒಂದು ನೆರವೇರಿಕೆ
ಇಂಗ್ಲೆಂಡ್ನ ಲಂಡನ್ನಲ್ಲಿರುವ ಇಂಪೀರಿಯಲ್ ವಾರ್ ಮ್ಯೂಸೀಯಮ್ನಲ್ಲಿ, ಅಪೂರ್ವವಾದೊಂದು ಗಡಿಯಾರ ಹಾಗೂ ಒಂದು ಎಲೆಕ್ಟ್ರಾನಿಕ್ ಅಂಕಿ ಗಣಕವು ಪ್ರದರ್ಶನಕ್ಕಿದೆ. ಗಡಿಯಾರವು ತಿರುಗಿದಂತೆ, ಗಣಕವು 3.31 ಸೆಕೆಂಡುಗಳಿಗೊಮ್ಮೆ ಕ್ಲಿಕ್ ಎಂಬ ಸದ್ದನ್ನು ಹೊರಡಿಸುತ್ತದೆ. ಪ್ರತಿಯೊಂದು ಕ್ಲಿಕ್ ಸದ್ದಿನೊಂದಿಗೆ ಮತ್ತೊಂದು ಸಂಖ್ಯೆಯು ಮೊತ್ತಕ್ಕೆ ಕೂಡಿಸಲ್ಪಡುತ್ತದೆ. ಪ್ರತಿಯೊಂದು ಕ್ಲಿಕ್ ಸದ್ದು, ಪ್ರತಿಯೊಂದು ಸಂಖ್ಯೆ, ಈ ಶತಮಾನದಲ್ಲಾದ ಯುದ್ಧದ ಕಾರಣದಿಂದಾಗಿ ಸತ್ತುಹೋಗಿರುವ ಒಬ್ಬ ಪುರುಷ, ಸ್ತ್ರೀ, ಅಥವಾ ಮಗುವನ್ನು ಪ್ರತಿನಿಧಿಸುತ್ತದೆ.
ಈ ಗಣಕವು ತನ್ನ ಲೆಕ್ಕವನ್ನು ಜೂನ್ 1989ರಲ್ಲಿ ಆರಂಭಿಸಿತು ಮತ್ತು ಇಸವಿ 2000ದ ಹಿಂದಿನ ದಿನದ ಮಧ್ಯರಾತ್ರಿಗೆ ಎಣಿಕೆಯು ಪೂರ್ಣಗೊಳ್ಳುವುದೆಂದು ನಿರೀಕ್ಷಿಸಲ್ಪಟ್ಟಿದೆ. ಅಷ್ಟರೊಳಗೆ ಗಣಕದ ಮೇಲಿನ ಸಂಖ್ಯೆಯು ಹತ್ತು ಕೋಟಿಗಳನ್ನು ದಾಖಲುಮಾಡುವುದು—20ನೆಯ ಶತಮಾನದಾದ್ಯಂತ ಯುದ್ಧ ಸಂಬಂಧಿತ ಮರಣಗಳ ಅಂದಾಜುಮಾಡಲಾದ ಸಂಖ್ಯೆ.
ಬಹುಮಟ್ಟಿಗೆ 2,000 ವರ್ಷಗಳ ಹಿಂದೆ, ‘ಜನಾಂಗಕ್ಕೆ ವಿರುದ್ಧವಾಗಿ ಜನಾಂಗವೂ ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವ’ ಸಂಗತಿಯಿಂದ ಗುರುತಿಸಲ್ಪಡಲಿರುವ ಒಂದು ಸಮಯವನ್ನು ಯೇಸು ಕ್ರಿಸ್ತನು ಮುಂತಿಳಿಸಿದನು. ಅದರಂತೆಯೇ, ಈ ಶತಮಾನದ ವಿನಾಶಕಾರಕ ಯುದ್ಧಗಳೊಂದಿಗೆ, ಅಸಂಖ್ಯಾಕ ಭೂಕಂಪಗಳು, ಅಂಟು ರೋಗಗಳು, ಆಹಾರದ ಅಭಾವಗಳು, ಮತ್ತು ಇತರ ವಿಕಸನಗಳು, ನಾವು “ಕಡೇ ದಿವಸಗಳಲ್ಲಿ”—ಇಸವಿ 1914ರಲ್ಲಿ ಸ್ವರ್ಗದಲ್ಲಿ ರಾಜನೋಪಾದಿ ಕ್ರಿಸ್ತನ ಪ್ರತಿಷ್ಠಾಪನೆಯನ್ನು ಅನುಸರಿಸಿದ ಸಮಯಾವಧಿ—ಜೀವಿಸುತ್ತಿದ್ದೇವೆಂಬುದಕ್ಕೆ ಸಾಮೂಹಿಕವಾಗಿ ಪುರಾವೆಯನ್ನು ಒದಗಿಸುತ್ತವೆಂದು ಯೆಹೋವನ ಸಾಕ್ಷಿಗಳು ಬಹಳ ಸಮಯದಿಂದ ಸಾರುತ್ತಿದ್ದಾರೆ.—ಲೂಕ 21:10, 11; 2 ತಿಮೊಥೆಯ 3:1.
ಬೈಬಲನ್ನು ತನ್ನ ಪ್ರಮಾಣ ಗ್ರಂಥವಾಗಿ ಉಪಯೋಗಿಸುತ್ತಾ ಕಾವಲಿನಬುರುಜು ಪತ್ರಿಕೆಯು, ದೇವರ ರಾಜ್ಯವು ಬೇಗನೆ ಪೀಡಿಸುವವರನ್ನು ನಾಶಮಾಡಿ, ಭೂಮಿಯನ್ನು ಪ್ರಮೋದವನವಾಗಿ ಮಾರ್ಪಡಿಸುವುದೆಂಬ ಸುವಾರ್ತೆಯನ್ನು ಪ್ರಕಟಿಸುತ್ತದೆ. ಮತ್ತು ಯುದ್ಧ ಕಾರ್ಯಾಚರಣೆಯ ಭವಿಷ್ಯತ್ತಿನ ಕುರಿತೇನು? ಬೈಬಲು ಹೇಳುವುದು: “ಬನ್ನಿರಿ, ಯೆಹೋವನ ಕಾರ್ಯವನ್ನು ನೋಡಿರಿ; ಆತನು ಭೂಲೋಕದಲ್ಲಿ ಎಂಥಾ ಪ್ರಳಯವನ್ನು ನಡಿಸಿದ್ದಾನೆ. ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ; ಬಿಲ್ಲುಗಳನ್ನೂ ಭಲ್ಲೆಯಗಳನ್ನೂ ಮುರಿದುಹಾಕಿದ್ದಾನೆ; ರಥಗಳನ್ನು ದಹಿಸಿಬಿಟ್ಟಿದ್ದಾನೆ.”—ಕೀರ್ತನೆ 46:8, 9.
[ಪುಟ 32 ರಲ್ಲಿರುವ ಚಿತ್ರ ಕೃಪೆ]
Clock: By Courtesy of the Imperial War Museum